ಸದಾಶಿವ್ ಸೊರಟೂರು ಕಥಾ ಅಂಕಣ- ಹೆಜ್ಜೆಯ‌ ಸದ್ದುಗಳು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

10

ಅವಳು ಕಾದಿದ್ದಳು. ಹೊರಗೆ ಕತ್ತಲು. ಚಂದಿರನಿಲ್ಲದ ಕಡುರಾತ್ರಿ. ಬೆಳಕಿಗೆ ಬರಗಾಲ. ದಟ್ಟ ದಟ್ಟ ಮೋಡಗಳು.  ಧೋ ಎನ್ನುವ ಮಳೆ. ಮನೆಯ ಬಾಗಿಲು ಮುಚ್ಚಿತ್ತು. ಒಳಗಿನಿಂದ ಜಡಿದುಕೊಂಡ ಅಗುಣಿ ಭದ್ರವಾಗಿತ್ತು. ಹಾಸಿಗೆಯ ಮೇಲೆ ಎರಡು ಬಾರಿ‌ ಹೊರಳಿದಳು. ‘ಅವನು ಇಂದಾದರೂ ಬರಬಹುದು..’ ಯಾಕೊ ತನ್ನಷ್ಟಕ್ಕೆ ತಾನು ಹೇಳಿಕೊಂಡಳು. 

ಅವಳ ಗಮನವೆಲ್ಲಾ ಅಂಗಳದ ಕಡೆ ಜಾರಿತು. ಕಿವಿಗಳನ್ನು ಎಚ್ಚರಿಸಿಕೊಂಡು ಕೂತಳು. ಮಳೆಯ ಪಟಪಟ ಸದ್ದು. ಆಲಿಸುತ್ತಾ ಕೂತಳು. ಎಷ್ಟೊ ಹೊತ್ತಿನ ಬಳಿಕ ಮಳೆಯ ಸದ್ದಲ್ಲದೆ ಬೇರೆ ಇನ್ಯಾವುದೊ ಸದ್ದೊಂದು ಅವಳ ಕಿವಿಗೆ ಬಂದು ಬಡಿಯಿತು. 

ಓಹ್ ಇವು ಹೆಜ್ಜೆಯ‌ ಸದ್ದುಗಳು. ಯಾರೊ ಮಳೆಯಲ್ಲಿ ನಡೆಯುತ್ತಿದ್ದಾರೆ.. ಅವನಿರಬಹುದಾ? ಓಹ್ ಸದ್ದುಗಳು ಇತ್ತಕಡೆಯೇ ಬರುವಂತಿವೆ.. 

ಬಾಗಿಲು ತೆರೆಯಲೇ? ಛೇ ಬಾಗಿಲು ತೆರೆದು ಕಾಯುತ್ತಾ ಕೂರಲು ನಾನೇನು…!? ಮುಂದಿನ ಮಾತನ್ನು ನುಂಗಿಕೊಂಡಳು. ಅವನೇ ಬಾಗಿಲು ಬಡಿಯುತ್ತಾನೆ. ಬಡಿಯದೆ ಎಲ್ಲಿ ಹೋದಾನು? 
ಅವಳ ಪ್ರಶ್ನೆಗಳಿಗೆ ಅವಳೇ ಉತ್ತರಿಸಿಕೊಳ್ಳ ತೊಡಗಿದಳು. ಮತ್ತೊಮ್ಮೆ ಕಿವಿಗಳನ್ನು ಮನೆಯಾಚೆಗೆ ಚಾಚಿದಳು. ಅರೇ ಆ ಹೆಜ್ಜೆ ಸದ್ದುಗಳು ಏನಾದವು? ಎಲ್ಲಿ ಕಳೆದು ಹೋದವು ಅವು? 
ಅವನ್ನಲ್ಲವಾ? 

ಎಷ್ಟೊ ಹೊತ್ತಿಗೆ ಮಳೆ ನಿಂತಿತು. ಹೆಜ್ಜೆ ಸದ್ದು ಯಾವಾಗಲೊ ನಿಂತಿದ್ದವು. ಕಾದು ಕಾದು ಯಾವುದೊ ಜಾವಕ್ಕೆ ಮಲಗಿದಳು. 

*** 
ಕಾಯುವಿಕೆ ಜಾರಿಯಲ್ಲಿಯೇ ಇತ್ತು. ಆದರೆ ಮಳೆ ಇರಲಿಲ್ಲ. ಮಳೆ ಅವರ ಭೇಟಿಗೆ ಮಾಡಿಕೊಂಡ ಗುರುತಾ?  ಬಹುಶಃ ಅವರಿಗೂ ಗೊತ್ತಿಲ್ಲ. 

ಎಷ್ಟೊ ದಿನದ ಬಳಿಕ ಮತ್ತೆ ಕಡು ಕತ್ತಲು. ದಟ್ಟ ಮೋಡ. ಜೋರು ಮಳೆ. ಇವಳ ತವಕ.. ಎಲ್ಲವೂ ಹಿಂದಿನಂತೆ ಮತ್ತು ಎಂದಿನಂತೆ. 

ದಡದಡ ಹೆಜ್ಜೆ ಸದ್ದುಗಳು. ಇವಳ ಆತಂಕ.‌ ಸಣ್ಣ ಬಿಗುಮಾನ. ಬಾಗಿಲು ಬಡಿಯಲಿ ಎಂಬ ಹಠ. ಯೋಚನೆಗಳಲ್ಲೆಯೇ ಮತ್ತೆ ಕಳೆದ ಹೋದ ಹೆಜ್ಜೆ ಸದ್ದುಗಳು. ಮತ್ತೆ ಮತ್ತೆ ಅವಳ ಚಡಪಡಿಕೆ.. 
ಮತ್ತೆ ಮತ್ತೆ ಮಳೆ.. ಮತ್ತೆ ಮತ್ತೆ ಹೆಜ್ಜೆ ಸದ್ದು.. ಮತ್ತೆ ಮತ್ತೆ ಅವಳ ತಲ್ಲಣಗಳು.. ಹೀಗೆ ಏಳೆಂಟು ಬಾರಿ ಕಳೆದು‌ ಹೋದವು. ಬಾಗಿಲು ಬಡಿಯುವ ಸದ್ದು ಕೇಳಲಿಲ್ಲ. ಇವಳೂ ಬಾಗಿಲು ತೆಗೆದು ಕರೆಯಲಿಲ್ಲ.

ಎಂದೊ ಒಂದಿನಎಂದಿನಂತೆ ಅವತ್ತೂ ಕೂಡ ಮಳೆಯಿತ್ತು.‌ ಎಂದಿನಂತೆ ಎಲ್ಲವೂ ಇತ್ತು. 
ಅವೇ ಪರಿಚಿತ ಹೆಜ್ಜೆ ಸದ್ದುಗಳು. ಆ ಸದ್ದುಗಳನ್ನೇ ಸುಖಿಸುತ್ತಾ ಕೂತಿದ್ದಳು. ಸುಖಿಸುತ್ತಲೇ‌ ಸಣ್ಣಗೆ ಮೈಮರೆತಳು. 
ದಡ್ ದಡ್.. ಬಾಗಿಲ ಬಡಿದ ಸದ್ದು. 
ಓಹ್.. ಎದೆ ಒಮ್ಮೆಲೆ ಝಲ್ ಎಂದಿತು.

ಹಾಸಿಗೆಯಿಂದ ಖುಷಿಯಿಂದ ಎದ್ದು ಬಾಗಿಲ ಕಡೆ ಓಡಿದಳು. ಬಾಗಿಲು ಬಡಿಯುವ ಸದ್ದು ನಿಂತಿರಲಿಲ್ಲ..
‘ಬಂದೆ ಬಂದೆ ಕಣೋ ತರುಣ್..’ ಅವಳ ದನಿಯಲ್ಲಿ ನೂರು ಸ್ವರಗಳ ಪುಳಕವಿತ್ತು. 

ಆ ಸಂಭ್ರಮ ಕೇಳಿ ಬಾಗಿಲ  ಹೊರಗಡೆ ನಿಂತಿದ್ದ ಅವಳನ್ನು ಕರೆದೊಯ್ಯಲು ಬಂದ ಕಪ್ಪು ಕೈಗಳು ಸಣ್ಣಗೆ ಬೆವರತೊಡದ್ದವು.. 

ಅವಳು ಬಾಗಿಲು ತೆರೆದಳು.. ಬಾಗಿಲು ತೆರೆದ ಆ ಸದ್ದು ಅವಳ ಮನೆಯ ತಿರುವಿನಲ್ಲಿ‌ ಆಗಷ್ಟೆ ನಡೆದು ಬರುತ್ತಿದ್ದ ತರುಣ್‍ನ ಕಿವಿಗೆ ಬಿತ್ತು..

‘ಅರೇ ನಾನು ಬಂದಿದ್ದು ಇವಳಿಗೇಗೆ ತಿಳೀತು. ನಾನು‌ ಇಷ್ಟು ದೂರ ಇರುವಾಗಲೇ ಬಾಗಿಲು ತೆರೆಯುತ್ತಿದ್ದಾಳೆ.  ಇವತ್ತೆ ಮೊದಲು ನಾನು ಅವಳ ಮನೆಗೆ ಹೋಗ್ತಾ ಇರೋದು. ಅದೂ ಕಷ್ಟಪಟ್ಟು ಅಡ್ರೆಸ್ ಹುಡುಕಿಕೊಂಡು. ಏನ್ ಅಂತಾಳೊ ಏನೊ..’ ಅನ್ನುತ್ತಾ ಅಂಜಿಕೆಯಿಂದ ಅವಳ ಮನೆಯ ಕ್ರಾಸ್ ಖಚಿತಪಡಿಸಿಕೊಂಡು ಆ ಕಡೆ ತಿರುಗಿದ. 
ಬಾಗಿಲು ಬಾಡಿದು ನಿಂತಿದ್ದ ಸಾವು ಅವಳನ್ನೊಮ್ಮೆ ಇವನನ್ನೊಮ್ಮೆ ನೋಡತೊಡಗಿತು. 

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: