ಸಂಧ್ಯಾ ರಾಣಿ ಕಾಲಂ : ಕಾಯ್ಕಿಣಿ, ಮೌನೇಶ್ ಮತ್ತು ಚಂದಿರನ ಚೂರು

‘…..ಆಗ ಅಪ್ಪನ ಮುಖದಲ್ಲಿ ನೋವು, ಅಪಮಾನ ಕಂಡಿರಲೇ ಇಲ್ಲ ತಾನು. ಅಥವಾ ಅದು ತನ್ನ ಪ್ರಪಂಚಕ್ಕೆ ನಿಲುಕುತ್ತಿರಲಿಲ್ಲವೋ ಏನೋ. …. ಇದೇ ರೀತಿ ಈಗ ಪ್ರಮೋದ ಸಹ ತನಗೆ ಅವಶ್ಯವಿದ್ದಷ್ಟನ್ನೇ ಅವಶ್ಯವಿದ್ದ ರೀತಿಯಲ್ಲಷ್ಟೇ ಕಾಣುತ್ತಿರಬಹುದು. ಪಮ್ಮಿಯ ಬಾಲ್ಯದ ಹಳಿಗಳೂ, ತನ್ನ ಬಾಲ್ಯದ ಹಳಿಗಳೂ ಪ್ರಮೋದನಲ್ಲಿ ಭಿನ್ನವಾಗದೇ ಯಾಕೆ ಹಾಯಬಾರದು? ಮೂವರಿಗೂ ಗೊತ್ತಾಗದ ಒಂದು ಜಂಕ್ಷನ್ನಿನಲ್ಲಿ?’
’ಹಗಲಲ್ಲಿ ಅನಾನಸು ಮುದುಕನಿಗೆ ಛತ್ರಿ ಹಿಡಿಯುವ ಈ ಮರ ಈಗ ಅವನ ಬಿದಿರಿನ ಗೋಲ ಮೂಡೆಯನ್ನು ಕಾಯುತ್ತಿದೆ. ಅದರ ಬುಡಕ್ಕೆ ಬೂಟ್ ಪಾಲೀಶ್ ಹುಡುಗನ ಸರಂಜಾಮಿನ ಡಬ್ಬಿಯೂ ಸರಪಳಿ ಹಾಕಿ ಪುಟ್ಟ ಬೀಗದೊಂದಿಗೆ ಕೈದಿಯಾಗಿದೆ. ಮರದ ಕೊಂಬೆಗೊಂದು ಗೋಣಿತಾಟಿನ ಜೋಕಾಲಿ ನೇತು ಬಿದ್ದಿದೆ. ದೇವಸ್ಥಾನದ ದೇವರಿಗೆ ಬಾ ನೇಣು ಹಾಕಿಕೋ ಎಂದು ಅದು ಹೇಳುತ್ತಿದೆ. ಈ ಮರದ ಬ್ರಹ್ಮರಾಕ್ಷಸ ಮಾತ್ರ ಮುನಿಸಿಪಲ್ ಆಸ್ಪತ್ರ್ಯ ವಾರ್ಡುಗಳಲ್ಲಿ ನೈಟ್ ವಾಕ್ ಗೆ ಹೋಗಿದ್ದಾನು’.
’ಸಾರ್ವಜನಿಕ ಪಾರ್ಕಿನಲ್ಲಿ ಇರುವ ಒಂದೇ ಜೋಕಾಲಿಯ ಮೇಲೆ ಯಾವುದೇ ಮಗು ತುಸು ಹೆಚ್ಚು ತೂಗಿದರೂ ’ಸಾಕೀಗ’ ಎಂದು ಗದರಿಸಿ ಇಳಿಸಿ ತಮ್ಮ ಮಕ್ಕಳನ್ನು ಕೂರಿಸಿ ಅವು ಒಲ್ಲೆ ಒಲ್ಲೆ ಎಂದು ಮರಣ ಭಯದಿಂದ ಕೂಗಿದರೂ ಕ್ರೂರವಾಗಿ ತೂಗುತ್ತಾರೆ, ಊಟದ ವೇಳೆಗೇ ನೆರೆಮನೆಯ ಮಗು ಬಂದರೆ “ನಿಮ್ಮ ಮನೆಗೆ ಹೋಗಿ ಉಂಡು ಬಾ” ಎಂದು ಹೊರ ಹಾಕಿ, ಬಾಗಿಲು ಹಾಕಿ ಒಳಗೆ ವಿಜಯದ ಕಳ್ಳನಗು ನಗುತ್ತಾರೆ’
ಹೀಗೆ ಅತ್ಯಂತ ಪರಿಣಾಮಕಾರಿ ವಾಕ್ಯಗಳಲ್ಲಿ ಜಯಂತ ಕಾಯ್ಕಿಣಿ ತಮ್ಮ ಕಥೆಗಳನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ. ಇವರಲ್ಲಿನ ಕವಿ ಎಲ್ಲಿ ಹಿಂದೆ ಸರಿಯುತ್ತಾನೆ, ಕಥೆಗಾರ ಎಲ್ಲಿ ಚುಕ್ಕಾಣಿ ಹಿಡಿಯುತ್ತಾನೆ ಎಂದು ತಿಳಿಯದಂತೆ ಇವರ ಕಥೆಗಳಲ್ಲಿ ಕಾವ್ಯಗುಣ ಹಾಸುಹೊಕ್ಕಾಗಿರುತ್ತದೆ.
ಅದಷ್ಟೇ ಅಲ್ಲ. ಜಯಂತರ ಕಥೆಗಳಿಗಿರುವುದು ಕಥೆಯ ಒಂದೇ ಆಯಾಮವಲ್ಲ, ಅಲ್ಲಿ ಪಾತ್ರಗಳು ಕಥೆ ಹೇಳುತ್ತವೆ, ಪಾತ್ರಗಳ ಅಂತಃಪ್ರಜ್ಞೆ ಕಥೆ ಹೇಳುತ್ತವೆ ಮತ್ತು ಪಾತ್ರಗಳ ಸುತ್ತ ಮುತ್ತಲಿನ ಜಗತ್ತು ಸಹ ಒಂದು ಕಥೆ ಹೇಳುತ್ತಿರುತ್ತದೆ. ಹೀಗೆ ಮೂರು ಆಯಾಮಗಳಲ್ಲಿ ನಡೆಯುವ ಕಥೆಯನ್ನು ಒಂದು ರಂಗದ ಮೇಲೆ ಕಥೆಯ ಬನಿ ಕೆಡದಂತೆ ತರುವುದು ಯಾವುದೇ ನಿರ್ದೇಶಕನಿಗೂ ಒಂದು ಸವಾಲೇ ಸರಿ. ಹಾಗಾಗೇ ಜಯಂತರ ಕಥೆಗಳು ನಾಟಕವಾದಾಗ ಬಹಳಷ್ಟು ಸಲ ಅವು ಕಥೆಯ ಹೂರಣವನ್ನು ಹಿಡಿದಿಡಲಾಗದೆ ಅಲ್ಲಲ್ಲಿ ಪಿಂಜಿದಂತೆ ಕಾಣಿಸಿಬಿಡುತ್ತದೆ.
ಆದರೆ ’ಚಂದಿರನ ಚೂರು’ ಎನ್ನುವ ಕಥೆಯ ನಾಟಕ ರೂಪದಲ್ಲಿ ನಿರ್ದೇಶಕ ಮೌನೇಶ್ ಬಡಿಗೇರ್ ಈ ಎಲ್ಲಾ ಸಿಕ್ಕುಗಳನ್ನೂ ತಮ್ಮದೇ ಆದ ರೀತಿಯಲ್ಲಿ ಬಿಡಿಸಿಕೊಂಡು ಕಥೆಯನ್ನು ಇಡಿಯಾಗಿ ರಂಗಸ್ಥಳದ ಮೇಲೆ ತರುತ್ತಾರೆ. ಈ ಪ್ರಯೋಗ ನಡೆದಿರುವುದು ರಂಗ ಶಿಬಿರಕ್ಕೆ ಬಂದ ಅಮೆಚೂರ್ ಕಲಾವಿದರಿಂದ, ಅವರ ಕೈಯಲ್ಲೂ ಪರಿಣಾಮಕಾರಿ ಕೆಲಸ ತೆಗೆದಿರುವುದು ನಿಜಕ್ಕೂ ಶ್ಲಾಘನೀಯ.
ಜಯಂತ ಕಾಯ್ಕಿಣಿಯವರ ಅಮೃತಬಳ್ಳಿ ಕಶಾಯದ ’ಚಂದಿರನೇತಕೆ ಓಡುವನಮ್ಮ’ ಕಥೆ ಇಲ್ಲಿ ’ಚಂದಿರನ ಚೂರು’ ಆಗಿ ರಂಗದ ಮೇಲೆ ಬರುತ್ತದೆ.
ಕಥೆ ನಡೆಯುವುದು ಒಂದು ರಾತ್ರಿಯ ಸಮಯ, ಮುಂಬೈಯ ಭಯ ಹುಟ್ಟಿಸುವ ಯಾಂತ್ರೀಕ ಬದುಕಿನ ನಡುವೆ, ’ಕುಂಡೆಗೆ ಕೆಂಪು ದೀಪ ಸಿಕ್ಕಿಸಿಕೊಂಡು ಓಡುವ’, ಮೇಣದ ಬೊಂಬೆಗಳನ್ನು ಹೊತ್ತಂತಹ ಸ್ಕೂಟರು, ಕಾರು ಬಸ್ಸುಗಳು ಮಾತ್ರ ಓಡಾಡುವ ಹಗಲು ಸೋತು ಬಿದ್ದಂತಹ ಇರುಳು. ಪಾರ್ಥವ ಎರಡನೆಯ ಶಿಫ್ಟ್ ಮುಗಿಸಿ ಕಾರ್ಖಾನೆಯ ಗಾಡಿ ಇಳಿದು ರಸ್ತೆ ದಾಟುತ್ತಿರುವಾಗ, ವೇಗವಾಗಿ ಓಡುತ್ತಿರುವ ಗಾಡಿಯೊಂದು ಅವನನ್ನು ನೂಕಿ, ಬೀಳಿಸಿ ಹೋಗಿಬಿಡುತ್ತದೆ. ರಸ್ತೆ ಎದ್ದು ಬಂದು ಕಪಾಳಕ್ಕೆ ಬಿದ್ದಂತೆ ಬೀಳುವ ಪಾರ್ಥಿವನ ಕಣ್ಣ ಕೊನೆಯಿಂದಲೇ ರಸ್ತೆ ಶುರುವಾದಂತೆ, ಕಥೆ ಸಹ ಬಿಚ್ಚಿಕೊಳ್ಳತೊಡಗುತ್ತದೆ.
ಹಳ್ಳಿಯಲ್ಲಿ ಹುಟ್ಟಿ, ಬೆಳೆದ ಪಾರ್ಥಿವ ಮುಂಬೈಗೂ ತನ್ನೊಂದಿಗೆ ಹಳ್ಳಿಯ ತುಣುಕೊಂದನ್ನು ಹೊತ್ತು ತಂದಿರುತ್ತಾನೆ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆರೈಕೆಯಲ್ಲಿ ಬೆಳೆಯುವ ಅವನೆದೆಯಲ್ಲಿ ನಿರಂತರವಾಗಿ ಒಬ್ಬ ತಾಯಿ ಇರುತ್ತಾಳೆ. ಅವನ ಹೆಂಡತಿ ಪಮ್ಮಿ. ಭಾರತ ವಿಭಜನೆಗೊಂಡಾಗ ಭಾರತಕ್ಕೆ ಬಂದ ಅವಳ ತಂದೆ ಗೇಟ್ ವೇ ಆಫ್ ಒಂಡಿಯಾದಲ್ಲಿ ಟೋಪಿ ಮಾರುತ್ತಿರುತ್ತಾನೆ, ಒಂದು ಟೋಪಿ ಮಾರಿದರೆ ಒಂದು ತುತ್ತು ಅನ್ನುವ ಪರಿಸ್ಥಿತಿ. ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಳ್ಳುವ ಪಮ್ಮಿ, ಅಪ್ಪನಿಲ್ಲದ ಮನೆಯಲ್ಲಿ ಬೆಳೆಯುವ ಪಮ್ಮಿ ಸ್ವಾಭಾವಿಕವಾಗಿಯೇ ಹೆಣ್ತನದ ಗುಣವನ್ನೂ ಹಿಮ್ಮೆಟ್ಟಿಸುವ ಜವಾಬ್ದಾರಿ, ಲೆಕ್ಕಾಚಾರದೊಂದಿಗೆ ಬೆಳೆಯುತ್ತಾಳೆ. ಅವಳ ಎದೆಯಲ್ಲಿರುವುದು ನಾಳೆಯ ಬಗ್ಗೆ ಒಂದು ದೃಷ್ಟಿಯಿಟ್ಟುಕೊಂಡೇ ಇಂದು ಬದುಕುವ ಒಬ್ಬ ಜವಾಬ್ದಾರೀ ಹೊತ್ತ ತಂದೆ.

ಹೀಗೆ ಅಮ್ಮನಂತಹ ಅಪ್ಪ ಮತ್ತು ಅಪ್ಪನಂತಹ ಅಮ್ಮನ ಮನೆಯ ಕೂಸು ಪ್ರಮೋದ. ತಾನು ಕಳೆದುಕೊಂಡ ಮಮತೆಯೆಲ್ಲವನ್ನೂ ಸುರಿದು ಅಪ್ಪ ಅವನನ್ನು ಲಾಲಿಸಿದರೆ, ತನ್ನ ಹಾಗೆ ಅಭದ್ರತೆಯಲ್ಲಿ ಅವನು ಬಾಳಬಾರದು ಎಂದು ಆರ್ಥಿಕ ಸಧೃಢತೆಯನ್ನೇ ಮಾನದಂಡವಾಗಿ ನಂಬುವ ಪಮ್ಮಿ ಅವನಲ್ಲಿ ಒಬ್ಬ ಬೆಳೆದ ಗಂಡನ್ನು, ಮಿಜಿಮಿಜಿಯಲ್ಲದ ಗಟ್ಟಿ ಮನಸ್ಸಿನ ಬ್ಯುಸಿನೆಸ್ ಮಾನ್ ನನ್ನು ಕಾಣಲು ಪಣತೊಟ್ಟು ಅವನನ್ನು ಬೆಳೆಸುತ್ತಾಳೆ. ತನ್ನೆದೆಯ ಖಾಲೀತನಕ್ಕೆ, ಚೂರಾದ ಚಂದ್ರನಿಗೆ ಮಿಕ್ಕ ಚೂರನ್ನು ಮಗ ಜೋಡಿಸಿ ತನ್ನನ್ನು ಪೂರ್ಣಗೊಳಿಸುತ್ತಾನೆ ಎಂದು ಹಂಬಲಿಸುವ ಪಾರ್ಥಿವ ಹೆಂಡತಿಯ ಒತ್ತಾಯಕ್ಕೆ ಕಟ್ಟು ಬಿದ್ದು ಅವನನ್ನು ನಾಸಿಕದ ಬೋರ್ಡಿಂಗ್ ಶಾಲೆಗೆ ಕಳುಹಿಸುತ್ತಾನೆ. ರಾತ್ರಿ ಮಲಗಿದಾಗೆಲ್ಲಾ ತಾನು ಮಸಾಜ್ ಮಾಡುತ್ತಿದ್ದ ಮಗನ ಬಲಕಾಲಿನ ನೋವು ಈಗ ಪಾರ್ಥಿವನ ಎದೆಯಲ್ಲಿ ಆರದ ಗಾಯ.
ರಸ್ತೆಯಲ್ಲಿ ಬಿದ್ದ ಪಾರ್ಥಿವನ ತಲೆಯಲ್ಲಿ ತನ್ನ ಇಡೀ ಜೀವನದ ಕಥೆ ಚಲನಚಿತ್ರದ ರೀಲಿನಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಜೀವಂತಿಕೆಯ ಸೆಲೆಯೇ ಇಲ್ಲದ ಸಂಸಾರ, ಪ್ರತಿ ಪತ್ರದಲ್ಲೂ ’ಪ್ರೀತಿಯ ಪಪ್ಪಾ’ ಎಂದೇ ಬರೆಯುವ ಎಲ್ಲೋ ನಾಸಿಕದ ಬೋರ್ಡಿಂಗ್ ಶಾಲೆಯಲ್ಲಿರುವ ಮಗ ಪ್ರಮೋದ, ಅನಾನಸು ಕೊಯ್ದು ಮಾರುವ, ಆದರೆ ಸಿಪ್ಪೆಯನ್ನು ಎಸೆಯದೆ ಜೋಪಡಿಯ ಮಕ್ಕಳಿಗೆ ಕೊಡುವ ಅಜ್ಜ, ಸ್ನಾನ ಮಾಡದಿದ್ದರೂ ಒಂದು ರೂ, ಎರಡು ರೂಗಳಿಗೆ ರಿಕ್ಷಾ, ಕಾರುಗಳಿಗೆ ಸ್ನಾನ ಮಾಡಿಸುವ, ಸಂತೋಷಿಮಾತ ದೇವಸ್ಥಾನಕ್ಕೆ ಹೋಗುವ ಭಕ್ತರ ಚಪ್ಪಲಿ ಕಾಯುವ, ಭಕ್ತರು ಧಾರಾಳವಾಗಿ ಪಾರಿವಾಳಗಳಿಗೆಂದು ಎಸೆದ ಮಂಡಕ್ಕಿಯನ್ನು ದೇವಸ್ಥಾನ ಮುಚ್ಚಿದ ಮೇಲೆ ಬಂದು ಆಯ್ದುಕೊಳ್ಳುವ ಜೋಪಡ ಪಟ್ಟಿಯ ಮಕ್ಕಳೂ … ಎಲ್ಲರೂ ಅವನ ಕಣ್ಣೆದುರಿನ ಚಿತ್ರದಲ್ಲಿ.
ಇದನ್ನುಳಿದು ತನಗೆ ಜಗತ್ತಿನಲ್ಲಿ ಕೆಲಸವೇ ಇಲ್ಲ ಎಂದು ಮಲಗಿದ್ದಾನೆ ಪಾರ್ಥಿವ. ಮಳೆ, ಗುಡುಗು. ಜೋಪಡ ಪಟ್ಟಿಯ ಹೆಂಗಸು ಒಳಗೆ ಬಂದು ಮಲಗು ಎಂದು ಕರೆಯುತ್ತಾಳೆ. ರಾತ್ರಿ ತೀರುತ್ತಾ ಹೋಗುತ್ತದೆ. ಬೆಳಗಿನ ಜಾವಕ್ಕೆ, ಯಾವುದೋ ಶಾಲೆಯ ಯೂನಿಫಾರ್ಮ್ ತೊಟ್ಟು ಮಲಗಿದ್ದ ತನ್ನ ಮಗಳನ್ನೆಬ್ಬಿಸಿದ ಆ ಹೆಂಗಸು, ತನ್ನ ಕೈಗೂಸನ್ನು ಅಲ್ಲಿಯೇ ಬಿಟ್ಟು ಚಿಂದಿ ಆಯಲು ಹೊರಡುತ್ತಾಳೆ. ಮೈಯೆಲ್ಲಾ ಕೊರೆದು ಥಣ್ಣಗಾಗಿದ್ದ ಆ ಕೂಸನ್ನು ಎತ್ತಿಕೊಂಡು, ತನ್ನ ಮಗನನ್ನು ಮಲಗಿಸಿಕೊಂಡಂತೆಯೇ ಕಾಲು ನೀಡಿ ಮಲಗಿಸಿಕೊಳ್ಳುತ್ತಾನೆ ಪಾರ್ಥೀವ. ಅವನ ಜಗತ್ತು ಹಠಾತ್ತಾಗಿ ಪೂರ್ಣಗೊಂಡಂತಾಗುತ್ತದೆ. ಹೊರಗಡೆ ಅದೇ ಕಾರು ಆಟೋ ತೊಳೆಯುವ ಹುಡುಗ ಸಣ್ಣ ಹೊಂಡದಲ್ಲಿ ನಾಣ್ಯದಂತೆ ಹೊಳೆಯುತ್ತಿರುವ ಚಿಕ್ಕಿಗಳನ್ನೆಣಿಸುತ್ತಾ ಇರುತ್ತಾನೆ. ಜೋಪಡ ಪಟ್ಟಿಯ ಮೇಲಿಂದ ಚಂದ್ರ ಮೇಲೇಳುತ್ತಾನೆ. ಹೊಂಡದ ಆ ಚಂದ್ರನನ್ನು ಈ ಪೋರ ಮುಟ್ಟಿದ ಕೂಡಲೇ ನೂರು ಚೂರಾಗುವ ಚಂದ್ರ ಮತ್ತೆ ನಿಧಾನವಾಗಿ, ಇಷ್ಟಿಷ್ಟಾಗಿ, ನೀರು ಸ್ಥಿರವಾದಂತೆ ಪೂರ್ಣವಾಗುತ್ತಾನೆ. ಪಕ್ಕದಲ್ಲೇ ಕೂತು ನೋಡುತ್ತಿದ್ದ ಪಾರ್ಥಿವನಿಗೆ ಅಲ್ಲಿ, ಆ ಘಳಿಗೆಯಲ್ಲಿ ತನ್ನ ಹಾಗು ತನ್ನ ಮಗನ ಬಾಲ್ಯಗಳೆರಡೂ ಒಟ್ಟಿಗೇ ಸಿಕ್ಕಿದಂತೆ ಆಗುತ್ತದೆ. ಹೌದು ಪುನರ್ಜನ್ಮವಾಗಬೇಕೆಂದರೆ ಸಾಯಲೇ ಬೇಕು ಅಂತೇನೂ ಇಲ್ಲ, ಬದುಕು ಕೈಗೂಡುವ ಘಳಿಗೆಗಳು ಸಿದ್ಧಿಸಿದರೆ ಸಾಕು.

ಆ ಘಳಿಗೆಯಲ್ಲಿ ಅವನಿಗೆ ಎಲ್ಲ ಜೀವದ ಒಳಗೂ ತನ್ನ ಆತ್ಮದ ಚಂದ್ರನ ಚೂರು ಹಂಚಿಹೋಗಿದೆ. ಒಂದು ಚೂರಿಗೆ ಇನ್ನೊಂದು ಚೂರು ತುಸು ತಗಲಿದರೂ ಸಾಕು. ಆ ಚೂರಿಗೆ ಇನ್ನೊಂದು, ಆಮೇಲೆ ಮತ್ತೊಂದು, ಎಲ್ಲರನ್ನೂ ಒಳಗೊಂಡಾಗಲೇ ತನ್ನ ಆತ್ಮದ ಸಾಕ್ಷಾತ್ಕಾರವಾಗುತ್ತದೆ ಎನ್ನುವ ಆ ಸತ್ಯ ಅರಿವಾಗುತ್ತದೆ ಮತ್ತು ಆ ಅರಿವು ಅವನನ್ನು ಬದುಕಿಸಿಬಿಡುತ್ತದೆ.
ಈ ಕಥೆಯನ್ನು ದೃಶ್ಯರೂಪಕ್ಕೇರಿಸುವಲ್ಲಿ (ಪ್ರಜ್ಞಾಪೂರ್ವಕವಾಗಿಯೇ ಇಲ್ಲಿ ’ದೃಶ್ಯ ರೂಪಕ್ಕಿಳಿಸಿದ್ದಲ್ಲ, ದೃಶ್ಯ ರೂಪಕ್ಕೇರಿಸಿದ್ದು’ ಎಂದು ಬರೆಯುತ್ತಿದ್ದೇನೆ) ಪಾರ್ಥಿವನ ಅಪಘಾತ ಆದ ನಿಮಿಷದಿಂದ ಪಾರ್ಥಿವನ ಪಾತ್ರಧಾರಿಯ ಜೊತೆ ಜೊತೆಗೆ ಇನ್ನೊಬ್ಬ ಪಾರ್ಥಿವನ ಪಾತ್ರಧಾರಿ ಬಂದು ಸೇರಿಕೊಳ್ಳುತ್ತಾನೆ. ರಂಗದ ಮೇಲೆ ಇಬ್ಬರು ಪಾರ್ಥಿವರು ಮತ್ತು ಇಬ್ಬರು ಪಮ್ಮಿಯರು. ಇಲ್ಲಿ ಹೀಗೆ ಒಂದು ಪಾತ್ರವನ್ನು ಇಬ್ಬಿಬ್ಬರು ಪಾತ್ರಧಾರಿಗಳು ನಿರ್ವಹಿಸುವುದರಿಂದ ಪ್ರಜ್ಞೆ ಮತ್ತು ಅಂತಃಪ್ರಜ್ಞೆ ಎರಡನ್ನೂ ರಂಗದ ಮೇಲೆ ಮೌನೇಶ್ ತೋರಿಸುತ್ತಾರೆ. ಅಷ್ಟೇ ಅಲ್ಲ ಇರುವ ಇಬ್ಬರು ಪಾತ್ರಧಾರಿಗಳಲ್ಲಿ ಒಬ್ಬರು ಪಾತ್ರವನ್ನು ನಿರ್ವಹಿಸಿದರೆ, ಇನ್ನೊಬ್ಬರು ಕಥೆಯನ್ನು ಮುನ್ನಡಿಸುತ್ತಾರೆ. ಇದು ಪ್ರಯೋಗದ ಹೈ ಲೈಟ್.
ಪಾರ್ಥಿವನ ಪಾತ್ರಧಾರಿಗಳಾದ ಶ್ರೀನಿಧಿ ಆಚಾರ್, ಪ್ರಮೋದ್, ಪ್ರಮೋದ ಹಾಗು ಜೋಪಡಿ ಹುಡುಗನ ಪಾತ್ರ ವಹಿಸಿದ ಪ್ರಿಯಾಂಕ ಅಭಿನಯವೆಂದು ಅನಿಸದ ಹಾಗೆ ಪಾತ್ರದಲ್ಲಿ ಬೆರೆತು ಹೋಗಿದ್ದರು. ರಂಗದ ಮಿತಿಯಲ್ಲಿಯೇ ಬೆಳಕು ಮತ್ತು ರಂಗ ಸಜ್ಜಿಕೆ ಚೆನ್ನಾಗಿತ್ತು. ಇನ್ನೂ ಒಳ್ಳೆಯ ರಂಗಸ್ಥಳವಿದ್ದಿದ್ದರೆ ನೋಟ ಇನ್ನೂ ಅದ್ಭುತವಾಗುವುದರಲ್ಲಿ ಅನುಮಾನವಿಲ್ಲ.
ಈ ಪ್ರಯೋಗ ಕೇವಲ ರಂಗ ಶಿಬಿರದ ಮೂರ್ಥರೂಪವಾಗದೆ, ಪೂರ್ಣಪ್ರಮಾಣದ ನಾಟಕವಾಗಲಿ ಎನ್ನುವುದು ನನ್ನ ಹಾರೈಕೆ.
ಜಯಂತರ ಬಹುತೇಕ ಕಥೆಗಳಲ್ಲಿ ನೋವು, ಅನಾಥ ಪ್ರಜ್ಞೆ, ತನ್ನತನದ ಹುಡುಕಾಟ ಶಾಲ್ಮಲೆಯಂತೆ, ಅಗೋಚರವಾಗಿ ಹರಿಯುತ್ತಿರುತ್ತದೆ. ಅದನ್ನು ಎಲ್ಲೂ ವಾಚ್ಯವಾಗಿಸದೆ ನಮ್ಮ ಅರಿವಿಗೆ ದಕ್ಕುವಂತೆ ಮಾಡಿರುವುದು ಮೌನೇಶ್ ಬಡಿಗೇರ್ ಅವರ ಹಿರಿಮೆ.
ನಾಟಕ ಮುಗಿದ ಮೇಲೆ, ’ಹೇಗಿತ್ತು’ ಎಂದು ೯-೧೦ ವರ್ಷದ ಪೋರನನ್ನು ಕೇಳಿದಾಗ, ’ಚೆನ್ನಾಗಿತ್ತು, ಆದರೆ ಸ್ಯಾಡ್ ಆಗಿತ್ತು’ ಎಂದನಲ್ಲ ಆ ಹುಡುಗ, ಜಯಂತರ ಕಥೆ ಮತ್ತು ಮೌನೇಶ್ ಗೆದ್ದಿದ್ದು ಅಲ್ಲಿ. ಆ ಶಾಲ್ಮಲೆಯನ್ನು ನಮ್ಮ ಮನಸ್ಸಿನಲ್ಲಿ ಹರಳುಗಟ್ಟಿಸುವುದರಲ್ಲಿ.
ಕಂಗ್ರಾಟ್ಸ್ ಮೌನೇಶ್!
 

‍ಲೇಖಕರು avadhi

May 10, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Rj

    Beautifullaagide! ಇಂಥದ್ದನ್ನೆಲ್ಲ ಚೂರೂ ಬೋರಾಗದಂತೆ ಅದು ಹೇಗೆ ಬರೀತೀರಿ? 🙂
    -Rj

    ಪ್ರತಿಕ್ರಿಯೆ
  2. Sushma

    natakada reviewgalu baruthiruvudu nijakku santhoshada visiya sandhya .chennagide review. avdhige abhinan
    danegalu

    ಪ್ರತಿಕ್ರಿಯೆ
  3. Jayalaxmi Patil

    ಶನಿವಾರ ಚಂದಿರನ ಚೂರನ್ನು ನೋಡಲು ಹೋಗಲೇಬೇಕೆಂದುಕೊಂಡವಳನ್ನು ತಡೆದ ಹೊಟ್ಟೆ ನೋವಿಗೆ ಹಿಡಿ ಶಾಪ ಹಾಕುತ್ತಿರುವೆ ಈಗ…

    ಪ್ರತಿಕ್ರಿಯೆ
  4. ಜಿ.ಎನ್ ನಾಗರಾಜ್

    ಕೊಳ್ಳುಬಾಕ ಸಂಸ್ಕೃತಿಯ ಆಕ್ರಮಣದಲ್ಲಿ ಕಳೆದು ಹೋಗುತ್ತಿರುವ ಮಾನವೀಯತೆಯ ಮಿಡಿತವನ್ನು ಎಚ್ಚರಿಸಿ ಚಂದ್ರನತ್ತ ತುಡಿಯಲು ಪ್ರೇರೇಪಿಸುವ ನಾಟಕ ನೀಡಿದ ಜಯಂತ್ ಕಾಯ್ಕಿಣಿಯವರಿಗೆ ವಂದನೆಗಳು. ಅದನ್ನು ಚೆನ್ನಾಗಿ ರಂಗಕ್ಕೆ ತಂದಿರುವ ಮೌನೇಶರಿಗೆ,ನಟರಿಗೆ,ತಂಡಕ್ಕೆ ಕೂಡ.ಹಲವು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
    ಅದನ್ನ ಮನ ಮುಟ್ಟುವಂತೆ ನಮ್ಮ ಮುಂದಿಟ್ಟ ಸಂಧ್ಯಾರವರಿಗೂ.

    ಪ್ರತಿಕ್ರಿಯೆ
  5. bharathi

    ನಮ್ಮನ್ನೇ ನಾವು ಕಳೆದುಕೊಂಡು ನೋಡಿದ ನಾಟಕ! ತುಂಬ ಚೆನ್ನಾಗಿ ಬರೆದಿದ್ದೀರಿ ಸಂಧ್ಯಾ …

    ಪ್ರತಿಕ್ರಿಯೆ
  6. Anjali Ramanna

    Thank you Sandhya for such wonderful analysis! naaTaka nODidaMtaaytu.
    Anjali Ramanna

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: