ಸತ್ಯಮಂಗಲ ಮಹಾದೇವ ಕವಿತೆ- ಮತ್ತೆ ಯುಗಾದಿ…

ಸತ್ಯಮಂಗಲ ಮಹಾದೇವ

ಬಯಸಿ ಬಂದಿದೆ
ಹಬ್ಬದ ದಿಬ್ಬಣ ಬೆಟ್ಟ ಬಯಲು
ಗೆಜ್ಜೆ ಕಟ್ಟಿ ಕುಣಿದು ಕುಪ್ಪಳಿಸಲು
ಎಲೆ ಹೂವು ಹಣ್ಣು ಕಾಯಿ ಹೀಚು
ಪಲ್ಲವಿಸುವ ವನಮಹೋತ್ಸವಕ್ಕೆ
ಕೀಟದ ಕಣ್ಣು ಮಿನುಗುವ ನೋಟಕೆ
ಬಹುದೂರದ ಬಯಲು ಸಂಭ್ರಮದಲಿ ಮೀಯಲು
ಮತ್ತೆ ಯುಗಾದಿ

ಮುಸುಗು ಮುಚ್ಚಿದ ಮುಖಕೆ
ವಿಶ್ರಾಂತಿ ಕೊಡಬಹುದು
ಬೇವಿನ ತನುವನು ಪ್ಲಾಸ್ಟಿಕ್ ತಟ್ಟೆಗಳಲಿ
ಬಿಡಿಸಿಟ್ಟು ಆಗ್ರಾಣಿಸಬಹುದು
ಚಾಕೊಲೇಟುಗಳನು ಹಾಸಿ ಹೊದ್ದ ಎದೆಗಳಿಗೆ
ಬೆಲ್ಲದ ಬೆಚ್ಚನೆಯ ಕಿರಣಗಳ ರುಚಿ ತಗುಲಿಸಬಹುದು
ಬಯಸಿ ಬಂದಿದೆ – ಮತ್ತೆ ಯುಗಾದಿ

ಹಬ್ಬವನು ಹಂಚಲು
ಮೆಟ್ರೋ ಟ್ರೈನಿನಲಿ ನೆಂಟರ ಮನೆಗೆ
ಓಡಿ ಹೋಗಬಹುದು
ನೆಲದ ಈ ಗಿಜಿಗಿಜಿ ಟ್ರಾಫಿಕ್ಕಿನಲಿ
ಉಸಿರುಗಟ್ಟುವುದ ತಪ್ಪಿಸಿಕೊಳ್ಳಬಹುದು
ಸ್ಯಾನಿಟೈಸರನು ಬಳಸಿ ತೊಳೆದ ಕೈಗಳನು
ನೋಡುತಲಿ ನಿಟ್ಟುಸಿರು ಬಿಡಬಹುದು
ನಿಂತಲ್ಲೇ ಎತ್ತರಕೆ ಏರಿಸಿದ ಆಕ್ಸಲೇಟರುಗಳಿಗೆ ನಗುಮೊಗದ ತುಣುಕನ್ನು ಎಸೆಯಬಹುದು
ಬಯಸಿ ಬಂದಿದೆ – ಮತ್ತೆ ಯುಗಾದಿ

ಹಳ್ಳಿ ಸೊಗಡನು ಹೊದ್ದು ಮುಖವಾಡಗಳಲಿ
ಬೆವರುತಿರುವ ಹೊಟೆಲ್ಲುಗಳ
ಸೆಮಿಹಳ್ಳಿಗಳಾಗಿಸುವ ವ್ಯಾಪಾರಕೆ
ಮೊಬೈಲಿನೊಳಗೆ ಶುಭಾಶಯಗಳ ಕರೆಕೊಟ್ಟು
ಎದುರು ಬಂದರೂ ಗುರುತಿಸಲಾಗದ
ವಿಸ್ಮೃತಿಯ ಮಹಾಮೌನದ ಪೀಕಲಾಟಕ್ಕೆ
ತೋರು ಬೆರಳುಗಳು ಧನ್ಯವಾದಗಳನು ಟೈಪಿಸಿ
ಸೋತು ನರಳುವ ಸುಖಕ್ಕೆ
ಬಯಸಿ ಬಂದಿದೆ – ಮತ್ತೆ ಯುಗಾದಿ

ಹಳ್ಳಿ ನಗರ : ನಗರ ಮಹಾ… ಆದರೂ
ಬದಲಿಸುವ ಬವಣೆಗಳು ಬದಲಿಯಾಗುತ್ತಿದ್ದರೂ
ಬೇವಿನಕಹಿಯ ಕಂಪು ಬೆಲ್ಲದ ಸವಿಯ ತಂಪು
ಹೊಸ ಹೊಸ ಹೃದಯಗಳಿಗೆ
ಹೊಸದಾಗಿ ದಾಟಿಸುತ್ತವೆ ಮುಖವಾಡಗಳಿಲ್ಲದೆ
ನೈಜತೆಯಲಿ ನಿಜಾರ್ಥವನು ಹೊತ್ತು
ದಣಿವಿಲ್ಲದ ಸಂಭ್ರಮವನು ಕಾಲದ ತರತಮ ಒಲ್ಲದೆ
ಆದಿಯಿಂದ ಇಂದಿಗೂ
ಇಂದಿನಿಂದ ಮುಂದೆಯೂ
ಸೋಲದಂತ ಎದೆಯ ಸೊಲ್ಲು ನವನವೋದಯಕೆ
ಮಿಡಿಯುವಂತೆ
ಬಯಸಿ ಬಂದಿದೆ – ಮತ್ತೆ ಯುಗಾದಿ.

‍ಲೇಖಕರು avadhi

March 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: