ಸಂಪು ಕಾಲಂ : ಭಾಷೆ ನಮ್ಮ ಸ್ಟೇಟಸ್ ಸಿಂಬಲ್ ಅಲ್ಲ!

ಮತ್ತೇನಿಲ್ಲದಿದ್ದರೂ ಕೋಮು-ಖವ್ಯಾಘ್ರನ ಅಟ್ಟಹಾಸದಿಂದ ನಮ್ಮ ರಾಜ್ಯ ಸ್ವಲ್ಪ ವಿರಾಮ ಪಡೆಯಬಹುದು ಎಂಬ ಸಮಾಧಾನದಿಂದ ನಿಟ್ಟುಸಿರೆಳೆದು ನಿತ್ಯಕರ್ಮವೆಂಬಂತೆ ಫೇಸ್ಬುಕ್ ಪುಟ ತೆರೆದೆ. ಬಹುಶಃ ಜೀವನದ ಯಾವ ದೊಡ್ಡ ವಿಚಾರಗಳಲ್ಲಿ ಶಿಸ್ತಿಲ್ಲದಿದ್ದರೂ ನಮ್ಮ ಇಡೀ ತಲೆಮಾರು ಈ ಫೇಸ್ಬುಕ್ ಎಂಬ ಸ್ನೇಹಿತನೊಂದಿಗೆ ಸಮಯ ಕಳೆಯುವಲ್ಲಿ ಅತ್ಯಂತ ಕಂಕಣಬದ್ಧರು ಎಂಬ ಮಿಥ್ಯಸತ್ಯ ಎಂದೋ ಅರಿವಾಗಿದ್ದರೂ, ಅದರ ರುಚಿ ಹತ್ತಿಬಿಟ್ಟಿತ್ತು ನೋಡಿ! ಲಾಗಿನ್ ಆದ ಕೂಡಲೇ ಕಂಡದ್ದು ಎಲ್ಲೆಲ್ಲೂ ಗೆಲುವಿನಿಂದ ವಿರಾಜಿಸುತ್ತಿದ್ದ ‘ಕೈ’ಗಳ ಧ್ವನಿಗಳು. ಭ್ರಷ್ಟತೆಯ ದೋಣಿ ಒಂದೇ, ನಾವಿಕರು, ಅಂದು ಅವರು – ಇಂದು ಇವರು ಎನಿಸಿತ್ತು. ನೋಡುತ್ತಾ ನೋಡುತ್ತಾ ಸಾಕಾಗಿ ಕೊನೆಗೂ ಈ ಫೇಸ್ಬುಕ್ ಪ್ರಣಯ ಮುಗಿದು ನನ್ನ ಕೆಲಸ ಸಾಗಲಿ ಎಂಬಂತೆ ವೇಗವಾಗಿ ಪುಟವನ್ನು ಸ್ಕ್ರಾಲ್ ಡೌನ್ ಮಾಡುತ್ತಿದ್ದೆ. ನಡುವೆ ಕಂಡಿತ್ತು ಈ ಒಂದು ಪುಟ್ಟ ಸಂದೇಶ.
ಅದ್ಯಾರೋ ಕ್ರೈಸ್ಟ್ ಕಾಲೇಜಿನ ಹುಡುಗನಂತೆ, ಕನ್ನಡ ಭಾಷೆಯನ್ನು “ಮೈ ಫುಟ್” ಎಂದು ಬೈದನಂತೆ! ಒಂದು ಕ್ಷಣ ಮೈಯ ರಕ್ತವೆಲ್ಲ ನೆತ್ತಿಗೇರಿತ್ತು. “ಕನ್ನಡ, ಕನ್ನಡ ಹಾ! ಸವಿಗನ್ನಡ” ಎಂದು ಬೆಳೆದ ಮನಸ್ಸು “ಮೈ ಫುಟ್” ಎಂಬ ಮಾತುಕೇಳಿದರೆ!? ಆ ಮಾತಿಗೆ ಬಂದಿದ್ದ ಉತ್ತರಗಳು ನೋಡಬೇಕು! ಒಂದಕ್ಕಿಂತಾ ಒಂದು, ಬೈಗುಳದ ಪದಗಳು. ಇನ್ನೇನು ಬೆರಳುಗಳು ಮತ್ತು ಕೀಬೋರ್ಡು ಎರಡೂ ಒಂದಕ್ಕೊಂದು ಕೈ ಕೈ ಮಿಲಾಯಿಸಿ ಈ ಹುಡುಗನನ್ನು ಒಂದು ಕೈ ನೋಡೇ ಬಿಡೋಣ ಎನ್ನುತ್ತಾ ತಯಾರಾಗಿತ್ತು. ಆಗಷ್ಟೇ ನನ್ನ ಮನಸ್ಸಿನಿಂದ ಒಂದು ಧ್ವನಿ “ತಾಳು, ತಾಳು” ಎಂದು ಕೂಗಿ ನನ್ನ ಕೈಬೆರಳಿನ ವೇಗಕ್ಕೆ ಪಾಸ್ ಹಾಕಿ, ಇದೇ ಫೇಸ್ಬುಕ್ ಪುಟದಲ್ಲಿ “ದರಿದ್ರ ಇಂಗ್ಲಿಷ್”, “ತಮಿಳ್ ಕೊಂಗರು”, ” ತುರ್ಕ ಸಾಬಿ ಮಾಲೂಮ್..” ಎಂಬಿತ್ಯಾದಿ ಸಕಲ ಮಾತುಗಳೂ ಕಂಡದ್ದು ನೆನಪಾಗಿಸಿತು. ಅರೆ! ಇವನ್ನು ಓದಿ ಅತ್ಯಂತ ಹಗುರವಾಗಿ ಪರಿಗಣಿಸಿ, ಕೆಲವೊಮ್ಮೆ ಅದನ್ನು ತಮಾಷೆಯಾಗಿ ಕಂಡು, ಬೇರೆ ಭಾಷೆಗಳನ್ನು ಅವಮಾನಗೊಳಿಸಿದ್ದು ಸಹ ನಾವೇ ಅಲ್ಲವೇ! ಆಗ ಇಲ್ಲದ ಸಿಟ್ಟು, ಸೆಡವು ಈಗ ಬಂದದ್ದಾದರೂ ಯಾಕೆ?! ಆ ಸಂಕುಚಿತ ಮನಸ್ಸಿನ ಹುಡುಗನಿಗೂ ನಮಗೂ ಯಾವ ವ್ಯತ್ಯಾಸವೂ ಇಲ್ಲ ಎನಿಸಿತು.
ನಾವು ಚಿಕ್ಕಂದಿನಲ್ಲಿ “ಮನೆ-ಆಕಾಶ” ಜಗಳದ ಆಟ ಆಡುತ್ತಿದ್ದೆವು. ಏನಪ್ಪಾ ಅಂದರೆ, ಒಬ್ಬ ಹುಡುಗಿ “ನಮ್ಮ ಮನೆ ಎಷ್ಟು ಚೆನಾಗಿದೆ ಗೊತ್ತಾ, ನಿಮ್ಮನೆ ಏನೂ ಚೆನಾಗಿಲ್ಲ” ಅನ್ನೋದು, ಮತ್ತೊಬ್ಬಳು ನಮ್ಮ ಮನೆ ನಿಮ್ಮನೆಗಿಂತಾ ದೊಡ್ಡದಿದೆ ಗೊತ್ತಾ… “ಎಂದು ರಾಗಾಲಾಪ ತೆಗೆಯುವುದು. ಅದಕ್ಕೆ ಮತ್ತೊಬ್ಬಳು, “ನಮ್ಮ ಮನೆ ಆಕಾಶದಷ್ಟು ದೊಡ್ಡದಿದೆ ಗೊತ್ತಾ…” ಎನ್ನುವುದು. ಹೀಗೆ ಮಕ್ಕಳಾಟಿಕೆಯಿಂದ ನಾವು ಇಂದಿಗೂ ಹೊರ ಬಂದದ್ದೇ ಇಲ್ಲವಲ್ಲ, ಎನಿಸಿಬಿಟ್ಟಿತು. “ನಮ್ಮ ಭಾಷೆ ಮೇಲು, ನಿಮ್ಮ ಭಾಷೆ ಕೀಳು” ಎಂಬ ಈ ಜಟಾಪಟಿಯಲ್ಲಿಯೇ ಸಮಯ ಹಾಳು ಮಾಡುತ್ತಿದ್ದೇವೆ ಅಷ್ಟೇ! ಕನ್ನಡವನ್ನು ನಾವು “ಕನ್ನಡವೇ ಸತ್ಯ, ಕನ್ನಡವೇ ನಿತ್ಯ”, ತಮಿಳರು “ಯಾಮರಿಂದ ಮೊಳಿಗಳಿಲೈ ತಮಿಳ್ ಮೊಳಿ ಪೋಲ್ ಇನಿದಾವದು ಎಂಗುಮ್ ಕಾಣಂ” (ನನಗೆ ತಿಳಿದ ಎಲ್ಲಾ ಭಾಷೆಗಳಲ್ಲೂ ತಮಿಳಿನಷ್ಟು ಇಂಪಾದುದು ಯಾವುದೂ ಕಂಡುಬರುವುದಿಲ್ಲ), ತೆಲುಗರು “ತೆಲುಗು ತೇಟ, ಅನ್ನಿ ಭಾಷಲಕನ್ನಾ ತೆಲುಗು ಲೆಸ್ಸ” (ತಿಳಿಯಾದ ತೆಲುಗು ಭಾಷೆ ಎಲ್ಲ ಇತರ ಭಾಷೆಗಳಿಗಿಂತ ಚೆನ್ನ) ಎಂದು. ಮತ್ತಿನ್ನು ಇಂಗ್ಲಿಷ್ ಲಂಗು ಲಗಾಮಿಲ್ಲದೆ “ವರ್ಲ್ದ್ಸ್ ಬೆಸ್ಟ್ ಲಾಂಗ್ವೇಜ್” ಅನಿಸಿಕೊಂಡು ಬಿಟ್ಟಿದೆ.
ಇಲ್ಲಿ ನಾವು ಎರಡು ಅಂಶಗಳನ್ನು ಗಮನಿಸಬೇಕು. ಈ ಮೇಲ್ಕಂಡ ಮಾತುಗಳನ್ನು ನಮ್ಮ ಎಲ್ಲ ಭಾಷಾದಿಗ್ಗಜರು ಅಂದು ಒಂದು ಉದ್ದೇಶದಿಂದ, ಆಯಾ ಭಾಷೆಯ ಸೊಗಸನ್ನು ಅರಿತು ಹೇಳಿರುತ್ತಾರೆ. ಆದರೆ ಇಂದು ಇದರ ಉಪಯೋಗವಾಗುತ್ತಿರುವುದು ಮಾತ್ರ ಪೈಪೋಟಿ, ಒಳಜಗಳಗಳು ಮತ್ತು ಹೆಚ್ಚುಗಾರಿಕೆ ತಿಳಿಸಿಕೊಳ್ಳಲು ಮಾತ್ರ. ಎರಡನೆಯ ಅಂಶವೆಂದರೆ, ಆ ಮಾತುಗಳನ್ನು ಗಮನಿಸಿ ನೋಡಿ, ಎಲ್ಲಾ ಭಾಷಿಗರೂ ತಮ್ಮ ಭಾಷೆ ಅತ್ಯುತ್ತಮ ಎಂದು ಅಭಿಮತ ತೋರಿದ್ದಾರೆ. ಇದರ ಅರ್ಥ, ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸೊಗಸಿದೆ, ಸಾಹಿತ್ಯವಿದೆ, ಹಂತ ಹಂತವಾಗಿ ರೂಪಾಂತರಗೊಂಡು ಬೆಳೆದುಬಂದ ಇತಿಹಾಸವಿದೆ. ಯಾವ ಮಾತೂ, ಮೌನಗಳೂ ಇಲ್ಲದೆ ಭಯಾನಕವಾಗಿ ಕೂಗಾಡುವ ನಮ್ಮ ಪೂರ್ವಜರಾದ ಆದಿಮಾನವರಿಂದ ಮೊದಲಾಗಿ ಇಂದು ನಮ್ಮ ಭೂಮಿಯ ಮೇಲೆ ಲಕ್ಷೋಪಲಕ್ಷ ತಾರ್ಕಿಕವಾದ, ಅರ್ಥ ಗ್ರಹಿಕೆಗಳಿಗೆ ಒಳಗಾದ ಭಾಷಾಶಾಸ್ತ್ರಗಳು ಬೆಳೆದುಬಂದಿರುವುದು ಒಂದು ಅದ್ಭುತವೇ ಸರಿ! ಈ ಪರಿಸ್ಥಿತಿಯಲ್ಲಿ ನಾವು ಯಾವ ಭಾಷೆ ಮೇಲು, ಯಾವುದು ಕೀಳು ಎನ್ನೋಣ!

ಭಾಷೆಯ ಬಗೆಗಿನ ಹಲವಾರು ತಪ್ಪು ಕಲ್ಪನೆಗಳು ನಮ್ಮಲ್ಲಿ ರೂಢಿಗತವಾಗಿ ಬೆಳೆದುಬಿಟ್ಟಿದೆ. ಕೆಲವರಿಗೆ ಭಾಷೆ ಎಂದರೆ ಒಂದು ‘ಲೆಕ್ಕಕ್ಕಿಲ್ಲದ ಟೆಕ್ಸ್ಟ್ ಬುಕ್ ಸಬ್ಜೆಕ್ಟ್’, ಇನ್ನು ಕೆಲವರಿಗೆ ತಮ್ಮ ಮೇಲ್ಮೆ ಅಥವಾ ಕೀಳರಿಮೆಗಳ ಸಂಕೇತ, ಮತ್ತು ಹಲವರಿಗೆ ತಮ್ಮ ಅಭಿಮಾನ, ದುರಭಿಮಾನಗಳ ಧೋರಣೆಗಳಿಗೆ ಇತರರನ್ನು ಗುರಿ ಮಾಡುವ ವಸ್ತು. ಎಷ್ಟೋ ಜನ ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಕನ್ನಡವನ್ನು ಅತಿಯಾಗಿ ಪ್ರೀತಿಸುತ್ತಾರೆ. ನಮ್ಮ ಆಫೀಸಿನಲ್ಲೇ ಒಬ್ಬ ಹುಡುಗ ಇದ್ದ, ಅವನಿಗೆ ನಾಲಗೆ ಸೀಳಿದರೂ ಒಂದು ಇಂಗ್ಲಿಷ್ ವಾಕ್ಯ ಸರಿಯಾಗಿ ಹೇಳಲು ಬಾರದು, ಅವನಿಗೆ ಕನ್ನಡ ಎಂದರೆ ಎಲ್ಲಿಲ್ಲದ ಪ್ರೀತಿ. ಅವನ “ಕನ್ನಡ ಪ್ರೀತಿ” ಎಂಬ ಸುಳ್ಳು ಕವಚದೊಳಗೆ, ಅವನ ಇಂಗ್ಲಿಷ್ ಕೊರತೆಯ ಮೃದು ಅಂಶ ಅಡಗಿತ್ತು. ಅದೂ ಅವನ ಕನ್ನಡ ಪ್ರೀತಿ ಎಂತಹದ್ದೆಂದರೆ, “ಕನ್ನಡ ರಾಜ್ಯೋಸ್ತವ”ಕ್ಕೆ ವಿಜ್ರುಂಭಣೆಯಿಂದ ಕಾರ್ಯಕ್ರಮ ಏರ್ಪಡಿಸಿ “ತುಂಬಾ ನೋಡಬೇಡಿ ಲವ್ವು ಆಯ್ತದೆ” ಹಾಡಿನ ಆರ್ಕೆಸ್ಟ್ರಾ ನಡೆಸುವುದು. ಇನ್ನು ಕೆಲವರಿಗೆ ಶಾಪಿಂಗ್ ಮಾಲ್ ನಲ್ಲಿ “ಅಮ್ಮ ನನಗೆ ಆ ಗೊಂಬೆ ಬೇಕು” ಎಂದು ಮಗು ಅಚ್ಚ ಕನ್ನಡದಲ್ಲಿ ರಚ್ಚೆ ಹಿಡಿದರೆ, ಅಯ್ಯೋ ನಮ್ಮ ಮಗು ಹಳ್ಳಿಯವರ ಥರ, ಇಲ್ಲೆಲ್ಲಾ ಕನ್ನಡ ಮಾತನಾಡಿಬಿಡುತ್ತಿದೆ ಎಂದು ಅನಿಸಿ ತಕ್ಷಣ, “ಪಿಂಕಿ, ಬಿಹೇವ್ ಯುವರ್ ಸೆಲ್ಫ್” ಎಂದು ಅವರ ಇಂಗ್ಲಿಷ್ ವ್ಯಾಮೋಹ ಅಥವಾ ಗೌರವಕ್ಕೆ ಹೆಮ್ಮೆ ಪಟ್ಟು ಬೀಗುವುದು. ಈ ರೀತಿ ಅತಿಯಾದ ವೈರುಧ್ಯಗಳು ತಲೆದೋರಿ ನಾವು ಆ ಕಾಲದಿಂದ ಹಂಸ ಕ್ಷೀರ ನ್ಯಾಯದಲ್ಲಿ ಸೋಲುತ್ತಲೇ ಬಂದಿದ್ದೇವೆ. ಯಾವುದೇ ಭಾಷೆಯು ಆ ಕಾಲದಿಂದಲೂ ಸಾಮಾಜಿಕ ಹಾಗೂ ರಾಜಕೀಯ ಒತ್ತಡಗಳಿಗೆ ಬಲಿಯಾಗುತ್ತಲೇ ಬಂದಿದೆ.
ಕೆಲ ಭಾಷಾ ಪ್ರೇಮಿಗಳು, ಭಾಷೆಯನ್ನು ಪ್ರೀತಿಸುವ “ವ್ಯಾಮೋಹ”ದಲ್ಲಿ ಇತರ ಭಾಷೆಗಳನ್ನು ದ್ವೇಷಿಸುವ ಮಟ್ಟ ತಲುಪುತ್ತಾರೆ. ಇನ್ನು ಕೆಲವರು ಇತರ ಭಾಷೆಯನ್ನು ತಮ್ಮದಾಗಿಸುವ ಭರದಲ್ಲಿ ತಮ್ಮ ಸ್ವಂತ ಭಾಷೆಯ ಕಣ್ಣಿಗೆ ಸುಣ್ಣ ಬಳೆಯುತ್ತಾರೆ (ಆ ಮೇಲೆ ಕಂಡ ಕ್ರೈಸ್ಟ್ ಕಾಲೇಜು ಹುಡುಗ ಈ ಜಾತಿಗೆ ಸೇರಿದವನು). ಭಾಷೆಯನ್ನು “ನನ್ನದು” ಎಂದು ಪ್ರೀತಿಸುವುದಕ್ಕಿಂತ ಒಂದು ಭಾಷೆಯಾಗಿಯೇ ಪ್ರೀತಿಸಬೇಕು. ಅದರ ಸವಿಯನ್ನು ಅನುಭೋಗಿಸಬೇಕು. ನಮ್ಮ ಭಾಷೆಯ ಬಗೆಗಿನ ಪ್ರೇಮ, ಭಾಷಾ ಅಭಿಮಾನವಾಗಿ ಖಂಡಿತವಾಗಿಯೂ ನಮ್ಮ ಆತ್ಮವಿಶ್ವಾಸವಾಗಬೇಕು. ಆದರೆ ಅದು ಎಂದಿಗೂ ಭಾಷಾಂಧತೆಯಾಗಬಾರದು. ಇದು ಯಾವಾಗ ಅಂಧ ಭಕ್ತಿಯಾಗುತ್ತದೋ ಅಂದು ನಮಗೆ ಉಳಿದೆಲ್ಲ ಭಾಷೆಗಳೂ “ಫುಟ್ಟು, ಬಟ್ಟು” ಆಗಿ ಕಾಣುತ್ತವೆ. ಇದು ಸಹಜ! ಆದ್ದರಿಂದ ಭಾಷಾಪ್ರೇಮ ಚಿಕ್ಕಂದಿನಿಂದ ಮಕ್ಕಳಲ್ಲಿ ಬೆಳೆಯುವಂತೆ ಮಾಡಬೇಕು. ಯಾವುದೇ ಭಾಷೆಯನ್ನು ಗೌರವಿಸುವುದು, ಭಾಷೆಯನ್ನು ಒಂದು ಭಾಷೆಯನ್ನಾಗಿ ಅಷ್ಟೇ ಕಲಿತು, ಅದರೊಳಗಿನ ಬೆರಗುಗಳನ್ನೂ, ಕೌತುಕಗಳನ್ನೂ ಅರಿತು ಅರಳುವುದು ಜರುಗಬೇಕೆ ಹೊರತು, ಭಾಷೆ ಎಂದಿಗೂ ನಮ್ಮ ಸ್ಟೇಟಸ್ ಸಿಂಬಲ್ ಆಗಬಾರದು. ಒಂದು ಭಾಷೆ ಚೆನ್ನಾಗಿ ಬಂದ ಮಾತ್ರಕ್ಕೆ ಆತ ಮೇಲು ಅಥವಾ ಇನ್ನೊಬ್ಬ ಕೀಳು ಎಂದು ನೋಡುವುದು, ವರ್ಣ, ಜಾತಿಗಳ ಜೊತೆಗೆ ಮತ್ತೊಂದು ಭಾಷಾ ಜಾತೀಯತೆ, ಪಂಥಗಳನ್ನು ಸೃಷ್ಟಿಸುತ್ತವೆಯೇ ಹೊರತು ಮತ್ಯಾವ ಪುರ್ಶಾರ್ಥ ಸಾಧನೆಯೂ ಅಲ್ಲ. ನಮ್ಮಲ್ಲಿ ನಿಜಾರ್ಥದ ಭಾಷಾ ಪ್ರೇಮದ ಬೀಜ ಮೊಳಕೆಯೊಡೆದ ಕ್ಷಣ ಖಂಡಿತ ನಮ್ಮ ಮಾತೃಭಾಷೆ ಬಗ್ಗೆ ಪ್ರೇಮ, ವಾತ್ಸಲ್ಯ ಮತ್ತು ಇತರ ಭಾಷೆಗಳ ಮೇಲೆ ಪ್ರೀತಿ ಮೊಳೆಯುತ್ತದೆ. ಆಗ ನಮ್ಮ ಯಾವ ‘ಸಾಫ್ಟ್’ ಅಥವಾ ‘ಹಾರ್ಡ್’ ತಂತ್ರಾಂಶಗಳಿಗಿಂತ ಈ ಭಾಷೆ ಎಂಬ ಅಂಶದ ಆವಿಷ್ಕಾರ ದೊಡ್ಡದಾಗಿ ಕಾಣುತ್ತದೆಯಷ್ಟೇ ಅಲ್ಲದೆ ಜೀವನ ದರ್ಶನಕ್ಕೆ ಸಹಾಯ ಮಾಡುತ್ತದೆ.
 

‍ಲೇಖಕರು avadhi

May 10, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. deepaG

    thumba chennagide bhasheya bagegina tarkik niluvu jotege prati bhasheyu tannadeyad tukavannu hondide navu prati bhashe hagu bhashikanannu gouravisonh… dhanyavadagalu mam..

    ಪ್ರತಿಕ್ರಿಯೆ
  2. ಪು. ಸೂ . ಲಕ್ಷ್ಮೀನಾರಾಯಣ ರಾವ್

    ನಿಮ್ಮ ಲೇಖನ ಚೆನ್ನಾಗಿದೆ ಮತ್ತು ಪ್ರಸ್ತುತವು ಆಗಿದೆ . ಇಂದಿಗೂ ಅನೇಕ ವಿದ್ಯಾವಂತರು ಕೂಡ ಇಂಗ್ಲೀಷಿನಲ್ಲಿ ಮಾತಾಡುವವರನ್ನು ಬುದ್ಧಿವಂತರು ಎಂದು ಭಾವಿಸಿಕೊಳ್ಳುತ್ತಾರೆ,ಮತ್ತು ಆ ಕಾರಣದಿಂದಾಗಿಯೇ ಅವರಿಗೆ ವಿಶೇಷ ಮನ್ನಣೆ ಕೊಡುತ್ತಾರೆ . ಇದು ಎಷ್ಟು ಬಾಲಿಶ ಅಲ್ಲವೇ ? ಇಂಗ್ಲೀಷಿನಲ್ಲಿ ಮಾತಾಡುತ್ತಾರೆ ಎಂದರೆ ಅವರಿಗೆ ಇಂಗ್ಲಿಷ್ ಬರುತ್ತದೆ ಎಂದಷ್ಟೇ ಅರ್ಥ . ಅವರು ಜ್ಞಾನಿಗಳು ಎಂದಾಗಲಿ ಬುದ್ಧಿವಂತರು ಎಂದಾಗಲಿ ಅಲ್ಲ . ಅವರ ಮಾತಿನೊಳಗೆ ಇರುವ ಸತ್ವ ,ಅನುಭವದ ನೈಜತೆ ,ಒಳನೋಟಗಳು ಕೊನೆಗೆ ದರ್ಶನ – ಇಂಥ ಇತ್ಯಾದಿ ಅಂಶಗಳು ಅವರು ಬುದ್ಧಿವಂತರೋ ಜ್ಞಾನಿಗ ಳೋ ಎಂಬುವುದನ್ನು ನಿರ್ಣಯಿಸುತ್ತದೆ . ನಮ್ಮ ಸಮಾಜದಲ್ಲಿ ಇಂತಹ ಇಂಗ್ಲೀಷಿನ ಭ್ರಮಾಲೋಕದಲ್ಲಿರುವ ಜನರೇ ಅಧಿಕ . ಇವರಿಗೆ ಜ್ನಾನೋದಯವಾಗುವುದೇ ಇಲ್ಲ . ಏಕೆಂದರೆ ಅವರಿಗೆ ವಾಸ್ತವ ಸತ್ಯದ ಬಗ್ಗೆ ಆಸಕ್ತಿಯೇ ಇರುವುದಿಲ್ಲ .

    ಪ್ರತಿಕ್ರಿಯೆ
  3. ರವಿಪ್ರಕಾಶ

    ಹೆತ್ತ ತಾಯಿಯನ್ನಾಗಲಿ ಪ್ರತ್ಯೇಕವಾಗಿ ಪ್ರೀತಿ ಮಾಡು ಅಂತ ಹೇಳಿಕೊಡಬೇಕಾಗಿಲ್ಲ. ಆಡುವ ಭಾಷೆಯನ್ನು ಕೀಳಾಗಿ ಕಾಣುವ ಮನೋಭಾವವೇ ದೊಡ್ಡ ತೊಡಕಾಗಿರುವುದು. ಅದರಲ್ಲೂ ಹುಡುಗಿಯರಲ್ಲಿ ಈ ಮನೋಭಾವ ಅಧಿಕ.

    ಪ್ರತಿಕ್ರಿಯೆ
  4. Rj

    ಸಂಯುಕ್ತಾ ಅವರೇ,ವರ್ತಮಾನದ ಅನೇಕ ನಗ್ನಸತ್ಯಗಳನ್ನು ಮತ್ತು ಎಂಥದೋ ಒಣಹಮ್ಮು,ಟೊಳ್ಳುಗಳನ್ನು ಯಾವ ಭಿಡೆಯೂ ಇಲ್ಲದಂತೆ ಬಿಡಿಸಿಟ್ಟಿದ್ದೀರಿ.ನಿಮ್ಮ ನೇರನುಡಿ ಮತ್ತು ದಿಟ್ಟತನ ನೋಡಿ ಖುಷಿಯೆನಿಸಿತು.Thumbs up!
    -Rj

    ಪ್ರತಿಕ್ರಿಯೆ
  5. Raghunandan K

    ಮನುಷ್ಯ ಯಾವಾಗಲೂ ಮಕ್ಕಳಾಟವನ್ನೇ ಆಡುತ್ತಿರುತ್ತಾನೆ, ಮಕ್ಕಳು ಆಡಿ ಮರೆಯುತ್ತಾರೆ, ಮನುಷ್ಯ ಆಡಿ ಸಾಯುತ್ತಾನೆ… ಮಕ್ಕಳಾಟ ಬೆಳೆಯುವುದಕ್ಕೆ, ಮನುಷ್ಯರ ಆಟ ಕೊಳೆಯುವುದಕ್ಕೆ…
    ಬೆಸೆಯುವದಕ್ಕೆಂದು ಹುಟ್ಟಿದ ಭಾಷೆ ಬೇರ್ಪಡಿಸುತ್ತಿರುವದು ಮನುಷ್ಯ ನಿರ್ಮಿತ ದುರಂತ.
    ವೈಚಾರಿಕ ಬರಹ, ಇಷ್ಟವಾಯಿತು.

    ಪ್ರತಿಕ್ರಿಯೆ
  6. ಪ್ರಮೋದ್

    ಅ೦ಗಡಿಯಲ್ಲಿ ಇ೦ಗ್ಲೀಷ್ ಮಾತನಾಡಿದರೆ ಕ್ಯಾರೇ ಮಾಡುವವರಿಲ್ಲ. ಸರಿಯಾಗಿ ಇ೦ಗ್ಲೀಷ್ ಬಾರದಿದ್ದರೂ ತ೦ದೆ ತಾಯಿ ಮಕ್ಕಳ ಹತ್ತಿರ ಸ೦ಪೂರ್ಣ ಇ೦ಗ್ಲೀಷ್ ಮಾತಾನಾಡಿ, ಆ ಕಡೆ ಮನೆಯಲ್ಲಾಡುವ ಭಾಷೆಯೂ ಇಲ್ಲದೆ, ಈ ಕಡೆ ಇ೦ಗ್ಲೀಷ್ ಸರಿ ಬಾರದೆ, ಭಾಷೆ ಮೇಲೆ, ಮಾತಿನ ಮೇಲೆ ಹಿಡಿತವನ್ನೇ ತಪ್ಪಿರುವ ಮಕ್ಕಳನ್ನು ನೋಡಿದ್ದೇನೆ.
    ಹತ್ತನೇ ತರಗತಿಯ ಮಳೆಯಾಳಿ ಹುಡುಗ ಸ೦ಜೆ ಮನೆ ಬೇಗ ತಲುಪಿದ್ದಕ್ಕೆ ‘ಯು ಕೇಮ್ ಸೊ ಫಾಸ್ಟಾ?’ ಅ೦ತಾನೆ. ಖೇದಕರ.

    ಪ್ರತಿಕ್ರಿಯೆ
  7. ಪ್ರಮೋದ್

    ಕ್ಷಮಿಸಿ ಅ೦ಗಡಿಯಲ್ಲಿ ಇ೦ಗ್ಲೀಷ್ ಬಿಟ್ಟು ಬೇರೆ ಮಾತನಾಡಿದರೆ ಕ್ಯಾರೇ ಮಾಡುವವರಿಲ್ಲ ಆಗಬೇಕಿತ್ತು

    ಪ್ರತಿಕ್ರಿಯೆ
  8. Jayalaxmi Patil

    “ದೋಣಿ ಒಂದೇ, ನಾವಿಕರು, ಅಂದು ಅವರು – ಇಂದು ಇವರು” ನೀನು ಬರೆದ ಈ ಸಾಲು ಎಷ್ಟೋಂದು ವಿಷಯಗಳಿಗೆ ಅನ್ವಯಿಸುತ್ತೆ ಗೊತ್ತಾ!? ಈ ಭಾಷೆಗಳ ವಿಶಯಕ್ಕೂ ಸಹ.

    ಪ್ರತಿಕ್ರಿಯೆ
  9. ಸತೀಶ್ ನಾಯ್ಕ್

    ಭಾಷೆ ಒಬ್ಬರಿಗೊಬ್ಬರು ಕಲೆಯೋಕೆ ವಿನಃ ಕಲಹಕ್ಕಲ್ಲ.. ಆದ್ರೆ ದುರಂತ ಅಂದ್ರೆ ಭಾಷಾ ವಿಚಾರದಲ್ಲಿ ನಾವು ಕಲೆತದ್ದಕ್ಕಿಂಥ ಕಲಹಗಳನ್ನ ಕಂಡದ್ದೇ ಹೆಚ್ಚು.. ನಾವು, ನಮ್ಮ ತನ, ನಮ್ಮ ಮನೆ, ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ನಾಡು ಇವೆಲ್ಲಕ್ಕೂ ಒಂದು ಪರಿದಿಯನ್ನು ಕಟ್ಟಿಕೊಂಡು ವರ್ಗವಾಗಿರುವ ಹಾಗೆಯೇ ನಮ್ಮ ಭಾಷೆ ಅನ್ನೋದು ಕೂಡ ಒಂದು ವರ್ಗವಾಗಿ ಹೋಗಿದೆ. ಮತ್ತಾ ವರ್ಗದ ಶ್ರೇಷ್ಠತೆಯ ಸಾಬೀತು ಪಡಿಸಲು ಮತ್ತೊಂದು ಭಾಷೆಯ ಅವಹೇಳನವೇ ಸರಿಯಾದ ದಾರಿಯೆಂದು ಕಂಡು ಕೊಂಡ ಹಾಗಿದೆ.. ಭಾಷೆ ಸಂವಹನಕ್ಕೆ ಹೊರತು ಸಂಘರ್ಷಕ್ಕಲ್ಲ. ನಮ್ಮ ತಾಯಿಯ ಮೇಲಿನ ಅತಿಯಾದ ಪ್ರೀತಿಯ ಪ್ರಚುರ ಪಡಿಸಲು.. ಮತ್ತೊಬ್ಬರ ತಾಯಿಯನ್ನ ದ್ವೆಶಿಸಿಯೇ ಆಗಬೇಕೆಂಬ ದಾರಿ ಕಡ್ಡಾಯವಲ್ಲ. ಇನ್ನಾದರು ತಿಳಿದು ಅರಿತು ಬೆರೆತು ಕಲೆತು ಬಾಳ ಬೇಕಿದೆ.. ತುಂಬಾ ಒಳ್ಳೆಯ ಲೇಖನ ಮೇಡಂ.. 🙂 🙂

    ಪ್ರತಿಕ್ರಿಯೆ
  10. bharathi

    ವಾಹ್! ಚೆನ್ನಾಗಿದೆ ಸಂಪು ಬರಹ. ಉಳಿದ ವಿಷಯಗಳನ್ನ ಜೋಕ್ ಎಂದು ಪರಿಗಣಿಸಿ ನಕ್ಕ ನನಗೆ ಈಗೇಕೆ ರೋಷ? ಅಂತ ಪ್ರಶ್ನಿಸಿಕೊಂಡಿರಲ್ಲ … ಅದು ತುಂಬ ಇಷ್ಟವಾಯ್ತು ಸಂಪು. ಎಲ್ಲರಿಗೂ ಈ ರೀತಿಯ ಅರಿವು ಮೂಡಲಿ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: