ಸದಾಶಿವ್ ಸೊರಟೂರು ಕಥಾ ಅಂಕಣ- ಏಳು ಗುಟುಕು ಕಾಫಿ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

15

ದೂರದಿಂದಲೇ ನೋಡಿದೆ. ಬಸ್ಸು ಕಿಕೀಕ್ ಅಂದು ಸ್ಟಾರ್ಟ್ ಆದ ಸದ್ದೂ ಕೂಡ ಕೇಳಿಸಿತು. ಬಸ್ಸಿಗೆ ಇದು ಕೊನೆಯ ಟ್ರಿಪ್ ಇರಬಹುದು. ಕಂಡಕ್ಟರ್ ಆತುರದಲ್ಲಿದ್ದ. ಬಹುಶಃ ಅವನಿಗೆ ಮಗಳ ಮುಖ ನೆನಪಾಗಿರಬಹುದು. ನನಗೆ ನಿಂತು ಅಷ್ಟೆಲ್ಲಾ ಸಾವಧಾನವಾಗಿ ಯೋಚಿಸುವ ಸಮಯವೂ ಇರಲಿಲ್ಲ. ಇಷ್ಟಿಷ್ಟೆ ಯೋಚಿಸಿಕೊಂಡು ಓಡಿದೆ. ನಾನು ಓಡಿದಕ್ಕೆ ಬಸ್ಸು ಹುರುಪುಗೊಂಡಂತೆ ಎರಡು ಸುತ್ತು ತನ್ನ ಗಾಲಿಗಳನ್ನು ಸುತ್ತಿಯೆ ಬಿಟ್ಟಿತು. ಓಡಿ ಬಸ್ಸು ಹತ್ತಿದೆ. ಏದುಸಿರು, ಎದೆಯ ಏರಿಳಿತ. ಬಸ್ಸಿನಲ್ಲಿರುವ ಸೀಟುಗಳ ಕಡೆ ಕಣ್ಣು ಹಾಯಿಸಿದೆ. ಊಹೂಂ ಸೀಟು ಖಾಲಿ ಇಲ್ಲ. ಹಾಗೆಯೇ ಮುಂದೆ ನಡೆದು ಬಂದೆ. ಓಹ್ ಅಲ್ಲೊಂದು ಸೀಟು ಖಾಲಿ ಇದೆ. ಒಣಗಿದ ಬಾಯಿಗೆ ನಾಲ್ಕು ಹನಿ ನೀರು ಬಿದ್ದಂತಾಯ್ತು.. ಕಿಟಕಿಯ ಬದಿಯಲ್ಲಿ ಹುಡುಗಿ, ಅವಳ ಪಕ್ಕದ ಸೀಟು ಖಾಲಿ ಇದೆ. ಎರಡು ಕ್ಷಣ ನಿಂತು ಯೋಚಿಸಿದೆ. ತುಂಬಾ ಯೋಚಿಸುವಂತದ್ದೂ ಏನೂ ಇರಲಿಲ್ಲ. ಯೋಚಿಸಿ ನಾನೇನು ಯಾವುದೇ ವಿಮಾ ಪಾಲಿಸಿ ಕೊಳ್ಳುವುದಿರಲಿಲ್ಲ.

ನನಗೆ ಆ ಹುಡುಗಿ ಪಕ್ಕದ ಸೀಟು ಬಿಟ್ಟರೆ ಬೇರೆ ಕಡೆ ಜಾಗವಿರಲಿಲ್ಲ. ಅನಿವಾರ್ಯ ರೀ ಅನ್ನುವ ಧಿಮಾಕಿನಲಿ‌ ಕೂತೆ. ಕೂರುವಾಗ ಅವಳ ಮುಖದ ಕಡೆ ಒಮ್ಮೆ ನೋಡಿದೆ. ಗಂಭೀರ ವದನೆ. ಕೂತ ಬಳಿಕ ಇನ್ನೊಮ್ಮೆ ಅವಳ ಕಡೆ ನೋಡಿದೆ. ಬಣ್ಣ ಬಳಿದುಕೊಂಡ ನಸುಕೆಂಪಿನ ಬಣ್ಣದ ತುಟಿಗಳು, ಮೂಗುತಿ ಇಲ್ಲದ ನೀಳ ಮೂಗು ಕಾಣಿಸಿತು. ಮತ್ತೆ ನನ್ನ ಪಾಡಿಗೆ ನಾನು ನನ್ನ ದೃಷ್ಟಿಯನ್ನು ಮುಂದೆ ಚಾಚಿ ಕೂತೆ. ನಾನು ಕೂತಿದ್ದದನ್ನು ಗುರುತಿಸಿದ ಅವಳು ಇದರೇಲ್ಲಿನ‌ ಉದ್ದೇಶ ಇದ್ದಂತಿಲ್ಲ ಬಿಡು ಎಂಬಂತೆ ಚೂರು ಸರಿದು ಒಪ್ಪಿಗೆ ಸೂಚಿಸಿದಳು. ಬಸ್ಸು ಹೊರಟಿತು. ನಾವಿಬ್ಬರು ವಿಗ್ರಹಗಳಾದೆವು.‌ ಇಬ್ಬರೂ ಮನೆಯಲ್ಲೇ ಮಾತು ಮರೆತು ಬಿಟ್ಟವರಂತೆ ಕೂತಿದ್ದೆವು. ಒಂದೇ ಒಂದು ಮಾತು ಆಡಿದರೆ ಯಾವುದೊ ಒಂದು ಬೆಸುಗೆ ಬೆಳೆದು ಬಿಡುತ್ತದೊ ಎನ್ನುವ ಗಾಬರಿಯಲ್ಲಿ ಇಬ್ಬರೂ ಇದ್ದೆವು. ಅಪರಿಚಿತರ ನಡುವೆ ಮಾತಾದರೂ ಎಲ್ಲಿ?

ಎರಡು ಗಂಟೆ ಕಳೆಯಿತು. ಏಳೆಂಟು ಊರುಗಳು ಕಳೆದು ಹೋದವು. ಎಷ್ಟೊ ಜನ ಹತ್ತಿ ಇಳಿದರು. ಕಂಡಕ್ಟರ್ ಹತ್ತಾರು ಬಾರಿ ಓಡಾಡಿ ಹೋದ. ಊಹೂಂ ನಮ್ಮ ನಡುವೆ ಒಂದೆರಡು ಬಾರಿ‌ ನೋಟ ತಾಕಿತು ಬಿಟ್ಟರೆ ಮಾತಿಲ್ಲ. ಎಷ್ಟೊ ಹೊತ್ತಿನ ಬಳಿಕ ಆಕಳಿಸಿದ ಡ್ರೈವಿರ್ ಅಲ್ಲೆಲ್ಲೊ ಬಸ್ಸು ನಿಲ್ಲಿಸಿದ. ಬಹುಶಃ ಅದೊಂದು ಡಾಬಾವೊ, ಕಾಫಿಡೇ ನೊ, ರೆಸ್ಟೊರೆಂಟ್ ಅಥವಾ ಮೂರನ್ನೂ ಒಳಗೊಂಡ ಒಂದು ಹೋಟೆಲ್ಲೊ ನನಗೆ ಸ್ಪಷ್ಟವಾಗಲಿಲ್ಲ. ಅದು ಚಳಿಯಲ್ಲಿ ಬಚ್ಚಿಟ್ಟುಕೊಂಡಂತೆ ಕಾಣುತ್ತಿತ್ತು. ಡ್ರೈವರ್ ಹೆಡ್ ಲೈಟ್ ಆಫ್ ಮಾಡಿ ‘ಹತ್ತ ನಿಮಿಷ ಟೈಮಿದೆ ನೋಡ್ರಿ..’ ಅಂದು ಇಳಿದು ಹೋದ.

ನನಗೆ ಕಾಫಿ ಅಂದರೆ ಪ್ರಾಣ. ಅಮೃತ ಸಮಾನವೆಂದುಕೊಂಡು ಪ್ರತಿ ಗುಟುಕನ್ನು ತೀರ್ಥವೆಂಬಂತೆ ಕುಡಿಯುವ ಅಪ್ಪಟ ಕಾಫಿಭಕ್ತ ನಾನು. ಬೇರೆಯವರಿಗೂ ಕಾಫಿ ಕೊಡಿಸಿ ಅವರನ್ನೂ ಕಾಫಿಯ ಮೋಡಿಗೆ ಎಳೆದು ಹಾಕಿದ ದೂರೂ ನನ್ನ ಮೇಲಿದೆ. ಇದನ್ನು ಕೆಲವರು ಇದು ‘ಕಾಫಿಯ ತಲೆಹರಟೆ’ ಎಂದು ಕರೆದದ್ದೂ ಉಂಟು.

ಅವಳನ್ನು ನೋಡಿದೆ. ತಪಸ್ಸಿಗೆ ಕೂತ ದೇವಿಯಂತೆ ನಿಶ್ಚಲವಾಗಿದ್ದಳು. ಒಂದು ನಿಮಿಷ ಸುಮ್ಮನೆ ಉಗುಳು ನುಂಗಿದೆ. ಮತ್ತೆ ಅವಳ ಕಡೆ ನೋಡದೆ ಸುಮ್ಮನೆ ನನ್ನಷ್ಟಕ್ಕೆ ನಾ ಹೇಳಿಕೊಳ್ಳುವ ಶೈಲಿಯಲಿ ಅವಳಿಗೆ ತುಸು ಕೇಳಿಸುವಂತೆ ‘ಕಾಫಿ..?’ ಅಂದು ಎದ್ದೆ.‌ ಅದು ಕೋರಿಕೆಯೊ, ನಾನು ನನ್ನಷ್ಟಕ್ಕೆ ನಾನೇ ಹೇಳಿಕೊಂಡ ಸ್ವಗತವೊ, ಇಷ್ಟು ದೂರ ಒಟ್ಟಿಗೆ ಬಂದಿದ್ದೇವೆ ಕನಿಷ್ಠ ಕಾಫಿ ಗೆ ಕರೆಯದೆ ಇದ್ದರೆ ಹೇಗೆ ಎಂಬ ಕಾಳಜಿಯೊ ನನಗೂ ಕೂಡ ಗೊತ್ತಿಲ್ಲ. ಹೇಳುವುದನ್ನು ಹೇಳಿ ಸೀಟಿನಿಂದ ಎದ್ದೆ. ಯಾವುದೊ ಮಂತ್ರಕ್ಕೆ ವಶವಾದವಳಂತೆ ನನ್ನ ಹಿಂದೆ ಎದ್ದು ಬಂದಳು.‌

ಕಪ್ಪು ಕಲ್ಲಿನ ಟೇಬಲಿಗೆ ಎದುರುಬದುರಾಗಿ ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳಲ್ಲಿ ಅಭಿಮುಖರಾಗಿ ಇಬ್ಬರೂ ಕೂತೆವು. ಹಬೆ ಏಳುತ್ತಿದ್ದ ಮೋಡಿ ಕಾಫಿಯನ್ನು ವೇಟರ್ ತಂದಿಟ್ಟು ಹೋದ. ಇಬ್ಬರೂ ಒಟ್ಟಿಗೆ ಕಾಫಿ ಲೋಟ ಎತ್ತಿಕೊಂಡೆವು. ಕಾಫಿಯ ಹಬೆಯಲ್ಲೆ ಕರಗುತ್ತಿರುವ ಮೇಣದ ಗೊಂಬೆಗಳಂತಾದೆವು ನಾವು. ಇಬ್ಬರೂ ಕಾಫಿ ಕುಡಿದೆವು. ಒಂದೆರೆಡು ಬಾರಿ ‌ಕಣ್ಣು ತಾಕಿದವು ಅಷ್ಟೆ. ಮಾತಿಲ್ಲ. ಮಾತು ಆಡಿದರೆ ಎಲ್ಲಾ ಮುಗಿದೇ ಹೋಗುತ್ತದೆ ಎಂಬ ಭಯದಲ್ಲಿ ಇಬ್ಬರೂ ಇದ್ದೆವು. ಕಾಫಿ.. ಅದ್ಬುತವಾಗಿತ್ತು ನಾನು ಅದನ್ನು ಅವಳಿಗೆ ಹೇಳಲಿಲ್ಲ. ಅವಳೂ ಕೂಡ ಏನೂ ಹೇಳಲಿಲ್ಲ.‌ ನಾನು ಬಿಲ್ ಕೊಡಲು ಕೌಂಟರ್ ಬಳಿ ಹೋದೆ. ಅಲ್ಲೊಂದು ಇಂಗ್ಲೀಷ್ ನಲ್ಲಿ ಬರೆದ ಸಾಲಿತ್ತು. ಅವಸರದಲ್ಲಿ ಸುಮ್ಮನೆ ಕಣ್ಣಾಡಿಸಿದೆ. Coffee ಅಂತ ಏನೇನೊ ಒಂದು ಸಾಲಿನಲ್ಲಿ ಬರೆಯಲಾಗಿತ್ತು. ಕಾಳಜಿಯಿಂದ ಓದಬೇಕು ಅನ್ನವಷ್ಟರಲ್ಲಿ ಕಂಡಕ್ಟರ್ ವಿಷಲ್ ಊದಿ ಅವಸರಿಸಿದ. ನಾನು ಬಿಲ್ಲು ಕೊಟ್ಟು ಹೊರಟು ಹೋದೆ, ಅವಳು ಅದಾಗಲೇ ಹೋಗಿ ಬಸ್ಸಿನಲ್ಲಿ ಕೂತಿದ್ದಳು. ಮತ್ತೆ ಬಸ್ಸು ಹೊರಟಿತು.

ನಂತರ ಎಷ್ಟೊ ಹೊತ್ತಿನ ಬಳಿಕ ತನ್ನ ವ್ರತವನ್ನು ತಾನೇ ಮುರಿಯುವ ಅಸಲಿ ಮನುಷ್ಯರಂತೆ ‘ಹೆಸರು..?’ ಅಂದಳು. ಹೇಳಿದೆ. ಮತ್ತೊಂದು ಹತ್ತು ನಿಮಿಷದ ಬಳಿಕ ‘ಊರು..?’ ಅಂದಳು. ಹೇಳಿದೆ. ನನಗೆ ಜನಗಣತಿ ನೆನಪಾದದ್ದು ಸುಳ್ಳಲ್ಲ. ಅದಾದ ಅರ್ಧಗಂಟೆಯಲ್ಲಿ ಎಲ್ಲವೂ ಮುಗಿದು ಹೊಯಿತು. ಅವಳನ್ನು ಇಳಿಸಿದ ಬಸ್ಸು ಮುಂದೆ ಹೋಯಿತು. ನಾನು ಒಂಟಿಯಾದೆ. ಎಲ್ಲವನ್ನೂ ಕಳೆದುಕೊಂಡು ಇಹಲೋಕದ ಯಾತ್ರೆ ಮುಗಿಸಿ ಹೊರಟು ಹೋಗುವ ನತದೃಷ್ಟನಂತೆ ಭಾಸವಾಯಿತು. ನಂತರ ಇನ್ನರ್ಧ ಗಂಟೆಯಲ್ಲಿ ‌ನಾನು‌ ಬಸ್ಸು ಇಳಿದು ನಡೆದು ಹೋಗಿ ಮನೆ ಸೇರಿದೆ.

ಒಂದು ವಾರ ಅವಳ ಗುಂಗಲ್ಲಿ ಕಳೆದೆ. ಕಾಫಿಯ ರುಚಿ ಮರೆಯಲು ಸಾಧ್ಯವಾಗಲಿಲ್ಲ. ಕೈ ತುಂಬಾ ಕೆಲಸವಿದ್ದರೂ ನೆನಪು ಅಷ್ಟು ಸುಲಭಕ್ಕೆ ಮಾಸಲಿಲ್ಲ.

ಎಷ್ಟೊ ತಿಂಗಳು ಕಳೆದ ನಂತರದ ಒಂದು ದಿನ. ಮನೆಯಲ್ಲಿ ನಾನು ಕವಿತೆ ಓದುತ್ತಾ ಕೂತಿದ್ದೆ. ಕವಿತೆಯೊಂದಿಗೆ ಗುದ್ದಾಡುತ್ತಿದ್ದೆ. ಅಂಚೆಯವನು ಬಂದು ಒಂದು ಪೋಸ್ಟ್ ಕೊಟ್ಟು‌ ಹೋದ. ಇದೇನು ವಾಟ್ಸಪ್ ಕಾಲದಲ್ಲಿ ನನಗೆ ಅಂಚೆ ಬರೆಯುವವರು ಯಾರಿವರು ಮೂರ್ಖರು ಅಂದುಕೊಂಡು ಬಹಳ ಕುತೂಹಲದಲ್ಲಿ ಅಂಚೆ ತೆರೆದೆ.

‘ಅನಾಮಧೇಯ ಸಹಪಯಣಿಗರೆ, ನನಗೆ ಕಾಫಿ ಅಮೃತಸಮಾನ. ಐ ಲವ್ ಕಾಫಿ. ನೀವು ನನ್ನ ಮನಸನ್ನು ಅದೆಷ್ಟು ಚೆಂದ ಓದಿಕೊಂಡಿರಿ. ಕರೆದುಕೊಂಡು ಹೋಗಿ ಕಾಫಿ ಕೊಡಿಸಿದ್ರಿ. ಅಗ್ನಿಯ ಸುತ್ತ ಏಳು ಹೆಜ್ಜೆ ಹಾಕಿದರಷ್ಟೆ ಏಳು ಜನ್ಮದ ಬಂಧವಲ್ಲ. ಕಣ್ಣು ತಾಕಿಸಿಕೊಂಡು ಏಳು‌ ಗುಟುಕು ಕಾಫಿ ಕುಡಿದರೂ ಅದರಷ್ಟೇ ಪವಿತ್ರ. ಎರಡಕ್ಕೂ ಅಂತಹ ಭಿನ್ನವೇನೆಲ್ಲ. ಇನ್ಮುಂದೆ ನನ್ನ ಪೋಟೊ ನಿಮ್ಮ ರೇಷನ್ ಕಾರ್ಡಿನಲ್ಲಿರುತ್ತದೆ.. ನೆನಪಿಡಿ’

ಇತಿ ನಿಮ್ಮ
ಕಾಫಿ‌ ಪಯಣಿಗಳು..’

ಎಂದಿತ್ತು.

ಇಡೀ ಪತ್ರಕ್ಕೆ ಅಂದಿನ ಕಾಫಿಯ ವಾಸನೆ ಇತ್ತು. ಜೊತೆಗೆ ಇನ್ಯಾವುದೊ ಹೊಸ ಸುಗಂಧವೊಂದು ಅದರೊಂದಿಗೆ ತೂರಿಕೊಂಡು ಬಂದಿತ್ತು. ಪತ್ರ ಸ್ಟ್ಯಾಂಪ್ ಅಂಟಿಸುವಾಗ ಅವಳ ತುಟಿಯ ರಂಗಿನ ತುಣುಕು ಬಣ್ಣವು ಇರಬಹುದಾ ಅಂತ ಹುಡುಕಿದೆ.

ಪತ್ರ ಮಡಿಚಿ ಎದೆಜೇಬಿನಲ್ಲಿಟ್ಟುಕೊಂಡೆ. ಅಮ್ಮ ಕಾಫಿ ತಂದು ಮುಂದಿಟ್ಟಳು. ಅಮ್ಮ ನನ್ನ ಮುಖದಲ್ಲಿ ಏನಿತ್ತೆಂದು ಓದಿಕೊಂಡರಾ..? ಗೊತ್ತಿಲ್ಲ!

ಆದರೆ ಅವತ್ತು ಇಬ್ಬರೂ ಕುಡಿದಾಗ, ನಾನು ಕಾಫಿಯ ಬಿಲ್ ಕೊಡಲು ಕೌಂಟರ್ ಗೆ ಹೋದಾಗ ಅವಸರದಲ್ಲಿ ಓದಿಕೊಂಡ ಸಾಲುಗಳು ಈಗ ನೆನಪಾಗತೊಡಗಿದವು.‌ ಹೌದು, ನನಗೆ ಈಗ ಸರಿಯಾಗಿ ನೆನಪಾಗುತ್ತಿದೆ. ಅಲ್ಲಿ ಬರೆದಿದ್ದು ‘coffee drinkers are true lovers..’

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: