ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’

ಸಂಪಿಗೆ ಹೂವಿನ ಪರಿಮಳ ನೆನಪುಂಟ ?

ಸದಾನಂದ ಹೆಗಡೆ

“ದೈರ್ಯ ತೆಗೆದುಕೊ,
ತುಂಡಾಗಿದ್ದು ದೇಹದ ಒಂದು ಭಾಗ ಮಾತ್ರ.”
ಎಂದು ಆಸ್ಪತ್ರೆಯಿಂದ ಹೊರಡುವಾಗ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಹೇಳಿದರು.
ಬದುಕುಳಿಸಿದ ವೈದ್ಯರಿಗೆ ಕೃತಜ್ಞತೆ ಹೇಳಿ ಹೊರಬಂದರು ಮಂಜಯ್ಯ ಐತುಮನೆ.
ಅದು 1950 ರ ಮೆಳೆಗಾಲ.
ಶರಾವತಿ ಕೊಳ್ಳದ ಕಾನನದ ” ಮರಗುಡಿ ಸೀಮೆ”.

ಮಳೆಗಾಲದಲ್ಲಿ ಅಡಕೆಗೆ ಬರುವ ಕೊಳೆ ರೋಗ ಇಂದು ನಿನ್ನೆಯದಲ್ಲ. ಇದೀಗ ತುತ್ತ ಸುಣ್ಣದ ಔಷಧ ಇದ್ದರೆ ಆಗಿನ ಕಾಲದಲ್ಲಿ ಮಳೆ ಆರಂಭದಲ್ಲಿಯೇ ಹಾಳೆಯ ಕೊಟ್ಟೆಯನ್ನು ಕಟ್ಟಿ ಅಡಕೆ ಗೊನೆಯನ್ನು ರಕ್ಷಣೆ ಮಾಡಲಾಗುತ್ತಿತ್ತು. ಜಾರುವ ಮರವನ್ನು ಏರಿ, ಚಂಡೆ ಯ ಸಮೀಪ ಜೋಲಿ ಮಣೆಯಲ್ಲಿ ಕುಳಿತು ಕೊಟ್ಟೆ ಕಟ್ಟಬೇಕು.

ಮಲೆನಾಡಿನಲ್ಲಿ ಅಡಕೆ ಮರಗಳು ಸರಾಸರಿ 50 ಅಡಿ ತನಕ ಬೆಳೆಯುತ್ತವೆ. ಆ ಎತ್ತರದಿಂದ ಆಯತಪ್ಪಿ ಬಿದ್ದರೆ ಹೇಗಿರುತ್ತದೆ ಜೀವ…
ಹತ್ತಿದ ಮರದ ಕೊನೆಗೆ ಹಾಳೆಯ ಕೊಟ್ಟೆ ಕಟ್ಟಿದರೆ ಮುಗಿಯಲಿಲ್ಲ. ನಂತರ ಆ ಮರದ ಸುತ್ತ ಇರುವ ಇನ್ನಿತರ ಅಡಕೆ ಮರಗಳನ್ನು ಕೊಕ್ಕೆಯಿಂದ ಬಗ್ಗಿಸಿ ಅವುಗಳಿಗೂ ಕೊಟ್ಟೆ ಕಟ್ಟಬೇಕು. ಹೊಟ್ಟೆಪಾಡಿಗೆ ಹಾಗೆ ಹೆಗಡೇರ ಮನೆಯ ಕೊಟ್ಟೆ ಕೊನೆ ಕೆಲಸ ಮಾಡುವ ಮಂಡಳ್ಳಿಯ ಶಂಭುಲಿಂಗೇಶ್ವರನ ಅರ್ಚಕ / ಕೊನೆಗೌಡ ಮಂಜಯ್ಯ ಆಯ ತಪ್ಪಿ ನೆಲಕ್ಕೆ ಬೀಳುತ್ತಾರೆ. ಬಿದ್ದ ಹೊಡೆತಕ್ಕೆ ಅವರ ಎಡಗೈ ಭುಜದ ಕೆಳಗಿನ ಮೂಳೆ ಎರಡು ತುಂಡಾಗಿ ಜೋಲುತ್ತದೆ.

ಕಂಬಳಿ ಜೋಲಿಯಲ್ಲಿ, ಕೊನೆಗೆ ಚಕ್ಕಡಿ ಗಾಡಿಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರು. ಒಂದು ತಿಂಗಳು ಅಲ್ಲಿ ಚಿಕಿತ್ಸೆ ನೀಡಲಾದರೂ, ಕೊನೆಗೂ ಕೈ ಯನ್ನು ಕತ್ತರಿಸಿದರು. ಅಪ್ರತಿಮ ಜೀವನ ಪ್ರೀತಿಯ ಈ ಮಂಜಯ್ಯ ಮುಂದೆ 38 ವರ್ಷ ಹೇಗೆ ಜೀವನ ನಡೆಸಿದರು ಎಂಬುದನ್ನು ಅವರ ಮಗ ರಾಮಚಂದ್ರ ಐತುಮನೆ ಪುಸ್ತಕ ಒಂದರಲ್ಲಿ ಬರೆದಿದ್ದಾರೆ. ಅದರ ಹೆಸರು “ಸಂಪಿಗೆ ಮರ”.
ಶರಾವತಿಗೆ ಲಿಂಗನಮಕ್ಕೆ ಆಣೆ ನಿರ್ಮಾಣ ಮೊದಲಿನ ಕತೆ ಇದು.

ರಾಮಚಂದ್ರ ಐತುಮನೆ ಮೂಲ ಅಲ್ಲಿಯವರಾಗಿದ್ದು, ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇದೀಗ ದಾವಣಗೆರೆಯಲ್ಲಿ ವಾಸಿಸುತ್ತಾರೆ.
ಅವರು ತಮ್ಮ ತಂದೆಯ ಬಗ್ಗೆ, ಮನೆಯ ಪಕ್ಕದ ಸಂಪಿಗೆ ಮರದ ಬಗ್ಗೆ ಬರೆದು ಪ್ರಕಟಿಸಿದ್ದಾರೆ. *ಸಂಪಿಗೆ ಮರ” ಖಾಸಗಿ ಪ್ರಸಾರದ ಪುಸ್ತಕ.
ರಾಮಚಂದ್ರ ಅವರು ಬರೆದುಕೊಂಡಂತೆ, ಇದು ಅವರ ಕುಟುಂಬ ಕಥನ ರೂಪಿ ಪುಶ್ತಕ.

ಈ ಮೊದಲು ದಶಕಕ್ಕೊಂದಾವರ್ತಿ ಸಂಪಿಗೆ ಮರವನ್ನು ಬರಹ ರೂಪದಲ್ಲಿ ತಂದಿದ್ದು, ಮೊದಲು ಕತೆಯಾಗಿತ್ತು. ಎರಡನೆ ಬಾರಿಗೆ ಕವಿತೆಯಾಯಿತು. ಇದೀಗ ಕುಟುಂಬ ಕಥನ. ಇವರ ಬಾಲ್ಯದಲ್ಲಿ ಮನೆಯ ಪಕ್ಕ ಒಂದು ಸಂಪಿಗೆ ಮರ ಇತ್ತು. ಇವರ ತಂದೆ ಚಿಕ್ಕವರಿರುವಾಗ ನೆಟ್ಟರು. ತಂದೆಯ ಕಾಲಾನಂತರ ಆ ಸಂಪಿಗೆ ಮರವೂ ಕಾಲವಾಯಿತು.

ಬಹುಶಃ ಮನೆಯ ಮೇಲೆ ಬೀಳುವುದೆಂದ ಕಡಿದು ಹಾಕಲಾಯಿತು ಅನ್ನಿಸುತ್ತದೆ. ಸಂಪಿಗೆ ಮರ ಮತ್ತು ತಂದೆಯ ಜೀವನವನ್ನು ಹೋಲಿಸಿ ಹೆಣೆದ ಒಂದು ಕೃತಿ. ಈ ಸಂಪಿಗೆ ಮರವು ಇವರನ್ನು ಅತಿಯಾಗಿ ಕಾಡಿದ್ದು ನಿಜ. ವಿಶೇಷ ಎಂದರೆ ಪುಸ್ತಕದ ಮುಖ ಪುಟದಲ್ಲಿ ಬಿಡಾರ ರೂಪಿ ಮನೆಯ ಪಕ್ಕ ಬೃಹತ್ ಆದ ಒಂದು ಸಂಪಿಗೆ ಮರ. ಬೆನ್ನು ಪುಟದಲ್ಲಿ ಸುಂದರ ಹೂವಿನ ಸಹಿತ ಸಂಪಿಗೆಯ ಕೊಂಬೆ ಇದೆ. ರಾಮಚಂದ್ರ, ಇವರ ಪತ್ನಿ ವಿನೋದ ದಂಪತಿಯ ಪುತ್ರಿ, ಚಿತ್ರಕಲಾವಿದೆ ಕಾವ್ಯ ಭಟ್ಟ ಅವರು ಈ ಚಿತ್ರ ಬಿಡಿಸಿದ್ದಾರೆ. ಮುಖಪುಟದ ಎರಡನೆ ಪುಟದಲ್ಲಿ ಶರಾವತಿ ಕೊಳ್ಳದ ಒಂದು ಚಿತ್ರ ವ್ಯಾನ್ ಘಾ ಶೈಲಿಯಲ್ಲಿ ಗಮನ ಸೆಳೆಯುತ್ತದೆ.

ಲೇಖಕರಿಗೆ ಮನೆಯ ಪಕ್ಕದ ಸಂಪಿಗೆ ಮರ ಬಹುವಾಗಿ ಕಾಡಿದ್ದು, ಇಲ್ಲಿನ ಅನನ್ಯ ಸಂಗತಿ. ಬಾಲ್ಯದಲ್ಲಿ ಆಡಿ ಬೆಳೆದ ಮನೆ ಎದುರಿನ ಮರಗಳು ನಮ್ಮ ಅಂತರಂಗದ ಖಾಯಂ ಸದಸ್ಯರಾಗಿರುತ್ತವೆ ಎಂಬುದಕ್ಕೆ ಇದು ಸಾಕ್ಷಿ. ಕುಟುಂಬ ಕತೆಯಾದ ಈ ಪುಸ್ತಕದಲ್ಲಿ ಏನೆಲ್ಲ ತುರುಕಿದ್ದಾರೆ ! ಮದ್ಯೆ ಡಿವಿಜಿ ಕಗ್ಗ, ಇವರ ಇಷ್ಟದ ಭಜನೆ, ಸಿನಿಮಾ ಹಾಡುಗಳು ಇವೆ. ಇವುಗಳನ್ನೆಲ್ಲ ಸೋಸಿ, ಒಂದು ಅತ್ಯುತ್ತಮ ಪುಸ್ತಕವನ್ನು ಮಾಡಬಹುದು.
ಇವರ ತಂದೆ ಅಡಕೆ ಮರದಿಂದ ಬಿದ್ದು ಕೈ ಮುರಿದುಕೊಂಡ ಘಟನೆಯು ತೋಟದ ಸೀಮೆಯ ಕೊನೆಗೌಡರ ಸಾಹಸದ ಬದುಕು ಹೇಗೆ ಎಂಬುದನ್ನೆಲ್ಲ ನೆನಪಿಸುತ್ತದೆ.

ಮೆಗ್ಗಾನ್ ಎಂಬ ಸಜ್ಜನ ಬ್ರಿಟೀಷ್ ಅಧಿಕಾರಿ ಶಿವಮೊಗ್ಗದಲ್ಲಿ ಆಸ್ಪತ್ರೆ ನಡೆಸಿ, ನಿವೃತ್ತಿ ಬಳಿಕ ವಾಪಸ್ ಇಂಗ್ಲೆಂಡ್ ಹೋಗದೆ ಮಲೆನಾಡಿನಲ್ಲಿಯೇ ಬದುಕಿದ ಅಪರೂಪದ ಮಾಹಿತಿ ಇದೆ. ಮೆಗ್ಗಾನ್ ನ ಈ ಕತೆ ನನಗೆ ತಿಳಿದಿರಲಿಲ್ಲ. ಇವೆಲ್ಲವನ್ನೂ ಸೇರಿಸಿ, ಎಡಿಟ್ ಮಾಡಿದ ಒಂದು ಪ್ರೇರಣಾತ್ಮಕ ಪುಸ್ತಕವನ್ನು ಸಾರ್ವಜನಿಕರಿಗೆ ಇವರು ಕೊಡಬಹುದು.

ಏನೆ ಇರಲಿ. ನೀವೇ ಇಲ್ಲಿ ಹೇಳಿಕೊಂಡಂತೆ ನಿಮ್ಮ ತೃಪ್ತಿಗಾಗಿ ನೀವು ಬರೆದ ಪುಸ್ತಕ ನನಗೆ ಒಂದಿಷ್ಟು ವಿಚಾರವನ್ನು ತಿಳಿಸಿತು.

‍ಲೇಖಕರು Admin

April 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: