ನಿವೇದಿತಾ ಎಚ್ ಓದಿದ ‘ಮಾತು ಹಾಡಾಗಲಿ, ಹಾಡು ಮಾತಾಗಲಿ’

ನಿವೇದಿತಾ ಎಚ್

ಶ್ರೀಯುತ ಗಣೇಶ ಅಮೀನಗಡರವರು ಪತ್ರಿಕಾರಂಗದ ಚಿರಪರಿಚಿತ ಹೆಸರು. ನಿತ್ಯಬೆಳಗಾದರೊಂದು ವರದಿ ಇದ್ದೇ ಇರುತ್ತದೆ.  ಪತ್ರಿಕಾ ವರದಿಗಾರರಾಗಿ ಪ್ರಸಿದ್ಧಿ ಪಡೆದಿರುವಂತೆ ಸಾಹಿತ್ಯದಲ್ಲೂ ಇವರ ಹೆಸರು ಜನಪ್ರಿಯವಾಗಿದೆ. ‘ಬಣ್ಣದ ಬದುಕಿನ ಚಿನ್ನದ ದಿನ’ಗಳನ್ನು ಚಿತ್ರಿಸುತ್ತಲೇ, ‘ತುಸುವೇ ಕುಡಿವ ಗಂಡನ್ನ ಕೊಡು ತಾಯಿ’ ಎನ್ನುತ್ತಾ ಕುಡುಕ ಗಂಡನನ್ನು ಕಟ್ಟಿಕೊಂಡ ಮಹಿಳೆಯರ ಪ್ರತಿನಿಧಿಯಾಗಿ ಪ್ರಾರ್ಥನೆ ಸಲ್ಲಿಸುತ್ತಲೇ, ಚಿತ್ರರಂಗದ ಆಧಾರಸ್ಥಂಭಗಳನ್ನು ಆಕಾಶವಾಣಿಯಲ್ಲಿ ಬಿತ್ತರಿಸುತ್ತಲೇ ಈಗ ಮತ್ತೆ ‘ಮಾತು ಹಾಡಾಗಲಿ, ಹಾಡು ಮಾತಾಗಲಿ’ ಎಂದು ಆಲಾಪಿಸುತ್ತಾ ರಂಗಭೂಮಿಯ ವಿಸ್ತಾರವಾದ ಜವನಿಕೆಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಇವರ ಬಣ್ಣದ ಬದುಕಿನ ಚಿನ್ನದ ದಿನಗಳು ಏಳು ಮುದ್ರಣಗಳನ್ನು ಕಂಡು ಇವರ ಸಾಹಿತ್ಯ ಪ್ರೀತಿ ಹಾಗೂ ರಂಗಭೂಮಿಯ ಬಗ್ಗೆ ಇರುವ ಆಸಕ್ತಿಗೆ ಕನ್ನಡಿ ಹಿಡಿದಿದೆ. ಇಂತಹ ಗಣೇಶ ಅಮೀನಗಡರು ಅತ್ಯಂತ ಸರಳ ಮತ್ತು ಸಹೃದಯರು.

ಶ್ರೀಯುತರ ಮಾತು ಹಾಡಾಗಲಿ, ಹಾಡು ಮಾತಾಗಲಿ ಇತ್ತೀಚೆಗೆ ಬಿಡುಗಡೆ ಕಂಡ ಕೃತಿ. ಇದು ನನ್ನನ್ನು ಎಷ್ಟು ಸೆಳೆಯಿತೆಂದರೆ, ಈ ಕೃತಿಯ ಬಗ್ಗೆ ನಾಲ್ಕು ಮಾತುಗಳನ್ನು ಬರೆಯಲೇಬೇಕೆನಿಸಿತು. ಈ ಕೃತಿ ರಂಗಭೂಮಿ ಕುರಿತ ಪರಿಚಯಾತ್ಮಕವಾದ ಒಂದು ಹ್ರಸ್ವ ಪರಿಚಯದ ಕೈಪಿಡಿ ಅಥವಾ ಭವ್ಯ ರಂಗ ಸಂಸ್ಕೃತಿಯ ಸಂಭ್ರಮಿಸುವಿಕೆ ಎನ್ನಬಹುದು. ಕನ್ನಡಿಗರ ವಿಸ್ಮೃತಿಯ ಪುಟವೂ ಆಗಬಹುದು. ಬೆಡಗಿನ ನಾಟಕ ಲೋಕದ ಪರದೆಯ ಹಿಂದಿನ ಪಾಡು. ಹೀಗೆ ರಂಗಭೂಮಿಯ ನಾನಾ ಮುಖಗಳನ್ನು ತೆರೆದಿಡುವ ಒಂದು ಪುಟ್ಟ ಭಾವಕೋಶವಾಗಿದೆ ಈ ಕೃತಿ.

ರಂಗಭೂಮಿಯೇ ಶಿವಾನುಭವ ಮಂಟಪವಾಗಿ, ಬದಲಾದ ರಂಗ ಕೈದಿಗಳು, ಪಂಜರದ ಗಿಳಿಗಳ ಹಾಡು-ಪಾಡು, ದಣಿವರಿಯದ ರಂಗಕಾಯಗಳು, ನಾಟಕನೋಟ ಹೀಗೆ ಐದು ಭಾಗವಾಗಿ ಈ ಪುಸ್ತಕ ಓದುಗರ ಮುಂದೆ ತೆರೆದುಕೊಳ್ಳುತ್ತದೆ.

ರಂಗಭೂಮಿಯೇ ಶಿವಾನುಭವ ಭಾಗದಲ್ಲಿ, ವೃತ್ತಿರಂಗಭೂಮಿ ಹಾಗು ಹವ್ಯಾಸಿ ರಂಗಭೂಮಿಗಳೆರಡರಲ್ಲೂ ಜಯಭೇರಿ ಬಾರಿಸಿ, ಜನಪ್ರಿಯವಾಗಿ ಹೊಸ ಇತಿಹಾಸ  ಸೃಷ್ಟಿಸಿದ ಒಂದಷ್ಟು ನಾಟಕಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಪುಸ್ತಕದ ಶೀರ್ಷಿಕೆಯಾಗಿರುವ ಬಿ.ವಿ ಕಾರಂತರ ನುಡಿಗಳು ಹುಟ್ಟಿಕೊಂಡ ಬಗೆಯ ಬಗ್ಗೆ ಹೇಳುತ್ತಾ, ಕಾರಂತರ ಹಾಗೆಯೇ ರಂಗಭೂಮಿಗಾಗಿಯೇ ಜೀವನ ಮುಡಿಪಾಗಿಟ್ಟಿರುವ ಅವಿಭಕ್ತ ಕುಟುಂಬದ ‘ಸುರಭಿ’ ನಾಟಕ ಮಂಡಳಿ, ಇಡಿಯಾಗಿ ನಾಟಕದಲ್ಲಿ ತೊಡಗಿಸಿಕುಳ್ಳುವ ಹಾವೇರಿಯ ಶೇಷಗಿರಿ ಗ್ರಾಮದ ಪರಿಚಯ ಮಾಡಿಸುತ್ತಾರೆ. ನಾಟಕ ನೋಡುವ ದೃಷ್ಟಿಕೋನ ಹೇಗಿರಬೇಕೆಂದು ತಿಳಿಯ ಹೇಳುತ್ತಾರೆ. ಇಂದಿಗೂ ಮರೆಯಾಗದ ವೃತ್ತಿ ರಂಗಭೂಮಿಯ  ಝಳಪನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಹೋಗುವ ಪರಿ ಅನನ್ಯ.

ಮೈಸೂರಿನ ರಂಗಾಯಣದ ಹುಲಗಪ್ಪ ಕಟ್ಟೀಮನಿಯವರು, ಕಾರಂತರಿಂದ ಸ್ಪೂರ್ತಿಗೊಂಡು, ಜೈಲಿನಲ್ಲಿ ನಾಟಕದ  ಶಿಬಿರಗಳನ್ನು ಮಾಡಿದ  ಬಗ್ಗೆ ಸಾದ್ಯಂತವಾಗಿ ವಿವರಿಸುವ ಎರಡನೇ ಭಾಗವೇ ‘ಬದಲಾದ ರಂಗ ಕೈದಿಗಳು’. ಈ ಭಾಗ, ನಾಟಕವೇ ಬದುಕಿಗೆ ಒಂದು ಚಿಕಿತ್ಸೆ, ಸಮಾಜಕ್ಕೆ ಔಷಧಪ್ರಾಯ, ಎಂಬ ರಂಗ ದಿಗ್ಗಜರ ನಂಬಿಕೆಯ ನುಡಿಗಳನ್ನು ಕಣ್ಣುಮುಚ್ಚಿಕೊಂಡು ನಾವೂ ನಂಬುವಂತೆ ಮಾಡುತ್ತವೆ. ಇಲ್ಲಿ ದಾಖಲಾಗಿರುವ ಕೈದಿಗಳ ಅನುಭವಗಳು, ಅವರ ನಿಜಾನುಭವಗಳ ವಿವರಗಳೇ ಆಗಿವೆ.

‘ಪಂಜರದ ಗಿಳಿಗಳ ಹಾಡು-ಪಾಡು’ ಭಾಗ, ಮನಸ್ಸಿಗೆ ತಟ್ಟಿ ದ್ರವಿಸುವಂತೆ ಮಾಡುತ್ತವೆ. ರಂಗಕಾಯಕದಲ್ಲೇ ಕೈಲಾಸ ಕಂಡ, ಇಡೀ ಜೀವನವನ್ನೇ ಅದಕ್ಕಾಗಿ ಸಮರ್ಪಿಸಿಕೊಂಡ, ಪ್ರೇಕ್ಷಕ ಪ್ರಭುಗಳನ್ನು ರಂಜಿಸಿದ ಅಳಿಸಿದ, ಪರಿವರ್ತಿಸಿದ ನಾಟಕ ಜೀವಿಗಳು ತೆರೆಮರೆಗೆ ಸರಿದಾಗ, ಜೀವನವನ್ನು ಪುನರ್ನಿಮಿಸಿಕೊಳ್ಳಲು ಅವರು ಪಡುವ ಪಾಡು, ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಗೆ ತಲುಪುವುದನ್ನು ಓದುವಾಗ ವಿಷಾದಭಾವ ಮೂಡುತ್ತದೆ. ಕೇವಲ ಕಲೆಗಾಗಿ ಬದುಕಿ, ವ್ಯವಹಾರದಲ್ಲಿ ಹಿಂದೆಬಿದ್ದು, ವ್ಯವಹಾರ ಜ್ಞಾನವನ್ನು ಮೈಗೂಡಿಸಿಕೊಳ್ಳದೆ, ಜೀವನದ ಸಂಧ್ಯಾಕಾಲದಲ್ಲಿ ಅತಂತ್ರತೆಯನ್ನು, ಅನಾಥತೆಯ ಅವರ  ಸ್ಥಿತಿಗೆ ನಮ್ಮಗಳ ವಿಸ್ಮೃತಿಯೂ ಕಾರಣ ಎನ್ನುವುದು ಅರಿವಿಗೆ ಬಂದು,  ನಮ್ಮನ್ನು ನಾವೇ ಕ್ಷಮಿಸಿಕೊಳ್ಳಲಾಗದ ಭಾವ ಹೃದಯದಲ್ಲಿ ಹೆಪ್ಪುಗಟ್ಟುತ್ತದೆ.

ಇದೇ ಭಾಗದಲ್ಲಿ ಮಾಲತಿ ಸುಧೀರ, ಶಾರದಾ ಸಿಂಹ, ಸರೋಜಾ ಹೆಗ್ಗಡೆ, ಸುಮತಿಯಂತಹವರ ಜೀವನ ಪರಿಚಯ ಮನಸಿಗೆ ಮುದ ನೀಡುತ್ತದೆ.

‘ದಣಿವರಿಯದ ರಂಗಕಾಯಗಳು’ ಭಾಗದಲ್ಲಿ ವೃತ್ತಿರಂಗಭೂಮಿಯ ದಿಗ್ಗಜರನೇಕರ ಪರಿಚಯವಿದೆ. ಏಣಗಿ ಬಾಳಪ್ಪ, ಅರಿಷಿಣಗೋಡಿ,  ಅಬ್ದುಲ್ ಸಾಬ್ ಅಣ್ಣಿಗೇರಿ, ಅನಾಥರಿಗೆ ದಾರಿದೀಪವಾದ ವೀಣಾಮಾಯಿ, ತನ್ನದೇ ರೀತಿಯಲ್ಲಿ ನ್ಯಾಯ ದೊರಕಿಸಿಕೊಳ್ಳಲು ಹೋರಾಡಿದ ಕಂಪ್ಲಿ, ಕನ್ನಡ ವೃತ್ತಿರಂಗಭೂಮಿಯ ರಾಜಕುಮಾರ ಗುಡಿಗೇರಿ, ಹೀಗೆ ಹಲವರ ಹಲವಾರು ಯಶಸ್ಸಿನ ಕಥೆಗಳಿವೆ. ರಂಗಭೂಮಿ ಕುರಿತಾದ ಅವರ ಅದಮ್ಯ ಉತ್ಕಟಪ್ರೀತಿಯ ಪರಿಚಯ ಹೃದಯಂಗಮವಾಗಿದೆ.

ಕೊನೆಯ ಭಾಗವಾದ ‘ನಾಟಕ ನೋಟ’ದಲ್ಲಿ, ಕನ್ನಡ ರಂಗಭೂಮಿಗೆ ಮೈಲುಗಲ್ಲಾದ, ರಂಗಪ್ರಿಯರು ನೋಡಲೇಬೇಕಾದ ಕೆಲವು ನಾಟಕಗಳ ವಿಮರ್ಶೆಗಳಿವೆ.

ಸ್ವಾತಂತ್ರ್ಯೋತ್ತರ ವೃತ್ತಿ ಹಾಗು ಹವ್ಯಾಸಿ ರಂಗಭೂಮಿಯ ಕುರಿತಾದ ಕಿರುಪರಿಚಯ ನೀಡುವ ಈ ಹೊತ್ತಗೆ, ಪ್ರಾತಿನಿಧಿಕವಾದ ಇನ್ನೂ ಹಲವರ ಗೋಜಿಗೇ ಹೋಗಿಲ್ಲ ಎಂಬುದು ಪುಸ್ತಕದ ಮಿತಿ ಎನಿಸಿದರೂ, ರಂಗಭೂಮಿ, ಅಲ್ಲಿನ ಕಲಾವಿದರ ಸ್ಥಿತಿಗತಿಯ ಬಗ್ಗೆ ಒಂದು ಚಿತ್ರ ಕಟ್ಟಿಕೊಡುವುದಂತೂ ಖಂಡಿತ. ತಾವು ಕಂಡದ್ದನ್ನು,  ಬರೆಹಕ್ಕಿಳಿಸಿರುವುದೂ ಕಾರಣವಾಗಿರಬಹುದು.

ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಭಾಷೆ ಹೀಗೆ ಯಾವುದೇ ವಿಷಯ ಬಂದಾಗಲೂ ಕನ್ನಡಿಗರು ಸ್ವಲ್ಪಮಟ್ಟಿಗೆ ಅಭಿಮಾನ ಶೂನ್ಯರೆನ್ನುವುದು ಅಸತ್ಯವೇನಲ್ಲ. ಪಕ್ಕದ ಮರಾಠಿ ರಂಗಭೂಮಿಯ ದಿಗ್ಗಜ ಕಾಶೀನಾಥ್ ಗಾಣೇಕರ್ ಬಗೆಗಿನ ಒಂದು ಚಿತ್ರ ಬ್ಲಾಕ್ ಬಸ್ಟರ್ ಆಗುತ್ತದೆ. ಹಾಗೆಯೇ, ಇಲ್ಲಿ ವೈವಿಧ್ಯಮಯ ರಂಗಪ್ರಯೋಗಗಳು, ಉತ್ಕಟ ರಂಗಪ್ರೀತಿಯನ್ನು ಉಸಿರಾಗಿಸಿಕೊಂಡ ಗುಡಿಗೇರಿ, ಹಿರಣ್ಣಯ್ಯ, ವರದಾಚಾರ್ ಅಂಥವರ  ಬಗ್ಗೆ  ಓದಿದಾಗ, ಕನ್ನಡ ಚಿತ್ರರಂಗವೇಕೆ ಅವರ ಬಗ್ಗೆ ಒಂದೂ ಚಿತ್ರ ಇದುವರೆಗೂ ತಯಾರಿಸಲು ಮನಸು ಮಾಡಿಲ್ಲ? ಚಲನಚಿತ್ರ ರಂಗಕ್ಕೆ ತವರಾದ ರಂಗಭೂಮಿಯ ಬಗ್ಗೆ ನಮಗೆಲ್ಲಾ ತಾತ್ಸಾರವೇಕೆ? ಎಂಬ ಪ್ರಶ್ನೆ ಬೃಹತ್ತಾಗಿ ಕಾಡುತ್ತದೆ. ಇಂತಹ ಮಹಾನ್ ಘಟಾನುಘಟಿಗಳು ಜನಮಾನಸದಿಂದ ಹಿಂದೆ ಸರಿಯುವ ಮೊದಲು ಅವರುಗಳ ಬಗೆಗೆ ಚಿತ್ರ ನಿರ್ಮಾಣ ಮಾಡಿ ಅವರನ್ನು ಚಿರಸ್ಥಾಯಿಯಾಗುವಂತೆ ಮಾಡುವುದು ಚಿತ್ರರಂಗದವರ ಕರ್ತವ್ಯವೂ ಆಗುತ್ತದೆ. 

ಈ ನಿಟ್ಟಿನಲ್ಲಿ ಇಂತಹ ದಿಗ್ಗಜರ ಬಾಳಿನ ಮುಖ್ಯಪುಟಗಳನ್ನು ಬರೆದು ದಾಖಲೀಕರಿಸಿದ ಈ ಪುಸ್ತಕ ಮಹತ್ತಾದದ್ದು, ದಾಖಲೀಕರಣಕ್ಕೆ ಮುಖ್ಯ ಘಟ್ಟವಾಗಿ ಜನಮಾನಸದಲ್ಲಿ ನಿಲ್ಲುತ್ತದೆ. ಸರಳಭಾಷೆ, ಪುಟ್ಟ ಪುಟ್ಟ ಲೇಖನಗಳು, ಕಾಲದ ಓಟದೊಂದಿಗೆ ದಾಪುಗಾಲಾಕುತ್ತಿರುವ ಓದುಗರ  quick glanceಗೆ ತಕ್ಕುದಾಗಿ ಈ ಹೊತ್ತಗೆ ತನ್ನಲ್ಲಿ ಮುತ್ತು ರತ್ನಗಳನ್ನು ಹುದುಗಿಸಿದ ಮಹಾಕೋಶವೆಂದೇ ಹೇಳಬೇಕು.

ಯಾವುದೇ, ಯಾರದ್ದೇ ಇತಿಹಾಸ ಓದಿದಾಗ, ಓದುವಾಗ, ಗಾಢ ವಿಷಾದ, ಅಚ್ಚರಿ ಪಶ್ಚಾತ್ತಾಪ, ಸಂಭ್ರಮಗಳಾವರಿಸಿಕೊಳ್ಳುವುದು ಸಹಜ. ಗಣೇಶ ಅಮೀನಗಡ ಅವರ ಈ ಹೊತ್ತಗೆಯೂ ಮನಸ್ಸನ್ನು ಕದಡಿ ರಂಗಪ್ರಿಯರು, ಸಂಸ್ಕೃತಿ ಪೋಷಕರು, ಸರ್ಕಾರಗಳು ಮಾಡಬೇಕಾಗಿರುವ ಹೆಚ್ಚಿನ ಕರ್ತವ್ಯವನ್ನು ನೆನಪಿಸುವಂತಿದೆ.

‍ಲೇಖಕರು Admin

August 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: