ಸದಾಶಿವ್ ಸೊರಟೂರು ಕಥಾ ಅಂಕಣ- ಅವಳ ಮಚ್ಚೆ ಮತ್ತು ಅವನು ಸುಟ್ಟು ಕೊಟ್ಟ ಮೀನು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

17

೧..

ನೂರಾ ಒಂಬತ್ತನೆ ಸಾರಿ ಕೇಳಿಕೊಂಡೆ. ನೋ ಹಾಗೆನಿಸುತ್ತಿಲ್ಲ.‌ ಒಮ್ಮೆ ಎಂದೊ ನನಗೂ ಇಂತದೊಂದು ಸೆಳೆತ ಉಂಟಾಗಿತ್ತು. ಆಗ ಅದೆಲ್ಲವೂ ಈಗಿನ ತಳಮಳಕ್ಕಿಂತ ಬೇರೆಯದು. ಈಗ ಆಗುತ್ತಿರುವ ತಳಮಳ ಆಗಿನದಕ್ಕಿಂತ ಪೂರ್ಣ ಭಿನ್ನ. ಇದು ಪ್ರೀತಿಯೊ ಅಥವಾ ಅದೊ? ಗೊತ್ತಾಗುತ್ತಿಲ್ಲ..‌

ಪ್ರೀತಿ ಹೇಗಿರುತ್ತದೆ? ಪದೇ ಪದೇ ಪೋನ್ ಮಾಡಿ ಮಾಡುವ ವಿಚಾರಣೆಯಂತೆಯಾ? ಕಾಳಜಿಯಾ? Need fullfill ಮಾಡುವುದಾ? ಕಿಬ್ಬೊಟ್ಟೆಯ ಕಾಮವನ್ನು ಹೊಕ್ಕಳಲ್ಲೆ ಮುಗಿಸಿ ಹಾಕುವುದಾ? ಮಕ್ಕಳಾ? ಸಂಸಾರವಾ? ಹೇರುವುದಾ? ಹೇರಿಸಿಕೊಳ್ಳುವುದಾ? ಬಯಸುವುದಾ? ಬಯಸಿಯೂ ಬಯಸಿದಂತೆ ಉಳಿಯುವುದಾ? ಹೀಗೆಯೇ ಯೋಚಿಸಿ-ಯೋಚಿಸಿಯೇ ಇಂತಹ ಕವಲು ದಾರಿಗೆ ಬಂದು ನಿಂತೆ. ಗೇಟು ಬಾಗಿಲು ಕಿರ್ರ್ ಅನ್ನದಂತೆ ತೆಗೆದು ಹೋಗುವ ಹುನ್ನಾರಿನ ಹೆಣಿಗೆಯನ್ನು ನಿತ್ಯ ಇಷ್ಟೆಷ್ಟೇ ಬಿಚ್ಚಿ ಬಿಚ್ಚಿ ಮತ್ತೆ ಹಾಕುತ್ತೇನೆ. ಗಂಡ? ಮೊನ್ನೆಯಷ್ಟೆ ಎರಡನೇ ಕ್ಲಾಸಿಗೆ ಹೋಗಿ ಕೂತ ಮಗಾ? ಇದೆಲ್ಲವೂ ಮರೆಸಿ ಕರೆಯುವ ಮುರಳಿ ಗಾನ ಯಾವುದದು? ಅದು ನನ್ನೊಳಗೆ ಈ ಮೊದಲು ಅವಿತುಕೊಂಡಿತ್ತೊ..? ಯಾರೊ ಹೊರಗಿಂದ ನುಡಿಸಿ ನುಡಿಸಿ ಸೆಳೆಯುತ್ತಿದ್ದಾರೊ..?

ಅವನು ಏನು ನೋಡಿ ಇನ್ಬಾಕ್ಷಿಗೆ ಬಂದ? ಅವನೇನೊ ಅಚಾನಕ್ ಅಂತಾನೆ. ಇದ್ದರೂ ಇರಬಹುದು. ಬಾಲ್ಕನಿಯಲ್ಲಿ ತೂಗು ಮಂಚದಲ್ಲಿ ಕೂತು ಕಾಫಿ ಹೀರುವ ನನಗೆ ಮೀನು ಮಾರುವ ಅವನು ಕಾಡುವುದು ಏಕೆ? ಅವನ ಹೆಂಡತಿಗೆ ಗಲ್ಲದಲ್ಲಿ ಗುಳಿಯಿದೆ. ಡಿಪಿಯಲ್ಲಿ ಇಬ್ಬರೂ ನಗುತ್ತಾರೆ. ಮಗು ಮಾತ್ರ ಏನೊ ಯೋಚಿಸುತ್ತಾ ನಿಂತಿದೆ.

ಗೇಟ್ ನ್ನು ಸದ್ದು ಮಾಡಿಯೇ ತೆಗೆದುಹೋಗಲೇ? ಈ ಗೇಟು ನನಗೆ ಹಾಕಿದ ಯಾವುದರ ಕುರುಹು? ಎಷ್ಟೊಂದು ಗೇಟುಗಳಿವೆ.. ಅದರಲ್ಲಿ ಯಾವುದಿದು..? ಗಂಡನಿಂದ ನನಗೆ ಒಂದು ನೆಪವಾದರೂ ಸಿಗಬೇಕಿತ್ತು. ಇವನ್ನೆಷ್ಟು ಚೆಂದ ಪ್ರೀತಿಸುತ್ತಾನೆ. ಕೊಡುವ ಮುತ್ತಿಗೂ ಒಂದು ಧ್ಯಾನದ ರುಚಿ ಹತ್ತಿಸುತ್ತಾನೆ. ಇದನ್ನೂ ಮೀರಿಯೂ ಆ ಮೀನಿನ ವಾಸನೆ ಯಾಕೆ ಕರೆಯುತಿದೆ. ಬಿಟ್ಟು ಹೋಗುವುದು ತರವಾ? ಬಿಡದೆ ಧ್ಯಾನಿಸುವುದು ತರವಾ?

ಗೇಟಿನ ಬಾಗಿಲನ್ನು ಯಾವುದಕ್ಕೆ ತೆಗೆಯಬೇಕು? ನೋಟಕ್ಕಾ? ಸ್ಪರ್ಶಕ್ಕಾ? ಸುಮ್ಮನೆ ಮೌನವಾಗಿ ಕೂತು ಎದ್ದು ಬರಲಾ? ಎಲ್ಲವನ್ನೂ ಒಪ್ಪಿಸಿ ಬರಲಾ? ಎಲ್ಲವನ್ನೂ ದೋಚಿಕೊಂಡು ಬರಲಾ? ನಾನು ಗೇಟು ತೆರೆಯುವಾಗ ಗಂಡ ‘ಹುಷಾರು ಕಣೇ..’ ಅಂದರೆ ಅದನ್ನು ಹೇಗೆ ಕೇಳಿಸಿಕೊಳ್ಳಲಿ..?

೨.

ನೀರು ಉಪ್ಪು, ಬೆವರು ಉಪ್ಪು, ಬನಿಯನ್ ಮೇಲೆ ಹರಿದ ತೂತುಗಳೂ ಉಪ್ಪು. ಸಿಹಿ ಅಂತ ಇದ್ರೆ ಅದು ಕೈಹಿಡಿದು ಬಂದ ಈ ಇವಳ ತುಟಿ ಮೇಲಿನ ಎಂಜಲು. ಅದಕ್ಕೆ ನಾನು ನಿತ್ಯ ಶರಣಾಗಿದ್ದೇನೆ. ಮತ್ತೆ ಮತ್ತೆ ವರ ಪಡೆದು ಗೆದ್ದಿದ್ದೇನೆ. ಅವಳು ಸೋಲುತ್ತಾಳೆ. ಸೋತು ಎಲ್ಲವನ್ನೂ ಕೊಡುತ್ತಾಳೆ, ನಾನು ಪಡೆಯುತ್ತೇನೆ. ಕೊಟ್ಟು ಪಡೆದು ಬದುಕು ಕಟ್ಟಿಕೊಂಡಿದ್ದೇವೆ.

ಎಲ್ಲವೂ ಇರುವಾಗ ನನಗೇನು ಬೇಕಿತ್ತು.‌ ಅವತ್ತು ನಾನೇಕೆ ಆ ಇನ್ಬಾಕ್ಷಿನೊಳಗೆ ನುಗ್ಗಿದೆ. ಎಷ್ಟೇ ಯೋಚಿಸಿದರೂ ಅದಕ್ಕೆ ಕಾರಣ ಸಿಗುತ್ತಿಲ್ಲ. ನಾನು ಹುಡುಕುತ್ತಿರುವುದು ನಿಜಕ್ಕೂ ಏನೆಂದು ಅರ್ಥವಾದದ್ದು ಅವಳನ್ನು ನೋಡಿದ ಮೇಲೆ. ಅವಳ ತುಟಿಯ ಕೆಳಗೆ ಎಡ ಭಾಗದಲ್ಲಿ ಇರುವ ಮಚ್ಚೆಯನ್ನು ನೇವರಿಸಲು ಮಾತ್ರ ಹುಟ್ಟಿ ಬಂದವನಂತೆ ನನಗೇಕೆ ಅನಿಸಿತು. ಯಾವುದೇ ಜನ್ಮದ ಶಾಪವೊಂದು ಇಲ್ಲಿ ಆ ಮಚ್ಚೆಯ ಸ್ಪರ್ಶದಿಂದ ಮಾತ್ರ ತೊಡೆದು ಹೋಗುವಂತೆ ನನಗೇಕೆ ಭಾಸವಾಯಿತು.

ಊರು, ವಿಳಾಸ, ಬಣ್ಣ, ಪಿನ್‍ಕೋಡ್, ರಕ್ತದ ಗುಂಪು, ಮನೆ ದೇವರು, ಇಷ್ಟ ಕಷ್ಟಗಳನ್ನು ಕೂಡಿ ಗುಣಿಸಿ ಭಾಗಿಸದೆ ಶಾಲೆಯ ದಡ್ಡ ಪೋರನಂತೆ, ಅವಳು ದಡ್ಡ ಪೋರಿಯಂತೆ ಯಾಕೆ ಒಂದು ಬಿಂದುವಿನಲ್ಲಿ ಇಬ್ಬರೂ ಬಂದು ನಿಂತೆವು.

ಅವಳು ಗೇಟು ಬಾಗಿಲು ತೆಗೆದು ಆಚೆ ಬರಲು ತಯಾರು, ನಾನು ಗಟ್ಟಿ ರಟ್ಟೆಯಲ್ಲಿ ಸತತ ಉಟ್ಟು ಹಾಕಿ ಅವಳನ್ನು ಮನುಷ್ಯರ ಸೊಂಕು ಕೂಡ ಇಲ್ಲದ ಈ ಜಲರಾಶಿಯ ಆ ನಡುಭೂಮಿಗೆ ಕರೆದುಕೊಂಡು ಹೋಗಲು ತಯಾರು.. ಆದರೆ ನಂತರ ಮುಂದೇನು?

ಸದಾ ಎದೆ ಮೇಲೆ ಕೈ ಹಾಕಿಕೊಂಡು ಮಲಗುವ ಹೆಂಡತಿಯ ಕೈಯನ್ನು ಎತ್ತಿ ಹೇಗೆ ಕೆಳಗೆ ಇಟ್ಟು ಸದ್ದಿಲ್ಲದೆ ಎದ್ದು ಹೊರಡುವುದು? ರಾತ್ರಿ ಮೀನಿನ ಸಾರನ್ನು ಅವಳೊಬ್ಬಳೇ ಉಣ್ಣುವಂತೆ ಮಾಡಿ ಹೇಗೆ ಹೋಗುವುದು? ಆದರೆ ಇಂತಹ ಹತ್ತಾರು ಪ್ರಶ್ನೆಗಳನ್ನು ಮೀರಿ ಆ ತುಟಿಯ ಬದಿಯ ಮಚ್ಚೆ ನನ್ನ ಶಾಪ ವಿಮೋಚನೆಗೆ ಕಾದಿರುವಾಗ ದಡ್ಡನಂತೆ ಹೇಗೆ ಕೂತಿತುವುದು ಇಲ್ಲೇ? ಮೀನಿನ ಹೊಟ್ಟೆ ಬಗೆದು ಮೀನಿನ ಕಸವನ್ನು ಹೊರಹಾಕುತ್ತಾ..!!

೧..

ಅವನು ನನ್ನನ್ನು ಮೀನಿನ ಹೊಟ್ಟೆಯಂತೆ ದೊಗರು ಮಾಡಲೆಂದು ನಾನು ಕಾದಿದ್ದೆ. ತೊಡೆಯ ಮೇಲೆ ಮಲಗಿ ಇಡೀ ಜಗತ್ತಿನ ಸಹವಾಸ ಬೇಡವೆಂದು ಎಷ್ಟು ಚೆಂದ ಮೈ ಮರೆತ. ಏನು ಕೊಡಲಿ? ಬಾ ಎಲ್ಲವೂ ನಿನ್ನದೆ ಎಂದಾಗ ಸುಮ್ಮನೆ ಬಂದು ತೊಡೆಯ ಮೇಲೆ ಮಲಗಿಬಿಟ್ಟನ್ನಲ್ಲ. ಕಿರು ಬೆರಳಲ್ಲಿ ಆ ಮಚ್ಚೆಯನ್ನು ಏತಕ್ಕೆ ಮುಟ್ಟಿದ. ಅವನು ಮುಟ್ಟಲಿಲ್ಲ. ಒಳಗಿನ ತಂತಿಯನ್ನು ಮೀಟಿದ. ಸಾಯುವವರೆಗೂ ಅದರ ಕಂಪನ ನಿಲ್ಲದಂತೆ ಮಾಡಿದ.

ಅವನು ಏನಾದ್ರೂ ದೋಚಬೇಕಿತ್ತಾ? ದೋಚಿ ಹಿಂದೆ ತಿರುಗಿ ನೋಡದಂತೆ ಹೋಗಬೇಕಿತ್ತಾ? ನನಗೆ ಗೊತ್ತಿಲ್ಲ.‌ ಆ ಇಡೀ ರಾತ್ರಿ ಕತ್ತಲಲಿ ತುಂಬಿಕೊಂಡಿರುವ ಕನಸುಗಳನ್ನು ಹಿಡಿದಿಡಿದು ಉಣ್ಣಿಸುತ್ತಿದ್ದ. ಒಂದು ಹಸಿ ಮೀನನ್ನು ನನಗಾಗಿ ತಂದಿದ್ದ. ಅಲ್ಲೇ ಸೌದೆಗಳನ್ನು ಒಟ್ಟಿ ಸುಟ್ಟು ನಮ್ಮಿಬ್ಬರ ಸಂಬಂಧದ ಪೂಜೆಯ ಪ್ರಸಾದದಂತೆ ಒಂದು ತುಣುಕನ್ನು ಮುರಿದುಕೊಟ್ಟ. ನಾನು ಕಣ್ಣಿಗೊತ್ತಿಕೊಂಡು ತಿಂದೆ. ಯಾವುದೊ‌ ಕಥೆ ಹೇಳಿದ. ಮರೆತು ಹೋದ ಹಾಡನ್ನು ನೆನಪಿಸಿಕೊಟ್ಟ. ಮುಂದಿನ ಜನ್ಮದಲ್ಲೂ ಇಂತಹ ನಡುರಾತ್ರಿ ಸಿಗಲೇಬೇಕು ಎಂಬ ಒಪ್ಪಂದ ಬರೆಸಿಕೊಂಡ.

ಅವನು ಏನನ್ನು ದೋಚಲಿಲ್ಲ. ಬರೀ ಕೊಡುತ್ತಲೇ ಹೋದ. ನಾನು ಅವನ ಎದೆಯ ಮೇಲೆ ಮಲಗಿಬಿಟ್ಟೆ. ಕೊನೆಯ ನಕ್ಷತ್ರ ಜಾರುವ ವೇಳೆಗೆ ನನ್ನ ತಲೆ ಕದಲಿತು. ಎದ್ದು ಮತ್ತೊಮ್ಮೆ ನನ್ನ ತುಟಿ ಬದಿಯ ಕಪ್ಪು ಮಚ್ಚೆಯನ್ನು ಒಮ್ಮೆ ಮೀಟಿ ಎದ್ದು ನಡೆದ. ನನಗೆ ಎಚ್ಚರವಿತ್ತು. ಅವನು ಹೋಗುವುದನು ತಡೆಯಬೇಕಿತ್ತಾ?
ಅವನ ಹೆಂಡತಿ ಮಾಡಿಕೊಂಡ ಮೀನು ಸಾರನ್ನು ಅವಳೊಬ್ಬಳೆ ಹೇಗೆ ಉಂಡಾಳು ಎಂದು ಸುಮ್ಮನಾದೆ.

ಮನೆಗೆ ಬಂದು ಗೇಟು ತೆಗೆದ ಸದ್ದಿಗೆ ಮನೆ ಎದ್ದು ಕೂತಿತು. ನನ್ನ ಗಂಡ ಕನಸಿನ ಕೊನೆಯ ಚರಣದಲ್ಲಿದ್ದ. ಅವನ ಪಕ್ಕದ ನನ್ನ ಜಾಗ ಖಾಲಿಯಿತ್ತು. ನಾನು ಅವನಿಗೊಂದು ಗ್ಲಾಸು ಬಿಸಿ ಕಾಫಿ ಮಾಡಲು ಅಡುಗೆ ಮನೆಗೆ ಹೋದೆ. ಒಲೆ ಹಚ್ಚಿದೆ. ಬೆಂಕಿ ಖಿಲ್ಲನೆ ನಕ್ಕಿತು.

೨.

ಬಹುಶಃ ನಾನು ಮೊದಲು ಹೋಗಿ ಅವಳಿಗಾಗಿ ಕಾದಿದ್ದರೆ ಇವನಿಗೆಂತ ಆಸೆಬರುಕತನ ಅಂದುಕೊಳ್ಳುತ್ತಿದ್ದಳೊ ಏನೊ? ಅವಳೇ ಮೊದಲು ಹೋಗಿ ಕಾಯುತ್ತಾ ನಿಂತಿದ್ದರೆ ಇವಳಿಗೆಷ್ಟು ಕಾತುರ ನನ್ನ ಮೇಲೆ ಎನ್ನುವ ಭಾವ ನನ್ನನ್ನು ಸ್ಪರ್ಶಿಸಿ ಹೋಗುತ್ತಿತ್ತು. ಚಂದಿರ ಸತ್ತು ಹೋದ ಆ ರಾತ್ರಿಯಲ್ಲಿ, ಕತ್ತಲು ಸ್ವತಃ ಮುಂದೆ ನಿಂತು ನಮ್ಮಿಬ್ಬರನ್ನು ಸರಿಯಾದ ಸಮಯಕ್ಕೆ ಒಟ್ಟು ಮಾಡಿ ಮುಂದೆ ಕಳುಹಿಸಿತ್ತು. ಕತ್ತಲೆಗೆ ಥ್ಯಾಂಕ್ಸ್.

ಈ ಕತ್ತಲೆಯನ್ನು ನಾವಾಗಿಯೇ ಆಯ್ದುಕೊಂಡೆವಾ? ಕಾಕತಾಳೀಯವಾ? ನನಗೆ ಗೊತ್ತಿಲ್ಲ. ಇಬ್ಬರೂ ಒಂದು ಕಿಲೊಮೀಟರನಷ್ಟು ಜೊತೆಗೆ ನಡೆದವು. ನಮ್ಮಿಬ್ಬರ ಬೆಳಕು ನಮ್ಮ ಹೆಜ್ಜೆಗೆ ಸಾಕಿತ್ತು. ಅವಳ‌ ಕಣ್ಣಲ್ಲಿ ಹಣತೆ, ನನ್ನ ಕಣ್ಣಲ್ಲಿ ಪಂಜು.. ಸಾಕಲ್ಲವೇ?

ನಾನು ಮುಜುಗರದ ಮುದ್ದೆ. ನಾನು ತಂದ ಬ್ಯಾಗಿನಲ್ಲಿ ತಾಜಾ ಮೀನಿತ್ತು. ಮೊದಲು ತಾಕಿದ್ದು ಅವಳ ಬೆರಳು ಅದೂ ನನ್ನ ಬೆನ್ನಿಗೆ. ಅವಳು ಆಡಬೇಕಾದ ಸಾವಿರ ಮಾತುಗಳು ಅವಳ ಬೆರಳ ತುದಿಯಿಂದ ನನ್ನ ತಲುಪಿದವು. ಇನ್ನೇನು ಮಾತಾನಾಡಲು ಇಲ್ಲವೆಂಬಂತೆ ಆ ಸ್ಪರ್ಶ ಎಲ್ಲವನ್ನೂ ಹೇಳಿ ಮುಗಿಸಿತ್ತು. ನಾನು ಕೂತೆ. ಅವಳು ಪಕ್ಕ ಕೂತಳು. ಅವಳ ತಲೆ ನನ್ನ ಭುಜದ ಮೇಲೆ ಜಾರಿತು. ಅದೆಷ್ಟು ಗಂಟೆಗಳ ಕಾಲ ಸುಮ್ಮನೆ ಕೂತಿದ್ದೆವು. ಯಾವುದೊ ಹಕ್ಕಿ ಕಾಲ ಮರೆತಂತೆ ಕೂಗಿತು. ಕತ್ತಲೆಯಲ್ಲಿ ಸುಮ್ಮನೆ ಮುಖ ನೋಡಿಕೊಂಡು ನಕ್ಕೆವು.

ಅವಳು ದೋಚು ಅಂದಳು. ನಾನು ಕೊಡಲು ಬಂದವನು ದೋಚಲು ಅಲ್ಲ ಅಂದೆ. ಮತ್ತೆ ಅವಳ ಬೆರಳು ಆಗ ಎದೆ ತಾಕಿತ್ತು. ನಾನು ಕಂಪಿಸಿದೆ. ನಿನ್ನ ಕಪ್ಪು ಮಚ್ಚೆ ಮುಟ್ಟಲೇ ಅಂತ ಕೇಳಿದೆ. ಅವಳ ಬೆರಳಲ್ಲೇ ಅನುಮತಿಸಿದಳು. ಆ ಕತ್ತಲಲಿ ನಾನು ಮಚ್ಚೆಯ ತಲುಪಲು ಅವಳ ತುಟಿಯ ಸಹಾಯ ಪಡೆಯಬೇಕಾಯಿತು. ಬೆರಳು ತುಟಿ ತಲುಪಿ ಅವಳ ಮಚ್ಚೆ ಸೇರಿದವು. ಈ ಜನ್ಮದ ನನ್ನ ಹುಟ್ಟಿನ ಉದ್ದೇಶ ಮುಗಿಯಿತು ಎನಿಸಿತು.

ಮೀನು ಸುಟ್ಟುಕೊಟ್ಟೆ. ತಿಂದಳು. ನಾನೂ‌ ತಿಂದೆ. ಅವಳ ಮಡಿಲಲ್ಲಿ ಮಲಗಿದೆ. ಎರಡು ಹನಿ ಕಣ್ಣೀರು ಕೊಟ್ಟಳು. ಎದೆ ಮೇಲೆ ಮಲಗಿ ಚುಕ್ಕಿ ಎಣಿಸಿದಳು. ಕೊನೆಯ ಚುಕ್ಕಿ ಹೊರಟು ನಿಂತಾಗ ಅವಳು ಕಾಫಿಗಾಗಿ ಅವಳ ಗಂಡ ಕಾಯುವುದು ನೆನಪಾಗಿ ಎದ್ದೆ. ಅವಳು ಮಲಗಿದ್ದಳು. ನಿದ್ದೆಗೆ ಅಡ್ಡಪಡಿಸದೆ ಎದ್ದು ಬಂದೆ.

ಕತ್ತಲು ಸತ್ತು ಹೊಯಿತು. ಇಬ್ಬರ ಮನೆಯಲ್ಲೂ ಬೆಳಕು ಹರಿಯಿತು..

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: