ಕಾಡು ಹಕ್ಕಿಯ ಹಾದಿನೋಟ : ಪಾಪದ ಸಾಬಿಯ ಪರದಾಟ..

ಇಲ್ಲಿಯವರೆಗೆ

ಹೈಸ್ಕೂಲಿನಲ್ಲಿದ್ದಾಗ ಹುಟ್ಟಿಕೊಂಡ ಸೈಕಲ್ ಪಯಣದ ಆಸೆ ಹಾಗೆಯೇ ಬೂದಿ ಮುಚ್ಚಿದ ಕೆಂಡದಂತೆ ಉಳಿದುಕೊಂಡುಬಿಟ್ಟಿತು.ಸಕಲೇಶಪುರದಲ್ಲೊಮ್ಮೆ ಅಲ್ಲಿನ ಕುರೋವ್ ಫೀಲ್ಡ್ ನಲ್ಲಿ ಸೈಕಲ್ ಕಲಿಯಲು ಹೋಗಿ ನಿರಾಶನಾಗಿ ಬಂದ ನಂತರದಲ್ಲಿ ಮತ್ತೆ ಸೈಕಲನ್ನು ಮುಟ್ಟುವ ಅವಕಾಶ ದೊರೆತಿರಲಿಲ್ಲ.
ಎಸ್.ಎಸ್.ಎಲ್.ಸಿ ಪಾಸಾದ ಕೂಡಲೇ ನಮ್ಮ ಮನೆಯವರು ನನ್ನನ್ನು ಸೀದಾ ತಂದುಬಿಟ್ಟದ್ದು ಸಿದ್ದಗಂಗಾಮಠಕ್ಕೆ!ಹಾಸನ ಇರಲಿ,ಸಕಲೇಶಪುರವನ್ನೇ ಸರಿಯಾಗಿ ನೋಡದಿದ್ದ ನನ್ನನ್ನು ದೂರದ ಸಿದ್ದಗಂಗೆಗೆ ತಂದುಬಿಟ್ಟದ್ದು ಎಲ್ಲಿಂದಲೋ ತಂದು ಎಲ್ಲಿಗೋ ಎಸೆದು ಹೋದಂತೆ ಆಗಿತ್ತು.ಹೊಸ ಪರಿಸರ,ಮಠದ ಆಹಾರ, ಶಿಸ್ತು ಇವುಗಳಿಗೆಲ್ಲಾ ಹೊಂದಿಕೊಳ್ಳಬೇಕಾಗಿದ್ದ ನನಗೆ ಓದೊಂದನ್ನು ಬಿಟ್ಟರೆ ಬೇರೆ ಯಾವುದೇ ವಿಚಾರಗಳನ್ನು ಯೋಚಿಸುವುದು ಸಾದ್ಯವಿರಲಿಲ್ಲ.
ಹೋಮ್ ಸಿಕ್‌ನೆಸ್ ಎಂಬುದು ಪ್ರಬಲವಾಗಿ ಕಾಡುತ್ತಿದ್ದರೂ ಮಠದ ಪರಿಸರಕ್ಕೆ ಒಗ್ಗಿಕೊಂಡು ಓದು ಮುಂದುವರೆಸದೇ ನನಗೆ ಗಂತ್ಯಂತರವೇ ಇರಲಿಲ್ಲ.ಆಗ ಮಠದಲ್ಲಿ ಹೈಯರ್ ಸೆಕೆಂಡರಿ ಸ್ಕೂಲ್ ಮಾತ್ರ ಇದ್ದು ಪಿ.ಯು.ಸಿ(ಅಂದಿನ ಇಲವೆಂತ್ ಸ್ಟಾಂಡರ್ಡ್)ವರಗೆ ಮಾತ್ರ ಓದಬಹುದಾಗಿತ್ತು. ಹಾಗಾಗಿ ಹಲವು ಒತ್ತಡಗಳ ನಡುವೆಯೂ ಆ ಪರೀಕ್ಷೆಯಲ್ಲಿ ಪಾಸಾಗಿ ಡಿಗ್ರಿ ಕಾಲೇಜಿಗೆ ಸೇರುವ ಅರ್ಹತೆ ಪಡೆದುಕೊಂಡಿದ್ದೆ.
ನಂತರ ಸೇರಿದ್ದು ತುಮಕೂರಿನ ಸರ್ಕಾರಿ ಕಾಲೇಜು.ಬೆಳಗ್ಗೆ ಮಠದ ಮುದ್ದೆ ತಿಂದು ಮೂರು ಕಿಲೋಮೀಟರ್ ದೂರದ ಕಾಲೇಜಿಗೆ ಬರಬೇಕಾಗಿತ್ತು.ನನ್ನ ಸಹಪಾಠಿಗಳು ಅನೇಕರು ಆಗಲೇ ಸೈಕಲಿನಲ್ಲಿ ಕಾಲೇಜಿಗೆ ಬರತೊಡಗಿದರು.ಆಗ ಮತ್ತೆ ನನ್ನ ಆಸೆ ಗರಿಗೆದರಿಕೊಂಡಿತು.ಸೈಕಲ್ ಕೊಳ್ಳಲು ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ.ಕಡಿಮೆ ವರಮಾನ,ನಾನು ಸೇರಿದಂತೆ ಮನೆಯಲ್ಲಿ ಏಳು ಜನ ಮಕ್ಕಳು ದುಡಿಮೆ ಮಾಡಿ ಸಂಪಾದಿಸುತ್ತಿದ್ದ ನನ್ನ ತಾಯಿಗೆ ಅಂಟಿಕೊಂಡ ಯಾವುದೋ ಖಾಯಿಲೆ,ಉಲ್ಬಣವಾದಾಗ ನಿರಂತರವಾಗಿ ಹಾಸನದ ಆಸ್ಪತ್ರೆಗೆ ಎಡತಾಕುವ ಜಂಜಾಟ.ನನ್ನ ಮನಸ್ಸದು ಸೈಕಲ್ ಕೇಳಲು ಹಿಂಜರಿಯುತ್ತಿತ್ತು.
ಆದರೂ ಪ್ರತಿ ಬಾರಿ ಪತ್ರ ಬರೆಯುವಾಗಲೂ ಹ್ಯಾಗೋ ಆ ವಿಷಯ ಪರೋಕ್ಷವಾಗಿಯಾದರೂ ಪ್ರಸ್ತಾಪವಾಗಿಬಿಡುತ್ತಿತ್ತು.ನನ್ನ ಸೈಕಲ್ ಪಯಣದ ಆಸೆ ಈಡೇರುವುದೇ ಇಲ್ಲವೇನೋ ಎಂಬ ನಿರಾಸೆಯ ಭಾವದಲ್ಲೇ ದಿನವೂ ಮಠದಿಂದ ತುಮಕೂರಿಗೆ ನಡೆದಾಡುತ್ತಾ ಒಂದೆರಡು ತಿಂಗಳು ಕಳೆದಿದ್ದೆ.
ಒಂದು ದಿನ ಇದ್ದಕ್ಕಿಂದತೆ ಯಾವುದೋ ಸೂಚನೆಯಿಲ್ಲದೇ ನಮ್ಮ ತಂದೆ ಬಂದಿಳಿದರು.ಮನೆಯ ಕಷ್ಟ ಅರಿತುಕೊಂಡು ಅವರ ಆಸೆಯಂತೆ ಓದು ಮುಂದುವರೆಸಿದ್ದ ನನ್ನ ಬಗ್ಗೆ ಅವರಿಗೆ ಅಪಾರ ಒಲವಿತ್ತು.ನನ್ನ ಮನದ ಆಸೆಯ ಬಗ್ಗೆ ಅರಿತಿದ್ದ ಅವರು ಆ ಕುರಿತೇ ಬಂದಿದ್ದರು. ವಿಷಯ ತಿಳಿದು ಖುಷಿಯಾದರೂ,ಯಾರಲ್ಲಿ ಸಾಲಮಾಡಿಕೊಂಡು ಬಂದಿದ್ದಾರೋ ಎಂಬ ಆತಂಕವೂ ಉಂಟಾಯಿತು.
ಅಂತೂ ಸ್ನೇಹಿತರ ಜೊತೆ ಹೋಗಿ ಇನ್ನೂರು ರೂಪಾಯಿ ಕೊಟ್ಟು ಹೊಸ ಹರ್ಕ್ಯುಲೆಸ್ ಸೈಕಲ್ ಕೂಡಿಸಿ ತಂದದ್ದಾಯಿತು.ನಮ್ಮ ರೂಮಿದ್ದ ಜಯನಿಲಯದ ಮುಂದೆ ಹೊಸ ಹರ್ಕ್ಯುಲೆಸ್ ಬಂದು ನಿಂತದ್ದೇನೋ ಸರಿ.ಆದರೆ ಅದನ್ನು ಓಡಿಸಲು ಬರಬೇಕಲ್ಲಾ! ಒಂದಿಡೀ ದಿನ ಆಗಾಗ ಅದರ ಬಳಿ ಹೋಗಿ ಯಾರೂ ನೋಡದಿದ್ದಾಗ ಪ್ರೀತಿಯಿಂದ ಅದರ ಮೈದಡವಿ ಆಸೆ ತೀರಿಸಿಕೊಳ್ಳಲು ಯತ್ನಿಸಿದೆ.
ನನ್ನ ಕಷ್ಟವನ್ನರಿತ ನನ್ನ ಸಹಪಾಠಿಗಳು ನನ್ನನ್ನು ಸೈಕಲ್ ಮೇಲೆ ಕೂರಿಸಿ ಮಠದ ಆವರಣದಲ್ಲೆ ಅತ್ತಿಂದಿತ್ತ ನೂಕಿ ಹ್ಯಾಂಡಲ್ ಬ್ಯಾಲನ್ಸ್,ಪೆಡಲ್ ತುಣಿಯುವುದು,ಬ್ರೇಕ್ ಹಾಕುವುದು ಎಲ್ಲಾ ಹೇಳಿಕೊಡತೊಡಗಿದರು.ಒಂದು ವಾರದ ಪರಿಶ್ರಮದ ನಂತರ ಸೈಕಲ್ ಬ್ಯಾಲೆನ್ಸ್ ಮಾಡುವುದು ಕಲಿತಿದ್ದೆ.ಜನಸಂದಣಿಯಿಲ್ಲದ ಬಯಲಿನಲ್ಲಿ ಯಾರದೇ ನೆರವಿಲ್ಲದೇ ನಾಲ್ಕಾರು ಮಾರು ದೂರ ಪೆಡಲ್ ತುಣಿಯುವಷ್ಟು ತರಬೇತನಾಗಿದ್ದೆ.

***********

ಈಗಿನ ಶತಾಯುಷಿ,ನಡೆದಾಡುವ ದೇವರು ಎಂದು ಜನ ಪ್ರೀತಿಯಿಂದ ಕರೆಯುವ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಆಗಿನ್ನು ಅರವತ್ತರ ವಯಸ್ಸು.ಸಾವಿರಾರು ಹುಡುಗರಿಗೆ ಉಚಿತ ವಿದ್ಯೆ ಹಾಗು ದಾಸೋಹ ನಡೆಯುತ್ತಿದ್ದು ಅವರು ಎಲ್ಲಾ ಹುಡುಗರೊಂದಿಗೆ ಬೆರೆತು ಕಷ್ಟಸುಖ ವಿಚಾರಿಸುತ್ತಾ ದೂರದೂರದಿಂದ ಬಂದ ಎಲ್ಲಾ ಹುಡುಗರ ಪ್ರೀತಿಗೆ ಪಾತ್ರರಾಗಿದ್ದರು.
ಲಿಂಗಾಯಿತ ಮಠವಾದರೂ ಅದು ಕರ್ನಾಟಕದ ಸಕಲ ಜಾತಿಧರ್ಮದ ಬಡವರ ಹುಡುಗರ ಆಶ್ರಯತಾಣವಾಗಿತ್ತು.ಸ್ವಾಮಿಗಳು ಎಲ್ಲಾ ಜಾತಿಯ ಮಕ್ಕಳನ್ನು ಸಮಾನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೂ,ಲಿಂಗಾಯಿತ ದಾನಿಗಳೇ ಹೆಚ್ಚಾಗಿದುದರಿಂದಲೋ ಏನೋ ಅವರ ಒತ್ತಡಕ್ಕೆ ಮಣಿದಂತೆ ಕಾಣುತ್ತಿತ್ತು.ಅಲ್ಲಿ ಇನ್ ಕ್ಯಾಸ್ಟ್ ಎಂದರೆ ಲಿಂಗಾಯಿತರು.ಮಿಕ್ಕೆಲ್ಲಾ ಜಾತಿಯವರವನ್ನು ಔಟ್ ಕ್ಯಾಸ್ಟ್ ಎಂದು ಅನಧಿಕೃತ ವಿಭಜನೆ ನಿಚ್ಚಳವಾಗಿತ್ತು.ಈ ಆಚರಣೆ ಸ್ವಾಮೀಜಿಗಳಿಗೆ ಹಿಡಿಸದಿದ್ದರೂ,ಮಠವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವ ದೃಷ್ಠಿಯಿಂದ ಜಾತೀಯ ಭಾವನೆಗೆ ಒತ್ತು ಕೊಡುತ್ತಾ ಪೋಷಿಸುತ್ತಿದ್ದ ದೊಡ್ಡದೊಡ್ಡ ದಾನಿಗಳು ಹಾಗು ರಾಜಕಾರಣಿಗಳನ್ನು ಎದುರುಹಾಕಿಕೊಳ್ಳದ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ಚಡಪಡಿಸುತ್ತಿದ್ದುದನ್ನು ಕಾಣುತ್ತಿದ್ದೆವು.
ಅವರು ಇಂಗ್ಲಿಷ್ ಹಾಗು ಸಂಸ್ಕೃತದಲ್ಲಿ ಅಗಾದ ಪಾಂಡಿತ್ಯವನ್ನು ಹೊಂದಿದ್ದ ಮಹಾನ್ ತತ್ವಜ್ನಾನಿ.ನಾವು ಪಿ.ಯು.ಸಿ ಓದುತ್ತಿದ್ದಾಗ ಸಂಜೆಯ ಪ್ರಾರ್ಥನೆಗೂ ಮೊದಲು ನೀಡುತ್ತಿದ್ದ ಇಂಗ್ಲಿಷ್ ಪಾಠದ ಉಪನ್ಯಾಸ ಇಂದಿಗೂ ಕಿವಿಯಲ್ಲಿ ರಿಂಗಣಿಸಿದಂತೆ ಆಗಿ ಅವಿಸ್ಮರಣೀಯ ನೆನಪಾಗಿ ಉಳಿದುಕೊಂಡುಬಿಟ್ಟಿದೆ.
ದೊಡ್ಡವರೆನಿಸಿಕೊಂಡ ಹಲವರ ಸಂಕುಚಿತ ಮನೋಬಾವದಿಂದಾಗಿ ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದುದು ನಿಜವಾದರೂ,ಅನ್ನದಾತ,ವಿದ್ಯಾದಾತರಾಗಿ ಪೋಷಿಸುತ್ತಿದ್ದ ಸ್ವಾಮೀಜಿಯವರನ್ನು ಕುರಿತು ಎಲ್ಲಾ ಜಾತಿಯ ವಿದ್ಯಾರ್ಥಿಗಳೂ ಅಗಾದ ಗೌರವ ಹೊಂದಿದ್ದರು.ಅವರ ಕಚೇರಿಯ ಮುಂದೆ ಹಾದು ಹೋಗುವಾಗ ಪ್ರತಿಯೊಬ್ಬ ಸೈಕಲ್ ಸವಾರನೂ ಇಳಿದು ಗೌರವ ಕೊಟ್ಟು ಮುಂದೆ ಹೋಗುವುದು ಪ್ರೀತಿಯ ದ್ಯೋತಕವಾಗಿತ್ತು.ವಿದ್ಯಾರ್ಥಿಗಳು,ಭಕ್ತಾದಿಗಳು ಅದನ್ನೇ ಒಂದು ನಿಯಮದಂತೆ ಪಾಲಿಸುತ್ತಿದ್ದರು.

****************

ನಮ್ಮ ಮಲೆನಾಡಿನಿಂದ ಬಂದಿದ್ದ ಮೊಗಪ್ಪಗೌಡ ಎಂಬ ಲಿಂಗಾಯಿತರ ಹುಡುಗ ನನಗೆ ಹತ್ತಿರದವನು. ಸೈಕಲ್ ಕಲಿಸುವುದರಲ್ಲೂ ಅವನದೇ ಹೆಚ್ಚಿನ ಪಾತ್ರ.ಸುಮಾರಾಗಿ ಬ್ಯಾಲನ್ಸ್ ಕಲಿತಿದ್ದ ನನ್ನನ್ನು ಹೀಗೆಯೇ ಕ್ಯಾತ್ಸಂದ್ರದ ಕಡೆ ನಿಧಾನವಾಗಿ ಓಡಿಸು ನೀನು ಹೆದರಬೇಡ.ನಾನು ಹಿಂದುಗಡೆ ಕ್ಯಾರಿಯರ್ ಮೇಲೆ ಕುಳಿತಿರುತ್ತೇನೆ ಎಂದು ಹುರಿದುಂಬಿಸುತ್ತಿದ್ದ. ನನಗೂ ಸರಿಯೆನಿಸಿತು.ಬಂಜೆಪಾಳ್ಯದ ದಿಕ್ಕಿನಿಂದ ನಿದಾನವಾಗಿ ಬಂದ ಸೈಕಲ್ ಮಠದ ಮುಖ್ಯ ಭಾಗ ಪ್ರವೇಶಿಸಿ ರಾಜಬೀದಿಯಲ್ಲಿ ಸಾಗತೊಡಗಿತು.ನನಗೆ ಸ್ಥೈರ್ಯ ಬಂದಿತು.ನಿದಾನವಾಗಿ ಪೆಡಲ್ ತುಣಿಯಿತ್ತಾ ಸೈಕಲ್ ಸವಾರಿಯ ಮಜಾ ಅನುಭವಿಸುತ್ತಿದ್ದೆ.
ಸ್ವಾಮೀಜಿಯ ಕಛೇರಿ ಸಮೀಸಿದಂತೆ ತುಸು ಇಳಿಜಾರು ರಸ್ತೆ ಶುರುವಾಯಿತು.ನಾನು ಪೆಡಲ್ ತುಣಿಯುವುದನ್ನು ನಿಲ್ಲಿಸಿರಲಿಲ್ಲ.ಮುನ್ನೆಚ್ಚರಿಕೆಯಾಗಿ ಬ್ರೇಕನ್ನೂ ಹಿಡಿದಿರಲಿಲ್ಲ.ಸೈಕಲ್ ಚಕ್ರಗಳು ಜೋರಾಗಿ ಉರುಳತೊಡಗಿದವು.ಅತ್ತ ಕಡೆ ಸ್ವಾಮೀಜಿ ಕಛೇರಿಯ ಮುಂದಿನ ನೌಕರ,ಇವನ್ಯಾರು ಈ ಹುಡುಗ ಆಫೀಸ್ ಮುಂದೆ ಅಹಂಕಾರ ಮಾಡ್ತಾ ಇದಾನೆ ಎಂದುಕೊಳ್ಳುತ್ತಾ ರಸ್ತೆಗೆ ಓಡಿಬಂದ.ಮಕ್ಕಳು ಹಾಗು ಭಕ್ತರೊಂದಿಗೆ ಯಾವಾಗಲೂ ತನ್ನಲಿಲ್ಲದ ಇಂಗ್ಲಿಷ್ ಪಾಂಡಿತ್ಯ ಪ್ರದರ್ಶಿಸಲು ಹವಣಿಸುತ್ತಿದ್ದ.
ನನ್ನ ಬಳಿಗೆ ಓಡಿಬರುತ್ತಾ ಕೈ ಅಡ್ಡ ಹಿಡಿದು ಸ್ಟಾಂಡ್ ಅಪ್,ಸ್ಟಾಂಡ್ ಅಪ್ ಎಂದು ಕೂಗತೊಡಗಿದ.ನಿಲ್ಲು ನಿಲ್ಲು ಎಂದು ಕೂಗುತ್ತಿದ್ದಾನೆ ಎಂಬುದು ಅರ್ಥವಾದರೂ ಗಾಬರಿಗೊಂಡಿದ್ದ ನನಗೆ ಏನು ಮಾಡಬೇಕೆಂದು ತೋಚಲಿಲ್ಲ.ಚಕ್ರಗಳು ಇಳಿಜಾರು ರಸ್ತೆಯಲ್ಲಿ ಜೋರಾಗಿ ಉರುಳುತ್ತಾ ಸೈಕಲ್ ಮುನ್ನುಗ್ಗತೊಡಗಿತು.ಜನ ಅತ್ತಿತ್ತ ಗಾಬರಿಯಿಂದ ಚದುರಿಹೋಗತೊಡಗಿದರು.ಎದುರಿನಿಂದ ಸಾಮಾನು ತುಂಬಿದ ಒಂದು ಜಟಕಾಗಾಡಿ ಬಹು ಪ್ರಯಾಸದಿಂದ ಬರುತ್ತಿದೆ.
ನಮ್ಮ ಸೈಕಲ್ ಹೋಗುತ್ತಿದ್ದ ರಭಸ ನೋಡಿದರೆ ಎಲ್ಲಿ ಎದುರಿನ ಗಾಡಿಗೆ ಡಿಕ್ಕಿ ಹೊಡೆಯುತ್ತಾನೋ ಎಂದು ಹಿಂದೆ ಕ್ಯಾರಿಯರ್ ಮೇಲೆ ಕುಳಿತಿದ್ದ ಮೊಗಪ್ಪಗೌಡ”ಬ್ರೇಕ್ ಹಾಕು ಮಾರಾಯ” ಎಂದು ಕಿರುಚತೊಡಗಿದ.
ಅಷ್ಟು ಕೇಳಿಸಿದ್ದೇ ತಡ.ಎರಡೂ ಕಡೆಯ ಬ್ರೇಕುಗಳನ್ನು ಗಪ್ಪನೆ ಒತ್ತಿದೆ.ಗಾಡಿಯ ಅತೀ ಸಮೀಪ ಬಂದಿದ್ದ ಸೈಕಲ್ ಅದರೆದುರಿಗೆ ಮಗುಚಿಬಿತ್ತು.ನಾವು ರಸ್ತೆಯ ಬಲಬದಿಗೆ ಹಾರಿಬಿದ್ದುಬಿಟ್ಟೆವು. ಏರುರಸ್ತೆಯಲ್ಲಿ ಏದುಸಿರು ಬಿಡುತ್ತಾ ಹೆಜ್ಜೆ ಹಾಕುತ್ತಿದ್ದ ಬಡಪಾಯಿ ಕುದುರೆಗೆ ಬೇರೆ ದಾರಿ ಇರಲಿಲ್ಲ. ಮುಂದೆ ಬಿದ್ದಿದ್ದ ಸೈಕಲ್ ಚೈನ್ ಕವರ್ ನ ಮೇಲೆ ಆಗಲೇ ಕಿತ್ತಿದ್ದ ಕಾಲನ್ನು ಊರಿಬಿಟ್ಟಿತ್ತು.ಚೈನ್ ಕವರ್ ಮೇಲೆ ಸ್ನೇಹಿತರ ಸಲಹೆಯಂತೆ ನಮ್ಮ ತಂದೆತಾಯಿಯ ಹೆಸರನ್ನು ಬರೆಸಿದ್ದೆ.ಕುದುರೆಯ ಗೊರಸು ಅದರ ಮೇಲೆ ರಭಸದಿಂದ ಒತ್ತಿದ್ದರಿಂದ ಕವರಿನ ತಗಡು ಹೆಸರನ್ನು ಒಳಕ್ಕೆ ತಳ್ಳಿಕೊಂಡು ತಗ್ಗಿಹೋಯಿತು.
ನನಗೆ ದಿಕ್ಕೇತೋಚದಂತಾಯಿತು.ಕುದುರೆ ತನ್ನ ತಂದೆಯ ಎದೆಯ ಮೇಲೆ ಕಾಲಿಟ್ಟಿತೇನೋ ಎಂಬತೆ ನಿಂತು ಅಳತೊಡಗಿದೆ.ಜಟಕಾಸಾಬಿ ಕೆಳಗಿಳಿದು ಗಾಬರಿಯಿಂದ ಕೈಕಟ್ಟಿ ನಿಂತುಕೊಂಡಿದ್ದ.ರಸ್ತೆಯ ಮೇಲೆ ಬಿದ್ದುಕೊಂಡಿದ್ದ ಮೊಗಪ್ಪಗೌಡ ಎದ್ದು ಸಾಬಿಯ ಮೇಲೆ ಬಾಯಿಮಾಡತೊಡಗಿದ.ಗಲಾಟೆ ಕೇಳಿ ಆಚೀಚೆ ಇದ್ದ ವಿದ್ಯಾರ್ಥಿಗಳು ಸೇರಿದರು ಬಂದವರು ಒಬ್ಬೊಬ್ಬರು ಪಾಪದ ಜಟಕಾಸಾಬಿಯ ಮೇಲೆ ಹರಿಹಾಯುವವರೇ.”ಅಯ್ಯೋ ಹೊಸಾ ಸೈಕಲ್ ಹ್ಯಾಗೆ ಆಗಿಹೋಯ್ತು.”ಎಂದು ಅನುಕಂಪದ ಹೊಳೆ ಹರಿಸತೊಡಗಿದರು.
ಗುಂಪು ಮೇಲೆ ಬಿದ್ದಿದ್ದರಿಂದ ಜಟಕಾಸಾಬಿಯ ಬಾಯಿಂದ ಒಂದು ಮಾತು ಹೊರಡಲಿಲ್ಲ.ಪಾಪದವನು ಅಪರಾದಿಯಂತೆ ಕೈಕಟ್ಟಿ ನಿಂತಿದ್ದ.ಅಲ್ಲಿಗೆ ಬಂದಿದ್ದ ದೊಡ್ಡ ಹುಡುಗನೊಬ್ಬ ಜಟಕಾಸಾಬಿಯದೇ ತಪ್ಪು ಎಂದು ತೀರ್ಪು ಕೊಟ್ಟು ರಿಪೇರಿಗೆ ಇಪ್ಪತ್ತು ರೂಪಾಯಿ ಕೊಡುವುದೆಂದು ಫರ್ಮಾನು ಹೊರಡಿಸಿದ.
ಕಣ್ಣಲ್ಲಿ ನೀರು ತುಂಬಿಕೊಂಡ ಸಾಬಿ ಸೊಂಟದ ಬಳಿ ಕೈ ಹಾಕಿ ಲುಂಗಿಯ ಮಡಿಕೆಯೊಳಗಿಂದ ಮುದುರಿದ ಇಪ್ಪತ್ತು ರೂಪಾಯಿ ತೆಗೆದು ಮೊಗಪ್ಪಗೌಡನ ಕೈಗಿಟ್ಟ.ಅಷ್ಟರಲ್ಲಿ ಅದೇ ದಾರಿಯಲ್ಲಿ ಬರುತ್ತಿದ್ದ ಮಲ್ಲಿಕಾರ್ಜುನ ಮೇಷ್ಟ್ರು ವಿದ್ಯಾರ್ಥಿಗಳ ಗುಂಪು ನೋಡಿ ಲೂನಾ ನಿಲ್ಲಿಸಿ ಗುಂಪನ್ನು ಅತ್ತಿತ್ತ ಸರಿಸಿ ಪರಿಸ್ಥಿತಿಯ ಅವಲೋಕನ ಮಾಡಿದರು.
ಯಾರೋ ಸೈಕಲ್ ಹೊಡೆದೋನು,ಯಾರ್ದೋ ಸೈಕಲ್ಲು..?ಎಂದರು.ನಾನು ಮುಂದೆ ಬಂದು ನಿಂತೆ.ಮೊಗಪ್ಪಗೌಡನ ಕೈಲಿದ್ದ ಇಪ್ಪತ್ತು ರೂಪಾಯಿ ತೆಗೆದು ಜಟಕಾಸಾಬಿಯ ಕೈಗೆ ವಾಪಸ್ಸು ಕೊಟ್ಟು “ಹುಂ,ಹೋಗು ನೀನು”ಎಂದರು.ಜೇಬಿನಿಂದ ಹತ್ತು ರೂಪಾಯಿ ತೆಗೆದು ನನ್ನ ಕೈಗಿಟ್ಟು ಹೋಗು ಕ್ಯಾತ್ಸಂದ್ರಕ್ಕೆ ಹೋಗಿ ತಗ್ಗೆತ್ತಿಸಿಕೊಂಡು ಬಾ.ರಸ್ತೆಯಲ್ಲಿ ಸರಿಯಾಗಿ ಸೈಕಲ್ ಹೊಡಿಯೋದನ್ನು ಕಲಿ”ಎನ್ನುತ್ತಾ ಹೊರಟೇಬಿಟ್ಟರು.
ಔಟ್ ಕ್ಯಾಸ್ಟ್ ಹೆಸರೇ ವರವಾಯಿತು
ಹಾಗೂ ಹೀಗುಮಾಡಿ ಇಬ್ಬರೂ ಸೇರಿ ಸೈಕಲ್ಲನ್ನು ಕ್ಯಾತ್ಸಂದ್ರಕ್ಕೆ ತಲುಪಿಸಿ ರಿಪೇರಿಗೆ ಬಿಟ್ಟಿದ್ದಾಯಿತು. ಹೊಸಾ ಸೈಕಲ್ ಹಿಂಗೆ ಮಾಡಿಕೊಂಡು ತಂದಿದೀರಲ್ರಿ..ಅವನ್ಯಾವ ಸಾಬಿ.ಹೊಟ್ಟೆಗೆ ಏನು ತಿಂತಾನಂತೆ.ರಿಪೇರಿ ಚಾರ್ಜು ಒದ್ದು ವಸೂಲಿ ಮಾಡದಲ್ವ”ಎಂದ ಸಿದ್ದಲಿಂಗೇಶ್ವರ ಸೈಕಲ್ ಮಾರ್ಟನ ಮಾಲಿಕ.ಅವನಿಗೆ ಸೈಕಲ್ ಜಖಂ ಆಗಿದ್ದು ಮುಖ್ಯವಾಗಿರಲಿಲ್ಲ.ಜಖಂ ಮಾಡಿದವನು ಯಾವ ಜಾತಿ ಎಂಬುದೇ ಮುಖ್ಯವಾದಂತ್ತಿತ್ತು.ಮನೆಯವರು ಕಷ್ಟಪಟ್ಟು ದುಡ್ಡು ಹೊಂದಿಸಿ ಪ್ರೀತಿಯಿಂದ ಕೊಡಿಸಿದ್ದ ಹೊಸ ಸೈಕಲ್ ಎಷ್ಟು ಬೇಗ ಈ ಥರಾ ಆಯಿತಲ್ಲಾ ಎಂಬಾ ವ್ಯಥೆಯಾದರೆ ಏನೂ ತಪ್ಪು ಮಾಡದ ಸಾಬಿ ಅಪರಾದಿಯಂತೆ ಕೈಕಟ್ಟಿ ನಿಂತಿದ್ದು ,ಬೈಗುಳ ಸಹಿಸಿಕೊಂಡಿದ್ದು,ವಿನಾಕಾರಣ ದಂಡಕೊಡಲು ತಯಾರಾಗಿದ್ದು ಯೋಚಿಸಿದಾಗ ಮನಸ್ಸು ವೇದನೆಯಿಂದ ಪರಿತಪಿಸತೊಡಗಿತು.
ಅವನು ಬೇರೆ ಜಾತಿಯವನು ಎಂಬ ಕಾರಣಕ್ಕೆ ತಾನೇ ಎಲರೂ ಅಮಾಯಕನ ಮೇಲೆ ಹರಿಹಾಯ್ದರು. ಜಾತಿಯೆಂಬುದು ಹೇಗೆ ಎಲ್ಲರ ಮನಸ್ಸನ್ನು ಕಲುಷಿತಗೊಳಿಸುತ್ತಿದೆ.ನಮಗೆ ಈ ಜಾತಿ ಪದ್ದತಿಯ ಬಗ್ಗೆ ತಿಳಿ ಹೇಳಬೇಕಾದ ಗುರುಗಳೇ ಜಾತಿ ಹೆಸರಲ್ಲಿ ಗುಂಪುಕಟ್ಟುವುದು ಎಂತಹಾ ವಿಪರ್ಯಾಸ. ಈ ಔಟ್ ಕ್ಯಾಸ್ಟ್,ಇನ್ ಕೈಸ್ಟ್ ಎಂಬುದು ಮಠದೊಳಗೆ ಮಾತ್ರ ಸೀಮಿತವಲ್ಲ.ನಾವು ಓದುವ ಕಾಲೇಜು,ಯೂನಿವರ್ಸಿಟಿಗಳು ಅದರ ಮುಷ್ಠಿಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಿಲ್ಲವಲ್ಲ. ಮನುಷ್ಯ ಮನುಷ್ಯರ ನಡುವೆ ಉದಾತ್ತ ಸಂಬಂದ ಬೆಳೆಸಲಾಗದ ಈ ವಿದ್ಯಾಸಂಸ್ಥೆಗಳಾದರು ನಮಗೆಂತಹಾ ವಿದ್ಯೆ ದಾರೆಯೆರೆಯುತ್ತಿವೆ.
ನಮ್ಮ ಕಾಲೇಜನ್ನೇ ತೆಗೆದುಕೊಂಡರೂ ಈ ಜಾತಿಯ ವಿಷ ಜಾಲವೇ ಹರಡಿದೆಯಲ್ಲಾ!ಈ ಔಟ್ ಕ್ಯಾಸ್ಟ್ ಇನ್ ಕ್ಯಾಸ್ಟ್ ಎಂಬುದು ವಿದ್ಯಾರ್ಥಿಗಳ ಮದ್ಯ ಕಂದರ ನಿರ್ಮಿಸಿದೆಯಲ್ಲ್ಲಾ.ವಿಭಜನೆಯಾಗಿರುವ ಈ ಎರಡು ಪ್ರತ್ಯೇಕ ಗುಂಪುಗಳೇ ನಮ್ಮ ಗುರುಗಳೇ ನಾಯಕತ್ವ ವಹಿಸುತ್ತಾರಲ್ಲಾ.ಇದಕ್ಕಿಂತಾ ವಿಪರ್ಯಾಸ ಬೇಕೆ..?ಉತ್ತಮ ಉಪನ್ಯಾಸಕರೆಂದು ಹೆಸರು ಪಡೆದಿರುವ ಡಿ.ಎಮ್ ಸೀನಪ್ಪ ಹಾಗು ಲೋಹಿತಾಶ್ವ ಜಾತಿ ವಿಚಾರ ಬಂದಾಗ ದೂರ ಸರಿದು ನಿಂತು ಪ್ರತ್ಯೇಕ ಗುಂಪುಗಳ ನೇತ್ರತ್ವ ವಹಿಸಿ ದ್ವೇಷವನ್ನು ಪ್ರಚೋದಿಸುವುದು ಎಷ್ಟರ ಮಟ್ಟಿಗೆ ಸರಿ..?ಆಲೋಚನೆಯ ಆಳಕ್ಕೆ ಇಳಿದಿದದ್ ನನ್ನನ್ನು ಮೊಗಪ್ಪ ಎಚ್ಚರಿಸಿದ.
ಸೈಕಲ್ಲನ್ನು ಅಚ್ಚುಕಟ್ಟಾಗಿ ರಿಪೇರಿ ಮಾಡಿಸಿದ್ದರೂ ಗಾಯದ ಗುರುತು ಒಂದು ಕಾಣುವಂತಿತ್ತು.ಈ ಬಾರಿ ಮೊಗಪ್ಪ ಸೈಕಲ್ಲನ್ನು ನನ್ನ ಕೈಗೆ ಕೊಡಲಿಲ್ಲ.ಇಲ್ಲಿ ಸಂತೆ ಇದೆ.ನೀನು ಓಡಿಸುವುದು ಬೇಡ.ಈದಿನ ನಾನೇ ಓಡಿಸುತ್ತೇನೆ ಎಂದ.ಅವನು ಸೈಕಲ್ ಹೊಡೆಯುವುದರಲ್ಲಿ ನಿಪುಣ.ಮಂಡಿಪೇಟೆಯ ರಶ್ಶಿನಲ್ಲೂ ಸುಸೂತ್ರವಾಗಿ ಹೊಡೆದುಕೊಂಡು ಬೋಮದುಬಿಡುತ್ತಾನೆ.ಆ ಜನಜಂಗುಳಿಯ ನಡುವೆಯೂ ಯಾರಿಗೂ ತಾಕಿಸದಂತೆ ನುಸುಳಿಬರುವ ರೀತಿ ಬಹಳ ಖುಷಿಕೊಡುತ್ತದೆ.ನನ್ನನ್ನು ಹಿಂದುಗಡೆ ಕೂರಿಸಿಕೊಂಡು ದಾಬಸ್ ಪೇಟೆಯ ಕಡೆಗೆ ಎರಡು ಕಿಲೋಮೀಟರ್ ಜಾಲಿರೈಡ್ ಹೋಗಿಬಂದ.ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ನನ್ನ ಸೈಕಲ್ ತೇಲಿಕೊಂಡು ಹೋದಂತೆ ಹೋಗುತ್ತಿದ್ದು ಅಲ್ಲಿಂದ ಹಿಂತಿರುಗುವ ವೇಳೆಗೆ ನನ್ನ ಮನಸ್ಸನ್ನು ಕವಿದಿದ್ದ ಖಿನ್ನತೆಯ ಪರದೆ ಸರಿದು ಹೋಗಿತ್ತು.
ಮೊಗಪ್ಪಗೌಡನೂ ಖುಷಿಯಾಗಿದ್ದ.
ಈಗ ಹ್ಯಾಗಿದೆ ಸೈಕಲ್ಲು.ಚೆನ್ನಾಗಿ ಮಾಡಿದ್ದಾನೆ.ಜಖಂ ಆಗಿತ್ತು ಅಂತಲೇ ಗೊತ್ತಾಗೊದಿಲ್ಲ ಎಂದು ಅಂಗಡಿಯವನನ್ನು ತಾರೀಪ್ ಮಾಡಿದ.”ಮಲ್ಲಿಕಾರ್ಜನ ಮಾಸ್ಟ್ರು ಬಾರದೇ ಇದ್ದರೆ ಆ ಪಾಪದ ಸಾಬಿ ವಿನಾಕಾರಣ ಇಪ್ಪತ್ತು ರೂಪಾಯಿ ದಂಡ ಕೊಡುತ್ತಿದ್ದನಲ್ಲ”ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದುದನ್ನು ಹೇಳಿದೆ. ನನ್ನ ಅಭಿಪ್ರಾಯ ಅವನಿಗೆ ಹಿಡಿಸಿದಂತೆ ತೋರಲಿಲ್ಲ.
ಏ ಸುಮ್ಮನೇ ಬಾರಲೇ,ನೀನೊಬ್ಬ ಗಾಂದಿಯಂತೆ ಆಡ್ಬೇಡ”ಎಂದ.ಹಂಗಲ್ಲಾ ಮಾರಾಯ ಈ ಜಾತಿಯನ್ನು ಎಲ್ಲ ವಿಚಾರಗಳಲ್ಲೂ ತೀವ್ರವಾಗಿ ಪರಿಗಣಿಸುವುದು ತಪ್ಪಲ್ಲವಾ..?ಎಂದೆ.ಇರ್ಲಿ ಬಿಡಯ್ಯಾ.ಒಮ್ಮೊಮ್ಮೆ ಜಾತಿಯೇ ನಮ್ಮನ್ನು ಉಳಿಸುತ್ತೆ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ.ಹಿಡಿಸದ ಸಂವಾದವನ್ನು ಮುಗಿಸುವವನಂತೆ ಚುಟುಕಾಗಿ ಹೇಳಿ ಮುಗಿಸಿದ.
ದಾಬಸ್ ಪೇಟೆಕಡೆಯಿಂದ ಹಿಂದಿರುವಾಗ ಕ್ಯಾತ್ಸಂದ್ರ ಇನ್ನೂ ಎರಡು ಪರ್ಲಾಂಗು ಇದೆ ಎನ್ನುವಾಗಲೇ ಸಂತೆಯ ಗೌಜುಗದ್ದಲ ಕೇಳಿಸುತ್ತಿತ್ತು.ಹೊಸ ವಾಹನ ತೆಗೆದುಕೊಂಡಾಗ ಏನಾದರೂ ಒಂದು ಸಣ್ಣದಾದರು ಅವಘಡ ಆಗಲೇ ಬೇಕಂತೆ.ಹೋಗಲಿಬಿಡು.ಕಂಟಕ ಕಳೆದಂತೆ ಆಯಿತು.ಎನ್ನುತ್ತಾ ಹುರುಪಿನಲ್ಲಿದ್ದ ಮೊಗಪ್ಪ ಸಂತೆಯ ಜನರ ನಡುವೆ ನುಸುಳುತ್ತಾ ಸೈಕಲ್ ತುಳಿಯತೊಡಗಿದ.ಬಿ.ಎಚ್ ರಸ್ತೆಗೆ ಸಿದ್ದಗಂಗೆಯ ರಸ್ತೆ ಕೂಡಿಕೊಂಡಲ್ಲಿ ಗದ್ದಲ ಬಹಳ ಜೋರಾಗಿತ್ತು.ತರಕಾರಿ,ಹಣ್ಣು,ಹಂಪಲು ವ್ಯಾಪಾರ ಜೋರಾಗಿ ನಡೆದಿತ್ತು.
ಆ ರಶ್ಶಿನಲ್ಲೂ ಜಾಗ ಮಾಡಿಕೊಂಡು ಸೈಕಲ್ ಹೊಡೆಯುತ್ತಾ ಮೊಗಪ್ಪ ತನ್ನ ನೈಪುಣ್ಯ ಪ್ರದರ್ಶಿಸುತ್ತಿದ್ದ.ಇನ್ನೇನು ಸ್ವಲ್ಪ ದೂರ,ಸಂತೆ ದಾಟಿದರೆ ಸಿದ್ದಗಂಗೆ ಮಠ.ಮಠ ಹತ್ತಿರವಾದಂತೆ ಸೈಕಲ್ ವೇಗವೂ ಹೆಚ್ಚಿತು.
“ನಿದಾನಕ್ಕೆ ಹೋಗು ಮಾರಾಯ”ಎಂದೆ.
“ನೀನು ಸುಮ್ನೆ ಕೂತ್ಗಬೇಕು.ಸೈಕಲ್ ಹೊಡಿತಿರೊವ್ನು ಮೊಗಪ್ಪ ತಿಳ್ಕ”ಅಸಮದಾನ ವ್ಯಕ್ತಪಡಿಸಿದ.
ಆ ಮಾತಾಡಿ ಸ್ವಲ್ಪ ದೂರ ಹೋಗಿದ್ದೆವು ಅಷ್ಟೆ.ಎದುರಿಂದ ನಮ್ಮ ಬಲಬದಿಯಲ್ಲಿ ಒಬ್ಬ ಹೆಂಗಸು ಮಾವಿನಹಣ್ಣಿನ ಬುಟ್ಟಿ ಹೊತ್ತು ಬರುತ್ತಿದ್ದಳು.ಆ ಕಡೆ ಸಣ್ಣರಸ್ತೆಯಿಂದ ಬಂದ ಆಟೋವೊಂದು ರಭಸವಾಗಿ ನುಗ್ಗಿತು.ಬುಟ್ಟಿ ಹೊತ್ತ ಹೆಂಗಸು ಅದರಿಂದ ತಪ್ಪಿಸಿಕೊಳ್ಳಲು ಗಾಬರಿಯಿಂದ ನಮ್ಮೆಡೆಗೆ ಹೊರಳಿದಳು.
ಸೈಕಲ್ ನೇರವಾಗಿ ಅವಳಿಗೆ ಡಿಕ್ಕಿಹೊಡೆಯಿತು.ತಲೆಯ ಮೇಲಿದ್ದ ಬುಟ್ಟಿ ಉರುಳಿ ಬಿದ್ದು ಮಾವಿನ ಹಣ್ಣು ರಸ್ತೆಯಲೆಲ್ಲಾ ಚೆಲ್ಲಾಡಿದವು.ಮೊಗಪ್ಪ ಆ ಪರಿಸ್ಥಿತಿಯಲ್ಲೂ ನೆಲಕ್ಕೆ ಕಾಲುಕೊಟ್ಟುಕೊಂಡು ಸೈಕಲ್ ನಿಲ್ಲಿಸಿಕೊಂಡಿದ್ದ.ನನಗೆ ಗಾಬರಿಯಾಯಿತು.ನಾಲ್ಕಾರು ಜನ ಸೈಕಲ್ ಕಡೆ ನುಗ್ಗಿಬಂದರು.ಒಬ್ಬ ಮೊಗಪ್ಪನನ್ನು ದೃಷ್ಟಿಸಿ ನೋಡಿದ.ವಿಭೂತಿ ಪಟ್ಟೆ ಹೊಡೆದಿದ್ದ ಅವನನ್ನು ಲಿಂಗಾಯತನೆಂದು ಖಚಿತಪಡಿಸಿಕೊಂಡನೆಂದು ಕಾಣುತ್ತದೆ.
ಕುತ್ತಿಗೆ ಪಟ್ಟಿಗೆ ಕೈ ಹಾಕಿ ಅವನನ್ನು ಪಕ್ಕಕ್ಕೆ ಎಳೆದು ನಿಲ್ಲಿಸಿ”ಹಾಕ್ರೊ ನನ್ ಮಗನಿಗೆ…….ಸಂತೆಯೊಳಗೆ ಸರ್ಕಸ್ ಮಾಡ್ತಾನೆ”ಎಂದು ಪಕ್ಕದವರಿಗೆ ಹೇಳಿದ.ಸನಿಹ ಬಂದ ಒಬ್ಬ ಹಿರಿಯ “ಏನಲೇ ನಿನ್ನ ಹೆಸರು..?ಎಂದ
ಭಯಗೊಂಡಿದ್ದ ಮೊಗಪ್ಪ”ಮೊಗಪ್ಪಗೌಡ” ಎಂದು ತೊದಲಿದ.ಗೌಡ್ರ ಹುಡುಗ ಹೋಗ್ಲಿ ಬಿಡ್ರೋ ಅತ್ಲಾಗಿ…..ಎಂದು ಹಿರಿಯ ಮೊಗಪ್ಪನನ್ನು ಅತ್ತ ತಳ್ಳಿದ.”ನೋಡ್ದಾ…ಹೆಸರು ಹೆಂಗೆ ಉಳಿಸ್ತು ಇವತ್ತು”ಮೊಗಪ್ಪ ಸೈಕಲ್ ತಳ್ಳುತ್ತಾ ತುಸುಮುಂದೆ ಬಂದು ಹೇಳಿದ.ನನಗೆ ಅಚ್ಚರಿಯಾಯಿತು.
 

‍ಲೇಖಕರು avadhi

May 10, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: