ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ದೊಡಮನಿ ಕವಿತೆ- ಅವ್ವ

ಡಾ ಸದಾಶಿವ ದೊಡಮನಿ

ಅವ್ವ
ಅಳುಕದ
ಅಕ್ಷರ

ಬೆಂಕಿ-ಬಿರುಗಾಳಿಯಲಿ
ಬದುಕು ಕುದ್ದು-ಕುದ್ದು
ವಾಲಾಡುವಾಗ
ಅವ್ವ ನೋವಿನ ಹೊಳಿ
ಕಣ್ಣೀರಿನ ಮಡಿ

ಸುಡುವ ಅಂಗಳದಲ್ಲಿ
ಅನ್ನ ಕುದಿಸುತ್ತ
ಮಕ್ಕಳ ಸಲುಹುತ್ತ
ಕ್ರಮಿಸಿದ ಹಾದಿ ಕಾಡು-ಮೇಡು
ಸೋತು ಸೊರಗಿದ ದನಿಗೆ
ಅಪ್ಪನೇ ಆಸರೆಗೋಲು!

ನೋವಿರಲಿ ನಲಿವಿರಲಿ
ಅವ್ವನದು ಬೆಳದಿಂಗಳ ಹಾಡು

ಅಜ್ಜನ ಆಸ್ತಿಯೆಂಬಂತೆ
ಅವ್ವ ನೋವನ್ನೇ
ಪಡೆದು ಬಂದಳು
ಹಿರಿಯ ಮಗಳೊಂದಿಗೆ ಗಂಡನಿಲ್ಲ
ಎಂಬ ಕೊರಗು
ಮಗಳು ತೀರಿದಳೆಂಬುದು ಮೊಗದೊಂದು ಕೊರಗು
ಈ ಗಾಯ ಇನ್ನೂ ಹಸಿ-ಹಸಿ ಇರುವಾಗಲೇ
ಕಿರಿ ಮಗ ಹಾಸಿಗೆ ಹಿಡಿದ, ತೀರಿದನೆಂಬುದು
ತೀರಲಾಗದ ನೋವು !

ಅದ-
ಉಂಡು-ಉಟ್ಟು ಮಲಗಿದಾಕೆ
ಬಂಧು-ಬಳಗಕ್ಕೆ ಬೇವಿನ ಮರದ-
ನೆರಳಾದಾಕೆ

ಇದ್ದಾಳೆ ; ನಮ್ಮೊಂದಿಗೆ
ಮುಂದೆಯೂ ಇರುತ್ತಾಳೆ
ಕಣ್ಣ ಮುಂದಿನ ಬೆಳಕಾಗಿ
ನೆತ್ತಿಯ ಮೇಲಿನ ನೆರಳಾಗಿ

‍ಲೇಖಕರು Admin

18 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading