ಸಂಪು ಕಾಲಂ : ನಂಬಿಕೆಗಳ ಸುಳಿಗಳಲ್ಲಿ

ಪ್ರತಿನಿತ್ಯ ನಾವು ನೆಮ್ಮದಿಯಿಂದ ಉಸಿರಾಡಲು ನಮ್ಮ ಜೀವನದ ಒಂದು ಶಕ್ತಿ ಪೇಯ ಯಾವುದು ಹೇಳಿ?! ದಿನದಿಂದ ದಿನಕ್ಕೆ ನಮ್ಮ ಉತ್ಸಾಹ ಹೆಚ್ಚಿಸುವ, ಸಂಬಂಧಗಳ ಬೆಸೆಯುವ, ಜೀವನದ ಗೊಂಚಲು ಗೊಂಚಲು ಸರಪಳಿಗಳನ್ನು ಒಂದೊಂದಾಗಿಯೇ ಬಿಡಿಸುತ್ತಾ ಮುನ್ನುಗ್ಗಲು ಸಾಧ್ಯವಾಗಿಸುವ ಈ ಮದ್ದಿನ ಹೆಸರು “ನಂಬಿಕೆ”. ಮರಣ ಶಯ್ಯೆಯ ಮೇಲೆ ಮಲಗಿರುವ ರೋಗಿಗೆ ತಾನು ಬದುಕಿ ಬಂದು ಮತ್ತೆ ನಗುವ ನಂಬಿಕೆ, ಪ್ರೇಮಿ ತನ್ನ ಪ್ರೀತಿ ಜಗತ್ತಿನಲ್ಲಿಯೇ ಅತ್ಯುತ್ತಮ ಎಂದು ಕಾಪಾಡುವ ನಂಬಿಕೆ, ಸಂಬಂಧಗಳ ಪರಸ್ಪರ ನಂಬಿಕೆ, ಇಂದು ಕತ್ತಲಲ್ಲಿ ಮಲಗಿ ನಾಳೆ ಏಳುತ್ತೇನೆ ಎಂಬ ನಂಬಿಕೆ, ಕಾಲು ಮುಂದಿಟ್ಟರೆ ನೆಲ ಗಟ್ಟಿ ಎಂಬ ನಂಬಿಕೆ, ಇತ್ಯಾದಿ ಅನೇಕ ಸಣ್ಣ ಸಣ್ಣ ನಂಬಿಕೆಗಳ ಸುಳಿಗಳಲ್ಲಿ ನಮ್ಮನ್ನು ನಾವು ಜೋಪಾನ ಮಾಡುತ್ತಿರುತ್ತೇವೆ.
ತಮಾಷೆಗೆಂದು ಯಾರೋ ಆಡಿದ ಮಾತು. ನಾವು ಬದುಕನ್ನು, ನಮ್ಮ ಜೀವವನ್ನು ಎಷ್ಟು ನಂಬಿರುತ್ತೇವೆ ಎಂಬುದಕ್ಕೆ ಬೆಸ್ಟ್ ಉದಾಹರಣೆ, ನಾವು ಮೂರು ದಿನಕ್ಕೆಂದು ದೋಸೆ ಹಿಟ್ಟು ನೆನೆಸಿಡುವುದೇ ಎಂದು. ಹಾಸ್ಯಾಸ್ಪದ ಎನಿಸಿದರೂ, ಈ ಮಾತಿನಲ್ಲಿ ಎಂತಹ ಅರ್ಥವಿದೆ ಅಲ್ಲವೇ! “ಜೀವನ ನೀರಿನ ಗುಳ್ಳೆಯಂತೆ” ಎಂದೆಲ್ಲಾ ಬಹಳ ಬಹಳ ಓದಿರುತ್ತೇವೆ. ಆದರೂ ಸಿಕ್ಕಾಪಟ್ಟೆ ‘ಫ್ಯೂಚರ್ ಪ್ಲಾನ್” ಮಾಡುತ್ತಿರುತ್ತೇವೆ. ಈ ನಂಬಿಕೆ ಅನ್ನೋ ಗಟ್ ಫೀಲಿಂಗ್ ಜೀವನದಲ್ಲಿ ತುಂಬಾ ಅವಶ್ಯಕ.
ನಮ್ಮಜ್ಜಿ ತೆಲುಗಿನ ಒಂದು ಉಕ್ತಿ ಹೇಳುತ್ತಾರೆ. “ನಮ್ಮಿನವಾರು, ನಮ್ಮಕಪೋತೆ ಚೆಡಿಪೋತಾರು” (ನಂಬಿದವರು, ನಂಬದೆ ಹೋದರೆ ಅಥವಾ ನಂಬಿಕೆ ಕಳೆದುಕೊಂಡರೆ ನಾಶವಾಗಿಬಿಡುತ್ತಾರೆ). ನಾವು ಒಮ್ಮೆ ನಮ್ಮ ನಂಬಿಕೆಗಳನ್ನು ಕಳೆದುಕೊಂಡರೆ, ಜೀವನ ಭಾರವೆನಿಸುತ್ತದೆ, ಯಾವುದೋ ಕತ್ತಲೆಕವಿದ ಭಯ ನಮ್ಮನ್ನಾವರಿಸಿಬಿಡುತ್ತದೆ. ನಾವು ಅತ್ಯಂತ ಪ್ರೀತಿಯಿಂದ, ಭಕ್ತಿಯಿಂದ ಮೊದಲಿನಿಂದ ನಂಬಿದ್ದು ಇಂದು ಇದ್ದಕ್ಕಿದ್ದಂತೆ ಅದು ನಿಜವಲ್ಲ ಎಂದು ತಿಳಿದರೆ, ನಮ್ಮ ಮನಸ್ಸಿನ ಆಘಾತ ಯಾವಮಟ್ಟದ್ದಾಗಿರಬಹುದು!
ಆ ಆಘಾತ, ಇಷ್ಟು ದಿನ ನಾವು ಆ ನಂಬಿಕೆಯಲ್ಲಿ ಮೋಸ ಹೋದೆವಲ್ಲಾ ಎಂದು ನಮ್ಮ ಮೇಲೆ ನಮಗೆ ಉಂಟಾಗುವ ತಿರಸ್ಕಾರವಿರಬಹುದು, ನಾನು ನಂಬಿರುವ ಗಾಢ ಸತ್ಯ ಇತರರಿಗೆ ಒಂದು ದೊಡ್ಡ ಸುಳ್ಳು ಎನಿಸಿದ್ದು ತಡೆಯಲಾರದ ನೋವಿರಬಹುದು, ನಮ್ಮ ನಂಬಿಕೆ ಎಂಬ ಅಹಂಕಾರಕ್ಕೆ ಮುಳ್ಳು ತಾಗಿದ್ದಿರಬಹುದು. ಅಂತೂ ನೆಮ್ಮದಿ, ಜೀವನ ಹಾಳಾಗುವುದು ಹೌದು.
ನಂಬಿಕೆಗಳ ಭದ್ರ ಕೋಟಲೆಗೆ, ಅದರ ಹೊರತಾದ ಉಳಿಪೆಟ್ಟು ಬಿದ್ದಾಗ, ಅದು ಹೇಗೆ ಕುಸಿದು ಹೋಗುತ್ತದೆ. ಅದರೊಳಗೆ ಜೋಪಾನವಾಗಿದ್ದ ಮುಗ್ಧ ಮನಸ್ಸುಗಳು ಹೇಗೆ ಮುರುಟಿ ಹೋಗುತ್ತವೆ ಎಂಬ ಸೂಕ್ಷ್ಮ ಮನೋಭಾವವನ್ನು ಅತ್ಯಂತ ಮನೋಜ್ಞವಾಗಿ ಪ್ರತಿಬಿಂಬಿಸಿರುವುದು “ಇಜ್ಜೋಡು” ಎಂಬ ಖ್ಯಾತ ನಿರ್ದೇಶಕ ಸತ್ಯುರವರ ಸಿನೆಮಾದಲ್ಲಿ.
ಲೇಖಕ ಆನಂದ ರವರ ‘ನಾ ಕೊಂದ ಹುಡುಗಿ’ ಎಂಬ ಕಥೆಯನ್ನು ಆಕರವಾಗಿರಿಸಿ ಈ ಸಿನೆಮಾವನ್ನು ಚಿತ್ರಿಸಲಾಗಿದೆ. ಶೀರ್ಷಿಕೆಯೇ ಹೇಳುವಂತೆ, ಒಬ್ಬ ಹುಡುಗಿಯ ಮುಗ್ಧ ಮನಸ್ಸಿನ ಬಿಗಿ ನಂಬಿಕೆಗಳನ್ನು ಕೊಂದು, ಆ ಹುಡುಗಿ ನಡುಗಿಹೋಗಿ ತನ್ನ ಪ್ರಾಣವನ್ನೇ ತ್ಯಜಿಸುವ ಗಂಭೀರ ಕಥಾ ಹಂದರ. ಕಥೆಯಲ್ಲಿ ದೇವದಾಸಿ ಪದ್ಧತಿಯನ್ನು, ಅದರ ಕರಾಳತೆಯ ಕಿಂಚಿತ್ ಅರಿವೂ ಇಲ್ಲದೆ, ದೈವೀಕ ಎಂದು ನಂಬುವ ಮುಗ್ಧ ಮಾನಿನಿಯರ ಬದುಕನ್ನು ಕನ್ನಡಿಯಾಗಿಸಿದ್ದರೂ, ಅದರ ಜೊತೆಯಾಗಿ ಬದುಕಿನ ಅನೇಕ ಗಂಭೀರ ಒಳಸುಳಿಗಳು ಬಿಂಬಿಸಲ್ಪಟ್ಟಿದೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕಾಣಸಿಗುವುದು: ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಇವುಗಳ ಬಗ್ಗೆ ಬೆಳಕು, ಮನಸ್ಸಿನ ನಂಬಿಕೆ – ನಿರ್ಧಾರ – ದ್ವಂದ್ವಗಳ ಮನೋವಿಜ್ಞಾನ, ಬಡವರ ಪರ ದನಿಯೆತ್ತುವ ಮಾರ್ಕ್ಸ್ ವಾದ, ಹೊಸ ಚಿಗುರು- ಹಳೆ ಬೇರಿನ ಮೇಳೈಕೆ, ಸ್ತ್ರೀವಾದದ ಸವರಿಕೆ ಮತ್ತು ಸುಂದರವಾದ ಸ್ಥಳಗಳು ಹಾಗೂ ಕ್ಯಾಮೆರಾ ಕಣ್ಣು!

ಸಿನೆಮಾದ ಪ್ರಾರಂಭದಲ್ಲಿ ಒಂದು ನವೀನ ಪ್ರಾಕಾರದ ನೃತ್ಯವನ್ನು ತೋರಿಸಲಾಗಿದೆ. ಅದು ಪ್ರಾಚೀನತೆ ಮತ್ತು ನಾವೀನ್ಯತೆಯ ವೈರುದ್ಧ್ಯ ಬಿಂಬಿಸುವ ಒಂದು ವಿಚಾರ. ಕಥೆಯ ಸಾರಾಂಶ ಹೀಗಿದೆ: ಆನಂದ ಒಬ್ಬ ಫೋಟೋ ಜರ್ನಲಿಸ್ಟ್. ದೇಶ ವಿದೇಶಗಳಲ್ಲಿ ತನ್ನ ಕ್ಯಾಮೆರಾ ಛಾಪನ್ನು ಮೂಡಿಸಿರುತ್ತಾನೆ. ಪ್ರಸ್ತುತ ಹಳೆಯ, ಪಾಳುಬಿದ್ದ ದೇವಸ್ಥಾನಗಳನ್ನು, ಅದರಲ್ಲಿ ಅಡಗಿರುವ ಶಿಲ್ಪಕಲಾ ಪ್ರಬುದ್ಧತೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಉದ್ದೇಶದಿಂದ ಒಂದು ಹಳ್ಳಿಗೆ ಬಂದಿರುತ್ತಾನೆ. ದಾರಿಯಲ್ಲಿ ತನ್ನ ಜೀಪ್ ಕೆಟ್ಟು ಹೋಗಿ ಆ ಪ್ರಾಂತ್ಯದ ಒಬ್ಬನ ಸಹಾಯದ ಮೂಲಕ ಆ ಊರಿನ ಪಟೇಲನ ಮನೆ ಸೇರುತ್ತಾನೆ.
ಆ ಪಟೇಲನ ಮಗಳು ಚೆನ್ನಿ. ಇವಳ ಸೌಂದರ್ಯ, ಮೋಹಕತೆ, ಸೌಮ್ಯತೆಗಳಿಗೆ ಆನಂದ ಮಾರುಹೋಗುತ್ತಾನೆ. ಅವಳ ಬಗೆಗಿನ ಅದೇ ಆಕರ್ಷಣೆ ಅವನನ್ನು ಭ್ರಾಂತಿಗೊಳಿಸಿ ಪದೇ ಪದೇ ಅವಳನ್ನೇ ಸ್ಮರಿಸುವಂತಾಗುತ್ತದೆ. ಎಷ್ಟರಮಟ್ಟಿಗೆಂದರೆ, ಆತ ಹೋದಲೆಲ್ಲಾ ಚೆನ್ನಿ ಕಾಣುತ್ತಾಳೆ, ಮಾತಾಡುವಷ್ಟರಲ್ಲಿ ಮಾಯವಾಗುತ್ತಾಳೆ. ಆದರೆ, ಆ ಊರಿನ ಒಬ್ಬ ಹುಚ್ಚನಿಂದ ಮತ್ತು ಅನೇಕರಿಂದ ಅವಳ ಬಗೆಗಿನ ಏನೋ ಮಾರ್ಮಿಕ ವಿಚಾರವಡಗಿದೆ ಎಂದು ತಿಳಿದು ಕುತೂಹಲನಾಗುತ್ತಾನೆ.
ಚೆನ್ನಿಯೊಡನೆ ಸ್ನೇಹ, ಮಾತು ಹೆಚ್ಚಾಗಿ, ಆಕೆಯಿಂದಲೇ ಊರಿನ ಹುಚ್ಚನ ಕಥೆಯನ್ನು ಅರಿಯುತ್ತಾನೆ. ಆ ಹುಚ್ಚ ಒಂದು ಕಾಲದಲ್ಲಿ ಯೋಧ, ಆತನ ಹೆಂಡತಿ ಕೆಂಪಿ, ಸುಂದರಿ. ಮದುವೆಯಾದ ಒಂದೇ ತಿಂಗಳಿಗೆ ಆತನಿಗೆ ಸೈನ್ಯದಿಂದ ಬುಲಾವ್ ಬಂದು ಹೊರಡುತ್ತಾನೆ. ಸಾಕಷ್ಟು ಕಾಲ ಹಿಂದಿರುಗುವುದಿಲ್ಲ, ಕೊನೆಗೊಮ್ಮೆ ಆತ ವಿಧಿ ವಶನಾಗಿರುವುದು ತಿಳಿಯುತ್ತದೆ. ಕಾಲಾಯುಗತ ಆತನ ಹೆಂಡತಿ ಕೆಂಪಿ ತನ್ನನ್ನು ಮೋಹಿಸಿದ್ದ, ತನಗಿಂತಲೂ ಕಿರಿಯನಾದವನನ್ನು ಊರ ಸಮ್ಮತಿಯಿಂದಲೇ ವರಿಸುತ್ತಾಳೆ. ಕೆಲ ಕಾಲದ ನಂತರ ಕೆಂಪಿ ತುಂಬು ಗರ್ಭಿಣಿ, ಆಗ ಈ ಯೋಧ ಮರಳಿ ಬರಬೇಕೆ! ಕೆಂಪಿಯ ವಿಷಯವರಿತು ಆಘಾತಗೊಂಡು ಅರೆ ಹುಚ್ಚನಾಗುತ್ತಾನೆ. ಈ ವಿಚಾರ ತಿಳಿದ ಆನಂದ ಆ ಹುಚ್ಚನ ಬಗ್ಗೆ ಮರುಕ ಪಡುತ್ತಾನೆ.
ಹೀಗೆ ದಿನ ಕಳೆಯಲು, ಒಮ್ಮೆ ಆನಂದನಿಗೆ ಚೆನ್ನಿಯ ಬಗೆಗಿನ, ಆತನಿಗೆ ಇಷ್ಟು ದಿನ ಕಾಡಿದ್ದ ಮರ್ಮ ಬಗೆ ಹರಿಯುತ್ತದೆ. ಚೆನ್ನಿ ಒಬ್ಬ ದೇವದಾಸಿ ಎಂಬ ಸತ್ಯ ತಿಳಿಯುತ್ತದೆ. ಊರ ಶಾಂತಿ ಉಳಿಸಲು ಪಟೇಲ ತನ್ನ ಮಗಳು ಚೆನ್ನಿಯನ್ನೇ ‘ಬಸವಿ’ ಮಾಡಿರುತ್ತಾನೆ. ಚೆನ್ನಿ ಭಕ್ತಿಯಿಂದ, ಇದು ದೇವರ ಕೆಲಸ ಎಂದೇ ನಂಬಿ ವರ್ಷಗಳಿಂದ ಬದುಕಿರುತ್ತಾಳೆ. ಈ ವಿಷಯವರಿತ ಆನಂದ ಖೇದನಾಗಿ, ಆಕೆಯ ಮೇಲೆ ಜರುಗುತ್ತಿರುವುದು ದೌರ್ಜನ್ಯವೆಂದೂ, ಅದು ಅಂಧತ್ವ, ಶೋಷಣೆ ಎಂದೂ ಆಕೆಗೆ ತಿಳಿಹೇಳುತ್ತಾನೆ. ಆಕೆಯ ನಂಬಿಕೆಗಳ ಭದ್ರ ಬುನಾದಿಯನ್ನು ಒಡೆದು ಚೂರು ಮಾಡುತ್ತಾನೆ. ಚೆನ್ನಿಗೆ ಮೊಟ್ಟ ಮೊದಲನೇ ಬಾರಿ ತಾನು ಮಾಡುತ್ತಿರುವುದು ತಪ್ಪು ಎಂಬ ಅರಿವಾಗುತ್ತದೆ. ತಾನು ಮಾಡಿದ ಕಾರ್ಯವೆಲ್ಲ ನಿಕೃಷ್ಟ ಎಂದು ತತ್ತರಿಸುತ್ತಾಳೆ. ಈ ಸಂದರ್ಭದಲ್ಲಿ ಚೆನ್ನಿಯ ನಂಬಿಕೆಯ ಕನ್ನಡಿ ಒಡೆದು ಹೋಗುತ್ತದೆ, ಅವಳು ತಾನು ಜೀವನವಿಡೀ ಇಂತಹ ನೀಚ ಕೆಲಸ ಮಾಡಿದ್ದೇನೆಯೇ ಎಂದು ನಲುಗಿ ಹೋಗುತ್ತಾಳೆ.
ಆನಂದ ಚೆನ್ನಿಗೆ, ಕೆಂಪಿಯಂತೆ ತಾನೂ ಹೊಸ ಬಾಳನ್ನು ಪ್ರಾರಂಭಿಸಲು ಬೋಧಿಸುತ್ತಾನೆ. ಆಗ ಚೆನ್ನಿ ಆನಂದನಿಂದಲೇ ಆ ಹೊಸ ಬಾಳನ್ನು ಬಯಸುತ್ತಾಳೆ. ಆದರೆ ಆನಂದನಿಗೆ ಅದು ಸಾಧ್ಯವಾಗದು! ಕಥೆ ಗಂಭೀರ ತಿರುವು ಪಡೆಯುವುದು ಇಲ್ಲಿ. ತನ್ನೆಲ್ಲಾ ಓದು, ಜ್ಞಾನ, ವೈಚಾರಿಕತೆಗಳನ್ನು ಬಾಯ್ಮಾತಾಗಿಸಲು ಆನಂದ ಮುಂದಾಗುತ್ತಾನೆಯೇ ಹೊರತು, ತಾನು ನುಡಿದಂತೆ ನಡೆಯಲಾರ! ತನ್ನೆಲ್ಲಾ ರಾಷನಲ್ ಥಿಂಕಿಂಗ್ ಪುಸ್ತಕದ ಚಿತ್ರವಾಗಿ ಬಿಡುತ್ತದೆ. ಇದು ಮನಸ್ಸು ಎಂಬ ಅತ್ಯಂತ ನಿಗೂಢ ವಿಸ್ಮಯದ ಕೆಲವು ನಿದರ್ಶನಗಳು! ಬೆಳಗಾಗುವಷ್ಟರಲ್ಲಿ ಚೆನ್ನಿ ಖಿನ್ನತೆಯಿಂದ ಆತ್ಮ ಹತ್ಯೆ ಮಾಡಿಕೊಂಡಿರುತ್ತಾಳೆ. ಆನಂದ ಪಾಪ ಪ್ರಜ್ಞೆಯಿಂದ ಉಳಿದು ಕೊಳ್ಳುತ್ತಾನೆ.
ಆನಂದನ ನಡವಳಿಕೆಯಿಂದ ನುಡಿದಂತೆ ನಡೆಯುವುದು, ಸತ್ಯವಾಗಿ ಬದುಕುವುದು ಎಷ್ಟು ಕಠಿಣ ಎಂಬುದರ ಅರಿವಾಗುತ್ತದೆ. ನಮ್ಮೆಲ್ಲರ ಬದುಕಿನಲ್ಲೂ ಎಷ್ಟೋ ಸಂಧರ್ಭಗಳಲ್ಲಿ ಹೀಗೆಯೇ ನಡೆದಿರಲು ಸಾಧ್ಯ. ನಮ್ಮೆಲ್ಲರಲ್ಲೂ ಒಬ್ಬ ಆನಂದ ಮತ್ತು ಒಬ್ಬಳು ಚೆನ್ನಿ ಇರುವುದು ಹೌದಲ್ಲವೇ! ಚೆನ್ನಿಯ ಬಲವಾದ ನಂಬಿಕೆಗಳು ಮುರಿದು, ಆಕೆಯ ಮುಗ್ಧತೆ ಒಡೆದು ಚೂರಾದಾಗ ಅವಳಿಗಾದ ಆಘಾತ ತಡೆಯಲಾಗದು. ಜೀವನದಲ್ಲಿ ನಂಬಿಕೆಗಳ ಪಾತ್ರ ಎಷ್ಟು ಹಿರಿಯದು ಎಂಬುದನ್ನು ಈ ಸನ್ನಿವೇಶ ಎತ್ತಿ ತೋರಿಸುತ್ತದೆ. ಕೆಂಪಿಯ ಮದುವೆಗೆ ಊರ ಜನರೆಲ್ಲಾ ಸಮ್ಮತಿ ನೀಡುತ್ತಾರೆ, ಆ ಊರ ಹುಡುಗ, ಕೆಂಪಿಗಿಂತಲೂ ಕಿರಿಯವ ಆಕೆಯನ್ನು ಮದುವೆಯಾಗುತ್ತಾನೆ. ಆದರೆ ಅದೇ ಕೆಲಸ ಹೆಚ್ಚು ವೈಚಾರಿಕತೆಯುಳ್ಳ, ವಿದ್ಯೆಯುಳ್ಳ ಆನಂದನಿಗೆ ಸಾಧ್ಯವಾಗದು! ನನ್ನ ಅನಿಸಿಕೆಯ ಪ್ರಕಾರ ಆನಂದನ ಈ ನಡತೆಗೂ (ತಾನು ಎಷ್ಟೇ ಓದಿ ಜ್ಞಾನ ಪಡೆದಿದ್ದರೂ) ಅವನ ಮನದಾಳದಲ್ಲಿ ಬೇರೂರಿದ್ದ ಕೆಲವು ಗಾಢ ಸಾಮಾಜಿಕ ನಂಬಿಕೆಗಳೇ ಕಾರಣವಿರಬಹುದಲ್ಲವೇ?!
 

‍ಲೇಖಕರು avadhi

May 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. sunil

    ಹಿಂದೊಮ್ಮೆ ನಂಬಿಕೆಗಳ ಬಗ್ಗೆ ನೀವು ಬರೆದಿದ್ದೀರಿ… ಆಗಲೂ ಯು ಜಿ ಕೃಷ್ಣ ಮೂರ್ತಿ ಮಾತುಗಳನ್ನು ನೆನಪಿಸಿದ್ದೆ
    “ನ೦ಬಿಕೆಯನ್ನೂ ಪ್ರಶ್ನೆ ಮಾಡಲು ಸಾಧ್ಯವಾಗಬೇಕು…..

    ಪ್ರತಿಕ್ರಿಯೆ
  2. Vasuki

    ಬಹಳ ವರ್ಷಗಳ ಮುಂಚೆ ಈ ಕಥೆ ಒಂದು ಕಿರುಚಿತ್ರವಾಗಿ ಬಂದಿತ್ತು, ದೂರದರ್ಶನದಲ್ಲಿ ನೋಡಿದ್ದೆ. ತುಂಬಾ ದಿನ ಕಾಡಿತ್ತು ಈ ಕಥೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: