ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಹಿಂದೆ ಅವಧಿಯ ಕತೆ ಕಿಟಕಿ ಅಂಕಣದಿಂದ ಇದೀಗ ಮತ್ತೊಂದು ಹೊಸ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ ೧
1.
ನಗರ ಬೆಳಕು ಹಡೆಯತೊಡಗಿತು. ಆಕಾಶದ ತುಂಬಾ ಡಮ್ ಡಮ್ ಸದ್ದು, ಬೆಳಕೇ ಅತ್ತಂತೆ. ಮತ್ತೊಮ್ಮೆ ಮೊಬೈಲ್ ಟಣ್ ಎನ್ನುತ್ತಾ ಅವನನ್ನು ಕರೆಯಿತು. ಟ್ರಾಫಿಕ್ ಮಧ್ಯೆಯೇ ತೆಗೆದು ನೋಡಿದ. ಮತ್ತೊಂದು ಅರ್ಡರ್. ಶಿವಾಜಿನಗರದ ಕಡೆ. ಎಲ್ಲವೂ ಹಬ್ಬದ ಊಟಗಳೆ..
ಆಹಾ ಇವತ್ತಂತೂ ಎಷ್ಟೊಂದು ಅರ್ಡರ್ ಗಳು. ಊರಿಗೆ ಹೋಗಿದ್ದರೆ ಸುಮ್ಮನೆ ಲಾಸ್ ಆಗುತ್ತಿತ್ತು. ಆ್ಯಪ್ ನಲ್ಲಿ ಹಾಗೆ ಗಮನಿಸಿದ. ಕಮಿಷನ್ 2500 ರೂಪಾಯಿ ದಾಟಿದೆ. ದಿನಾ 1500 ರೂಪಾಯಿ ಆದರೆ ಹೆಚ್ಚು. ಇವತ್ತು ಹಬ್ಬ. ಜನ ಆನ್ಲೈನ್ ಹಬ್ಬ ಖರೀದಿ ಮಾಡುತ್ತಿದ್ದಾರೆ. ಅವರು ಹಬ್ಬ ಖರೀದಿಸಿದಷ್ಟೂ ತನ್ನ ಖಾತೆಗೆ ಈಗ ಪುಟ್ಟ ಬೆಳಕು..
ಬೆಳಕು ಹೀಗೂ ಬರುತ್ತದೆ..
ಪ್ರತಿ ಮನೆಯ ಬಾಗಿಲ ಬಳಿ ಆರ್ಡರ್ ಹಿಡಿದು ನಿಂತಾಗ ಅವ್ವ ನೆನಪಾಗುತ್ತಾಳೆ.
‘ಹಬ್ಬಕ್ಕೆ ರಜೆ ಇಲ್ವ ಮಗಾ. ಬಂದ್ಬಿಡು’ ಅವ್ವ ಕರೆಯುತ್ತಾಳೆ. ಹಬ್ಬಕ್ಕೆ ರಜೆ ಕೊಡಲು ಇದೇನು ಸರ್ಕಾರಿ ನೌಕರಿಯೇ! ಪಾಪ ಅವ್ವನಿಗೇನು ಗೊತ್ತು?
ನೀನು ಎಷ್ಟರವನು ಎಂದು ನೆನಪಿಸಲೆಂದೇ ಹಬ್ಬಗಳು ಬರುತ್ತವೆಯೊ ಏನೊ!
ಎಲ್ಲಾ ಹುಡುಗರು ಹೀಗೆ ಹಬ್ಬಕ್ಕೆ ಊರು ಸೇರಿಬಿಟ್ಟರೆ ಇಲ್ಲಿ ಹಬ್ಬ ಮಾರುವವರು ಯಾರು? ಹಬ್ಬ ಅನಾಥವಾಗುತ್ತಿತ್ತು. ತಮ್ಮ ಖಾತೆಗೆ ಪುಟ್ಟ ಬೆಳಕು ಬರುವುದಾದರೂ ಹೇಗೆ?
ಅವ್ವ ಈಗಾಗಲೇ ಎರಡು ಪುಟ್ಟ ಹಣತೆಗಳನ್ನು ಒರೆಸಿಟ್ಟಿರುತ್ತಾಳೆ. ಐದಾರು ವರ್ಷದ ಹಿಂದೆ ಆಕೆ ನಾಲ್ಕು ಹಣತೆಗಳನ್ನು ಕೊಂಡು ತಂದ ನೆನಪು. ಅದರಲ್ಲಿ ಎರಡು ಒಡೆದು ಈಗ ಎರಡು ಮಾತ್ರವೇ ಉಳಿದಿವೆ.
ಅವ್ವ ಎಂದೂ ಹಣತೆಗಳನ್ನು ತೊಳೆಯುವುದಿಲ್ಲ. ಹಣತೆಗಳನ್ನು ತೊಳೆಯಬಾರದು ಎಂಬುದು ಅವಳ ವಾದ. ಅವುಗಳನ್ನು ಚೆನ್ನಾಗಿ ಒರೆಸಬೇಕು.. ತೊಳೆದರೆ ನಮಗೆ ಒಳ್ಳೆಯದಾಗುವುದಿಲ್ಲ ಮಗಾ! ಎಂಬುದು ಅವಳ ನಂಬಿಕೆ.
ಈ ಒಳ್ಳೆಯದು ಅಂದರೆ ಏನು?
2
ದೆವ್ವದಂತಹ ಅಪಾರ್ಟ್ಮೆಂಟ್. ಬ್ಲಾಕ್ ‘ಸಿ’ ಯ ೫ನೇ ಫ್ಲೋರ್ ನಲ್ಲಿ ನಿಂತಿದ್ದಾನೆ. ಸಮವಸ್ತ್ರದಲ್ಲಿರುವ ಸೆಕ್ಯೂರಿಟಿ ಗಾರ್ಡ್. ಊರು ಕತ್ತಲಾಗುತ್ತಿದ್ದೆ. ಕಿಟಕಿ ಆಚೆ ನೋಡಿದ. ಬೆಳಕೊ ಬೆಳಕು. ಭಾರಿ ಬಣ್ಣದ ಬೆಳಕು. ನಿಂತೇ ಇರಬೇಕು. ಕೂರುವಂತಿಲ್ಲ. ಕಾಲು ಸೆಳೆತ ಮತ್ತೆ ಶುರುವಾಗಿದೆ. ಸೊಂಟದ ಹಿಂಭಾಗದಲ್ಲಿ ಹುಟ್ಟಿ ಎಡಗಾಲು ಮೂಲಕ ಹರಿಯುತ್ತದೆ. ಹರಿಯುವುದಾದರೆ ಹರಿಯಲಿ. ಹರಿದು ನೆಲ ಸೇರಲಿ ಅಂದುಕೊಳ್ಳುತ್ತಾನೆ. ಅದು ಹರಿದು ಹೋಗುವುದಿಲ್ಲ. ಅಲ್ಲೇ ನಿಲ್ಲುತ್ತದೆ. ಮತ್ತೆ ಮೇಲಕ್ಕೆ ಹರಿಯುತ್ತದೆ.
ರಜೆ ಕೊಡಿ ಅಂದಿದ್ದ. ‘ಹಬ್ಬ. ಈಗಾಗಲೇ ತುಂಬಾ ಜನ ರಜೆ ಮೇಲೆ ಹೋಗಿದ್ದಾರೆ. ರಜೆ ಇಲ್ಲ ಅಂದಿದ್ದರು’ ಬಾಸು.
ನೋವು ತೋರಿಸಿಕೊಂಡು, ಮಗಳ ನಲಿವು ನೋಡಿಕೊಂಡು ಬರೋಣ ಅಂದುಕೊಂಡಿದ್ದ. ಕಾಲ ನೋವಿಗೆ ಮಗಳ ನಗು ಹಚ್ಚಿಕೊಂಡು ಬಂದರೆ ನೋವು ಗುಣವಾದೀತು ಎಂಬ ನಂಬಿಕೆ ಅವನದು.
ನಿನ್ನೆಯಷ್ಟೇ ಮನೆಗೆ ಫೋನ್ ಮಾಡಿ ಬರಲು ಆಗಲ್ಲ ಅಂದಿದ್ದ. ಮಗಳು ಅಪ್ಪ ಅಪ್ಪ ಅನ್ನುತ್ತಾಳೆ. ಬನ್ನಿ ಅಂದಿದ್ದಳು ಹೆಂಡತಿ. ಹೊಸ ರಂಗೋಲಿ ಕಲಿತಿದ್ದಾಳಂತೆ. ನೀವು ಬಂದಾಗ ಅದನ್ನು ಹಾಕಿ, ಅದಕ್ಕೆ ಬಣ್ಣ ತುಂಬಿ ದೀಪ ಹಚ್ಚಿಡುತ್ತಾಳಂತೆ. ವಾರದಿಂದಲೇ ಅವಳದು ಅದೇ ಕನವರಿಕೆ’ ಅಂದಿದ್ದಳು ಹೆಂಡತಿ.
ಬಾಸ್ ‘ಸಾಧ್ಯವೇ ಇಲ್ಲ’ ಎಂದಿದ್ದರು.
ಅಪಾರ್ಟ್ಮೆಂಟ್ ರಂಗೇರತೊಡಗಿತು. ಮನೆ ಮನೆಯಿಂದ ಹಬ್ಬದ ಅಡುಗೆಯ ವಾಸನೆ. ಸಂಭ್ರಮ ಆಚೆ ಚೆಲ್ಲುತ್ತಿತ್ತು. ಕಾರಿಡಾರ್ ನಲ್ಲಿ, ಅಪಾರ್ಟ್ಮೆಂಟ್ ನ ಅಂಗಳದಲ್ಲಿ ಮಕ್ಕಳೊ ಮಕ್ಕಳು. ದುಬಾರಿ ಬೆಲೆಯ ಹೊಸ ಬಟ್ಟೆ. ಮುಖದ ತುಂಬಾ ಬೆಳಕಿನ ನಗು. ಕೈ ತುಂಬಾ ಪಟಾಕಿಯ ಸಂಭ್ರಮ. ಅವರ ಜೊತೆ ಜೊತೆಯಲ್ಲೇ ಹೆತ್ತವರ ಸಡಗರ.
ಅವನು ನಿಂತು ನೋಡುತ್ತಿದ್ದ. ಕಾಲು ಸೆಳೆಯುತ್ತಲೇ ಇತ್ತು.
ಅವನ ಪೋನ್ ರಿಂಗಾಯ್ತು. ‘ಮಗಳು ಅಳ್ತಾ ಇದಾಳೆ. ಅಪ್ಪ ಬಂದಿಲ್ಲ ಅಂತ ದುಃಖ. ರಂಗೋಲಿಯೂ ಇಲ್ಲ, ಬಣ್ಣವೂ ಇಲ್ಲ, ದೀಪವೂ ಇಲ್ಲ.. ಈಗ ಊಟವೂ ಬೇಡ ಅಂತ ಹಠ ಹಿಡಿದಿದ್ದಾಳೆ..’ ಹೆಂಡತಿಯ ಗಂಟಲು ಕಟ್ಟುತ್ತದೆ.
ಮಗಳ ಕನಸು ಕಾಯದೇ.. ಇಲ್ಲಿ ಇವರ ಸಂಭ್ರಮ ಕಾಯುತ್ತಾ ಕೂರುವ ತನ್ನ ವಿಧಿಗೆ ಬೈದುಕೊಂಡ.
ಬಣ್ಣವೂ ಇಲ್ಲ ದೀಪವೂ ಇಲ್ಲ..
ಕಾಲಿನ ನೋವು ಮತ್ತಷ್ಟು ಹೆಚ್ಚಿತು.. ಕಿಟಕಿಯಾಚೆ ನೋಡಿದ. ಎಲ್ಲಾ ಬಣ್ಣಗಳೂ ಮಸುಕು ಮಸುಕು.
3
ICU. ಮೈಯೆಲ್ಲಾ ಕಣ್ಣು. ದೇವರು ಈ ಹಬ್ಬದ ದಿನವಾದರೂ ಈ ರೋಗಿಗಳಿಗೆ ವಿರಾಮ ಕೊಡಬೇಕಿತ್ತು ಅಂದುಕೊಂಡಳು ನರ್ಸ್.
ಮಗುವಾದ ಎರಡೇ ವರ್ಷಕ್ಕೆ ಗಂಡ ಬಿಟ್ಟು ಹೋಗಿದ್ದ. ದುಡಿಯಬೇಕು. ಕೈಯಲ್ಲಿ ನರ್ಸ್ ಕೆಲಸದ ಓದು ಇತ್ತು. ಮಗನನ್ನು ತನ್ನ ಅಮ್ಮನ ಬಳಿ ಬಿಟ್ಟು ಬೆಂಗಳೂರಿಗೆ ಬಂದು ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇರಿಕೊಂಡಿದ್ದಾಳೆ.
ಬದುಕು ಮತ್ತೊಮ್ಮೆ ಶುರುವಾಗಿತ್ತು. ಪಿಜಿಯಲ್ಲಿ ಊಟ ನಿದ್ದೆ. ಆಸ್ಪತ್ರೆಯಲ್ಲಿ ದುಡಿಮೆ.
‘ಸರ್ ರಜೆ ಬೇಕಿತ್ತು ಹಬ್ಬಕ್ಕೆ. ಮಗ ಕಾಯುತ್ತಾನೆ..’ ಕೇಳಿದ್ದಳು. ‘ನೋ.. ತುಂಬಾ ಪೇಶೆಂಟ್ ಗಳಿವೆ ಆಗಲ್ಲ’ ಅವಳ ಕೋರಿಕೆ ತಳ್ಳಿ ಹಾಕಿತ್ತು ಆಸ್ಪತ್ರೆ.
ದುಃಖ ನುಂಗಿಕೊಂಡಳು.
ಈ ICU ನಲ್ಲೇನು ಹಬ್ಬ ಕಾಣುತ್ತಿಲ್ಲ, ಕಾಡುತ್ತಿಲ್ಲ. ಆದರೆ ಮನಸಿನೊಳಗೆ ನುಗ್ಗಿ ಬರುತ್ತಿದ್ದೆ. ಮಗನ ಮುಖವೇ ನೆನಪಾಗುತ್ತಿದೆ.
ಎಲ್ಲಾ ಟ್ರೀಟ್ಮೆಂಟ್ ಮುಗಿಸಿ ಐದು ನಿಮಿಷ ಹಾಗೆ ಕೂತಳು. ಮೊಬೈಲ್ ತೆಗೆದಳು. ಹಬ್ಬದ ಶುಭಾಶಯಗಳು ತುಂಬಿ ಹೋಗಿದ್ದವು.
ವಾಟ್ಸಾಪ್ ತೆರೆದು ಸ್ಟೇಟಸ್ ನೋಡುತ್ತಾ ಬಂದಳು. ಎಲ್ಲರೂ ಮಕ್ಕಳೊಂದಿಗೆ ಹಬ್ಬ ಸಂಭ್ರಮಿಸುತ್ತಿದ್ದಾರೆ. ತನ್ನ ಮಗನ ನೆನಪಾಯ್ತು. ಎದೆಯಲ್ಲಿ ಸಂಕಟ.
ತಡೆಯಲಾಗದೆ ಮನೆಗೆ ಕರೆ ಮಾಡಿದಳು.
‘ಅಮ್ಮ ಪಾಪು ಏನು ಮಾಡ್ತಿದಾನೆ..?’
‘ಗೇಟಿನ ಬಳಿ ನಿಂತಿದ್ದಾನೆ. ಎಷ್ಟು ಕರೆದರೂ ಒಳಗೆ ಬರುತ್ತಿಲ್ಲ. ಬೀದಿಯಲ್ಲಿ ಮಕ್ಕಳು ಪಟಾಕಿ ಹಚ್ಚುತ್ತಿದ್ದಾರೆ. ಅದನ್ನು ನೋಡುತ್ತಾ ನಿಂತಿದ್ದಾನೆ. ಅವನನ್ನು ಯಾರೂ ಕರೆಯುತ್ತಿಲ್ಲ…’ ಅಂದರು.
ಮಗನ ಮುಖದಲ್ಲಿ ಅದೆಷ್ಟು ಬೇಸರ, ನೋವು ಇರಬಹುದು. ಅವನ ಮುಖವನ್ನು ಕಣ್ಣ ಮುಂದೆ ತಂದುಕೊಂಡಷ್ಟು ದುಃಖ ಹೆಚ್ಚಾಗುತ್ತಿತ್ತು..
ಅವನನ್ನು ಯಾರೂ ಕರೆಯುತ್ತಿಲ್ಲ.. ಹೌದು.. ಇಲ್ಲಿ ಯಾರೂ ಕರೆಯುವುದಿಲ್ಲ..
*
ನಮ್ಮ ಮನೆಯ ಬೆಳಕು ಯಾರೊ ನಮಗಾಗಿ ಸುಟ್ಟುಕೊಳ್ಳುತ್ತಿರುವುದರ ಕುರುಹು.
ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು..
। ಮುಂದಿನ ವಾರಕ್ಕೆ ।






0 Comments