ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರ್ ಪುರಾತನ ನಗರ!

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

24

ರಾಮಚಂದ್ರನ್ ಅವರ ಅಭಿಪ್ರಾಯದಂತೆ, ತಮಿಳರು ಕೊಂಗರಾಯಕ್ಕುರುಚ್ಚಿ ಎಂಬ ಊರಿನಲ್ಲಿ ಸಮೃದ್ಧವಾದ ಸಂಸ್ಕೃತಿಯೊಂದಿಗೆ ಜೀವನ ಮಾಡಿದ್ದಾರೆ. ಆ ಊರಿನಲ್ಲಿ 2200 ವರ್ಷಗಳ ಹಿಂದೆಯೇ ಕಟ್ಟಡ ನಿರ್ಮಿಸಿರುವುದಾಗಿ ಹೇಳುತ್ತಾರೆ. ಅಲ್ಲಿರುವ ಗಣೇಶನ ದೇವಸ್ಥಾನ ಕ್ರಿ. ಪೂ. 10 ನೇಯ ಶತಮಾನಕ್ಕೆ ಸೇರಿದ ಗ್ರಂಥ ಲಿಪಿಯ ಎರಡು ಶಿಲಾಶಾಸನಗಳು ಇರುವುದಾಗಿಯೂ, ಆ ಶಾಸನಗಳ ಮೂಲಕ, ಕೊಂಗುರಾಯಕ್ಕುರುಚ್ಚಿಯ ಪುರಾತನ ಹೆಸರು ‘ಮುದುಗೋನೂರ್’ ಎಂಬುದೂ, ಶಾಸನಗಳು ‘ಮುಂಡ್ರುರೈ ವೀರರ್ ಜಿನಾಲಯಂ’ (ಮುಂಡ್ರುರೈ ವೀರ ಜೈನಾಲಯ) ಎಂಬ ಜೈನ ಶಾಲೆಗೆ ಸೇರಿದ್ದು ಎಂದು ತಿಳಿಯ ಬಂದಿದೆ. 

ಆದಿಚ್ಚನಲ್ಲೂರಿನಲ್ಲಿ ಕಂಡುಹಿಡಿದ ಮಣ್ಣಿನ ವಸ್ತುಗಳಲ್ಲಿ ಬ್ರಾಹ್ಮಿಲಿಪಿಯ ಆಕಾರ ಕಾಣುತ್ತವೆ. ಇದರ ಬಗ್ಗೆ ಹೇಳುವ ರಾಮಚಂದ್ರನ್, ಲಿಪಿಯ ಆಕಾರಗಳು ಮತ್ತು ಹಲವಾರು ಲೋಹದ ವಸ್ತುಗಳನ್ನು ಮಾಡಿದವರು ಆಚಾರಿ ವಂಶಕ್ಕೆ ಸೇರಿದವರಾಗಿ ಇರಬೇಕು ಎನ್ನುತ್ತಾರೆ. ಅಕ್ಷರ ಎಂಬ ಪದ ಮೊದಲು ಚಿತ್ರವನ್ನೇ ಸೂಚಿಸಿತು. ಚಿತ್ರದ ಬರಹಗಳಿಂದಲೇ ಒಂದು ಶಬ್ಧಕ್ಕೆ ಒಂದು ಅಕ್ಷರ ಎಂಬ ಆಕಾರದ ಆದಿ ಅಕ್ಷರಗಳು ರೂಪಗೊಂಡವು. ಆದ್ದರಿಂದ, ಚಿತ್ರಶಾಸ್ತ್ರದ ಕೃತಿ ರಚಿಸಿದ ವಿಶ್ವಕರ್ಮ ಸಮಾಜದವರೇ, ಅಕ್ಷರಗಳನ್ನು ಸೃಷ್ಟಿಸಿರಬೇಕು. 

‘ಕಣ್ಣುಳ್ ವಿಳೈಜ್ಞಾರ್’ ಎಂದು ಸಂಗಮ್ ಸಾಹಿತ್ಯಗಳು ಇವರ ಬಗ್ಗೆ ಹೇಳುವ ನುಡಿಗಟ್ಟು ಅಕ್ಷರವನ್ನು ಸೂಚಿಸಲು ಉತ್ತರ ಭಾಷೆಯಲ್ಲಿ ಬಳಸುವ ‘ಅಕ್ಷರಂ’ ಎಂಬುದೇ ಅವರ ವಾದ. 

ಯಜ್ಞ ಆಚಾರಗಳನ್ನು ನಿರಾಕರಿಸಿದ ವೈದೀಕ ಪಂಥದವರನ್ನು ‘ವಿರಾದ್ಯರ್’ ಎನ್ನುತ್ತಾರೆ. ಕಬ್ಬಿಣ ಯುಗವನ್ನು ಪರಿಚಯಿಸಿದ ಮಹಾ ಶಿಲಾಯುಗದ ಸಂಸ್ಕೃತಿ ಎಂಬುದೇ (ಕಬ್ಬಿಣ ಯುಗದಿಂದ ಸಂಗಮದ ಅವಧಿ) ವಿರಾಧ್ಯರ ಸಂಸ್ಕೃತಿ ಎಂಬುದು ತಜ್ಞರಾದ ಅಸ್ಕೋ ಪರ್ಪೋಲ (Asko Parpola) ಅವರ ಅಭಿಪ್ರಾಯವಾಗಿದೆ. 

ಆದಿಚ್ಚನಲ್ಲೂರಿನಲ್ಲಿ ಗುಡಾಣಗಳು, ಗುದ್ದಲಿ, ಗುಳ, ಭತ್ತ, ತವುಡು, ಹತ್ತಿಬಟ್ಟೆ ಮುಂತಾದವು ದೊರಕಿವೆ. ಆದ್ದರಿಂದ, ಆದಿಚ್ಚನಲ್ಲೂರಿನಲ್ಲಿ ಹೂಳಲ್ಪಟ್ಟವರು ತಾಮಿರಭರಣಿ ನದಿಯ ತೀರದಲ್ಲಿ ಭತ್ತ, ಹತ್ತಿ ಮುಂತಾದುವನ್ನು ಬೆಳೆಯುವುದರೊಂದಿಗೆ, ನೆಯ್ಗೆಯ ಕೆಲಸವನ್ನೂ ಮಾಡಿದ್ದಾರೆ ಎಂದು ತಿಳಿದು ಬರುತ್ತದೆ. 

ಆದಿಚ್ಚನಲ್ಲೂರಿನಲ್ಲಿ ಉತ್ಖನನದಲ್ಲಿ, ಭಾರತ ಸರಕಾರದ ಪುರಾತತ್ವ ಇಲಾಖೆಯ ತಜ್ಞರಾದ ಸತ್ಯಮೂರ್ತಿ 2004 ನೇಯ ಇಸವಿಯಲ್ಲಿ ನಡೆಸಿದ ಸಂಶೋಧನೆ ಪ್ರಮುಖವಾದದ್ದು. ಅದರಲ್ಲಿ, ಹಲವಾರು ಅಸ್ಥಿಪಂಜರಗಳು ಇರುವ ಗುಡಾಣಗಳು, ಹಲವಾರು ಬಗೆಯ ಬೋಗುಣಿಗಳು, ಬಿಂದಿಗೆಗಳು, ಕುಡಿಕೆಗಳು, ಹೂಜಿಗಳು, ಮಾಲೆಗಳು, ಮಣಿಗಳು, ಹಿಟ್ಟು ರುಬ್ಬುವ ಕಲ್ಲು, ಕೊರಳಿನ ಆಭರಣಗಳು, ಕಡಗಗಳು, ಬಳೆಗಳು, ಉಂಗುರಗಳು ಎಂದು ಬಹಳ ಪುರಾವೆಗಳು ದೊರಕಿವೆ. 

ಪುರಾತನ ನಾಗರಿಕತೆಯನ್ನು ಉಳ್ಳ ಒಂದು ಪ್ರದೇಶ ತಮಿಳುನಾಡು ಎಂಬುದು, ಹಲವಾರು ಬಗೆಯ ಅಧ್ಯಯನಗಳ ಮೂಲಕ ಮೊದಲೇ ಸಾಬೀತಾಗಿದೆ. ಇದನ್ನು ದೃಢೀಕರಿಸುವಂತೆ ಆದಿಚ್ಚನಲ್ಲೂರಿನಲ್ಲಿ ದೊರಕಿರುವ ಪುರಾವೆಗಳು, 3000 ವರ್ಷಗಳ ಹಿಂದೆ ತಮಿಳರು ಸಮೃದ್ಧವಾದ  ಸಂಸ್ಕೃತಿಯನ್ನು ಹೊಂದಿದ್ದರು ಎಂಬುದನ್ನು ತಿಳಿಸುತ್ತದೆ. ಮಾನವ ಬದುಕಿದ ಪುರಾತನ ಸ್ಥಳಗಳಲ್ಲಿ ತಮಿಳುನಾಡು ಸಹ ಒಂದು ಎಂಬುದನ್ನು ಜಗತ್ತಿಗೆ ಹೇಳುವ ಅಪರೂಪದ ಅವಕಾಶ ಎನ್ನುತ್ತಾರೆ ಸತ್ಯಮೂರ್ತಿ. ಅವರ ಅಭಿಪ್ರಾಯಗಳನ್ನು ಕೇಳುವಾಗ ಆದಿಚ್ಚನಲ್ಲೂರ್, ತಮಿಳುನಾಡಿನ ಸಿಂಧೂ ಕಣಿವೆಯಂತೆ ಎಂದು ಅರಿತುಕೊಳ್ಳಲು ಸಾಧ್ಯವಾಗುತ್ತದೆ. 

ಇಂದಿರುವ ಆದಿಚ್ಚನಲ್ಲೂರಲ್ಲಿ, ಹೂತುಹೋದ ಪುರಾತನ ನಗರ ಇರಬಹುದು ಎನ್ನುತ್ತಾರೆ. ಸಂಪೂರ್ಣವಾಗಿ  ಉತ್ಖನನ ಮಾಡಿದರೆ ಮಾತ್ರ ನಿಜಾಂಶಗಳು ಹೊರಬರುತ್ತವೆ. ಆದರೇ, ಜಗತ್ತಿನಲ್ಲಿ ಬಹಳ ದೊಡ್ಡ ಸ್ಮಶಾನ ಯಾವ ಬಗೆಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳದೆ ಬರಡು ಬಯಲಾಗಿದೆ. ರಾಮಚಂದ್ರನ್ ತಮ್ಮ  ಪ್ರಬಂಧಗಳಲ್ಲಿ, ಆದಿಚ್ಚನಲ್ಲೂರ್ ಬಗ್ಗೆ ಒಂದು ಸ್ವಾರಸ್ಯವಾದ ಘಟನೆಯನ್ನು ಹೇಳುತ್ತಾರೆ. ಅದರಂತೆ, 19ನೇಯ ಶತಮಾನದ ಕೊನೆಯಲ್ಲಿ ಆದಿಚ್ಚನಲ್ಲೂರಿನಲ್ಲಿ ರೈಲು ಮಾರ್ಗ ನಿರ್ಮಿಸುವಾಗ, ಆಳ್ವಾರ್ ತಿರುನಗರಿಯಿಂದ ಸಡಗೋಪಾಚ್ಛಾರಿ  ವೈಷ್ಣವ ಮಠಕ್ಕೆ ಸೇರಿದ ತುಂಡು ಭೂಮಿಯ ಹಾದಿಯಲ್ಲಿ ರೈಲು ಮಾರ್ಗವನ್ನು ಹಾಕಬೇಕು.

ಆ ಮಠದವರು ರೈಲ್ವೆ ಇಲಾಖೆಗೆ ಆ ಭೂಮಿಯನ್ನು ಒಪ್ಪಿಸಲು ಸಿರಾಕರಿಸಿದರು. ಬ್ರಿಟೀಷ್ ಸರಕಾರ ಆ ಭೂಮಿಗೆ ವರ್ಷಕ್ಕೆ ಬಾಡಿಗೆಯಾಗಿ ನಾಲ್ಕಾಣೆ ಕೊಡುವುದಾಗಿ ತೀರ್ಮಾನಿಸಿತು. ಮಠದ ಸ್ವಾಮಿಗಳು ಅದನ್ನು ಒಪ್ಪಿಕೊಂಡರು. ನಾಲ್ಕುಆಣೆ ವರ್ಷದ ಬಾಡಿಗೆಯನ್ನು 2000ನೇಯ ಇಸವಿಯವರೆಗೆ ನೀಡಲಾಯಿತು. ಈಗ ಅದು ಜಾರಿಯಲ್ಲಿದೆಯೇ ತಿಳಿಯದು ಎನ್ನುತ್ತಾರೆ. 

ಚೀನಾ, ಈಜಿಪ್ಟ್, ಮೆಸಪಟೋಮಿಯಾ ಎಂದು ಜಗತ್ತಿನ ಪುರಾತನ ನಾಗರಿಕತೆಗಳಿಗೆ ಸಮನಾಗಿ ಭಾರತದಲ್ಲಿ ಕಂಡರಿತಿರುವುದು ಸಿಂಧೂ ಕಣಿವೆ ನಾಗರಿಕತೆ. ನದಿ ಹರಿಯುವ ವಿಶಾಲವಾದ ಪ್ರದೇಶದಲ್ಲಿ ನಾಗರಿಕತೆ ಸಮೃದ್ಧವಾಗಿ ಬೆಳೆದಿದೆ. ಇಲ್ಲಿ ಬದುಕಿದ ಜನಗಳ ಬಗ್ಗೆಯೂ ಅವರ ಭಾಷೆಯ ಬಗ್ಗೆಯೂ ಇಂದಿಗೂ ಚರ್ಚೆಗಳು ನಡೆಯುತ್ತಿವೆ. 

ಸಿಂಧೂ ಕಣಿವೆಯಲ್ಲಿ ಕ್ರಿ.ಪೂ. 6000 ಇಸವಿಯಲ್ಲಿಯೇ ಚಿಕ್ಕ ನಗರಗಳನ್ನು ನಿರ್ಮಿಸಿ, ಅಲ್ಲಿ ಜನಗಳು ವಾಸ ಮಾಡಿದ್ದಾರೆ. ಜಗತ್ತಿನ ಉಳಿದ ಯಾವ ನಾಗರಿಕತೆಯಲ್ಲೂ ಕಾಣಲು ದೊರಕದಷ್ಟು ಐದು ಲಕ್ಷ ಚದುರ ಮೈಲಿಗಳು, ಚಿಕ್ಕದಾಗಿಯೂ ದೊಡ್ಡದಾಗಿಯೂ 200-ಕ್ಕೂ ಹೆಚ್ಚಿನ ಊರುಗಳು, ಆರು ದೊಡ್ಡ ನಗರಗಳೂ ಇದ್ದಿವೆ. ಇದು ಸಮೃದ್ಧವಾಗಿ ಬೆಳೆದ ಒಂದು ಸಮಾಜ ಒಂದಿತ್ತು ಎಂಬುದಕ್ಕೆ ಪುರಾವೆಗಳು. ಮಹೇಂಜದಾರೋ ಸಿಂಧೂ ಕಣಿವೆ ನಾಗರಿಕತೆಯ ಪ್ರದೇಶಗಳಲ್ಲಿ ನಿರ್ಮಿಸಿದ್ದ ಪ್ರಮುಖ ನಗರಗಳಲ್ಲಿ ಒಂದು. ಈ ನಗರ ಕ್ರಿ.ಪೂ. 26 ನೇಯ ಶತಮಾನದಲ್ಲಿ ನಿರ್ಮಿಸಿರಬಹುದು ಎನ್ನುತ್ತಾರೆ. ಈ ಜಾಗ ಪಾಕಿಸ್ತಾನದ ಸಿಂಧೂ ಪ್ರದೇಶದಲ್ಲಿ ಇರುವ ಸುಕ್ಕೂರ್ ಎಂಬ ಊರಿಗೆ ನೈರುತ್ಯದಲ್ಲಿ 80 ಕಿ. ಮೀ ದೂರದಲ್ಲಿದೆ. 

ಹರಪ್ಪಾ, ಈಶಾನ್ಯ ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ, ಸಕಿವಾಲ್ ಎಂಬ ಊರಿನಿಂದ 30 ಕಿ. ಮೀ ದೂರದಲ್ಲಿದೆ. ಇಲ್ಲಿ 40,000 ಕ್ಕೂ ಹೆಚ್ಚಿನ ಜನ ವಾಸವಿದ್ದಿರಬಹುದು ಎನ್ನುತ್ತಾರೆ.  ಸಿಂಧೂ ಕಣಿವೆಯ ಪ್ರದೇಶದಲ್ಲಿ ಯಾವ ಜನಾಂಗದ ಜನ ವಾಸವಿದ್ದರು ಎಂದು ಖಚಿತವಾಗಿ ಅರಿತುಕೊಳ್ಳಲು ಆಗಲಿಲ್ಲ. ಕೆಲವರು ದ್ರಾವಿಡರು ಎಂದೂ ಹಲವರು ಆರ್ಯರು ಅಥವಾ ಆರ್ಯ ಮಿಶ್ರಿತರು ಎಂದೂ ಕರೆಯುತ್ತಾರೆ. 

ಸಿಂಧೂ ಕಣಿವೆಯ ನಾಗರಿಕತೆ, ನಗರ ಜೀವನಕ್ಕೆ ಸೇರಿದ್ದು. ಅದರಲ್ಲೂ ಕ್ರಮವಾಗಿ ನಿರ್ಮಿಸಿ ಮಾಡಿದ ನಗರಗಳ ವಿನ್ಯಾಸ, ಆರೋಗ್ಯ ಬೆಳವಣಿಗೆಗೆ ಬೇಕಾದ ಪರಿಸರ, ಯೋಜಿಸಿ ಮಾಡಿದ ಸಾರ್ವಜನಿಕ ಸ್ನಾನ ಗೃಹಗಳು, ಸುರಕ್ಷಿತವಾದ ಮನೆಗಳು, ದೃಢವಾದ ಕೋಟೆಯ ಗೋಡೆಗಳಂತೆ ಕ್ರಮವಾಗಿ ಕಟ್ಟಡ ವಿನ್ಯಾಸಗಳನ್ನು ಹೊಂದಿದ  ಒಂದು ಸಮಾಜ ಎಂಬುದನ್ನು ಹೇಳುತ್ತದೆ. 

ಸಿಂಧೂ ಕಣಿವೆಯಲ್ಲಿ, ಮನೆಗಳು ಪ್ರತ್ಯೇಕವಾಗಿಯೋ ಅಥವಾ  ಪಕ್ಕದ ಮನೆಯೊಂದಿಗೆ ಸೇರಿಯೋ ಭಾವಿಗಳನ್ನು ನಿರ್ಮಿಸಿ ನೀರು ಪಡೆಯುತ್ತಿದ್ದರು. ಸ್ನಾನಕ್ಕೆ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಿದ್ದರು. ಮನೆಯಿಂದ ಹೊರಗೆ ಹೋಗುವ ತ್ಯಾಜ್ಯ ನೀರು, ರಸ್ತೆಗಳಲ್ಲಿ ಮುಚ್ಚಿದ ಕಾಲುವೆಗಳ ಮೂಲಕ ಹರಿದಿವೆ. ಧಾನ್ಯ ಶೇಕರಣೆಗೆ ಗೋದಾಮುಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಿದ್ಡಾರೆ. 

ಇಲ್ಲಿ ವಾಸವಿದ್ದ ಜನಗಳು ಹೆಚ್ಚಾಗಿ ವ್ಯಾಪಾರಿಗಳಾಗಿಯೂ ಕರಕುಶಲ ವಸ್ತುಗಳನ್ನು ಮಾಡುವವರಾಗಿಯೂ ಇದ್ದರು. ವಿಶೇಷ ಮತ ಆಚರಣೆಗಳು ಕಂಡುಬರದಿದ್ದರೂ, ಹೆಣ್ಣು ದೇವರುಗಳನ್ನು ಪೂಜಿಸಿದ ಗುರುತುಗಳು ಇವೆ. 

ಮಹೇಂಜದಾರೋವನ್ನು ಕಂಡು ಹಿಡಿದದ್ದು ಆಕಸ್ಮಿಕವಾಗಿ! ಪುರಾತನ ಬೌದ್ಧ ಸಂಪ್ರದಾಯಗಳನ್ನು ಹುಡುಕಿ ಅಲೆದ ರಾಕ್ಕಲ್ ದಾಸ್ ಬಂದೋಪಾದ್ಯಾಯರ ಬಳಿ, ಒಂದು ಜಾಗದಲ್ಲಿ ಪಾಳುಬಿದ್ದ ಪುರಾತನ ಇಟ್ಟಿಗೆಯ ಕಟ್ಟಡ ಇರುವುದಾಗಿ ಒಬ್ಬ ಸನ್ಯಾಸಿ ಹೇಳಿದರು. ರಾಕ್ಕಲ್ ದಾಸ್ ಅದನ್ನು ಸಂಶೋಧನೆಗೆ ಒಳಗಾಗಿಸಿದರು. ಅದರ ನಂತರ 1922ರಲ್ಲಿ ಭಾರತ ಪುರಾತತ್ವ ಇಲಾಖೆಗೆ ಸೇರಿದ ಒಂದು ಗುಂಪು, ಆ ಜಾಗವನ್ನು ಕ್ರಮವಾಗಿ ಉತ್ಖನನ ಮಾಡಿ ಸಂಶೋಧನೆ ಮಾಡಿತು. ಅದೇ ಮಹೇಂಜದಾರೋ ನಗರವನ್ನು ಕಂಡುಹಿಡಿಯಲು ಕಾರಣವಾಯಿತು. 

ಅದರಂತೆಯೇ, ಕರಾಚ್ಚಿಗೂ ಲಾಹೋರಿಗೂ ನಡುವೆ ರೈಲು ಮಾರ್ಗ ನಿರ್ಮಿಸುವಾಗ, ಪಾಳುಬಿದ್ದ ಉದ್ದನೆಯ ಇಟ್ಟಿಗೆಯ ಗೋಡೆಗಳು ಕಂಡವು. ಅದನ್ನು ಸಂಶೋಧನೆ ಮಾಡಿದ ಜಾನ್ (John) ಮತ್ತು ವಿಲಿಯಂ ಪುರುಂಟನ್ (William Purantan) ಮುಂತಾದವರು, ಹರಪ್ಪಾ ಅವಶೇಷಗಳನ್ನು ಕಂಡರು. ಅದರ ನಂತರ, ಬೇರೆ ಬೇರೆ ಕಾಲಘಟ್ಟಗಳಲ್ಲಿ, ಸರ್ ಜಾನ್ ಮಾರ್ಷಲ್(John Marshal) ಮಾರ್ಟಿಮರ್ ವೀಲರ್, (Mortimer Wheeler)  ಅಹಮದ್ ಹಸನ್ ಮುಂತಾದವರು ಹರಪ್ಪಾವನ್ನು ಉತ್ಖನನ ಮಾಡಿ ಅನೇಕ ವಿಷಯಗಳನ್ನು ಕಂಡು ಅರಿತುಕೊಂಡರು. 

ಆರ್ಯರ ಆಕ್ರಮಣದಿಂದ ಸಿಂಧೂ ಕಣಿವೆಯ ನಾಗರಿಕತೆ ಅಳಿದುಹೋಯಿತು ಎಂಬ ಸಿದ್ಧಾಂತವನ್ನು ಮಾರ್ಟಿಮರ್ ವೀಲರ್ ಮುಂದಿಟ್ಟರು. ಅದನ್ನೇ ಇಂದು ಕೆಲವು ಅಧ್ಯಯನಕಾರರು ಎತ್ತಿಹಿಡಿದುಕೊಂಡಿದ್ದಾರೆ. ಆದರೇ, ಗುಜರಾತ್ ಮತ್ತು ಸಿಂಧೂ ಪ್ರದೇಶಗಳಲ್ಲಿ ಉಂಟಾದ ಭೂಕಂಪನ ಸಿಂಧೂ ಕಣಿವೆಯ ಅಳಿವಿಗೆ ಕಾರಣವಾಗಿರಬಹುದು ಎಂದು, ಈಗ ಅಭಿಪ್ರಾಯ ಹೊಂದಿದ್ದಾರೆ. 

ಸಿಂಧೂ ಕಣಿವೆಯ ಅಧ್ಯಯನಕ್ಕೆ ಪುರಾತನ ತಮಿಳು ಸಂಪ್ರದಾಯ ಪ್ರಮುಖವಾದ ಪುರವೆಯಾಗಿ ನೆರವಾಗಬಹುದು ಎನ್ನುತ್ತಾರೆ ಅಸ್ಕೋ ಪಾರ್ಪಲೋ. ಐರಾವತಂ ಮಹಾದೇವನ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸಿಂಧೂ ಕಣಿವೆಯ ಅಕ್ಷರಗಳು ದ್ರಾವಿಡ ಭಾಷೆಗೆ ಸೇರಿದ್ದು ಎಂಬುದರೊಂದಿಗೆ ಸಂಸ್ಕೃತಿಯ ನೆಲೆಯಲ್ಲಿ ಪುರಾತನ ತಮಿಳು ರಾಜಕೀಯದೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದೆ ಎನ್ನುತ್ತಾರೆ. 

ಸಿಂಧೂ ಕಣಿವೆಯ ನಾಗರಿಕತೆಯ ಪ್ರಮುಖ ಸಂಗತಿಗಳು ಸಮುದ್ರ ವ್ಯಾಪಾರ ಮತ್ತು ನಗರದ ಜನ ಜೀವನ ಪದ್ಧತಿ. 3000 ವರ್ಷಗಳಿಗೂ ಹಿಂದೆಯೇ ಸಿಂಧೂ ಕಣಿವೆಯ ಜನಗಳು ಸಮುದ್ರದಲ್ಲಿ ದೀರ್ಘವಾದ ಪ್ರಯಾಣ ಮಾಡಿ ವ್ಯಾಪಾರ ಮಾಡಿದ್ದಾರೆ. ಇದರ ಬಗ್ಗೆ ಮೆಸಪಟೋಮಿಯಾದಲ್ಲಿ ಟಿಪ್ಪಣಿಗಳು ಕಾಣಲು ದೊರಕುತ್ತವೆ. ಪ್ರಕೃತಿಯ ವಿಕೋಪದ ಕಾರಣದಿಂದಲೋ ಅಥವಾ ಬಾಹ್ಯ ಒತ್ತಡಗಳ ಕಾರಣದಿಂದಲೋ ಸಿಂಧೂ ಕಣಿವೆಯ ಪ್ರದೇಶ ಅಳಿದುಹೋಗುವಾಗ ಹಡಗು ನಿರ್ಮಿಸುವವವರು ಮತ್ತು ನೇಗಿಲು ಉಳುವವವರು ಸಮುದ್ರದ ಮೂಲಕ ಹೊರಟು ಬೇರೆಯ ಸ್ಥಳಗಳನ್ನು ಹುಡುಕಿಕೊಂಡು ಹೋಗಿರಲು ಸಾಧ್ಯ ಎನ್ನುತ್ತಾರೆ. ಬಹುಶಃ ಅವರು ಭಾರತದ ಹಲವಾರು ಪ್ರದೇಶಗಳಿಗೆ ಹೋಗಿ ವಾಸವಿದ್ದಿರಬಹುದು. 

ಸಮುದ್ರ ವ್ಯಾಪಾರವನ್ನೂ ಸಮುದ್ರದ ಜೀವನ ಪದ್ಧತಿಯನ್ನೂ ಮುಂಚೂಣಿಯಲ್ಲಿರಿಸಿ ಸಂಭ್ರಮಿಸಿತು  ಸಂಗಮ್ ಸಾಹಿತ್ಯ. ಅದರಲ್ಲಿ ವಿಶೇಷವಾಗಿ, ಪೂಂಪುಗಾರ್  ಮುಂತಾದ ಬಂದರು ನಗರದ ಜನಜೀವನವೂ, ಅಲ್ಲಿ ವಾಸವಿದ್ದ ವ್ಯಾಪಾರ ಕುಟುಂಬಗಳ ಇತಿಹಾಸವೂ  ಶಿಲಪ್ಪದಿಕಾರದ ಮೂಲ ಕತೆಯಾಗಿದೆ. ಆದ್ದರಿಂದ, ಸಂಗಮ್ ಕಾಲದಿಂದ ತಮಿಳರು ಪಾಶ್ಚಿಮಾತ್ಯ ದೇಶಗಳ ಜತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಆದ್ದರಿಂದ, ಸಮುದ್ರ ವ್ಯಾಪಾರದಲ್ಲೂ ನಗರಗಳನ್ನು ನಿರ್ಮಿಸುವುದರಲ್ಲೂ ಸಿಂಧೂ ಕಣಿವೆಯ ನಾಗರಿಕತೆಗೂ ತಮಿಳುನಾಡಿಗೂ ನಿಕಟವಾದ ಸಂಬಂಧ ಇದ್ದಿರಬಹುದು ಎನ್ನುತ್ತಾರೆ ಬಾಲಕೃಷ್ಣನ್. 

ಪಾಕಿಸ್ತಾನಿನಲ್ಲಿ ಇಂದು ಕಾಣುವ  ಅಂಬರ್, ತೋಟ್ಟಿ, ತೋಂಡ್ರಿ, ಈಳಂ, ಕಚ್ಚಿ, ಕಾಕ್ಕೈ, ಕಳಾರ್, ಮಲ್ಲಿ, ಮಾಂತೋಯ್, ಮೋಷಿ, ವಾಹೈ, ವಾನಿ, ಮಿಳೈ ಕಂಡೀರ್ ಮುಂತಾದ ಊರಿನ ಹೆಸರುಗಳು ಸಂಗಮ್ ಸಾಹಿತ್ಯದಲ್ಲಿ ಉಲ್ಲೇಖಿಸುವ ಅಂಬರ್, ತೋಟ್ಟಿ, ಈಳಂ, ಕಾನಂ, ಮಲ್ಲಿ, ಮಾಂದೈ, ಮೋಸಿ, ವಾಗೈ, ವಾನಿ, ಮಿಳೈ ಮತ್ತು ಕಂಡೀರಂ ಮುಂತಾದುವನ್ನು ಹಾಗೆಯೇ ನೆನಪು ಮಾಡಿಕೊಡುತ್ತವೆ. ಕೊರ್ಕೈ ಎಂಬುದು ಊರಿನ ಹೆಸರಾಗಿ ಮಾತ್ರವಲ್ಲದೆ ನದಿಯ ಹೆಸರಾಗಿಯೂ ಇದೆ ಎಂದು ವಿಸ್ಮಯ ಉಂಟುಮಾಡುತ್ತಾರೆ ಬಾಲಕೃಷ್ಣನ್. 

ಅಫ್ಘಾನಿಸ್ಥಾನದಲ್ಲಿ ಕಾಣುವ ಪೊದಿನೇ, ಪಳನಿ ಮುಂತಾದ ಹೆಸರುಗಳು ಸಂಗಮ್ ಸಾಹಿತ್ಯದಲ್ಲಿ ಉಲ್ಲೇಖಗೊಂಡಿರುವ ಪೊದಿನಿ, ಪಳನಿಯನ್ನು ನೆನಪಿಸುತ್ತವೆ. ತಮಿಳು ರಾಜರ ಹೆಸರುಗಳನ್ನೂ ಪಾಳೆಯಗಾರರ ಹೆಸರುಗಳನ್ನೂ, ಸಂಗಮ್ ಕಾಲದ ದೇವರ ಹೆಸರುಗಳನ್ನೂ ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಕಾಣಲು ದೊರಕುವುದಾಗಿ ಬಹಳ ಉದ್ದವಾದ ಪಟ್ಟಿಯನ್ನು ಕೊಡುತ್ತಾರೆ. 

ತಮಿಳು ನಾಡಿನಲ್ಲಿ ಮರಳುಭೂಮಿ ಇಲ್ಲ. ಆದರೇ ‘ಆಗನಾನೂರು’ ನಲ್ಲಿ 245ನೇಯ ಪದ್ಯದಲ್ಲಿ ಎಲುಬು ತಿನ್ನುವ ಒಂಟೆ ಎಂಬ ಸಾಲು ಇದೆ. ಹಸಿವಿನಲ್ಲಿ ಆಹಾರ ಏನೂ ಸಿಗದೇ ಹಲವು ದಿನಗಳು ಉಪವಾಸವಿದ್ದ ನಂತರ ದೊರಕುವ ಎಲುಬನ್ನು ಒಂಟೆ ತಿಂದು ಹಸಿವನ್ನು ಹಿಂಗಿಸಿಕೊಳ್ಳುತ್ತದೆ. ಇದು ಮರಳುಗಾಡಿನಲ್ಲಿ ಮಾತ್ರವೇ ಇರುವ ಜೀವನ ಪದ್ದತಿ. ಇದು ಹೇಗೆ ಸಂಗಮ್ ಕಾವ್ಯದಲ್ಲಿ ಸ್ಥಾನ ಪಡೆದುಕೊಂಡಿತು? 

ಪದ್ಯವನ್ನು ಬರೆದ ಮರುದನಾಗನಾರ್ ಮರಳುಗಾಡಿನ ಜೀವನವನ್ನು ಹೇಗೆ ತಿಳಿದು ಕೊಂಡಿದ್ದರು? ಒಂಟೆಯನ್ನು ಅರಿಯದ ತಮಿಳು ಪ್ರದೇಶದಲ್ಲಿ ಒಂಟೆಯ ಬಗ್ಗೆಯ  ಪದ್ಯ ಒಂದು ಹಾಡಿನಲ್ಲಿ ಪ್ರಮುಖವಾಗಿ ಬರುವುದು ಮುಖ್ಯವಾದ ಸಂಸ್ಕೃತಿಯ ಪುರಾವೆ ಎಂದು ಹೇಳುತ್ತಾರೆ ಬಾಲಕೃಷ್ಣನ್. 

ಆದ್ದರಿಂದ, ಸಂಗಮ್ ಸಾಹಿತ್ಯಕ್ಕೂ ಸಿಂಧೂ ಕಣಿವೆಯ ಪುರಾತನ ಇತಿಹಾಸಕ್ಕೂ ನಡುವೆ ಒಂದು ಕರುಳಬಳ್ಳಿಯ ಸಂಬಂಧ ಇದೆ. ಸಿಂಧೂ ಕಣಿವೆಯ ನಾಗರಿಕತೆಯ ಬಗ್ಗೆಯ ಅಧ್ಯಯನವನ್ನು ಪುರಾತನ ತಮಿಳು ನಾಗರಿಕತೆಯ ಸಿದ್ದಾಂತಗಳೊಂದಿಗೆ ಹೆಣೆದೇ ಇನ್ನು ಮುಂದೆ ಬರುವ ಸಂಶೋಧನೆಗಳನ್ನು ಮಾಡಬೇಕು. ಆಗಲೇ ಭಾರತದ ಸಂಸ್ಕೃತಿ ವಿಶೇಷವಾದದ್ದೂ ಪ್ರತ್ಯೇಕವಾದದ್ದೂ ಮತ್ತು ಅಸಲಿಯಾದದ್ದು ಎಂಬುದನ್ನು ಜಗತ್ತಿಗೆ ತಿಳಿಸಲು ಸಾಧ್ಯ.

| ಮುಕ್ತಾಯ |

‍ಲೇಖಕರು Admin

August 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: