ಸದಾಶಿವ್ ಸೊರಟೂರು ಕಥಾ ಅಂಕಣ- ಪುಣ್ಯಕೋಟಿಯ ಸಾವು… 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

42

ಕಾಲ ತಳ್ಳಿತು ನೋವಿನೊಳಗೆ 
ಕೊಂದ ಪಾಪವು ಎದೆಯ ಒಳಗೆ
ಸತತ ನವೆಯುತಾ ಪುಣ್ಯಕೋಟಿಯು
ಸದಾ ದುಃಖದಿ ಇರುತಿರೆ…‌

ಹುಲಿಯ ಮರಿಗಳು ಎಂಥೊ ಏನೊ
ಹಸಿದು ಬಳಲಿ ಹೇಗೆ ಕಾದವೊ 
ಅಪ್ಪ ಬರದೆ ದಾರಿ‌ ಕಾಣದೆ 
ಕಾಡು ಹುಡುಕಿ ಎಲ್ಲಿ ಅಲೆದವೊ… 

ಪುಣ್ಯಕೋಟಿಯ ಕಥೆಯಲ್ಲಿ ವ್ಯಾಘ್ರ ಸತ್ತು ಹೋದ ನಂತರ ಏನಾಗಿರಬಹುದೆಂದು ನನ್ನ ಕಲ್ಪನೆಯಲ್ಲಿ ಕವಿತೆಯ ಲಹರಿ ಹರಿಬಿಡುತ್ತಿದ್ದೆ. ನನ್ನ ಕಣ್ಣ‌ ಮುಂದೆ  ಹುಲಿಯ ಸಾತ್ವಿಕತೆ, ಪುಣ್ಯಕೋಟಿಯ ಸತ್ಯದ ನಿಷ್ಠುರತೆ ಕಾಣಿಸುತ್ತಿತ್ತು… ಪುಣ್ಯಕೋಟಿಯ ಮಾತಿನಿಂದ ಹುಲಿ ಬಿದ್ದು ಸತ್ತಿತು ಅನ್ನುವುದಕ್ಕಿಂತ ಸತ್ಯದ ಆಯುಧ ಹಿಡಿದು ಪುಣ್ಯಕೋಟಿ ಅದನ್ನು ಕೊಂದಿತು ಅನ್ನಬಹುದಾ? ಹುಲಿ, ಹುಲಿಯಂತೆ ವರ್ತಿಸಿದ್ದು ಸರಿ. ಈ ಗೋವು ಯಾಕೆ ಅತಿಯಾಗಿ ವರ್ತಿಸಿತು? ಸತ್ಯದ ಈ ಪುಣ್ಯಕೋಟಿಗೆ ಹುಲಿ ಸತ್ತ ಮೇಲೆ ಏನೂ ಅನಿಸಲಿಲ್ವ? ದುಃಖ ಆಗಲಿಲ್ವ? ನನ್ನಿಂದ ಇಲ್ಲೊಂದು ಹುಲಿ ಸತ್ತು ಹೋಯ್ತು ಅನ್ನುವ ಮರುಕುವೂ ಆಗಲಿಲ್ವ? ಎಂಬ ಪ್ರಶ್ನೆಗಳು ನನ್ನೊಳಗೆ ತುಂಬಾ ಇವೆ. ಅದಕ್ಕೆ ಕವಿತೆಯಲ್ಲಿ ಹೇಗಾದರೂ ಉತ್ತರ ಬಿಡಿಸಬೇಕು ಎನ್ನುವ ಪ್ರಯತ್ನದಲ್ಲಿದ್ದೆ.. 

ಹಿತವಾದ ರಿಂಗ್‍ಟೋನಿನೊಂದಿಗೆ ಮೊಬೈಲ್ ರಿಂಗಾಯ್ತು.. 
ಎತ್ತಿ ಕಿವಿಗಿಟ್ಟುಕೊಂಡೆ… 

‘ಆಶಿಕ್‍ನ ತಾಯಿಗೆ ತುಂಬಾ ಹುಷಾರಿಲ್ಲ ಕಣೋ… ಹೋಗಿ ಬರೋಣ… ‌ನಾವು ಜೊತೆ ಇದ್ರೆ ಅವನಿಗೆ ಧೈರ್ಯವೂ, ಸಮಾಧಾನವೂ ಆಗುತ್ತೆ…’ ಅಂದ ಗೆಳೆಯ ರೂಪಿ. ರೂಪೇಶ ನಮ್ಮ ಬಾಯಲ್ಲಿ ರೂಪಿ ಆಗಿದ್ದ. 

ನಾನು ಹೊರಡಲೇಬೇಕಿತ್ತು. ನನ್ನ ಕಣ್ಣಲ್ಲಿ ಪುಣ್ಯಕೋಟಿ ಇತ್ತು. ವರ್ಷದಿಂದ ಒಳಗೊಳಗೆ ಕೊರೆಯುತ್ತಿದ್ದ ಈ ವಿಚಾರಕ್ಕೆ ಒಂದು ಗತಿ ಕಾಣಿಸಬೇಕೆಂದು ಕೂತಿದ್ದೆ… ನನಗೆ ಅನಿಸಿದ್ದು ಇಷ್ಟೆ, ಪುಣ್ಯಕೋಟಿ ಹುಲಿಯನ್ನು ಕೊಂದು ಹಾಕಿತು. ಅದೊಂದು ಭಾವನಾತ್ಮಕ ಕೊಲೆ. ಅದನ್ನು ನಾನು ಕವಿತೆಯಲ್ಲಿ ಹೇಳಬೇಕಿತ್ತು. ಜನ ಅದನ್ನು ಒಪ್ಪುತ್ತಾರೊ ಇಲ್ಲವೊ ನನಗೆ ಗೊತ್ತಿಲ್ಲ. ಜನ ಒಪ್ಪುವಂತದ್ದು ಮಾತ್ರ ಬರೆಯಬೇಕು ಅಂತೇನಿಲ್ಲ. ಎಲ್ಲರೂ ಒಪ್ಪಿದ್ದು ಮಾತ್ರ ಸತ್ಯ ಅಂತಾನೂ ಅಲ್ಲ. ಬರಹಗಾರ ತನಗೆ ಅನಿಸಿದ್ದು ಬರೆಯುವುದೇ ಧರ್ಮ… 

ಮನೆಗೆ ಬಂದು ತನ್ನ ಕರುಗಳೊಂದಿಗೆ ನಿಜಕ್ಕೂ ಆ ಹಸು ನೆಮ್ಮದಿಯಾಗಿತ್ತಾ? ಸತ್ತ ಹೋದ ಹುಲಿಗೂ ಮರಿಗಳಿವೆ… ಅವುಗಳ ಪಾಡೇನು? ಅವುಗಳಿಗೆ ಊಟ ಕೊಡುವವರು ಯಾರು? ಅನ್ನುವ ಯೋಚನೆ ಈ ಪುಣ್ಯಕೋಟಿಗೆ ಬರಲೇ ಇಲ್ವ? ಅಷ್ಟು ಒಳ್ಳೆಯ ಈ ಪುಣ್ಯಕೋಟಿಗೆ ಬರದೆ ಇರಲು ಹೇಗೆ ಸಾಧ್ಯ? 

ಇಡೀ ಕವಿತೆಯಲ್ಲಿ ನಾನೇನು ಹೇಳಬೇಕು ಎಂಬುದು ಈಗ ಸ್ವಲ್ಪ ಸ್ಪಷ್ಟವಾಗತೊಡಗಿತ್ತು… ಆದರೆ ಆಶಿಕ್‍ನ ತಾಯಿಯ ಆರೋಗ್ಯದ ಸ್ಥಿತಿ ಕೇಳಿ ನಾನು ಇಲ್ಲಿ ಕೂತು ಕವಿತೆ ಬರೆಯುವುದು ಹೇಗೆ? 

ನೇರವಾಗಿ ಆಸ್ಪತ್ರೆಗೆ ತೆರಳಿದೆ. ರೂಪಿ ಅದಾಗಲೇ ಬಂದಿದ್ದ. ಆಶಿಕ್ ಕೂಡ ಇದ್ದ. ʻಏನಾಯ್ತೊ…?ʼ ಅಂತ ಕೇಳಿದೆ.. 

‘ಏನು ಅಂತ ಗೊತ್ತಿಲ್ಲ… ತುಂಬಾ ದಿನ ಆಯ್ತು. ಎರಡ್ಮೂರು ವರ್ಷವೇ ಆಯ್ತು ಅನ್ನಿ. ಅವರ ಪಾಡಿಗೆ ಅವರು ಸುಮ್ಮನೆ ಇರ್ತಾ ಇದ್ರು. ಯಾರೊಂದಿಗೂ ಮಾತಿಲ್ಲ. ಬರೀ ಮೌನ. ನಾನು ತುಂಬಾ ಸರಿ ಈ ವಿಚಾರದ ಬಗ್ಗೆ ಕೇಳಿದೆ. ಅವರು ಏನೂ ಹೇಳಲಿಲ್ಲ… ಅಪ್ಪ ಹೋದ ಮೇಲೂ ಅವರು ಇಷ್ಟು ನೊಂದುಕೊಂಡಂತೆ ಇರಲಿಲ್ಲ ಕಣೋ…’ ಅಂತ ತುಂಬಾ ಸಂಕಟಪಟ್ಟುಕೊಂಡು ಹೇಳಿದ. 

ಅವನ ಹೆಗಲ ಮೇಲೆ ಕೈ ಹಾಕಿದೆ. ಸಮಾಧಾನ ಮಾಡುವುದು ನನಗೆ ಬರುವುದಿಲ್ಲ. ಅಷ್ಟಕ್ಕೂ ಸಮಾಧಾನದ ಅವಶ್ಯಕತೆ ಇವನಿಗಿಂತ ಇವನ ಅಮ್ಮನಿಗಿದೆ ಅನಿಸಿತು… ಆದರೆ ಅವನ ಅಮ್ಮ ನಿಜಕ್ಕೂ ಅನುಭವಿಸುತ್ತಿರುವುದೇನು? ಅದನ್ನು ತಿಳಿದುಕೊಂಡರೆ ಖಂಡಿತ ಅದಕ್ಕೊಂದು ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ ಅದನ್ನು ತಿಳಿಯುವುದು ಅಷ್ಟು ಸಲಭವಾ? ಗೊತ್ತಿಲ್ಲ… ನೋಡುವಾ… ಎಂದು ಯೋಚಿಸಿದೆ. ರೂಪಿ ಅವನಿಗೆ ಸಮಾಧಾನ ಮಾಡತೊಡಗಿದ. 

ಅಂಥಹ ಆಸ್ಪತ್ರೆಯ ಗಿಜಗುಡುವ ಸದ್ದಿನಲ್ಲೂ ನನಗೆ ಪುಣ್ಯಕೋಟಿ ಕಾಡತೊಡಗಿತು… ಒಂದಷ್ಟು ಬರೆದಿಟ್ಟು ಬಂದಿದ್ದೆ. ಅದನ್ನು ಹೇಗೆ ಮುಂದುವರೆಸುವುದೆಂದು  ಯೋಚಿಸುತ್ತಾ ಕೂತೆ. ಅತ್ತ ಆಶಿಕ್‍ನ ತಾಯಿಗೆ ಚಿಕಿತ್ಸೆ ನಡೆಯುತ್ತಿತ್ತು… 

ಅಷ್ಟೊಂದು ಒಳ್ಳೆಯ ಮನಸಿರುವವರು ಮಾತ್ರ ಸತ್ಯಕ್ಕೆ ಬದ್ಧರಾಗಿರಲು ಸಾಧ್ಯ. ಹುಲಿ ಬೇಟೆಯಾಡಬೇಕು, ಮಾಂಸ ತಿನ್ನಬೇಕು… ಅದೇ ಅದರ ಜೀವನ.‌ ಗೋವನ್ನು ಅದು ಅದೇ ದೃಷ್ಟಿಯಲ್ಲಿ ನೋಡಿ ಅಡ್ಡಗಟ್ಟಿದೆ. ಈ ಗೋವು ಸುಮ್ಮನೆ ಒಪ್ಪಬೇಕಿತ್ತು. ಒಂದು ನಿಮಿಷ ಮೊಲೆ ಕೊಟ್ಟು ಬರುವೆ ಎಂದು ಹೇಳುವ  ಅವಶ್ಯಕತೆ ಏನಿತ್ತು? ಒಂದು ನಿಮಿಷದ ಹಾಲಿಗೆ ಆ ಕರು ಜೀವನಪೂರ್ತಿ ಊಟ ಮಾಡದೆ ಬದುಕಲು ಸಾಧ್ಯವಾ? ತುಂಬಾ ಸತ್ಯವುಳ್ಳ ಈ ಗೋವು ಆ ಹುಲಿಯ ಮಾಂಸ ತಿನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಹುಲಿಗೆ ತಡವಾದರೆ ಅದರ ಮರಿಗಳು ಹಸಿಯಬಹುದು ಎಂದು ಅಂದಾಜಿಸಬೇಕಿತ್ತು… ಓಹ್ ನನ್ನೊಳಗೆ ಯೋಚನೆಯ ಅಲೆಗಳೆ ಏಳತೊಡಗಿದ್ದವು… 

ಆಶಿಕ್‍ಗೆ ಡಾಕ್ಟರ್ ಕರೆದು, ʻನಿಮ್ಮ ತಾಯಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಗುಣವಾಗಬಹುದು… ಬಿ ಹೋಪ್ಫುಲ್‌ʼ ಅಂದು ಹೋಗಿದ್ದರು.‌ ಅವನ ಮುಖದಲ್ಲಿ ಒಂದು ನಿರಾಳತೆ ಕಾಣಿಸಿತು. ʻಈ ತರಹ ತುಂಬಾ ಸರಿ ಆಸ್ಪತ್ರೆಗೆ ಕರೆತಂದಿದ್ದೀನಿ… ಹೀಗೆ ಬರೋದು ಹಾಗೆ ಹೋಗೋದು ಆಗಿದೆ. ಅವರು ಪೂರ್ತಿ ಹುಷಾರಾಗುತ್ತಿಲ್ಲ ಕಣೋ…ʼ ಅಂತ ಅಲವತ್ತುಕೊಂಡ.‌ ಸಮಸ್ಯೆಯ ಮೂಲ ತಿಳಿಯುವವರೆಗೂ ಸಮಸ್ಯೆ ಸಮಸ್ಯೆಯಾಗಿಯೇ ಇರುತ್ತದೆ… ಎಂಬುದನ್ನು ಅವನಿಗೆ ತಿಳಿ ಹೇಳಿದೆ.‌ ಅವನಿಗೂ ಅಮ್ಮನ ಈ ತೊಳಲಾಟಕ್ಕೆ ಕಾರಣ ಏನು ಎಂಬುದನ್ನು ಊಹಿಸಿಲು ಕೂಡ ಸಾಧ್ಯವಾಗಿರಲಿಲ್ಲ.. 

ತಡರಾತ್ರಿಯವರೆಗೂ ಅವನೊಂದಿಗೆ ಇದ್ದು ನಂತರ ಮನೆಗೆ ಬಂದು ಮಲಗಿದೆ. ಸರಿಯಾಗಿ ನಿದ್ದೆ ಸುಳಿಯಲೇ ಇಲ್ಲ. ಜಾವದಲ್ಲಿ ಎದ್ದು ಕೂತೆ. ಕವಿತೆಯ ಬಗ್ಗೆ ಯೋಚಿಸತೊಡಗಿದೆ… ಪುಣ್ಯಕೋಟಿಯು ಹುಲಿ ಸತ್ತ ದೇಹವನ್ನು ಅಲ್ಲೆ ಬಿಟ್ಟು ಬಂದ ಮೇಲೆ ಅದು ಎಂದಿನಂತೆ ಇತ್ತಾ? ಅಥವಾ ಅದಕ್ಕೆ ಏನಾದ್ರೂ ಚಿಂತೆ ಬಾಧಿಸುತ್ತಿತ್ತಾ? ಅಷ್ಟೊಂದು ಸೂಕ್ಷ್ಮ ಮನಸಿನ, ಸತ್ಯಕ್ಕೆ ತಪ್ಪದ, ಕರುಗೆ ಮೊಲೆ ಕೊಟ್ಟು ಬರುವ ನಿಷ್ಠೆಯುಳ್ಳ, ತುಂಬಾ ಸಾಧುವಿನಂತಹ ಆ ಗೋವು ತನ್ನ ಕಣ್ಣ ಮುಂದೆಯೇ ತಾನು ಆಡಿದ ಒಂದು ಮಾತಿಗೆ ಹುಲಿ ಆತ್ಮಹತ್ಯೆ ಮಾಡಿಕೊಳ್ತು‌ ಅಂದ್ರೆ  ಅದು ಗೋವಿನ ಮನಸ್ಸನ್ನು  ಕಲಕಲಿಲ್ಲವೇ? 

ತಾನು ಹೋಗದೆ ಇದ್ರೆ ಆ ಹುಲಿ ಉಳಿಯುತ್ತಿತ್ತು. ಸಾಯಿಸುವ ಸತ್ಯಕ್ಕಿಂತ ಜೀವ ಉಳಿಸುವ ಸುಳ್ಳೆ ಶ್ರೇಷ್ಠ ಅನಿಸುತ್ತೆ ನನಗೆ. ಈ ಬದುಕಿನಲ್ಲಿ ಜೀವಕ್ಕಿಂತ ಪ್ರಮುಖವಾದದ್ದು ಯಾವುದಿದೆ? ಜೀವವೇ ಶ್ರೇಷ್ಠ ಅಲ್ಲವೇ? ಜೀವ ಇದ್ದರೆ ತಾನೆ ಎಲ್ಲಾ? ಅದೇ ಇಲ್ಲ ಅಂದ್ರೆ ಈ ಸತ್ಯ, ನೀತಿ, ಪ್ರೀತಿ ಇವೆಲ್ಲಾ ಹೇಗೆ ಸಾಧ್ಯ?

ಸರಿ, ಹುಲಿಯ ಸಾವಿನಲ್ಲಿ ಗೋವಿನ ಪಾತ್ರವಿಲ್ಲ ಅಂದುಕೊಳ್ಳೋಣ… ಆದರೆ ಒಂದು ಆತ್ಮಹತ್ಯೆ ನೋಡಿದ ಆ ಗೋವು ಹೇಗೆ ಅದನ್ನು ಸುಲಭವಾಗಿ ತೆಗೆದುಕೊಳ್ತು…? ಇಂತಹ ಯೋಚನೆಗಳ ಮಂಥನದಿಂದ ನನಗೆ ನನ್ನ ಕವಿತೆಯ ಮುಂದಿನ ದಾರಿ ಸಲೀಸಾಗುವ ಲಕ್ಷಣ ಕಾಣಿಸತೊಡಗಿತು.. 

ಅವತ್ತು ಇಡೀ ದಿನ ಏನ್ನನ್ನೂ ಬರೆಯದೆ… ಪುಣ್ಯಕೋಟಿ ಬಗ್ಗೆ ಏನ್ನನ್ನೂ ಯೋಚಿಸದೆ ಕಳೆದೆ. ಸಂಜೆಗೆ ಆಶಿಕ್ ಫೋನ್ ಮಾಡಿದ್ದ. ʻಅಮ್ಮ ಗೆಲುವಾಗಿದ್ದಾರೆ. ಡಾಕ್ಟರ್ ಡೋಂಟ್ ವರಿ… ಅಂಥಹ ಕಾಯಿಲೆಯೇನು‌ ಇಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅದಕ್ಕೆ ಹಾಗೆಲ್ಲಾ ಆಗ್ತಿದೆ. ಡಿಸ್ಚಾರ್ಜ್ ಮಾಡ್ತೀನಿ… ಕರೆದುಕೊಂಡು ಹೋಗಿ. ಅವರೊಂದಿಗೆ ಇರಿ. ಅವರಿಗೆ ಕಂಫರ್ಟ್ ಕೊಡಿ… ಅಂದಿದ್ದಾರೆʼ ಅಂದ. ನನಗೂ ಸಮಾಧಾನ ಆಯ್ತು.‌ 

ಅಂದು ರಾತ್ರಿ ಕೂಡ ನಾನು ಕವಿತೆಯ ತಂಟೆಗೆ ಹೋಗಲಿಲ್ಲ. ಊಟ ಮಾಡಿ ಬೇಗನೆ ಮಲಗಿಬಿಟ್ಟೆ… 

ಮುಂಜಾನೆ ಆರಕ್ಕೆ ಮೊಬೈಲ್ ರಿಂಗಾಗುವ ಸದ್ದಿಗೆ ಎಚ್ಚರವಾಯಿತು. ಮೊಬೈಲ್ ನೋಡಿದೆ. ರೂಪಿಯ ಕರೆ ಬರುತ್ತಿತ್ತು.. ಮಲಗಿಯೆ ಮಾತಾಡತೊಡಗಿದೆ. 

‘ಹೇ, ಆಶಿಕ್ ಅವರ ಅಮ್ಮ ಸತ್ತು ಹೋದ್ರಂತೆ ಕಣೋ… ರೆಡಿಯಾಗು ಮನೆ ಹತ್ರ ಬರ್ತೀನಿ. ಹೋಗೋಣ…’ ಅಂತ ತುಂಬಾ ಗಾಬರಿಯಲ್ಲಿ ಹೇಳ್ತಾ ಇದ್ದೆ…

‘ಅಲ್ಲ ಕಣೋ… ನಿನ್ನೆ ಸಂಜೆ ತಾನೇ ಆಸ್ಪತ್ರೆಯಿಂದ ಬಂದಿದ್ದಾರೆ…’ ಅಂತ ನಾನು ಏನೇನೊ ಮಾತಾಡಲು‌ ಹೋದೆ. ʻಅದೆಲ್ಲಾ ಅಮೇಲೆ ಮಾತಾಡೋಣ.‌ ನಾನು ಹೊರಡ್ತಾ ಇದೀನಿ.‌ ನೀನು ರೆಡಿಯಾಗು…’ ಅಂದು ಫೋನಿಟ್ಟ. 
ನಾವು ವೇಗವಾಗಿ ಆಶಿಕ್ ಮನೆ ಸೇರಿದೆವು…

ಹೊರಗೆ ಪೊಲೀಸ್‌ ಇದ್ದರು. ಆಶಿಕ್ ಅಳುತ್ತಾ ನಿಂತಿದ್ದ.‌ ಜನ ಕೂಡ ಸೇರಿದ್ದರು.‌ ನಾವು ಒಳಗೆ ಹೋಗಿ ನೋಡಿದೆವು. ಆಶಿಕ್‍ನ ಅಮ್ಮ ಫ್ಯಾನಿಗೆ ನೇಣು ಬಿಗಿದುಕೊಂಡು, ಜೀವ ಕಳೆದುಕೊಂಡು ನೇತಾಡುತ್ತಿದ್ದರು. ಅದನ್ನು ನೋಡಿ ನಮಗೆ ಮೂರ್ಛೆ ಹೋಗುವುದೊಂದೆ ಬಾಕಿ. ಏನು? ಯಾಕೆ? ನಮಗೆ ಯಾವುದೂ ಗೊತ್ತಾಗಲ್ಲಿಲ್ಲ… 

ಪೊಲೀಸರು ಬಂದರು. ರೂಮಿನ ತಲಾಶ್ ಮಾಡಿದರು. ಏನನ್ನೊ ಎತ್ತಿಕೊಂಡರು. ಹೇಳಿಕೆ ಪಡೆದರು. ದೇಹ ಪೋಸ್ಟ್ಮಾರ್ಟಿಂಗೆ ಕಳುಹಿಸಿದರು… ‌ಎಲ್ಲಾ ಮುಗಿದ ಮೇಲೆ ಅಶಿಕ್ ಅವರ ಅಮ್ಮ ಬರೆದಿಟ್ಟು ಹೋದ ಡೆತ್‌ನೋಟನ್ನು ಆಶಿಕ್‌ಗೆ ಕೊಟ್ಟರು… ಆಶಿಕ್ ಓದಿ ಬಿಕ್ಕಿ ಬಿಕ್ಕಿ ಅತ್ತ… ಡೆತ್‌ನೋಟ್ ಓದುವ ಕುತೂಹಲ ಇಲ್ಲದಿದ್ದರೂ ಹಾಗೆಯೇ ಎತ್ತಿಕೊಂಡು ಸುಮ್ಮನೆ ಓದತೊಡಗಿದೆ… 

‘ಕ್ಷಮಿಸು ಮಗಾ… ನಾನೊಂದು ಯಾರಿಗೂ ಹೇಳಲಾಗದ ಪಾಪ ಪ್ರಜ್ಞೆಯಲ್ಲಿ ಬಳಲುತ್ತಿದ್ದೆ. ಅದು ಎಂದೂ ಹೊರಬರಲಾಗದ ದಾರಿ. ನಾನು ಯಾರಿಗೊ ಕೊಟ್ಟ ಮಾತು… ತುಂಬಾ ಒಳ್ಳೆಯತನದ ಅಮಲು‌ ಕೂಡ ಇನ್ನೊಬ್ಬರ ಪ್ರಾಣ ತೆಗೆಯುತ್ತೆ ಅಂತ ಗೊತ್ತಿರಲಿಲ್ಲ… ‌ಇಲ್ಲಿ ಎಲ್ಲವನ್ನೂ ಹೇಳಲಾಗದು. ನನ್ನಿಂದ ಬೇರೆಯವರ ಮಕ್ಕಳು ಅಪ್ಪನಿಲ್ಲದಂತಾದರು; ನನ್ನ ಮಗನು ಅಮ್ಮ ಇಲ್ಲದಂತಾಗಬೇಕು. ಅದೇ ಸರಿ. ಅದನ್ನು ಸರಿ ಮಾಡಲು ಈ ನಿರ್ಧಾರ… ನಿನಗೆ ಒಳ್ಳೆಯದಾಗಲಿ…’ 

ಇಡೀ ಪತ್ರ ಒಗಟು ಒಗಟಾಗಿತ್ತು. ಒಗಟು ಬಿಡಿಸುವುದೂ ನನಗೆ ಬೇಕಿರಲಿಲ್ಲ. ಆದರೆ ಆಶಿಕ್‍ನನ್ನು ನೆನೆದು ಮನಸು ಖಿನ್ನವಾಗುತ್ತಿತ್ತು. ಅವನಿಗೆ ಧೈರ್ಯ ಹೇಳಿ… ಎಂದಿಗೂ ಅವನ ಜೊತೆ ಇರುವ ಭರವಸೆ ನೀಡಿ ಮನೆಗೆ ಬಂದೆ… 

ನನ್ನ‌ ಮನಸು ತುಂಬಾ ನೋವಿನಲ್ಲಿತ್ತು… ಏನೊ ಅಸಮಾಧಾನ. ಹಳಹಳಿಕೆ. ರಾತ್ರಿ ಇಡೀ‌ ನಿದ್ದೆ ಬರಲಿಲ್ಲ. ಪುಣ್ಯಕೋಟಿಯ‌ ಕಥೆಗೆ ಒಂದು ಅಂತ್ಯ ಕಾಣಿಸಬೇಕಿತ್ತು…‌

ಕಣ್ಣಮುಂದೆಯೇ ನಡೆಯುವ ಸಾವು… ನಾವು ಅದರಲ್ಲಿ ಹೇಗೊ ಪಾತ್ರವಾಗಿರುವ ಸಾವು… ಅದು ಬದುಕಿರುವವರನ್ನು ಕಾಡದೆ ಸುಮ್ಮನೆ ಬಿಡುತ್ತದಾ? ಪುಣ್ಯಕೋಟಿಯನ್ನು ಹುಲಿಯ ಸಾವು ಕಾಡದೆ ಬಿಡಲು ಸಾಧ್ಯವೇ? 

ಪುಣ್ಯಕೋಟಿ ಅದೆಷ್ಟು ತೊಳಲಾಡಿರಬಹುದು. ಪಾಪಪ್ರಜ್ಞೆ ಹೊತ್ತುಕೊಂಡು ಹೇಗೆ ಒದ್ದಾಡಿರಬಹುದು? ಹುಲಿಯ ಮರಿಗಳನ್ನು ನೆನೆದು ಎಷ್ಟು ಸಂಕಟಪಟ್ಟಿರಬಹುದು… ತಾನು ಮಾಡಿದ ತಪ್ಪಿಗೆ ತನಗೇ ಶಿಕ್ಷೆ ಕೊಟ್ಟುಕೊಳ್ಳಲು ಎಷ್ಟು ಹವಣಿಸಿರಬಹುದು? ನೋವಿನಲ್ಲಿ ಎಷ್ಟು ನವೆದು ಹೋಗಿರಬಹುದು…? ಖಿನ್ನತೆ ಪುಣ್ಯಕೋಟಿಯನ್ನು ಸುಮ್ಮನೆ ಬಿಡಲು ಸಾಧ್ಯವೇ…

ಪುಣ್ಯಕೋಟಿಯನ್ನು ಕವಿತೆಯಲ್ಲಿ ಸಾಯಿಸಬೇಕು… ಅದೇ ಸರಿಯಾದ ಕಥೆ… ಸುಮ್ಮನೆ ಸುಳ್ಳು ಸುಳ್ಳು ಬರೆದು ಜನರನ್ನು ನಂಬಿಸಬಾರದು…

ಅದು ಪುಣ್ಯಕೋಟಿಯ ಆತ್ಮಹತ್ಯೆ… 

ಕವಿತೆಯ ಕೊನೆಯ ಸಾಲುಗಳನ್ನು ಹೀಗೆ ಬರೆದೆ…‌

ಹುಲಿಯ ಸಾವನು ಮನದಿ ನೆನೆದು
ಹೊತ್ತ ಪಾಪವ ತೊಳೆಯಲೆಂದು
ವ್ಯಾಘ್ರ ಗುಹೆಯ ಮೇಲೆ ನಡೆದು
ಛಂಗನೇ ಹಾರಿ ಪುಣ್ಯಕೋಟಿ ಪ್ರಾಣವ ಬಿಟ್ಟಿತು… 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: