ಪಿ ಪಿ ಉಪಾಧ್ಯ ಅಂಕಣ ಆರಂಭ – ಇಂಗ್ಲೆಂಡ್‌ ರಿಟರ್ನ್ಡ್

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

1

ಪ್ರಥಮ ಚುಂಬನೇ ದಂತ ಭಗ್ನ…

ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಲಂಡನ್ ಶಾಖೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಖಂಡಿತವಾಗಿಯೂ ನನ್ನ ಅದೃಷ್ಟವೇ. ಸಾವಿರಕ್ಕೊಬ್ಬರಿಗೆ ಹತ್ತುಸಾವಿರಕ್ಕೊಬ್ಬರಿಗೆ ಸಿಗಬಹುದಾದ ಅವಕಾಶ. ಅದು ಬೇರೆ ಹೆಂಡತಿ ಮಕ್ಕಳನ್ನು ಜತೆಯಲ್ಲಿ ಕರೆದೊಯ್ಯಬಹುದು ಎಂದಾದಾಗಂತೂ ಸ್ವರ್ಗಕ್ಕೆ ಮೂರೇ ಗೇಣು. ಒಟ್ಟಿಗೇ ಸಂಸ್ಥೆಯನ್ನು ಸೇರಿ ಜತೆಯಲ್ಲಿಯೇ ದುಡಿಯುತ್ತ ಬಂದ ಹಲವರು ಆಶ್ಚರ್ಯದಿಂದ, ಮೆಚ್ಚುಗೆಯಿಂದ, ಅಸೂಯೆಯಿಂದ ಹುಬ್ಬೇರಿಸಿದ್ದೂ ಹೌದು.

ರಾತ್ರಿ ಒಂದೂವರೆಗೆ ಚನ್ನೈನಲ್ಲಿ ಆಳೆತ್ತರದ ಹೂ ಮಾಲೆಯೊಂದಿಗೆ ಬಂದ ಸಹೋದ್ಯೋಗಿಗಳಿಂದ, ಅರ್ದಂಬರ್ಧ ಅಳುತ್ತಿದ್ದ ಸಂಬಂಧಿಕರಿಂದ ಬೀಳ್ಕೊಂಡು ವಿಮಾನ ಹತ್ತಿ ಮುಂಬೈನಲ್ಲಿ ಇಳಿದಾಗ ಮೂರು ಘಂಟೆ. ನಾಲ್ಕೂ ಮುಕ್ಕಾಲಿಗೆ ವಿಮಾನ ಬದಲಾಯಿಸಿ ಮತ್ತೆ ಸುಮಾರು ಹತ್ತು ಹನ್ನೊಂದು ಘಂಟೆಗಳ ಕಾಲ ವಿಮಾನದಲ್ಲಿ ಕುಳಿತು ಗಾಳಿಯಲ್ಲಿ ತೇಲುತ್ತ ವಿಮಾನದಲ್ಲಿ ಪ್ರದರ್ಶಿಸುತ್ತಿದ್ದ ಅದ್ಯಾವುದೋ ಹಿಂದಿ ಸಿನಿಮಾವನ್ನು ಅರ್ಧ ನಿದ್ದೆ ಮತ್ತು ಅರ್ಧ ಎಚ್ಚರದಲ್ಲಿ ನೋಡುತ್ತ ಆಗಾಗ್ಗೆ ಪೈಲೆಟ್ ಹೇಳುತ್ತಿದ್ದ `ಈಗ ಅರೇಬಿಯಾದ ಮೇಲಿದ್ದೇವೆ, ಈಗ ಮೆಕ್ಕಾವನ್ನು ದಾಟುತ್ತಿದ್ದೇವೆ, ಇನ್ನೇನು ಪ್ಯಾಲಸ್ಟೀನ್ ಬರುತ್ತಾ ಇದೆ’ ಎಂದೆಲ್ಲ ಹೇಳುವುದನ್ನು ಕೇಳಿಸಿಕೊಳ್ಳುತ್ತ ನಡು ನಡುವೆ ತನ್ನ ತರಬೇತಿಯ ಚಾಲಾಕುತನವನ್ನು ತೋರಿಸುವ ಸಲುವಾಗಿ ವಿಮಾನವನ್ನು ಮೇಲೆ ಕೆಳಗೆ ಮಾಡುತ್ತ ನಮ್ಮ ಪ್ರಾಣವನ್ನು ಬಾಯಿಗೆ ತರಿಸುತ್ತಿದ್ದ ಅವನನ್ನು ಸ್ವಲ್ಪ ಹೊಗಳುತ್ತ ಸ್ವಲ್ಪ ಬಯ್ಯುತ್ತ ಲಂಡನ್ನಿನ ಹೀತ್ರೋ ವಿಮಾನ ನಿಲ್ದಾಣದಲ್ಲಿ ಇಳಿದಾಗ ಮಧ್ಯಾಹ್ನ ಮೂರು ಘಂಟೆ. ಮಧ್ಯದಲ್ಲಿ ಒಂದುಸಲ `ನಾವೀಗ ಅಂತರರಾಷ್ಟ್ರೀಯ ಡೇಟ್ ಲೈನನ್ನು ದಾಟುತ್ತಿದ್ದೇವೆ ನಿಮ್ಮ ನಿಮ್ಮ ಗಡಿಯಾರಗಳನ್ನು ಹಿಂದೆ ಹಾಕಿಕೊಳ್ಳಿ’ ಎಂದು ಹೇಳಿದ ಪೈಲಟ್ ನ ಸೂಚನೆಯನ್ನು ಕೇಳಿ ಅಡ್ಜಸ್ಟ್ ಮಾಡಿಕೊಂಡದ್ದರಿಂದ ನಮ್ಮ ಗಡಿಯಾರದಲ್ಲಿ ಮೂರುಗಂಟೆ. ಹಾಗೆ ಯಾರು ಅಡ್ಜಸ್ಟ್ ಮಾಡಿಕೊಂಡಿರಲಿಲ್ಲವೋ ಅವರ ಗಡಿಯಾರದಲ್ಲಿ ರಾತ್ರಿ 8.30!


ಅಲ್ಲಿನ ಆಫೀಸಿನಿಂದ ಬಂದು ಕಾಯುತ್ತಿರಬಹುದಾದ ಇನ್ನು ಮೇಲೆ ಗುರುತು ಮಾಡಿಕೊಳ್ಳಬೇಕಾದ ಸಹೋದ್ಯೋಗಿಗಳನ್ನು ಹೇಗಪ್ಪಾ ಗುರುತು ಹಿಡಿಯುವುದು ಎನ್ನುವ ಹೊಸ ಟೆನ್ಶನ್ನಿನೊಂದಿಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ನಿಧಾನವಾಗಿ ಪ್ಲೇನಿನಿಂದ ಕೆಳಗಿಳಿದು ಆ ಮೈಲುದ್ದದ ಬಳಸು ದಾರಿಯನ್ನು ಸುತ್ತಿಕೊಂಡು ಬರುತ್ತಿದ್ದೆವು.

ಇಂಡಿಯಾ ಪಾಕಿಸ್ತಾನ ಮೊದಲಾದ ಏಷಿಯಾ ಖಂಡದ ದೇಶಗಳಿಂದ ಬರುವ ಮಂದಿ ಒಂದೋ ಕಾನೂನು ಬಾಹಿರ ವಲಸೆಗಾರರು ಅಥವಾ ಮಾದಕ ವಸ್ತುಗಳ ಸಾಗಾಣಿಕೆ ದಾರರೇ ಇರುತ್ತಾರೆಂದು ಖಚಿತವಾದ ಅಭಿಪ್ರಾಯ ಹೊಂದಿದ ಆ ಬಿಳಿಯ ಕಸ್ಟಮ್ಸ್ ನವರೊಂದಿಗೆ ಏಗಿ ಅವರ ಯದ್ವಾ ತದ್ವಾ ಉಚ್ಚಾರಣೆಯ ಇಂಗ್ಲೀಷನ್ನು ಅರ್ಥ ಮಾಡಿಕೊಳ್ಳಲು ಹೆಣಗುತ್ತ, ನಾವು ಕಲಿತು ಮಾತನಾಡುತ್ತಿದ್ದ ಭಾಷೆ ಅವರೆದುರಿಗೆ ಏನೂ ಅಲ್ಲವಲ್ಲ ಎನ್ನುವ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾ ಒಮ್ಮೆ ಬಚಾವಾದೆವಲ್ಲ ಎಂದು ಲಗುಬಗೆಯಿಂದ ಹೊರ ಹೊರಟು ಇನ್ನೇನು ತಪ್ಪಿಸಿಕೊಂಡೇ ಬಿಟ್ಟೆವು ಎಂದುಕೊಳ್ಳುತ್ತಿದ್ದಾಗಲೇ ಬಿಳಿಯುಡುಗೆ ತೊಟ್ಟ ಬಿಳಿಯಾಕೆಯೊಬ್ಬಳು ಕೈ ಅಡ್ಡ ಹಿಡಿದು ಬೇರೆ ದಾರಿ ತೋರಿದ್ದಳು. ಏನಪ್ಪ ಇದು ವಿಶೇಷ ಎಂದು ನೋಡಿದರೆ ನಾವು ಇಂಡಿಯದಿಂದ ಬರುತ್ತ ಟೀಬಿ ಖಾಯಿಲೆಯನ್ನು ಹೊತ್ತುತರಲಿಲ್ಲ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಬೇಕಿತ್ತಂತೆ ಅವರಿಗೆ. ಅಂಗಿ ಬಿಚ್ಚಿಸಿ ಸ್ಕ್ಯಾನಿಂಗ್ ಮಾಡಿಸಿ ತೂಕ ನೋಡಿ ಎಲ್ಲ ಮುಗಿಯುವಾಗ ಇನ್ನೆರಡು ಗಂಟೆ.

ನಮಗಾಗಿ ಹೊರಗೆ ಕಾಯುತ್ತಿದ್ದವರು ಪ್ಲೇನ್ ಕೆಳಗಿಳಿದು ಗಂಟೆಯೆರಡು ಗಂಟೆ ಕಳೆದರೂ ಬಾರದ ನಮಗಾಗಿ ಎರಡೆರಡು ಸಲ ಪಬ್ಲಿಕ್ ಎಡ್ರಸ್ ಸಿಸ್ಟಮ್ ನಲ್ಲಿ ಹೇಳಿಸಿಯೂ ಆಗಿತ್ತಂತೆ. ಯಾವುದೋ ಮೂಲೆಯಲ್ಲಿ ಬಟ್ಟೆ ಬಿಚ್ಚಿಕೊಂಡು ತೂಕ ನೋಡುತ್ತ ಕುಳಿತಿದ್ದ ನಮಗೆಲ್ಲಿ ಕೇಳಿಸಬೇಕು ಅದು. ಅದೆಲ್ಲ ಗೊತ್ತಾದದ್ದು ಗಂಟೆಗಳು ಕಳೆದು ಅವರ ಸೇವೆಯೆಯನ್ನೆಲ್ಲ ಸ್ವೀಕರಿಸಿ ನಮ್ಮನ್ನು ಸ್ವಾಗತಿಸಿ ಕರೆದೊಯ್ಯಲು ಸ್ವತಃ ತಾವೇ ಬಂದಿದ್ದ ಹಿರಿಯ ಅಧಿಕಾರಿಗಳ ಧುಮುಗುಟ್ಟುತ್ತಿರುವ ಮುಖ ಮತ್ತು ಅವರ ಅಸಹನೆಯ ಮಾತುಗಳನ್ನು ಗಮನಿಸಿದಾಗಲೇ. ಪಾಪ ಅಲ್ಲಿನ ಕಾನೂನು ಪಾಲನೆ ಮಾಡುವ ಶಿಸ್ತಿನ ಸಿಪಾಯಿಗಳಿಗೇನು ಗೊತ್ತು ನಮ್ಮನ್ನು ಕರೆಯಲು ಸ್ವತಹ ಹಿರಿಯ ಅಧಿಕಾರಿಗಳೇ ವಿಮಾನ ನಿಲ್ದಾಣಕ್ಕೆ ಬಂದಿರುತ್ತಾರೆಂಬುದು!


ಈ ಸ್ಕ್ಯಾನಿಂಗಿನ ಸ್ಪೆಷಲ್ ಟ್ರೀಟ್ ಮೆಂಟ್ ಯಾಕಪ್ಪಾ ನಮಗೆ ಎಂದರೆ ನಮ್ಮ ಜತೆಯಲ್ಲಿಯೇ ಇದ್ದ ಇನ್ನೂ ಮೂರು ತಿಂಗಳು ತುಂಬದ ಮಗು ಮತ್ತು ಅದರ ತಾಯಿಯನ್ನು ತೋರಿಸಿದ್ದರು. ಚನ್ನೈನಲ್ಲಿ ಫ್ಲೈಟ್ ಹತ್ತುವಾಗಲೇ ಮೂರನೆಯವರಿಂದ ಪರಿಚಯವಾಗಿ ಕನ್ನಡ ಮಾತನಾಡುವವರು ಮಂಗಳೂರು ಕಡೆಯವರು ಎಂದು ಗೊತ್ತಾಗಿ ಆ ಪರಿಚಯ ವಿಶ್ವಾಸವಾಗಿ ‘ನೋಡಿ ಈಕೆ ನಮ್ಮ ಮಗಳು. ಈಕೆಯ ಗಂಡ ಇಂಗ್ಲೆಂಡಿನಲ್ಲಿ ಡಾಕ್ಟರು. ಈಗ ಮಗುವನ್ನು ಕರೆದುಕೊಂಡು ಒಬ್ಬಳೇ ಹೊರಟಿದ್ದಾಳೆ. ದಯವಿಟ್ಟು ಸ್ವಲ್ಪ ನೋಡಿಕೊಳ್ಳಿ’ ಎಂದಿದ್ದ ಆ ಹಿರಿಯರ ಮಾತನ್ನು ಶಿರಸಾ ವಹಿಸಿದ್ದೆವು. ಅದೇ ನಮ್ಮ ತಪ್ಪು.

ಆ ಮೂರು ತಿಂಗಳ ಮಗುವನ್ನು ಲಲ್ಲೆಗರೆಯುತ್ತ ಆ ಮಗುವಿನ ತಾಯಿಗೆ ಸಹಾಯ ಮಾಡುವ ದೃಷ್ಟಿಯಿಂದ ಆಕೆಯ ಸಖ್ಯ ಬೆಳೆಸಿದ್ದೂ ನಮ್ಮ ತಪ್ಪು. ನಾವೆಲ್ಲ ಒಂದೇ ಗುಂಪು ಮತ್ತು ಹಸುಗೂಸುಗಳೊಂದಿಗೆ ಈ ದೇಶಕ್ಕೆ ಕಾಲಿಡುವವರೆಲ್ಲರೂ ಕಡ್ಡಾಯವಾಗಿ ಆ ತೆರನ ಪರೀಕ್ಷೆಗೆ ಒಳಗಾಗಲೇ ಬೇಕು ಎಂದು ಆ ಶ್ವೇತ ವಸನದ ಮಹಿಳೆ ಹೇಳಿದ್ದಳು.

ಹೊರಬಂದು ನಾವೆಲ್ಲ ಅಲ್ಲಿ ಅನಾಥವಾಗಿ ಬಿದ್ದಿದ್ದ ನಮ್ಮ ಲಗ್ಗೇಜನ್ನು ಒಟ್ಟುಮಾಡುತ್ತ ನಮ್ಮನ್ನು ಕರೆಯಲು ಬಂದವರ ಸಿಟ್ಟಿನ ಆದೇಶಗಳನ್ನು ಕೇಳಿಸಿಕೊಳ್ಳುತ್ತಿದ್ದಾಗಲೇ ಮೂರು ತಿಂಗಳ ಮೊದಲ ಮಗುವಿನೊಂದಿಗೆ ಬಂದಿದ್ದ ಹೆಂಡತಿಯನ್ನು ಎದುರುಗೊಳ್ಳಲು ಬಂದಿದ್ದ ಆ ಡಾಕ್ಟರ್ ಗಂಡನನ್ನು ನೋಡಿದ್ದೇ ಆ ತಾಯಿ ನಮ್ಮೆಲ್ಲರನ್ನೂ ನಮ್ಮೆಲ್ಲರ ಅವಸ್ಥೆಯನ್ನೂ ಮರೆತು ಒಂದೇ ಓಟಕ್ಕೆ ಓಡಿದ್ದಳು. ನಮಗೆಲ್ಲರಿಗೂ ಟಾಟಾ ಹೇಳುವುದಂತೂ ದೂರವೇ ಉಳಿದಿತ್ತು.

ಆಕೆಯ ಹೆಸರು, ಆಕೆಯ ಗಂಡನ ಹೆಸರು ನೆನಪಿಲ್ಲ ನಮಗೆ. ಆದರೆ ಚನ್ನೈನಲ್ಲಿ ನಡುರಾತ್ರಿಯ ಹೊತ್ತು ವಿಮಾನ ನಿಲ್ದಾಣದಲ್ಲಿ ಆರ್ತನಾಗಿ ಬೇಡುತ್ತ ಮಗಳ ಜವಾಬ್ದಾರಿಯನ್ನು ನಮಗೆ ಒಪ್ಪಿಸಿದ್ದ ತಂದೆಯ ಹೆಸರು ಗೊತ್ತಿದೆ. ಒಮ್ಮೆ ಸಿಕ್ಕಿದರೆ ಕೇಳಬೇಕೆಂದಿದೆ `ಹೇಗಿದ್ದಾಳೆ ನಿಮ್ಮ ಮಗಳು’ ಎಂದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

November 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: