ಸಂಧ್ಯಾರಾಣಿ ಕಾಲಂ: ಎಲ್ಲರ ಪಾಲಿಗೂ ಒಂದೊಂದು ಹಾಡು…

ಮೊನ್ನೆ ನಡುರಾತ್ರಿಯಲ್ಲೊಮ್ಮೆ ಓದದಿರುವ ಈಮೇಲುಗಳನ್ನು ಒಂದೊಂದಾಗಿ ನೋಡುತ್ತಾ ಕುಳಿತಿದ್ದಾಗ ಎದುರಾಗಿದ್ದು ಈ ಈಮೇಲು. ಫೇಸ್ ಬುಕ್ ಸ್ನೇಹಿತ ಸಂವರ್ಥ ಸಾಹಿಲ್ ಕಳಿಸಿದ್ದ ಮೇಲ್. ಒಂದೊಳ್ಳೆ ಗಜಲ್, ಮನಸ್ಸು ಕಲಕುವ ಯಾವುದೋ ವಿಷಯ, ಮಾತೇ ಆಗದ ಅನ್ಯಾಯದ ಎದುರಿನ ಒಂದು ನಿಟ್ಟುಸಿರು, ನನಗೆ ಗೊತ್ತೇ ಇರದ ಜಗತ್ತಿನ ಯಾವುದೋ ಮೂಲೆಯ ಒಂದು ಸಂಸ್ಕೃತಿಯ ತುಣುಕು, ಮಾತು ಸೋಲುವ ಬೆರಗಿನ ಕ್ಷಣಗಳ ಒಂದು ಗುಚ್ಚ … ಇಂತಹುದನ್ನೆಲ್ಲಾ ಹೊತ್ತು ತರುವುದು ಸಂವರ್ಥ ಅವರ ಈಮೇಲು. ಅದಕ್ಕೇ ಅದನ್ನು ನಾನು ಅದನ್ನು ಬಂದ ಕೂಡಲೇ ಓದಲು ಹೋಗುವುದಿಲ್ಲ. ಅದು ಹಾಗೆಲ್ಲಾ ಅವಸರದಲ್ಲಿ ಓದಿ ಮುಂದೆ ಓಡುವ ಸಾಲುಗಳೂ ಅಲ್ಲ. ಹಾಗಾಗಿಯೇ ದಿನದ ಎಲ್ಲಾ ಕೆಲಸ ಮುಗಿಸಿ ಆ ಒಂದು ಮೇಲ್ ಓದಲೆಂದು ಕೂತೆ. ಅಷ್ಟೆ. ಆಮೇಲೆ ನನ್ನ ಜಗತ್ತಿನಲ್ಲಿ ಉಳಿದಿದ್ದು ನಾನು ಮತ್ತು ಒಂದು ಹಾಡು.
ಹೌದು ಒಂದು ಹಾಡು, ಇದು ಎಲ್ಲರೊಳಗೂ ಇರಬಹುದಾದ ಹಾಡು, ಸುಮಾರು ಜನ ಜೀವನವಿಡೀ ಕೇಳಿಸಿಕೊಳ್ಳದ ಹಾಡು. ಒಮ್ಮೊಮ್ಮೆ ಕೇಳಿಸಿಕೊಂಡರೂ ಚರಣವಾಗದೆ ಬಿಡಿ ಸ್ವರವಾಗಿ ಕಳೆದುಹೋಗುವ ಹಾಡು. ಆ ಹಾಡಿನ ಬಗ್ಗೆ ಒಂದು ಕಥೆ ಸಹ ಇದೆ. ಆಫ್ರಿಕಾದ ಒಂದು ಬುಡಕಟ್ಟು ಜನಾಂಗದ ಹಾಡುಗಳ ಕಥೆ ಇದು. ಇದನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕೆಂದು ಕೂತಿದ್ದೇನೆ.
ಈ ಬುಡಕಟ್ಟಿನಲ್ಲಿ ಮಗುವಿನ ಹುಟ್ಟಿನ ದಿನಾಂಕ ಗುರುತಿಸಲ್ಪಡುವುದು ಅದು ಹುಟ್ಟಿದ ದಿನದಿಂದ ಅಲ್ಲ, ಇಲ್ಲ ಆ ಮಗು ತಾಯಿಯ ಹೊಟ್ಟೆಯಲ್ಲಿ ಅಂಕುರಿಸಿದ್ದು ತಿಳಿದ ದಿನವೂ ಅಲ್ಲ. ಇಲ್ಲಿ ಹೆಣ್ಣು ತನಗೊಂದು ಮಗು ಬೇಕು ಅಂದಾಗ ಮೊದಲು ಹೋಗಿ ಒಂದು ಮರದ ಕೆಳಗೆ ತನ್ನ ಪಾಡಿಗೆ ತಾನು ಒಂಟಿಯಾಗಿ ಕುಳಿತು ಕಾಣದ ರಾಗಕ್ಕಾಗಿ ಧೇನಿಸತೊಡಗುತ್ತಾಳೆ. ಹಾಗೆ ಧೇನಿಸುತ್ತಾ ಕೂತ ಅವಳ ಮನದಲ್ಲಿ ಒಂದು ಹಾಡಿನ ಅಲೆ ಮೂಡತೊಡಗುತ್ತದೆ. ಒಂದು ಸಂಗೀತ ಅವಳ ಕಿವಿಗಳಿಗೆ ಕೇಳ ತೊಡಗುತ್ತದೆ. ಆ ಹಾಡು ಪೂರ್ತಿಯಾಗಿ ಅವಳ ಎದೆಗಿಳಿದ ನಂತರ ಬಂದು ಆಕೆ ಆ ಹಾಡನ್ನು ತನ್ನ ಮಗುವಿನ ತಂದೆಯಾಗುವ ತನ್ನ ಸಂಗಾತಿಗೆ ಕಲಿಸುತ್ತಾಳೆ. ಆ ಹಾಡು ಅವನದೂ ಆಗುತ್ತದೆ. ಆ ಹಾಡಿನ ನಡುವೆಯೇ ಅವರು ಪ್ರೇಮಿಸುತ್ತಾರೆ. ಗರ್ಭಿಣಿಯಾದ ಮೇಲೆ ಆ ಹೆಣ್ಣು ತನ್ನ ಹಾಡನ್ನು ಬುಡಕಟ್ಟಿನ ಹಿರಿಯ ಹೆಂಗಸರಿಗೆ, ಅಲ್ಲಿನ ಸೂಲಗಿತ್ತಿಗೆ ಕಲಿಸುತ್ತಾಳೆ. ಅವಳಿಗೆ ಹೆರಿಗೆ ಆಗುವ ಸಂದರ್ಭದಲ್ಲಿ ಹಳ್ಳಿಯ ವಯಸ್ಸಾದ ಹೆಂಗಸರು ಆ ಹೆಣ್ಣಿನ ಸುತ್ತಲೂ ಕುಳಿತು ಆ ಹಾಡನ್ನು ಹಾಡುತ್ತಿರುತ್ತಾರೆ. ಸೂಲಗಿತ್ತಿ ಹೆರಿಗೆ ಮಾಡಿಸುತ್ತಾಳೆ. ಹಾಡು ಕೂಸಾಗಿರುತ್ತದೆ.
ಇದು ಇಲ್ಲಿಗೇ ನಿಲ್ಲುವುದಿಲ್ಲ. ಮಗು ಬೆಳೆಯುತ್ತಾ ಬೆಳೆಯುತ್ತಾ ಆ ಹಾಡನ್ನು ನೆರೆ ಹೊರೆಯವರು, ಆಚೆ ಈಚೆ ಬೀದಿಯವರು ಎಲ್ಲರೂ ಕಲಿಯುತ್ತಾರೆ. ಆಟವಾಡುತ್ತಿದ್ದ ಮಗು ಬಿದ್ದು ಗಾಯ ಮಾಡಿಕೊಂಡರೆ ಅಲ್ಲಿದ್ದ ಯಾರೇ ಆಗಲಿ ಅದನ್ನೆತ್ತಿಕೊಂಡು ಸಂತೈಸಿ ಅದರ ಹಾಡು ಹೇಳಿ ಸಮಾಧಾನ ಮಾಡುತ್ತಾರೆ. ಆ ಮಗು ದೊಡ್ಡದಾದ ಮೇಲೆ ಆಕೆ ಅಥವಾ ಆತ ವಯಸ್ಸಿಗೆ ಬಂದಾಗ ಸಹ ಎಲ್ಲರೂ ಸೇರಿ ಆ ಹಾಡನ್ನು ಹಾಡಿ ಸಂಭ್ರಮಿಸುತ್ತಾರೆ.
ಇದಕ್ಕಿಂತ ಮುಖ್ಯವಾದ ವಿಷಯ ಇನ್ನೊಂದಿದೆ. ಅಕಸ್ಮಾತ್ ಆ ವ್ಯಕ್ತಿ ಏನಾದರೂ ತಪ್ಪು ಮಾಡಿದರೆ ಬುಡಕಟ್ಟಿನವರೆಲ್ಲಾ ಏನು ಮಾಡುತ್ತಾರೆ ಗೊತ್ತೆ? ಆ ವ್ಯಕ್ತಿಯನ್ನು ನಡುವೆ ನಿಲ್ಲಿಸಿಕೊಂಡು ಎಲ್ಲರೂ ಸುತ್ತಲೂ ನಿಂತು ದುಃಖದಿಂದ ಅದೇ ಹಾಡನ್ನು ಹಾಡತೊಡಗುತ್ತಾರೆ. ಹೊರಗಿನ ಶಿಕ್ಷೆಗಿಂತ ಹೆಚ್ಚಾಗಿ ಇಷ್ಟು ಜನ ನನ್ನವರಿಗೆ ನಾನು ನೋವುಂಟುಮಾಡುತ್ತಿದ್ದೇನೆ ಎನ್ನುವ ಅರಿವೇ ಆ ವ್ಯಕ್ತಿಯನ್ನು ತಿದ್ದುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಡೆಗೆ ಆ ವ್ಯಕ್ತಿ ಮರಣ ಶಯ್ಯೆಯಲ್ಲಿರುವಾಗ ಊರಿನವರೆಲ್ಲರೂ ಅಲ್ಲಿ ಸೇರಿ, ಮೆಲುದನಿಯಲ್ಲಿ ಅದೇ ಹಾಡನ್ನು ಹಾಡುತ್ತಾ ಆ ವ್ಯಕ್ತಿಗೆ ವಿದಾಯ ಹೇಳುತ್ತಾರೆ. ಈಗ ವ್ಯಕ್ತಿ ಹಾಡಾಗಿರುತ್ತಾನೆ. ಹಾಡಿನಿಂದ ಶುರುವಾಗಿ ಮತ್ತೆ ಹಾಡಾಗಿ ಕೊನೆಗಾಣುವ ಪಯಣ ಇದು.

ಓದಿದವಳು ಅಕ್ಷರಶಃ ಸ್ಥಬ್ಧಳಾಗಿದ್ದೆ. ಏನುಂಟು ಏನಿಲ್ಲ ಇಲ್ಲಿ. ಹನಿ ಒರತೆಯಾಗಿ, ನದಿಯಾಗಿ ಹರಿದು ಕಡಲನ್ನು ಸೇರುವಂತೆ ತಾಯಿಯ ಮನಸ್ಸಿನಲ್ಲಿ ಹುಟ್ಟಿದ ಒಂದು ರಾಗ ಒಂದೊಂದಾಗಿ ಒಂದೊಂದಾಗಿ ಸುತ್ತಲಿನ ಪ್ರಪಂಚದಿಂದ ಒಂದೊಂದು ಸ್ವರ ಪಡೆದು ಸಮಷ್ಟಿಯ ರಾಗದ ಹಾಡಾಗುತ್ತದೆ. ಮಗು ಇಲ್ಲಿ ಕೇವಲ ತಾಯಿಯಿಂದ ಮಾತ್ರ ಹುಟ್ಟುವುದಿಲ್ಲ. ಮೊದಲು ತಾಯಿ, ಆಮೇಲೆ ತಂದೆ, ನಂತರ ಊರಿನ ಹಿರಿಯ ಮಹಿಳೆಯರು, ಆಮೇಲೆ ನೆರೆಹೊರೆಯವರು, ಕಡೆಗೆ ಇಡೀ ಊರಿಗೆ ಊರೇ ಮಗುವನ್ನು ಎದುರುಗೊಳ್ಳಲು ಹಂತ ಹಂತವಾಗಿ ತಯಾರಾಗುತ್ತದೆ. ಆ ಹಾಡು ಕ್ರಮೇಣ ಎಲ್ಲರ ಹಾಡಾಗಿ, ಆ ಮಗು ಎಲ್ಲರಿಗೂ ಸೇರಿದ ಮಗುವಾಗುತ್ತದೆ.

ಅಷ್ಟೇ ಅಲ್ಲ ಮಗು ಸಹ ಅದೇ ಹಾಡನ್ನು ಹುಟ್ಟಿನ ಮೊದಲಿನೊಂದಲೂ ಕೇಳುತ್ತಿರುತ್ತದೆ, ಅದೇ ಹಾಡು ಹುಟ್ಟಿದಾಗ ಮತ್ತು ಬೆಳೆಯುತ್ತಿದ್ದಾಗ ಆ ಮಗುವಿನ ಕಿವಿಯ ಮೇಲೆ ಬೀಳುತ್ತಿರುತ್ತದೆ. ತಾನು ಬಿದ್ದಾಗ ಎತ್ತಿ ಸಂತೈಯಿಸಿದವರು ಸಹ ಅದನ್ನೇ ಹಾಡುತ್ತಾರೆ. ಹೋಗುತ್ತಾ ಹೋಗುತ್ತಾ ಆ ಹಾಡು ಹಾಡುವವರೆಲ್ಲಾ ಮಗುವಿಗೆ ತನ್ನವರು ಅನ್ನಿಸಲು ಪ್ರಾರಂಭವಾಗುತ್ತದೆ. ವ್ಯಕ್ತಿಯನ್ನು ಒಂದು ಸಮಷ್ಟಿಗೆ ಕಟ್ಟಿ ಹಾಕುವ ಈ ಪಯಣ ಅದೆಷ್ಟು ಮಧುರ.
ಇದನ್ನು ಓದುತ್ತಿದ್ದಾಗ ನನ್ನ ತಂಗಿ ತಾಯಿಯಾದ ನಂತರ ಹೇಳಿದ್ದು ನೆನಪಾಯಿತು, ’ಹುಟ್ಟಿದ ಕೂಡಲೇ ನನಗೆ ಇದು ನನ್ನ ಮಗು ಅನ್ನುವ ಪ್ರೀತಿ ಇತ್ತು ನಿಜ, ಆದರೆ ಅದು ಆಳವಾಗಿದ್ದು, ನನ್ನನ್ನು ತಾಯಿಯಾಗಿಸಿದ್ದು ಆ ಮಗುವನ್ನು ನಾನು ಸಾಕುತ್ತಾ ಬೆಳೆಸುತ್ತಾ ಹೋದಹಾಗೆ. ರಾತ್ರಿಗಳಲ್ಲಿ ನಿದ್ದೆ ಕೆಟ್ಟಿದ್ದು, ಅದರೊಂದಿಗೆ ಅತ್ತಿದ್ದು, ನಕ್ಕಿದ್ದು ಎಲ್ಲಾ ಸೇರಿ ನಾನು ತಾಯಿಯಾದೆ’ ಅಂತ. ನಿಜ ಅಲ್ಲವಾ? ಜನ್ಮ ನೀಡುವುದು ಒಂದು ಸಂಬಂಧದ ಆರಂಭ ಅಷ್ಟೆ. ಎಲ್ಲಾ ಸಂಬಂಧಗಳಂತೆಯೇ. ಆದರೆ ಅದು ಗಟ್ಟಿಯಾಗಬೇಕೆಂದರೆ, ನಮ್ಮದಾಗಬೇಕೆಂದರೆ ನಗು, ಕಣ್ಣೀರು, ಹಾಡು, ಮಾತು, ಜಗಳ, ತಪ್ಪೊಪ್ಪಿಗೆ ಎಲ್ಲವೂ ಹಂತ ಹಂತವಾಗಿ ಆ ಸಂಬಂಧವನ್ನು ಗಟ್ಟಿಗೊಳಿಸಬೇಕು. ಬೆಳೆಯುತ್ತಾ ಹೋದಂತೆ ಮಕ್ಕಳು ದೊಡ್ಡವರಾಗುತ್ತಾರೆ, ಬೆಳೆಸುತ್ತಾ, ಬೆಳೆಸುತ್ತಾ ನಾವು ತಾಯ್ತಂದೆಯರಾಗುತ್ತೇವೆ. ಅಲ್ಲಿ ಆಫ್ರಿಕಾದಲ್ಲಿ ರಾಗ ಹಾಡಾದಂತೆ.
ಹಾಡು ನನ್ನದಾಗದಿದ್ದರೂ ಸಹ ಆ ರಾಗವನ್ನು ಹಾಡುತ್ತಾ, ಹಾಡುತ್ತಾ ಅದನ್ನು ನಮ್ಮದಾಗಿಸಿಕೊಳ್ಳಬಹುದು ಅಂತ ನನಗೆ ಕಲಿಸಿದ್ದು ಇದೇ ಬದುಕು ಮತ್ತು ರಾಗಗಳಂತಹ ಮಕ್ಕಳು. ನಾನು ಮೊದಲು ಹಸಿ ಬೊಮ್ಮಟೆಯನ್ನು ಕೈಗೆತ್ತಿಕೊಂಡಾಗ, ಮಡಿಲಿಗೆ ಹಾಕಿಕೊಂಡಾಗ ನನಗಿನ್ನೂ ೧೮-೧೯ ರ ವಯಸ್ಸು. ಅದು ನನ್ನ ಚಿಕ್ಕಮ್ಮನ ಮಗು. ಹಸಿ ಬಾಣಂತಿಗೆ ಆರೋಗ್ಯ ತಪ್ಪಿದ್ದರಿಂದ ಆಸ್ಪತ್ರೆಯ ತೊಟ್ಟಿಲಿಂದ ಮಗು ಬಂದಿದ್ದು ನನ್ನ ಮಡಿಲಿಗೆ. ಮಗುವಿನ ಅಮ್ಮ ಆಸ್ಪತ್ರೆಯಲ್ಲಿ. ಆ ಬೊಮ್ಮಟೆ ನನಗೆ ಅಮ್ಮನಾಗುವುದನ್ನು ಹೇಳಿಕೊಟ್ಟಿತ್ತು. ಹೊಟ್ಟೆಗೆ ಹಾಲು ಹಾಕಿ, ಅದನ್ನು ಎದೆಯ ಮೇಲೆ ಒರಗಿಸಿ ಮಲಗಿಸಿಕೊಂಡು, ಅವರ ಮನೆಯಲ್ಲಿದ್ದ ಒಂದು ಆರಾಮ ಖುರ್ಚಿಯ ಮೇಲೆ ನಾನು ಕೂತರೆ, ಒಂದೆರಡು ಸಲ ಬೆನ್ನು ಸವರುವಷ್ಟರಲ್ಲಿ ’ಡರ್..’ ಎಂದು ತೇಗಿದ ಮಗು ನಿದ್ದೆಗೆ ಜಾರುತ್ತಿತ್ತು. ತೊಟ್ಟಿಲಲ್ಲಿ ಮಲಗಿಸಿದರೆ ಸಾಕು, ಅಳು, ಮೊದಲ ಒಂದು ತಿಂಗಳಂತೂ ಅದನ್ನು ಎದೆಯ ಮೇಲೆ ಮಲಗಿಸಿಕೊಂಡೇ ನಾನು ಒಂದು ಪುಸ್ತಕ ಹಿಡಿದು ಕೂರುತ್ತಿದ್ದೆ, ಅದು ನಿದ್ದೆ ಮುಗಿಸಿ ಏಳುವವರೆಗೆ. ನಾನು ಮನೆಯ ಯಾವುದೇ ಮೂಲೆಯಲ್ಲಿರಲಿ ಅದು ಮಿಸುಕಿದರೆ, ಸಣ್ಣ ದನಿ ತೆಗೆದು ಅಳಲು ಪ್ರಾರಂಭಿಸಿದರೆ ಮೊದಲು ನನಗೆ ಕೇಳುತ್ತಿತ್ತು. ಮಗುವಿನ ಅಮ್ಮ ಮನೆಗೆ ಬಂದು ಮಗುವಿನ ಪಕ್ಕ ರೂಮಿನಲ್ಲಿ ಮಲಗಿದ್ದರೂ, ನಡುರಾತ್ರಿ ಮಗು ಅತ್ತರೆ ನನಗೆ ಎಚ್ಚರಾಗುತ್ತಿತ್ತು. ರಾಗ ನಮ್ಮೊಳಗೆ ಹಾಡಾಗುವುದು ಅಂದರೆ ಹೀಗೇನಾ?

ಆಮೇಲೆ ನನ್ನ ತಂಗಿಯರಿಗೆ ಮಕ್ಕಳಾಯಿತು. ಮಕ್ಕಳು ಅಮ್ಮನ ಮಡಿಲಲ್ಲಿ ಬೆಳೆದಂತೆ ನನ್ನ ಮಡಿಲಿನಲ್ಲಿಯೂ ಬೆಳೆದವು, ಬೆನ್ನು ತೀಡಿ ತೇಗಿಸುತ್ತಾ, ಅವು ಅತ್ತಾಗ ಹಾಡಿ ತಟ್ಟಿ ಮಲಗಿಸುತ್ತಾ, ಎಣ್ಣೆ ಉಗುರು ಬೆಚ್ಚಗೆ ಮಾಡಿ ಕಾಯಿಸಿ, ಮೈ ತುಂಬಾ ನೀವಿ, ಮೂಗನ್ನು ತಿದ್ದಿ ತೀಡಿ, ಜಾಸ್ತಿ ನೀರು ಒಟ್ಟಿಗೇ ಮೈಮೇಲೆ ಬಿದ್ದರೆ ಮಗು ಬೆಚ್ಚಬಾರದೆಂದು ಪುಟ್ಟ ತಂಬಿಗೆಯಲ್ಲಿ ಬಿಸಿನೀರು ಸ್ನಾನ ಮಾಡಿಸುತ್ತಾ, ಮೈ ಕೈ ಒರೆಸಿ, ಕಂಕುಳು, ತೊಡೆಸಂದಿ ಒದ್ದೆ ಇಲ್ಲದಂತೆ ಒರೆಸಿ, ಸಾಂಬ್ರಾಣಿ ಹೊಗೆಯಲ್ಲಿ ಮಗುವನ್ನು ಆಡಿಸಿ, ಪೌಡರ್ ಹಚ್ಚಿ, ಹಣೆಗೊಂದು ಬೊಟ್ಟು, ಕೆನ್ನೆ ಮೇಲೊಂದು ಬೊಟ್ಟು ಇಟ್ಟು, ತಂ ನಂ ಎಂದು ಮಿಡಿವ ಮಗುವಿನ ಮೆದು ನೆತ್ತಿಯನ್ನು ಮೂಸುತ್ತಾ ಅವು ನನ್ನ ಮಕ್ಕಳಾದವು. ಅವು ನನ್ನದೇ ಮಕ್ಕಳಾಗಿದ್ದರೆ ನಾನು ಅವುಗಳನ್ನು ಇದಕ್ಕಿಂತಾ ಹೆಚ್ಚು ಪ್ರೀತಿಸುತ್ತಿದ್ದೆನಾ? ಖಂಡಿತಾ ಇಲ್ಲ. ಹೌದು. ನಮ್ಮದಲ್ಲದ ಹಾಡುಗಳೂ ನಮ್ಮದಾಗಲು ಸಾಧ್ಯ ಅನ್ನಿಸಿದ್ದು ಆಗ.
ಇತ್ತೀಚಿನ ದಿನಗಳಲ್ಲಿ ನಾನು ಕಂಡಂತೆ ಆಗಿರುವ ಇನ್ನೊಂದು ಒಳ್ಳೆಯ ಬದಲಾವಣೆ ಅಂದರೆ ಮಗುವಿನ ತಂದೆ ಮಗುವಿನ ಬೆಳವಣಿಗೆಯಲ್ಲಿ ತಾನೂ ಒಳಗೊಳ್ಳುವ ಪರಿ. ನಮ್ಮ ಅಪ್ಪಂದಿರು ನಮ್ಮನ್ನು ಪ್ರೀತಿಸುತ್ತಿರಲಿಲ್ಲ ಎಂದಲ್ಲ. ಖಂಡಿತಾ ಪ್ರೀತಿಸುತ್ತಿದ್ದರು. ಆದರೆ ಒಂದು ವಯಸ್ಸಿನವರೆಗೆ ಮಕ್ಕಳ ಬೆಳವಣಿಗೆ ಸುಮಾರು ಮನೆಗಳಲ್ಲಿ ಅಮ್ಮನಿಗೆ, ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮರಿಗೇ ಸೇರಿರುತ್ತಿತ್ತು. ಮಗು ದೊಡ್ಡದಾದ ಮೇಲೆ ಅಪ್ಪ ಮಗುವಿನ ವಲಯಕ್ಕೆ ಹೆಜ್ಜೆ ಇಡುತ್ತಿದ್ದರು. ಆದರೆ ಈಗ ಬದಲಾದ ಸಾಮಾಜಿಕ ಪರಿಸ್ಥಿತಿ, ಒಟ್ಟುಕುಟುಂಬದ ಅನುಪಸ್ಥಿತಿ, ಅಮ್ಮನಿಗೂ ಹೊರಗೆ ದುಡಿಯಬೇಕಾದ ಅಗತ್ಯ ಅಥವಾ ಅನಿವಾರ್ಯತೆ, ಇವುಗಳಿಂದ ಮಗುವಿನ ಪಾಲನೆ ಪೋಷಣೆಯಲ್ಲಿ ಅಪ್ಪಂದಿರೂ ಈಗ ’ಹ್ಯಾಂಡ್ಸ್ ಆನ್’ ಪೇರೆಂಟ್. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಅದು ಒಳ್ಳೆಯ ಬಾಂಧವ್ಯವನ್ನು ಹೆಣೆಯುತ್ತಾ ಬರುತ್ತದೆ ಅಲ್ಲವೇ. ಅಲ್ಲಿ ತಾಯಿ ತನ್ನ ಹಾಡನ್ನು ಮಗುವಿನ ಅಪ್ಪನಿಗೆ ಕಲಿಸಿದ ಹಾಗೆ..
ಆದರೆ ಹೀಗೆ ಹಾಡು ನಮ್ಮದಾಗುವುದು ಎಲ್ಲಾ ಸಂಬಂಧಗಳಲ್ಲೂ ಸತ್ಯ ಅಲ್ಲವಾ? ಇಲ್ಲಿ ಪ್ರತಿಯೊಬ್ಬರಿಗೂ ಒಂದು ಹಾಡಿರುತ್ತದೆ, ಒಂದು ಲಯವಿರುತ್ತದೆ, ಒಂದು ಭಾವ ಹಾಗೆ ಒಂದು ಮೌನ ಸಹ ಇರುತ್ತದೆ. ಆ ಹಾಡನ್ನು ಆಲಿಸಬಲ್ಲ ಹೃದಯ ಕೆಲವರಿಗೆ ಮಾತ್ರ ಇರುತ್ತದೆ. ಆ ಹಾಡು ಕೆಲವರಿಗೆ ಮಾತ್ರ ಅರ್ಥ ಆಗುತ್ತದೆ, ಅದರಲ್ಲೂ ಇನ್ನು ಕೆಲವರು ಮಾತ್ರ ಅದನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಹೀಗೆ ಒಬ್ಬ ವ್ಯಕ್ತಿ, ಒಂದು ಸಂಬಂಧವನ್ನು ನಮ್ಮದಾಗಿಸಿಕೊಳ್ಳುವುದೆಂದರೆ ಅದು ರಾಗವನ್ನು ಆಲಿಸಿದಂತೆ, ಹಾಡನ್ನು ಎದೆಗಿಳಿಸಿಕೊಂಡಂತೆ. ಹಾಡು, ಹಾಡಿನ ಲಯ, ಏರಿಳಿತ, ಭಾವದ ಬಳುಕು ಎಲ್ಲವೂ ನಮ್ಮದಾಗಬೇಕು. ಹಾಡಿನ ಭಾಷೆ ಅರ್ಥವಾದ ಹಾಗೆ, ಆ ಹಾಡಿನ ಮೌನ ಸಹ ನಮ್ಮದಾಗಬೇಕು …. ಅಲ್ಲವಾ?

‍ಲೇಖಕರು avadhi

July 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

25 ಪ್ರತಿಕ್ರಿಯೆಗಳು

  1. Anil Talikoti

    ಈ ಹಾಡಿನ ರಾಗ ಎಂದೆಂದಿಗೂ ನವನವೀನವೆ -ತುಂಬಾ ಚೆನ್ನಾಗಿದೆ

    ಪ್ರತಿಕ್ರಿಯೆ
  2. sunil rao

    Beautiful..
    Mahapurushanobba eduru bandu mahagrantha ondu kaili innondu kaili sandhya rani barahagalanna ittukondiddare…
    Naanu eradaneyadanne aayke maadikolluve.
    U always run words in our consiousness n senses.

    ಪ್ರತಿಕ್ರಿಯೆ
  3. Sarala

    ಸಂಧ್ಯಾ ನಿಮ್ಮ ಲೇಖನ ಓದಿ ಅಮ್ಮನ ಅಪ್ಪುಗೆಯಷ್ಟು ಬೆಚ್ಚಗಿನ ಭಾವ, ತಾಯ್ತನದ ಸುಖಾನುಭವ ಎರಡೂ ಒಟ್ಟಿಗೆ ಆಗತ್ತೆ.

    ಪ್ರತಿಕ್ರಿಯೆ
  4. ಸತೀಶ್ ನಾಯ್ಕ್

    ಹಾಡು ಹಳೆಯದಾದರೇನು ಭಾವ ನವ ನವೀನ.. 🙂
    ಕಿವಿಗೆ ಇಂಪಾಗಿ..
    ಮನಕೆ ತಂಪಾಗಿ..
    ಕ್ಷಣಕೆ ಸೊಂಪಾಗಿ..
    ರಾಗದ ಕಂಪಿನೊಳು..
    ಮೈ ಮನವ ಮರೆಸುವುದಷ್ಟೇ ಬೇಕೇ..??
    ಹಾಡೆಂದರೆ ಅಷ್ಟೇ ಸಾಕೆ..??
    ನಿಮ್ಮಾಶಯದಂತೆ ಹಾಡಾಗಬೇಕು
    ಎಲ್ಲರ ಬದುಕಿನೊಳ ಕೇಕೆ..
    ಒಂದು ಹಾಡು ಇಡೀ ಬದುಕಿನ ಕೊಂಡಿಯಾಗಿ ಅದು ಹೇಗಿರಲು ಸಾಧ್ಯ.. ಉತ್ತರವೆಂಬಂತೆ ನಿಮ್ಮ ಬರಹವಿದೆ.. ಇಷ್ಟವಾಯ್ತು ಮೇಡಂ.. 🙂

    ಪ್ರತಿಕ್ರಿಯೆ
  5. Raghunandan K

    ಹಾಡಿನ ಭಾಷೆ ಅರ್ಥವಾದ ಹಾಗೆ, ಆ ಹಾಡಿನ ಮೌನ ಸಹ ನಮ್ಮದಾಗಬೇಕು…
    ಇಷ್ಟವಾಯಿತು.

    ಪ್ರತಿಕ್ರಿಯೆ
  6. Kumaraswamy.M.R

    ಈಗಿನೆ ಪರಿಸರ, ಅಪ್ಪ ಅಮ್ಮನ, ವಿಧಿಯಿಲ್ಲದ ಕೆಲಸ, ಮಕ್ಕಳಿಂದ ದೂರ, ಸ್ಟೆಪ್ ಮದರ್ ಹತ್ತಿರ ಮಕ್ಕಳ ಬಾಂಧವ್ಯ, ಎಲ್ಲರೂ ಬೇರೆ ಬೇರೆಯಾಗಿ ಜೀವಿಸುವುದು, ಸಹಬಾಂಧವ್ಯಕ್ಕೆ ಅವಕಾಶ ಕಡಮೆ, ಈ ಸಂಧರ್ಬದಲ್ಲಿ ಏನು ಹೇಳುವುದು ತಿಳಿಯದು, ಈಗಂತೂ ನಮ್ಮ ಮಕ್ಕಳೂ ವಿದೇಶದಲ್ಲಿ, ನಾವು ಬೇರೆ ಬೇರೆ ದೇಶಗಳಲ್ಲಿ!! ಬೆಳೆದ ಮಕ್ಕಳ ಮೇಲೆ ಅಂದರೆ ಅವರಿಗೆ ಮಕ್ಕಳಾದ ಮೇಲೆ ಅವರು ಪಡುವ ಪಾಡು, ಗೈಡ್ಲೈನ್ಸ್ ಇಲ್ಲದ, ಅನುಬಂಧ ಇಲ್ಲದ ಜೀವನ!! ಎಲ್ಲಿ ಪಯಣ ಯಾವುದೋ ದಾರಿ!!!:-((( ಆಗಿ ಬಿಟ್ಟಿದೆ. ನನ್ನ ಮಗಳು ಈ ವಿಷಯದಲ್ಲಿ, ತನ್ನದೇ ಆದ ವೆಬ್ ಸೈಟ್ ಇತ್ತುಕೊಂಡಿದಾಳೆ. ಅದು ಎಲ್ಲ ತಾಯಂದಿರಿಗೆ ಮೀಸಲು. ಅವಳು ಶ್ರುತಿ ಮಾಳುರ್, her site is always bakbak.com, in that read her stories on masalamommas.com,
    ಅವಳ ವಲ ಬರವಣಿಗೆಗೆ ನಿಮ್ಮ opinion tilissuvudu!!This Article is really needed for us to understand the meaning of getherness, Namma kaaladalli naavu haage beledevu, naanu beledaddu Mysorina old Agrahaaradalli, The lady who carried me all along my cildhood days, is still at mysore her age about 76years, still each time i go to mysore i visit her (ade Bandhavya allava?) idu maneyalli yaake irabaaradu? yaake ellaru ee vishayadalli inno students aagiyaa iddare??? ellaa gojalu. Nimma ee column aadaroo odi janarige vishaya tiliyali endu aashisona ellaroo. Best wishes, Kumarmalur,

    ಪ್ರತಿಕ್ರಿಯೆ
  7. yash

    ವ್ಯಕ್ತಿಯನ್ನು ಒಂದು ಸಮಷ್ಟಿಗೆ ಕಟ್ಟಿ ಹಾಕುವ ಈ ಪಯಣ ಅದೆಷ್ಟು ಮಧುರ…
    ತುಂಬಾ ಚೆನ್ನಾಗಿದೆ,ಇಷ್ಟವಾಯ್ತು

    ಪ್ರತಿಕ್ರಿಯೆ
  8. ಅಪರ್ಣ ರಾವ್

    ಹಾಡನ್ನು ಆಲಿಸಬಲ್ಲ ಹೃದಯ ಕೆಲವರಿಗೆ ಮಾತ್ರ ಇರುತ್ತದೆ .. ಅದು ತಾಯಿಯದ್ದೆ ಆಗಬೇಕೆಂದೇನಿಲ್ಲ .. ಹೃದಯದಿಂದ ಬರೆದ ಮಾತು ಹೃದಯ ಮುಟ್ಟುವಂತಿದೆ. 🙂

    ಪ್ರತಿಕ್ರಿಯೆ
  9. ಇಂದುಶೇಖರ ಅಂಗಡಿ

    ಸುಂದರ ಬರಹ ಓದಿದ ಅನುಭವವಾಯ್ತು. ಸುಮಾರು ವರ್ಷಗಳ ಹಿಂದೆ ಆಕಾಶವಾಣಿಯ ವಿವಿಧ ಭಾರತಿಯಲ್ಲಿ ” ಫೌಜಿಯೋಂಕೇಲಿಯೇ “(ಸೈನಿಕರಿಗಾಗಿ) ಎನ್ನುವ ಕಾರ್ಯಕ್ರಮ ಬರುತ್ತಿತ್ತು. ಅದರಲ್ಲಿ ಅಮಿತಾಭ್ ಬಚ್ಚನ್ ಅತಿಥಿಯಾಗಿ ಬಂದಾಗ, ” ತಾನೂ ಕೂಡ ಹರಿವಂಶ್ ರಾಯ್ ಬಚ್ಚನ್ ಅವರಿಂದ ರಚಿತವಾದ ಒಂದು ಕವಿತೆ” ಅಂತಾ ಹೇಳಿದ್ದು ನೆನಪಿಗೆ ಬಂತು.

    ಪ್ರತಿಕ್ರಿಯೆ
  10. shobhavenkatesh

    thumba chennagide sandhya.hadu jeevanadalli hasu hokkadare yestu chenna allave.jothege makkala hagu appana bandhyadabagge barediruvudu eegina samajakke kannadiyagide.

    ಪ್ರತಿಕ್ರಿಯೆ
  11. Rj

    ಕೆಲವೊಮ್ಮೆ ಓದಿಸಿಕೊಂಡ ಬರಹಕ್ಕೆ ಪ್ರತಿಕ್ರಿಯೆ ನೀಡಲು ಭಯವಾಗುತ್ತದೆ.ಎಲ್ಲಿ ನಮ್ಮ ತಕ್ಷಣದ ಅಭಿಪ್ರಾಯ ಸದರಿ ಲೇಖನಕ್ಕೆ,ಅದರ ದರ್ಜೆಗೆ ನೋವು ಮಾಡಬಹುದೇನೋ ಅನ್ನುವ ಭಯ ಹುಟ್ಟತೊಡಗುತ್ತದೆ.ಅಂಥದ್ದೇ ಬರಹ ಇದಾಗಿರಬಹುದು.. ಥ್ಯಾಂಕ್ಸ್!

    ಪ್ರತಿಕ್ರಿಯೆ
  12. ಸಂಧ್ಯಾರಾಣಿ

    ನನ್ನ ಹಾಡನ್ನು ಆಲಿಸಿ ಅದನ್ನು ನಿಮ್ಮದಾಗಿಸಿಕೊಂಡ ನಿಮಗೆಲ್ಲಾ ನನ್ನ ನನ್ನಿಗಳು …

    ಪ್ರತಿಕ್ರಿಯೆ
  13. Tejashree ja na

    Dear Sandhya Madam,
    The way you have narrated the story is interesting. Kathe heluvudu namma ‘ego’vannu taggisikolluva bage endu nanna nambike…
    tejashree

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      Thank You ತೇಜಶ್ರೀಯವರೆ. ಬರವಣಿಗೆ ನಮ್ಮನ್ನು ಪ್ರಾಮಾಣಿಕವಾಗಿರಿಸುತ್ತದೆ ಎಂದು ನನ್ನ ನಂಬಿಕೆ…. ಲೇಖನ ಓದಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು.

      ಪ್ರತಿಕ್ರಿಯೆ
  14. Anonymous

    ‘ಆ ಹಾಡನ್ನು ಆಲಿಸಬಲ್ಲ ಹೃದಯ ಕೆಲವರಿಗೆ ಮಾತ್ರ ಇರುತ್ತದೆ. ಆ ಹಾಡು ಕೆಲವರಿಗೆ ಮಾತ್ರ ಅರ್ಥ ಆಗುತ್ತದೆ, ಅದರಲ್ಲೂ ಇನ್ನು ಕೆಲವರು ಮಾತ್ರ ಅದನ್ನು ತಮ್ಮದಾಗಿಸಿಕೊಳ್ಳುತ್ತಾರೆ. ‘
    ತುಂಬಾ ಇಷ್ಟವಾಯಿತು ಸಂಧ್ಯಾ .. ಭಾವ ನವ ನವೀನ . ತಂಗಾಳಿ ಬೀಸಿದಂತಾಯ್ತು. ಹೃತ್ಪೂರ್ವಕ ಅಭಿನಂದನೆಗಳು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: