ಸಂಪು ಕಾಲಂ : 'ಮಲ್ಲಿಗೆ'ಯ ಮೀರಿ ಘಮಿಸಿದ ಕವಿ

“A life without love is like a sunless garden when the flowers are dead” ಅಂತಾನೆ ಐರಿಶ್ಕವಿ ಆಸ್ಕರ್ವೈಲ್ಡ್. ಈ ಲವ್ ಎಂಬುದು ಪ್ರತಿಯೊಬ್ಬರ ಜೀವನದ ಸನ್ಶೈನ್. ಬದುಕೆಂಬ ಸಸಿ, ಬೆಳೆದು ಅರಳಿ ಹೂ ಬಿಟ್ಟು ನಗಲು ಬೇಕಾದ ಬೆಚ್ಚನೆಯ ಕಾವು ಈ ಪ್ರೀತಿ. ಜೀವನದುದ್ದಕ್ಕೂ ಬಯಸುವ ಕಂಡೂ ಕಾಣದ, ಸಿಕ್ಕಿಯೂ ಸಿಗದ ಪ್ರೀತಿಯ ಅರ್ಥ, ನಿರರ್ಥಗಳು ಎಷ್ಟು ಸಿಹಿಯೋ ಅಷ್ಟೇ ಗೋಜಲು ಕೂಡ. ಒಂದು ಮಗು ತಪ್ಪು ಹೆಜ್ಜೆ ಹಾಕಿದಾಗ ಅರಸುವ ಆಸರೆಯಿಂದ ಹಿಡಿದು, ಒಬ್ಬ ಯುವಕ ತನ್ನ ಬರಿ ತೋಳ ತುಂಬಲು ಹಂಬಲಿಸುವ, ಮೂರು ಕಾಲು ಮನುಷ್ಯ ತಾನು ಎಡವಿ ಬೀಳದಂತೆ ಬಯಸುವ ಹೆಗಲವರೆಗೆ ತನ್ನ ವಿವಿಧ ಸ್ವರೂಪಗಳನ್ನು ತೋರುವ, ಬೇಡುವ ಪ್ರೀತಿಯು ನಮ್ಮ ಗ್ರಹಿಕೆಗೆ ನಿಲುಕದ್ದು ಮತ್ತು ಸದಾ ಕಾಡುವಂಥದ್ದು.
ಇಂತಹ ಪ್ರೀತಿಯ ಆಗರವೇ ಒಂದು ನೂರು ಪುಟದ ಪುಸ್ತಕ ರೂಪ ಪಡೆದುಬಿಟ್ಟರೆ! ಇದೇ ಆದದ್ದು ನಮ್ಮ ನೆಚ್ಚಿನ ಕವಿ ಕೆ.ಎಸ್ನರಸಿಂಹಸ್ವಾಮಿಯವರ, ದಿ ವರ್ಲ್ಡ್ಫೇಮಸ್ “ಮೈಸೂರುಮಲ್ಲಿಗೆ” ಅಚ್ಚಾದಾಗ.
ಆಗ, ಎಲ್ಲರ ಮನದ ಮೂಲೆಯ ಒಂದು ಕೋಣೆಯಾಗಿರುವ ಪ್ರೇಮ, ವಿರಹ, ಅನುರಾಗ ಭಾವಗಳು ಇಂದಿನಷ್ಟು ಖುಲ್ಲಂ ಖುಲ್ಲಾ ಆಗಿ ತನ್ನ ನವುರಾದ ಭಾವ, ಸ್ನಿಗ್ಧತೆಗಳನ್ನುಕಳೆದುಕೊಂಡಿರಲಿಲ್ಲ. ಪ್ರೇಮ ಭಾವ ಒಂದು ಓಪನ್ಸೀಕ್ರೆಟ್ ಆಗಿ ಎಲ್ಲರನ್ನೂ ಸೆಳೆದಿತ್ತು. “ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು”, “ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ”, “ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ”, “ಪದುಮಳು ಒಳಗಿಲ್ಲ – ನಕ್ಕಳು, ರಾಯರು ನಗಲಿಲ್ಲ”, “ಕೋಣೆಯೊಳಗೆ ಬಳೆಯ ಸದ್ದು, ನಗುವರತ್ತೆ ಬಿದ್ದು, ಬಿದ್ದು”, “ನನ್ನವಳು ನನ್ನೆದೆಯ ಹೊನ್ನಾಡನಾಳುವಳು”…. ಹೀಗೆ ಭಾವುಕ ಸೆಳೆತವನ್ನು ಅಕ್ಷರಗಳಲ್ಲಿ ಹಿಡಿದಿಟ್ಟು, ಎಲ್ಲೂ ಅಶ್ಲೀಲವೆನಿಸದ ಆರ್ದ್ರ ಭಾವವನ್ನುತುಂಬಿ, ಓದುಗರ ತುಟಿಯಂಚಲಿ ಒಂದು ತುಂಟನಗೆ ಹೊಮ್ಮಿಸಿತ್ತು “ಮೈಸೂರುಮಲ್ಲಿಗೆ”. ಕೆ.ಎಸ್.ನರವರ ಮೊಟ್ಟ ಮೊದಲ ಕವನ ಸಂಕಲನವಾದ ಈ ಪುಸ್ತಕ ಬಿಸಿಬಿಸಿ ಖಾದ್ಯದಂತೆ ಮಾರಾಟವಾದ ರೆಕಾರ್ಡ್ ಅನ್ನು ಇಂದಿಗೂ ಯಾರೂ ಮುರಿದಿಲ್ಲ!
ಪ್ರೇಮಿಗಳು, ಭಗ್ನಪ್ರೇಮಿಗಳು, ವಿರಹಿಗಳು, ಪ್ರೇಮ ಭಾಷೆ ಕಲಿಯುವವರು, ಪ್ರೀತಿಯ ಬಗ್ಗೆ ಕುತೂಹಲ ತೋರುವವರು, ಪ್ರೇಮ ಫಲಿಸಿ ಸಂಪೂರ್ಣ ಸವಿ ಉಂಡು ಮಾಗಿದವರು, ಮತ್ತಿತರರು (ಯಾರಾದರೂ ಇದ್ದಲ್ಲಿ!) ಎಲ್ಲರೂ ಮೈಸೂರು ಮಲ್ಲಿಗೆಯ ಘಮಕ್ಕೆ ಮರುಳಾದರು. ಕನ್ನಡದಲ್ಲಿ ತೀ.ನಂ.ಶ್ರೀರವರು ಮೊಟ್ಟ ಮೊದಲ ಬಾರಿಗೆ “ಒಲುಮೆ” ಎಂಬ ಪ್ರೇಮ ಗೀತಾ ಸಂಕಲನವನ್ನು ರಚಿಸಿದ್ದರೂ ಮೈಸೂರು ಮಲ್ಲಿಗೆಯಷ್ಟು ಪ್ರತೀತಿ ಕಾಣಲಿಲ್ಲ. ಇವೆಲ್ಲವುಗಳಿಂದ ಕೆ.ಎಸ್.ನರವರು ಕನ್ನಡದ ಪ್ರೇಮ ಕವಿ, ಒಲವಿನ ಕವಿ ಎಂದೇ ಖ್ಯಾತರಾದರು.
ತಮ್ಮ ಈ ಖ್ಯಾತಿಯೇ ಕೆ.ಎಸ್ನರವರಿಗೆ ಒಲಿದಿರುವ, ಸಿದ್ಧಿಸಿರುವ ಇನ್ನೂ ಹೆಚ್ಚಿನ ಮೇರು ಸಾಹಿತ್ಯಿಕ, ಅನುಭಾವಿಕ ಸಾಮರ್ಥ್ಯಗಳು ಪ್ರಚಲಿತವಾಗದೆ, ಬೆಳಕಿಗೆ ಬರದೆ (ಅಟ್ಲೀಸ್ಟ್ ಸಾಮಾನ್ಯ ಜನರಿಗೆ) ಮರೆಯಾಗಿಬಿಟ್ಟಿತೇ? ಎಂಬುದು ನನ್ನ ಪ್ರಶ್ನೆ!
ಸಾಹಿತ್ಯದ ಗಂಧವೇ ಇಲ್ಲದವರಿಗೂ ಕೆ.ಎಸ್.ನ ಗೊತ್ತು, ಅವರ ಮೈಸೂರು ಮಲ್ಲಿಗೆ ಗೊತ್ತು! ಆದರೆ ಆ “ಲವ್ಸಾಂಗ್ ಬರೆಯೋ ಕವಿ”ಯ ಒಳಗೆ ಒಬ್ಬ ಗಂಭೀರ ಸಾಹಿತ್ಯಾಧ್ಯನ ಮಾಡಿದ, ಕಾವ್ಯ ರಚನೆ ಬರಿ ಬರಹವಲ್ಲ ಜೀವನ ಎಂದು ನಂಬಿದ, ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಯ ಕಾಳಜಿ ಸದಾ ವಹಿಸಿದ್ದ, ಇಷ್ಟಾದರೂ “ಮೇನ್ ಸ್ಟ್ರೀಮ್ ಕವಿ” ಎಂದಾಗ ಥಟ್ ಎಂದು ನೆನಪಾಗದ ಕವಿಯೊಬ್ಬನಿದ್ದಾನೆ ಎಂಬ ಮಾತು ಉತ್ಪ್ರೇಕ್ಷೆಯಲ್ಲ.

ಕೆ.ಎಸ್.ನರವರ  “ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ”, “ದೀಪವು ನಿನ್ನದೆ, ಗಾಳಿಯು ನಿನ್ನದೆ”, “ಬರಿಮೈಯ ಹೆಣ್ಣು ಪೀತಾಂಬರದ ಗೀತವನು ಹಾಡುತ್ತ ಬರುತಿಹಳು ಬೀದಿಯಲ್ಲಿ”, ಇಂತಹ ಕೆಲವಾರು ಸೀರಿಯಸ್ ಕವನಗಳನ್ನು ಓದಿದ್ದರೂ, ಅವರ ಸಿಹಿ, ಲಘು, ತುಂಟನಗೆ ಹೊಮ್ಮಿಸುವ ಪದ್ಯಗಳನ್ನೇ ಹೆಚ್ಚಾಗಿ ಓದಿ, ಕೇಳಿ ನಾನೂ, ಅವರು ಪ್ರೇಮ ಕವಿ ಎಂದೇ ಮುದ್ರೆಯೊತ್ತಿದ್ದೆ. ಈ ನಂಬಿಕೆಗೆ ಒಂದು ಸಣ್ಣ ಆಘಾತವಾದದ್ದು, ಕೆ.ಎಸ್ನರವರ ಕಾವ್ಯಶೈಲಿಯ, ನಿರೂಪಣಾ ಸಾಮರ್ಥ್ಯದ, ವಿಷಯ ಗಾಢತೆಯ ಶಕ್ತಿಗೆ ಮಾರು ಹೊದದ್ದು, ಅವರ “ತೆರೆದಬಾಗಿಲು” ಓದಿದಾಗ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ “ತೆರೆದಬಾಗಿಲು” ಎಂಬ ಹದಿನಾರು ಅದ್ಭುತ ಕವನಗಳ ಸಂಕಲನ, ಒಂದು ಪುಸ್ತಕವಾಗಿ ರೂಪುಗೊಂಡ ಕಥೆ ತುಂಬಾ ಇಂಟೆರೆಸ್ಟಿಂಗ್! ಒಮ್ಮೆ ಪ್ರೊ.ಜಿ.ವಿರವರು, ಕೇಂದ್ರ ಸಾಹಿತ್ಯ ಅಕಾಡೆಮಿ ಕಮಿಟಿಯ ಸದಸ್ಯರಾಗಿದ್ದ ಹಾ. ಮಾನಾಯಕರನ್ನು ಕುರಿತು, ಕೆ.ಎಸ್.ನ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಾರದೆ ಇದ್ದು, ಅದಕ್ಕೆ ಅವರು ಅರ್ಹರೆಂದು ಸೂಚಿಸಿದರಂತೆ. ಅದಕ್ಕೆ ಹಾಮಾರವರು, ಕೆ.ಎಸ್.ನರವರ ಲೇಟೆಸ್ಟು ಪುಸ್ತಕ ಯಾವುದು ಎಂದು ಕೇಳಿದರಂತೆ. ಈ ಮಾತುಕತೆಯಿಂದ ತಿಳಿದು ಬಂದದ್ದು, ಸರಿ ಸುಮಾರು ಹದಿನಾರು ವರ್ಷಗಳಿಂದ ಕೆ.ಎಸ್.ನರವರು ಯಾವ ಪುಸ್ತಕವನ್ನೂ ಪ್ರಕಟಿಸಿಲ್ಲ ಎಂದು! ತಕ್ಷಣ ಜಿವಿ ಹೊರಟು “ಹೊಸ ಕವನ ರಚನೆ ಮಾಡಿದ್ದೀರಾ ?” ಎಂದು ಕೆ. ಎಸ್.ನರವರನ್ನು ಕೇಳಿದಾಗ, ಸ್ವಲ್ಪ ಸಂಕೋಚದಿಂದಲೇ “ಹದಿನಾರು ಕವನಗಳನ್ನು ಬರೆದಿರುವೆ” ಎಂದರಂತೆ. ಅದನ್ನು ಓದಿದ ಕ್ಷಣ ಜಿವಿ ಅವರಿಗೆ ಕೆ.ಎಸ್.ನರವರ ಒಂದು ಹೊಸರೂಪ ದರ್ಶನವಾಯಿತಂತೆ. “ಎಷ್ಟು ಚೆನ್ನಾಗಿ ಬರೆದಿದ್ದೀರಿ” ಎಂದು ತಾವೇ ಮುಂದಾಳತ್ವ ವಹಿಸಿ ಪುಸ್ತಕ ಪ್ರಕಟಣೆಯನ್ನು ಕೈಗೊಂಡರು ಜಿವಿ. ಹೀಗೆ ಇಂದು “ತೆರೆದಬಾಗಿಲು” ಎಂಬ ಉತ್ಕೃಷ್ಟ ಕೃತಿ ನಮ್ಮ ಮಡಿಲಿಗೆ!

ಹದಿನಾರು ವರ್ಷಗಳ ನಂತರ ಮತ್ತೊಂದು ಕವನ ಸಂಕಲನ ಪ್ರಕಟಿಸುವುದರ ಬಗ್ಗೆ ಹಲವಾರು ಕಾರಣಗಳಿಂದ ಅಧೀರತೆ ಹೊಂದಿದ್ದರು ಕೆ.ಎಸ್ನರವರು. ಆ ಹಿಂಜರಿಕೆಯನ್ನು ಹಿಮ್ಮೆಟ್ಟಿ ಮತ್ತೊಮ್ಮೆ ತಮ್ಮ ಸಾಹಿತ್ಯ ಜೀವನದ ಬಾಗಿಲು ತೆರೆಯುವುದನ್ನೂ ಪುಸ್ತಕದ ಶೀರ್ಷಿಕೆ ಸೂಚಿಸುತ್ತದೆ. “ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ” ಎನ್ನುತ್ತಾ ಕಾವ್ಯ ರಚನೆಯನ್ನು ಒಂದು ಗಂಭೀರ ಚರ್ಯೆ ಎಂದು ಬಗೆದು, ಸರಳವಾಗಿ, ಸಂಭಾಷಣಾ ರೀತಿಯ ಹೊಸ ಪ್ರಯೋಗ ಮಾಡಿ ಗಾಢ ಜೀವನಾನುಭವಗಳನ್ನು ಅತ್ಯಂತ ಸಂವೇದನಾ ಶೀಲವಾಗಿ ಪರಿಚಯಿಸುವ ಗರಿಮೆ “ತೆರೆದಬಾಗಿಲು”ವಿನದು.
ಆಂಗ್ಲ ಭಾಷೆಯ ಎಜ್ರಾ ಪೌಂಡ್, ಟಿ.ಎಸ್ಎಲಿಯಟ್ ಮುಂತಾದವರ ಪ್ರಭಾವಕ್ಕೆ ಒಳಗಾಗಿ, ಮೈಸೂರು ಮಲ್ಲಿಗೆಯ ಸರಳತೆ, ಒನಪು, ಮಾಧುರ್ಯಗಳಿಂದ ದೂರವಾಗಿ ತುಂಬಾ ಕಾಂಪ್ಲೆಕ್ಸ್ ಎನಿಸುವ ನವ್ಯ ಕಾವ್ಯ ಪ್ರಯೋಗವನ್ನುಮಾಡಿದರು. ನವೋದಯದಿಂದ ನವ್ಯಕ್ಕೆ ನಡೆದ ಸಾಹಿತ್ಯ ಪ್ರಯಾಣದ ಈ ಮಜಲಿನಲ್ಲಿ ಅವರು ರಚಿಸಿದ್ದು ಶಿಲಾಲತೆ, ಮನೆಯಿಂದ ಮನೆಗೆ ಎಂಬಿತ್ಯಾದಿ ಕವನ ಸಂಕಲನಗಳನ್ನು. ಈ ನವ್ಯಶೈಲಿಯು ಜನ ಸಾಮಾನ್ಯರ ಭಾಷೆಯಾಗದ ಕಾರಣ, ಮತ್ತು ಅಷ್ಟು ಜಟಿಲವಾಗಿ ಕವನ ರಚಿಸುವ ಜರೂರನ್ನು ಕವಿ ಕಾಣದ ಕಾರಣ, ತಮ್ಮ ಹಾದಿಯನ್ನು ಮತ್ತೆ ಸರಳೀಕರಣಕ್ಕೆ ತಿರುಗಿಸಿದರು. ಸರಳ ಭಾಷೆ, ಆಡು ಮಾತಿನಲ್ಲಿ ತಮ್ಮ ಕವನದ ಉದ್ದಿಶ್ಷ್ಯ ಜನರ ಮನ ಸೇರಬಹುದೆಂಬುದಷ್ಟೇ ಅಲ್ಲದೆ, ತಮ್ಮ ಭಾವನೆಗಳ ಬಿಂಬಕ್ಕೂ ಸರಳತೆಯೇ ಸೂತ್ರ ಎಂಬುದನ್ನು ಮನ ಗಂಡರು. ಹೀಗಾಗಿ “ತೆರೆದಬಾಗಿಲು” ಅತ್ಯಂತ ಸರಳ, ಸಂಭಾಷಣಾ ರೀತಿಯನ್ನುಹೋಲುತ್ತದೆ.
“ಮೈಸೂರುಮಲ್ಲಿಗೆ”ಯಂತೆ “ತೆರೆದಬಾಗಿಲು” ಅತ್ಯಂತ ಸರಳವಾಗಿಯೇ ಇದ್ದರೂ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಇವೆರಡಕ್ಕೂ ಇರುವ ವ್ಯತ್ಯಾಸ. ಅದೇನೆಂದರೆ ಮೈಸೂರು ಮಲ್ಲಿಗೆಯಲ್ಲಿ ಕಾಣುವ ಹಸಿ ವಯಸ್ಸಿಗೆ ತಕ್ಕ ಆಸೆ, ವಾಂಛೆಗಳು ದೂರವಾಗಿ ಜೀವನಾನುಭವದ ಮಾಗುವಿಕೆ, ಗಾಂಭೀರ್ಯ ಕಂಡುಬರುವುದು. “ಮೈಸೂರುಮಲ್ಲಿಗೆ”ಯಲ್ಲಿ ಗಂಡು ಹೆಣ್ಣಿನ ನಡುವೆ ಉಕ್ಕಿ ಹರಿಯ ಬಲ್ಲ ಉನ್ಮಾದ ಪ್ರೇಮದ ಅಮಲಿದ್ದರೆ “ತೆರೆದಬಾಗಿಲು”ವಿನಲ್ಲಿ ಅದೇ ಗಂಡು ಹೆಣ್ಣಿನ ಸಂಬಂಧ ಒಂದು ನೀಡ್ ಆಗಿ, ಆಸರೆಯಾಗಿ ಕಂಡು ಬರುತ್ತದೆ. ಮೈಸೂರು ಮಲ್ಲಿಗೆಯ “ಇರುಳು ಚಂದಿರನಡಿಯಲೊಂದು ತಾರೆಗೆ ಬಂದು, ನನ್ನ ಕೇಳುವುದೆಂದು ಬರುವಳೆಂದು”, ತೆರೆದ ಬಾಗಿಲುವಿನ “ಇವಳು ಹೇಗಿದ್ದಾಳೆ? ಎಂದು ಬರುವಳು? ಗೊತ್ತು ಬಂದೆ ಬರುವಳು; ಆದರೇನು?…” ಎಂಬ ಈ ಸಾಲುಗಳಲ್ಲಿ ನಾವು ಈ ಸಂಬಂಧಗಳ ಮಾಗುವಿಕೆಯನ್ನು ಕಾಣಬಹುದು.
ಒಬ್ಬ ನಡುವಯಸ್ಸಿನ ಮನಸ್ಸಿನ ಆತಂಕಗಳು, ಜೀವನವನ್ನು ಅರ್ಥೈಸುವ ತುಡಿತಗಳು, ಸಾವೆಂಬ ಭೀತಿ, ನಂಬಿಕೆಗಳು, ಮೂಢ ನಂಬಿಕೆಗಳು, ಬದುಕಿನ ಅಸ್ಪಷ್ಟತೆ, ಗೊಂದಲ, ಅಸ್ತಿತ್ವದ ಹುಡುಕಾಟ, ಒಂಟಿತನ, ಮುಪ್ಪು…. ಹೀಗೆ ಸಾಕಷ್ಟು ವಿಷಯಗಳ ಗಹನವಾದ ಅಧ್ಯಯನದ ಕೆನೆಪದರ ತೆರೆದ ಬಾಗಿಲುನಲ್ಲಿ ಕಂಡು ಬರುತ್ತದೆ. ಸಂಕಲನದ ‘ತೆರೆದ ಬಾಗಿಲು’, ‘ಮುಚ್ಚಿದ ಕಿಟಕಿ’, ‘ರೈಲ್ವೆನಿಲ್ದಾಣದಲ್ಲಿ’, ‘ಸಂಜೆಹಾಡು’, ‘ಸಂಧ್ಯಾರಾಗ’, ‘ಆಷಾಢದಲ್ಲಿ” ಇತ್ಯಾದಿ ಕವನಗಳು ಈ ಮಾತನ್ನು ಸ್ಪಷ್ಟೀಕರಿಸುತ್ತವೆ.
ಹೀಗೆ, ಬದುಕಿನ ಅನುಭವಗಳ ಮಾಗುವಿಕೆಯ ಪ್ರತೀಕವಾಗಿಯೂ, ಗಂಭೀರ ಸಾಹಿತ್ಯಿಕ ಅಧ್ಯಯನ ಮತ್ತು ಪ್ರಯೋಗಗಳ ದ್ಯೋತಕವಾಗಿಯೂ ಕಂಡು ಬರುವ ಕೆ.ಎಸ್.ನರವರ ಸಾಹಿತ್ಯ ಕೃಷಿ ಖಂಡಿತ ಮಲ್ಲಿಗೆಯ ಘಮವನ್ನು ಮೀರಿ ಬದುಕಿನ ಅನುಭಾವ ಭಾವದತ್ತ ಹೆಜ್ಜೆ ಇಡುತ್ತದೆ ಎಂಬುದು “ಪುಷ್ಪಕವಿಯಪರಾಕು” ಎಂಬಂತಹ ಗ್ರಹಿಕೆಗಳಿಗೆ ಮೀರಿ ಅರ್ಥೈಸಬೇಕಾದ ಅಂಶ.
 

‍ಲೇಖಕರು avadhi

July 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Rohith S H

    ಹೊಸ ಪುಸ್ತಕವೊಂದನ್ನು ಪರಿಚಯಿಸಿದಕ್ಕೆ ಧನ್ಯವಾದಗಳು 🙂

    ಪ್ರತಿಕ್ರಿಯೆ
  2. ಸತೀಶ್ ನಾಯ್ಕ್

    ಒಳ್ಳೆಯ ಪರಿಚಯಾತ್ಮಕ ಬರಹ.. ಕೆ ಎಸ್ ನ ಅವರ ಮತ್ತೊಂದು ಮೇರು ಸಂಕಲನವನ್ನ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.. 🙂

    ಪ್ರತಿಕ್ರಿಯೆ
  3. ಉಷಾಕಟ್ಟೆಮನೆ

    ಅವರ ಅನುಭಾವಿಕ ಸಾಮರ್ಥ್ಯಗಳ ಮುನ್ನೆಲೆಗೆ ಯಾಕೆ ಬರಲಿಲ್ಲ ಎಂಬುದು ನನ್ನ ಪ್ರಶ್ನೆಯೂ ಕೂಡಾ..ಯಾಕೆಂದರೆ ಕೆ.ಎಸ್.ನ ಎಂದರೆ ಇವತ್ತೂ ನನಗೆ ನೆನಪಿಗೆ ಬರುವುದು ’ಗಡಿಯಾರದಂಗಡಿಯ ಮುಂದೆ’ ಕವನದ ಮೂಲಕ. ಅದನ್ನು ನಾನು ಪ್ರಾಯೋಗಿಕ ವಿಮರ್ಶೆಗಾಗಿ ಓದಿ, ವಿಮರ್ಶೆಗೆ ಒಳಪಡಿಸಿದ್ದು ಕಾರಣವೂ ಇರಬಹುದು..’ಗಡಿಯಾರದಂಗಡಿಯ ಮುಂದೆ ನಿಂತು ಗಂಟೆಯೆಷ್ಟೆಂದು ಕೇಳಿದರೆ ಏನು ಹೇಳಲಿ?’ ಅದರ ಕೊನೆಯಲ್ಲಂತೂ..ಮುದುಕಿಯ್ಒಬ್ಬಳು ಕೊನೆಯ ಕೆಂಡವನ್ನು ಕೆದಕುವ ರೂಪಕ.. ’ಕಾಲದ ಸಂಕೀರ್ಣತೆ ಮತ್ತು ಅನಂತತೆಯನ್ನು ಹೇಳುವ ನವ್ಯದ ಅತ್ಯುತ್ತಮ ಕವನಗಳಲ್ಲಿ ಇದೂ ಒಂದು.
    ’ತೆರೆದ ಬಾಗಿಲು’ ಮತ್ತೆ ಮತ್ತೆ ಓದಬೇಕೆನಿಸುವ ಸಂಕಲನ.

    ಪ್ರತಿಕ್ರಿಯೆ
  4. Sarala

    ತೆರೆದ ಬಾಗಿಲಿಗೆ ಮನ ತೆರೆದುಕೊಳ್ಳುವಂತೆ ಮಾಡಿದೆ ನಿಮ್ಮ ಲೇಖನ. Thanks

    ಪ್ರತಿಕ್ರಿಯೆ
  5. arun joladkudligi

    ಬರಹ ಕೆ.ಎಸ್.ನ ಕಾವ್ಯಜಗತ್ತಿಗೆ ಮತ್ತೊಮ್ಮೆ ಪ್ರವೇಶಿಸಲು ಪ್ರೇರೇಪಿಸಿದಂತಿದೆ. ಹೊಸ ಕವಿಗಳು ಓದಿನ ಮೂಲಕ ಆಪ್ತ ಒಡನಾಟ ಮಾಡಬಲ್ಲ ಕವಿ ಈ `ಮಲ್ಲಿಗೆ ಕವಿ’

    ಪ್ರತಿಕ್ರಿಯೆ
  6. Kiran

    You should probably elaborate “ಪುಷ್ಪಕವಿಯಪರಾಕು”. Otherwise, readers may get puzzled. The details of dispute between Dr Gopalakrishna Adiga and KSNa may throw more light on individual approach to their works and more so, their life.

    ಪ್ರತಿಕ್ರಿಯೆ
  7. Rj

    ಉತ್ತಮ ವಿಶ್ಲೇಷಣೆ ಮತ್ತು ವಿವರಣೆ.ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: