ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ಸೊರಟೂರು ಹೊಸ ಕವಿತೆ: ಒಂದು ಸರಿಯಾದ ದುಃಖ.. 

ಸದಾಶಿವ ಸೊರಟೂರು

ಈ ರಸ್ತೆಯ ತುದಿಯಲ್ಲೊಂದು 

ಹಲುಬುವ ಎತ್ತರದ ಮರವಿದೆ..

ಈಗಷ್ಟೇ ಅದರೊಳಗಿಂದ 

ಜೋಡಿ ಹಾಕಿಗಳು‌ ‘ಕೂಟ’ ಮುಗಿಸಿ

ಹಾರಿ ಹೋದದ್ದು ಮರಕ್ಕೆ

ತಿಳಿದೇ ಇಲ್ಲ.

ಪ್ರೇಮಿಸಲು ಬಂದ ಹಕ್ಕಿಗಳ ಮಾತೂ

ಕೇಳಿಸಿಕೊಳ್ಳುವುದಿಲ್ಲ

ತನ್ನ ನೆರಳಲ್ಲಿ ಅರಳಿದ ಸಂಬಂಧಗಳ

ಲೆಕ್ಕವೂ ಅದರ ಬಳಿಯಿಲ್ಲ! 

ರಸ್ತೆಗೆ ಬಾಯಿಲ್ಲ ಗಾಳಿಗೆ ಕಿವಿಯಿಲ್ಲ

ಇಲ್ಲಿ ಅಲೆದಾಡುವ ಮನುಷ್ಯರಿಗೆ

ಜೀವವೇ ಇಲ್ಲ

ಮರಕ್ಕೂ ಹೇಳಿಕೊಳ್ಳುವ ಉಮೇದೂ

ಇಲ್ಲ.. 

ಹಗಲು ಆಡಿಕೊಳ್ಳುತ್ತದೆ, ಕತ್ತಲು ಹಂಗಿಸುತ್ತದೆ

ನಕ್ಷತ್ರಗಳ ಮೂದಲಿಕೆ

ಉಡಾಫೆ ಚಂದಿರನಿಗೂ ಇದೆ..

ಮರ ಚಿಗುರುತ್ತದೆ, ಬೆಳೆಯುತ್ತದೆ

ಮೈ ತುಂಬಾ ಹಸಿರ ಹೊಳೆ,

ಸಂಜೆಗೆ ಸುರಿಸುತ್ತದೆ ಹೂ ಪಕಳೆ..

ಒಂದೊಂದು

ಪಕಳೆಯೂ ಮರದ ಕಣ್ಣೀರೆಂದು

ಇಲ್ಲಿ ಯಾರಿಗೆ ತಿಳಿದಿದೆ? 

ನೀವು, 

ಅದು ಮರದ ನಗು ಎನ್ನುತ್ತೀರಿ, 

ಅದು ಅದರ ಹಾಡು ಎನ್ನುತ್ತೀರಿ

ನೆಲಕ್ಕೆ ಬರೆದುಕೊಂಡ ರಂಗೋಲಿ ಎನ್ನುತ್ತೀರಿ.. 

ಅಳುವನ್ನು ನಗುವಿನಂತೆ 

ನಗುವು ಅಳವಿನಂತೆ ಅರ್ಥ ಮಾಡಿಕೊಳ್ಳುವುದು

ನಿಮಗೇನು ಹೊಸದಲ್ಲ ಬಿಡಿ! 

ಪಾಪ, ಆ ಒಂಟಿ ಮರ 

ತನ್ನ ಬುಡವನ್ನು ತನ್ನದೇ ಕಣ್ಣೀರಿನಲಿ

ತೊಳೆದುಕೊಳ್ಳುತಿದೆ..

ಮತ್ತೆ ಮತ್ತೆ ತನ್ನ ಕಣ್ಣೀರಿನ್ನೇ

ಕುಡಿದು ಬೆಳೆಯುತ್ತಿದೆ..

ಮತ್ತು,

ನಿಮಗೇನಾದರೂ ಗೊತ್ತಾ? 

ಸರಿಯಾದ ನೋವು ಇಲ್ಲದಿದ್ರೆ

ಕಣ್ಣೂ ಕೂಡ ತುಂಬುವುದಿಲ್ಲ ಅಂತ… 

‍ಲೇಖಕರು avadhi

1 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading