ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾ ಹಂಗಿಸುತ್ತಲೇ ಇರುತ್ತವೆ ನೆನಪುಗಳು…

ಹಂಗಿನರಮನೆ

ನಾ ದಿವಾಕರ

ಸದಾ ಹಂಗಿಸುತ್ತಲೇ ಇರುತ್ತವೆ
ನೆನಪುಗಳು
ಮನದಾಳದ ಭಾವಗಳು
ಅನ್ನದಗುಳಿನ ಪಳೆಯುಳಿಕೆಗಳು ;
ಮುಂದಡಿಯಿಡುವ ಮುನ್ನ
ಹಿಂದಣದ ಕನಸುಗಳ ನೆನೆವಾಗ
ಆಂತರ್ಯದಲಿ ಬಿತ್ತ ಬೀಜಗಳು
ಮೊಳೆಯುತ್ತವೆ ಶುಷ್ಕ
ಗಿಡಗಂಟಿಗಳಂತೆ !
 
ಅಡಿಗಡಿಗೂ ಪದತಳಕೆ
ಚುಚ್ಚಿದ ಮೊನಚು ಮಾತುಗಳು
ನಾಟುತ್ತವೆ ಆತ್ಮದಾಂತರ್ಯದಲಿ
ವಲ್ಮೀಕಗಳಣುಗಳಲಿ ;
ಬೆತ್ತಲೆಯಲ್ಲವೇ ಬೆಳಕು
ಬೆತ್ತಲೆಯಲ್ಲವೇ ನೆನಪು
ಬಯಲಾಟದ ಬದುಕಿನ
ಚೆಲ್ಲಾಟಗಳು ಪಲ್ಲಟಗೊಳಿಸುತ್ತವೆ
ಹೆಜ್ಜೆಗುರುತುಗಳನು !

ಋಣಾನುಬಂಧಗಳನೆಣಿಸಲು
ಪಿಂಡ ಮಾನದಂಡ ?
ಸಂಬಂಧಗಳ ಸೇತು ಕಡಿದಾಗ
ಎತ್ತ ವಾತ್ಸಲ್ಯದ ಚಿತ್ತ ?
ತೃಣಮಾತ್ರದ ಋಣ
ಪರಮಾಣುವಿನಂತೆ ಸ್ಪೋಟಿಸಿದಾಗ
ಅಸ್ಥಿ ವಿಜೃಂಭಿಸುತ್ತದೆ
ವೈತರಣಿಯ ಹರಿವಿನಲಿ
ಪಯಣಿಸಲಹುದೇ ನೊಂದ ಜೀವ !
 
ಭುವಿಯ ಕಣದೊಳಂತರ್ಗತವಾದ
ಪಂಜರಕೇತರ ದಾಹ
ಭೌತದೊಳವತರಿಸಿ ವಿಹರಿಸುವ
ಭಾವಗಳಿಗೇನು ಮೋಹ
ಎಲ್ಲವೂ ಮಿಥ್ಯೆ ; ಮಣ್ಣೊಳಗಿನ
ಅಸ್ತಿಗೆನಿತು ಕಾತರ
ಸಂಬಂಧಗಳ ಹೊಸೆದು
ಬೆಸೆದು ಬಂಧಿಸುವ ನಶ್ವರ
ದೇಹಕೆನಿತು ವ್ಯಾಮೋಹ
ಎಲ್ಲವೂ ಅರ್ಧಸತ್ಯ !
 
ಆತ್ಮದ ಹೊದಿಕೆ
ಕಳಚಿದಾಗ ಆಂತರ್ಯ ಕಂಪಿಸುತ್ತದೆ
ಜಡ್ಡುಗಟ್ಟಿದ ಹೃದಯ
ಪರಿತಪಿಸುತ್ತದೆ ಪ್ರೀತಿ ಅರಸುವ
ಮನಸು ಮಸುಕಾಗುತ್ತದೆ ;
ವರ್ತಮಾನಗಳ ಕನಸುಗಳಿಗೆ
ಭೂತ ಭವಿತವ್ಯಗಳ
ಭ್ರಮೆಯಾವರಿಸಿದಾಗ
ಅಸ್ತಿತ್ವವಿಲ್ಲದ ಅಸ್ಥಿ
ಧಿಗ್ಗನೆದ್ದು ನಡೆಯುತ್ತದೆ
ನೆನಪುಗಳ ಛಾಯೆಯಲಿ !
 
ಹೆಜ್ಜೆಗಳ ಜಾಡು
ಮಧುವನರಸಿದರೂ
ಬಾಳು ಮಧುವಂಚಿತವೇ ;
ಇರಲಿ ಇಹಪಯಣದಲ್ಲಿರದ
ಮಧು ದೇಹದಲಡಗಿದೆ
ಮೇಹದೊಡನೆ ದಿಂಗತದಂಚಿಗೆ
ಕರೆದೊಯ್ಯಲು ;
ಪಂಚಭೂತಗಳನಪ್ಪಿದ ಜೀವಕೆ
ಅಗುಳಿನ ಹಂಗೇಕೆ
ಆತ್ಮಸಾಕ್ಷಿಗೆ ಪ್ರೀತಿಯೇ ಪ್ರಧಾನ
ಅಂತರಾತ್ಮಕೆ ಏಕೆ
ಪಿಂಡ ಪ್ರಧಾನ !

‍ಲೇಖಕರು G

5 November, 2014

5 Comments

  1. NA DIVAKAR

    (ಮಣ್ಣೊಳಗಿನ ಅಸ್ತಿಗೆನಿತು) – ಇಲ್ಲಿ ಅಸ್ಥಿ ಎಂದಾಗಬೇಕಿತ್ತು. ದೋಷಕ್ಕಾಗಿ ವಿಷಾದವಿದೆ ಕ್ಷಮೆ ಇರಲಿ.

  2. Naveen

    ಅಬ್ಬಾ ,,,,,,,,, ಹಂಗಿನ ಅರಮನೆ,,,,, ಸುಂದರ ಭಾವ

  3. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

  4. mmshaik

    uttam kavana divakar..

  5. mahesh kalal

    olleya kavan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading