ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು – ಪ್ರೀತಿಗೆ ಹಸಿದು ಹೆಣ ತಿನ್ನುತ್ತೇವೆ..

ಸದಾಶಿವ್ ಸೊರಟೂರು

ಉಕ್ರೇನಿನಲಿ ಯುದ್ದವಂತೆ,

ನೋಡಿ ಎಷ್ಟೊಂದು ಸುಲಭ
ಯುದ್ದದ ಕುರಿತು ಪದ್ಯ
ಬರೆಯೋದು
ಪತ್ರಿಕೆಗಳ ವರದಿ ತಿದ್ದೋದು
ಟಿವಿಗಳ ಬ್ರೇಕಿಂಗ್ ನ್ಯೂಸು
ಕುಟ್ಟೋದು..
ಅಸ್ತ್ರ ಪ್ರತ್ಯಸ್ತ್ರ ರಣರಂಗ
ಗೋಳಾಟ ಕಿಚ್ಚು
ತುಪಾಕಿ ಗ್ರೇನೆಡ್ ಮರಣ
ನೆತ್ತರು ನೆಣ ಮಜ್ಜೆ ಮಾಂಸ
ಸಾಕಾದೀತಿಷ್ಟು ಪದಗಳು..

ಯುದ್ಧದ ಚಿತ್ರಕೂ ಸಾಕು
ನೂರು ಎಂಎಲ್ ಕೆಂಪುಬಣ್ಣ
ಮದ್ದುಗಳಿಗೆ ಬಳಿಯಲು
ಒಂಚೂರು ಕಂದು ಬಣ್ಣ..

ಯುದ್ಧದ ಭಾಷಣಕೆ
ವೀರತನ ಬಿಂಕ ನುಡಿಗಳು
ಐವತ್ತು ಗ್ರಾಂ ಕಿಚ್ಚು
ಅರ್ಧ ಲೀಟರ್ ಬಿಸ್ಲರಿ ವಾಟರು

‘ಶಾಂತಿ’ ಗಾಗಿ ಇಡೀ ಬದುಕು
ಖರ್ಚು ಮಾಡಿದ ಬುದ್ದ..

‘ಪ್ರೀತಿ’ ಗಾಗಿ ಸಿಲುಬೆಯ ಮೇಲೆ
ತೊನೆದಾಡಿದ ಏಸು

ಒಳಿತು ಕೆಡುಕುಗಳ ಲೆಕ್ಕಾಚಾರಕ್ಕಾಗಿ
ಮತ್ತೆ ಮತ್ತೆ ಹತ್ತು ಅವತಾರಗಳು

ಸರಳತೆ ಪಾಠ ಹೇಳದೆ
ಸುಮ್ಮನೆ ಬದುಕುತ್ತಾ ಹೋದ ಗಾಂಧಿ..

ಓಹ್! ಒಂದೊಂದು ಪದಕ್ಕಾಗಿ
ಇಡೀ ಬದುಕೇ ಸವೆ-ಸವೆದು ಹೋಗಿದೆ

ಸೋವಿ ಯಾವುದು ಇಲ್ಲಿ?
ಯುದ್ದವೊ? ಬದುಕೊ?

ಜನ ಮಾರುಕಟ್ಟೆಯಲ್ಲಿ
ಅಗ್ದಿ ಸೋವಿಯದನ್ನೆ ಕೊಳ್ಳುತ್ತಾರೆ..

ಯುದ್ದಕೊಳ್ಳಲು ನೂಕು ನುಗ್ಗಲು
ಕಾಳರಾತ್ರಿಯಲ್ಲೂ ಸಿಕ್ಕೀತು ನಿಮಗೆ!

ಪ್ರೀತಿ ಶಾಂತಿ ಧರ್ಮ ಸರಳತೆಯ
ವಿಟಮಿನ್ ಕೊರತೆಯಿಂದ
ನುಲುಗಿದೆ ಜಗತ್ತು

ಬಡಕಲು ಬದುಕನು ಕೊಳ್ಳುವವರಿಲ್ಲ!

ಜಗತ್ತು‌ ಪ್ರೀತಿಗೆ ಹಸಿದಿದೆ ನಿಜ
ಆದರೆ ತಿನ್ನುತ್ತಿರುವುದು ಹೆಣಗಳನು..

‍ಲೇಖಕರು Admin

28 February, 2022

1 Comment

  1. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading