ಸಂಪು ಕಾಲಂ : ಪಕ್ಷಿಕಾಶಿ, ಇದು ಬರೀ ಓದಲ್ಲ ಒಂದು ಬೆರಗು!

“ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು
ಅಲ್ಲೆ ಇಟ್ಟು ಬಾ;
ಬಿಂಕದುಕುತಿಯನು ಕೊಂಕು ಯುಕುತಿಯನು
ಎಲ್ಲ ಬಿಟ್ಟು ಬಾ”
ಎಂದು, ಹೊಸ್ತಿಲ ಪುಟದಲ್ಲೇ ಕಂಡಿದ್ದರೂ ನಾನು ಮಾಡಿದ್ದು ಮೊದಲು ಅದೇ ಕೆಲಸವನ್ನೇ!
“ಕುವೆಂಪುರವರ ಕವನ ಸಂಕಲನ” ಎಂಬ ಒಂದು ಪೂರ್ವಾಗ್ರಹ ನಿರೀಕ್ಷೆಯಲ್ಲಿ ಪುಸ್ತಕ ಓದಲು ಪ್ರಾರಂಭಿಸಿದೆ. ಯಾವುದೊ ಜೋಷ್ ನಿಂದ ಅಲ್ಲಲ್ಲಿ ಕಣ್ಣಾಡಿಸಿದೆ. ಏನೋ ಭಾವಿಸಿ ಮತ್ತೇನೋ ಜರುಗಿದರೆ ಮುಂಗವಿಯುವ ನಿರಾಶಾ ಛಾಯೆ ನನ್ನಲ್ಲಿ ಮೂಡಿತ್ತು. ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ ಓದಿ ಕುವೆಂಪುರವರ ಬರಹಾ ಸಾಮರ್ಥ್ಯ, ಕವಿ ಹೃದಯದ ರುಚಿಯ ಮತ್ತು ಈಗಾಗಲೇ ಹತ್ತಿತ್ತು. ಜೊತೆಗೆ, “ಗುಡಿ, ಚರ್ಚು, ಮಸಜೀದಿಗಳ ಬಿಟ್ಟು ಬಾ…”, “ಆನಂದಮಯ ಈ ಜಗಹೃದಯ…”, “ಓ ನನ್ನ ಚೇತನ…” ಇತ್ಯಾದಿ ಅದ್ಭುತ ಸಾಲುಗಳಿಂದ ಮಾತ್ರ ಅವರ ಕವನಗಳ ಪರಿಚಯವಾಗಿದ್ದ ನನಗೆ, ಪಕ್ಷಿಕಾಶಿಯ ಈ ಕೆಳಕಂಡ ಕೆಲ ಸಾಲುಗಳು, ಮೊದಲಿಗೆ ಆಶ್ಚರ್ಯವನ್ನುಂಟು ಮಾಡಿತ್ತು.
“ಓಡು ಹೊರಗೆ, ಓಡು ನೋಡು, ಮೂಡುತಿಹನು ದಿನಮಣಿ!”….., “ನೀರು ನೀರು ನೀರು! ಕಾರುತಿಹುದು ಕಾರು!”…., “ಮಾಡಲು ಏನೂ ಕೆಲಸವೇ ಇಲ್ಲ; ಓದಲು ಮನಸಿಲ್ಲ”….., ಇತ್ಯಾದಿ ಸಾಲುಗಳು ಬಹಳ ಸಾಧಾರಣವೆನಿಸುವ ಸಾಲುಗಳು ಅಲ್ಲಲ್ಲಿ ಕಂಡದ್ದು ನೋಡಿ, ಇವು ನಿಜಕ್ಕೂ ಕುವೆಂಪುರವರದ್ದೇ ಕಾವ್ಯವಾ ಎಂದು ಅನಿಸಿಬಿಟ್ಟಿತ್ತು. “ಕುವೆಂಪು ಕವಿಯಾಗಿ ಅವರ ಕಾದಂಬರಿಗಳಲ್ಲಿ ಕಾಣಸಿಗುತ್ತಾರೆ”, ಎಂಬ ಒಬ್ಬ ಹಿರಿಯ ಸಾಹಿತಿಯ ಮಾತು ನೆನಪಾಯಿತು. ಕುವೆಂಪುರವರ ಕುರಿತು ನನ್ನ ಓದು ಅಲ್ಲಿಗೆ ನಿಂತಿತ್ತು.
ನಿಟ್ಟುಸಿರು ಬಿಡುತ್ತಾ ಕೋಣೆಯ ಸುತ್ತೂ ಕಣ್ಣರಳಿಸುತ್ತಿದ್ದ ನನಗೆ, ಥಟ್ಟನೆ ಹೊಳೆದದ್ದು ಎರಡು ವಿಚಾರ. ಒಂದು, ನಾನು ಈ ಕಾಂಕ್ರೀಟ್ ಗೋಡೆಗಳ, ಕಂಪ್ಯೂಟರ್ ಗೊಂದಲಗಳ ನಡುವೆ, ಎಲೆಕ್ಟ್ರಾನಿಕ್ ಸುಳ್ಳು ಗಾಳಿಗಳ ಬಂಧನದಲ್ಲಿ ಕೂತು, ಈ ಮನಸ್ಥಿತಿಯಲ್ಲಿ ಕುವೆಂಪುವನ್ನು ದರ್ಶಿಸಲು ಇಚ್ಚಿಸಿದರೆ ಅದು ಸಾಧ್ಯವಾಗದ ಮಾತು. ತಕ್ಷಣವೇ ಪ್ರಕೃತಿಯ ಮಡಿಲಾದ ಕುಪ್ಪಳ್ಳಿಯ ಕುವೆಂಪುರವರ ಮನೆಯ ಆವರಣ ತಲುಪಿತ್ತು ನನ್ನ ಮನಸ್ಸು. ಎರಡನೆಯ ವಿಚಾರ, ಪಕ್ಷಿಕಾಶಿ ಒಂದು ನವೋದಯ ಕೃತಿ. ಅದನ್ನು ನವೋದಯ ಸಾಹಿತ್ಯದ ಮೌಲ್ಯಗಳು, ವಿಚಾರಗಳ ಹೊರತಾಗಿಸಿ ಓದುವುದು, ಆ ಕೃತಿಗೆ ಅಪಮಾನವೆಸಗಿದಂತೆ ಆಗುತ್ತದೆ ಎಂದು.
ನವೋದಯ ಕಾವ್ಯದಲ್ಲಿ ಮುಖ್ಯ ಲಕ್ಷಣಗಳೆಂದರೆ ಭಾವನಾತ್ಮಕ ಸಿರಿ. ವ್ಯಕ್ತಿ ತನ್ನೆಲ್ಲ ಭಾವನೆಗಳನ್ನು, ಆನಂದಗಳನ್ನು ಸಂಭ್ರಮಿಸುವುದು ಮತ್ತು ಇದನ್ನು ಯಾವ ಕ್ಲೀಷೆಗಳು, ಭಾಷಾ ಕಾಠಿಣ್ಯಗಳಿಲ್ಲದೆ ಸರಳವಾಗಿಸುವುದು. ಭಾವಗೀತೆಗಳು ನವೋದಯದ ಮುಖ್ಯ ಅಂಗ. ಕುವೆಂಪು, ಬೇಂದ್ರೆ, ಬಿ ಎಂ ಶ್ರೀ ಇತ್ಯಾದಿ ದಿಗ್ಗಜರು ಶಿಲ್ಪಿಸಿದ ಈ ‘ನವೋದಯ ಸಾಹಿತ್ಯ’ದ ಭಾವಯಾನದ ಅನ್ವಯ ಈ ಪಕ್ಷಿಕಾಶಿ ಎನ್ನಬಹುದು.
ಮನ ಪರಕಾಯ ಪ್ರವೇಶವಾಯಿತು. ಮನಸ್ಥಿತಿಯು ಈಗಿನ ಒಣ ಯಾಂತ್ರಿಕ ಬದುಕಿನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮಲೆನಾಡ ಮಣ್ಣಿನ ತೇವದ ಮುದದಲ್ಲಿ ಮುಳುಗಿತು. ನವೋದಯದ ‘ಭಾವನೆಗಳ ಮಡುಗಟ್ಟುವಿಕೆ’, ಜೀವನ ಪ್ರೀತಿ, ನವುರಾದ ಸಂವೇದನೆಗಳು ಇವುಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ಕುವೆಂಪು ಎಂಬ ದಾರ್ಶನಿಕತೆಯನ್ನು ಓದ ತೊಡಗಿದೆ. “Poetry is the spontaneous overflow of powerful feelings recollected in tranquility” ಎಂಬ ವರ್ಡ್ ವರ್ತ್ ನ ಮಾತಿನಂತೆ ಕುವೆಂಪು ರವರ ಭಾವಾವೇಶ, ಪರವಶತೆ, ಪ್ರಕೃತಿ ಪ್ರೇಮ, ಪರಿಸರದ ಮುದ್ದುಗರೆಯುವಿಕೆ ಎಲ್ಲವೂ ಅರ್ಥವಾಗ ತೊಡಗಿ ನಾನೂ ಭಾವಪರವಶಳಾದೆ!
ತುಟಿಯಲ್ಲಿ ಮಂದಹಾಸ ಮೂಡಿಸುವ ಆ ಮುಗ್ಧ ಮಗುವಿನ ಮನಸ್ಸು, ಉನ್ಮಾದಗೊಳಿಸುವ ಅನುಭವ ಸಾಮರ್ಥ್ಯ, ಸೂಕ್ಷ್ಮ ವಿಚಾರಗಳ ಬಗ್ಗೆ ವಿವರಗಳು, ಪ್ರಕೃತಿಯ ರಮಣೀಯತೆಯ ಬಗ್ಗೆ ಭಾವಪರವಶತೆ, ಬೆರಗುಗೊಳಿಸುವ ದಾರ್ಶನಿಕತೆ, ಅನುಭಾವಗಳ ಸವರುವಿಕೆ ಮತ್ತು ಭಾಷಾ ವೈಭವ ಇವೆಲ್ಲವೂ ಈ ಪಕ್ಷಿಕಾಶಿಯಲ್ಲಿ ಅಡಗಿರುವ ಅಮೂಲ್ಯಗಳು. ಒಂದು ಕ್ಷಣ, ಈಗ ನಮಗೆ ಬೇಕೆಂದರೂ ಅಷ್ಟು ತೀವ್ರವಾಗಿ ಭಾವಕೊಳದಲ್ಲಿ ಈಜಾಡುವ ಮೀನಾಗಲು ಸಾಧ್ಯವಿಲ್ಲವೇನೋ, ನಾವು ಆ ಆರ್ಧ್ರತೆ ಕಳೆದುಕೊಂಡು ಬಿಟ್ಟೆವೇನೋ ಎಂಬ ಖಿನ್ನತೆ ಉಂಟಾದದ್ದಂತೂ ಸತ್ಯ.
“ಕಲ್ಲಲಿ, ಮಣ್ಣಲಿ, ಹುಲ್ಲಲಿ, ಹುಡಿಯಲಿ, ನೀರಿನ ಹನಿಯಲಿ, ಬೆಂಕಿಯ ಕಿಡಿಯಲಿ, ನನ್ನಲಿ – ಎಲ್ಲಿಯೂ ಚೈತನ್ಯ!” ಎಂಬ ಸಾಲುಗಳು ನೋಡಲೇ ಸಾಕು ಆ ಆನಂದವನ್ನು, ಲವಲವಿಕೆಯನ್ನು, ಚೈತನ್ಯವನ್ನು ತುಂಬಿಕೊಳ್ಳಲು. ತಮ್ಮ ಪ್ರಕೃತಿ ಉಪಾಸನೆಯಲ್ಲಿ ಕವಿ, “ಕುಂಕುಮದ ಪುಣ್ಯೋದಕವಿ ಮಿಂದು ಬಂದಂತೆ…”, “ದಿಕುತಟದಲಿ ತೆರೆಯುತ್ತಿತ್ತು ಹಗಲಿನಕ್ಷಿ…”, “ಕವಿಗೆ ಕವಿಯ ತೋರಿಸಿತ್ತು ಸುಪ್ರಭಾತಂ…”, “ಹಳದಿ ಹೊನಲು ಹರಿದುಹೋಯ್ತು, ಮತ್ತೆ ಕೆಂಪಿನೋಕುಳಿ….”, ಎಂದೆಲ್ಲಾ ಬಣ್ಣಿಸುವ ವೈಖರಿಯನ್ನು ಸವಿಯುವುದೇ ಒಂದು ರಮಣೀಯ ಲೋಕ. ಹೀಗೆ ಓದುತ್ತಾ ಹೋದಂತೆ ಎಂತಹ ವ್ಯಾವಹಾರಿಕ ಮನಸ್ಸೂ ಪ್ರಕೃತಿಯ ಆರಾಧನೆಯಲ್ಲಿ ತೊಡಗುವುದರಲ್ಲಿ ಸಂಶಯವಿಲ್ಲ.
ಪಕ್ಷಿಕಾಶಿಯಲ್ಲಿ ಒಟ್ಟು ನಲವತ್ತೇಳು ಕವನಗಳಿವೆ. ಅದರಲ್ಲಿ ಒಂದೊಂದೂ ಪರವಶತೆಯ ಚೇತನ ಎಂದರೆ ತಪ್ಪಾಗಲಾರದು. ಸೂರ್ಯೋದಯ, ಸೂರ್ಯಾಸ್ತ, ಹುಣ್ಣಿಮೆ, ಮಳೆ, ಆಕಾಶ, ಹೂವು, ಹಕ್ಕಿ, ಚುಕ್ಕಿ, ಹಿಮ, ಮಗುವಿನ ನಗು, ಬಣ್ಣ ಈ ರೀತಿ ಪ್ರತಿಯೊಂದು ಸೌಂದರ್ಯಾನುಭವವನ್ನೂ ಸವಿಯುತ್ತಾ, ತಮಗಾದ ಆ ತೀವ್ರ ಅನುಭೂತಿಯನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ ಕವಿ ಕುವೆಂಪು. “ಪ್ರಕೃತಿಯೊಲ್ಮೆಯೆ ಮುಕ್ತಿಯಾನಂದ ಸಾಧನೆ” ಎಂದು ಕುವೆಂಪು ತಾವೇ ಹೇಳುವಂತೆ, ಆ ಸಾಧನೆಯನ್ನು ಸಂಪೂರ್ಣ ಕೈಗೊಂಡ ಸಾರ್ಥಕ್ಯ, ಸಂಭ್ರಮಗಳು ಪಕ್ಷಿಕಾಶಿಯಲ್ಲಿ ಗೋಚರಿಸುತ್ತದೆ.
ಹೀಗೆ ಪಕ್ಷಿಕಾಶಿಯಲ್ಲಿ ಕುವೆಂಪುರವರು ತಾವು ಅನುಭೋಗಿಸಿದ ಭಾವಪರವಶತೆಯ ಒಂದು ತುಣುಕನ್ನು ನಮಗೂ ಹಚ್ಚಿಸಿಬಿಡುತ್ತಾರೆ ಎಂಬುದು ನಾನಾಗಲೇ ಹೇಳಿದಂತೆ ಯಾವ ಪೂರ್ವಾಗ್ರಹ ಪೀಡನೆ ಇಲ್ಲದೆ, ಸಿದ್ಧ ನಿರೀಕ್ಷೆಗಳಿಲ್ಲದೆ, ಮುಕ್ತವಾಗಿ ಅದನ್ನು ನಮ್ಮದಾಗಿಸಿದಾಗ ಮಾತ್ರ. ಈ ಸತ್ಯವನ್ನು ಅರಿತಾಗ, ಮತ್ತೊಂದು ಗುಟ್ಟು ಬಹಿರಂಗವಾಯಿತು. ಅದೇನೆಂದರೆ, ಯಾವುದೇ ಕೃತಿಯನ್ನು ಸಂಪೂರ್ಣವಾಗಿ ಸವಿಯಬೇಕಾದರೆ, ನಾವು ನಮ್ಮ ಹೊರ-ಒಳ ತನಗಳೆಲ್ಲವನ್ನೂ ಬದಿಗೊತ್ತಿ, ಪರಕಾಯ ಪ್ರವೇಶ ಮಾಡಿ, ಮುಕ್ತವಾಗಿ ಆ ಕೃತಿಯನ್ನು ಅಪ್ಪಿದರೆ ಅದರಲ್ಲಿರುವ ಜೀವಂತ ಸುಖದ ಸವಿ ನಮ್ಮದೇ!

‍ಲೇಖಕರು avadhi

April 5, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Gopaal Wajapeyi

    ಪಕ್ಷಿಕಾಶಿಯ ‘ದರ್ಶನ’ ಮಾಡಿಸಿದಿರಿ. ಇನ್ನು ಈ ಕಾಶಿಯ ‘ಒಳ’ ಹೊಕ್ಕು ನೋಡಬೇಕು, ಇನ್ನೊಮ್ಮೆ… ಸ್ಫುಟವಾದ, ನಿರ್ದಿಷ್ಟವಾದ ಶೈಲಿ ನಿಮ್ಮದು ಸಂಯುಕ್ತಾ…

    ಪ್ರತಿಕ್ರಿಯೆ
  2. Sathish Naik

    ನಾನು ಕುವೆಂಪುರವರನ್ನೂ ಸೇರಿ ಬಹಳಷ್ಟು ಜನ ಹಿರಿಯ ಕವಿಗಳಿಗೆ ಇನ್ನೂ ಓದುಗನಾಗಿಲ್ಲ..!! ಅದರ ಬಗೆಗೊಂದು ಬೇಸರದ ಭಾವವಿದೆ. ನೇರಾ ನೇರಾ ಅವರುಗಳ ಕವನಗಳಲ್ಲಿನ ಒಗಟುಗಳ ಒಡೆದು ಅದನ್ನ ಅರ್ಥೈಸಿಕೊಳ್ಳುವ ಚೈತನ್ಯ ಅಷ್ಟರ ಮಟ್ಟಿಗೆ ಇಲ್ಲದೆ ಇರುವುದೂ ಕೂಡ ಅದಕ್ಕೆ ಕಾರಣಗಳಲ್ಲೊಂದು. ನಮ್ಮ ಪೀಯೂ ಕಾಲೇಜಿನ ನಾಗಮಣಿ ಯಂತಹ ಕನ್ನಡ ಉಪನ್ಯಾಸಕರಿದ್ದಲ್ಲಿ ಖಂಡಿತ ಎಲ್ಲಾ ಕವಿಗಳು ಮತ್ತು ಮತ್ತವರುಗಳ ಕವಿತೆಗಳು ಆಪ್ತವಾಗ್ತಾ ಹೋಗುತ್ತವೆ. ಆದರೂ ಭಾವಗೀತೆ ಮತ್ತಿತರ ಗೀತೆಗಳ ರೂಪದಲ್ಲಿನ ಅವರ ಸಾಕಷ್ಟು ಕವನಗಳಿಗೆ ಕೇಳುಗನಾಗಿದ್ದೇನೆ. ಹಲವು ಬಾರಿ ಆ ಹಾಡುಗಳ ಮಾಧುರ್ಯಕೆ.. ಭಾವ ತಾತ್ಪರ್ಯತೆಗೆ ಮಾರು ಹೋಗಿದ್ದೇನೆ. ಅಷ್ಟರ ಪರಿಧಿಯಲ್ಲೇ ಅವರು ಅದ್ಭುತ ಕವಿಗಳು ಎನಿಸಿ ಕೊಳ್ತಾ ಹೋಗ್ತಾರೆ. ಮತ್ತು ಕುವೆಂಪು ರವರು ಯಾವ ಕಾಲಕ್ಕೂ ಶ್ರೇಷ್ಠ ಕವಿ ಅನ್ನುವುದಕ್ಕೆ ಸಾಕ್ಷಿಯಾಗಿ ನಿಲ್ತಾ ಹೋಗ್ತಾರೆ.
    ಅವರ ಪಕ್ಷಿಕಾಶಿ ಕವನ ಸಂಕಲನದ ಕುರಿತಾಗಿ ನೀವಿಷ್ಟು ಹೇಳಿದ ಮೇಲೆ ಖಂಡಿತ ಅದನ್ನು ಓದಬೇಕೆನ್ನುವ ಮನಸ್ಸಾಗುತ್ತಿದೆ. ಖಂಡಿತ ಓದ್ತೇನೆ. ಮತ್ತೊಂದು ಚೆಂದದ ಬರಹ
    ಯಾವುದೇ ಕೃತಿಯನ್ನು ಸಂಪೂರ್ಣವಾಗಿ ಸವಿಯಬೇಕಾದರೆ, ನಾವು ನಮ್ಮ ಹೊರ-ಒಳ ತನಗಳೆಲ್ಲವನ್ನೂ ಬದಿಗೊತ್ತಿ, ಪರಕಾಯ ಪ್ರವೇಶ ಮಾಡಿ, ಮುಕ್ತವಾಗಿ ಆ ಕೃತಿಯನ್ನು ಅಪ್ಪಿದರೆ ಅದರಲ್ಲಿರುವ ಜೀವಂತ ಸುಖದ ಸವಿ ನಮ್ಮದೇ! ಈ ಮಾತಲ್ಲಿ ಹುರುಳಿದೆ.. ಒಪ್ಪುತ್ತೇನೆ. 🙂

    ಪ್ರತಿಕ್ರಿಯೆ
  3. Badarinath Palavalli

    ಕುವೆಂಪುರವರ ಕಾವ್ಯವನ್ನು ದರ್ಶಿಸುತ್ತಾ, ನವೋದಯವನ್ನು ಒಳ ಹೊಕ್ಕು ಸವಿಯುವ ವಿಧಾನವೂ ಇಲ್ಲಿ ಪರಿಚಯಿಸಿದ್ದೀರಿ. ನನ್ನಂತಹ ಸಾಹಿತ್ಯ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ.

    ಪ್ರತಿಕ್ರಿಯೆ
  4. ಶ್ರೀನಿವಾಸ ಡಿ.ಶೆಟ್ಟಿ

    ಆಪ್ಯಾಯಮಾನವಾದ ಬರಹ. ಪರಕಾಯ ಪ್ರವೇಶದಿಂದ ಉಂಟಾಗುವ ತನ್ಮಯತೆ ಅದ್ಭುತ. ಆದರೆ ಅದು ಎಲ್ಲ ಓದುಗರಿಗೂ ಸಾಧ್ಯವಾ?

    ಪ್ರತಿಕ್ರಿಯೆ
    • samyuktha

      ಸಾಧ್ಯವಾದಾಗಲೇ ಓದಿನ ಸಾರ್ಥಕ್ಯ ಅಲ್ಲವೇ?
      ಎಲ್ಲರಿಗೂ ಧನ್ಯವಾದಗಳು.

      ಪ್ರತಿಕ್ರಿಯೆ
  5. bharathi bv

    Naanu kuvempu avara kavana hechchu odilla … nimma lekhana odida nanthara odabeku ansthu …

    ಪ್ರತಿಕ್ರಿಯೆ
  6. Ambresh nayak

    Yava poorvagraha peedane villade, sidda nireekshegalillade parakaya pravesha madisidake …dhanyavadagalu sampu akka

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: