ಜಯಶ್ರೀ ಬಿ ಕದ್ರಿ ಓದಿದ- ‘ಸಂಜೀವನಿ’

ಜಯಶ್ರೀ ಬಿ ಕದ್ರಿ

‘ಸಂಜೀವನಿ’ ಡಾ. ನಾಗವೇಣಿ ಮಂಚಿ ಅವರು ನಿರೂಪಿಸಿರುವ ಆತ್ಮಕತೆ. ಲಿಂಗತ್ವಅಲ್ಪ ಸಂಖ್ಯಾತರಾಗಿದ್ದು, ಕೇವಲ ೪೫ ನೇ ವಯಸ್ಸಿನಲ್ಲಿಯೇ ನಿಬಿಡವಾದ, ಕಠೋರವಾದ ಅನುಭವಗಳಿಗೆ ತುತ್ತಾದ ಉಡುಪಿಯ ಸಂಜೀವ ಅವರ ನಿರ್ಲಿಪ್ತತೆ, ಎಳೆಯ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಸಲಿಂಗಕಾಮದ ವಿಕೃತ ರೂಪಗಳು ಹೀಗೆ ಈ ಆತ್ಮಕತೆ ತನ್ನ ನಿರೂಪಣಾ ವಿಧಾನದಿಂದಲೂ ಮನಸನ್ನು ಮರಗಟ್ಟಿಸುವ, ನಾಗರಿಕ ಸಮಾಜದ ಪದರದಡಿಯಲ್ಲಿನ ವಿಕೃತಿಗಳ ಅನಾವರಣದಿಂದಲೂ ಓದಲೇಬೇಕಾಗಿರುವ ಪುಸ್ತಕ. ಮೂಲತಃ ನಾಗವೇಣಿಯವರ ಸಂಶೋಧನಾ ಪ್ರಾಜೆಕ್ಟ್ ನ ಮುಂದುವರಿಕೆ ಇದಾಗಿದ್ದರೂ ಸ್ವತಂತ್ರ ಕೃತಿಯಂತೆಯೇ ಮೈದಾಳಿರುವುದು ಕೃತಿಯ ವೈಶಿಷ್ಟ್ಯ.

ತಮ್ಮ ಭಿನ್ನ ಲಿಂಗತ್ವದಿಂದಾಗಿ ಸಂಜೀವ ಅವರು ತನ್ನ ಸಂಬಂಧಿಯಿಂದಲೇ ಹತ್ತನೆಯ ವಯಸ್ಸಿನಿಂದಲೇ ಲೈಂಗಿಕವಾಗಿ ಬಳಸಲ್ಪಡುತ್ತಾರೆ. ಶಾಲೆಯನ್ನು ಅರ್ಧಕ್ಕೇ ಬಿಟ್ಟು, ಬಡತನ ನೀಗಿಸುವ ಉದ್ದೇಶದಿಂದ ಮುಂಬೈ ಗೆ ಹೋದರೆ ಅಲ್ಲೂ ಅವರಿಗೆ ನರಕ ಸದೃಶ ಅನುಭವಗಳು. ಕ್ಯಾನ್ಸರ್ ಪೀಡಿತ ತಾಯಿಗೆ ಔಷಧ ಕೊಡಿಸಲು ಹಣವಿಲ್ಲದೆ ಆಕೆಯನ್ನು ಕಳೆದುಕೊಂಡ ದು:ಖ, ತನ್ನ ಮೇಲೆರಗಿದ ಗಂಡು ಕಾಮುಕರಿಂದ ತಗಲಿಕೊಂಡ ಏಡ್ಸ್, ಹೀಗೆ ಅವರ ಜೀವನದ ಘಟನೆಗಳು ಸಿನೆಮಾದಂತೆ, ಆದರೆದಟ್ಟ ವಾಸ್ತವಿಕತೆಯಿಂದ ತೆರೆದುಕೊಳ್ಳುತ್ತವೆ.

ನಾಗರಿಕ ಸಮಾಜದವರು ಕಂಡೂ ಕಾಣದಂತೆ ಅಲಕ್ಷಿಸುವ ಸಮಸ್ಯೆಗಳಾದ ಲಿಂಗತ್ವ ಅಲ್ಪ ಸಂಖ್ಯಾತರ ಬವಣೆ, ಉದ್ಯೋಗ, ವಸತಿ ಮೊದಲುಗೊಂಡು ಅವರ ಆತ್ಮಗೌರವಕ್ಕೆ ಧಕ್ಕೆಯಾಗುತ್ತಲೇ ಇರುವ ಸನ್ನಿವೇಶಗಳು.. ಕೊನೆಗೆ ಅವರನ್ನು ‘ದಂಧೆ’ಗೆ ಇಳಿಸಬೇಕೆನ್ನುವ ಹುನ್ನಾರಗಳು, ಇವನ್ನೆಲ್ಲ ಮೀರಿ ಸಂಜೀವರದು ಆತ್ಮಗೌರವದ ಬದುಕು. ಆದಾಯದ ಮೂಲ ಕ್ಯಾಂಟೀನ್.

ವೀಣಾಧರಿ ಅವರ ಪರಿಚಯ ಸಂಜೀವರ ಬದುಕಿನಲ್ಲಿ ಮಹತ್ತರ ತಿರುವು. ಎಚ್ ಐ ವಿ ಸೋಂಕಿತರ ಬಗ್ಗೆ ಇರುವ ಸಾಮಾಜಿಕ ತಿರಸ್ಕಾರ, ಬಹಿಷ್ಕಾರ, ಶೋಷಣೆಗಳನ್ನು ಹೇಳುತ್ತಲೇ ಸಂಜೀವರು ‘ಆಸರೆ’, ‘ಸಂವೇದನ’, ‘ದೀಪಜ್ಯೋತಿ’ಯಂತಹ ಸಂಘಟನೆಗಳ ಸಮಾಜ ಮುಖಿ ಕಾರ್ಯಕ್ರಮಗಳ ಬಗ್ಗೆಯೂ ಹೇಳುತ್ತಾರೆ. ಕಾಜಲ್, ನಗ್ಮಾ, ದೀಪಿಕಾ ಹೀಗೆ ಇನ್ನಿತರ ಲಿಂಗತ್ವ ಅಲ್ಪಸಂಖ್ಯಾತರ ಸಾಧನೆಗಳ ಬಗ್ಗೆ ಗಮನ ಸೆಳೆಯುತ್ತಾರೆ. ತನ್ನ ಜೀವನ ಪ್ರೀತಿ, ಛಲವನ್ನು ಕಳೆದುಕೊಳ್ಳದೆ, ಅಣ್ಣ ಅತ್ತಿಗೆಯರು ತನಗೋಸ್ಕರ ಮರುಗಿದ್ದನ್ನು ಸ್ಮರಿಸುತ್ತ ಅವರ ಕುಟುಂಬಕ್ಕೆಆಸರೆಯಾಗಿ ನಿಂತು, ಅರಿಯದ ವಯಸ್ಸಿನಲ್ಲಿ ಗಂಡು ಕಾಮುಕರ ದೌರ್ಜನ್ಯಕ್ಕೆ ತುತ್ತಾಗಿ, ತನ್ನದಲ್ಲದ ತಪ್ಪಿಗೆ ತಾನು ಏಡ್ಸ್ ಕಾಯಿಲೆಗೆ ತುತ್ತಾದ ಆಘಾತವನ್ನು ಒಪ್ಪಿಕೊಂ‹ಡೇ ಸಂಜೀವರು ಎಚ್ ಐ ವಿ ಸೋಂಕಿತರಿಗೆ ಸಿಗಬೇಕಾದ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಇನ್ನು ಸತ್ಯ ಹೇಳಿ ಕೆಲಸ ಕಳೆದುಕೊಂಡ, ಏಡ್ಸ್ ಪೀಡಿತರಿಗೆ ಮಾಸಾಶನ, ಉದ್ಯೋಗಕಲ್ಪಿಸುವ, ಎಚ್ ಐ ವಿ ಪೀಡಿತಮಕ್ಕಳ ಶಿಕ್ಶಣದ ಹಕ್ಕು.. ಹೀಗೆ ಹಲವಾರು ಜೀವನ್ಮುಖೀ ಅಂಶಗಳಿಗಾಗಿ ಹೋರಾಟದ ಅನುಭವಗಳಿವೆ. ಸದಾಏಡ್ಸ್ ಸಂಬಂಧಿ ಜಾಗೃತಿ ಕಾರ್ಯಕ್ರಮಗಳಲ್ಲಿ ನಿರತರಾಗಿರುವ ಸಂಜೀವರಿಗೆ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ತನ್ನಕಟು ಅನುಭವಗಳನ್ನೂ ಒಂದುರೀತಿಯ ತಿಳಿ ಶೈಲಿಯಲ್ಲಿ ನಿರೂಪಿಸುವ ಸಂಜೀವರು ಕೊರೋನಾ ಕಾಲದ ವಿಷಯಗಳನ್ನು ಮನ ಕಲಕುವಂತೆ ಹೇಳುತ್ತಾರೆ. ಕೊರೋನಾ ಸಂದರ್ಭದಲ್ಲಿ ಏಡ್ಸ್ ರೊಗಿಗಳು ಆದಾಯ ಮೂಲಗಳಿಲ್ಲದೆ, ಪೌಷ್ಟಿಕಆಹಾರದಕೊರತೆ ಅನುಭವಿಸಿದಂತೆಯೇ ಅಂತಹಾ ಸಂದರ್ಭದಲ್ಲಿ ಕೂಡ ಕ್ಷಣಿಕ ಸುಖಕ್ಕೋಸ್ಕರ ಮಾಸ್ಕ್ ಧರಿಸದೆ ಕಾಮುಕರು ಲೈಂಗಿಕತೆಗಾಗಿ ಲಿಂಗತ್ವ ಅಲ್ಪ ಸಂಖ್ಯಾತರ ಬಳಿಗೆ ಬರುತ್ತಿದ್ದರು ಎಂದು ನಿರ್ಲಿಪ್ತತೆಯಿಂದ, ಖಿನ್ನತೆಯಿಂದ ಹೇಳುತ್ತಾರೆ.

ಈ ಪುಸ್ತಕದ ಮಹತ್ತರವಾದ ಅಂಶ ನಾಗವೇಣಿ ಅವರ ಸರಳವಾದ, ಆದರೆ ಬಿಗಿಯಾದ ಬಂಧವನ್ನು ಹೊಂದಿದ, ಕುತೂಹಲಕಾರಿಯಾದ, ಆದರೆ ಪ್ರಚೋದನಕಾರಿ ಅಲ್ಲದ, ಮಾನವೀಯವಾದ, ಅತಿ ಭಾವುಕತೆಇರದ, ವಿಷಯಕ್ಕೆ ಬದ್ಧರಾಗಿರುವ ನಿರೂಪಣೆ. ಲಿಂಗತ್ವ ಅಲ್ಪಸಂಖ್ಯಾತರ ಬವಣೆಗಳ ಬಗ್ಗೆ ಅರಿವು ಮೂಡಿಸುವಲ್ಲಿ, ಅವರ ದಾರುಣ ಅನಿವಾರ್ಯತೆಗಳ ಬಗ್ಗೆ ಬೆಳಕು ಚೆಲ್ಲಿ, ಸಮಾಜದ ಸ್ಪಂದನೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪುಸ್ತಕ ಯಶಸ್ವಿಯಾಗಿದೆ.

‍ಲೇಖಕರು Admin

November 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: