ಮಳೆಯಲ್ಲಿ ಮದುಮಗಳು!

ರೋಹಿತ್ ಎಸ್. ಹೆಚ್

ಚಿತ್ರಗಳು : ಸುರೇಶ್ ಕುಮಾರ್ ಮತ್ತು ವಿಜಯ್ ಹೆಚ್

ಎಷ್ಟೋ ನೋವು-ನಿರಾಸೆ, ದು:ಖ ದುಗುಡಗಳ ನಡುವೆ, ನಲ್ಲೆಯ ಸಣ್ಣ ಕಣ್ಣೋಟವೊಂದು ಮುದಗೊಳಿಸುವಂತೆ, ಬೇಸಿಗೆಯ ಬಿಸಿಗೆ ಬೆಂದ ಬೆಂಗಳೂರಿಗೆ ತಂಪೆರೆಯಬೇಕಿದ್ದ ಮಳೆ, ಶನಿವಾರದ ದಿನ ಸಂಜೆಯಿಂದ ವಿರಾಜಮಾನವಾಗಿ ಸುರಿಯುತ್ತಲೇ ಇತ್ತು. ನನ್ನಂಥಹ ಹಲವಾರು ಅಭಿಮಾನಿಗಳಿಗೆ ಅದು ಅಕಾಲಿಕ ಮಳೆಯಂತೆಯೇ ತೋರುತ್ತಿತ್ತು. ’ಮದುಮಗಳು’ ಮಂಟಪವೇರಲು ಅಡ್ಡಗಾಲು ಹಾಕುತ್ತಿದ್ದ ಮಳೆ, ’ವಿಘ್ನ ಸಂತೋಷಿ’ ಎಂದೆನಿಸುತ್ತಿತ್ತು. ಮಲೆನಾಡಿನ ಅವಿಭಾಜ್ಯ ಅಂಗವಾಗಿರುವ ಮಳೆ, ಹೀಗೆ ಮಲೆನಾಡ ಮದುಮಗಳು ಕಾಣಿಸಿಕೊಂಡಾಗಲೆಲ್ಲಾ ಒಂದು ಸಲವಾದರೂ ಬಂದು ಹೋಗುವುದು ವಾಡಿಕೆಯಾಗಿಬಿಟ್ಟಿದೆ. ಹಿಂದೆ ಮೈಸೂರಿನಲ್ಲಿ ಮೊದಲ ಬಾರಿ ಮದುಮಗಳು ಬಂದಾಗ ಹರಸಿ ಹೋಗಿದ್ದ ಮಳೆ, ಈಗ ಮದುಮಗಳು ಬೆಂಗಳೂರಿಗೆ ಬಂದಿರುವಾಗಲು ತಪ್ಪದೆ ಹಾಜರಾಗಿ, ಮುಂದೆ ಕುಪ್ಪಳಿಯಲ್ಲಿಯೂ ಕಾಣಿಸಿಕೊಳ್ಳುವ ಸೂಚನೆ ಕೊಟ್ಟು ಹೋಗಿದೆ.

ಕಳೆದ ಶನಿವಾರ ಮದುಮಗಳ ಕುಟುಂಬಕ್ಕೆ ವಿಶೇಷವಾದ ದಿನವಾಗಿತ್ತು, ಸಂತೋಷ ಸಂಭ್ರಮಗಳನ್ನುಂಟು ಮಾಡಿತ್ತು. ಕಾರಣ, ವಾರ್ತಾ ಇಲಾಖೆಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಾಗೂ ಹಲವು ಗಣ್ಯವಕ್ತಿಗಳು ನಾಟಕ ನೋಡಲು ಬರುತ್ತಾರೆ ಎನ್ನುವುದು. ಅಲ್ಲದೇ, ಇದೇ ಸಂದರ್ಭದಲ್ಲಿ ನಾಟಕದ ಹಾಡುಗಳ ಸಿ.ಡಿ. ಬಿಡುಗಡೆ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಆದರೆ, ಕಳೆದೆರಡು ದಿನಗಳಿಂದ ಸುರಿದಿದ್ದ ಮಳೆ, ಸಂಜೆಯಿಂದಲೇ ಮೋಡ ದಟ್ಟವಾಗುವಂತೆ ತೋರುತ್ತಿದ್ದ ವಾತಾವರಣ ಎಲ್ಲರಲ್ಲಿ ಆತಂಕವನ್ನೂ ಉಂಟುಮಾಡಿತ್ತು. ಎಲ್ಲರೂ ನಿರೀಕ್ಷಿಸಿದ್ದಂತೆ ಕೊನೆಗೂ ಮಳೆ ತನ್ನ ಮೇಳವನ್ನು ಶುರುವಿಟ್ಟುಕೊಂಡಿತು. ಮಳೆಯ ಆರ್ಭಟ-ಗದ್ದಲ-ಗೊಂದಲಗಳಲ್ಲಿ ಮದುಮಗಳು ಮಂಟಪವೇರುವುದೇ ಅನುಮಾನವಾಯಿತು……..
ಅತ್ತ ಒಂದೇ ಸಮನೆ ಜೋರಾಗಿ ಸುರಿದು ನಿಲ್ಲದೆ, ಇತ್ತ ಸುಮ್ಮನೆ ನಿಲ್ಲದೆ ಆಟವಾಡುತ್ತಿದ್ದ ಮಳೆಯ ಚೇಷ್ಟೆಗೆ ಬೇಸತ್ತ ಕೆಲವರು ಮನೆಯ ಹಾದಿ ಹಿಡಿದರೆ, ಅಲ್ಲೇ ಉಳಿದವರು ಸಹಜ ಸಂದೇಹಗಳಿದ್ದರೂ, ಮಳೆಯಿಂದ ಬಚಾವಾಗಲು ಬವಣೆಪಡುತ್ತಿದ್ದರೇ ಹೊರತು, ಅಲ್ಲಿಂದ ಕದಲಲಿಲ್ಲ. ಪ್ರೇಕ್ಷಕರ ಉತ್ಸುಕತೆಯನ್ನು, ಕಲಾಪ್ರೇಮಿಗಳ ಅಭಿಮಾನವನ್ನು ಅರಿತ ಬಸವಲಿಂಗಯ್ಯನವರು ಅಲ್ಲಿಗೆ ಆಗಮಿಸಿ, “ನಾಟಕ ನೋಡಲು ನಿದ್ದೆಯನ್ನು, ಮಳೆಯನ್ನು ಲೆಕ್ಕಿಸದೆ ನೀವೆಲ್ಲಾ ಇರುವಾಗ, ನಾಟಕ ನಡೆದೇ ನಡೆಯುತ್ತದೆ. ಎಲ್ಲರೂ ದಯವಿಟ್ಟು ಕಾಜಾಣದ ಬಳಿ ನಿಂತು, ಮಳೆಯಿಂದ ಬಚಾವಾಗಿ. ನಾವು ವೆದರ್ ರಿಪೋರ್ಟ್ ಕೇಳಿದ್ದೇವೆ, ಸುಮಾರು ೧೧ ರ ವೇಳೆಗೆ ಮಳೆ ನಿಲ್ಲುತ್ತದೆ ಎಂದು ಹೇಳಿದ್ದಾರೆ” ಎಂದು ಧೃಡವಾದ ನಂಬಿಕೆಯಿಂದ ಹೇಳಿ, ಅಲ್ಲಿ ಉಳಿದಿದ್ದವರೆಲ್ಲರ ಸಂದೇಹಕ್ಕೆ, ಅತೃಪ್ತಿಗೆ ಉತ್ತರ ಕೊಟ್ಟು ಹೋದರು.

ವೆದರ್ ರಿಪೋರ್ಟಿನ ಖಚಿತತೆಯೋ, ಬಸು ಅವರ ಧೃಡ ನಂಬಿಕೆಯೋ, ಒಟ್ಟಿನಲ್ಲಿ ಮಳೆ ಸ್ವ ಇಚ್ಛೆಯಿಂದ ಮದುಮಗಳು ಮಂಟಪವೇರಲು ಸಹಕಾರ ಮಾಡಿಕೊಟ್ಟಿತು. ಸುರಿಯುತ್ತಿದ್ದ ಮಳೆ ನಿಂತ ಕೂಡಲೇ, ಮೆಲ್ಲಗೆ ಬೀಸುತ್ತಿದ್ದ ತಂಪಾದ ಗಾಳಿ, ಮಳೆಯ ನಂತರದ ಆಹ್ಲಾದತೆ, ಕಣ್ಣೆದುರಿನ ಮಲೆನಾಡ ಹೋಲುವ ರಂಗಸ್ಥಳ, ಇವೆಲ್ಲಾ 3ಡಿ, 7ಡಿ ಎಂಬ ಅತ್ಯಾಧುನಿಕ ಟೆಕ್ನಾಲಜಿಗಳನ್ನೂ ಮೀರಿಸುವ ಅನುಭವ ನೀಡುತ್ತ ಕಾತರವನ್ನು ಹೆಚ್ಚಿಸುತ್ತಿದ್ದರೆ, ಅತ್ತ, ಅದಾಗಲೇ ಮೇಕಪ್ ಹಾಕಿಕೊಂಡು ಸುಮಾರು ಗಂಟೆಗಳ ಕಾಲ ಸುಮ್ಮನಿದ್ದ ನಟರುಗಳೆಲ್ಲಾ ಚುರುಕಾಗಿ, ಯಾವುದೇ ಆಯಾಸವಿಲ್ಲದೆ, ಎಳ್ಳಷ್ಟೂ ನಿರಾಸಕ್ತಿ ತೋರದೆ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಕೆಲವೇ ನಿಮಿಷಗಳಲ್ಲಿ ಪಾತ್ರಗಳಾಗಿ ಬಂದು ಕಥೆ ಹೇಳಲು ಶುರುವಿಟ್ಟುಕೊಂಡರು……ಆನಂತರ ನಡೆದದ್ದೆಲ್ಲಾ ನೋಡುಗರ ಕಣ್ಮನ ಸೂರೆಗೊಳ್ಳುವ ಪ್ರಯೋಗ, ಎಂದಿನಂತೆ ಬಲು ಚೆಂದವಾಗಿಯೂ (ಮಳೆಯ ಕಾರಣ ಅಲ್ಲಲ್ಲಿ ಬೆಳಕು ಕೈಕೊಟ್ಟರೂ), ಸ್ಪಷ್ಟವಾಗಿಯೂ ನಾಟಕವನ್ನು ಪ್ರಸ್ತುತಪಡಿಸಿದ ಹುಮ್ಮಸ್ಸಿನ ಹುಡುಗರ ಶ್ರಮ.
ಪ್ರೇಕ್ಷಕರ ಕಾತರವನ್ನು ಕಂಡು ಬಸು ಮತ್ತವರ ತಂಡ ಸ್ಪಂದಿಸಿದ್ದನ್ನು, ಅವರ ದಿಟ್ಟತನ, ಸಹಕಾರ, ಪೂರ್ವ ಸಿದ್ದತೆ, ಒಗ್ಗಟ್ಟನ್ನು ಕಂಡು ಖುಷಿಯಾಗುತ್ತಿದೆ ಹಾಗೂ ಬಹು ಹೆಮ್ಮೆಯೆನಿಸುತ್ತಿದೆ. ಹಾಗೆಯೇ, ಮಳೆ-ಗಾಳಿ-ಚಳಿಯನ್ನು ಲೆಕ್ಕಿಸದೆ ಮದುಮಗಳನ್ನು ನೋಡಿಯೇ ಹೋಗಬೇಕೆಂದು ಮಳೆಯಂತೆ ತಾವೂ ಸಹ ಹಠ ಹಿಡಿದು ನಿಂತ ಆಸಕ್ತರ ಅಭಿಮಾನವನ್ನು ಮೆಚ್ಚಲೇಬೇಕು.
Cheers to the Team!! 
ಫೈನಲ್ ಪಂಚ್: ಮಳೆಯ ವಿಷಯದಲ್ಲಿ, ಹವಾಮಾನ ಇಲಾಖೆಯವರ ರಿಪೋರ್ಟ್ ಯಾವಾಗಲೂ ಖಚಿತವಾಗಿಯೇ ಇರುತ್ತದೆ. ಯಾಕೆಂದರೆ, ’ಮಳೆಯಾಗುವ ಸಂಭವವಿದೆ’ / ’ಮಳೆ ನಿಂತುಬಿಡಬಹುದು’ ಎಂದವರು ಹೇಳುತ್ತಾರೆಯೇ ಹೊರತು, ’ಮಳೆಯಾಗುತ್ತದೆ’ / ’ಮಳೆ ನಿಲ್ಲುತ್ತದೆ’ ಎಂದಲ್ಲವಲ್ಲ!!  
ಮಳೆಯಾದರೆ, ’ಸಂಭವವಿದೆ ಎಂದು ಹೇಳಿದ್ದೆವಲ್ಲ, ಅದಕ್ಕೆ ಮಳೆಯಾಯಿತು’ ಎನ್ನುತ್ತಾರೆ. ಮಳೆ ಆಗದಿದ್ದರೆ, ’ಸಂಭವವಿದೆ ಎಂದಷ್ಟೇ ಹೇಳಿದಿದ್ದು’ ಎಂದು ಜಾರಿಕೊಳ್ಳುತ್ತಾರೆ. ಹ್ಹ..ಹ್ಹ..ಹ್ಹ…

‍ಲೇಖಕರು avadhi

May 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ರಾಧಿಕಾ

    ರೋಹಿತ್, ಲೇಖನ ಚೆನ್ನಾಗಿದೆ. ಸುರಿವ ಮಳೆಯಲ್ಲಿಯೂ ಕಾದು ನಿಂತ ಪ್ರೇಕ್ಷಕರು, ಪ್ರದರ್ಶನ ನೀಡಿದ ನಾಟಕ ತಂಡದವರು ಅಭಿನಂದನಾರ್ಹರು.

    ಪ್ರತಿಕ್ರಿಯೆ
  2. D. Mahendra

    ಇವೆಲ್ಲದ್ರೊಡನೆ ಅಭಿನ೦ದಿಸಬೇಕಾದ ಇನ್ನಿತರ ವ್ಯಕ್ತಿಗಳೆ೦ದರೆ ಇಲಾಖೆ ಸಿಬ್ಬ೦ದಿ. ಮಳೆ, ಗಾಳಿ ಲೆಕ್ಕಿಸದೇ ವ್ಯವಸ್ಥೆಯಲ್ಲೆ ತೊಡಗಿಕೊ೦ಡದ್ದು, ಮಳೆಯಲ್ಲೆ ತೊಯ್ದು ತೊಪ್ಪೆಯಾಗಿದ್ದರೂ ಅತಿಥಿಗಳಿಗೆ ಕುಳಿತುಕೊಳ್ಳಲು ಹಾಸಿಗೆ ಹಾಸಿ, ಮಳೆಯಲ್ಲೆ ಅವುಗಳ ತೆರೆವುಗೊಳಿಸಿ, ಮತ್ತೆ ನಾಟಕ ಆರ೦ಭಗೊ೦ಡ ನ೦ತರ ಆಸನಗಳ ಸಿದ್ದ ಪಡಿಸಿದ್ದು ನೀಜಕ್ಕೂ ಪ್ರಶ೦ಶನೀಯ.
    ಶುಕ್ರವಾರ ಮಳೆ ರಭಸಕ್ಕೆ ನಾಟಕ ನಡೆಯಲೇ ಇಲ್ಲ, ಆದರೆ ಪರ ಊರುಗಳಿ೦ದ ಬ೦ದವರು ರಾತ್ರಿ ಅಲ್ಲೆ ಉಳಿಯಲು ಜಮಖಾನ ವ್ಯವಸ್ಥೆ ಒದಗಿಸಲಾಯಿತು.

    ಪ್ರತಿಕ್ರಿಯೆ
    • ರೋಹಿತ್.ಎಸ್.ಹೆಚ್

      ಥ್ಯಾಂಕ್ಯು ಮಹೇಂದ್ರ ಸರ್…ತಪ್ಪಿ ಹೋಗಿದ್ದ ಅಂಶವೊಂದನ್ನು, ತಿಳಿಸಿ ಕೃತಜ್ನತೆ ಪೂರ್ಣವಾಗುವಂತೆ ಮಾಡಿದ್ದೀರ..
      ಸಿಬ್ಬಂದಿಯ ಸಹಕಾರ, ಶ್ರಮ ಕೂಡ ಶ್ಲಾಘನೀಯ… 🙂

      ಪ್ರತಿಕ್ರಿಯೆ
  3. naithya

    ಚಂದ ಉಂಟು ಸರ್ ಬರಹ ಮಲೆನಾಡ ಮಳೆಯೇ ಹಾಗೆ ಅಲ್ವಾ…
    ನಾಟಕ ತಂಡದವರು ಅಭಿನಂದನೆಗಳು…

    ಪ್ರತಿಕ್ರಿಯೆ
  4. ರೋಹಿತ್.ಎಸ್.ಹೆಚ್

    ಲೇಖನ ಓದಿ, ತಿದ್ದಿ ಮೆಚ್ಚಿದ ಎಲ್ಲರಿಗೂ ವಂದನೆಗಳು… 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: