ಶೈಲಜಾ ಹಾಸನ ಓದಿದ ʼಮಲೆನಾಡಿನ ಮಾರ್ಗದಾಳುʼ

ಎನ್ ಶೈಲಜಾ ಹಾಸನ

 ಯಾವುದೊ ಒಂದು ಊಹೆ, ವಿಚಾರ, ಸಾಮತಿ. ಸಂಗತಿಯನ್ನು ತೆಗೆದುಕೊಂಡು ಅದನ್ನು ಮನೋಜ್ಞವಾಗಿ ನಿರೂಪಿಸುವ ಕಲೆ ಬರಹಗಾರನಿಗಿರಬೇಕು. ದೈನಂದಿನ ಘಟನೆಗಳನ್ನು ವಸ್ತುವಾಗಿಸಿಕೊಂಡು ಅಡುಮಾತಿನ ಸೊಬಗು, ತನಿ ಬನಿಗಳನ್ನು, ಬಾಗು ಬಳುಕುಗಳನ್ನು, ಸಹಜ ಸಲೀಲ ಭಂಗಿಗಳಲ್ಲಿ ಬರಹಗಾರ ತನ್ನ ಬರಹವನ್ನು ಅನಾವರಣಗೊಳಿಸುತ್ತಾ, ನಿರೂಪಣೆಯಲ್ಲಿ ನಿಖರತೆ, ಪ್ರಖರತೆ, ಬೀಡು ಬೀಸಾದ ಪ್ರವೃತ್ತಿ, ಅಡಕ ಭಾಷಾ ಪ್ರಯೋಗ ಒಗ್ಗೂಡಿ ಬಂದಾಗ ಬರಹ ಸಹಜ ಎನಿಸುತ್ತದೆ. ಅಂತಹ ಬರಹದ ಲಕ್ಷಣಗಳು ಹಾಸನ ಜಿಲ್ಲೆಯ ಕವಿ, ಲೇಖಕ ಸಮುದ್ರವಳ್ಳಿ ವಾಸುರವರ ಬರಹದಲ್ಲಿ ಕಾಣುತ್ತಿವೆ.

ಜೀವನದ ಮೌಲ್ಯಗಳನ್ನು ಅರಿಯುವುದು ಮಾತ್ರವಲ್ಲದೆ ಸುಮೌಲ್ಯಗಳ ಬಗೆಗೆ ನಮ್ಮ ಅಂತಃಕರಣದ ಆಕರ್ಷಣೆಯನ್ನು ಪರೋಕ್ಷವಾಗಿ ಹೆಚ್ಚಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ.ಸಾಹಿತ್ಯದ ಪ್ರಕಾರಗಳಲ್ಲಿ ಬೇರೆ ಪ್ರಕಾರಗಳಿಗಿಂತ ಕಾದಂಬರಿಯ ಪ್ರಕಾರ ಅತ್ಯಂತ ತಾಳ್ಮೆ ಬೇಡುವ ಪ್ರಕಾರವಾಗಿದ್ದು, ಅದನ್ನು ಆಯ್ಕೆ ಮಾಡಿಕೊಳ್ಳುವ ಸಂಖ್ಯೆ ಕಡಿಮೆ. ಕಾದಂಬರಿಯ ಒಡಲು ವೈಚಾರಿಕತೆಗೆ ಒಳ್ಳೆಯ ಸ್ಥಾನವಾಗಿದ್ದು, ಕಲಾತ್ಮಕತೆಯ ಮತ್ತು ಬೌದ್ಧಿಕತೆಯ ಸುಮಧುರ ಸಮ್ಮೇಳನವಾಗಬೇಕು. ಆದಾಗದಿದ್ದರೆ ಒಂದು ಕೃತಿ ತನ್ನ ಆಶಯ ಮತ್ತು ಅಭಿವ್ಯಕ್ತಿ ಸ್ವರೂಪಗಳಲ್ಲಿ ಅಂತರವನ್ನು ಪಡೆದುಕೊಂಡು ಬಿಡುತ್ತದೆ. ಹಾಗಾಗಿ ಬಹು ಎಚ್ಚರಿಕೆಯಿಂದ ಬರಹದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಕಾದಂಬರಿಯು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಶಾಲಿ ಮಾಧ್ಯಮ. ಕಾದಂಬರಿಗಳನ್ನು ಓದುವವವರ ಸಂಖ್ಯೆ ಎಲ್ಲ ಭಾಷೆಗಳಲ್ಲೂ ಎಲ್ಲಾ ಪ್ರಕಾರದ ಸಾಹಿತ್ಯವನ್ನು ಓದುವವರ ಸಂಖ್ಯೆಗಿಂತಲೂ ದೊಡ್ಡದು.ಹಾಗಾಗಿ ಬರೆಯುವವರ ಸಂಖ್ಯೆಯೂ ದೊಡ್ಡದಿದೆ.

ಸಮುದ್ರವಳ್ಳಿ ವಾಸುರವರು ಕವಿಗಳು, ಉತ್ತಮ ಬರವಣಿಗೆಯ ಮೂಲಕ ಹೆಸರು ಮಾಡಿದ್ದಾರೆ. ಪದ್ಯಗಳನ್ನೆ ಬರೆಯುತ್ತಿದ್ದ ಕವಿಗಳು ಗದ್ಯದತ್ತಲೂ ಒಲವು ತೋರಿದ್ದಾರೆ. ಕಾದಂಬರಿ ಬರೆಯುವುದರ ಮೂಲಕ ಹೊಸತನ್ನು ಹೇಳಲು ಹೊರಟಿದ್ದಾರೆ. ಅಪ್ಪಟ ಕನ್ನಡ ಅಭಿಮಾನಿಯಾಗಿರುವ ವಾಸು ತಮ್ಮ ಬರಹದಲ್ಲಿಯೂ ಕೂಡ ಕನ್ನಡ ಭಾಷೆಯನ್ನು ತಮ್ಮ ಕಾದಂಬರಿಯಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ವಾಸು ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅದೇ ಇಲಾಖೆ ಬಗ್ಗೆ ಈ ಕಾದಂಬರಿಯಲ್ಲಿ ಬರೆದಿದ್ದಾರೆ.

ಇಲಾಖೆಯಲ್ಲಿ ಕಂಡುಬರುವ ಅನೇಕ ವಿಚಾರಗಳನ್ನು ಬಹು ರಸವತ್ತಾಗಿ ಚಿತ್ರಿಸಿದ್ದಾರೆ. ಅಲ್ಲಿ ಬರುವ ಪಾತ್ರಗಳು, ಕರ್ತವ್ಯ ನಿರ್ವಹಿಸುವಾಗ ಅನುಭವಿಸುವ ಕಷ್ಟಸುಖಗಳನ್ನು ಅತ್ಯಂತ ವಾಸ್ತವವಾಗಿ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಹೋಗುತ್ತಾರೆ. ಪ್ರಾಮಾಣಿಕ ವ್ಯಕ್ತಿ ಅಧಿಕಾರಿಯಾಗಿದ್ದಾಗ ಸಂಸ್ಥೆಯನ್ನು ಹೇಗೆಲ್ಲಾ ಅಭಿವೃದ್ದಿ ಪಡಿಸಬಹುದು. ತನ್ನ ಕೈಕೆಳಗಿನ ನೌಕರರನ್ನು ಆತ್ಮಿಯತೆಯಿಂದ ಕಾಣುತ್ತಾ ಅವರಲ್ಲಿ ಹುಮ್ಮಸ್ಸು ತುಂಬುತ್ತಾ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಶಾಖಾಧಿಕಾರಿ ರವಿನಂದನ್ ಪಾತ್ರದ ಮೂಲಕ ಕಾದಂಬರಿಯಲ್ಲಿ ತಂದಿದ್ದಾರೆ. ಇಲ್ಲಿ ಅಧಿಕಾರಿಯ ಪಾತ್ರವಿದೆ.

ಕೆಳವರ್ಗದ ನೌಕರರ ಪಾತ್ರವಿದೆ. ಅವರ ನೋವು ಸಂಕಟ, ವೇದನೆಗಳನ್ನು, ಕೆಲಸ ಮಾಡುವಾಗ ಬಂದು ಎರಗುವ ಅಪಾಯಗಳನ್ನು ವಾಸ್ತವವಾಗಿ ತಂದು ವಿಹಂಗಮವಾಗಿ ವರ್ಣಿಸಿದ್ದಾರೆ, ಮಲೆನಾಡಿನ ಚಿತ್ರಣವನ್ನು ಬರೆಯುತ್ತಾ ಅಲ್ಲಿ ಕೆಲಸ ಮಾಡುವಾಗ ಹಳ್ಳಿಗಳ ಪರಿಸ್ಥಿತಿ, ಅಲ್ಲಿನ ಜನರ ಮನಸ್ಥಿತಿ ಅವರ ಕೋಪ ತಾಪಗಳನ್ನು ಎದುರಿಸುತ್ತಾ ನೌಕರರು ಕೆಲಸ ಮಾಡುವ ಬವಣೆಗಳನ್ನು ನೈಜ್ಯವಾಗಿ ಓದುಗರಿಗೆ ಕಟ್ಟಿಕೊಡುತ್ತಾರೆ. ವಿದ್ಯುತ್ ಇಲಾಖೆಯಲ್ಲಿ  ಮಾರ್ಗದಾಳುಗಳಾಗಿ ಕೆಲಸ ಮಾಡುವ ಜೀವನ್ ಉಮೇಶ್ ಕಾಂತರಾಜು ರಿಯಾಜ್ ಮುಂತಾದವರ ಬದುಕಿನ ಚಿತ್ರಣವನ್ನು ಓದುತ್ತಿದ್ದಾಗ ನಿಜವಾದ ಬದುಕನ್ನೇ ನೋಡುತ್ತಿದ್ದೆವೆ ಅನ್ನುವ ಭಾವ ಮೂಡುತ್ತದೆ.

ವಾಸುರವರು ಈ ಕಾದಂಬರಿಯಲ್ಲಿ ತಮ್ಮ ಇಲಾಖೆಯ ಅನೇಕ ವಿಚಾರಗಳನ್ನು, ಪ್ರಸಂಗಳನ್ನು ಬಹು ಹತ್ತಿರದಿಂದ ಪ್ರತಿ ನಿತ್ಯವೂ ಕಾಣುತ್ತಿದ್ದರಿಂದ ಅಂತಹ ವಿಚಾರಗಳನ್ನೇ ತಮ್ಮ ಈ ಕೃತಿಯಲ್ಲಿ ತಂದಿದ್ದಾರೆ. ಕರೆಂಟ್ ಕೊಡಲು ಮರಗಳನ್ನು ಕೆಲವೊಮ್ಮೆ ಕಡಿಯ ಬೇಕಾಗುತ್ತದೆ, ಅಂತಹ ಸಮಯಗಳಲ್ಲಿ ಅರಣ್ಯ ಇಲಾಖೆಯೊಡನೆ ಸದಾ ನಡೆಯುವ ತಿಕ್ಕಾಟ, ಜಗ್ಗಾಟ, ಗ್ರಾಹಕರೊಂದಿಗೆ ನಡೆಯುವ ಹೆಣಗಾಟ, ಹಣ ಪಡೆಯುವ ಸಲುವಾಗಿ ಹೇಗೋ ಸತ್ತ ಹಸುವನ್ನು ಕರೆಂಟ್ ಹೊಡೆದು ಸತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸುನ ಜನರು, ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಇಲಾಖೆಗೆ ಮೋಸ ಮಾಡಲೆತ್ನಿಸುವ ಜನರು ಹೀಗೆ ಅನೇಕ ವಿಚಾರಗಳನ್ನು ಕಾದಂಬರಿಯಲ್ಲಿ ತಂದಿದ್ದಾರೆ. ಜೊತೆಗೆ ಇಲ್ಲಿನ ಪಾತ್ರಗಳ ವೈಯಕ್ತಿಕ ಬದುಕುಗಳ ಬಗ್ಗೆಯೂ ಹೇಳುತ್ತಾ ಹೋಗುತ್ತಾರೆ.

ಜೀವನ್ ಉತ್ತಮ ಕೆಲಸಗಾರ, ಹೆತ್ತವರನ್ನು ಎದುರು ಹಾಕಿಕೊಂಡು ಇಂಜನೀಯರ್ ಜೊತೆ ನಡೆದ ನಿಶ್ಚಿತ್ತಾರ್ಥವನ್ನು ಮುರಿದು ತನ್ನನ್ನೆ ಮೆಚ್ಚಿ ಬಂದ ಚಿನ್ನು ಜೊತೆ ಆನಂದದ ಬದುಕು ನಡೆಸುತ್ತಿರುವಾಗಲೇ ವಿಧಿಯ ಕೋಪಕ್ಕೆ ಬಲಿಯಾಗುತ್ತದೆ ಅವನ ಸುಂದರ ಜೀವನ. ತನ್ನ ಮಗನ ನಾಮಕರಣದ ದಿನ ರಜೆ ಸಿಗದೆ ಕರ್ತವ್ಯ ನಿರ್ವಹಣೆ ವೇಳೆಯಲಿ ವಿದ್ಯುತ್ ಹರಿದು  ಜೋಡಿ ಕಂಬದ ಮೇಲೆಯೇ  ಸುಟ್ಟು ಕರಕಲಾಗುವ ಬೀಭತ್ಸ ದೃಶ್ಯ ಎದೆಯನ್ನು ನಡುಗಿಸುತ್ತದೆ, ಇಂತವರ ಬದುಕು ಅದೆಷ್ಟು ಅಪಾಯ ಅನ್ನುವುದನ್ನು ಸ್ವತಃ ಅನುಭವಿಸಿರುವ ವಾಸು, ಅಂತಹ ಅಪಾಯಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡಿ ಗೆದ್ದು ಬಂದಿರುವ ವಾಸು ತಮ್ಮ ದುರಂತ ಚಿತ್ರಣದಿಂದ ಓದುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತಾರೆ.

ಭಾವನಾತ್ಮಕತೆಯ ಸನ್ನಿವೇಷಗಳ ಜೊತೆಗೆ ನೈತಿಕ ಅಧಃಪತನಕ್ಕೆ ಇಳಿದ ಜೋಡಿಯೊಂದರ ಕತೆಯನ್ನೂ ಹೇಳುತ್ತಾರೆ. ಹೆಂಡತಿ, ಸುಂದರ ಸಂಸಾರವಿದ್ದೂ ಅನ್ಯ ಸ್ತ್ರೀಯನ್ನು ಮೋಹಿಸುವ  ಮೋಹನ್ ಮತ್ತು ಸರೋಜರವರ ಅಕ್ರಮ ಸಂಬಂಧದ ಬಗ್ಗೆಯೂ ಕಟುವಾಗಿ ಬರೆಯುತ್ತಾರೆ. ಕೈ ಹಿಡಿದ ಪತ್ನಿಗೆ ಮೋಸ ಮಾಡಿದ ಮೋಹನನ ಪಾಪದ ಕೊಡ ತುಂಬಿತೇನೊ ಎಂಬಂತೆ ಕರ್ತವ್ಯದ ವೇಳೆಯಲಿ ಕರೆಂಟ್ ಹೊಡೆದು ಕೈ ಕಾಲು ಕಳೆದುಕೊಂಡು ಅಂಗವಿಕಲನಾಗುತ್ತಾನೆ. ಗಂಡನ ಎಲ್ಲಾ ತಪ್ಪುಗಳನ್ನು ಕ್ಷಮಿಸಿ ಕ್ಷಮಾಧರಿತ್ರಿಯಂತೆ ಪಲ್ಲವಿ ಆತನ ಸೇವೆ ಮಾಡಿ ಮಾನವೀಯತೆ ಮೆರೆಯುವ ಕಥೆ ಮನ ಮೀಡಿಯುತ್ತದೆ.

ಇಲಾಖೆಗಳಲ್ಲಿ ನಡೆಯುವ ಅಪ್ರಮಾಣಿಕತೆ, ಭ್ರಷ್ಟಾಚಾರ ಮುಂತಾದವುಗಳಿಗೆ ಸಾಕ್ಷಿಯಾಗಿ ನಿಲ್ಲುವ ಮರಿಯಪ್ಪನಂತಹ ಕೆಟ್ಟ ಅಧಿಕಾರಿಗಳ ದುರಾಸೆಯಿಂದ ಏನೆಲ್ಲಾ ಅನಾಹುತ ನಡೆಯುತ್ತದೆ ಎಂಬುದನ್ನು ಕೂಡಾ ತಮ್ಮ ಕೃತಿಯಲ್ಲಿ ಪರಿಣಾಮಕಾರಿಯಾಗಿ ತಂದಿದ್ದಾರೆ. ಒಟ್ಟಿನಲ್ಲಿ ಮಲೆನಾಡಿನ ಮಾರ್ಗದಾಳು ಕೃತಿಯಲ್ಲಿ ಮಲೆನಾಡಿನ ಚಿತ್ರಣ, ತಮ್ಮ ಇಲಾಖೆಯ ಚಿತ್ರಣಗಳನ್ನು ಕಥಾನಕದ ಮೂಲಕ  ವಾಸುರವರು ಸೊಗಸಾಗಿ ಕಟ್ಟಿಕೊಡುತ್ತಾ ಕನ್ನಡ ಸಾರಸ್ವತ ಜಗತ್ತಿಗೆ ಒಂದು ಉತ್ತಮ ಸಂದೇಶ ಸಾರುವ ನೈಜ್ಯತೆಗೆ ಕನ್ನಡಿ ಹಿಡಿದ ಒಂದು ಕೃತಿಯನ್ನು ನೀಡುವ ಮೂಲಕ ಕಾಣಿಕೆ ನೀಡಿದ್ದಾರೆ.

ವಾಸುರವರಿಂದ ಇನ್ನಷ್ಟು ಉತ್ತಮ ಕೃತಿಗಳನ್ನು ನಿರೀಕ್ಷಿಸುತ್ತಾ, ವಾಸು ತಮ್ಮ ಬರೆವಣಿಗೆಯಲ್ಲಿ ಇನ್ನಷ್ಟು ವೈಚಾರಿಕತೆ, ಪಕ್ವತೆ, ಪ್ರೌಢತೆ ತುಂಬಿಸಿಕೊಂಡು ಮನೋಜ್ಞವಾಗಿ ಬರೆಯಲಿ. ಆ ಎಲ್ಲಾ ಸಾಧ್ಯತೆಗಳನ್ನು ತೋರುತ್ತಿರುವ ವಾಸು ಸಾಹಿತ್ಯ ಕ್ಷೇತ್ರದ ಕಣ್ಮಣಿಯಾಗಿ ಬೆಳೆಯಲಿ ಎಂದು ಮನಪರ‍್ವಕವಾಗಿ ಹಾರೈಸುತ್ತೆನೆ.

‍ಲೇಖಕರು Admin

November 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: