ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ- ಅಪ್ಪ ತೊಟ್ಟ ಗಾಯಗಳು..

ಸದಾಶಿವ್ ಸೊರಟೂರು

ಅಪ್ಪನು ತೊಟ್ಟ ಹಳೆಯ
ಬನಿಯನ್ನಿನ
ನಾಲ್ಕಾಣೆ ಗಾತ್ರದ
ತೂತುಗಳಲ್ಲಿ
ಎಂದೂ ಕಾಣಸಿಗದ
ಅವನ ಜಿದ್ದುಗಳನ್ನು
ಹುಡುಕುತ್ತೇನೆ..

ಅವು ಬರೀ ತೂತುಗಳೊ
ಬದುಕು ಮಾಡಿದ ಗಾಯಗಳೊ
ಉತ್ತರಿಸದ ಅಪ್ಪ
ಮೌನಿ!

ಉಳಿದೆ ಇರುವ ಗಾಯ
ಮತ್ತು
ಬಾಳಲೇಬೇಕಾದ
ದರ್ದುನ್ನು
ಅಪ್ಪ ಸುಖಿಸುತ್ತಿದ್ದ..

ಹರಿದ ಬನಿಯನ್ನಿನ ಅಪ್ಪ
ಹೊಸ ಬನಿಯನ್ನಿನ ತಂದೆ
ಎರಡರಲ್ಲೂ ಯಾವ ವ್ಯತ್ಯಾಸವೂ
ಇರಲಿಲ್ಲ!

ಅಸಲಿಗೆ ಬಟ್ಟೆಯಿಂದ
ಮುಚ್ಚಿಕೊಂಡು ಮಾನ
ಗಳಿಸುವುದು ತೀರಾ ಮುಖ್ಯವೆಂದು
ಆತ ಭಾವಿಸಿದಂತಿರಲಿಲ್ಲ!

ಹರಿದ ತೂತುಗಳಲ್ಲಿ‌
ಬಿದ್ದ ಮಳೆ ಹನಿಗಳನು
ಎಣಿಸುತ್ತಿದ್ದ
ಬಿಸಿಲಿನ ತಾಪ ಅಳೆಯುತ್ತಿದ್ದ
ಚಳಿಯನ್ನು ಗ್ರಾಂಗಳಲಿ
ತೂಗುತ್ತಿದ್ದ!

ಅಲಮಾರಿನಲಿ ಅಪ್ಪನಿಗೆಂದೆ
ತಂದ
ಅಂಗಿಗಳು ಎಷ್ಟೊಂದು!
ಒಂದಾದರೂ ತೊಡಲಿಲ್ಲ
ದೂರ ಸರಿಯುತ್ತಿದ್ದ
ಕಡಿಸಿಕೊಂಡಂತೆ ಚೇಳು..

ಅಕ್ಕನ‌ ಮದುವೆಗೆ
ಊರಿನ ತೇರಿಗೆ ಆಸ್ಪತ್ರೆಗೆ
ಅಪ್ಪನೊಂದಿಗೆ
ಸೇಡು ತೀರಿಸಿಕೊಂಡಿದ್ದು ಮಾತ್ರ
ಒಂದು ಬಿಳಿಯ ಅಂಗಿ!

ಗಾಂಧಿಯಾದರೂ ಯಾಕೆ
ತೊಟ್ಟಿದ್ದರು ತುಂಡು ಬಟ್ಟೆ?
ಮತ್ತೆ
ಈಗ ಅಪ್ಪನು!

‍ಲೇಖಕರು Admin

26 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading