ಜುಗಾರಿ ಕ್ರಾಸ್ ನಲ್ಲಿ 'ಬಾಡೂಟ'

ನಾಗರಾಜ್ ಹೆತ್ತೂರು ಅವರು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆದ ಬಾಡೂಟ, ಅದಕ್ಕೆ ಬಂದಿರುವ ಟೀಕೆಯ ಬಗ್ಗೆ ಅವರ ನೋಟವನ್ನು ಅವಧಿಯಲ್ಲಿ ಮಂಡಿಸಿದ್ದರು.
ಆ ಲೇಖನ ಇಲ್ಲಿದೆ.
ಈ ಲೇಖನಕ್ಕೆ ಬಿ ವಿ ಭಾರತಿ ಬರೆದ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದೇವೆ. ಈ ಲೇಖನವನ್ನು ಹಾಗೂ ಭಾರತಿ ಅವರ ಪ್ರತಿಕ್ರಿಯೆಯನ್ನು ಜುಗಾರಿ ಕ್ರಾಸ್ ನಲ್ಲಿ ನಿಮ್ಮ ಮುಂದಿದುತ್ತಿದ್ದೇವೆ.
ಜುಗಾರಿ ಕ್ರಾಸ್ ಹೇಳಿಕೇಳಿ ಚರ್ಚೆ, ಮಂಥನಕ್ಕೆ ಇರುವ ವೇದಿಕೆ. ಬನ್ನಿ ನಿಮ್ಮ ಪ್ರತಿಕ್ರಿಯೆ ಕಳಿಸಿ.
ನಿಮ್ಮ ಪ್ರತಿಕ್ರಿಯೆ ಸಭ್ಯತೆಯ ಅಂಚಿನಿಂದ ಜಾರದಿರಲಿ.


ಮಾಡಬಹುದು ಮಾಡಬಹುದು! ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ ಬಿಟ್ಟು ಕೊರಬಾಡು ಮೇಳ ಮಾಡಬಹುದು. ಚಿತ್ರಕಲಾ ಪರಿಷತ್ತಿನಲ್ಲಿ ಬಿರಿಯಾನಿ ಮೇಳ ಮಾಡಬಹುದು. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಿಕೋಳಿ ಸಾರು-ಮುದ್ದೆ ಮೇಳವೂ ಮಾಡಬಹುದು.
ಟೌನ್ ಹಾಲ್‌ನಲ್ಲಿ ಬಾತ್ರೂಮ್ accessories ಮೇಳ ಮಾಡಬಹುದು.
ಮಡಿ ಮೈಲಿಗೆ ವಿಷಯ ಅತ್ಲಾಗೆ ಒದ್ದು ಓಡಿಸಿ ಬಿಡಿ. ಮುಂದಿನ ದಿನಗಳಲ್ಲಿ ಸ್ಮಶಾನದಲ್ಲಿ ಮದುವೆ … ಪಾರ್ಲಿಮೆಂಟಿನಲ್ಲಿ ತಿಥಿ …ರಾಷ್ಟ್ರಪತಿ ಭವನದಲ್ಲಿ ಸೀರೆ ಎಕ್ಸಿಬಿಷನ್ … ಎಲ್ಲ ಮಾಡಬಹುದು …:)
-ಬಿ ವಿ ಭಾರತಿ

‍ಲೇಖಕರು G

March 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

38 ಪ್ರತಿಕ್ರಿಯೆಗಳು

  1. ಸತ್ಯನಾರಾಯಣ

    ಭಾರತೀಯವರು ವಿಷಯಾಂತರ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಯೇ ಇದೆ. ಸಾಹಿತ್ಯ ಪರಿಷತ್ತು ಆವರಣದಲ್ಲಿ, ಆಹಾರಸೇವನೆ ಮಾಡಬಹುದಾದಲ್ಲಿ, ಸಸ್ಯಹಾರ ಅಥವಾ ಮಾಂಸಾಹಾರ ಎಂಬ ಪ್ರಶ್ನೆಗೇ ಅಲ್ಲಿ ಅವಕಾಶ ಇಲ್ಲವಾಗುತ್ತದೆ. ಇಲ್ಲವಾಗುಬೇಕು ಕೂಡಾ.
    ವೆಜ್ ಫಲಾವ್ ತಿನ್ನಬಹುದಾದಲ್ಲಿ ಚಿಕನ್ ಫಲಾವ್ ಕೂಡಾ ತಿನ್ನಬಹುದು ಎಂಬುದಷ್ಟೆ ಮುಖ್ಯ.
    ಇನ್ನು ಮಾಂಸಾಹಾರದಲ್ಲಿಯೂ ಅಷ್ಟೆ. ಚಿಕನ್ ತಿನ್ನಬಹುದಾದಲ್ಲಿ ಪಂದಿಕರಿಯನ್ನೂ ತಿನ್ನಬಹುದು, ಕೊರಬಾಡನ್ನು ತಿನ್ನಬಹುದು.
    ಇಲ್ಲ ಆಹಾರವೇ ಬೇಡ ಎನ್ನುವುದಾದರೆ ಯಾವುದೂ ಬೇಡ ಅಷ್ಟೆ.
    ಭಾರತಿಯವರು ಉಲ್ಲೇಖಿಸಿರುವ ಚಿತ್ರಕಲಾಪರಿಷತ್ತು ಸಾಹಿತ್ಯ ಪರಿಷತ್ತು ಮತ್ತು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಹಾರಸೇವನೆಗೆ ಅವಕಾಶ ಇದೆ ಎಂದ ಮೇಲೆ, ಅವರೇ ಉದಾಹರಿಸಿರುವ ಖಾದ್ಯಗಳನ್ನು ತಿಂದರೆ ತಪ್ಪೇನೂ ಇಲ್ಲ.
    ಇನ್ನು ಕೊನೆಯ ಎರಡು ಉದಾಹರಣೆಗಳು: ಟೌನ್ ಹಾಲ್ ಮತ್ತು ರಾಷ್ಟ್ರಪತಿ ಭವನದಲ್ಲಿ ಯಾವುದಾದರೂ ಕಮರ್ಷಿಯಲ್ ಮೇಳ ನಡೆಸುವ ಅವಕಾಶವಿದ್ದರೆ (ಇಲ್ಲ ಎಂದುಕೊಳ್ಳುತ್ತೇನೆ) ಅದು ಬಾತ್ ರೂಮ್ ಅಕ್ಸೆಸರೀಸ್ ಆದರೇನು? ಸೀರೆ ಆದರೇನು? ಪೂಜಾ ಸಾಮಾನು ಆದರೇನು!? ಚಪ್ಪಲಿಗಳ ಮೇಳ ಆದರೇನು ಅಲ್ಲವೆ?

    ಪ್ರತಿಕ್ರಿಯೆ
  2. bharathi bv

    Sathyanarayana avare naanu vishayanthara maade illa … saahithya parishattina aavaranadalli sahithya bittu mattenaadroo yaakirabeku andiddini. Innulidanthe nimma yaavudo ondu mela ello nadesuva argument argument e allvadrinda uttara kooda waste aagutte. Yaav yaava sthala yavudakke antha nirmaanavagidyo adakkagi meesalirli annodu nanna niluvu .. khachitha niluvu.

    ಪ್ರತಿಕ್ರಿಯೆ
  3. bharathi bv

    Maamsadoota maadbedi bisibelebath mela maadbodu andidre neevu helda maathu sathya aagtittu.naanu helirodu vishyanthara alve alla …

    ಪ್ರತಿಕ್ರಿಯೆ
  4. ಸತ್ಯನಾರಾಯಣ

    ನಾಗರಾಜ್ ಹೆತ್ತೂರು ಅವರ ಲೇಖನವನ್ನಷ್ಟೇ ಗಮನಿಸಿದಾಗ ನೀವು ವಿಷಯಾಂತರ ಮಾಡಿರುವುದು ನಿಜ. ಅವರು ಪ್ರಶ್ನೆಯೆತ್ತಿರುವುದು ಆಹಾರದಲ್ಲಿ ಬೇಧಭಾವ ಏಕೆ? ಎಂದು. ಮೇಳ ಬೇಕೆ ಬೇಡವೇ ಎಂದು ಅಲ್ಲ.
    ನಿಮ್ಮ ಪ್ರತಿಕ್ರಿಯೆ
    “ಮಾಡಬಹುದು ಮಾಡಬಹುದು! ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ ಬಿಟ್ಟು ಕೊರಬಾಡು ಮೇಳ ಮಾಡಬಹುದು. ಚಿತ್ರಕಲಾ ಪರಿಷತ್ತಿನಲ್ಲಿ ಬಿರಿಯಾನಿ ಮೇಳ ಮಾಡಬಹುದು. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಿಕೋಳಿ ಸಾರು-ಮುದ್ದೆ ಮೇಳವೂ ಮಾಡಬಹುದು.” ಇಲ್ಲಿ ಕೊರಬಾಡು, ಬಿರಿಯಾನಿ, ನಾಟಿಕೋಳಿ ಸಾರಿನ ಪ್ರಸ್ತಾಪ ಮಾತ್ರ ಮಾಡಿರುವುದು, -ಅದೂ ವ್ಯಂಗ್ಯವಾಗಿ ಕಾಣುತ್ತದೆ. ನಿಮ್ಮ ಬರಹ ನಿಮ್ಮ ದೃಷ್ಟಿಯಲ್ಲಿ ವಿಷಯಾಂತರವಾಗಿ ಕಾಣದಿರಬಹುದು. ಲೇಖನ ಓದಿ ನಿಮ್ಮ ಪ್ರತಿಕ್ರಿಯೆ ಓದಿದಾಗ ಒಬ್ಬ ಓದುಗನಾಗಿ ನನಗನ್ನಿಸಿದ್ದನ್ನು ನಾನು ಹೇಳಿದ್ದೇನೆ. ಅದಕ್ಕೆ ನೀವು ಉತ್ತರ ಕೊಡಬೇಕೆಂಬ ಯಾವ ಅಪೇಕ್ಷೆಯೂ ನನಗೆ ಇಲ್ಲ. ಆದ್ದರಿಂದ ನಿಮ್ಮ ಉತ್ತರ ವೇಸ್ಟಾಗುತ್ತೆ ಅನ್ನುವ ಭಯ ಬೇಡ!

    ಪ್ರತಿಕ್ರಿಯೆ
  5. Ashok Shettar

    ಜುಗಾರಿ ಕ್ರಾಸ್‍ನಲ್ಲಿ ಇಂಥ ಚರ್ಚೆಗಳು ಬೇಕಾ..

    ಪ್ರತಿಕ್ರಿಯೆ
    • Rj

      Yes! ನನ್ನದೂ ಇದೇ ಗೊಂದಲ.’ಸಾಹಿತ್ಯ ಪರಿಷತ್’ನಲ್ಲಿ ಮಾಂಸದೂಟ ಯಾಕಿರಬಾರದು-ಅನ್ನುವದು ಚರ್ಚೆ ಮಾಡುವಂಥ ವಿಷಯವೇ?
      ಅಸಲಿಗೆ,’ಅವಧಿ’ಯಂಥ ವೆಬ್ ಮ್ಯಾಗಝೀನ್ ಇಂಥ ವಿಷಯಗಳಿಗೂ ಪ್ರಾಮುಖ್ಯತೆ ಕೊಡುತ್ತದೆಯೇ?
      ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಯಾವುದಾದರೂ ಗೊಂದಲ/ಹಗರಣದ ಬಗ್ಗೆ ಏನಾದರೂ ಪ್ರಸ್ತಾಪಿಸಿದ್ದರೆ,ಅದಕ್ಕೊಂದು ಅರ್ಥ ಇರುತ್ತಿತ್ತು.
      I am sorry,ನನಗೆ ಇದು ಯಾವ ಕೋನದಿಂದಲೂ ಚರ್ಚೆಗೆ ಪೂರಕವಾಗಬಲ್ಲಂಥ ‘ವಿಷಯ/ವಸ್ತು’ ಅಂತ ಅನಿಸುತ್ತಿಲ್ಲ.
      -Rj

      ಪ್ರತಿಕ್ರಿಯೆ
      • G

        ಚರ್ಚೆ ಮಾಡುವಂಥ ವಿಷಯವೇ?- ಎನ್ನುವ ವಿಷಯಗಳೇ ಚರ್ಚೆಗೆ ನಿಜಕ್ಕೂ ಅರ್ಹವಾದ ವಿಷಯಗಳು . ಅವಧಿ ಎಂದೂ ಏಕಮುಖ ಚಿಂತನೆಗೆ ಇರುವ ವೇದಿಕೆಯಲ್ಲ

        ಪ್ರತಿಕ್ರಿಯೆ
  6. ಓದುಗ, ಬೆಂಗಳೂರು

    ಇದು ಖಂಡಿತವಾಗಿಯು ಚರ್ಚೆಯಾಗಬೇಕಾದ ವಿಷಯ. ಇಲ್ಲಿ ಪ್ರಶ್ನೆ ಕೇವಲ “ಆಹಾರ-ಪದ್ದತಿ”ಯದಲ್ಲ, ಬದಲಾಗಿ ಆಹಾರ-ಪದ್ದತಿಯ ಜೊತೆ ಬೆಸೆದುಕೊಂಡಿರುವ ಜಾತಿವ್ಯವಸ್ಥೆಯದ್ದಾಗಿದೆ. ಜನಾಭಿಪ್ರಾಯ ರೂಪಿಸುವ ಮಾಧ್ಯಮಗಳು ಇಂತಹ ಸೂಕ್ಷ್ಮ, ಹಾಗೂ ಮುಖ್ಯವಾದ ವಿಷಯೊಂದನ್ನು ಕಡೆಗಣಿಸಲ್ಪಟ್ಟಿರುವ ಸಂದರ್ಭದಲ್ಲಿ “ಅವಧಿ” ಈ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಬೆಳವಣಿಗೆ.

    ಪ್ರತಿಕ್ರಿಯೆ
  7. Parvathi cheeranahalli

    ಸಸ್ಯಹಾರ ಶ್ರೇಷ್ಠ, ಮಾಂಸಹಾರ ಕನಿಷ್ಠ ಎಂಬುದನ್ನು ವಿವೇಕ ಇರುವವರು ಯಾರೂ ಒಪ್ಪಲಾರರು ಎನ್ನುತ್ತಲೇ- ಇಂತಹ ಚರ್ಚೆಗಳಲ್ಲಿ ನುಸುಳುವ ಅತಿರೇಕಗಳ ಬಗ್ಗೆ ಕೆಲವು ಟಿಪ್ಪಣಿ ಮಾಡುತ್ತೇನೆ.
    ಪರರ ಆಹಾರ ಸಂಸ್ಕೃತಿ ಬಗ್ಗೆ ಗೌರವ ಇಟ್ಟುಕೊಂಡಿರಬೇಕು ಎಂಬುದು ಕೇವಲ ಸಸ್ಯಹಾರಿಗಳಿಗೆ ಅನ್ವಯಿಸುವ ವಿಷಯವಲ್ಲ. ಅದು ನಮ್ಮಂಥ ಮಾಂಸಹಾರಿಗಳಿಗೂ ಅನ್ವಯಿಸಬೇಕು(ಮಾಂಸ ಮಡ್ಡಿ ತಿನ್ನುವವರು ಎಂದು ಅವರು ನಮ್ಮನ್ನು ಅಣಕಿಸಿದರೆ, ಓ ಅವ್ರಾ ಪುಳ್ಚಾರ್ಗಳು ಎಂದು ನಾವು ಅವರನ್ನು ಅಣಕಿಸುತ್ತೇವೆ).ನನ್ನ ಗೆಳಯನೊಬ್ಬನಿದ್ದಾನೆ. ಆತ ಸಸ್ಯಹಾರಿ. ಆತ ನಾನು ತಿನ್ನುವ ಮಾಂಸವನ್ನು ಹಸಿಹಸಿಯಾಗಿ ನೋಡಿದರೆ, ಆತ ಒಂದು ದಿನ ಊಟವನ್ನೇ ಬಿಡುತ್ತಾನೆ. ಆತನಿಗೆ ಅದು ಅಸಹ್ಯವಷ್ಟೆ. ನನಗೆ ಆತ ತಿನ್ನುವ ಮೂಲಂಗಿಯನ್ನು ಕಂಡರೆ, ಅಷ್ಟೇ ಅಸಹ್ಯವಾಗುತ್ತದೆ. ಅದನ್ನು ತಿನ್ನುವುದಿರಲಿ, ವಾಸನೆಯೂ ಆಗುವುದಿಲ್ಲ. ಅದು ನನ್ನ ಸಮಸ್ಯೆ. ಇದರರ್ಥ ನಾನು ಮೂಲಂಗಿಯನ್ನು ಕನಿಷ್ಠ ಎಂದು ಭಾವಿಸಿದ್ದೇನೆ ಎಂದಾಗಲಿ, ಆತ ಮಾಂಸವನ್ನು ಇದೇ ಬಗೆಯಲ್ಲಿ ಗ್ರಹಿಸಿದ್ದಾನೆ ಎಂದಾಗಲಿ ಅಲ್ಲ. ಅಸಹ್ಯವೇ ಬೇರೆ, ಸಂಸ್ಕೃತಿಯನ್ನು ಗೌರವಿಸುವುದೇ ಬೇರೆ. ಸಸ್ಯಹಾರಿ ಕುಟುಂಬಗಳಲ್ಲಿ ಈ ಸಮಸ್ಯೆ ಇದೆ.
    ಇದೆ ಸಮಸ್ಯೆ ನನಗೆ ಬೇರೊಂದು ರೀತಿಯಲ್ಲಿ ಕಾಡಿದೆ. ನಾನು ಮಾಂಸಹಾರಿಯಾದರೂ, ನನ್ನೊಂದಿಗೆ ಕಲಿಯುತ್ತಿರುವ ವಿದೇಶಿ ಮಿತ್ರರ ರೀತಿಯಲ್ಲಿ ಕಪ್ಪೆ,ಹಾವು-ಚೇಳನ್ನು ತಿನ್ನಲಾರೆ. ನನ್ನ ಗೆಳೆಯನೊಬ್ಬ ಹಾವಿನ ಚರ್ಮವನ್ನು ಸುಲಿದು, ಒಳಗಿನದನ್ನು ತಿರುಳನ್ನು ತಿನ್ನುತ್ತಾನೆ. ಮೀನು, ಕುರಿ-ಕೋಳಿ ತಿಂದು ಅಭ್ಯಾಸವಿರುವ ನನಗೂ- ಆತನ ಆಹಾರ ಅಸಹ್ಯ ತರಿಸುತ್ತದೆ. ಅದನ್ನು ನೋಡಿದರೆ ಹೊಟ್ಟೆ ತೊಳಸಾಡುತ್ತದೆ.
    ನಾಳೆ ಆತನೂ ಜನಪದ ಪರಿಷತ್ನಲ್ಲಿ ಹಾವು, ಕಪ್ಪೆ, ಚೇಳು, ಜಿರಲೆಯನ್ನು ಖಾದ್ಯ ಮಾಡಿ ಇಡಿ ಎಂದರೆ, ನಾನು ಖಂಡಿತ ಒಪ್ಪಲಾರೆ. ನಾನು ಒಪ್ಪಿದರೂ, ಅವರು ಈ ಖಾದ್ಯವನ್ನು ಅಲ್ಲಿ ಇಟ್ಟು ಊಟ ಮಾಡಲು ಒಪ್ಪುವುದಿಲ್ಲ. ಎಲ್ಲರೂ ಮಾಡುವ ಊಟವೇ ಅಲ್ಲಿರಲಿ ಎನ್ನುತ್ತಾರೆ. ಅದು ಅವರು ಕಂಡುಕೊಂಡಿರುವ ವಿವೇಕ
    ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಬಾಡೂಟ ಮಾಡುವುದು ತಪ್ಪಲ್ಲ. ಆದರೆ, ಅದು ಬಾಡೂಟ ಮಾಡವವರಿಗೆ ಅಷ್ಟೆ ಎಂದು ಗೆರೆ ಎಳೆದುಕೊಳ್ಳುವುದು ಸೂಕ್ತ. ಸಸ್ಯಹಾರಿಗಳನ್ನೂ ಆಹ್ವಾನಿಸಿದರೆ, ಎಲ್ಲರಿಗೂ ಸಲ್ಲುವ ಸಸ್ಯಹಾರ ಮಾಡುವುದು ವಿವೇಕ. ಇದರಲ್ಲಿ ಮೇಲು-ಕೀಳಿನ ಪ್ರಶ್ನೆ ಬರುವುದಿಲ್ಲ.
    ನಮ್ಮ ಮನೆಗಳಲ್ಲಿ ಮದುವೆಯಂತಹ ಶುಭ ಸಮಾರಂಭ ಮಾಡಿದಾಗಲೂ, ಸಸ್ಯಹಾರಿ ಹಾಗೂ ಮಾಂಸಹಾರಿಗಳು ಬರುತ್ತಾರೆ ಎಂದು ಸಾಮಾನ್ಯವಾದ ಸಸ್ಯಹಾರಿ ಅಡಿಗೆಯನ್ನೇ ಮಾಡಿಸುತ್ತೇವೆಯೇ ಹೊರತು, ನಾವು ಮಾಂಸಹಾರಿಗಳು, ಇದು ನಮ್ಮ ಆಹಾರ ಸಂಸ್ಕೃತಿ ಎಂದು ಬಾಡೂಟ ಮಾಡಿಸುವುದಿಲ್ಲ. ಕರ್ನೆರೆಗೆ ಇಂಥಾ ಪ್ರಯೋಗ ಮಾಡುತ್ತೇವೆ. ಇದು ವಿವೇಕವಷ್ಟೆ.
    ನಾನು ಮುಂದಿನ ಬಾರಿ ದನದ ಮಾಂಸವನ್ನು ಇಡಿಸುತ್ತೇನೆ ಎಂದಾದರೆ, ಹಾವು, ಚೇಳು, ಹಲ್ಲಿ, ಕಪ್ಪೆ,ಜಿರಲೆಯ ಖಾದ್ಯವನ್ನು ಮಾಡಿಸಬೇಕಾಗುತ್ತದೆ. ಅದನ್ನು ತಿನ್ನುವವರು ಮೈಸೂರಿನಲ್ಲಿ ಇದ್ದಾರೆ.
    ಇಂಥಾ ವಿಷಯಗಳನ್ನು ಈ ನೆಲೆಯಲ್ಲಿ ಗ್ರಹಿಸಬೇಕೆ ಹೊರತು, ಅಲ್ಲೆಲ್ಲಾ ನಮ್ಮ ಸಂಸ್ಕೃತಿ, ನಮ್ಮ ಆಹಾರ ಪದ್ಧತಿ, ನಮ್ಮ ಹೆಮ್ಮೆ ಎಂದು ತಿನ್ನುವ ಅನ್ನದಲ್ಲಿ ಸಿದ್ಧಾಂತವನ್ನು, ನಮ್ಮ ಪ್ರಗತಿಪರ ಅಸ್ಮಿತೆಯನ್ನು ಹುಡುಕಬಾರದು.
    ನೀವು ಇಂಥಾ ಸಿದ್ಧಾಂತದ ಪ್ರತಿಪಾದಕರಾಗಿರುತ್ತೀರಿ ಎಂಬ ಕಾರಣಕ್ಕಾಗಿಯೇ, ರೂಪ ಹಾಸನ ಅವರಂಥ ಲೇಖಕರು, ಎಲ್ಲರೂ ಒಪ್ಪುವಂಥ ಸಾಮಾನ್ಯ ಹೇಳಿಕೆ ನೀಡುತ್ತಾರೆ. ಅದರ ಆಸುಪಾಸಿನ ಸಂಗತಿಯನ್ನು ಚರ್ಚಿಸುವುದಿಲ್ಲ.ಇದನ್ನೇ ಅಸ್ತ್ರವಾಗಿಟ್ಟುಕೊಂಡು ಜಾತಿವಾದಿಗಳು, ಪಟ್ಟಭದ್ರರು ಲೇಖಕಿಯನ್ನು ಹಣಿಯಲು ನೋಡುತ್ತಾರೆ.
    ವ್ಯಂಗ್ಯವೆಂದರೆ- ಕೆಲವು ಸೋ ಕಾಲ್ಡ್ ಶೋಷಿತರ ಆಹಾರ ಸಂಸ್ಕೃತಿಯ ರಕ್ಷಕರು ಇದಕ್ಕಾಗಿ ಹಸಿದು ಕುಳಿತಿರುತ್ತಾರೆ. ಬಳಿಕ ಅಂತಹ ಪಟ್ಟಭದ್ರರ ಮೇಲೆ ಮುಗಿ ಬೀಳುತ್ತಾರೆ.
    ಕಡೆ ಮಾತು: ಮಾಂಸಹಾರ ಈಗ ದುಬಾರಿಯಾಗಿದೆ. ದುಬಾರಿಯಾದ ಯಾವುದೇ ಆಹಾರವನ್ನು ಪರ(ಸಾಮೂಹಿಕ ಅನ್ನ ಸಂತಾರ್ಪಣೆ) ಮಾಡುವುದು ಸಿರಿವಂತಿಕೆಯ ಅಶ್ಲೀಲ ಪ್ರದರ್ಶನ.
    ಹಾಗಾಗಿ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಲ್ಲಿ, ಮಾಂಸಹಾರಿಗಳ ಆಹಾರ ಪದ್ಧತಇಯೂ ಆಗಿರುವ ಬಾತು-ಮೊಸರನ್ನ ಮಾಡಿಸುವುದು ವಿವೇಕ.
    ಇದು ಅತಿರೇಕಿಗಳ ಯುಗ. ಇವರು ಕೂಡ ಜಾತಿವಾದಿಗಳು, ಕೋಮುವಾದಿಗಳಷ್ಟೇ ಅಪಾಯ.
    ಸಹಜವಾಗಿರೋಣ. ವಿವೇಕ ಎಲ್ಲರನ್ನೂ ಕಾಪಾಡಲಿ.
    – ಪಾರ್ವತಿ ಚೀರನಹಳ್ಳಿ

    ಪ್ರತಿಕ್ರಿಯೆ
    • adithyahk

      ಅಮ್ಮ, ನಿಮ್ಮ ಮನೆಯಲಿರುವ ಹಲ್ಲಿ ಹಾಗು ಜಿರಳೆಗಳನ್ನಷ್ಟೇ ನಿಮ್ಮ ಸ್ನೇಹಿತರಿಗೆ ತಿನ್ನಿಸಬಹುದು ಹಾವು, ಚೇಳು ಕಪ್ಪೆ ತಿಂದವರನ್ನು ವಿಚಾರಿಸಿಕೊಳ್ಳಲು ಅರಣ್ಯ ಇಲಾಖೆ ಇದೆ. ಹಾಗಾಗಿ ಅವುಗಳನ್ನು ಬಯಸಿದವರೂ ತಿನ್ನುವುದು ಕಾನೂನಿಗೆ ವಿರುದ್ದ. ಬೇಕಾದಲ್ಲಿ ಮನೆಯಲ್ಲೇ ಹಾವು ಸಾಕಿ ತಿನ್ನಬಹುದೇನೋ.
      ಈಗಾಗಲೇ ಲೇಖಕರು ಸಸ್ಯಾಹಾರ ಹಾಗು ಮಾಂಸಾಹಾರಕ್ಕೆ ಪ್ರತ್ಯೇಕ ವ್ಯವಸ್ತೆ ಮಾಡಲಾಗಿತ್ತು ಎಂದು ತಿಳಿಸಿದ್ದರೂ ನೀವು ಗೆರೆ, ವಿವೇಕ, ಅಸಹಜ ಎಂದು ಏನೆನೋ ಬರೆದುಕೊಂಡಿದ್ದಿರಿ ಜೊತೆಗೆ ನೀವು ಮಾಂಸಾಹಾರಿಯಾಗಿ ಬೇರೆಯವರು ಮಾಂಸ ತಿಂದರೆ ಪ್ರದರ್ಶನ ಎಂದಿದ್ದೀರಿ, ನೀವೂ ಕೂಡ ಪ್ರದರ್ಶನಕ್ಕಾಗಿ ಮಾಂಸಾಹಾರ ತಿನ್ನುವವರೇ? ಮೂಲತಃ ಸಸ್ಯಾಹಾರಿಯಾದ ನನಗೆ ಬೇರೆಯವವರ ಯಾವುದೇ ಬಗೆಯ ಮಾಂಸದೂಟ ಯಾವುದೇ ರೀತಿಯ ಅಸಹನೆಯನ್ನು ಮೂಡಿಸುವುದಿಲ್ಲ.
      ಸಂಸ್ಕೃತಿ ಅಂದರೆ ನನಗೆ ತಿಳಿದಹಾಗೆ ಭಾಷೆ ಆಹಾರ ಉಡುಗೆ ಪರಿಸರ ಮತ್ತು ಪ್ರದೇಶ ಹಾಗಾಗಿ ಹಾಸನದಲ್ಲಿ ಬಡಿಸಿದ ಹಂದಿ ಸಾರು ಜನಪದ ಪದ್ದತಿಯ ಕೇವಲ ಮೇಲ್ಪದರದ ಅಭಿವ್ಯಕ್ತತೆ ಅಷ್ಟೇ, ತಿಳಿಸಬೇಕಾಗಿರುವುದು ಇನ್ನೂ ಇದೆ.
      ಹಾಸನದ ಸಕಲೇಶಪುರ ಹಾಗು ಚಿಕಮಗಳೂರಿನ ಮೂಡಿಗೆರೆಯ ಭಾಗಗಳಲಿನ ವಕ್ಕಲಿಗರು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಅಲೆಯುವ ಗೋವಿನ ಪ್ರಭೇದಕ್ಕೆ ಸೇರಿದ ಕಾಟಿ(ಕಾಡೆಮ್ಮೆ), ಹಾಗು ಕಬ್ಬೆಕ್ಕುಗಳನ್ನು 90ರ ದಶಕದವರೆಗೂ ಬೇಟೆಯಾಡಿ ಸೇವಿಸುತಿದ್ದರು, ಊಟಕ್ಕೆ ತಮ್ಮ ಮಾಂಸಾಹಾರಿ ಲಿಂಗಾಯತ ಸ್ನ್ಹೇಹಿತರನ್ನು ಆಹ್ವಾನಿಸುತಿದ್ದರು, ಅರಣ್ಯ ಖಾಯ್ದೆಗಳು ಕಠಿಣವಾದಂತೆ ಅಭ್ಯಾಸ ಬದಲಾಗಿದೆ, ನಮ್ಮ ಮನೆಯಲ್ಲಿ ದನದ ಪೂಜೆ ಮಾಡಿದರೂ ಅವು ಸತ್ತಾಗ ಕೊಡುತ್ತಿದುದು ಅವುಗಳ ಮಾಂಸ ತಿನ್ನುವವರಿಗೆ. ಆದರಲ್ಲೀಗ ತಿರುವಿಗೊಂದು ಕೇಸರಿ ಧ್ವಜ ಹಾರಾಟ ಶುರುವಾಗಿದೆ ಪರಿಸ್ತಿತಿ ಅಸಹಜವಾಗಿದೆ.
      ಅಕ್ಕಿ ಬೆಲೆ ಹೆಚ್ಚಾದಾಗ ಅನ್ನ ತಿನ್ನುವವರನ್ನು ಷೋಕಿಗಾರರು ಎನ್ನಲಾಗುವುದೇ?

      ಪ್ರತಿಕ್ರಿಯೆ
      • paarvathi cheeranahalli

        ಮಾನ್ಯ ಅಪ್ಪನವರೇ,
        ಸಾಹಿತ್ಯ ಪರಿಷತ್ ನಲ್ಲಿ ನಡೆದಿದ್ದು ಬಾಡೂಟದ ಮೇಳವೇ ಆದರೆ ಸರಿ. ನಾನು ಮೊದಲ ಲೇಖನವನ್ನು ಸರಿಯಾಗಿ ಓದದೆ,ಪ್ರತಿಕ್ರಿಯಿಸಿದ್ದೀನಿ. ಅದಕ್ಕಾಗಿ ವಿಷಾದಿಸುತ್ತೇನೆ. ಉಳಿದಂತೆ ಅನ್ನದಲ್ಲಿ ಬೇಧ-ಭಾವ ಮಾಡುವುದು ವಿವೇಕವಲ್ಲ ಎಂದು ಹೇಳಿದ್ದೇನೆ.(ಅವಿವೇಕ ಎಂದು ಬೈದಿಲ್ಲ)ನಾನು ಸೇವಿಸುವ ಮಾಂಸಹಾರದ ಬಗ್ಗೆ ಹೆಮ್ಮೆ ಇದೆ. ಇದರ ಹೊರತಾಗಿಯೂ- ನಾನು ಟಿಪ್ಪಣಿ ಮಾಡಿರುವುದು ಇಂತಹ ಚರ್ಚೆ ಸಂದರ್ಭದಲ್ಲಿ ನುಸುಳುವ ಅತಿರೇಕಗಳ ಕುರಿತೇ ವಿನಃ, ಮಾಂಸಹಾರಿಗಳ ಬಗ್ಗೆ ಅಸಹನೆ ವ್ಯಕ್ತಪಡಿಸುವವರನ್ನು ಬೆಂಬಲಿಸುವುದು ನನ್ನ ಉದ್ದೇಶವಲ್ಲ.
        ಸಸ್ಯಹಾರಿಯೊಬ್ಬರಿಗೆ ಮಾಂಸವನ್ನು ನೋಡಿದರೆ ಹೊಟ್ಟೆಯಲ್ಲಿ ತೊಳಸಿದಂತೆ ಆಗುತ್ತದೆ. ಕಿರಿಕಿರಿ ಆಗುತ್ತದೆ, ಅಸಹ್ಯ ಪಡುವಂತೆ ಆಗುತ್ತದೆ- ಎಂಬುದರ ಮಾತಿನ ತಾತ್ಪರ್ಯ, ಅವರು ಮಾಂಸದೂಟದ ಬಗ್ಗೆ ಅಗೌರವ ತೋರಿಸುತ್ತಿದ್ದಾರೆ ಎಂದರ್ಥವಲ್ಲ. ಸಸ್ಯಹಾರಿಗಳ ಮನೆಯ ಮಕ್ಕಳನ್ನು ಕರೆದೊಯ್ದು ಮಾಂಸದಂಗಡಿ ಮುಂದೆ ನಿಲ್ಲಿಸಿ, ಅವರಿಗೆ ವಾಕರಿಗೆ ಬರುತ್ತೆ. ಇದು ನಾನು ಬಲ್ಲ ಸತ್ಯ. ನೀವು ಚಿಕ್ಕವರಿದ್ದಾಗ, ಇಂಥಾ ಅನುಭವ ಆಗಿರಬಹುದು ಅಥವಾ ಆಗದೇ ಅಪವಾದವೂ ಆಗಿರಬಹುದು. ಹಾಗಾಗಿ ಬಳಸಿರುವ ಭಾಷೆಯ ಬದಲು, ಅಲ್ಲಿನ ಭಾವವನ್ನಷ್ಟೇ ಗ್ರಹಿಸಿ.
        ಉಳಿದಂತೆ ನೀವು ಸಸ್ಯಹಾರಿ ಆಗಿರುವುದರಿಂದ ಮಾಂಸದ ಬೆಲೆ ಗೊತ್ತಿಲ್ಲ. ಮಾಂಸವನ್ನು ಅಕ್ಕಿಯ ಜತೆ ಹೋಲಿಸಿದ್ದೀರಿ. ಮಾಂಸ ಹಬ್ಬದೂಟುವಾದರೆ, ಅನ್ನ ದಿನದೂಟ. ಕೋಳಿ, ಕುರಿ, ದನ, ಹಂದಿ… ಹೀಗೆ ಏನೇನೋ ಮಾಂಸದೂಟ ಎಂದಿದ್ದರಿಂದ, ಮೊದಲೇ ಹೇಳಿದಂತೆ ಅದು ಜನಪದ ಆಹಾರ ಮೇಳ ಎಂದು ಗೊತ್ತಿಲ್ಲದ ಕಾರಣಕ್ಕಾಗಿ ನನ್ನ ವಿವೇಕಕ್ಕೂ ಮಂಕು ಬಡಿಯಿತು. ಅದಕ್ಕಾಗಿ ಸಿರಿತನದ ಅಶ್ಲೀಲ ಪ್ರದರ್ಶನ ಎಂದೇ. ಅದಕ್ಕಾಗಿ ಕ್ಷಮೆಯಾಚಿಸುವೆ. ಆ ಉದಾಹರಣೆ ನೀಡಬಾರದಿತ್ತು.
        ಮಾಂಸಹಾರದ ಬಗ್ಗೆ ಅಸಹನೆ ಇದೆ ಎಂಬುದು ಎಷ್ಟು ಸತ್ಯವೋ, ಅದು ಕ್ರಮೇಣ ಬದಲಾಗುತ್ತಿದೆ ಎಂಬುದು ಕೂಡ ಅಷ್ಟೇ ಸತ್ಯ. ಸಸ್ಯಹಾರಿ-ಮಾಂಸಹಾರಿ ರೆಸ್ಟೊರೆಂಟ್ಗೆ ಬಂದು ಊಟ ಮಾಡುವ ಸಸ್ಯಹಾರಿಗಳ ಸಂಖ್ಯೆ ಹೆಚ್ಚುತ್ತಿದೆ.
        ಹಾಗಾಗಿ ಇದೊಂದು ಘನಘೋರ ಚರ್ಚೆಯ ವಿಷಯ ಎಂದು ಭಾವಿಸುವುದು ಸರಿಯಲ್ಲ. ಮಾಂಸಹಾರದ ಬಗ್ಗೆ, ಮಾಂಸ ತಿನ್ನುವವರ ಬಗ್ಗೆ, ಮಹಿಳೆಯರ ಬಗ್ಗೆ, ಶೋಷಿತರ ಬಗ್ಗೆ, ಜಾತಿ ನಾಶದ ಬಗ್ಗೆ ಮಾತನಾಡುವುದೇ ನಮ್ಮ ನಡುವೆ ಕೆಲವರಿಗೆ ಪ್ರಗತಿಪರ ಹಾಗೂ ಜಾತ್ಯತೀತಯೆ ಅಸ್ಮಿತೆಯ,ಸಂಕೇತವಾಗಿದೆ. ಇದು ನನ್ನ ದೃಷ್ಟಿಯಲ್ಲಿ ಪ್ರದರ್ಶನವಷ್ಟೆ.
        ಕಡೆಮಾತು: ಬಿಜೆಪಿ ಸರಕಾರದಲ್ಲಿರುವ ಸಿ.ಟಿ.ರವಿ ಎಂಬ ಮಂತ್ರಿ, ಕಾಂಗ್ರೆಸ್ ರಾಜ್ಯಪಾಲ ಹನ್ಸ್ ರಾಜ ಭಾರದ್ವಾಜ್ ಎಂಬುವವರು ಸೇರಿಕೊಂಡು- ಇತ್ತೀಚಿಗೆ ನಾಲ್ವರು ಒಕ್ಕಲಿಗರನ್ನು ರಾಜ್ಯದ ನಾಲ್ಕು ವಿವಿಗಳಿಗೆ ಕುಲಪತಿಗಳನ್ನಾಗಿ ಮಾಡಿದರು. ಅದಕ್ಕೂ ಮುನ್ನ ಯಡಿಯೂರಪ್ಪ ಕೂಡ ಇಂತಹದ್ದೇ ಕೆಲಸ ಮಾಡಿದ್ದರು. ಈ ರೀತಿ ಮಾಡುವುದರಿಂದ- ಏನು ಅನುಕೂಲವಾಗುತ್ತದೆ, ಯಾರಿಗೆ ಅನ್ಯಾಯವಾಗುತ್ತದೆ ಎಂಬುದನ್ನು ಅರಿಯಬೇಕೆಂದರೆ- ಪ್ರೊ. ಶಶಿಧರ ಪ್ರಸಾದ್ ಅವಧಿಯಲ್ಲಿ ಮೈಸೂರು ವಿವಿಯಲ್ಲಿ ನಡೆದ ನೇಮಕ ಪ್ರಕ್ರಿಯೆಗಳನ್ನು ಗಮನಿಸಬೇಕು. ಒಬ್ಬನೇ ಒಬ್ಬ ವಿಚಾರವಾದಿಯೂ ಈ ಬಗ್ಗೆ ಸೊಲ್ಲು ಎತ್ತಿಲ್ಲ.
        ಮಾಂಸ ತಿನ್ನುವ ಕುರುಬರು, ಸಾಬರು, ದಲಿತರಿಗೆ ಒದಗಿರುವ ಬಹುದೊಡ್ಡ ಸವಾಲುಗಳಲ್ಲಿ ಇದೂ ಒಂದೇ ಹೊರತು, ಮಾಂಸವನ್ನು ಸಸ್ಯಹಾರಿಗಳು ಹೇಗೆ ಭಾವಿಸುತ್ತಾರೆ ಎಂಬುದಲ್ಲ.
        ಮಾಂಸಹಾರಿಗಳು ಚರ್ಚಿಸಲು ವಿಷಯಗಳು ಸಾಕಷ್ಟಿವೆ

        ಪ್ರತಿಕ್ರಿಯೆ
        • adithyahk

          ತಾಯಿ, ನೀವು ಹಿಂದಿನ ಅಂಕಣ ಓದದೆ ಪ್ರತಿಕ್ರಿಯಿಸಿರುವುದಾಗಿ ತಿಳಿಸಿದ್ದೀರಿ ಹಾಗಾಗಿ ನಿಮ್ಮ ಹಿಂದಿನ ಪ್ರತಿಕ್ರಿಯೆಗಳನ್ನೆಲ್ಲಾ ತಳ್ಳಿಹಾಕಬಹುದು ಆದರೆ ಮಾಂಸಾಹಾರಿಗಳು ಚರ್ಚಿಸಲು ಬೇರೆ ಹಲವು ವಿಷಯಗಳಿವೆ ಎಂದಿದ್ದೀರಿ ಆದರೆ ಇಲ್ಲಿ ಚರ್ಚೆಯಾಗುತ್ತಿರುವ ವಿಷಯ ಸಂವಿಧಾನದಲ್ಲಿ ತಿಳಿಸಲಾಗಿರುವ ಪ್ರತಿ ಭಾರತಿಯನ ಮೂಲಭೂತ ಹಕ್ಕುಗಳಾದ ಆರ್ಟಿಕಲ್ 14 , 24 ಮತ್ತು 29 ಗಳಿಗಾದ ಅಗೌರವದ ವಿಷಯವಾಗಿ. ನನ್ನ ಪ್ರಕಾರ ಅಡಿಪಾಯವೇ ಗಟ್ಟಿಯಿಲ್ಲದ್ದು ಹೌಸ್ ಆಫ್ ಕಾರ್ಡ್ಸ್ ನಂತೆ ಹಾಗು ಅಂತಹವರು ರಚಿಸಿದ ಕಾವ್ಯ ಮಹಾಪುರಾಣಗಳ ಬಗ್ಗೆ ಚರ್ಚಿಸುವುದು ತಮಗೆ ತಾವೇ ಮಾಡಿಕೊಳ್ಳುವ ವಂಚನೆ, ಪ್ರದರ್ಶನಕ್ಕಾದರೂ? ಸರಿಯೇ ಮತ್ತೊಬ್ಬರ ಮೂಲಭೂತ ಹಕ್ಕುಗಳನ್ನು ಗೌರವಿಸುವವರು ಅವುಗಳನ್ನು ನಿರಾಕರಿಸುವವರಿಗಿಂತ ವಾಸಿ.

          ಪ್ರತಿಕ್ರಿಯೆ
          • Parvathi cheeranahalli

            ಮಾನ್ಯ ಅಪ್ಪನವರೆ
            ನಾನು ಚರ್ಚೆಯಿಂದ ಹಿಂದೆ ಸರಿಯುತ್ತೇನೆ. ನೀವೇನೋ ಸಂವಿಧಾನ, ಮೂಲಭೂತ ಹಕ್ಕು ಎಂದೆಲ್ಲಾ ದೊಡ್ಡ ಮಾತನಾಡುತ್ತಿದ್ದೀರಿ. ಬಹಳ ಬುದ್ಧಿವಂತರು ಎಂದು ಕಾಣುತ್ತೆ. ನಿಮ್ಮಂತಹವರ ಜತೆ ಸೋಲುವುದೇ ವಾಸಿ. ಅಂತಹ ಸೋಲಲ್ಲಿ ನನ್ನ ಗೆಲುವು ಇರುತ್ತೆ.
            ಅಶಕ್ತ ದೊರೆಯೊಬ್ಬನಿಗೆ ಕುತಂತ್ರಿಯೊಬ್ಬ ನೀಡುವ ಸಲಹೆಯ ಮಾತು ನೆನಪಾಗುತ್ತಿದೆ-
            ಜನರಿಗೆ ತಿನ್ನಲು ಅನ್ನ ನೀಡಲು ಸಾಧ್ಯವಾಗದಿದ್ದರೆ, ಅವರಿಗೆ ಸರ್ಕಸ್ ತೋರಿಸು. ಅವರು ಅನ್ನವನ್ನು ಮರೆಯುತ್ತಾರೆ. ನೀನು ರಾಜ್ಯಭಾರವನ್ನು ಮುಂದುವರಿಸಿ, ಅವರು ಹಸಿವನ್ನೂ ಮರೆತುಬಿಡುತ್ತಾರೆ !
            ನಿಮ್ಮ ಬರವಣಿಗೆಯಲ್ಲಿ ಕುತಂತ್ರವನ್ನು ಗ್ರಹಿಸಲಾರೆ. ಎಲ್ಲವೂ ಪ್ರಾಮಾಣಿಕವಾಗಿಯೇ ಇವೆ. ಆದರೆ, ಕೆಲವೊಮ್ಮೆ ತಮಗರಿವಿಲ್ಲದೇ
            ಕೆಲ ಸಸ್ಯಹಾರಿಗಳು ಈ ರೀತಿಯ ವಾದಗಳ ಮೂಲಕ, ನಮ್ಮಂಥವರಿಗೆ ಸರ್ಕಸ್ ತೋರಿಸಿಬಿಡುತ್ತಾರೆ.
            ನನಗೆ ಹಸಿವಿದೆ. ಅನ್ನವನ್ನು ಹುಡುಕುತ್ತೇನೆ. ನಾನು ಇಂತಹ ಸರ್ಕಸ್ಗೆ ಬಲಿಯಾಗಲಾರೆ. ನಾನು ಗೆಲ್ಲುವ ರೀತಿ ಇದು.
            ಪ್ರೀತಿ ಇರಲಿ ತಮ್ಮ

          • adithyahk

            ನಿಮ್ಮ ಬಳಿ ಕೌಂಟರ್ ಆರ್ಗ್ಯುಮೆಂಟ್ ಇದ್ದರೆ ಮಾತ್ರ ಪ್ರತಿಕ್ರಿಯಿಸಿ ಹಾಗು ನನ್ನ ಬುದ್ದಿವಂತಿಕೆಯಿಂದ ನನಗಷ್ಟೇ ಲಾಭ ಬಿಡಿ ಚರ್ಚೆ-ವಾದಗಳಲ್ಲಿ ಮತ್ತೊಬ್ಬರ ವಿಚಾರ ವಿಮರ್ಶೆಯ ರೀತಿ ತಿಳಿದುಕೊಳ್ಳಬಹುದಷ್ಟೇ ಆದರೆ ಸೋಲು-ಗೆಲುವು, ಕೇವಲ ಮಕ್ಕಳಾಟ.

  8. Lingaraju bs

    ಹಾಸನ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆದಿದ್ದು ಜನಪದ ಮೇಳ. ನಮ್ಮದು ಜನಪದ ಸಂಸ್ಖೃತಿ. ಹಾಗಾಗಿ ಅಲ್ಲಿ ಮಾಂಸದೂಟ ಇತ್ತು. ಹಾಗೇಯೇ ಮಲೆನಾಡಿನ ಪ್ರಸಿದ್ಧ ಹಲಸಿನ ಬಡಗಿನಿಂದ ಮಾಡುವ ಕರಿಯೂ ಇತ್ತು. ಹಲಸಿನ ಕರಿ ಬಗ್ಗೆ ನಡೆಯದ ಚಚರ್ೆ ಮಾಂಸದೂಟದ ಬಗ್ಗೆ ನಡೆದದ್ದು ವಿಶೇಷವೇನಲ್ಲ. ಏಕೆಂದರೆ ಜನಪದ ಮೇಳಕ್ಕೆ ಬಂದಿದ್ದು ಜನಪದ ಸಂಸ್ಕೃತಿಯನ್ನು ಪ್ರೀತಿಸುವವರು. ಸಂಗೋತ ಕಛೇರಿಗೆ ಹೋಗುವವರು ಅಲ್ಲಿ ಬಂದಿದ್ದರೆ ಹಲಸಿನ ಕರಿ ಬಗ್ಗೆ ಚಚರ್ಿಸಬಹುದಿತ್ತು. ಪಾಪ ಅವರು ಅಲ್ಲಿಗೆ ಬರಲಿಲ್ಲ. ಅಲ್ಲಿ ಮಾಂಸದೂಟ ಮಾಡುತ್ತಾರೆ ಎಂದೇ ಅವರು ಬರಲಿಲ್ಲವೇನೋ. ಹೋಗಲಿ ಬಿಡಿ. ಭಾರತಿಯವರಿಗೆ ಮಾನವ ಸಮಾಜ ಬೆಳೆದು ಬಂದ ದಾರಿ ಬಗ್ಗೆ ತಿಳಿಸಬೇಕು ಎನಿಸುತ್ತದೆ. ಅಂದಿನ ಆಹಾರ ಪದ್ದತಿಯಲ್ಲಿ ಕೊರಬಾಡು(ಒಣಬಾಡು) ಒಂದು ಪ್ರಮುಖ ಆಹಾರ ಸಂಗ್ರಹ ವಿಧಾನ ಆಗಿತ್ತು ಎಂದು ಹೇಳುತ್ತದೆ ಇತಿಹಾಸ. ಮಲೆನಾಡಿನ ಭಾಗದಲ್ಲಿ ಇಂದಿಗೂ ಮೀನನ್ನು ಒಣಗಿಸಿಡಲಾಗುತ್ತದೆ. ಅಂದಹಾಗೆ ಭಾರತಿಯವರಿಗೆ ಒಂಬು ಪುಸ್ತಕ ಓದಲು ಸಲಹೆ: ರಹುಲ ಸಾಂಕೃತ್ಯಾಯನ ಅವರ” ವೋಲ್ಗ-ಗಂಗ

    ಪ್ರತಿಕ್ರಿಯೆ
  9. jagadishkoppa

    ಪ್ರಿಯ ಮೋಹನ್ ಆಹಾರಸಂಸ್ಕೃತಿ ಎನ್ನುವುದು ಪ್ರತಿಯೊಂದು ಸಮುದಾಯದ ಹಕ್ಕು. ಇದನ್ನು ಜುಗಾರಿ ಕ್ರಾಸ್ ಅಂಕಣದಲ್ಲಿ ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುವ ಕೆಲಸ ಬೇಡ. 15ವರ್ಷಗಳ ಹಿಂದೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಹಂಪಿಯ ಕನ್ನಡ ವಿ.ವಿ. ಎರಡು ದಿನಗಳ ದೇಸಿ ಸಮ್ಮೇಳನ ಆಯೋಜಿಸಿತ್ತು. ಆವಾಗ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಕ್ಕೆ ಕೈ ಜೋಡಿಸಿತ್ತು. ( ರಾಮಸ್ವಾಮಿ ಎಂಬುವರು ಅಧ್ಯಕ್ಷರಾಗಿದ್ದರು.) ನಾನೂ ಸಹ ಒಂದು ಗೋಷ್ಟಿಯಲ್ಲಿ ಪ್ರಬಂಧಕಾರನಾಗಿ ಭಾಗವಹಿಸಿದ್ದೆ. ಸಮ್ಮೇಳನದ ಅಂಗವಾಗಿ ” ಜನಪದ ಆಹಾರ” ಎಂಬ ಪ್ರದರ್ಶನವಿತ್ತು. ಹಾಸನದ ಮಹಿಳೆಯರು ಹಂದಿ ಮಾಂಸ ಸೇರಿದಂತೆ ತರಾವರಿ ಮಾಂಸದ ಆಹಾರಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಟ್ಟಿದ್ದರು. 15 ವರ್ಷದ ಹಿಂದೆ ಕಾಣದಿದ್ದ ಅಸಹನೆ ಈಗ ಏಕೆ?
    ಸಸ್ಯಹಾರಿ ಸಂಸ್ಕೃತಿಯ ವ್ಯಕ್ತಿಯೊಬ್ಬ ದೇವರಿಗೆ ಹಾಲು, ಮೊಸರು, ಹಣ್ಣು ನೈವೈದ್ಯ ಅರ್ಪಿಸಿದರೆ, ಮಾಂಸಹಾರ ಸಂಸ್ಕೃತಿಯ ಶೂದ್ರ, ಪ್ರಾಣಿಯನ್ನು ಬಲಿಕೊಟ್ಟು ಮಾಂಸವನ್ನು ನೈವೈದ್ಯದ ರೂಪದಲ್ಲಿ ಅರ್ಪಿಸುತ್ತಾನೆ. ಇದರಲ್ಲಿ ಯಾವುದು ಸರಿ? ಯಾವುದು ತಪ್ಪು? ಹಾಸನ, ಮಂಡ್ಯ, ಚಿಕ್ಕಮಗಳೂರು, ತುಮಕೂರು, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾಂಸಹಾರಿಗಳಿದ್ದಾರೆ. ಅವರೆಲ್ಲ ಅನಾಗರೀಕರೆ? ಕೊಡವರ ವಿವಾಹಗಳಲ್ಲಿ ಹಂದಿ ಮಾಂಸ, ಮದ್ಯ, ಅವರುಗಳ ಸಂಸ್ಕೃತಿಯ ಭಾಗವಾಗಿದೆ. ಅದನ್ನು ವಿಮರ್ಶಿಸಲು ನಾವ್ಯಾರು? ಎಲ್ಲಿ ತಿನ್ನಬೇಕು, ಯಾರು ತಿನ್ನಬೇಕು/ ಏನನ್ನು ತಿನ್ನಬೇಕು? ಎಂಬುದನ್ನು ನಿರ್ಧರಿಸುವ ಹಕ್ಕು ನಮಗ್ಯಾರಿಗೂ ಇಲ್ಲ.
    ಜಗದೀಶ್ಕೊಪ್ಪ, ಧಾರವಾಡ.

    ಪ್ರತಿಕ್ರಿಯೆ
    • G

      ಪ್ರೀತಿಯ ಜಗದೀಶ್ ಕೊಪ್ಪ
      ಇಲ್ಲಿ ಚರ್ಚೆಗೆ ತೆರೆದಿರುವುದು ಆಹಾರ ಸಂಸ್ಕ್ರುತಿಯನ್ನಲ್ಲ ಆದರೆ ಪ್ರತಿಕ್ರಿಯೆಯಲ್ಲಿ ವ್ಯಕ್ತವಾಗಿರುವ ನೋಟವನ್ನು.
      15 ವರ್ಷದ ಹಿಂದೆ ಕಾಣದಿದ್ದ ಅಸಹನೆ ಈಗ ಏಕೆ? ಎಂದು ನೀವು ಕೇಳುತ್ತಿರುವ ಪ್ರಶ್ನೆಯನ್ನೇ ಇಲ್ಲಿ ಮಥಿಸಲು ಆಹ್ವಾನಿಸಿರುವುದು
      ಕಾರಣ ಗೊತ್ತಿದ್ದರೆ ಹಂಚಿಕೊಳ್ಳಿ

      ಪ್ರತಿಕ್ರಿಯೆ
  10. chalam

    ಹಾಸನದಲ್ಲಿ ನಡೆದದ್ದು ಜಾನಪದ ಆಹಾರಮೇಳ ಎಂಬುದನ್ನು ಬದಿಗಿಟ್ಟು ಈ ಚರ್ಚೆ ನಡೆಯಬಾರದು.ಮಾಂಸ ತಿನ್ನದೇ ಇರುವವರು ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾಡಬೇಡಿ ಎಂಬುವುದು ಮಾಂಸಾಹಾರ ಮಾಡುವವರ ಸಂವೇದನೆಗಳಿಗೆ ದಕ್ಕೆ ಮಾಡಿದಂತಲ್ಲವೇ?ಅದರ ಅರ್ಥ ನಾನು ತಿನ್ನುವುದನ್ನು ಮಾತ್ರ ಸಾರ್ವಜನಿಕ ವಲಯ ಬಿಂಬಿಸಬೇಕು ಎಂಬುದಷ್ಟೆ ಅಗಿದೆ.
    ನಡೆದ್ದದು ಜಾನಪದ ಆಹಾರ ಮೇಳ. ಜಾನಪದವನ್ನು ಮಾಂಸಾಹಾರದಿಂದ ಹೊರಗಿಟ್ಟು ನೋಡುವುದು ಸಾದ್ಯವೇ ಇಲ್ಲ.ಜಾನಪದ ಹಾಗು ವೈದಿಕ ತೀರಾ ವಿರುದ್ದ ದಿಕ್ಕಿನ ಚಲನೆಗಳು.ವೈದಿಕ ಸಾಹಿತ್ಯದಲ್ಲಿ ಶೋಷಣೆ ವಿಜ್ರಂಬಿಸಿದರೆ ಜಾನಪದ ನೋವನ್ನು ಹಾಡಾಗಿಸುತ್ತದೆ.ಕಾನೂರು ಹೆಗ್ಗಡತಿಯ ಬಾಡುಗಳ್ಳ ಸೋಮ,ಬೂತಯ್ಯನ ಮಗ ಅಯ್ಯುವಿನಲ್ಲಿ ಬರುವ ಉಪ್ಪಿನಕಾಯಿ ಪ್ರಿಯನ ನಡುವೆ ಇರುವ ಅಗಾದ ವ್ಯತ್ಯಾಸ ಇದು.
    ಧೂಮಪಾನ,ಮದ್ಯಪಾನದ ಪಟ್ಟಿಗೆ ಮಾಂಸಾಹಾರವೂ ಸೇರಿದೆ ಎಂಬರ್ಥದಲ್ಲಿ ಮಾತನಾಡಿದರೆ ಸಾಮಾಜಿಕ ಸ್ವಾಸ್ತ್ಯದ ಬಗ್ಗೆ ತಮಗಿರುವ ಕಲ್ಪನೆಯನ್ನು ಪುನರ್ವಿಮರ್ಷೆ ಮಾಡಿಕೊಳ್ಳುವುದು ಒಳಿತು.
    ಮಾಂಸದಂಗಡಿಗಳನ್ನು ಊರಿನ ಹೊರಗಿಟ್ಟಿರುವುದೇ ಮಾಮಸಾಹಾರಿಗಳನ್ನು ಸಮಾಜ ಎಲ್ಲಿಟ್ಟಿದೆ ಎಂಬುದನ್ನು ತೋರಿಸುತ್ತದೆ.ಅದನ್ನು ಸುಮ್ಮನೆ ಒಪ್ಪಿಕೊಂಡಿರುವ ಮಾಂಸಾಹಾರಿ ಸಮುದಾಯಗಳು ಇನ್ನು ಬ್ರಾಹ್ಮಣ್ಯದ ಕಪಿಮಷ್ಟಿಯಲ್ಲಿವೆ ಎಂದು ತಪ್ಪಾಗಿ ಭಾವಿಸಿರುವಂತಿದೆ.ಆಚಾರವಿಚಾರಗಳ ಮೇಲೆ ತಮಗಿಲ್ಲದ ಅದಿಪತ್ಯವನ್ನು ಮತ್ತೆ ಸ್ಥಾಪಿಸುವ ಉದ್ದೇಶವನ್ನು ಇಟ್ಟುಕೊಂಡಿರುವಂತಿದೆ.ಮದ್ಯಮವರ್ಗದವರ ಗೋದಲಗಳಿಗೆ ಅಂತಸ್ತಿನ ಾಸೆಯ ಗಂಟನ್ನು ತೋರಿಸಿ ಸತ್ಯನಾರಾಯಣ ಪೂಜೆಗೆ ಪ್ರೇರೆಪಿಸುತ್ತಿರುವುದು ಸಾಂಸ್ಕ್ರತಿಕ,ಆದ್ಯಾತ್ಮದ ಅದಿಪತ್ಯದ ಪ್ರಶ್ನೆಯೇ..
    ನಾನಾ ಧರ್ಮ,ಜಾತಿಗಳಿರುವ ಈ ದೇಶದಲ್ಲಿ ಆಚಾರವಿಚಾರಗಳನ್ನು ತುಂಬಾ ಸೂಕ್ಷವಾಗಿ ನೀಡಬೇಕಾಗುತ್ತದೆ.ಹಲವು ಶಾಲೆಗಳಲ್ಲಿ ಹಿಂದೂ ದೇವರ ಸ್ತೋತ್ರ ಹೇಳಿಕೊಡಲಾಗುತ್ತದೆ.ಕ್ರಿಶ್ಚಯನ್ ಸ್ಕೂಲ್ ಗಳಲ್ಲಿ ಶುಕ್ರವಾರ ವಿಶೇಷವವಾಗಿರುತ್ತದೆ.ಅಲ್ಲಿ ಬೇರೆ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳು ಇರುತ್ತಾರೆ ಎಂಬುದು ಗೊತ್ತಿದ್ದೂ ಕೂಡ ನಡೆಯುತ್ತದೆ.ದೇವರನ್ನು ಒಪ್ಪುವುದು,ಬಿಡುವುದೇ ವೈಯಕ್ತಿಕ ವಿಚಾರವಾಗಿರುವಾಗ ಈ ವಿಚಾರದ ಬಗ್ಗೆ ಯಾಕೆ ತಲೆಕೆಡೆಸಿಕೊಳ್ಳುವುದಿಲ್ಲ.
    ಅಸಹ್ಯವಾಗಿ ಬಿದ್ದು ಹೊರಳಾಡುವ ಮಡೆಸ್ನಾನವನ್ನು ಒಪ್ಪುವ ಇವರಿಗೆ ಮಾಂಸಾಹಾರವ್ಯಾಕೆ ರೇಜಿಗೆಯನ್ನುಂಟುಮಾಡುತ್ತದೆ.
    ಇಷ್ಟಕ್ಕೆ ಇದು ಒಂದು ಗೊಂದಲದ ವಿಚಾರ ಅಂತಾ ಯಾಕನಿಸಿತೆಂದರೆ ದನದ ಮಾಂಸದ ಬಗ್ಗೆ ದೊಡ್ಡದಾಗಿ ಮಾತನಾಡಿರುವ ನಾಗರಾಜ್ ರಫೀಕ್ ದರ್ಬಾರ್ ಹೇಳಿರುವ ಮಾತನ್ನು ಗಮನಿಸುವುದಿಲ್ಲ.ದನದಮಾಂಸ ಮಾಡದಿರುವುದರಿಂದ ಬೇರೆ ಧರ್ಮದವರಿಗೆ ಬೇಸರವಾಗುತ್ತದೆ ಅನ್ನುವಾಗ ರಫೀಕ್ “ಯಾಕೆ ಹಂದಿಮಾಂಸ ಮಾಡಿದ್ದಿರಿ”ಎಂದು ಕೇಳಿದ್ದಾರೆ.ಕ್ರಿಶ್ಚಿಯನ್ನರು ಮುಸ್ಲಿಮರು ದಲಿತರು ಒಂದೇ ಎಂದು ವಾದಿಸುವ ನಾಗರಾಜ ತರದವರು ವಿಚಾರ ಮಾಡಬೇಕು.
    ಹಾಗೆಯೇ ರೂಪಾಹಾಸನ್ ಜೈನರು ಎಂದು ಬಂಬಿಸುವ ಆಶಯದ ಹಿಂದೆ ಇರುವ ತಂತ್ರವನ್ನು ಗುರುತಿಸುವ,ಖಂಡಿಸುವ ಕೆಲಸ ಅಷ್ಟಾಗಿ ನಡೆಯಲಿಲ್ಲ.ಭಿನ್ನಾಬಿಪ್ರಾಯಗಳನ್ನು ಗೌರವಿಸುವ(ಒಪ್ಪುವುದು ಬೇರೆ ವಿಚಾರ) ಪರಿಸರವಿಲ್ಲವಾದರೆ ಯಾವ ಚರ್ಚೆ ನಡೆದರೂ ಅಷ್ಟೇ…!

    ಪ್ರತಿಕ್ರಿಯೆ
  11. adithyahk

    ಅಭಿಪ್ರಾಯ ಬರೆಯುತ್ತ ನಮ್ಮ ವೈಯುಕ್ತಿಕ ಆಹಾರ ಪದ್ಧತಿ ಜಾತಿಯ ಬಗ್ಗೆ ಹೇಳುವುದು ಅವಿವೇಕವೆಂದು ಖಂಡಿತ ಅನಿಸದೇ ಇರಲಾರದು. ಆದರೆ ಸಂಕುಚಿತ ಮನಸುಗಳು ಎಲ್ಲರನ್ನು ಪಟ್ಟ ಭದ್ರ ಹಿತಾಸಕ್ತಿಗಳೆಂದು ಕರೆಯುವಾಗ ಸಹಸ್ರಮಾನ ವರ್ಷಗಳಿಂದ ಮಾಡಿದ ಮೂರ್ಖತನವನ್ನೆ ಮುಂದುವರೆಸೋಣ ಎಂದು ಚೀರುತ್ತಿರುವಾಗ, ಅಂತಹವರಿಗೆ ಏಯ್ ನಾನು ನಿನ್ನ ಭಾವನೆಯಂತೆ ಮೇಲ್ಜಾತಿಯವನು!@#? ಆದರೆ ನನಗೆ ಯಾವುದೇ ಅಸಹ್ಯ ಅಸಹನೆಗಳಿಲ್ಲ ಎಂದು ಹೇಳಲೇ ಬೇಕಾಗುತ್ತದೆ.

    ಪ್ರತಿಕ್ರಿಯೆ
  12. bharathi bv

    Lingaraju avare naanu volga ganga odidddene … salahege dhanyavaadagalu 🙂

    ಪ್ರತಿಕ್ರಿಯೆ
  13. ಪಂಡಿತಾರಾಧ್ಯ ಮೈಸೂರು

    ಆಹಾರ ಸಂಸ್ಕೃತಿಯ ಬಗ್ಗೆ ಮುಕ್ತ ಚರ್ಚೆ ನಡೆಯುವುದು ಆರೋಗ್ಯಕರ,ಸ್ವಾಗತಾರ್ಹ. ಆದರೆ. ಅಭಿಪ್ರಾಯ ವ್ಯಕ್ತಪಡಿಸಿದವರನ್ನು ಒಂದು ಸಮುದಾಯಕ್ಕೆ ಸೇರಿಸಿ ಅವರ ಹೀಗೇ ಹೇಳಬೇಕು ಎನ್ನುವುದು ಖಂಡನಾರ್ಹ.

    ಪ್ರತಿಕ್ರಿಯೆ
  14. kumararaitha

    ಮಾಂಸಾಹಾರ ಆಹಾರ ಸಂಸ್ಕೃತಿ ಅಲ್ಲ.ಒಂದುವೇಳೆ ಸಂಸ್ಕೃತಿ ಆಗಿದ್ದರೆ,ಉಗಾದಿ ದಿನದಂದು, ಗೌರಿ ಗಣೇಶ ಹಬ್ಬದಂದು ,ಮಾಂಸದ ಅಡಿಗೆ ಮಾಡಿ ಎಡೆ ಅರ್ಪಿಸಬೇಕಿತ್ತು.ಆದರೆ ಯಾರೂ ಹೀಗೆ ಮಾಡುವುದಿಲ್ಲ.ಪಿತ್ರಪಕ್ಷದಂದು ಎಲ್ಲಾ ಶುದ್ರರು,ಮಾಂಸಾಹಾರ ಎಡೆ ಅರ್ಪಿಸುವುದಿಲ್ಲ.ಸಿಹಿ ಅಡಿಗೆ ಬಡಿಸುವವರು ಸಾಕಷ್ಟು ಮಂದಿ ಇದ್ದಾರೆ.ಇನ್ನು ಮಾಡುವೆ ಮನೆಗಳಲ್ಲಂತೂ ಯಾವ ಶುದ್ರರು ಮಾಂಸಾಹಾರ ಮಾಡುವುದಿಲ್ಲ.ಇದಕ್ಕೆ ಕಾರಣ ಎಲ್ಲ ಜಾತಿ ಸಮುದಾಯದವರೂ ಬರುತ್ತಾರೆ ಎನ್ನುವುದು.ಮುಜುಗರ ಆಗದಿರಲಿ ಎನ್ನುವುದು ಕೂಡ ಇದರ ಹಿಂದಿನ ಉದ್ಧೇಶ.
    ಕಸಾಪ ಆವರಣದಲ್ಲಿ,ಮಾಂಸದೂಟ ಮಾಡಿದ್ದನ್ನು ಸಮರ್ಥಿಸಲು ಸಾಧ್ಯ ಇಲ್ಲ.ಮಾಂಸ ತಿನ್ನವದವರಿಗೆ ಮುಜುಗರ ಆಗುತ್ತದೆ ಎಂಬುದನ್ನು ನೆನಪಿನಲ್ಲಿ ಇಡಬೇಕು.ದನದ ಮಾಂಸ ಔತಣಕ್ಕೆ ಕುರಿ ಕೋಳಿ ಮಾಂಸ ಮಾತ್ರ ತಿನ್ನುವವರು ಹೊದರೂ ಮುಜುಗರ ಸಹಜ.
    ಎಲ್ಲ ಸಮುದಾಯದವರು ಭಾಗವಹಿಸುವ ಕಸಪದಂತ ಆವರಣಗಳಲ್ಲಿ,ಇದು ಸರಿಯಲ್ಲ.

    ಪ್ರತಿಕ್ರಿಯೆ
    • ಸತ್ಯನಾರಾಯಣ

      ಮಾನ್ಯರೆ, ಹಬ್ಬ ಹರಿದಿನ (ಯುಗಾದಿ) ಗಳಲ್ಲಿ ಮಾಂಸಾಹಾರ ಅಡಿಗೆ ಮಾಡಿ ಎಡೆ ಇಡುವುದಿಲ್ಲ ಎಂದು ಹೇಗೆ ಹೇಳುತ್ತೀರಿ. ಕೊಡಗು ಮೂಡಿಗೆರೆ ಹಾಗೆ ಮಲೆನಾಡಿನ ಕಡೆಗೆ ಕಡೆಗೆ ಬನ್ನಿ. ಯುಗಾದಿಯ ದಿನವೇ ಮಂಸಾಹಾರ ಇರುತ್ತದೆ. ಮದುವೆಯ ದಿನ, ತಿಥಿಯ ದಿನವೂ ಮಂಸಾಹಾರ ಬಡಿಸಲಾಗುತ್ತದೆ. ಅಷ್ಟೆ ಏಕೆ. ಸತ್ತ ವ್ಯಕ್ತಿಯ ಶವಸಂಸ್ಕಾರದ ದಿನವೇ ಬಂದವರಿಗೆ ಮಂಸಾಹಾರ ಬಡಿಸುವುದೂ ಇದೆ! ಕಳೆದ ವರ್ಷ ನಮ್ಮ ಬಂಧುಗಳೊಬ್ಬರ ಮನೆಯಲ್ಲಿ, ಅವರ ತಂದೆ ತೀರಿದ ದಿನ, ಬಂದವರನ್ನೆಲ್ಲಾ ಹಾಗೆ ಕಳುಹಿಸಲು ಸಾಧ್ಯವೇ? ಎಂದು ಮೂರೂ ಬಗೆಯ (ಕೋಳಿ, ಕುರಿ ಮತ್ತು ಹಂದಿ) ಮಾಂಸದ ಖಾದ್ಯಗಳನ್ನು ಮಾಡಿ, ಶವಸಂಸ್ಕಾರ ಮಗಿಸಿ ಬಂದ ತಕ್ಷಣ ಸಮೂಹಿಕ ಬೋಜನದಲ್ಲಿ ಬಡಿಸಲಾಯಿತು! ಮದುವೆಯ ದಿನವೂ (ಬೀಗರ ಔತಣವಲ್ಲ; ಧಾರೆಯ ದಿನವೇ) ಮಂಸಾಹಾರವನ್ನು ಬಡಿಸುವ ನೂರಾರು ಮದುವೆಗಳಲ್ಲಿ ನಾಣು ಭಾಗವಹಿಸಿದ್ದೇನೆ! ಕೇಳಿ ಆಶ್ಚರ್ಯವಾಯಿತೆ. ಆದರೆ ಇದು (ಆಹಾರ ಸಂಸ್ಕೃತಿ ಎಂಬುದು) ಸತ್ಯ.

      ಪ್ರತಿಕ್ರಿಯೆ
  15. ಜಿತೇಂದ್ರ ,ಸಕಲೇಶಪುರ

    @adithyahk,೯೦ ರ ದಶಕ ಅಲ್ಲ ಈಗಲೂ ಸಹ ನಮ್ಮಲ್ಲಿ ಕಾಡೆಮ್ಮೆ,ಕಬ್ಬೆಕ್ಕು,ಹಂದಿಗಳನ್ನು ಬೇಟೆಯಾಡುತ್ತಾರೆ ಮತ್ತೂ ಲಿಂಗಾಯಿತ ಸ್ನೇಹಿತರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.(ಬೇಟೆಯಾಡಲು ಅವರು ಬರುವುದಿಲ್ಲವೆನ್ನಿ)ಹಬ್ಬ-ಹರಿದಿನಗಳಲ್ಲಿ ಮಾಂಸಾಹಾರ ನಮ್ಮಲ್ಲಿ ಸಾಮಾನ್ಯ.ಕೊರೆಬಾಡನ್ನು ಮೇಲ್ವರ್ಗದ ಜನರು ಬಹಿರಂಗವಾಗಿ ತಿನ್ನಲಿಕ್ಕಗುವುದಿಲ್ಲವೆಂದೋ ಅದನ್ನು ಆಹಾರಮೇಳದಲ್ಲಿ ಇಟ್ಟಿರಲಿಲ್ಲ ಅನಿಸುತ್ತದೆ.

    ಪ್ರತಿಕ್ರಿಯೆ
    • adithyahk

      I agree with your view on food culture also I sensed an undertone of castism in it so- poaching or sniping hapless and precious wildlife doesn’t show ones braveness in fact it reveals the level of corruption in the region. And everybody has the right to conceal or reveal their non-vegetarianism but that doesn’t give them the right to ridicule someone else’s food culture.

      ಪ್ರತಿಕ್ರಿಯೆ
  16. ಪಂಡಿತಾರಾಧ್ಯ ಮೈಸೂರು

    ಮಾಂಸಾಹಾರ ಆಹಾರ ಸಂಸ್ಕೃತಿ ಅಲ್ಲ ಎನ್ನುವ ಗ್ರಹಿಕೆಯೇ ಸರಿಯಲ್ಲ. ಸಮುದಾಯದ ಎಲ್ಲ ನಂಬಿಕೆ, ಆಚರಣೆಗಳು, ಜೀವನ ವಿಧಾನ, ಅಡುಗೆ, ಉಡುಗೆ ಮೊದಲಾದ ಎಲ್ಲವುಗಳ ಮೊತ್ತವೇ ಸಂಸ್ಕೃತಿ. ಒಂದರ ಹಾಗೆ ಇನ್ನೊಂದು ಇಲ್ಲದಿರಬಹುದು; ಸಂಪೂರ್ಣ ವಿರುದ್ಧವಾದುದೂ ಅಗಿರಬಹುದು. ಆದು ಬೇರೆ ಸಂಸ್ಕೃತಿಯಾಗಿರುತ್ತದೆಯೇ ವಿನಾ ಆದನ್ನು ಸಂಸ್ಕೃತಿಯೇ ಅಲ್ಲ ಎನ್ನುವಂತಿಲ್ಲ. ಗೌರಿ, ಗಣೇಶನ ಹಬ್ಬ ಮಾಡುವ ಕ್ರಮವಿಲ್ಲದವರು ಬೇರೆ ಹಬ್ಬಗಳ ಸಂಭ್ರಮವನ್ನು ತಮಗೆ ಪ್ರಿಯವಾದ ಮಾಂಸಾಹಾರದೊಂದಿಗೆ ಆಚರಿಸಬಹುದು. ಮಾಂಸಾಹಾರವನ್ನು
    ಸಸ್ಯಾಹಾರಿಗಳ ಪರಿಸರದಲ್ಲಿ ತಿನ್ನಲು ಹಿಂಜರಿದು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದರೆ ಸರಕಾರವೇ ಸಸ್ಯಾಹಾರಿಗಳ ಧಾರ್ಮಿಕ ಹಬ್ಬಗಳಂದು ಮಾಂಸ ಮಾರಾಟವನ್ನು ನಿಷೇಧಿಸುವುದು ಪ್ರಜಾಪ್ರಭುತ್ವದ ಕ್ರಮವಲ್ಲ. ಯುಗಾದಿಯನ್ನು ತಮಗೆ ಪ್ರಿಯವಾದ ಮಾಂಸಾಹಾರದೊಂದಿಗೆ ಅಚರಿಸದೆ ಮರುದಿನ ವರ್ಷದ ತೊಡಕು ಎಂದು ಆದನ್ನು ತಿನ್ನುವುದೂ ಪ್ರಜಾಪ್ರಭುತ್ವ ವಿರೋಧಿ ಕ್ರಮವೇ. ಮಾಂಸಾಹಾರವನ್ನು ತಯಾರಿಸುವ ಒಲೆಯನ್ನು ಮನೆಯ ಹಿತ್ತಿಲಿನಲ್ಲಿ ಹೊರಗೆ ಇಟ್ಟು ಆದನ್ನು ಹೊಲಸು ಒಲೆ ಎಂದು ಕರೆಯುವುದೂ ಇಂಥ ದಬ್ಬಾಳಿಕೆಯ ಪರಿಣಾಮವೇ. ಒಟ್ಟಿಗೆ ಊಟ ಮಾಡಬೇಕಾದ ಸಂದರ್ಭಗಳಲ್ಲಿ ಸಸ್ಯಾಹಾರಿಗಳಿಗೆ ಮುಜುಗರವಾಗದಿರಲಿ ಎಂದು ಮಾಂಸಾಹಾರಿಗಳೂ ಸಸ್ಯಾಹಾರ ಮಾತ್ರ ತಿನ್ನುವುದನ್ನು ಆರ್ಥಮಾಡಿಕೊಳ್ಳಬಹುದು; ಅದರೆ ಆದೇ ಸರಿ ಎಂದು ವಾದಿಸುವುದು ತಪ್ಪು.
    ಆದ್ದರಿಂದ ಹಾಸನದ ಕಸಾಪ ಆವರಣದಲ್ಲಿ ಸಸ್ಯಾಹಾರದಂತೆ ಮಾಂಸದೂಟವನ್ನೂ ಪ್ರತ್ಯೇಕವಾಗಿ ಏರ್ಪಾಡು ಮಾಡಿದ್ದನ್ನು ತಪ್ಪೆಂದು ಹೇಳುವುದು ಸರಿಯಲ್ಲ. ಆದರಿಂದ ಮಾಂಸ ತಿನ್ನವದವರಿಗೆ ಮುಜುಗರ ಆಗುತ್ತದೆ ಎಂಬುದೂ ಸರಿಯಲ್ಲ. ಸಾರ್ವಜನಿಕವಾಗಿ ಉಟಮಾಡುವ ಸಂದರ್ಭಗಳಲ್ಲಿ ಸಸ್ಯಾಹಾರಿಗಳಿಗೂ ಮುಜುಗರವಾಗುವುದುಂಟು. ಸಮಾರಂಭಗಳಲ್ಲಿ ಬಡಿಸುವವರಿಲ್ಲದೆ ತಿನ್ನುವವರೇ ಬಡಿಸಿಕೊಂಡು ತಿನ್ನುವ(ಬಫೆ಼) ಸಂದರ್ಭಗಳಲ್ಲಿ ನನಗೇ ಮುಜುಗರವಾಗುತ್ತದೆ. ನನಗೆ ಬೇಕಾದಷ್ಟು ಮೊದಲಿಗೇ ಬಡಿಸಿಕೊಳ್ಳುತ್ತೇನೆ. ಎಷ್ಟೇ ರುಚಿಕರವಾಗಿದ್ದರೂ ಎರಡನೆಯ ಬಾರಿ ಬಡಿಸಕೊಳ್ಳಲು ಹೋಗುವುದಿಲ್ಲ. ಆನೇಕರು ತಾವು ಉಣ್ಣುತ್ತಿರುವ ಎಂಜಲು ಕೈಯಿಂದಲೇ ಬಡಿಕೊಳ್ಳುವುದನ್ನು ನೋಡಿದಾಗ ಜುಗುಪ್ಸೆಯಾಗುತ್ತದೆ. ಕೆಲವರ ದೃಷ್ಟಿಯಲ್ಲಿ ಆದು ಪ್ರೀತಿಯ ದ್ಯೋತಕವೇ ಆಗಿರಬಹುದು. ಅವರು ತಮ್ಮ ಮನೆಗಳಲ್ಲಿ ಹಾಗೆಯೇ ಮಾಡಲೂಬಹುದು. ಅದರೆ ಸಾರ್ವಜನಿಕವಾಗಿ ಮಾಡಕೂಡದು. ವೈಯಕ್ತಿಕ ಆರೋಗ್ಯದ ದೃಷ್ಟಿಯಿಂದ ಅದನ್ನು ಒಪ್ಪಲು ಸಾಧ್ಯವಾಗುವುದೇ ಇಲ್ಲ. ಎರಡೂ ಬಗೆಯ ಆಹಾರವಿರುವ ಹೋಟೆಲುಗಳಿಗೂ ನಾನು ಹೋಗುವುದಿಲ್ಲ. ಆದರೆ ಅದು ಇನ್ನೊಂದು ಬಗೆಯ ಆಹಾರ ಕೀಳು ಎಂಬ ದೃಷ್ಟಿಯಿಂದಂತೂ ಖಂಡಿತ ಅಲ್ಲ.
    Reply

    ಪ್ರತಿಕ್ರಿಯೆ
  17. suvarna.c

    ದೇಹಕ್ಕೆ ಯಾವುದು ಪುಷ್ಠಿ ನೀಡುತ್ತದೆಯೋ ಆ ಆಹಾರ ಸೇವಿಸುವುದರಿಂದ ಯಾವುದೇ ತಪ್ಪಿಲ್ಲ. ಮಾಂಸ ಆಹಾರ ಕನಿಷ್ಠ , ಸಸ್ಯಾಹಾರ ಶ್ರೇಷ್ಠ ಎಂದು ಹೇಳುವುದು ಸರಿಯಲ್ಹ. ಇದು ಹೇಳುವವರು ಅವರ ಅವಿವೇಕತನವನ್ನು ತೋರಿಸುತ್ತದೆ. ನಾಗರಾಜ್ ಹೆತ್ತೂರು ಜನಪದ ಮೇಳದಲ್ಲಿ ದನದ ಮಾಂಸ ಮೇಳ ಮಾಡುತ್ತೇವೆ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಸಾಹಿತ್ಯ ಪರಿಷತ್ ಆವರಣದಲ್ಲಿ ಹಂದಿಮಾಂಸಕ್ಕೆ ಅವಕಾಶ ಕೂಟ್ಟ ಮೇಲೆ ದನದ ಮಾಂಸಕ್ಕೆ ಕೋಡ ಬೇಕು ಆಗ ಸಮಾನತೆ ಎಂದು ಹೇಳಬಹುದು ಅಲ್ಲವಾ ?
    suvArna.c
    hassan

    ಪ್ರತಿಕ್ರಿಯೆ
    • ಎಚ್. ಸುಂದರ ರಾವ್

      ಹುಲಿಯ ದೇಹಕ್ಕೆ ಮನುಷ್ಯನ ಮಾಂಸ ಒಳ್ಳೇ ಪುಷ್ಟಿ ನೀಡುತ್ತದೆ ಎಂದು ಕೇಳಿದ್ದೇನೆ…..

      ಪ್ರತಿಕ್ರಿಯೆ
  18. kumararaitha

    ಒಟ್ಟು ಸಮುದಾಯದ ದೈನಂದಿನ ಆಹಾರ ಕ್ರಮಗಳು ಸಂಸ್ಕೃತಿ ಎನ್ನಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಮೈಸೂರು ಸೀಮೆ (ಮಂಡ್ಯ, ಮೈಸೂರು, ಹಾಸನ,ಬೆಂಗಳೂರು) ಇಲ್ಲಿಯ ದೈನಂದಿನ ಆಹಾರ ಎಂದರೆ ರಾಗಿ ಮುದ್ದೆ, ರಾಗಿರೊಟ್ಟಿ, ಉಪ್ಪೆಸರು,ಮೊಸಪ್ಪಿನ ಸಾರು, ಹುರುಳಿಮೊಳೆಕಾಳಿನ ಸಾರು, ಸೊಪ್ಪಿನ ಪಲ್ಯ, ಉತ್ತರ ಕರ್ನಾಟಕದ ದೈನಂದಿನ ಆಹಾರ ಜೋಳ (ಜೋಳದಲ್ಲಿಯೂ ಬಗೆಬಗೆ ರೊಟ್ಟಿಗಳು ಉದಾ:, ಕೆದರಿದ ರೊಟ್ಟಿ, ಲಟ್ಟಿಸಿದ ರೊಟ್ಟಿ, ಕೈರೊಟ್ಟಿ ಮೆತ್ತನ ರೊಟ್ಟಿ, ಕಟಕರೊಟ್ಟಿ,ಬಡಿದ ರೊಟ್ಟಿ)ಕೆಲವೆಡೆ ಜೋಳದಿಂದ ಮುದ್ದೆ ಮಾಡುವ ಕ್ರಮವೂ ಇದೆ. ಆಯಾ ಋತುಮಾನದಲ್ಲಿ ಹೆಚ್ಚಾಗಿ ದೊರೆಯುವ ತರಕಾರಿ ಬಳಸಿ ಪಲ್ಯಗಳನ್ನು ಮಾಡುತ್ತಾರೆ.ಶೇಂಗಾ ಚಟ್ನಿಯೂ ಪ್ರಧಾನವೇ ಆಗಿದೆ. ದಕ್ಷಿಣ ಕನ್ನಡದಲ್ಲಿ ಕುಚ್ಚುಲಕ್ಕಿ ಬಳಸಿ ಮಾಡಿದ ಆಹಾರವೇ ಪ್ರಧಾನ. ಗಂಜಿ, ಇಲ್ಲಿ ಸಾಮಾನ್ಯ. ಊಟಕ್ಕೆ ಕುಚ್ಚಲಕ್ಕಿಯಿಂದ ಮಾಡಿದ ಅನ್ನ ಇರದಿದ್ದರೆ ಅವರಿಗೆ ಊಟ ಮಾಡಿದ ತೃಪ್ತಿ ದೊರೆಯುವುದಿಲ್ಲ.
    ಆದ್ದರಿಂದ ದೈನಂದಿನ ಆಹಾರ ಅಭ್ಯಾಸ ಕ್ರಮದಲ್ಲಿ ನೋಡಿದರೆ ಎಲ್ಲರೂ ಸಸ್ಯಾಹಾರಿಗಳು. ಈ ಹಿನ್ನೆಲೆಯಲ್ಲಿ ಮಾಂಸಾಹಾರವನ್ನು ಸಂಸ್ಕೃತಿ ಎಂದು ಕರೆಯುವುದು ಹೇಗೆ ಎಂಬುದು ನನ್ನ ಪ್ರಶ್ನೆ. ಉದಾಹರಣೆಗೆ ಸಮುದಾಯದಲ್ಲಿ ಹಾವು, ಬೆಕ್ಕು, ಇಲಿ ತಿನ್ನುವ ಗುಂಪುಗಳಿರುತ್ತವೆ. ಇವರು ವಾಸಿಸುವ ಪ್ರದೇಶದ ಆಹಾರ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಅಲ್ಲಿರುವ ಸಮುದಾಯದ ಆಹಾರ ಸಂಸ್ಕೃತಿ ಎಂದರೆ ಹಾವು, ಇಲಿ ತಿನ್ನುವುದು ಎಂದು ಹೇಳಲು ಸಾಧ್ಯವೆ.
    ಎಲ್ಲ ಬಗೆಯ ಮಾಂಸ (ಕುರಿ, ಕೋಳಿ, ಮೀನು, ಹಂದಿ, ದನ, ಹಾವು, ಇಲಿ, ಬೆಕ್ಕು) ಒಂದೇ ತೆಕ್ಕೆಗೆ ತರಲು ಸಾಧ್ಯವೆ ? ಸಾಧ್ಯವಿಲ್ಲದಿದ್ದಾಗ ಮಾಂಸಾಹಾರವನ್ನು ಸಂಸ್ಕೃತಿ ಎಂದು ಕರೆಯುವುದಾದರೂ ಹೇಗೆ ?
    ಅದು ಅಲ್ಲದೆ ಎಲ್ಲ ದಿನಗಳಲ್ಲಿಯೂ ಮಾಂಸಹಾರ ಸೇವಿಸುವುದಿಲ್ಲ. ಮೈಸೂರು ಸೀಮೆಯವರಿಗೆ ಸೋಮವಾರ ಅದು ವರ್ಜ್ಯ. ಗುರುವಾರ, ಶನಿವಾರ ಮಾಂಸ ತಿನ್ನದವರು ಸಾಕಷ್ಟು ಮಂದಿ ಇದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮಾಂಸಹಾರವನ್ನು ಆಹಾರ ಸಂಸ್ಕೃತಿ ಎಂದು ಕರೆಯಲು ಸಾಧ್ಯವೆ ಎಂಬುದಷ್ಟೆ ನನ್ನ ಪ್ರಶ್ನೆ…

    ಪ್ರತಿಕ್ರಿಯೆ
  19. ಪಂಡಿತಾರಾಧ್ಯ ಮೈಸೂರು

    ಸಂಸ್ಕೃತಿ ಎನ್ನುವುದು ಒಂದು ಮಾತ್ರ ಅಲ್ಲ. ಜನಸಮುದಾಯಗಳಿರುವಷ್ಟು ಬಗೆಯ ಸಂಸ್ಕೃತಿಗಳು ಇರಲು ಸಾಧ್ಯ. ಕನಿಷ್ಠ ಇಬ್ಬರು ಒಂದು ಸಮುದಾಯವಾಗಬಲ್ಲರು. ಅದ್ದರಿಂದ ಸಸ್ಯಾಹಾರಿಗಳದು ಒಂದು ಸಂಸ್ಕತಿ ಮಾಂಸಾಹಾರಿಗಳದೂ ಇನ್ನೊಂದು ಸಂಸ್ಕೃತಿಯೆ. ಹುಲಿಗಳ ಆಹಾರ ಮೇಳದಲ್ಲಿ ಆವುಗಳಿಗೆ ಮನುಷ್ಯ ಮಾಂಸ ಹೆಚ್ಚು ರುಚಿಯಾಗಿದ್ದರೆ ಆಶ್ಚರ್ಯವೇನಿಲ್ಲ. ನಾವು ಅ ಕಡೆ ಹೋಗದಿದ್ದರಾಯಿತು! ನನ್ನ ಊಟದ ಮೇಜಿನಲ್ಲಿ ಮಾಂಸಾಹಾರಿಗಳು ಕುಳಿತು ಊಟಮಾಡಿದರೆ ನಾನು ಬೇಸರಪಟ್ಟುಕೊಳ್ಳುವುದಕ್ಕೆ ಕಾರಣವಿಲ್ಲ. ನನಗೆ ಬಡಿಸದಿದ್ದರೆ ಅಯಿತು.
    ಆವರು ತಿನ್ನುವುದೂ ಅಹಾರವೇ. ಅಹಾರೇತರ ವಸ್ತುಗಳಲ್ಲ.
    ಹಾವು ಇಲಿ ತಿನ್ನುವವರಿಗೆ ಆದು ಆವರ ಆಹಾರ ಸಂಸ್ಕೃತಿ. ವೈದಿಕ ಸಂಸ್ಕೃತಿಯ ಋಷಿಗಳು ಪೌರಾಣಿಕ ದೇವತೆಗಳು ಗೋವಿನಮಾಂಸವನ್ನೇ ತಿನ್ನುತ್ತಿದ್ದರು. ಒಂಬತ್ತನೇ ಶತಮಾನದ ಭವಭೂತಿಯ ಉತ್ತರರಾಮಚರಿತೆ ನಾಟಕದಲ್ಲಿ ವಾಲ್ಮೀಕಿಯ ಆಶ್ರಮಕ್ಕೆ ವಸಿಷ್ಠ ಋಷಿ ಬಂದುದನ್ದಾನು ನೋಡಿದ ಆಶ್ರಮದ ಗೋಶಾಲೆಯ ಕರುಗಳು ಬೆದರುತ್ತವೆ. ಆದನ್ನು ನೋಡಿದ ಆಶ್ರಮದ ವಟುಗಳು ಆತಿಥಿ ಸತ್ಕಾರಕ್ಕೆ ನಮ್ಮಲ್ಲೊಬ್ಬರು ಬಲಿಯಾಗುತ್ತೇವೆಂಬ ಭಯದಿಂದ ಕರುಗಳು ಬೆದರಿದವು ಎಂದು ವ್ಯಾಖ್ಯಾನಿಸುತ್ತಾರೆ. ಮಾಂಸಾಹಾರ ಗೋವಿನ ಮಾಂಸ ಎಲ್ಲವೂ ವೈದಿಕ ಆಹಾರ ಸಂಸ್ಕೃತಿಯೇ ಆಗಿದ್ದವು. ಜೈನಧರ್ಮ, ಕರ್ನಾಟಕದಲ್ಲಿ ವೀರಶೈವ ಧರ್ಮ ಅಹಿಂಸೆ, ಸಸ್ಯಾಹಾರಕ್ಕೆ ಒತ್ತು ನೀಡಿದವು. ಬಸವಣ್ಣನವರಂಥವರೂ ಸಸ್ಯಾಹಾರವೇ ಅದ ಈರುಳ್ಳಿಯನ್ನೂ ತಿನ್ನಬಾರದ ಹೊಲಸು (ಮಾಂಸಾಹಾರ) ಎಂಬಂತೆ ಕಂಡಿದ್ದರು. ಸಮಾನತೆಯನ್ನು ಪ್ರತಿಪಾದಿಸಿದರೂ ಬೇರೆಯವರ ಆಹಾರವನ್ನು ಸಹಿಸಿಕೊಳ್ಳದ ಬಸವಣ್ಣನವರ ಈ ಮನೋಭಾವವೇ ಇಂದೂ ಸಸ್ಯಾಹಾರ ಮಾತ್ರ ಸಂಸ್ಕೃತಿ ಎಂಬ ತಪ್ಪು ಗ್ರಹಿಕೆಯಾಗಿ ಉಳಿದಿದೆ. ಆಹಾರ ಮೇಳದಂಥ ಬಹುಸಂಸ್ಕೃತಿ ಮೇಳಗಳಲ್ಲಿ ರುಚಿಯಷ್ಟೇ ಶುಚಿತ್ವಕ್ಕೂ ಗಮನಕೊಡಬೇಕಾದುದು ಮುಖ್ಯ. ಊಟ ತನ್ನಿಚ್ಛೆಯಾದರೂ ಆದನ್ನು ಪರರ ಎದುರು ಮಾಡುವಾಗ ಇತರರಿಗೆ ಜುಗುಪ್ಸೆಯಾಗದಂತೆ ಶಿಷ್ಟಾಚಾರವನ್ನು ಪಾಲಿಸುವುದು ಆವಶ್ಯ. ಪರಿಸರದ ಸ್ವಚ್ಛತೆಗೆ ಆದ್ಯತೆ ಕೊಡುವುದು ಮುಖ್ಯ.

    ಪ್ರತಿಕ್ರಿಯೆ
  20. Kumara Raitha

    ನಾನು ಮೈಸೂರು ಸೀಮೆ ರೈತ ಕುಟುಂಬದಿಂದ ಬಂದವನು… ಬಾಡು ಅಂದ್ರೆ ಮನೆಮಂದಿಯಲ್ಲಿ ಅನೇಕರಿಗೆ ಇಷ್ಟ. ಆದ್ರೆ ಎಂದೂ ಬಾಡನ್ನ ಮನೆಯೊಳಗಿನ ಅಡುಗೆ ಮನೆಯಲ್ಲಿ ಬೇಯಿಸಿಲ್ಲ. ಅದಕ್ಕಾಗಿಯೇ ಹೊರಗೆ ಪ್ರತ್ಯೇಕ ಒಲೆ. ಮಾಂಸದೂಟ ತಿಂದ ನಂತರ ಸ್ನಾನ ಮಾಡಿ ಒಳಗೆ ಹೋಗಬೇಕಿತ್ತು. ಆದರೆ ಈಗ ಸ್ನಾನ ಮಾಡಿ ಒಳಗೆ ಹೋಗುವುದು ನಿಂತಿದೆ. ಆದ್ದರಿಂದ ಮಾಂಸಾಹಾರವನ್ನ ಒಂದು ಪದ್ಧತಿ ಎನ್ನಬಹುದೆ ಹೊರತು ಸಂಸ್ಕೃತಿ ಎನ್ನಲು ಸಾಧ್ಯವೆ ?

    ಪ್ರತಿಕ್ರಿಯೆ
  21. adithyahk

    ನನ್ನ ಸಂಸ್ಕೃತಿ ಮತ್ತು ನಮ್ಮ ಸಂಸ್ಕೃತಿ ಒಂದೇ ಎಂದು ಭಾವಿಸುವುದು ತಪ್ಪು ಮತ್ತು ಅದನ್ನೇ ಒತ್ತಿ ಒತ್ತಿ ಹೇಳುವುದು ಅಪರಾದ. ನಿನ್ನ ಸಂಸ್ಕೃತಿಯನ್ನು ಪ್ರೀತಿಸು ಆರಾಧಿಸು ಹಾಗೆ “ನಿಮ್ಮ” ಸಂಸ್ಕೃತಿಯನ್ನು ಗೌರವಿಸುವುದನ್ನು ಮರೆಯಬೇಡ.
    ಉತ್ತರ ಕರ್ನಾಟಕದಲ್ಲಿ ಜೋಳ ದಕ್ಷಿಣ ಕರ್ನಾಟಕದಲ್ಲಿ ರಾಗಿ ಮುಖ್ಯ ಆಹಾರ ಪದಾರ್ಥಗಳು ಎಂಬುದು ಒಂದು ಭಾವನೆಯಷ್ಟೇ ಸತ್ಯವಲ್ಲ ಮಲೆನಾಡಿನಲ್ಲಿ (ಮಲೆನಾಡೆಂದರೆ ಕೇವಲ ಶಿವಮೊಗ್ಗ ಎಂದಷ್ಟೇ ಭಾವಿಸಬಾರದು-ಚಿಕ್ಕಮಗಳೂರು ಹಾಸನ ಉತ್ತರ ಕೊಡಗಿನ ಪಶ್ಚಿಮ ಘಟ್ಟಗಳು) ಅಕ್ಕಿ ಅತಿ ಪ್ರಮುಖ ಧಾನ್ಯ ಅಕ್ಕಿ ರೊಟ್ಟಿ ದಿನಕ್ಕೆರಡು ಬಾರಿ ಸೇವಿಸುವ ಆಹಾರ, ರಾಗಿಯನ್ನು ಅಂಬಲಿ ರೂಪದಲ್ಲಿ ಕೇವಲ ಬೇಸಿಗೆಯಲ್ಲಷ್ಟೇ ಬಳಸುವುದು. ಹಾಗಾಗಿ ನನ್ನ ಸಂಸ್ಕೃತಿ ತಿಳಿದಾಕ್ಷಣ ನಮ್ಮ(ಕರ್ನಾಟಕ-ಕನ್ನಡ)ಸಂಸ್ಕೃತಿಯೂ ಅದೇ ಎಂದು ಭಾವಿಸಬಾರದು. ಮಾಂಸಾಹಾರ ಪದ್ಧತಿಯೂ ಹಲವೆಡೆ ಹಲವು ರೀತಿ.

    ಪ್ರತಿಕ್ರಿಯೆ
  22. ಪಂಡಿತಾರಾಧ್ಯ ಮೈಸೂರು

    ಸಮುದಾಯದ ಎಲ್ಲ ನಂಬಿಕೆ ಆಲೋಚನೆ ವರ್ತನೆ ಪದ್ಧತಿಗಳ ಒಟ್ಟು ಮೊತ್ತವನ್ನೇ ಸಂಸ್ಕೃತಿ ಎನ್ನುವುದು. ಆದರಲ್ಲಿ ಸರಿ ತಪ್ಪು, ಮೇಲು ಕೀಳು, ಒಳಗಿ ಹೊರಗಿನ ಇತ್ಯಾದಿ ಎಲ್ಲವೂ ಸಮುದಾಯದವರು ಒಪ್ಪಿ ನಡೆಸುತ್ತಿರುವವು. ಆದು ಆವರಿಗೆ ಸರಿ ಆನಿಸಿದರೆ ಆಯಿತು. ಬೇರೊಬ್ಬರಿಗೆ ಆದು ಸರಿಯಲ್ಲವೆನಿಸಿದರೂ ಆದಕ್ಕೆ ಇವರು ಹೊಣೆಗಾರರಲ್ಲ. ಅದು ಆವರ ಸರಿ ತಪ್ಪುಗಳ ವಿಷಯ. ನಮ್ಮ ಸಂಗತಿಗಳು ಮಾತ್ರ ಸರಿ, ಆವು ಮಾತ್ರ ಸಂಸ್ಕೃತಿ ಇತರರವು ಅಲ್ಲ ಎನ್ನವುದು ಸರಿಯಲ್ಲ. ಬೇರೆಯವರ ಸಂಗತಿಗಳು ಆವರಿಗೆ ಸರಿ ಎನಿಸಿರುವುದರಿಂದ ಅದು ಆವರ ಸಂಸ್ಕೃತಿ. ಆದ್ದರಿಂದ ಸಸ್ಯಾಹಾರಿಗಳ ದೃಷ್ಟಿಯಲ್ಲಿ ಸಸ್ಯಾಹಾರ ಮಾತ್ರ ಸಂಸ್ಕೃತಿ ಅಥವಾ ಸು-ಸಂಸ್ಕೃತಿ ಇರಬಹುದು. ಅದರೆ ಆದೇ ಸತ್ಯವಲ್ಲ. ಬೇರೆಯವರು ತಮ್ಮದಲ್ಲದ್ದನ್ನು ಕು-ಸಂಸ್ಕೃತಿ ಎಂದು ಕರೆದರೆ ನಾವು ಆದನ್ನು ನಂಬಿ ನಮ್ಮ ಬಗ್ಗೆ ಕೀಳರಿಮೆ ಬೆಳಸಿಕೊಳ್ಳಬಾರದು.
    ಭಾಷೆಯ ಮಟ್ಟಿಗೂ ಈ ಮಾತು ಸತ್ಯ. ಭಾಷೆಯೂ ಸಂಸ್ಕೃತಿಯ ಬಹು ಮುಖ್ಯ ಭಾಗ. ಎಷ್ಟು ಜನರಿದ್ದಾರೊ ಅಷ್ಟೂ ಬಗೆಯ ಭಾಷೆಯ ಪ್ರಭೇದಗಳು ಇರಲು ಸಾಧ್ಯ. ಆಲ್ಲಿಯೂ ಬಳಸುವ ಸಮುದಾಯಕ್ಕೆ ಅವರ ಭಾಷೆ ಸರಿ ಎನಿಸಿದರೆ ಆಯಿತು. ಆದಕ್ಕೆ ಬೇರೆಯವರ ಅನುಮೋದನೆ ಬೇಕಿಲ್ಲ. ಪ್ರತಿಯೊಬ್ಬರಿಗೂ ಭಿನ್ನ ಭಾಷೆಯಿರುವುದರಿಂದ ಸಂವಹನಕ್ಕಾಗಿ ಎಲ್ಲರೂ ಒಪ್ಪಿಕೊಂಡ ಶಿಷ್ಟ ಭಾಷೆ ಬೇಕಾಗುತ್ತದೆ. ವಾಸ್ತವದಲ್ಲಿ ಆದು ಯಾರ ಆಡು ಭಾಷೆಯೂ ಆಗಿರಲು ಸಾಧ್ಯವಿಲ್ಲ. ಆದು ಹುಟ್ಟಿನಿಂದ ಬರುವುದೂ ಇಲ್ಲ. ಶಾಲೆಯಲ್ಲಿ ಪ್ರಯತ್ನಪೂರ್ವಕವಾಗಿ ಪ್ರಜ್ಞಾಪೂರ್ವಕವಾಗಿ ಕಲಿಯಬೇಕು. ಹಾಗೆ ಕಲಿಯುವ ಶ್ರಮವಹಿಸಲು ಸಿದ್ಧರಿಲ್ಲದವರು ನಾವು ಮಾತನಾಡುವದು ಮಾತ್ರವೇ ಬಾಷೆ, ಆದರಲ್ಲಿ ಶಿಷ್ಟ ಬಳಕೆಯ ರೂಪಗಳು ಆನಗತ್ಯ ಎಂದು ವಾದಿಸುವುದುಂಟು. ಸೃಜನಶೀಲ ಲೇಖಕರು ತಮ್ಮ ಕೃತಿಗಳಲ್ಲಿ ಪ್ರಾದೇಶಿಕ, ಸಾಮಾಜಿಕ ಗುಂಪುಗಳ ಭಾಷಾರೂಪಗಳನ್ನು ಬಳಸಬಹುದು. ಆದನ್ನು ಕುರಿತ ವಿಮರ್ಶೆಯ ಭಾಷೆಯೂ ಹಾಗೆಯೇ ಇರಬೇಕಿಲ್ಲ. ಅದು ಶಿಷ್ಟ ಕನ್ನಡದಲ್ಲಿರುವುದು ಸಾಮಾನ್ಯ.

    ಪ್ರತಿಕ್ರಿಯೆ
  23. kumararaitha

    ಅಭ್ಯಾಸ, ಪದ್ಧತಿ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ಬೇರೆಬೇರೆ ಅಲ್ಲವೆ ? ಪ್ರಪಂಚದ ಕೆಲವೆಡೆ ನರಭಕ್ಷಕರು ಇದ್ದಾರೆ ಎಂದು ಓದಿದ್ದೀನಿ; ಕೇಳಿದ್ದೀನಿ. ನರಮಾಂಸ ತಿನ್ನುವುದು ಅವರ ಸಂಸ್ಕೃತಿ ಎಂದು ಕರೆಯಲು ಸಾಧ್ಯವೆ…

    ಪ್ರತಿಕ್ರಿಯೆ
  24. ಪಂಡಿತಾರಾಧ್ಯ ಮೈಸೂರು

    ಅಭ್ಯಾಸ, ಪದ್ಧತಿಗಳೆಲ್ಲವೂ ಒಂದು ಸಮುದಾಯದ ಸಾಮೂಹಿಕ ಆನುಮೋದನೆ ಪಡೆದಿರುವುದರಿಂದ ಅವೂ ಸಂಸ್ಕೃತಿಯ ಭಾಗವೇ ಆಗುತ್ತವೆ. ನರಮಾಂಸ ಭಕ್ಷಕರ ಸಮೂಹದಲ್ಲಿ ಆದನ್ನು ಬೇರೆ ಏನೆಂದು ಕರೆಯಲು ಸಾಧ್ಯ? ಹುಲಿಗಳ ಆಹಾರ ಮೇಳದಿಂದ ದೂರವಿರುವಂತೆ ನರಭಕ್ಷಕರಿಂದ ರಕ್ಷಿಸಿಕೊಳ್ಳುವುದೂ ನಮ್ಮದೇ ಹೊಣೆ. ನರಭಕ್ಷಕರ ದ್ವೀಪಕ್ಕೆ ಮತಾಂತರ ಮಾಡಿಸಲು ಪಾದ್ರಿಯೊಬ್ಬ ಹೋದಾಗ ತನ್ನ ಗೆಳೆಯನೊಬ್ಬ ಈಗಾಗಲೇ ಆ ದ್ವೀಪಕ್ಕೆ ಹೋಗಿದ್ದರ ಅರಿವಿದ್ದುದರಿಂದ ಅವನ ಬಗ್ಗೆ ತಿಳಿಯಲು ದ್ವೀಪವಾಸಿಗಳನ್ನು ‘ಅವನು ಹೇಗಿದ್ದ?’ ಎಂದು ವಿಚಾರಿಸಿದ.
    ದ್ವೀಪವಾಸಿಗಳಲ್ಲೊಬ್ಬ ಉತ್ತರಿಸಿದ: ‘ತುಂಬ ರುಚಿಯಾಗಿದ್ದ!’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: