‘ಜೀವಿ’ ಎಂದರೆ ಸಂಭ್ರಮ

ನಿಘಂಟು ಸಾರ್ವಭೌಮ ಜಿ. ವೆಂಕಟಸುಬ್ಬಯ್ಯನವರಿಗೆ ಇದು ನೂರೆಂಟು ತುಂಬಿರುವ ಸಂಭ್ರಮದ ಗಳಿಗೆ.

ಅವರು ಇನ್ನೇನು ಶತಾಯುಷಿಗಳಾಗುತ್ತಿದ್ದಾರೆ ಎನ್ನುವ ಸಮಯದಲ್ಲಿ- ೨೦೧೨ರಲ್ಲಿ ಮುಂಬೈನ ಮೈಸೂರು ಅಸೋಸಿಯೇಷನ್ ಸದಸ್ಯರು ಅವರನ್ನು ಸನ್ಮಾನಿಸಿದ್ದರು.

ಅವರ ಮನೆಯಲ್ಲೇ ಜರುಗಿದ ಸನ್ಮಾನದ ಸಂದರ್ಭದಲ್ಲಿ ಗಿರಿಜಾ ಶಾಸ್ತ್ರಿ ಅವರು ವೆಂಕಟಸುಬ್ಬಯ್ಯನವರನ್ನು ಸಂದರ್ಶಿಸಿದ್ದರು.

ಅದು ಈಗಲೂ ಮುಖ್ಯ ಎನಿಸಿದ್ದರಿಂದ ಅವಧಿ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

-ಗಿರಿಜಾ ಶಾಸ್ತ್ರಿ

“ನೀವು ಮಾತಾಡಿ ನಾನು ಕೇಳ್ತೀನಿ” ಸೋಫಾದಮೇಲೆ ಕುಳಿತುಕೊಳ್ಳುತ್ತಾ ಹೇಳಿದರು ಶತಾಯುಷಿ, ನಿಘಂಟು ಸಾರ್ವಭೌಮರಾದ ಜಿ. ವೆಂಕಟಸುಬ್ಬಯ್ಯನವರು. ತಮ್ಮ ಶಿಸ್ತು ಬದ್ಧ ಜೀವನ, ಕಾರ್ಯ ಹಾಗೂ ಮಾತುಗಳಿಂದ ನೂರಾರು ಕನ್ನಡ ಮನಸ್ಸುಗಳನ್ನು ಅರಳಿಸಿರುವ ಕೆಲವೇ ವಿದ್ವಾಂಸರಲ್ಲಿ ಒಬ್ಬರಾದ ಅವರು ನಮ್ಮ ಮಾತುಗಳಿಗೆ ಕಿವಿಕೊಡಲು ತಯಾರಾದರು. ಅರಿವು ಕಣ್ತೆರೆದವರಲ್ಲಿ ಮಾತ್ರ ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಶಕ್ತಿಯಿರುತ್ತದೆ. ಅದೂ ನಮ್ಮಂತಹ ಕಿರಿಯರ ಮಾತುಗಳನ್ನು ಕೇಳಿಸಿಕೊಳ್ಳಲು ತಯಾರಾಗುವುದೆಂದರೆ !?

“ನಿಮ್ಮ ಮಾತುಗಳನ್ನು ಕೇಳಬೇಕೆಂದೇ ನಾವು ಬಂದಿದ್ದೀವಿ ಸಾರ್” ಎಂದಾಗ ನಮ್ಮ ಕೋರಿಕೆಗೆ ಬೆಲೆಯಿತ್ತು ಮಾತನಾಡುತ್ತಲೇ ಹೋದರು ಒಂದು ತಾಸು. ಮುಖದ ಮೇಲೆ ಅಯಾಸ ಸುಳಿಯಲಿಲ್ಲ. ನಡುವೆ ನೀರನ್ನೂ ಕುಡಿಯಲಿಲ್ಲ. ನೇರ ಶಿಸ್ತಾಗಿ ಕುಳಿತ ಭಂಗಿಯನ್ನು ಒಮ್ಮೆಯೂ ಬದಲಾಯಿಸಲಿಲ್ಲ. ನಾವುಗಳೇ ಕಾಲಮೇಲೆ ಕಾಲು ಹಾಕಿ ಅವರ ಮುಂದೆ ಕುಳಿತಿದ್ದೆವು.

ಒಂದು ಸಂವತ್ಸರವನ್ನು ಪೂರೈಸುತ್ತಿರುವ ಜಿ. ವೆಂಕಟಸುಬ್ಬಯ್ಯನವರನ್ನು ಅಭಿನಂದಿಸಬೇಕೆಂದು, ಅಸೋಸಿಯೇಷನ್ನಿನ ಪರವಾಗಿ ನಾವು ಐದು ಜನ- ಮಂಜುನಾಥಯ್ಯ, ಡಾ. ಮಂಜುನಾಥ್, ಉಮಾರಾವ್, ಪ್ರಭಾಕರರಾವ್ ಇವರುಗಳು ಅವರ ಜಯನಗರದ ಮನೆಯಲ್ಲಿ ಸೇರಿದ್ದೆವು. ನಾವೆಲ್ಲಾ ಸೇರಿ ಅವರ ಜೊತೆ ಸಂವಾದ ಮಾಡಬೇಕೆಂದು ನಿರ್ಧರಿಸಿ ಅವರ ಅನುಕೂಲವಾದ ಸಮಯ ಕೇಳಿ ಅವರಿಗೆ ಫೋನ್ ಮಾಡಿದಾಗ ಮಾರನೆಯ ದಿನವೇ ನಮಗೆ ಅಂತಹ ಅವಕಾಶವನ್ನು ಒದಗಿಸಿಕೊಟ್ಟರು.

ಒಂದು ಶುಕ್ರವಾರ ಸಂಜೆ ಅವರ ಮನೆಯ ಕರೆಗಂಟೆಯನ್ನು ಒತ್ತಿದಾಗ ಖುದ್ದಾಗಿ ಅವರೇ ಬಂದು ಬಾಗಿಲು ತೆರೆದು ನಮ್ಮನ್ನು ಒಳ ಬರಮಾಡಿಕೊಂಡರು. ಬಿಳಿಯ ಪಂಚೆ ಬಿಳಿಯ ಶರಟು, ತೊಂಭತ್ತೊಂಭತ್ತು ವಸಂತಗಳ ಗುರುತೇ ಸಿಗದ ಬೆಳ್ಳಗಿನ ಮುಖದ ಮೇಲೆ ಬೆಳಕು ಪ್ರತಿಫಲಿಸುತ್ತಿತ್ತು. ಅವರ ಕುಳಿತ ಭಂಗಿ, ಮಾತನಾಡುವುದರಲ್ಲಿದ್ದ ಉತ್ಸಾಹ, ಯಾವುದರ ಬಗ್ಗೆಯೂ ಆಕ್ಷೇಪಣೆ ಇಲ್ಲದ ಅವರ ಎಣೆಯಿಲ್ಲದ ಆಶಾವಾದ ಬೆರಗು ಹುಟ್ಟಿಸುತ್ತಿತ್ತು.

ಹೊರನಾಡ ಕನ್ನಡಿಗರ ಕನ್ನಡ ಚಟುವಟಿಕೆಗಳನ್ನು ಬಾಯಿ ತುಂಬಾ ಪ್ರಶಂಸಿಸಿದರು. ಅಸೋಸಿಯೇಷನ್ನಿನ ಪರವಾಗಿ ನಾವು ಅರ್ಪಿಸಿದ ಸಣ್ಣ ಸತ್ಕಾರವನ್ನು ತುಂಬು ಸಂತೋಷದಿಂದ ಸ್ವೀಕರಿಸಿದರು. ‘ನನಗೆ ನೂರು ವರ್ಷವಾಗುತ್ತಿದೆಯೇ ಕಾಲ ಹೋದದ್ದೇ ತಿಳಿಯಲಿಲ್ಲ’ ಎಂದು ಆಶ್ಚರ್ಯ ಪಟ್ಟರು. ಈ ಮಗುವಿನ ಬೆರಗೇ, ದಣಿವರಿಯದ ಉತ್ಸಾಹವೇ ಅವರನ್ನು ನೂರುಕಾಲ ಬಾಳಿಸುತ್ತಿರುವುದರ ಹಿಂದಿನ ರಹಸ್ಯವಿರಬೇಕು.

ನಾನು ಆಗ್ರಹ ಪಡಿಸಿದ್ದಕ್ಕೆ ಅವರ ಪಾರಿತೋಷಕಗಳು ಇಟ್ಟಿರುವ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಎಲ್ಲೆಲ್ಲೂ ಜೋಡಿಸಿಟ್ಟ ಪುಸ್ತಕಗಳು ಮತ್ತು ಪಾರಿತೋಷಕಗಳು! “ಮಾನವ ಜನ್ಮ ದೊಡ್ಡದು ಅದ ಹಾನಿ ಮಾಡಲು ಬೇಡಿರೋ ಹುಚ್ಚಪ್ಪಗಳಿರಾ” ಎನ್ನುವುದರ ಪ್ರತೀಕವಾಗಿ ಅವು ಹೊಳೆಯುತ್ತಿದ್ದವು. ಅವುಗಳ ಮಧ್ಯೆ ನಿಂತಿದ್ದರು ವಿನೀತ ಮೂರ್ತಿ. ನೂರು ವಸಂತಗಳನ್ನು ಸಮೀಪಿಸುತ್ತಿರುವ ಸಾರ್ಥಕ್ಯ ಭಾವ ಅವರ ಕಣ್ಣುಗಳಲ್ಲಿ ಹೊರಹೊಮ್ಮುತಿತ್ತು. ನಾವು ಡ್ರೈವರಿಗಾಗಿ ಕಾದು ಬಹಳ ಹೊತ್ತಿನ ನಂತರ ಅವನು ಬಂದ ಮೇಲೆ ಕಾರು ಮರೆಯಾಗುವವರೆಗೆ ಗೇಟಿನ ಬಳಿ ನಿಂತೇ ಇದ್ದರು. ಅವರ ಭೌತಿಕ ಎತ್ತರಕ್ಕೆ ಸವಾಲಾಗಿ ನಿಂತಿತ್ತು ಅವರ ದೈತ್ಯ ಪ್ರತಿಭೆ. ಅವರ ಸೌಜನ್ಯಕ್ಕೆ, ಅವರ ಮೌಲ್ಯಾರಾಧನೆಗೆ ನಮೋನಮಃ.

ನೀವು ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ತಿಳಿಸಲು ಮುಂಬಯಿಯ ಮೈಸೂರು ಅಸೋಸಿಯೇಷನ್ನಿನಿಂದ ಬಂದಿದ್ದೇವೆ .

  • ನನಗೆ ನೂರು ವರುಷ ವಾಗುತ್ತಿದೆಯೇ? ನೀವು ಹೇಳಿದಾಗ ಮಾತ್ರ ನನಗೆ ನೂರು ತುಂಬುತ್ತಿದೆ ಅನಿಸುತ್ತದೆ. ಕಾಲ ಎಷ್ಟು ಬೇಗ ಕಳೆದು ಹೋಯಿತಲ್ಲಾ ಎನಿಸುತ್ತದೆ. ನಿಮ್ಮ ಸತ್ಕಾರಕ್ಕೆ ತುಂಬಾ ಸಂತೋಷ

ಕನ್ನಡ ಭಾಷೆಯೊಳಗೆ ಇತರ ಭಾಷೆಯ ಪದಗಳು ನುಸುಳಿಕೊಳ್ಳುತ್ತಿವೆ ಇದು ಕನ್ನಡಕ್ಕೆ ಆತಂಕಕಾರಿಯಾದ ವಿಷಯವಲ್ಲವೇ?

  • ಇಲ್ಲ. ಭಾಷೆ ನಿರಂತರವಗಿ ಬೆಳೆಯುತ್ತಾ ಹೋಗುವಂತಹುದು. ಇದಕ್ಕೆ ಯಾವ ಚೌಕಟ್ಟಿನ ಅಗತ್ಯವೂ ಇಲ್ಲ. ಅನ್ಯ ದೇಶ್ಯ ಶಬ್ದಗಳು ಕನ್ನಡ ಭಾಷೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸಿವೆ.

    ಕನ್ನಡ ವಿನಾಶದ ಅಂಚಿನಲ್ಲಿದೆಯೇ?
  • ಖಂಡಿತ ಇಲ್ಲ. ಇನ್ನು ಮುಂದಿನ ಹತ್ತು ವರುಷಗಳಲ್ಲಿ ಕನ್ನಡ ಶಿಕ್ಷಣದಲ್ಲಿ ಬಹುಮುಖ್ಯ ಬದಲಾವಣೆಗಳಾಗುತ್ತವೆ. ಹಾಗೆಯೇ ಕರ್ನಾಟಕದ ಆಡಳಿತದಲ್ಲಿಯೂ ಆಗುತ್ತದೆನಿಸುತ್ತದೆ. 1911ರಲ್ಲಿ ಬಿ.ಎಂ.ಶ್ರೀ ಅವರ ‘ಕನ್ನಡ ತಲೆಎತ್ತುವ ಬಗೆ’ ಎನ್ನುವ ಉಪನ್ಯಾಸ ಕನ್ನಡ ನವೋದಯಕ್ಕೆ ನಾಂದಿಯಾಯಿತು. ಆನಂತರ 75 ವರ್ಷಗಳಲ್ಲಿ ಕನ್ನಡದಲ್ಲಿ ಸೊಗಸಾದ ಪ್ರಗತಿ ಉಂಟಾಯಿತು. ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಎಲ್ಲಾ ಚಳವಳಿಗಳೂ ಕನ್ನಡ ಭಾಷೆಯನ್ನು ಪ್ರವರ್ಧಮಾನಕ್ಕೆ ತಂದವು. ನಾವು ಈಗ ತುಂಬಾ ಎತ್ತರದಲ್ಲಿದ್ದೀವಿ. ಇಷ್ಟು ಸಾಹಿತ್ಯ ಕೃಷಿ ಯಾವ ಭಾಷೆಯಲ್ಲಿಯೂ ಆಗಿಲ್ಲ.

ಇಂಗ್ಲಿಷ್ ಕಲಿಕೆಯ ಬಗ್ಗೆ ಏನು ಹೇಳುತ್ತೀರಿ?

  • ಭಾಷೆ ಕಲಿತಷ್ಟೂ ಕನ್ನಡಕ್ಕೆ ಲಾಭವೇ. ಆದರೆ ಪ್ರಾಥಮಿಕ ಹಂತದಲ್ಲಿ ಮಾತ್ರ ಶಿಕ್ಷಣ ಮಾಧ್ಯಮ ಕನ್ನಡವೇ ಆಗಿರಬೇಕು. ಜೊತೆಗೇ ಇಂಗ್ಲಿಷ್‍ನ್ನೂ ಒಂದು ವಿಷಯವಾಗಿ ಕಲಿಸಲಿ. ಅದಕ್ಕೆ ಬೇಕಾದರೆ ದಕ್ಷ ಉಪಾಧ್ಯಾಯರಗಳನ್ನು ನೇಮಿಸಿ ವಿಶೇಷ ತರಗತಿಗಳನ್ನು ಏರ್ಪಾಡುಮಾಡಿ ಒಳ್ಳೆಯ ಇಂಗ್ಲಿಷ್ ನ್ನು ಸರಿಯಾಗಿ ಕಲಿಸುವ ಏರ್ಪಾಡಾಗಬೇಕು. ನಮ್ಮ ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಎಷ್ಟೋ ಜನ ಅಷ್ಟೇ ಸಮರ್ಥವಾಗಿ ಇಂಗ್ಲಿಷ್‍ನ್ನೂ ಬಲ್ಲವರಾಗಿದ್ದರು. ನಮ್ಮ ಕಾಲದಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆಯೇ ಕಾಣುವ, ಅವರ ಏಳಿಗೆಗೆ ವೈಯಕ್ತಿಕ ಗಮನವನ್ನು ಕೊಡುವ ಬಹಳ ನಿಷ್ಠಾವಂತ ಶಿಕ್ಷಕರಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ನಾನು ವಿದ್ಯಾರ್ಥಿಯಾಗಿದ್ದ ಕಾಲ ಒಂದು ಸುವರ್ಣಯುಗ. ಈಗ ಶಿಕ್ಷಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಈಗ ಶಿಕ್ಷಣದಲ್ಲಿ ಮೌಲ್ಯಕ್ಕಿಂತ ಮಾಹಿತಿ, ವಿವರಗಳು ಹೆಚ್ಚಿವೆ.

    ನಿಘಂಟು ರಚನೆಯಲ್ಲಿ ನಿಮಗೆ ಆಸಕ್ತಿ ಮೂಡಿದ್ದಾರೂ ಹೇಗೆ?
  • ಜನರ ಆಡುಮಾತುಗಳಲ್ಲಿ ನನಗೆ ಆಸಕ್ತಿಯಿತ್ತು. ಹಳ್ಳಿ ಹಳ್ಳಿಗೆ ಹೋಗಿ ಅವರ ಮಾತುಗಳನ್ನು ಗಮನಿಸುತ್ತಿದ್ದೆ. ಹೊಸ ಶಬ್ದಗಳನ್ನು ಬರೆದುಕೊಳ್ಳುತ್ತಿದ್ದೆ. ನನ್ನ ಈ ಆಸಕ್ತಿಯನ್ನು ನೋಡಿ ಗುರುಗಳಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿಗಳು ನಿಘಂಟು ರಚನೆಯ ಯೋಜನೆಗೆ ನನ್ನನ್ನು ನೇಮಿಸಿದರು. ಅದೂ ಅಲ್ಲದೇ ಕಿಟ್ಟಲ್ ಪದಕೋಶದೊಳಗೆ ಸೇರಿಸಬಹುದಾದ ಪದಗಳು ಇನ್ನೂ ಬಹಳ ಇವೆ ಎನ್ನಿಸಿತು. ಹಗಲೂ ರಾತ್ರಿ ಇದಕ್ಕಾಗಿ ಶ್ರಮಿಸಿದೆ. ಆರು ಸಂಪುಟಗಳನ್ನು ಹೊರತಂದೆ. ಏಳನೆಯದನ್ನು ಅನಿವಾರ್ಯ ಕಾರಣಕ್ಕಾಗಿ ಅರ್ಧದಲ್ಲಿಯೇ ಕೈಬಿಡಬೇಕಾಯಿತು.

ಪ್ರಸಿದ್ಧರಾದ ಮಹಿಳೆಯರು ಅವರದೇ ಆದ ಶಬ್ದ ಸಮುದಾಯಗಳನ್ನು ರೂಪಿಸಿಕೊಂಡಿದ್ದಾರೆ . ಇದರಲ್ಲಿಯೂ ಹೊಸತನವಿದೆ ಎಂಬ ಮಾತನ್ನು ಹೇಳಿದ್ದೀರಿ. ಆದರೂ ಭಾಷೆಯ ಪ್ರಯೋಗದಲ್ಲಿ ಇನ್ನೂ ಗೊಂದಲವಿದೆಯಲ್ಲಾ. ಓದುವ ಗ್ರಹಿಸುವ ವ್ಯಕ್ತಿ ಈಗಲೂ ಪುರುಷನೇ ಆಗಿದ್ದಾನೆ. ಮಾನವ ಎಂಬ ಶಬ್ದದ ಗ್ರಹಿಕೆ ಹಿಂದೆ ಕೂಡ ಪುರುಷನೇ ಆಗಿದ್ದಾನೆ ಇದಕ್ಕೆ ಪರ್ಯಾಯವೇನು?

  • ಕನ್ನಡದಲ್ಲಿ common gender ಇಲ್ಲ. ಹಿಂದೆ ಪುರುಷರೇ ಹೆಚ್ಚಾಗಿ ಬರೆಯುತ್ತಿದ್ದರು. ಆದುದರಿಂದ ಅಲ್ಲಿ ‘ಅವನೇ’ ಹೆಚ್ಚಾಗಿ ಇದ್ದ. ಈಗ ಮಹಿಳೆಯರೂ ಬಹಳ ಚೆನ್ನಾಗಿ ಬರೆಯುತ್ತಿದ್ದಾರೆ. ‘ಅವನು’ ನನ್ನು ತೆಗೆದು ಬೇಕಾದರೆ ನೀವು ‘ಅವಳನ್ನ’ ಹಾಕಿಕೊಳ್ಳಿ.

ಅವನನ್ನು ತೆಗೆದು ಹಾಕಬೇಕೆಂದು ಹೇಳುತ್ತಿಲ್ಲ, ಸಾರ್ ಅವಳನ್ನೂ ಸೇರಿಸಬೇಕು ಎಂಬುದೇ ಪ್ರಶ್ನೆ.

  • ಆಗ ಅದು ಇರಲಿಲ್ಲ ಅದಕ್ಕೆ ಹಾಗೆ ಬರೆದರು. ಈಗ ಇದೆ ಅದಕ್ಕೆ ಬೇಕಾದಂತೆ ಬದಲಾಯಿಸಿಕೊಳ್ಳಿ ಮಾನವನ ಜೊತೆಗೆ ಮಾನವಿ ಎಂದು ಬೇಕಾದರೆ ಬಳಸಿ.

    ‘ಶಾಸ್ತ್ರೀಯ ಭಾಷೆ’ ಎಂಬ ಶಬ್ದ ಒಂದು ಅಬದ್ಧ ಸಿಂಹಾಸನದ ಮೇಲೆ ಕುಳಿತುಬಿಟ್ಟಿದೆ. ಅದನ್ನು ಕೆಳಗಿಳಿಸಿ ‘ಅಭಿಜಾತಭಾಷೆ’ ಅಥವ ‘ಸಮೃದ್ಧ ಪ್ರಾಚೀನ ಭಾಷೆ ಎಂಬ ಶಬ್ದಗಳನ್ನು ಉಪಯೋಗಿಸಬೇಕು ಎಂದಿದ್ದೀರಿ. ಈ ನಿಟ್ಟಿನಲ್ಲಿ ನಮ್ಮ ವಿಶ್ವ ವಿದ್ಯಾಲಯಗಳಾಗಲೀ, ಕನ್ನಡ ನಾಡು ನುಡಿಗೆ ಮುಡಿಪಾದ ಸಂಸ್ಥೆಗಳಾಗಲೀ ಯಾವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು?
  • ಬಹಳ ಒಳ್ಳೆಯ ಪ್ರಶ್ನೆ. ಕನ್ನಡಕ್ಕೆ ಅಭಿಜಾತ ಸ್ಥಾನವೇನೋ ಸಿಕ್ಕಿಯಾಯಿತು. ಆದರೆ ಆನಂತರ ಏನು ಎಂಬುದಕ್ಕೆ ನಾವು ಸಿದ್ಧರಾಗಿರಲಿಲ್ಲ. ನಾವು ಯೋಜನೆಗಳನ್ನು ರೂಪಿಸಿಕೊಂಡರೆ ತಾನೇ ಸರ್ಕಾರ ಗ್ರ್ಯಾಂಟ್ ಕೊಡುವುದು? ತಮಿಳರು ಯೋಜನೆಗಳನ್ನು ರೂಪಿಸಿದರು ಅದಕ್ಕೆ ಸರ್ಕಾರ ಅವರಿಗೆ ಗ್ರ್ಯಾಂಟ್‍ನ್ನು ಮಂಜೂರು ಮಾಡಿತು. ನಮ್ಮಲ್ಲೂ ಈಗ ಮೈಸೂರಿನಲ್ಲಿ ಇಂತಹ ಯೋಜನೆಗಳನ್ನು ಪ್ರಾರಂಬಿಸಿರುವುದು ಸಂತೋಷದ ವಿಷಯ. ಅಖಿಲ ಭಾರತ ಭಾಷಾ ( ನಿಘಂಟು) ಸಂಘದ ಸಭೆಯೊಂದು ದೆಹಲಿಯಲ್ಲಿ ನಡೆದಾಗ ಹಿಂದಿ ಭಾಷೆಗೆ ಮಾತ್ರ ಸರ್ಕಾರ ಅನುದಾನವಿತ್ತಾಗ ಅದನ್ನು ವಿರೋಧಿಸಿದವನು ನಾನೇ.

    ಮುಂಬಯಿ/ಮಹಾರಾಷ್ಟ್ರದ ಕನ್ನಡ ಸಾಹಿತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಬಹಳ ಒಳ್ಳೆಯ ಸಾಹಿತ್ಯವನ್ನು ಮುಂಬಯಿ ಕೊಟ್ಟಿದೆ. ಯಶವಂತ ಚಿತ್ತಾಲ, ಬಲ್ಲಾಳ, ವಸಂತ ದಿವಾಣಜಿ.. ಕನ್ನಡದ ಕೆಲಸಗಳು ಅಲ್ಲಿ ಬಹಳ ನಡೆಯುತ್ತಿವೆ.

ಜೆ. ಕೃಷ್ಣಮೂರ್ತಿಯವರ ಕೃತಿಯೊಂದನ್ನು ‘ತಿಳಿದುದೆಲ್ಲವ ಬಿಟ್ಟು’ ಎಂದು ಕನ್ನಡಕ್ಕೆ ಅನುವಾದಿಸಿದ್ದೀರಿ, ಅವರ ಪ್ರಭಾವ ನಿಮ್ಮ ಮೇಲಾಗಿದೆಯೇ?

ಪ್ರಭಾವ ಎಂದು ಹೇಳಲಾರೆ. ಆ ಕೃತಿಯೊಂದನ್ನು ಅನುವಾದಿಸಬೇಕು ಅನ್ನಿಸಿತು. ಹೀಗಾಗಿ ಅನುವಾದ ಮಾಡಿದೆ. ನಾನು ಅವರ ಅನುಯಾಯಿಯೇನೂ ಅಲ್ಲ.

ಆಡು ಮಾತು ಮತ್ತು ಬರವಣಿಗೆಯ ಭಾಷೆ ಎರಡೂ ಬೇರೆ ಬೇರೆ ಯಾಕೆ?

ಆಡು ಮಾತು ಆಯಾ ಪ್ರದೇಶದ ವೈವಿದ್ಯತೆಯನ್ನು ಒಳಗೊಂಡಿದೆ. ಆದರೆ ಈ ಎಲ್ಲ ವೈವಿಧ್ಯತೆಯನ್ನು ಏಕೀಕರಣಗೊಳಿಸುವುದು ಗ್ರಂಥಸ್ಥ ಭಾಷೆ. ಹಾಗೆ ನೋಡಿದರೆ ಇದು ಕನ್ನಡದ ನಿಜವಾದ ಏಕೀಕರಣ.

‍ಲೇಖಕರು Avadhi

August 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: