ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಮಂಗಲ ಮಹಾದೇವ ಹೊಸ ಕವಿತೆ- ಈಗ ಮಾತುಗಳು ಖಾಲಿಯಾಗಿವೆ

ಸತ್ಯಮಂಗಲ ಮಹಾದೇವ 

**

ಅಮ್ಮ ಊಟ ಮಾಡಿಸುವಾಗ ಮಗುವಿನ ಕೈಗೆ ಮೊಬೈಲ್ ಕೊಡುತ್ತಾಳೆ
ಮಮತೆಯು ಮುಗ್ಧತೆಯು ಸೊರಗುತ್ತಿವೆ
ಮಾತುಗಳಿಲ್ಲದೆ
ಬೇಸಿಗೆಯಲ್ಲಿ ಬತ್ತಿಹೋದ ಕೆರೆಯಲಿ
ಪೆಸೆಯಾರಿದ ಮಣ್ಣ ರೂಪದಂತೆ
ಮಾತುಗಳಿಲ್ಲದ ಕ್ರಿಯೆ,  ರುಚಿ ಇಲ್ಲದ ರಸದಂತೆ
ಈಗ ಮಾತುಗಳು ಖಾಲಿಯಾಗಿವೆ

ಪ್ರೀತಿ, ಪ್ರೇಮ,ದುಃಖ, ಕಣ್ಣೀರು ಈಗ
ಇಮೋಜಿಗಳ ರೂಪ ಪಡೆದಿದೆ
ಕರುಳಿಗೆ ಅರ್ಥವಾಗದಿರುವುದು ಈಗ
ಬೆರಳಿಗೆ ಅರ್ಥವಾಗುತ್ತದೆ
ಎದುರಿಗೆ ಸಿಕ್ಕಿದರೂ ಗುರುತಿಸಲಾಗದವರು ಮುಖಪುಸ್ತಕದಲ್ಲಿ ಅತ್ಯಾಪ್ತರಾಗಿದ್ದಾರೆ
ಅಪರಿಚಿತತೆಯೇ ಸಖ್ಯವೀಗ
ಹೂವಿಗೆ ತನ್ನ ಸೌಂದರ್ಯ ಅರ್ಥವಾಗಿದೆಯೇ ಎಂದು ಕೇಳುವಾಗ
ಈಗ ಮಾತುಗಳು ಖಾಲಿಯಾಗಿವೆ

ನಮ್ಮೂರ ಜಾತ್ರೆಯಲ್ಲಿ ಊರಾಡಲು ಬಂದು
ಮನೆ ಹೊಕ್ಕು ಮೈದುಂಬಿ ನಲಿಯುತ್ತಿದ್ದ ದೇವರು ಬೆರೆಯುತ್ತಿದ್ದ ಜನರೊಳಗೆ
ಈಗ ಪ್ಲಾಸ್ಟಿಕ್ ತಮಟೆಗಳ ಸದ್ದಿಗೆ
ಅವಸರದಲ್ಲಿ ಊರಿಗೆ ಮೈ ತುರುಕಿ
ಖಾಲಿಯಾಗುತ್ತಿರುವ ಜನರ ಮನದಲ್ಲಿ ದೇವರು
ಗೈರು ಹಾಜರಿಯಾಗಿದ್ದಾನೆ ಜಾತ್ರೆಗೆ
ಈಗ ಮಾತುಗಳು ಖಾಲಿಯಾಗಿವೆ

ಅಲ್ಲಿ ಒಂದು ಹೆಣವಿತ್ತು ಮನೆ ಮುಂದೆ
ಜಾತಿ ಧರ್ಮ ವರ್ಗ ವರ್ಣದ ಯಾವ ಬಟ್ಟೆಗಳು
ಅಲ್ಲಿ ಇರಲಿಲ್ಲ
ಎಲ್ಲರ ಎದೆಯೊಳಗೆ ಸಾವಿನದೇ ಮಾತಿತ್ತು
ಅವಳು, ಅವನು,ಪುಣ್ಯ, ಪಾಪ ಹೀಗೆ ನಿಶ್ಯಬ್ದವಿತ್ತು ಅಲ್ಲಿ ಮಾತುಗಳು ಹೊಸ ಹುಟ್ಟು ಪಡೆಯುತ್ತಿದ್ದವು
ಈಗ ಹೆಣಕ್ಕೆ ಎಲ್ಲ ಬಣ್ಣದ ಬಟ್ಟೆಗಳನ್ನು ಹೊದಿಸಿದ್ದಾರೆ ಮಾತುಗಳು ಖಾಲಿಯಾಗಿವೆ

ಮದುವೆಯ ದಿಬ್ಬಣ ಮದು ಮಕ್ಕಳ ಹೊನಲು ಬಾಸಿಂಗ ಕಟ್ಟಿಕೊಂಡ ಹಣೆಗಳಲ್ಲಿ ಸಂವಾದವಾಗುತ್ತಿದ್ದ ನೂರು ಅಪರಿಚಿತ ಕಥೆಗಳು
ಮೊದಲ ರಾತ್ರಿಯಲ್ಲಿ ವಿನಮಯವಾಗುತ್ತಿದ್ದ ರೋಮಾಂಚಕ ಕವಿತೆಗಳು
ಸುಖದ ಹಾಸಿಗೆಯಲ್ಲಿ ನಿತ್ರಾಣಗೊಂಡ
ಮಧುಮಕ್ಕಳ ನಿಷ್ಕ್ರಿಯ ಪ್ರಕ್ರಿಯೆಗಳಲ್ಲಿ
ಈಗ ಮಾತುಗಳು ಖಾಲಿಯಾಗಿವೆ

‍ಲೇಖಕರು avadhi

26 December, 2023

1 Comment

  1. ಕುಸುಮ ಎನ್

    ನಮಸ್ತೆ ಸರ್. ಮೊಬೈಲ್ ಮಕ್ಕಳಿಂದ ಹಿಡಿದು ಅಜ್ಜ ,ಅಜ್ಜಿಯರು ,ಭಿಕ್ಷುಕರವರೆಗೂ ಮೊಬೈಲ್ ಸ್ಕ್ಯಾನ್ ನೇ ಮಾತಾದಗ ನಿಮ್ಮ ಕವನ ಪ್ರಸಕ್ತ ದಿನಗಳಲ್ಲಿ ಒಪ್ಪುವ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading