ಸದಾಶಿವ ಸೊರಟೂರ ‘ಕವಿತೆ ಬಂಚ್‌’ ವಿಮರ್ಶೆ..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ..

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆಫ್ ದಿ ವೀಕ್’ ಆದವರು‌ ಸದಾಶಿವ ಸೊರಟೂರ

ಅವರ ಕವಿತೆಗೆ ಅರಬಗಟ್ಟೆ ಅಣ್ಣಪ್ಪ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ..

ಅರಬಗಟ್ಟೆ ಅಣ್ಣಪ್ಪ

ಜೀವಪರ ಸೌಂದರ್ಯವನ್ನೇ ಎತ್ತಿ ಹಿಡಿದಿವೆ

ಅವಧಿಯಲ್ಲಿ ವಾರಕ್ಕೊಬ್ಬ ಕವಿಯ ಕವಿತೆಗಳ ಬಂಚಿನಲಿ ಸದಾಶಿವ ಸೊರಟೂರರ ‘ಸಪ್ತ’ಕವನಗಳನ್ನು ಕಂಡೆ. ಇವನ್ನೆಲ್ಲ ನಾನು ಬಹುಶಃ ಓದಿರಬಹುದಾದ ಕವನಗಳೆಂದುಕೊಂಡು ಇಂದಿನ ಯಂತ್ರ ಸಹಜ ಚಲನೆಯಲ್ಲಿರಬೇಕಾದರೆ ಸಾಕಷ್ಟು ಹೊಳವು, ಹೊಸತನ ಕಂಡು ಮತ್ತೆ ಮೊದಲಿಂದ ಓದಿದೆ.

ಸದಾಶಿವರ ಕವನಗಳು ಹೆಚ್ಚಾಗಿ ಮಾರ್ಬಲ್ಲು ಕಲ್ಲು ಸಿಮೆಂಟಿನ ಲೇಪವಿರದ ಸಮಾಧಿಯಂಥವು. ಆ ಸಮಾಧಿಯ ಮೇಲೆ ಹೇಗೆ ನವನವೀನ ಹುಲ್ಲು ಗರಿಕೆ ಸುಮಗಳು ಅರಳಿ ನಳನಳಿಸುವುವೋ ಅಂಥದೇ ತರಂಗಗಳು ನಮ್ಮ ಹೃದಯದಲ್ಲಿ.

‘ನೆನಪುಗಳ ಹತ್ಯೆ ನಡೆದಿದೆ’ ಎನ್ನುತ ವೈದ್ಯನನೂ ಏಕನನೂ ಒಂದೇ ಸಾಲಿಗೆ ನಿಲ್ಲಿಸುತ್ತಾರೆ, ನಿಜ! ಆ ಸಾಲಿನಲ್ಲಿ ತಾವೂ ನಿಂತು ಸಹೃದಯರಾದ ನಮಗೆ ಆಹಾರವನ್ನೂ ನೀಡುವ ಮಾಂಸದಂಗಂಡಿಯವನಾಗುತ್ತಾರೆ. ಕವನವನು ತುಂಬಿಕೊಂಡಿರುವ ಕಮಟುವಾಸನೆ ಓದುಗನಡುಗೆಮನೆಗೆ ಬಂದು ಭೂರಿಭೋಜನವಾಗುತ್ತದೆ. ಓದಿದ ನಂತರ ಹಾಗೆ ಧ್ಯಾನಿಸುತ್ತ ಕೂರುವುದೊಂದೇ ಅದನ್ನು ಜೀರ್ಣಿಸಿಕೊಳ್ಳುವುದಕ್ಕಿರುವ ಏಕೈಕ ದಾರಿ.

ಸಾಮಾನ್ಯವಾಗಿ ಊರು ತೊರೆದ ಮಂದಿಯ ಭಾವವಿದು. ‘ತನ್ನ ಊರು’ ಮುದಿಯಾಗಿ ಸಾಯುತಿದ್ದರೂ ತೊರೆದ ಜೀವಕ್ಕದು ಕಳೆದ ಬಾಲ್ಯ ಬಿಟ್ಟು ಒಂದು ಹೆಜ್ಜೆಯೂ ಮುಂದೆ ಸಾಗಿರುವುದಿಲ್ಲ. ‘ಎತ್ತುವ ಹೆಣಕ್ಕೆ ಸಾವಿರ ನೆಂಟರು’ ಸೊಗಸಾದ ವಾಸ್ತವಿಕ ಕವನ. ಈ ಸಾಲುಗಳು ಅದರ ನಿಚ್ಛಳ ಬಿಂಬಗಳು….

ಸುಡಲು ಒಂದು ಪಾವು ಬೆಂಕಿ….ಸತ್ತವರ ಮನೆಯಲ್ಲಿ ದೀಪ ಉರಿಯುತ್ತವೆ….ಇದು ಬರೀ ಬದುಕಿದವರ ದುನಿಯಾ… ಹೀಗೆ ನಮ್ಮೊಳಗಿನ ಜಗತ್ತನ್ನು ಬೆತ್ತಲೆಯಾಗಿಸುವ ತಾಕತ್ತು ಇಲ್ಲಿದೆ. ಆದರೆ ಒಪ್ಪಿಕೊಳ್ಳುವ ಕಟುಕತೆಯಿನ್ನು ಬಂದಿಲ್ಲ. ಹೆಣ್ಣಿನ ಮೇಲಿನ ದೌರ್ಜನ್ಯಗಳಿಗೆ ಲೆಕ್ಕಗಳೇ ಇಲ್ಲ. ‘ಪಾಪದ ತುದಿ ಗುರುತುಗಳು’ ಓದುತ್ತಿದ್ದಂತೆಯೇ ನಡುಕ ಹುಟ್ಟುತ್ತದೆ. ಕವನವು ಎಷ್ಟು ಸೂಕ್ಷ್ಮದ ಮೂಸೆಯಲ್ಲಿ ಹೊರಹೊಮ್ಮಿದೆಯೆಂದರೆ ಅದರ ಬಗೆಗಿನ ವಿಮರ್ಶೆ ಮೇಲ್ಮಾತುಗಳನ್ನೂ ಬದಿಗಿಟ್ಟು ಮೊದಲು ಬದುಕುವುದನ್ನು ಉದ್ದೀಪಿಸುತ್ತದೆ.

ಚಿಕ್ಕವಯಸ್ಸಿನಲ್ಲೇ ವಯಸ್ಕ ಭಾವ ನಡವಳಿಕೆಗಳನ್ನು ಮೈವೆತ್ತ ಇಂದಿನ ಮಕ್ಕಳಿಗೆ ‘ಬೊನ್ಸಾಯ್’ ಅತ್ಯುತ್ತಮ ಪ್ರತಿಮೆಯಾಗಿದೆ. ಅದು ಅವರು ಬಯಸಿದ್ದಲ್ಲವಾದರೂ ನಮ್ಮ ಒತ್ತಡದ ಜೀವನ ಅವರನ್ನು ಹಾಗೇ ಮಾಡಿರುವುದು ಈ ಶತಮಾನದ ಮಹಾದೌರ್ಬಲ್ಯದಲ್ಲೊಂದು. ”ಜಗತ್ತು ಮರೆತು ಗೂಡು ಸೇರುವ….” ಇಂದಿನ ಮಕ್ಕಳ ಒಳದನಿಗೆ ಕಿವಿಗಳೇ ಇಲ್ಲ. ಹೆಣ್ಣು ಮತ್ತು ಮಗು ಇವೆರಡರ ಮುಂದೆ ನಾವು ಮತ್ತೆಮತ್ತೆ ಸೋಲುತ್ತಿರುವುದು ನಮ್ಮ ಪುರುಷಾರ್ಥದ ಬದುಕಿಗೆ ಬಹುದೊಡ್ಡ ಪ್ರಶ್ನಾರ್ಥಕವಾಗಿದೆ.

‘ನೆನಪುಗಳ ಹತ್ಯೆ’ಯೆಂಬುದು ರಕ್ತಬೀಜಾಸುರ ಸಂತಾನವಿದ್ದಂತೆ! ಅದನ್ನು ಹೊಸೆದಿರುವ ಶೈಲಿ ಸೊಗಸಿದೆ. ಸಧ್ಯದ ಜಗದಲ್ಲಿ ವಾದಿ ಪ್ರತಿವಾದಿಗಳಿಲ್ಲದೆ ಸಮಾನ ಪಾಲುದಾರಿಕೆಯ ಪಾಪಗಳ ಹೊತ್ತವರೇ ಹೆಚ್ಚು. ಎಲ್ಲ ನೆನಪುಗಳನ್ನು ಸಮಾಧಿಗೊಳಿಸಿ ಅದನ್ನೇ ಕಾಲುದಾರಿಯಾಗಿಸಿಕೊಂಡು ನಡೆದವಳೇ ಇಂದು ನಿಜಕ್ಕೂ ಬದುಕಿದವಳು. ಹೌದು! ನಿಜಕ್ಕೂ ಬದುಕಿರುವವರದೇ ದುನಿಯಾ.

ನೆನಪಿನ ಗಣಿಯೊಳಗೆ ಸತ್ತವನ ನೆಪಕ್ಕೊಂದು ದೀಪವಿರುತ್ತದೆ ನಿಜ. ಸಧ್ಯಕ್ಕೆ ಬದುಕುವುದೇ ಮುಖ್ಯ. ಹೌದು ಬದುಕುವುದೆಂದರೇನು…. ಹೆಜ್ಜೆ ಹೆಜ್ಜೆಗಳನಿಡುವುದು ಅಂದರೆ ಸಾಗುವುದೇ ಜೀವನ. ಆಧುನಿಕದಲ್ಲಿ ಸಮರಸವೇ ಜೀವನವಂತೂ ಅಲ್ಲ ಸಾಗುವುದೇ ಜೀವನ. ಈ ಓಟಕ್ಕೆ ಬಿದ್ದು ತನ್ನತನವನ್ನೇ ಕಳೆದುಕೊಂಡು ಮುಖವಾಡ ಹಾಕಿ ಬದುಕುವವರ ಮೇಲೆ ಕವಿಗಿಷ್ಟು ತೀವ್ರತರವಾದ ಮುನಿಸಿದೆ. ಆದರೂ ಅವೆಲ್ಲ ಸಮಾಧಿಗಳ ಮೇಲೆ ಬಿರಿದ ಸುಮಗಳಂತೆ ಪದಗುಚ್ಛ ಜೋಡಿಸಿ ಕವನ ಹೊಸೆದಿದ್ದಾರೆ. ಇದೂ ಕೂಡ ಬದುಕುವುದೇ ಅಲ್ಲವೆ!?

ಹೌದು! ನಮ್ಮ ಕವಿ ಸದಾಶಿವ ಕವನಗಳು ಬದುಕಿವೆ. ನೆನಪುಗಳ ಗೋರಿಯ ಮೇಲೆ ದೀಪವಿಟ್ಟು, ತನ್ನಡಿಯ ಕತ್ತಲಲಿ ಬಿಕ್ಕುತಿವೆ! ಜಗಕೆ ಕಿರುನಗೆಯ ಬೆಳಕಂತೆ ತೋರಿ ಮಿನುಗುತಿವೆ. ಬದುಕಿದವರ ಸಂಕಟ ಕೇಳುವವರಿಲ್ಲವಾಗಿಯೇ ಈ ಕವನಗಳು ಮೂಡಿ ಬಂದಿವೆಯೆಂದೆನಿಸಿದೆ ನನಗೆ. ಹೀಗಾಗಿ ಬದುಕಿರುವವರದೇ ಜೀವನಕ್ಕಿಂತ ‘ಬದುಕುವುದೇ ಜೀವನ’… ಅಗಾಧ ವಿಷಾಧಗಳ ಮಡುವಿನಲ್ಲೂ ಕಮಲದಂತೆ ಅರಳುವ ಜೀವಪರ ಸೌಂದರ್ಯವನ್ನೇ ಎತ್ತಿ ಹಿಡಿದಿವೆ ನಮ್ಮ ಸೊರಟೂರರ ಕವನಗಳು.

ಅವಧಿಯ ಈ ಪ್ರಯತ್ನ ಖುಷಿಕೊಟ್ಟಿತು.

‍ಲೇಖಕರು Admin

November 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: