ಸದಾಶಿವ್ ಸೊರಟೂರು ಕಥಾ ಅಂಕಣ – ಅವ್ವ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

24

ಫಿನಾಯಿಲ್ ವಾಸನೆ ಗಾಢವಾಗಿತ್ತು. ಕೈಯನ್ನು ಮೂಗಿನ ಬಳಿ ತಂದುಕೊಂಡರೆ ಮತ್ತಷ್ಟು ಗಾಢವಾಗುತ್ತಿತ್ತೇನೋ! ಆದರೆ ಅವರು ಆ ಪ್ರಯತ್ನವನ್ನು ಮಾಡಲಿಲ್ಲ. ಸದ್ಯಕ್ಕೆ ಯಾವ ಫಿನಾಯಿಲ್ ಕೂಡ ಅವರ ಬದುಕನ್ನು ಸ್ವಚ್ಛವಾಗಿ ತೊಳೆಯಲಾರದೇನೋ ಅನ್ನುವಂತೆ ಅವರು ಕಾಣುತ್ತಿದ್ದರು. ಇವತ್ತಿನ ಹಗಲು ಆಗಲೇ ಅವರ ನಿತ್ಯದ ಅವಮಾನಗಳನ್ನು ವಸೂಲಿ ಮಾಡಿ ಹೋಗಿತ್ತು. ಹೋಟೆಲನ್ನು ಫಿನಾಯಿಲ್ ನಿಂದ ಉಜ್ಜಿ ಕೂತಿದ್ದರು. ಇವು ಅವರ ಪಾಲಿನ ನಿತ್ಯ ರಾತ್ರಿಗಳು.

ಅವರು ಅಷ್ಟಿಷ್ಟೇ ವಯಸ್ಸಿನ ಅಂತರದ ನಾಲ್ಕು ಜನ ಹುಡುಗರು. ಅವರದು ಮೊದಲ ಸೇವಿಂಗ್ ಗೆ ಬಂದ ವಯಸ್ಸು. ಅದರಲ್ಲೊಬ್ಬ ಬೆಳಗ್ಗೆಯಷ್ಟೇ ಲೋಟ ತೊಳೆಯಲು ಬಂದು ಸೇರಿಕೊಂಡವನು. ನಾಲ್ಕು ಜನ ಹುಡುಗರನ್ನು ನೋಡಿದರೆ ಈ ಹೊಸಬನೆ ಕಿರಿಯವನಂತೆ ಕಾಣುತ್ತಾನೆ. ಅಂಗಿ ಪ್ಯಾಂಟು ನಿನ್ನೆಯಷ್ಟೇ ತೊಟ್ಟಂತೆ ಕಾಣುತ್ತವೆ. ಆ ಗುಂಪಿನ ಹಿರಿಯ ಲಗುಬಗೆಯಿಂದ ಒಂದು ಈರುಳ್ಳಿ ಚೀಲ ಎತ್ತಿಕೊಂಡು ಬಂದು ಹಾಸಿ ಮಲಗದೆ ಹಾಗೆ ಕೂತಿದ್ದಾನೆ. ಮಲಗಲಿಕ್ಕೆ ಮನಸ್ಸು ಬಾರದು. ಎರಡನೆಯವನು ದೂರ ಕೂತು ಸಿಗರೇಟ್ ಕುಡಿದು ಕುಡಿದು ಸುರಳಿ ಬಿಡುತ್ತಿದ್ದಾನೆ. ಮೂರನೆಯವನು ಕಿರಿಯವನ ಹತ್ತಿರವೇ ಕುಳಿತು ಸ್ವಗತಕ್ಕೆ ತೆರೆದುಕೊಂಡಿದ್ದಾನೆ.

ಆ ಕಿರಿ ಹುಡುಗನ ನೋಟಗಳು ಕಿಟಕಿಯಿಂದ ತೂರಿ ಹೊರಬಂದಿವೆ. ಅರ್ಧ ಚಂದಿರನ ಕುಟುಕು ಬೆಳಕು ಸೋರುತ್ತಿರುವಾಗ ಮರದಿಂದ ಚಾಚಿದ ಎಳೆಯ ಕೊಂಬೆಯೊಂದು ಚಮಚದಂತೆ ಚಾಚಿ ಸೋರುವುದನ್ನು ಹಿಡಿಯುವ ಪ್ರಯತ್ನ ಮಾಡುತಿದೆ. ಹುಡುಗ ಅದನ್ನೇ ನೋಡುತ್ತಿದ್ದಾನೆ ಅದನ್ನೇ ನೆವ ಮಾಡಿಕೊಂಡು ಇನ್ನೇನನ್ನೊ ಯೋಚಿಸುತ್ತಿದ್ದಾನೆ.

“ಏ, ಬಾರೋ ಇಲ್ಲಿ ಈ ಹುಡ್ಗನ ನಿಮ್ಜೊತೆ ಸೇರ್ಸಿಕೊಳ್ಳಿ. ಲೋಟ ತೊಳೆಯೋಕೆ ಕೊಡಿ” ಅಂತ ಆಜ್ಞೆ ಆದಾಗ ತುಂಬಾ ದಿನದ ಆತ್ಮೀಯನಂತೆ ಈ ಎರಡನೆಯವ ಕಿರಿಯನ ಹೆಗಲ ಮೇಲೆ ಕೈ ಹಾಕಿ “ಬಾರೋ…” ಅಂತ ಒಳಗೆ ಕರೆದುಕೊಂಡು ಬಂದಿದ್ದ. ಬಡ ಹೃದಯಗಳು ಬೇಗ ಮಿಡಿಯುತ್ತವೆ. ಮೂರು ಜನರೂ ಬಂದು ಅವನ ಸುತ್ತ ನಿಂತು ತಮ್ಮ ಬಹುದಿನದ ಆತ್ಮೀಯ ಗೆಳೆಯನಂತೆ ಮಾತನಾಡಿಸಿದರು ‘ಬಾ ಏನೂ ಯೋಚಿಸಬೇಡ ನಾವಿದ್ದೀವಿ..’ ಅದನಷ್ಟೇ ಹೇಳಿ ತಿನ್ನಲು ಕೊಟ್ಟು ‘ನಿಂಗೆ ಆದಾಗ ಎದ್ದು ಕೆಲಸಕ್ಕೆ ಬಾ’ ಅಂತ ಹೇಳಿ ಅವರೆಲ್ಲಾ ಕೆಲಸದಲ್ಲಿ ಮುಳುಗಿಬಿಟ್ಟರು. ನಮ್ಮಗಳ ಮಧ್ಯೆ ಇವನೇಕೆ ಎಂದು ಯೋಚಿಸಲಿಲ್ಲ.

ಸಂಜೆಯಷ್ಟೇ ಬಿಕ್ಕಿ ಬಿಕ್ಕಿ ಹತ್ತಿದ್ದ ಆ ಕಿರಿಯ ಹುಡುಗ ಮೌನಿಯಾಗಿದ್ದ. ಊಟವನ್ನೂ ಮಾಡದೆ ಕೂತಿದ್ದ. ಅವನ ಮನಸ್ಸಿನಲ್ಲಿ ಏನೆಲ್ಲಾ ನಡೆದಿರಬಹುದೆಂದು ಉಳಿದ ಮೂವರಿಗೆ ಅಂದಾಜಿಸಲು ಬಹಳ ಕಷ್ಟವೇನು ಆಗಿರಲಿಲ್ಲ. ಎಲ್ಲರದೂ ಅಂಥದ್ದೇ ಒಂದು ಬದುಕು. ಇದೆಲ್ಲವೂ ಅಂದೆಂದೋ ಅವರಿಗೂ ಆಗಿದ್ದೆ. ಸಂಜೆ ಅವನು ಅಳುತ್ತಿದ್ದಾಗ ಆ ಗುಂಪಿನ ಹಿರಿಯ ಕಾಳಜಿಯಿಂದ “ಯಾಕೆ ಹೇಳು? ಏನಾಯ್ತು?” ಎಂಬ ಅಕ್ಕರೆಗೆ ಇವನು ಉತ್ತರಿಸಿರಲಿಲ್ಲ. ಬಿಕ್ಕಳಿಸುವಗೊಮ್ಮೆ ಅವ್ವ ಅವ್ವ ಅಂದಿದ್ದು ಯಾರ ಕಿವಿಗೂ ಬಿದ್ದಿರಲಿಲ್ಲ.

ಗಾಳಿ, ಅದಕ್ಕೆ ಅಲುಗುವ ಮರದ ಎಲೆಗಳು ಎಲ್ಲಕ್ಕೂ ಒಪ್ಪವಾಗಿ ಮೆತ್ತಿಕೊಂಡ ಅರ್ಧಚಂದ್ರನ ಬೆಳಕನ್ನು ಹುಡುಗ ನೋಡುತ್ತಿದ್ದನಾದರೂ ಅವನು ಅದರಲ್ಲಿ ಅವ್ವನನ್ನು ಹುಡುಕುತ್ತಿದ್ದ. ಅವ್ವ ನೆನಪಾಗುತ್ತಲೇ ದುಃಖ ಉಕ್ಕಿದರೂ ಕಣ್ಣೀರನ್ನು ತಡೆದುಕೊಂಡ “ಅವ್ವ ಬೇಡವೆಂದರೂ ಹಟತೊಟ್ಟು ಬಂದೆ. ಅವ್ವನಿಗೆ ನಾನಲ್ಲದೆ ಇನ್ಯಾರು? ಅಪ್ಪ ಇದ್ದಿದ್ದರೆ ಅವ್ವನು ಕಷ್ಟಪಡುತ್ತಿರಲಿಲ್ಲ, ನಾನು ಕೂಡ ಹೀಗೆ ಬರುತ್ತಿರಲಿಲ್ಲ. ಇನ್ನು ಎಷ್ಟು ದಿನ ಅವ್ವನ ಹತ್ರವೇ ದುಡಿಸಿಕೊಂಡು ಉಣ್ಣಲಿ? ಇನ್ಮೇಲೆ ನಾನೂ ಅವ್ವಂಗೆ ದುಡಿದು ತಗೊಂಡು ಹೋಗಿ ಕೊಡಬೇಕು. ಅವಳಿಗೆ ಹೇಳಿ ಬಂದಿದ್ದು ಒಂದೇ ಸಮಾಧಾನ. ಆದರೆ ಅವ್ವ ಉಂಡಾಳೊ, ನಿದ್ದೆ ಮಾಡಿಯಾಳೊ ನನ್ನ ನೆನಪು ಮಾಡಿಕೊಂಡು ಅತ್ತಾಳೊ…” ಹೀಗೆ ಗಾಳಿಯೊಂದಿಗೆ ಅವನ ಮನಸ್ಸು ಸ್ಪರ್ಧೆಗೆ ಬಿದ್ದು ಹರಿದಾಡಿತು.

ಸಿಗರೇಟ್ ಹೊಗೆಯಲ್ಲಿ ಮುಳುಗಿ ಹೋಗಿದ್ದ ಎರಡನೆಯವನು ಉರಿದು ಸತ್ತುಹೋಗಿದ್ದ ಸಿಗರೇಟ್ ತುಂಡನ್ನು ಅಲ್ಲೇ ಎಸೆದು ಬಂದ. ಈ ಹುಡುಗ ಈ ಪರಿಯಾಗಿ ಮನಸ್ಸಿಗೆ ಹಚ್ಚಿಕೊಂಡರೆ ಹೋಟೆಲ್ನಲ್ಲಿ ಕೆಲಸ ಮಾಡೋಕೆ ಆದೀತೆ? ಎಂಬುದು ಅವನ ಯೋಚನೆಯಾಗಿತ್ತು. ಅವನನ್ನು ನೋಡಿದಾಗಲೆಲ್ಲ ಪಾಪ ಅನಿಸುತ್ತಿತ್ತು. ಆದರೆ ಕಷ್ಟಗಳು ಪಾಪ-ಪುಣ್ಯಗಳ ಮಾತು ಕೇಳಬೇಕಲ್ಲ? ಅವನದು ಯಾವ ಕಷ್ಟವೂ!? ಇಷ್ಟೊಂದು ಮೃದುವಾಗಿರುವವನು ಇಲ್ಲಿ ಕೆಲಸ ಮಾಡಿಯಾನೇ? ಎಂಬುದೇ ಅವನ ಪ್ರಶ್ನೆಯಾಗಿತ್ತು. ಪಾಪದ ಹುಡುಗ, ಬುದ್ಧಿ ಹೇಳಿ ಊರಿಗೆ ಕಳುಹಿಸಿಬಿಡೋಣ. ಕಷ್ಟವೋ ಸುಖವೂ ಊರಲ್ಲಿ ಬದುಕು ಹುಡುಕಿಕೊಳ್ಳಲಿ ಅನ್ನುವ ಯೋಚನೆ ಬಂದಾಗ ತನ್ನ ಬದುಕೇ ನೆನಪಾಯ್ತು. ತಾನು ಹೀಗೆ ಮನೆ ಬಿಟ್ಟು ಬಂದು ದುಡಿಯಲು ಇಲ್ಲಿ ಸೇರಿಕೊಳ್ಳಬಾರದಿತ್ತು ಅಂತ ಎಷ್ಟೋ ಬಾರಿ ಅನಿಸಿದಿದೆ. ಆದರೆ ಹಸಿವು ಕೇಳಬೇಕಲ್ಲ? ಹೀಗೆ ಲಹರಿಗೆ ಬಿದ್ದ ಅವನು ಹೊಸ ಹುಡುಗನ ಮುಂದೆ ಬಂದು ನಿಂತ.

ಕಿರಿಯವನೊಂದಿಗೆ ಮಾತಿಗೆ ಶುರುವಿಟ್ಟ!

ನಾನು ಕೂಡ ಮನೆ ಬಿಟ್ಟು ಬಂದವನೇ! ಮನೆಬಿಟ್ಟು ಆಚೆ ಬರೋದು ಅಂದ್ರೆ ನೀರಿಗೆ ಬಿದ್ದಂಗೆ. ಬದುಕ್ಬೇಕು ಅಂದ್ರೆ ಈಜ್ಬೇಕು. ಮನೆ ಬಿಟ್ಟು ಬಂದಾಗ ರಸ್ತೆ ರಸ್ತೆಯಲ್ಲಿ ಅಲೆದೆ. ನಾಲ್ಕೈದು ದಿನಗಳ ಹಸಿವಿನ ನಂತರ ಈ ಹೋಟೆಲ್ ಸಿಕ್ತು. ಆಗಾಗ್ಗೆ ಯಜಮಾನ ಏಟುಗಳು, ತಿನ್ನಲು ಬಂದವರು ಮಾಡುವ ಅವಮಾನಗಳು ಎಲ್ಲವೂ ಸಿಕ್ಕವು. ರಾತ್ರಿಯ ಸೆಕೆಂಡ್ ಶೋ ಸಿನಿಮಾ, ರಾತ್ರಿಯ ಈ ಸೊಳ್ಳೆಗಳೊಂದಿಗೆ ನಿದ್ದೆ, ಎರಡು ಜೊತೆ ಕೊಳಕು ಬಟ್ಟೆ ಇವಿಷ್ಟೇ ಬದುಕಾಯಿತು! ಎಷ್ಟು ಬಾರಿ ಊರಿಗೆ ವಾಪಸ್ ಹೋಗಿ ಬಿಡೋಣ ಅನಿಸಿತ್ತು. ಹಾಗೆ ಸೋತುಹೋಗುವ ಮನಸ್ಸಾಗಲಿಲ್ಲ. ಹೊರಗಿನ ಜಗತ್ತು ನಮ್ಮ ಮೇಲೆ ಸವಾರಿ ಮಾಡುತ್ತಲೇ ಇರುತ್ತದೆ ನಾವು ಅದರಿಂದ ಕಲ್ತೆ ಎದ್ದು ನಿಲ್ಲಬೇಕು. ಅಲ್ಲಿಯವರೆಗೂ ನಾನು ಊರಿನ ಮುಖ ಮುಖ ನೋಡಬಾರದು ಅಂತ ನಿರ್ಧರಿಸಿದ್ದೇನೆ. ನೀನು ಬರಬಾರದಿತ್ತು. ಅವ್ವ ಒಬ್ಳೆ ಇದ್ದಾಳೆ ಅಂತೀಯ, ಬಂದುಬಿಟ್ಟಿದ್ದೀಯಾ ಹೋಗ್ಲಿ ಇಲ್ಲೇ ಆ ಕೆಲಸ ಈ ಕೆಲಸ ಅನ್ನದೇ ಮನಸ್ಸು ಬಿಚ್ಚಿ ಇಡು. ಮನಸ್ಸು ಮಾಡಿದರೆ ಏಣಿಯ ಮೆಟ್ಟಿಲುಗಳು ಸಲೀಸು” ಅಂತ ಕಿರಿಯವನಿಗೆ ಮಾತು ಕೂಡ ಆಡಲು ಅವಕಾಶ ಕೊಡದೆ ಅನಿಸಿದ್ದನ್ನು ಹೇಳಿ ಅಲ್ಲಿಂದ ಎದ್ದು ಹೋದ.

ಶೂನ್ಯ ನೋಟವನ್ನು ಕದಲಿಸದೆ ಕೂತಿದ್ದ ಕಿರಿಯವ ಈಗ ಮಬ್ಬುಗತ್ತಲಲ್ಲಿ ಮುಳುಗಿದ್ದ ಹೋಟೆಲ್ನ ಸುತ್ತ ಒಮ್ಮೆ ನೋಡಿದ. ಕುರ್ಚಿ ಟೇಬಲ್ ಗಳು ನಿರ್ಲಿಪ್ತವಾಗಿ ನಿಂತಿದ್ದವು. ಅಲ್ಲೊಂದು ಕಡೆ ಮೆನು ಚಾರ್ಟ್ ಇತ್ತು. ತರಕಾರಿ ಸುರಿದಿದ್ದ ರೂಮಿನ ಮೂಲೆಯಲ್ಲಿ ತಾನು ಕೂತಿದ್ದು ಮೊದಲ ಬಾರಿ ಅವನ ಗಮನಕ್ಕೆ ಬಂತು. ಗೋಣಿಚೀಲ ಹಾಸಿ ಕೊಂಡು ನಿದ್ದೆ ಕರೆಯಲು ಅಣಿಯಾಗಿದ್ದ ಹಿರಿಯವನ ಮುಖವನ್ನೊಮ್ಮೆ ನೋಡಿದ. ಅದರಲ್ಲಿ ಕಂಡರು ಕಾಣದ ಆಪ್ತ ನೋಟವಿತ್ತು.

“ಕೆಡಿಸುವ ಜಗತ್ತು, ಕೆಡವುವ ಜಗತ್ತು ಇರುವಂತೆ ಎತ್ತುವ ಜಗತ್ತು ಇದೆ ಕಣಪ್ಪ. ಏನು ಯೋಚನೆ ಮಾಡ್ಬೇಡ. ನಾಳೆಯಿಂದ ನಿಂಗೆ ಯಾವ ಕೆಲಸ ಆಗುತ್ತೋ ಅದ್ನ ಮಾಡು ನಾನು ಯಜಮಾನ್ರಿಗೆ ಹೇಳ್ತೀನಿ. ನಿನ್ ನಂಬಿರುವ ಅವ್ವ ಇದ್ದಾಳೆ ಅಂತೀಯ ಬದುಕಿನ ದಾರಿಯಲ್ಲಿ ಅಡ್ಡಲಾಗಿ ನಡೀಬೇಡ.” ಅನ್ನುತ್ತಾ ಎದ್ದು ಹೋದ. ತಟ್ಟೆಯಲ್ಲಿ ಸಂಜೆ ಉಳಿದಿದ್ದ ಇಡ್ಲಿ ಹಾಕಿಕೊಂಡು ಬಂದು ಮುಂದೆ ಹಿಡಿದ. “ತಿನ್ನು ಹಸಿದಿರಬೇಡ ಇಲ್ಲಿ ನೀನು ಹಸಿದರೆ ಅಲ್ಲಿ ನಿಮ್ಮವ್ವಗೆ ಸಂಕಟ ಆಗುತ್ತೆ. ಹೇಳು ಇಡ್ಲಿ ತಿನ್ನು ಹೀಗೆ ಅಳ್ತಾ ಕೂತರೆ ನಮ್ಗೆ ದಿನಗಳು ಕಾಯುವುದಿಲ್ಲ” ಎಂದು ಮೈದಡವಿದ. ಯಾಕೋ ಕಿರಿಯವನ ಹೃದಯ ತುಂಬಿ ಬಂದಿತ್ತು. ದುಃಖವನ್ನು ಅವಡುಗಚ್ಚಿ ಹಿಡಿದು ಹಿರಿಯವನ ಮುಖ ನೋಡಿದ. ಅಲ್ಲೊಂದು ಸಂತೈಸುವಿಕೆ ಇತ್ತು. ಕೈಗೆ ಇಡ್ಲಿ ತಟ್ಟೆ ತೆಗೆದುಕೊಂಡು ಒಂದು ತುತ್ತು ಇಡ್ಲಿ ಮುರಿದ. ಕಿಟಕಿಯಾಚೆಯ ಚಂದಿರನನ್ನು ನೋಡುತ್ತಾ ಅವನು ಅವ್ವನನ್ನು ನೆನಪಿಸಿಕೊಂಡ. ಮುರಿದ ಹೆಂಚಿನ ಮನೆಯಲ್ಲಿ ಚಂದಿರನನ್ನು ನೋಡುತ್ತಾ ಮಲಗಿದ್ದ ಅವನ ಅವ್ವನಿಗೆ ಚಂದಿರನಲ್ಲಿ ಮಗನ ಮುಖ ಕಾಣಿಸಿತು. ಇವನು ಒಂದು ತುತ್ತು ಇಡ್ಲಿ ಬಾಯಿಗಿಟ್ಟುಕೊಂಡ. ಅಲ್ಲಿ ಅವನ ತಾಯಿಗೆ ನಿನ್ನೆಯಿಂದ ಶುರುವಾಗಿದ್ದ ಸಂಕಟ ಸ್ವಲ್ಪ ಮಟ್ಟಿಗೆ ತಣ್ಣಗಾಯಿತು.

‍ಲೇಖಕರು Admin

January 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: