ಸಂಪು ಕಾಲಂ : ಬಿಟ್ಟೆನೆಂದರೆ ಬಿಡದೀ ಮಾಯೆ

ಅವಧಿಯ ನನ್ನ ಮೊಟ್ಟ ಮೊದಲ ಲೇಖನದಲ್ಲಿ ನಾನು ಒಬ್ಬ ಯುರೋಪ್ ದೇಶದ ‘ದೇಶಾಭಿಮಾನಿ’ಯೂ ‘ವಿದೇಶೀ ದ್ವೇಷಿ’ಯೂ ಆದ ಹಿರಿಯನ ಭೇಟಿಯ ಕುರಿತು ಬರೆದಿದ್ದೆ. ಆತನ ಅನುಭವ, ಜ್ಞಾನಭಂಡಾರವನ್ನು ಮೆಚ್ಚಬೇಕಾದ್ದೆ ಸೈ. ಆದರೆ ಅಷ್ಟು ಬಹುಶ್ರುತನಾದ, ಲೋಕಾನುಭವ ಪಡೆದ ಈತ ತನ್ನ ದೇಶವನ್ನು ಹೊರತು ಪಡಿಸಿ ಉಳಿದೆಲ್ಲ ಜಗತ್ತೂ ತುಚ್ಚ ಎಂದು ಮಾತನಾಡಿದ್ದು ನನಗೆ ಕೊಂಚವೂ ಹಿಡಿಸಿರಲಿಲ್ಲ. ಆತನನ್ನು ಮನದಲ್ಲೇ ನಿಂದಿಸಿದ್ದಲ್ಲದೆ, ಕೆಲವು ವೃತ್ತಿನಿರತ ಕಾರಣಗಳಿಂದ ಎದುರಿಗೆ ಏನೂ ಹೇಳಲಾಗದೇ ಹೋದ ನನ್ನ ಮಿತಿಯನ್ನು ಹಲುಬಿದ್ದೆ.

‘ಬಿಟ್ಟೆನೆಂದರೆ ಬಿಡದೀ ಮಾಯೆ’ ಎಂಬಂತೆ ಆತನನ್ನು ಮತ್ತೆ ಭೇಟಿಯಾಗುವ ‘ಸುಯೋಗ’ ಒದಗಿ ಬಂತು. ಅದೂ ನಮ್ಮೂರಲ್ಲದ ಚೆನ್ನೈ ನಲ್ಲಿ. ಇನ್ನೇನು ಕೈ ತಪ್ಪಿ ಹೋಯಿತು ಎನ್ನುವಷ್ಟರಲ್ಲಿ ಅದೇ ಶೈಕ್ಷಣಿಕ ಲೋಕದ ಜಾಗತಿಕ ಮಟ್ಟದಲ್ಲಿ ದೈತ್ಯನಾದ ಸಂಸ್ಥೆಯು ಕೈಬೀಸಿ ಕರೆದು ಆಹ್ವಾನ ಕೊಟ್ಟಾಗ ಯಾರು ಮಾತ್ರ ಬೇಡವೆನ್ನುತ್ತಾರೆ. ನಮ್ಮ ಕಂಪನಿಗೂ ಆ ಸಂಸ್ಥೆಗೂ ಮರುಮದುವೆಯ ವಾಲಗ ಊದಿಸಿದ ನಂತರದ ಪರಿಸ್ಥಿತಿ ಇದಾಗಿತ್ತು. ಹಲವಾರು ಕಾರಣಗಳಿಗೆ ನನಗೆ ಚೆನ್ನೈ ನೋಡಬೇಕೆಂದಿತ್ತು, ಎಂದೂ ಆಗಿರಲಿಲ್ಲ. ಈಗ ಆ ಸಮಯ ಬಂದಿದೆ ಎಂದು ಸಂತೋಷವಾದರೂ, ಪುನಃ ಈತನನ್ನು ಭೇಟಿಯಾಗಿ, ಕೈ ಕುಲುಕಬೇಕಲ್ಲ ಎಂಬ ಖಿನ್ನತೆ. “ಏನಾದರದಾಗಲೀ ಈ ಬಾರಿ ಆತನಿಗೆ ಸರಿಯಾದ ಉತ್ತರ ಕೊಡಲೇ ಬೇಕು” ಎಂದು ಚೆನ್ನೈಗೆ ಹೊರಟುನಿಂತ ನನಗೆ ಈ ಪುಟ್ಟ ಪ್ರವಾಸದಲ್ಲಿ ಅನೇಕ ‘ಮೈಂಡ್ ಟ್ಯೂನರ್’ ಗಳು ದೊರೆತವು ಎಂಬುದು ಸ್ವಾರಸ್ಯಕರ.

ಈ ಪ್ರಯಾಣದ ಪ್ರಸ್ತಾಪ ಕೊನೇ ಘಳಿಗೆಯದ್ದಾದ್ದರಿಂದ ಪ್ರಯಾಣದ ಪರಿ ನಿರ್ಧರಿಸುವುದು ಕಷ್ಟ ಸಾಧ್ಯವೇ ಆಯಿತು. ನಮ್ಮ ಮ್ಯಾನೇಜರ್ ಪ್ರಕಾರ ನಮಗೆ ಎ ಸಿ ತ್ರೀ ಟೈರ್, ಶತಾಬ್ದಿಯನ್ನು ಕಾಯ್ದಿರಿಸಬೇಕಿತ್ತು. ಶತಾಬ್ದಿಗೆ ಪಾಪ ನಾವು ಹೊರಡುವ ವಿಚಾರ ಗೊತ್ತಿರದೆ ತನ್ನ ಮನೆಯನ್ನು ಆಗ್ಗೆ ತುಂಬಿಸಿಕೊಂಡು ಬಿಟ್ಟಿತ್ತು. ಇನ್ನು ವಿಮಾನ ಪ್ರಯಾಣಕ್ಕೆ ತೆರುವಷ್ಟು ದೊಡ್ಡ ಸಂಗತಿ ಇದಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಹೇಗೋ ಮಾಡಿ ಅಂತೂ ಕೊನೆಗೆ ನಮಗೆ ಸಿಕ್ಕಿದ್ದು ಸೆಕಂಡ್ ಕ್ಲಾಸ್ ಸೀಟು!ತಕ್ಷಣ ಕೊಂಚ ಅಸಮಧಾನವಾದ ನನಗೆ ನನ್ನ ಬಗ್ಗೆ ಆಶ್ಚರ್ಯ, ಆತಂಕ ಮೂಡಿತ್ತು. ನನ್ನ ಅಸಮಾಧಾನಕ್ಕೆ ಕಾರಣ, “ಅರೆ! ನಾನೂ ಈ ವರ್ಗ ಬೇಧ ಮಾಡಲು ಪ್ರಾರಂಭಿಸಿದ್ದೇನೆಯೇ” ಎಂಬುದಾಗಿತ್ತು.

ಹೋಗುವ ಮಾರ್ಗ ಒಂದೇ, ತಲುಪುವ ಸ್ಥಳ ಒಂದೇ. ಆದರೂ ಹೆಚ್ಚಿಗೆ ಹಣ ತೆತ್ತು ಸುಖಾಸೀನರಾಗಿ ಹೊರಡಬೇಕು ಎಂಬುದು, ಸೆಕಂಡ್ ಕ್ಲಾಸ್ ಪ್ರಯಾಣದಲ್ಲಿ ಆಗಬಹುದಾದ (?) ಪ್ರಯಾಸವನ್ನು ತಪ್ಪಿಸಲೋ ಅಥವಾ “ನಾನು ಸೆಕಂಡ್ ಕ್ಲಾಸ್ ಅಲ್ಲ” ಎಂಬ ಪ್ರತಿಷ್ಟೆಯನ್ನು ಬಿಂಬಿಸಲೋ ತಿಳಿಯದೆ ನನ್ನೊಳಗೆ ನಾನು ಆತ್ಮಶೋಧನೆ ಮಾಡಿಕೊಂಡೆ. ಆಗ ಅರಿವಾದದ್ದು ಎರಡನೆಯ ವಿಚಾರ ಸತ್ಯ ಎಂದು. ಈ ಜಗತ್ತೇ ಹಾಗೆ, ಮಾಯದ ಲೋಕದಲ್ಲಿ ನಮ್ಮನ್ನು ತೇಲಿಸಿ, ಹೊರಗೆ ಕಾಣುವ ಥಳುಕಿಗೆ ಬೆಲೆ ತೆರುವಂತೆ ಮಾಡಿಬಿಡುತ್ತದೆ. ಇದು ನಮಗೆ ನಾವು ಮಾಡಿಕೊಳ್ಳುವ ನಯವಂಚನೆ. ಇದರಿಂದ ಪಾರಾಗಲು ಮಾಡಿದ ನಿರ್ಧಾರ “ನಾನು ಹೋಗುವುದೇ ಸೆಕಂಡ್ ಕ್ಲಾಸ್ ನಲ್ಲಿ” ಎಂದು. ಇದರ ಮಧ್ಯೆ ಕೆಲವರು ‘ತತ್ಕಾಲ್’ ಇತ್ಯಾದಿ ಎಂದರೂ ಅದಕ್ಕೆ ಕಿವಿಗೊಡಲಿಲ್ಲ.

ಕೊನೆಗೂ ಹೊರಟ ನನಗೆ ನನ್ನಲ್ಲಿ ಆಗಷ್ಟೇ ಕಂಡ ಸಣ್ಣ ಜಯದ ಬಗ್ಗೆ ಸಂತೃಪ್ತಿ. ನನ್ನೊಟ್ಟಿಗೆ ಹೊರಟು ನಿಂತವನಿಗೆ ಅಸಮಾಧಾನದಿಂದ ಕೂಡಿದ ಅನಾಸಕ್ತಿ. ಪ್ರತಿ ಬಾರಿ ಎ ಸಿ ರೈಲಿನಲ್ಲಿ ಪ್ರಯಾಣ ಮಾಡಿದ್ದ ನನಗೆ ಅನಿರೀಕ್ಷಿತ ಅಚ್ಚರಿ ಕಾದಿತ್ತು. ರೈಲು ಹತ್ತಿದ ಕೂಡಲೇ ತೆರೆದಿಟ್ಟ ಕಿಟಕಿ ನನ್ನ ಮೊದಲ ಪ್ರೇಮವಾಗಿಬಿಟ್ಟಿತು. ಹೊರಗಿನಿಂದ ಆಕ್ರಮಿಸುತ್ತಿದ್ದ ತಾಜಾ ಹವಾ ಅಲ್ಲಿದ್ದ ಎಲ್ಲ ದುರ್ಗಂಧಗಳನ್ನೂ ಹೊಡೆದೋಡಿಸಿತ್ತು. ಕಿಟಕಿಯಿಂದ ಕೈ ಹೊರಮಾಡಿ, ಗಾಳಿಗೆ ವಿರುದ್ಧ ಬೆರಳು ಚಾಚಿ ಅದರೊಟ್ಟಿಗೆ ಆಟವಾದುವುದರಲ್ಲಿ ಸಿಗುವ ಮಜವೇ ಬೇರೆ. ಚಿಕ್ಕಂದಿನಲ್ಲಿ ನಮ್ಮೂರಿಗೆ ಬಸ್ ಪ್ರಯಾಣ ಮಾಡುವಾಗ ಇದೇ ರೀತಿ ಗಾಳಿಯಾಟವಾಡಿದ್ದು ನೆನಪಾಗಿ ಭಾವುಕಳಾದೆ. ಬಸ್ ಸೀಟುಗಳಂತೆಯೇ ಇರುವ ಈ ರೈಲು ಕೂಡ ಮೊದಲ ಅನುಭವವೇ.

ಅಲ್ಲಿನ ವಾತಾವರಣ, ಜನಸಂದಣಿ, ಶಬ್ದಗಳು ಇತ್ಯಾದಿ ಒಂದು ಆತ್ಮೀಯ ಅಲೆಯನ್ನು ಮೂಡಿಸಿತ್ತು. ಕೆಲವರು ಕಿಟಕಿ ಸೀಟಿಗಾಗಿ ಜಗಳ ಕಾಯುವುದು ನಂತರ “ಸಂಡೆ ಏ ಪೋಡಣು” (ಜಗಳ ಯಾಕಾಡಬೇಕು) ಎಂದು ರಾಜಿ ಮಾಡಿಕೊಳ್ಳುವುದು, ಬಡಕಲು ಶರೀರದ, ಹರಿದ ಬಟ್ಟೆಯ, ಮೀನಿನ ಬುಟ್ಟಿ ಹೊತ್ತು ಸೀಟು ಸಿಗದೇ ನೆಲದ ಮೇಲೆ ಹೆಂಗಸೊಬ್ಬಳು, ಆ ಸಣ್ಣ ಟಿವಿ ಪರದೆಯ ಮೇಲೆ ನಡೆಯುತ್ತಿರುವ ನಗಣ್ಯ ಪ್ರಹಸನಗಳಿಗೆ ಬಾಯ್ತುಂಬ ನಗುವುದು, ಯಾರೋ ಕೂತು ಪತ್ರಿಕೆ ಓದುತ್ತಿದ್ದರೆ, ಕೆಲವರು ಅದಕ್ಕೆ ಮತ್ತೆ ದುಡ್ಡು ಯಾಕೆ ವ್ಯಯ ಎಂದು ದೂರದಿಂದಲೇ ಇಣುಕಿ ತಣಿಕಿ ಪತ್ರಿಕೆ ಓದುವುದು, ಮುಂದಿನ ಎಡ ಭಾಗದ ಸೀಟಿನಿಂದ ಹಿಂದಿನ ಬಲಭಾಗದ ಸೀಟಿಗೆ ನಡುವೆ ನಡೆಯುತ್ತಿದ್ದ ಕಣ್ಣೋಟದ ಪ್ರೇಮ ಸಂಭಾಷಣೆಗಳು.

ಕೆಲವರು ಗಾಬರಿಯಿಂದ ಆಗಾಗ್ಗೆ ತಮ್ಮ ಸಾಮಾನು ಜೋಪಾನ ಮಾಡಿಕೊಳ್ಳುವವರು, ‘ಸೂಡಾ ಕಾಪೀ’ ಎಂದು ಆಗಾಗ ಓಡಾಡುವ ಕಾಫೀ ಮಾರುವವನ ಕೆಟ್ಟ ಕಂಠ, ಫೋನಿನಲ್ಲಿ ಜೋರಾಗಿ ಮಾತನಾಡುತ್ತಾ ಯಾರಿಗೋ ಎಲೆ ಅಡಿಕೆ ಬಾಯಲ್ಲಿ ತೊದಲುತ್ತಾ ಬೈಯುತ್ತಿರುವವರು, ಏನೂ ಮಾಡಲು ತೋಚದ ಕೆಲವರು “ನಿಮ್ಮದು ಯಾವೂರಾಯಿತೋ?” ಎಂದು ಪಕ್ಕದವರನ್ನು ಮಾತಿಗೆಳೆಯುವುದು, ಇವೆಲ್ಲವನ್ನೂ ಗಮನಿಸುತ್ತಾ ಪ್ರಯಾಣದ ಸಮಯ ಹೋದದ್ದೇ ಗೊತ್ತಾಗಲಿಲ್ಲ ಎಂಬ ಸತ್ಯಕ್ಕಿಂತ ಈ ಪ್ರಯಾಣ ಎಷ್ಟು ಜೀವಂತಿಕೆಯಿಂದ ತುಂಬಿದೆ, ಎಷ್ಟು ಜನಜೀವನದ ಕಥಾನಕಗಳನ್ನು ಹೊತ್ತು ಪ್ರಯಾಣ ಮಾಡುತ್ತದೆ, ಎಷ್ಟು ಸ್ವಾರಸ್ಯಕರ ಎಂಬ ವಿಚಾರ ಹೆಚ್ಚು ಪ್ರಿಯವಾಯಿತು.

ತಂಗುದಾಣ ತಲುಪಿ ವಿರಮಿಸಿ, ದಣಿವಾರಿಸಿಕೊಂಡ ಮೇಲೆ ಹೊರಡಬೇಕಾಗಿ ಬಂದದ್ದು ಪಂಚತಾರಾ ಹೊಟೇಲಿಗೆ. ವಿಶಾಲವಾದ ಆವರಣ, ಅಚ್ಚುಕಟ್ಟಾದ ಸಾಫು ಸಪಾಟು ವಾತಾವರಣ ಜೊತೆಗೆ ಪರಿಮಳ ಬೀರುವ ತಂಗಾಳಿ. ಮನಸಿಗೆ ಮುದ ನೀಡುವ ಸಣ್ಣ ದನಿಯ ಇಂಗ್ಲಿಷ್ ವಾದ್ಯ ಸಂಗೀತ. ಮುಟ್ಟಿದರೆ ಧೂಳಾಗಬಹುದು ಎಂಬ ಪೀಠೋಪಕರಣ. ದೊಡ್ಡ ಆಫೀಸರುಗಳಂತೆ ವಸ್ತ್ರ ಧರಿಸಿದ ಕೆಲಸಗಾರರು. ಸುಂದರ, ಮನಸೂರೆಗೊಳಿಸುವ ದೃಶ್ಯ. ‘ಸೆಕಂಡ್ ಕ್ಲಾಸ್’ ನಿಂದ ಧುತ್ತೆಂದು ‘ಗ್ರಾಂಡ್ ಕ್ಲಾಸ್’ ಗೆ ಧುಮುಕಿದ ಹಾಗೆ ಭಾಸವಾಯಿತು.

ಆದರೆ ನನ್ನ ಅರಿವಿಗೆ ಬಂದ ಒಂದು ವಿಷಯವೆಂದರೆ ಈ ವೈಭವದಲ್ಲಿ ಕಾಣದ ಒಂದು ಮೌನ ಸುಖ, ಆತ್ಮೀಯತೆ ಆ ಸೆಕಂಡ್ ಕ್ಲಾಸ್ ನಲ್ಲಿತ್ತು. ‘ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ನೋಟ ಚೆಂದ’ ಎನ್ನುವುದು ಇದಕ್ಕೆ ಇರಬೇಕು ಎನ್ನಿಸಿತು. ಏನೋ ಕೃತಕತೆ, ಅರೆ ನಗು, ಬೇರೆಬೇರೆಯಾದ ಒಳ ಹೊರಗು, ನಮ್ಮದಲ್ಲದರ ಬೆನ್ನ ಹಿಂದೆ ಬಿದ್ದು ಮೈ ಪರಚಿಕೊಳ್ಳುತ್ತಿದೆವೆಯೇ ಎನಿಸಿತ್ತು. ಅಲ್ಲಿನ ಶುಭ್ರತೆ, ಅಚ್ಚುಕಟ್ಟುತನ ಮೆಚ್ಚಬೇಕಾದ್ದೆ ಆದರೆ ಇಷ್ಟರ ಹೊರತಾಗಿ ಎಲ್ಲ ಕಂಡುಬಂದದ್ದು ಆ ವಿದೇಶಿಗರ ನಕಲು, ಅವರ ಭಾಷೆ ವೇಷಭೂಷಣ, ವಾತಾವರಣ ಎಲ್ಲವೂ! ಇದು ಅವರನ್ನು ಮೆಚ್ಚಿ ಹಣ ಮಾಡಲೋ ಅಥವಾ ಅವರಂತೆ ನಾವೂ ಬದಲಾಗಲೋ ಎಂಬುದು ಯಕ್ಷ ಪ್ರಶ್ನೆ.

ಜಗತ್ತಿನಲ್ಲಿ ಒಳಿತನ್ನೆಲ್ಲ ತೆಗೆದುಕೋ ಎಂಬ ವಿವೇಕಾನಂದರ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾ, ನಾವು ಮಾಡುತ್ತಿರುವ ‘ನಕಲು’ ಅಥವಾ ‘ಐಡಿಯಾ ಬಾರೋವಿಂಗ್’ ಪೂರ್ತಿ ತಪ್ಪು ಅಂತಲೂ ಹೇಳಲಾಗದು. ಆದರೆ, ಎಷ್ಟು ಬೇಕೋ ಅಷ್ಟನ್ನು ಪಡೆದು, ಉಳಿದಂತೆ ನಮ್ಮ ತನ ಉಳಿಸಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವೇ ಅಥವಾ ನಾನೂ ಕಾರ್ಪೋರೆಟ್ ರೀತಿ ರಂಗದಲ್ಲೇ ಮಾತನಾದುತ್ತಿದೇನೆಯೇ ಎಂಬುದು ನನಗಿನ್ನೂ ಸ್ಪಷ್ಟವಾಗಿಲ್ಲ!

ಈ ಮನಸ್ಸಿನ ಗೊಂದಲದ ಪರಿಸ್ಥಿತಿಯಲ್ಲಿ ಆತನನ್ನು ಭೇಟಿ ಮಾಡುವ ಸಮಯ ಬಂದೇಬಂತು. ಈಗ್ಗೆ ಅವರ ನಕಲು ಸಾಕಷ್ಟಾಗಿ ಆತನಿಗೆ ತಪ್ಪು ಕಂಡು ಹಿಡಿಯುವುದು ಸಾಧ್ಯವಾಗಲಿಲ್ಲವೋ, ಈ ವಾತಾವರಣಕ್ಕೆ ಸಾಕಷ್ಟು ಆತ ಒಗ್ಗಿ ಹೋಗಿದ್ದಾನೆಯೋ ಅಥವಾ ಸುಮ್ಮನೆ ಇತರರನ್ನು ದೂಷಿಸುವುದು ಒಂದು ಸಂಸ್ಕೃತಿಗೆ ಮಾಡುವ ಅವಮಾನ ಎಂದು ಆತನಿಗೆ ಅರಿವು ಮೂಡಿತೋ ತಿಳಿಯೆ ಅಂತೂ ಯಾವ ಅವಹೇಳನಾಕಾರೀ ಮಾತುಗಳಾಡದೆ ಸುಸೂತ್ರವಾಗಿ ಕಾರ್ಯಕ್ರಮ ಜರುಗಿಸಿಬಿಟ್ಟ. ಈ ಪ್ರವಾಸದಲ್ಲಿ ಉಂಟಾದ, ನಾನಾಗಲೇ ಹೇಳಿದಂತಾ ಅನೇಕ ‘ಮೈಂಡ್ ಟ್ಯೂನರ್ಸ್’ ಅಥವಾ ಗೊಂದಲಗಳಲ್ಲಿ ಸುಗಮವಾಗಿ, ಸಮಾಧಾನವಾಗಿ ಕಂಡದ್ದು ಈ ಕೊನೆಯದೊಂದೇ!

 

‍ಲೇಖಕರು avadhi

March 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Raghunandan K

    ಆನಂದಿಸುವ ಮನಸ್ಸಿದ್ದರೆ ರೈಲೆನ್ನುವುದು ಜೀವಂತಿಕೆ ತುಂಬಿದ ಚಲಿಸುವ ಪ್ರಪಂಚ… ನಮ್ಮನ್ನ ಕಾಡುವ ಎಷ್ಟೆಲ್ಲ ಸಂಗತಿಗಳು ಅಲ್ಲಿ… ಮನಸ್ಸು ದುಃಕಿತವಾಗಿದ್ದರೂ ಸಂತಸದಿಂದಿದ್ದರೂ ರೈಲೆಂಬ ಚಲಿಸುವ ಮಾಯೆಯೊಳು ಎಲ್ಲ ಸ್ವಚ್ಛ ಸ್ವಚ್ಛ…
    ಆಪ್ತವೆನಿಸಿತು ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: