ಸದಾಶಿವ್ ಸೊರಟೂರು ಕಥಾ ಅಂಕಣ- ಬದುಕು ಕೊಟ್ಟ ಉಡುಗೊರೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

18

ಬೈರಪ್ಪನವರ ಯಾವುದೊ ಒಂದು ಕಾದಂಬರಿಯಿಂದ ತಪ್ಪಿಸಿಕೊಂಡು ಬಂದ ಒಂದು ಪಾತ್ರದಂತೆ ಕಾಣುತ್ತಿದ್ದರು ಅವರು. ನಾನು ತುಸು ಹೊತ್ತು ಕಿಟಕಿಯಾಚೆ ಸುಮ್ಮನೆ ನೋಡಿ ಮತ್ತೆ ಅವರ ಕಡೆ ಕತ್ತು ಹೊರಳಿಸಿದೆ. ಬಸ್ಸು ಒಂದು ಲಯದಲ್ಲಿ ಓಡುತ್ತಿತ್ತು. ಅವರು ಈ ಜಗತ್ತಿಗೂ ತನಗೂ ಸಂಬಂಧ ಇಲ್ಲದವನಂತೆ ಕೂತಿದ್ದರು. ಕಂಡಕ್ಟರ್ ಟಿಕೆಟ್ ಕೇಳಿಕೊಂಡು ಬಂದ. ನಾನು ಟಿಕೆಟ್ ಕೊಂಡೆ. ನನ್ನ ಪಕ್ಕದ ಸಾಲಿನ ಸೀಟುಗಳಲ್ಲಿನ ಒಂದರಲ್ಲಿ ಅವರು ಕೂತಿದ್ದರು. ಕಂಡಕ್ಟರ್ ‘ಟಿಕೆಟ್ ಟಿಕೆಟ್..’ ಅಂದಾಗ ಅವರು ಜೇಬಿನಿಂದ ಇನ್ನೂರರ ನೋಟು ತೆಗೆದು ಕಂಡಕ್ಟರ್ ಕೈಗಿಟ್ಟರು.

“ಎಲ್ಲಿಗೆ?” ಕಂಡಕ್ಟರ್ ಪ್ರಶ್ನೆ.

“ಈ ಹಣ ಖಾಲಿಯಾಗುವವರೆಗೂ ನನಗೊಂದು ಟಿಕೆಟ್ ಕೊಡಿ!” ಅವರ ತಣ್ಣನೆಯ ಉತ್ತರ.

ಜಗತ್ತಿನಲ್ಲಿ ಯಾವ ಕಂಡಕ್ಟರ್ ಕೇಳಿಸಿಕೊಂಡಿರದ ಉತ್ತರ ಇದು.

ಕಂಡಕ್ಟರ್ ಸಾವರಿಸಿಕೊಂಡು ನಕ್ಕ. ನನ್ನ ಗಮನವೆಲ್ಲಾ ಅತ್ತ ಸರಿಯಿತು. ಕೆಲವರು ಅವರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.

ಕಂಡಕ್ಟರ್ ಮತ್ತೆ ಬಲವಂತ ಮಾಡಿದ.

ಅವರದು ಅದೇ ಉತ್ತರ.‌

ಕಂಡಕ್ಟರ್ ಅನಿವಾರ್ಯವಾಗಿ 156 ರೂಪಾಯಿಗಳ ಕೊನೆಯ ನಿಲ್ದಾಣದ ಟಿಕೆಟ್ ಮತ್ತು ಚಿಲ್ಲರೆ ಮರಳಿಸಿದ.

ಅವರು ಎಲ್ಲಿಗೆ ಹೊರಟಿದ್ದಾರೆ? 200 ರೂಪಾಯಿ ಖಾಲಿ ಆಗುವವರೆ ಟಿಕೆಟ್‌ನ ಅರ್ಥವೇನು? ಬುದ್ದಿ ಭ್ರಮಣೆಯೇ? ದಾರಿ ತಪ್ಪಿದವರೆ? ಬದುಕ ತಪ್ಪಿದವರೆ? ಎಲ್ಲಾ ಬಿಟ್ಟು ಹೊರಟವರೇ? ನೂರೆಂಟು ಪ್ರಶ್ನೆಗಳು ಹುಟ್ಟಿದವು.

ನಾನು ಅವರನ್ನೆ ಇಂಚಿಂಚು ಅವಲೋಕಿಸತೊಡಗಿದೆ. ಅವರು ತೀರಾ ಸೋತವರಂತೆ ಕಾಣಿಸುತ್ತಿದ್ದರು. ಸುಮಾರು ಎಪ್ಪತ್ತರ ವಯಸ್ಸು. ನೀಟಾಗಿ ಶೇವ್ ಮಾಡಿರುವ ಮುಖ. ಚೌಕಳಿ ಅಂಗಿ. ಮಾಸಲು ಬಣ್ಣದ ಪ್ಯಾಂಟು. ನಿವೃತ್ತ ನೌಕರ ತೊಡುವಂತಹ ಒಂದು ಹಳೆಯ ವಾಚು, ತಲೆಯಲ್ಲಿ ಕರಿ ಬಣ್ಣ ಕಳೆದುಕೊಂಡ ಕೂದಲು.

ಸುಮಾರು ಒಂದು ಗಂಟೆಯಷ್ಟು ಪ್ರಯಾಣ ಸಾಗಿರಬಹುದು. ಆ ಅನಾಮಿಕ ವ್ಯಕ್ತಿ ದಡದಡ ಇಳಿದು ಹೊರಟು ಹೋದ. ಟಿಕೆಟ್ ತೆಗೆದುಕೊಂಡಿದ್ದು ಕೊನೆಯ ನಿಲ್ದಾಣಕ್ಕೆ ಆದರೆ ಇಳಿದಿದ್ದು ಮಾತ್ರ ಅರ್ಧ ದಾರಿಯಲ್ಲಿ. ನನಗೆ ಮತ್ತೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.


ಎಷ್ಟೊ ದಿನಗಳ ಬಳಿಕ ನಾನು ಪಕ್ಕದ ನಗರದಲ್ಲಿ ಯಾವುದೊ ಕೆಲಸದಲ್ಲಿದ್ದೆ. ನಾನು ಅಲ್ಲಿಂದ ಇನ್ನೊಂದು ಊರಿಗೆ ಹೋಗಬೇಕಿತ್ತು. ಬಸ್ಸು ಹತ್ತಿ ಕೂತೆ. ಬಸ್ಸು ಹೊರಟಿತು. ಟಿಕೆಟ್ ಕೇಳಲು ಬಂದ ಕಂಡಕ್ಟರ್ ನನಗೆ ಟಿಕೆಟ್ ಕೊಟ್ಟು ಮುಂದೆ ಹೋದ. ಅಲ್ಲಿ ಟಿಕೆಟ್ ಕೊಳ್ಳುವ ವ್ಯಕ್ತಿ ಹೇಳಿದ ಮಾತು ನನ್ನನ್ನು ಮತ್ತೆ ಗಲಿಬಿಲಿಗೊಳಿಸಿತು.

ಐನೂರು ರೂಪಾಯಿ ನೀಡಿ

“ಸರ್ ಈ ಹಣ ಖಾಲಿಯಾಗುವ ಊರಿನವರೆಗೆ ನನಗೆ ಟಿಕೆಟ್ ಕೊಡಿ..,” ಅಂದರು.

ಬಾಗಿ ನೋಡಿದೆ.

ಹೌದು ಅವರೇ. ಇದೇನಿದು ಮತ್ತೆ ಮತ್ತೆ ಇವರೇ ಎದುರಾಗುತ್ತಿದ್ದಾರೆ! ನನಗೆ ಖಚಿತವಾಗಿ ಹೋಯಿತು, ಇದು ಮತಿಭ್ರಮಣೆ. ಯಾವುದೊ ಒಂದು ಮಾನಸಿಕ ಕಾಯಿಲೆಯಲ್ಲಿ ಬಳಲುತ್ತಿರಬಹುದೆಂದು ನನಗೆ ಅನ್ನಿಸಿಬಿಟ್ಟಿತು.‌ ಆದರೆ ನನ್ನ ಒಳ ಮನಸು ಇದರಲ್ಲೇನೊ ಬೇರೆ ಇದೆ ಇದೆ ಎಂದು ಹೇಳುತ್ತಿತ್ತು.

ಕಂಡಕ್ಟರ್ 135 ರೂಪಾಯಿಯ ಟಿಕೆಟ್ ಕೊಟ್ಟು, ಅದೇ ಕೊನೆಯ ನಿಲ್ದಾಣ ಅಂತ ಹೇಳಿ ಮುಂದೆ ಹೋದ.

ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಿದ್ದ ನಾನು ಆ ವ್ಯಕ್ತಿ ಇಳಿಯುವ ಊರಿಗೆ ಮತ್ತೊಂದು ಟಿಕೆಟ್ ತೆಗೆದುಕೊಂಡೆ. ಅವರನ್ನು ಹಿಂಬಾಲಿಸುವ ಹುಕಿ ಹತ್ತಿತ್ತು.

ಸುಮಾರು ಎರಡು ಗಂಟೆಯ ಪ್ರಯಾಣದ ನಂತರ ಬಸ್ಸಿನಲ್ಲಿ ಕೇವಲ ನಾಲ್ಕು ಜನ ಇದ್ದೆವು. ನಾನು, ಆ ವ್ಯಕ್ತಿ ಮತ್ತು ಇನ್ನಿಬ್ಬರು.

ಬಸ್ಸು ನಿಲ್ದಾಣ ತಲುಪಿತು. ಅವರು ಇಳಿದರು. ಅವರ ಹಿಂದೆ ನಾನೂ ಇಳಿದೆ. ಅವರು ಹೋದಂತೆ ಅವರ ಹಿಂದೆ ನಡೆಯ ತೊಡಗಿದೆ.

ಅವರ ನಡಿಗೆ ನೋಡಿದರೆ ಅವರು ಆ ಊರಿಗೆ ಹೊಸಬರು ಅನಿಸುತ್ತಿತ್ತು. ಅಲ್ಲಲ್ಲಿ ನಿಂತು ಜನರನ್ನು ನೋಡುತ್ತಿದ್ದರು. ಬರೆದಿರುವ ಅಂಗಡಿಯ ನಾಮಫಲಕಗಳಲ್ಲಿ ಏನನ್ನೊ ಹುಡುಕುತ್ತಿದ್ದರು.

ಒಂದಷ್ಟು ದೂರ ಸಾಗಿ ಒಂದು ಹೋಟೆಲ್‍ನೊಳಗೆ ಹೋಗಿ ಕೂತರು. ನಾನೂ ಹೋಗಿ ಕೂತೆ. ಅವರು ಕಾಫಿ ತೆಗೆದುಕೊಂಡು ಕುಡಿಯುತ್ತಾ ಅದರಲ್ಲೇ ತಲ್ಲೀನರಾದರು.‌

ಕಾಫಿ ಕುಡಿದು ಎಷ್ಟೊ ಹೊತ್ತು ಹಾಗೆಯೇ ಕೂತಿದ್ದರು. ನಾನು ಕಾಫಿ ಕುಡಿದು, ಬೊಂಡ ತಿಂದರೂ ಅವರು ಕದಲಲ್ಲಿ. ಯಾರಿಗೊ ಕಾಯುವ ಧಾವಂತವೂ ಅವರಿಗಿರಲಿಲ್ಲ.

ಎಷ್ಟೊ ಹೊತ್ತಿನ ನಂತರ ಎದ್ದರು. ನಾನು ಅವರ ಹಿಂದೆಯೇ ಹೊರಟೆ. ಹೊರಗೆ ನಿಂತರು. ನಾನು ಅವರ ಪಕ್ಕ ಹೋಗಿ ನಿಂತೆ..

ಅವರ ಕಡೆ ನೋಡಿ ಸಣ್ಣಗೆ ನಕ್ಕು..

“ನೀವು ಯಾರನ್ನೊ ಹುಡುಕ್ತಾ ಇದೀರಿ ಅನಿಸುತ್ತೆ,” ಅಂದೆ.

ಅವರು ಒಂದು ಚೆಂದ ನಗೆ ನಕ್ಕರು.

“ಯಾರನ್ನು ಅಥವಾ ಏನನ್ನು ಹುಡುಕ್ತಾ ಇದೀರಿ ಹೇಳಿ ಆದರೆ ನಾನೂ,” ಅನ್ನುವುದರೊಳಗೆ

“… ನನ್ನನ್ನೇ ನಾನು ಹುಡುಕಿಕೊಳ್ತಾ ಇದೀನಿ,” ಅಂದರು.

ಅರ್ಥವಾಗಲಿಲ್ಲ ಎಂಬಂತೆ ಅವರ ಕಡೆ ನೋಡಿದೆ.

ಅವರ ಮುಖದಲ್ಲಿ ಯಾವುದೇ ಭಾವಗಳಿರಲಿಲ್ಲ.

“.. ಯಾವ ಊರು?” ಅಂದೆ.

“ಊರು ತುಂಬಾ ದೂರ ಹೋಗಿದೆ. ನಾನು ಇನ್ಯಾವುದಕ್ಕೊ ಹತ್ತಿರವಾಗ್ತಾ ಇದೀನಿ,” ಅಂದರು.

ಅವರ ಮಾತು ಅರ್ಥವಾಗಲಿಲ್ಲ. ಅರ್ಥವಾಗುವಂತೆಯೂ ಹೇಳಿರಲಿಲ್ಲ. ನಾನು ಸುತ್ತಿಬಳಸಿ ಕೇಳುವುದನ್ನು ಬಿಟ್ಟು ನೇರವಾಗಿ ವಿಷಯಕ್ಕೆ ಬಂದೆ.

“ಯಾವುದೊ ಬಸ್ಸು ಹತ್ತೊದು, ಗೊತ್ತಿಲ್ಲದ ಊರಿಗೆ ಟಿಕೆಟ್ ಕೊಳ್ಳೊದು, ಮತ್ತೇಲ್ಲಿಯೊ ಇಳಿಯೋದು ಇವೆಲ್ಲವನ್ನೂ ನಾನು ತುಂಬಾ ದಿನದಿಂದ ಗಮನಿಸುತ್ತಾ ಇದೀನಿ. ನಿಮ್ಮ ಬಗ್ಗೆ ಅತೀವ ಕುತೂಹಲ. ಅದಕ್ಕೆ ಇವತ್ತು ನೀವು ಯಾರು ಅಂತ ತಿಳಿಯೋಣ ಅಂತ ಹಿಂಬಾಲಿಸಿ ಬಂದೆ,” ಅಂತ ಹೇಳಿದೆ. ಅವರ ಮುಖದಲ್ಲಿ ಒಂದು ಕೋಪ ಚಿಮ್ಮಬಹುದೆಂದು ಕಾದೆ. ಅವರು ನಕ್ಕರು. ನನ್ನ ಹೆಗಲ ಮೇಲೆ ಕೈಹಾಕಿದರು.‌

ಮತ್ತೆ ಹೋಟೆಲ್‌ಗೆ ಕರೆದೊಯ್ದು ತಿಂಡಿಗೆ ಅರ್ಡರ್ ಮಾಡಿದರು. ಇಬ್ಬರೂ ತಿಂದೆವು. ಅವರು ಮಾತಾಡಲಿಲ್ಲ. ನಾನೂ ಮತ್ತೇನನ್ನೂ ಕೇಳಲಿಲ್ಲ. ನಂತರ ಒಟ್ಟಿಗೆ ಕಾಫಿ‌ ಕುಡಿದೆವು.

ಕೊನೆಯ ಗುಟುಕು ಇರುವಾಗ “ಬಹುಶಃ ಇನ್ನೊಂದು ವಾರ ಇಲ್ಲೆ ಪಕ್ಕದ ನಗರದಲ್ಲಿ ಇರ್ತೀನಿ. ನಂತರ ಎಲ್ಲಿಗೆ ಹೋಗ್ತಿನೊ ಗೊತ್ತಿಲ್ಲ. ಯಾವ ಬಸ್ಸು ಸಿಗುತ್ತೊ ಆ ಬಸ್ಸು ಹತ್ತುತೀನಿ. ಕಂಡಕ್ಟರ್ ಯಾವ ಊರಿನ ಟಿಕೆಟ್ ಕೊಡ್ತಾನೊ ಅದೇ ನಾನು ಇಳಿಯುವ ಊರು. ನನಗೆ ಪ್ರಯಾಣ ಇಷ್ಟವಾ ಅದು ನನಗೂ ಕೂಡ ಗೊತ್ತಿಲ್ಲ. ಆದರೆ ನನಗೆ ಎಲ್ಲಿಯೂ ಇರಲು ಆಗುತ್ತಿಲ್ಲ ಅದಂತೂ ನಿಜ. ಆದರೆ ಒಂದಂತೂ ನಿಜ. ನನ್ನ ಊರಿಂದ ತುಂಬಾ ದೂರ ಬಂದಿದ್ದೀನಿ ಅನೇಕ ಗಡಿಗಳನ್ನು ದಾಟಿ. ನಿಮಗೆ ಬಿಡುವಾದರೆ ಈ ವಾರದಲ್ಲಿ ಎಂದಾದರೂ ನಾನು ಉಳಿದ ಜಾಗಕ್ಕೆ ಬನ್ನಿ ಮಾತಾಡುವ..” ಅಂದು ತಾನು ಉಳಿದಿದ್ದ ಜಾಗದ ವಿಳಾಸ ಕೊಟ್ಟು ಎದ್ದರು. ನಾನು ಹೊರಟು ಬಂದೆ.

ಆ ವ್ಯಕ್ತಿ ಈಗ ಇನ್ನೊಷ್ಟು ಒಗಟಾಗಿದ್ದ.


ಎರಡು ದಿನದ ಬಳಿಕ..

ಅವರು ಉಳಿದುಕೊಂಡಿದ್ದ ವಿಳಾಸ ತಲುಪಿದೆ. ಯಾವುದೊ ಒಂದು ಹಾಡು ಕೇಳುತ್ತಾ ನನಗಾಗಿ ಕಾದು ಕೂತವರಂತೆ ಕೂತಿದ್ದರು.

ನನ್ನನ್ನು ನೋಡಿ ನಕ್ಕು ಒಳಗೆ ಕರೆದರು. ನಾನು ಹೋಗಿ ಕೂತೆ. ಒಂದು ಸಣ್ಣ ರೂಮು. ಗಾಳಿ, ಬೆಳಕು ಅಷ್ಟೊಂದು ಸರಾಗವಿರಲಿಲ್ಲ ಅಲ್ಲಿ. ನಾಲ್ಕು ಜೊತೆ ಬಟ್ಟೆ ತುಂಬುವ ಒಂದು ಬ್ಯಾಗಿನ ಹೊರತಾಗಿ ಅಲ್ಲೇನೂ ಇರಲಿಲ್ಲ. ‌

“ನೀವು..?” ಅನ್ನುತ್ತಾ ಮಾತು ಆರಂಭಿಸಿದೆ.

“ದೂರದಲ್ಲಿ ನನಗೂ ಒಂದು ಊರಿದೆ. ಆದರೆ ಈಗ ಅದು ನನ್ನದಲ್ಲ. ನಾನು ಇಲ್ಲಿ ಬದುಕಿದ್ದೀನಿ, ಅಲ್ಲಿ ಸತ್ತು ಹೋಗಿದೀನಿ. ಮರಣಪ್ರಮಾಣ ಪತ್ರಕ್ಕೆ ಬೆಲೆ ಇದೆ. ಜೀವಂತ ಉಸಿರಿಗೆ ಬೆಲೆ ಇಲ್ಲ…” ಅನ್ನುತ್ತಾ ಎದ್ದು ಹೋಗಿ ತನ್ನ ಬ್ಯಾಗಿನಲ್ಲಿ ತಡಕಾಡಿ ಒಂದು ಮಾಸಿದ ದಿನಪತ್ರಿಕೆಯನ್ನು ಎತ್ತಿಕೊಂಡು ಬಂದು…

“ಇಡೀ ಬದುಕು ನನಗೆ ಕೊಟ್ಟ ಉಡುಗೊರೆ,” ಎನ್ನುತ್ತಾ ಆ ಪತ್ರಿಕೆಯ ಒಂದು ಪುಟವನ್ನು ನನ್ನ ಎದುರಿಗೆ ಇಟ್ಟರು.

ಅದರಲ್ಲಿನ ಅರ್ಧಪುಟದಷ್ಟು ಜಾಗದಲ್ಲಿ ಇವರ ಭಾವಚಿತ್ರ ಇತ್ತು ಮತ್ತು ಕೆಳಗೆ ಹೀಗೆ ಬರೆಯಲಾಗಿತ್ತು.

“ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..”

ದುಃಖತಪ್ತರು

ಮಕ್ಕಳು, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: