ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ್ ಕುಲಕರ್ಣಿ ಹೊಸ ಕವಿತೆ- ಅವಳು ಬರುವಾಗ…

ಸತೀಶ್ ಕುಲಕರ್ಣಿ

1.

ಸಾವಿತ್ರಿಬಾಯಿಗೆ
ಅಕ್ಷರದ ಅಕ್ಕ ಅರಿವಿನ ತಾಯಿಗೆ
ಸಾವಿತ್ರಿಬಾಯಿಗೆ ನೂರೊಂದು ಶರಣು, ನೂರೆಂಟು ಶರಣು

ಮುಚ್ಚಿದ ಬಾಗಿಲು ತೆರೆದ ಆ ತಾಯಿಗೆ
ಸಾವಿತ್ರಿಬಾಯಿಗೆ ನೂರೊಂದು ಶರಣು, ನೂರೆಂಟು ಶರಣು

ಮಾತಿಲ್ಲದ ಬಾಯಿಗೆ, ಕಣ್ಣಿಲ್ಲದ ಜನರಿಗೆ
ಮಾತು ನೋಟವ ಕೊಟ್ಟ, ಅಕ್ಷರದ ತಾಯಿಗೆ ನೂರೆಂಟು ಶರಣು

ಕತ್ತಲ ಹಾದಿಗೆ, ಗುರಿಯಿಲ್ಲದ ದಾರಿಗೆ
ಕಂದೀಲು ಹಿಡಿದು ನಡೆಸಿದಾ ತಾಯಿಗೆ, ಸಾವಿತ್ರಿಬಾಯಿಗೆ ಶರಣು

ಹಂಗಿನಾ, ಅರಗಿನ ಅರಮನೆಯ ಕೆಡವಿದ
ಕಷ್ಟ ಕಡಲು ದಾಟೋಕೆ, ಹರಿಗೋಲ ಕೊಟ್ಟ ಆ ತಾಯಿಗೆ ಶರಣು

ಕಡಲಿನಾ, ಅದರೊಡಲಿನಾ
ಮುಳುಗಿದಾ ಸೂರ್ಯನಾ, ಹಿಡಿದೆತ್ತಿದಾ ಸಾವಿತ್ರಿಬಾಯಿಗೆ ಶರಣು

ನಮ್ಮ ಸಾವಿತ್ರಿಬಾಯಿ, ಆ ಅಕ್ಷರ ತಾಯಿಗೆ
ಕ್ರಾಂತಿ ಕೈಗಳಿಂದ ನೂರೊಂದು ಶರಣು ಸಾವಿತ್ರಿಬಾಯಿಗೆ

2. ಅವಳು ಬರುವಾಗ

ಸೀರೆ ಸಂಪತ್ತು, ಕಾಲುಂಗರ ತಾಳಿ ಬಿಲ್ವಾರು
ಹಲವಾರು ಶೃಂಗಾರ ಮಾತ್ರ ತರಲಿಲ್ಲ

ಒಲುವಿನೆರಡು ಕಣ್ಣು ದೀಪಗಳ
ತರೆದೆರಡು ಮೃದು ಹಸ್ತ, ಬಾಚುವಾ ತೋಳು

ತುಸು ನಗು ಹಗುರ
ಪಾದದ ಸದ್ದು ತಂದಳು

ಅವಳು ಬರುವಾಗ ಹಾಗೇಯೇ ಬರಲಿಲ್ಲ
ಆಕಡೆಯ ನೂರು ಕರುಳ ಬಳ್ಳಿಯ ಕಸಿಗಳ
ಆವೂರ ಬಿಸಿ ನೆನಪುಗಳ ಜೊತೆಗೆ ತಂದಳು

ಈಗ ಗೊತ್ತಾಗಿದೆ
ಅವಳು ಹಾಗೇಯೇ ಬರಲಿಲ್ಲ, ಬರುವಾಗ
ಗುಟ್ಟಾಗಿ ಎರಡು ಮಕ್ಕಳ, ಹೊಟ್ಟೆಯಲ್ಲಿಟ್ಟು
ಒಂದೊಂದೆ ಬಿಟ್ಟಳು
ನಾಲ್ಕೆರೆಡು ವರ್ಷಗಳಲ್ಲಿ

ನಗು ಖುಷಿ, ತುಸು ಸಿಡಿಮಿಡಿ
ಹಾಡು ಹಗಲಗುನುಗು, ಎಲ್ಲ ತಂದಿದ್ದಳು
ಅವಳು ಬರುವಾಗ

ಕಳೆದಂತೆ ದಿನಗಳು ಇಂಗಿ
ನೀರಾದಳು, ತಲೆಗೆ ನೆರಳು
ಎದೆನೋವಿಗೆ ಕೊರಳು
ಇಂತಹ ಸಂತ ಗುಣದ ಗುಣವಂತೆ

ಎಲ್ಲ ಎಲ್ಲ ತಂದಿರುವಳು, ಅವಳು ಬರುವಾಗ !

‍ಲೇಖಕರು Admin

1 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading