ಶ್ಯಾಮಲಾ ಮಾಧವ ಅನುವಾದಿತ ಕಥೆ – ಸ್ಥೈರ್ಯ…

ಮೂಲ : ಆಂಟನ್ ಚೆಖಾವ್
ಕನ್ನಡಕ್ಕೆ : ಶ್ಯಾಮಲಾ ಮಾಧವ

ವಿನ್ಯಾಸಕಾರ ಡಿಮಿಟ್ರಿ ಅಸಿಪೊವಿಚ್ ವಾಕ್ಸಿನ್, ನಗರದಲ್ಲಿ ತಾನು ಭಾಗವಹಿಸಿದ್ದ ಪ್ರೇತಾತ್ಮವಿಜ್ಞಾನ ಕೂಟದಿಂದ ಹೊಚ್ಚ ಹೊಸ ಭಾವನೆಗಳೊಡನೆ ತನ್ನ ಮನೆಗೆ ಹಿಂದಿರುಗಿದ. ಉಡುಪು ಕಳಚಿ, ತನ್ನ ಮಂಚದ ಏಕಾಂತದಲ್ಲೊರಗಿ, ಅಂದಿನ ಸಭೆಯಲ್ಲಿ ಕಂಡು ಕೇಳಿದ್ದನ್ನೆಲ್ಲ ತನ್ನಲ್ಲೇ ಸ್ಮರಿಸ ತೊಡಗಿದ. ಮದಾಮ್ ವಾಕ್ಸಿನ್ ಮನೆಯಲ್ಲಿರಲಿಲ್ಲ. ಟ್ರಿನಿಟಿ ಲಾರಾಗೆ ಹೋಗಿದ್ದಳು.

ಅದೊಂದು ವಿಜ್ಞಾನ ಎನ್ನುವಂತಿರದಿದ್ದರೂ ಆ ಸಂಜೆಯೆಲ್ಲ ಭೀತಿಕಾರಕ ಸಂಭಾಷಣೆಯಲ್ಲಿ ಕಳೆದು ಹೋಗಿತ್ತು. ಎಳೆಯ ತರುಣಿಯೊಬ್ಬಳು ಇಂತಹುದೇ ಕಾರಣವೆಂದಿಲ್ಲದೆ, ಇತರರ ಮನದೊಳಗನ್ನು ಓದುವ ಬಗ್ಗೆ ಮಾತೆತ್ತಿದ್ದಳು. ವಿಷಯವು ಮನದಿಂದ ಪ್ರೇತಾತ್ಮಗಳ ಬಗ್ಗೆ, ಪ್ರೇತಾತ್ಮಗಳಿಂದ ಭೂತಗಳ ಬಗ್ಗೆ, ಭೂತಗಳಿಂದ ಜೀವಂತ ಹುಗಿಯಲ್ಪಟ್ಟವರ ಬಗ್ಗೆ ಹೊರಳಿಕೊಂಡಿತು. ಶವಪೆಟ್ಟಿಗೆಯಲ್ಲಿ ಮಗುಚಿಕೊಂಡ ಶವವೊಂದರ ಬಗ್ಗೆ ಭಯಂಕರ ಕಥಾನಕ ಒಬ್ಬನಿಂದ ಹೊರ ಬಂತು. ಸ್ವತಃ ವಾಕ್ಸಿನ್, ಪಿಂಗಾಣಿ ತಟ್ಟೆಯೊಂದನ್ನು ತರಿಸಿ, ಪ್ರೇತಾತ್ಮಗಳೊಡನೆ ಸಂಪರ್ಕ ಸಾಧಿಸುವ ಬಗೆಯನ್ನು ಅಲ್ಲಿ ಸೇರಿದ್ದ ಯುವತಿಯರಿಗೆ ತೋರಿಸಿಕೊಟ್ಟ. ಇತರ ಪ್ರೇತಾತ್ಮಗಳೊಡನೆ, ತನ್ನ ಅಂಕ್‌ಲ್ ಕ್ಲಾವ್‌ಡಿ ಮಿರಮೊವಿಚ್‌ನ ಆತ್ಮವನ್ನೂ ಕರೆಸಿ, ಮನದಲ್ಲೇ ತನ್ನ ಮನೆಯನ್ನು ತನ್ನ ಪತ್ನಿಯ ಹೆಸರಿಗೆ ಬರೆವ ಸಮಯ ಸನ್ನಿಹಿತವಾಗಿಲ್ಲವೇ ಎಂದು ವಿಚಾರಿಸಿದ. ಸರಿಯಾದ ಸಮಯದಲ್ಲಿ ಮಾಡಿದುದೆಲ್ಲವೂ ಸರಿಯಾಗಿರುತ್ತದೆಂದು ಅಂಕ್‌ಲ್ ಉತ್ತರಿಸಿದ.

`ಈ ಪ್ರಕೃತಿಯಲ್ಲಿ ರಹಸ್ಯಾತ್ಮಕವಾದುದು, ಭೀತಿಕಾರಕವಾದುದು ಬಹಳಷ್ಟು ಇದೆ. ಶವಗಳು ಭಯಕಾರಕವೇನಲ್ಲ; ನಮ್ಮ ಅರಿವಿಗೆ ನಿಲುಕದೆ ಇರುವುದೇ ಭಯ ಹುಟ್ಟಿಸುವಂಥವು, ಎಂದುಕೊಳ್ಳುತ್ತಾ ಹೊದಿಕೆಯೆಳದುಕೊಂಡ, ವಾಕ್ಸಿನ್.

ಗಂಟೆ ಒಂದು ಹೊಡೆಯಿತು. ಮಗ್ಗುಲು ಹೊರಳಿಕೊಂಡು, ಹೊದಿಕೆಯೆಡೆಯಿಂದ ದೀಪದ ನೀಲಿ ಬೆಳಕನ್ನು ಆತ ದಿಟ್ಟಿಸಿದ. ಹೊಯ್ದಾಡಿದ ದೀಪದ ಬೆಳಕು ಮಂಕಾಗಿದ್ದು, ಅಂಕ್‌ಲ್ ಕ್ಲಾವಿಡ್ ಮಿರನೊವಿಚ್‌ನ ದೊಡ್ಡದಾದ ಚಿತ್ರಪಟ ಹಾಗೂ ಎದುರು ಗೋಡೆಯ ಚೌಕಟ್ಟನ್ನು ಅಲ್ಪಮಾತ್ರ ಬೆಳಗಿತ್ತು.

ಈ ಮಂದ ಬೆಳಕಿನಲ್ಲಿ ಅಂಕಲ್‌ನ ಭೂತ ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ …. ಎಂಬ ಯೋಚನೆಯ ಬೆನ್ನಿಗೇ, ಇಲ್ಲ, ಅದು ಅಸಾಧ್ಯ, ಎಂದು ಕೊಂಡನವನು.

ಭೂತಪ್ರೇತವೆಲ್ಲ ಅಂಧವಿಶ್ವಾಸವಷ್ಟೇ, ಅಪಕ್ವ ಮನಗಳ ಯೋಚನಾ ಫಲವಷ್ಟೇ, ಎಂದಂದುಕೊಳ್ಳುತ್ತಾ, ವಾಕ್ಸಿನ್ ಮುಸುಕೆಳೆದುಕೊಂಡು ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿದ. ಅವನ ಕಲ್ಪನೆಯ ಕಣ್ಗಳಿಗೆ ಶವಪೆಟ್ಟಿಗೆಯಲ್ಲಿ ಹೊರಳಿಕೊಂಡ ಶವವೊಂದು, ಸತ್ತುಹೋಗಿದ್ದ ತನ್ನ ಆಂಟಿ, ನೇಣು ಬಿಗಿದುಕೊಂಡ ಕಾಮ್ರೇಡ್ ಒಬ್ಬಾತ ಹಾಗೂ ನೀರಲ್ಲಿ ಮುಳುಗಿ ಸತ್ತ ಹುಡುಗಿಯೊಬ್ಬಳ ಚಿತ್ರಗಳು ಕಾಣಿಸಿಕೊಂಡವು. ಈ ವಿಷಣ್ಣ

ಕಲ್ಪನೆಗಳನ್ನು ಹೊಡೆದೋಡಿಸಲು ಅವನು ಶಕ್ತಿಮೀರಿ ಯತ್ನಿಸಿದಷ್ಟೂ ಹೆಚ್ಚು ತೀಕ್ಷ್ಣವಾಗಿ ಈ ಚಿತ್ರಗಳು ಕಾಣಿಸಿಕೊಂಡು ಭಯಾನಕ ಅನಿಸಿದುವು. ಅವನು ಸಂಕಟ ಪಡಲಾರಂಭಿಸಿದ.

“ಥೂ! ನೀನೊಬ್ಬ ಪುಟ್ಟ ಹುಡುಗನಂತೆ ಭೀತನಾಗಿರುವೆ, ಮೂರ್ಖ!” ಅವನು ತನಗೆ ತಾನೇ ಹೇಳಿಕೊಂಡ. ಗೋಡೆಯ ಮೇಲಿನ ಗಡಿಯಾರ ಟಿಕ್…. ಟಿಕ್… ಟಿಕ್ ಎನ್ನುತ್ತಿತ್ತು. ಊರಿನ ಇಗರ್ಜಿಯ ಘಂಟೆ ಬಡಿಯಲಾರಂಭಿಸಿತು. ನಿಧಾನಗತಿಯ, ನಿರಾಶಾದಾಯಕ, ಆತ್ಮವನ್ನು

ಹೆಪ್ಪುಗಟ್ಟಿಸುವ ಘಂಟಾದನಿ! ವಾಕ್ಸಿನ್‌ನ ಬೆನ್ನಹುರಿಗುಂಟ ಚುರುಗುಟ್ಟಿತು. ಮೇಲಿನಿಂದ ಯಾರೋ ಭಾರವಾಗಿ ಉಸಿರಾಡುತ್ತಿರುವ ಭಾಸ! ಅಂಕಲ್ ಚಿತ್ರಪಟದ ಚೌಕಟ್ಟಿನಿಂದ ಹೊರಗಿಳಿದು ತನ್ನ ಮೇಲೆ ಬಾಗಿರುವಂತೆ! ತಾಳಿಕೊಳ್ಳಲಾಗದ ತಲ್ಲಣಕ್ಕೊಳಗಾಗಿ ಭೀತಿಯಿಂದ ಹಲ್ಲುಕಚ್ಚಿ ಉಸಿರು ಬಿಗಿ ಹಿಡಿದನವನು. ಕೊನೆಗೆ ಜೀರುಂಡೆಯೊಂದು ತೆರೆದ ಕಿಟಿಕಿಯಿಂದ ಹಾರುತ್ತಾ ಬಂದು, ತಲೆಯ ಬಳಿ ಗುಂಯ್ಗುಟ್ಟಿದಾಗ ಇನ್ನು ತಾಳಿಕೊಳ್ಳಲಾಗದೆ ಕರೆಗಂಟೆಯನ್ನು ಜಗ್ಗಿದ, ವಾಕ್ಸಿನ್.

ನಿಮಿಷ ಕಳೆದು, ಗವರ್ನೆಸ್‌ಳ ದನಿ ಬಾಗಿಲಿನಿಂದ ತೇಲಿ ಬಂತು. “ಡಿಮಿಟ್ರಿ ಅಸಿಪಿಚ್, ಏನು ಬೇಕಾಗಿದೆ?”

“ಓ, ನೀನೇ, ರೊಸಾಲಿಯಾ ಕಾರ್ಲೋವ್ನಾ?” ಸಂತಸದಿ೦ದ ವಾಕ್ಸಿನ್ ಉತ್ತರಿಸಿದ, “ನೀನು ತೊಂದರೆ ತೆಗೆದುಕೊಳ್ಳ ಬೇಕಾಗಿರಲಿಲ್ಲ. ಗಾವ್ರಿಲಾ – “

“ಗಾವ್ರಿಲಾಳನ್ನು ನೀವೇ ಪಟ್ಟಣಕ್ಕೆ ಕಳಿಸಿದ್ದಿರಿ. ಕ್ಲಾಫಿರಾ ಸಂಜೆಯೇ ಎಲ್ಲೋ ಹೋಗಿರುವಳು. ಮನೆಯಲ್ಲಿ ಯಾರೊಬ್ಬರೂ ಇಲ್ಲ; ಏನು ಬೇಕಾಗಿದೆ?”

“ನಾನು ಹೇಳಬೇಕೆಂದಿದ್ದುದು …. ಅದು …. ಬಾ, ಒಳಗೆ ಬಾ, ನಾಚಿಕೊಳ್ಳಬೇಡ; ಇಲ್ಲಿ ಕತ್ತಲಿದೆ…. “

ದುಂಡಗಿನ ದೇಹದ, ಗುಲಾಬಿ ಕದಪುಗಳ ರೊಸಾಲಿಯಾ ಕಾರ್ಲೋವ್ನಾ ಕೋಣೆಯೊಳಗೆ ಬಂದು ಕಾಯುತ್ತಿರುವಂತೆ ನಿಂತಳು.

“ಕುಳಿತುಕೋ. ಅದು ನೋಡು, ಹೀಗೆ ….” ಏನೆಂದು ಹೇಳಲಿ, ಎಂದುಕೊಳ್ಳುತ್ತಾ, ಕಣ್ಣ ಕೊನೆಯಿಂದ ಅಂಕಲ್‌ನ ಚಿತ್ರದತ್ತ ದಿಟ್ಟಿಸಿ, ಸಹಜತೆಗೆ ಮರಳುತ್ತಾ ಮುಂದುವರಿದ, “ನಾನು ನಿನ್ನೊಡನೆ ಕೇಳಬೇಕೆಂದಿದ್ದುದು ಇದೇ – ನಾಳೆ ಆಳು ಪಟ್ಟಣಕ್ಕೆ ಹೊರಡುವಾಗ ಕೆಲವು ಗುಂಡುಗಳನ್ನು ತರುವಂತೆ ಹೇಳಲು ಮರೆಯಬೇಡ. ಕುಳಿತುಕೊಳ್ಳಲ್ಲ!”

“ಗುಂಡುಗಳೇ? ಒಳ್ಳೆಯದು. ಬೇರೇನು ಬೇಕು?”

“ಬೇರೆ…. ನನಗೆ … ಬೇರೇನೂ ಬೇಡ; ಕುಳಿತು ಕೊಳ್ಳಲ್ಲ; ಬೇರೇನೆಂದು ನಾನು ಯೋಚಿಸುತ್ತೇನೆ.”

“ಹುಡುಗಿಯೊಬ್ಬಳು ಪುರುಷನೊಬ್ಬನ ಕೋಣೆಯಲ್ಲಿರುವುದು ಸರಿಯಲ್ಲ. ಡಿಮಿಟ್ರಿ ಅಸಿಪಿಚ್, ನೀವೊಬ್ಬ ಜೋಕರ್! ತಮಾಷೆ ಮನುಷ್ಯ! ನನಗೆ ತಿಳಿಯುತ್ತದೆ. ಗುಂಡುಗಳಿಗಾಗಿ ಯಾರೂ ಇತರರನ್ನು ರಾತ್ರಿ ಎಬ್ಬಿಸುವುದಿಲ್ಲ. … ನನಗೆ ಅರ್ಥವಾಗ್ತದೆ.”

ರೊಸಾಲಿಯಾ ಕಾರ್ಲೋವ್ನಾ ತಿರುಗಿ ಹೊರ ನಡೆದಳು. ಅವಳೊಡನೆ ಸಂಭಾಷಿಸಿದ್ದರಿAದ ಸಮಾಧಾನವೆನಿಸಿ, ತನ್ನ ಹೇಡಿತನಕ್ಕೆ ನಾಚಿ, ವಾಕ್ಸಿನ್ ಮುಸುಕು ಎಳೆದುಕೊಂಡು ಕಣ್ಮುಚ್ಚಿದ. ಸುಮಾರು ಹತ್ತು ನಿಮಿಷ ಅವನು ಸರಿಯಾಗಿದ್ದ. ಪುನಃ ಅದೇ ಕಲಸು ಮಲಸು ಚಿತ್ರ ಅವನ ತಲೆಯೊಳಗೆ ಹರಿದಾಡ ತೊಡಗಿತು. ಅತ್ತ ಉಗುಳಿ, ಕಣ್ತೆರೆಯದೆ ಕತ್ತಲೆಯಲ್ಲೇ ತಡಕಾಡಿ, ಬೆಂಕಿಕಡ್ಡಿ ಹಚ್ಚಿ ಮೇಣದ ಬತ್ತಿ ಉರಿಸಿದ. ಆದರೆ ಬೆಳಕಿನಿಂದಲೂ ಏನೂ ಪ್ರಯೋಜನವಾಗಲಿಲ್ಲ. ಅವನ ಭೀತ ಕಲ್ಪನೆಯಲ್ಲಿ ಕೋಣೆಯ ಮೂಲೆಯಿಂದ ಯಾರೋ ತನ್ನನ್ನು ದಿಟ್ಟಿಸುತ್ತಿರುವಂತೆಯೂ, ಅಂಕಲ್‌ನ ಕಣ್ಗಳು ಎವೆ ಪಿಳಿಕಿಸುತ್ತಿರುವಂತೆಯೂ ಅನಿಸತೊಡಗಿತು.

`ಪುನಃ ಅವಳನ್ನು ಕರೆವೆ. ಹಾಳಾದವ್ಳು! ನನಗೆ ಸೌಖ್ಯವಿಲ್ಲ, ಎನ್ನುವೆ. ಔಷಧ ಬೇಕೆನ್ನುವೆ, ಎಂದುಕೊಳ್ಳುತ್ತಾ ಕರೆಗಂಟೆ ಜಗ್ಗಿದ, ವಾಕ್ಸಿನ್. ಉತ್ತರ ಬರಲಿಲ್ಲ. ಪುನಃ ಕರೆಗಂಟೆ ಜಗ್ಗಿದಾಗ ಉತ್ತರವೋ ಎಂಬಂತೆ ಇಗರ್ಜಿಯ ಘಂಟಾನಾದ ಕೇಳಿಸಿತು. ಭೀತಿಯಿಂದ ಮೈಯೆಲ್ಲ ತಣ್ಣಗಾಗಿ, ಬರಿಗಾಲ್ಗಳು ಹಾಗೂ ಬರಿಯ ಒಳಚಡ್ಡಿಯಲ್ಲಿ ತನ್ನನ್ನೇ ಶಪಿಸಿಕೊಳ್ಳುತ್ತಾ ಗವರ್ನೆಸ್‌ಳ ಕೋಣೆಯತ್ತ ಓಟಕಿತ್ತ.

“ರೊಸಾಲಿಯಾ ಕಾರ್ಲೋವ್ನಾ”, ನಡುಗುವ ದನಿಯಲ್ಲಿ ಬಾಗಿಲು ಬಡಿಯುತ್ತಾ ಕರೆದ, ವಾಕ್ಸಿನ್. “ರೊಸಾಲಿಯಾ ಕಾರ್ಲೋವ್ನಾ, ನೀನು ನಿದ್ದೆ ಹೋಗಿರುವೆಯಾ? ನಾನು …. ನನಗೆ ಸೌಖ್ಯವಿಲ್ಲ. ಔಷಧ ಬೇಕಾಗಿದೆ.”

ಉತ್ತರ ಬರಲಿಲ್ಲ. ಸುತ್ತ ಮೌನ ತಾಂಡವವಾಡಿತು.

“ದಯವಿಟ್ಟು! ನಿನಗೆ ತಿಳಿಯುವುದಿಲ್ವೇ? ಯಾಕೆ ಈ ಹಿಂಜರಿತ, ನನಗೆ ತಿಳಿಯುತ್ತಿಲ್ಲ. ಅದೂ ಹೀಗೆ ನಾನು ಅಸೌಖ್ಯದಿಂದ ಬಳಲುವಾಗ, ಹೀಗೂ ನೀನು ವರ್ತಿಸುವುದೆಂದರೆ! ಅದೂ ಈ ವಯಸ್ಸಲ್ಲಿ!”

“ನಾನು ನಿಮ್ಮ ಪತ್ನಿಗೆ ಹೇಳುವೆ. ಒಬ್ಬ ಮರ್ಯಾದಸ್ತ ಹುಡುಗಿಯನ್ನು ಅವಳಷ್ಟಕ್ಕೇ ಶಾಂತಿಯಿAದಿರಲು ನೀವು ಬಿಡಲಾರಿರಿ. ನಾನು ಬ್ಯಾರನ್ ಆನ್‌ಡಿಗ್‌ನಲ್ಲಿದ್ದಾಗ, ಬ್ಯಾರನ್ ನನ್ನ ಕೋಣೆಯೊಳಗೆ ಬೆಂಕಿ ಪೆಟ್ಟಿಗೆಗಾಗಿ ಬರಬಯಸಿದಾಗ, ನಾನು ಅರಿತುಕೊಂಡೆ – ಬೆಂಕಿ ಪೆಟ್ಟಿಗೆ ಏಕೆಂದು ನಾನು ಕೂಡಲೇ ಬ್ಯಾರೊನೆಸ್‌ಗೆ ಹೇಳಿದೆ. ನಾನೊಬ್ಬ ಸಭ್ಯ ಹುಡುಗಿ ….. “

“ಓ, ನಿನ್ನ ಸಭ್ಯತೆಯಿಂದ ನನಗೇನಾಗಬೇಕು? ನನಗೆ ಸೌಖ್ಯವಿಲ್ಲ; ಔಷಧವನ್ನು ಕೇಳುತ್ತಿದ್ದೇನೆ. ತಿಳಿಯುವುದಿಲ್ವೇ ನಿನಗೆ? ನನಗೆ ಸೌಖ್ಯವಿಲ್ಲ.” “ನಿಮ್ಮ ಪತ್ನಿ ಒಬ್ಬ ಸಭ್ಯ ಸಜ್ಜನೆ. ನೀವವಳನ್ನು ಪ್ರೀತಿಸಬೇಕು. ಅವಳು ನಿಜಕ್ಕೂ ಶ್ರೇಷ್ಠಳು. ನಾನವಳ ವೈರಿ ಆಗಲಾರೆ,”

“ನೀನೊಬ್ಬ ಮೂರ್ಖಳು, ಅಷ್ಟೇ, ಒಬ್ಬ ಮೂರ್ಖಳು!”

ವಾಕ್ಸಿನ್ ಬಾಗಿಲ ದಾರಂದಕ್ಕೊರಗಿ ಕೈಗಳನ್ನು ಕಟ್ಟಿಕೊಂಡು ತನ್ನ ಭೀತಿ ಕಳೆಯುವುದನ್ನೇ ಕಾದ. ದೀಪದ ಮಿಣುಕು ಬೆಳಕಿನಲ್ಲಿ ಭಾವಚಿತ್ರದ ಕಟ್ಟಿನೊಳಗಿಂದ ತನ್ನನ್ನೇ ದಿಟ್ಟಿಸುತ್ತಿರುವ ಅಂಕಲ್‌ನ ಪಟವಿರುವ ತನ್ನ ಕೋಣೆಗೆ ಮರಳುವ ಶಕ್ತಿ ಅವನಲ್ಲಿರಲಿಲ್ಲ. ಆದರೆ ಹೀಗೆ ಬರಿಯ ಒಳ ಚಡ್ಡಿಯಲ್ಲಿ ಗವರ್ನೆಸ್‌ಳ ಬಾಗಿಲಲ್ಲಿ ನಿಂತಿರುವುದೂ ಅಹಿತಕರವಿತ್ತು. ಏನು ಮಾಡುವುದೀಗ? ಗಂಟೆ ಎರಡು ಬಡಿಯಿತು. ಆದರೂ ಭಯ ಅವನನ್ನು ಬಿಟ್ಟು ತೊಲಗಲಿಲ್ಲ. ಕಡಿಮೆಯಾಗಲೂ ಇಲ್ಲ. ಜಗಲಿಯಲ್ಲಿ ಕತ್ತಲಿತ್ತು. ಆ ಕತ್ತಲಿಂದ ಇನ್ನೂ ಕಪ್ಪಾದುದೇನೋ ಅವನತ್ತ ದಿಟ್ಟಿಸುತ್ತಿತ್ತು. ಬಾಗಿಲ ದಾರಂದದಲ್ಲಿ ಮುಖ ಹುದುಗಿಸಲೆತ್ನಿದ ವಾಕ್ಸಿನ್‌ಗೆ ಹಿಂದಿನಿಂದ ಯಾರೋ ತನ್ನ ಚಡ್ಡಿಯನ್ನೆಳೆದಂತೆ, ಭುಜವನ್ನು ಮುಟ್ಟಿದಂತೆ ಅನಿಸಿತು.

“ಅಯ್ಯೋ, ದೆವ್ವ! ರೊಸಾಲಿಯಾ ಕಾರ್ಲೋವ್ನಾ!”

ಉತ್ತರ ಬರಲಿಲ್ಲ. ಹಿಂಜರಿಯುತ್ತಲೇ ವಾಕ್ಸಿನ್ ಬಾಗಿಲು ನೂಕಿ ತೆರೆದು ಒಳಗಿಣುಕಿದ. ಆ ಸಭ್ಯ ಜರ್ಮನ್ ಮಹಿಳೆ ಶಾಂತಳಾಗಿ ನಿದ್ರಿಸಿದ್ದಳು. ರಾತ್ರಿ ದೀಪದಲ್ಲಿ ಅವಳ ದುಂಡನೆ ಸುಪುಷ್ಟ ದೇಹ ಕಾಣಿಸುತ್ತಿತ್ತು. ಒಳಹೊಕ್ಕ ವಾಕ್ಸಿನ್, ಬಾಗಿಲ ಬಳಿಯ ಮರದ ಪೇಠಿಯ ಮೇಲೆ ಕುಳಿತ. ಮಲಗಿದ್ದರೂ ಜೀವಂತವಾಗಿದ್ದ ಇನ್ನೊಂದು ಜೀವದದುರಿಗೆ ಅವನಿಗೆ ಹಿತವೆನಿಸಿತು.

“ಈ ಜರ್ಮನ್ ಹೆಣ್ಣುಕುದುರೆ ಮಲಗಿರಲಿ. ನಾನು ಅವಳ ಜೊತೆ ಸ್ವಲ್ಪ ಹೊತ್ತು ಕುಳಿತಿದ್ದು, ಮುಂಜಾವ ಎದ್ದು ಹೋಗುವೆ. ಈಗ ಬೇಗನೇ ಬೆಳಕಾಗುತ್ತದೆ”, ಎಂವನು ಅಂದುಕೊಂಡ.

ಬೆಳಗಾಗುವುದನ್ನೇ ಕಾಯುತ್ತಾ ತೋಳಲ್ಲಿ ತಲೆಯೊರಗಿಸಿ ಯೋಚಿಸ ತೊಡಗಿದನಾತ.

`ಆತಂಕ ಅಂದ್ರೆ ಏನೂಂತ ತಿಳಿಯಿತಲ್ಲ! ಪಕ್ವಮನದ ತರ್ಕಶಾಲಿ! ಆದರೂ….. ಗೊತ್ತಾಯ್ತಲ್ಲ! ನಾಚಿಕೆ ಅನಿಸುತ್ತದೆ!’

ಬೇಗನೇ ರೊಸಾಲಿಯಾ ಕಾರ್ಲೋವ್ನಾಳ ಶ್ರುತಿಬಧ್ಧ ಮೃದು ಉಸಿರಾಟವನ್ನು ಆಲಿಸುತ್ತಾ ಸಂಪೂರ್ಣ ಶಾಂತನಾದ ವಾಕ್ಸಿನ್.

ಬೆಳಿಗ್ಗೆ ಆರು ಗಂಟೆಗೆ ಟ್ರಿನಿಟಿ ಲಾರಾದಿಂದ ಹಿಂದಿರುಗಿದ ಶ್ರೀಮತಿ ವಾಕ್ಸಿನ್, ಮಲಗುವ ಕೋಣೆಯಲ್ಲಿ ತನ್ನ ಪತಿಯನ್ನು ಕಾಣದೆ, ಡ್ರೈವರ್‌ಗೆ ಕೊಡಬೇಕಾಗಿದ್ದ ಚಿಲ್ಲರೆಗಾಗಿ ಗವರ್ನೆಸ್‌ಳ ಕೋಣೆಯತ್ತ ನಡೆದಳು. ಕೋಣೆಯೊಳ ಹೊಕ್ಕಾಗ ಅವಳು ಕಂಡ ದೃಶ್ಯ ಹೀಗಿತ್ತು :

ಮಂಚದಲ್ಲಿ ಸೆಖೆಗೆ ಕೈಕಾಲ್ಗಳನ್ನು ಬಿಡುಬೀಸಾಗಿಸಿಕೊಂಡು ರೊಸಾಲಿಯಾ ಕಾರ್ಲೋವ್ನಾ ಮಲಗಿ ನಿದ್ರಿಸಿದ್ದಳು. ಹಾಗೂ ಅವಳಿಂದ ಕೆಲವಡಿಗಳ ದೂರದಲ್ಲಿ ಮರದ ಪೇಠಿಯ ಮೇಲೆ ಸುರುಳಿ ಸುತ್ತಿಕೊಂಡು ವಾಕ್ಸಿನ್ ಮಲಗಿ ಹಾಯಾಗಿ ನಿದ್ರಿಸಿದ್ದ. ಬರಿಗಾಲ್ಗಳಲ್ಲಿದ್ದ ಆತ ಒಳಚಡ್ಡಿ ಮಾತ್ರ ತೊಟ್ಟಿದ್ದ. ಹೆಂಡತಿ ಏನು ಹೇಳಿದಳು, ಮತ್ತು ನಿದ್ರೆ ತಿಳಿದೆದ್ದ ಗಂಡ ಎಷ್ಟು ಮೂರ್ಖನಾಗಿ ಕಂಡ ಎಂಬೆಲ್ಲ ವಿಷಯವನ್ನು ನಾನು ಓದುಗರ ಊಹೆಗೆ ಬಿಟ್ಟು ಬಿಡುತ್ತಿರುವೆ. ನಾನೋ ನಿರುಪಾಯ! ಲೇಖನಿ ಇಟ್ಟು ಬಿಡುವೆ, ಅಷ್ಟೇ!

‍ಲೇಖಕರು Admin

October 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: