ಜಿ ಪಿ ಬಸವರಾಜು ಕಾಲಂ : ಬರಹಗಾರರ ಹೊಣೆಗಾರಿಕೆ

ರಾಜಕೀಯ ಪಕ್ಷಗಳು ಬರುತ್ತವೆ, ಹೋಗುತ್ತವೆ. ಚುನಾವಣೆಯಲ್ಲಿ ಮತದಾರ ತನಗೆ ಇಷ್ಟವಾದ ವ್ಯಕ್ತಿಗಳನ್ನು ಮತ್ತು ಪಕ್ಷಗಳನ್ನು ಆಯ್ಕೆಮಾಡುತ್ತಾನೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜವಾದ ಕ್ರಿಯೆ. ಮೊನ್ನೆ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಮತದಾರನ ಆಯ್ಕೆ ಕಾಂಗ್ರೆಸ್ ಪಕ್ಷ. ಇದಕ್ಕೆ ಸ್ಪಷ್ಟ ಬಹುಮತವೂ ದೊರೆತಿದೆ. ಮುಂದಿನ ಐದು ವರ್ಷಗಳ ಕಾಲ ಅಧಿಕಾರವನ್ನು ನಡೆಸುವ ಅವಕಾಶವನ್ನು ಕಾಂಗ್ರೆಸ್ ಪಡೆದುಕೊಂಡಿದೆ.
ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಕೆಲವು ಗಣ್ಯ ಬರಹಗಾರರು ಮತ್ತು ಚಿಂತಕರು ಮತದಾರರಿಗೆ ಮಾಡಿಕೊಂಡಿದ್ದ ಮನವಿ ಕೆಲವರ ತೀವ್ರ ಟೀಕೆಗೆ ಗುರಿಯಾಗಿತ್ತು. ಭ್ರಷ್ಟ ಮತ್ತು ಕಳಂಕಿತ ರಾಜಕಾರಣಿಗಳಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಈ ಬರಹಗಾರರು ಮತದಾರರನ್ನು ವಿನಂತಿಸಿದ್ದು ಸರಿಯಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, ಹೀಗೆ ಮಾಡಿಕೊಂಡ ಮನವಿಯ ಹಿಂದೆ ಸ್ವಾರ್ಥದ ಲೇಪವೂ ಇದೆ ಎಂದು ವಾದಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ಥಾನ ಮಾನಗಳನ್ನು ಪಡೆದುಕೊಳ್ಳುವ ಹುನ್ನಾರ ಇಂಥ ಪ್ರಯತ್ನದ ಹಿಂದಿದೆ ಎಂದು ಟೀಕಿಸಿದವರೂ ಉಂಟು. ಅಗತ್ಯ ಸಂದರ್ಭದಲ್ಲಿ ಬರಹಗಾರರು ಸ್ಪಷ್ಟ ನಿಲುವನ್ನು ತಳೆಯುವುದು ಅವರ ಕರ್ತವ್ಯ ಎಂದು ಬರಹಗಾರರ ನಿಲುವನ್ನು ಸಮರ್ಥಿಸಿದವರೂ ಇದ್ದಾರೆ.
ಬರಹಗಾರರು ಯಾಕೆ ಇಂಥ ನಿಲುವನ್ನು ತಳೆದರು? ಅದು ಅವರಿಗೆ ಅನಿವಾರ್ಯವಾಗಿತ್ತೇ?
ಹೌದು, ಅದು ಅನಿವಾರ್ಯವಾಗಿತ್ತು. ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಬಲ್ಲವರಿಗೆ ಈ ಅನಿವಾರ್ಯತೆ ಅರ್ಥವಾಗುತ್ತಿತ್ತು.
ಕಾಂಗ್ರೆಸ್ನಲ್ಲಿ ಕಳಂಕಿತರು ಇಲ್ಲವೆಂದಲ್ಲ. ಭ್ರಷ್ಟಾಚಾರ ಎನ್ನುವುದು ಇಡೀ ಭಾರತದಲ್ಲಿಯೇ ಎಲ್ಲ ಪಕ್ಷಗಳನ್ನು ನುಂಗಿದೆ. ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಕಳಂಕಿತರು ಇದ್ದಾರೆ. ಇಂಥ ಸನ್ನಿವೇಶದಲ್ಲಿ ಭ್ರಷ್ಟಾಚಾರದಿಂದ ಕಾಂಗ್ರೆಸ್ಸನ್ನು ಹೊರತು ಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಇದಕ್ಕಿಂತ ಮುಖ್ಯವಾದ ಕೆಲವು ಸಂಗತಿಗಳನ್ನು ಕರ್ನಾಟಕದ ಚುನಾವಣೆ ಮುಂದಿಟ್ಟಿತ್ತು:
ಬಿಜೆಪಿಯ ಆಡಳಿತದಲ್ಲಿ ಕರ್ನಾಟಕದ ಸಂಪತ್ತಿನ ಲೂಟಿಯಾಗಿತ್ತು. ಗಣಿಗಾರಿಕೆ ಎಂಬುದು ತಮ್ಮ ಜೇಬುಗಳನ್ನು ತುಂಬಿಕೊಳ್ಳಲು ಇರುವ ಮಾರ್ಗವೆಂದು ಭಾವಿಸುವ ರಾಜಕಾರಣಿಗಳಿಗೆ ಬಿಜೆಪಿ ಮುಕ್ತ ದಾರಿಗಳನ್ನು ತೆರೆದಿತ್ತು. ಭೂ ಹಗರಣಗಳು, ಅಕ್ರಮ ಗಣಿಗಾರಿಕೆಯ ಆರೋಪಗಳು ಸುತ್ತಿಕೊಂಡು, ಅವುಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ, ಮುಖ್ಯಮಂತ್ರಿ ತನ್ನ ಸ್ಥಾನವನ್ನು ತೊರೆಯಬೇಕಾದ ಅನಿವಾರ್ಯ ಪರಿಸ್ಥಿತಿ; ಹಾಗೆಯೇ ಸಚಿವರು ತಮ್ಮ ಮಂತ್ರಿಪದವಿಗಳನ್ನು ತೊರೆಯಬೇಕಾದ ಒತ್ತಡ ನಿರ್ಮಾಣವಾದದ್ದು ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿಯೇ. ಆಗಲೂ ಬಿಜೆಪಿ ಇಂಥವರನ್ನು ಪಕ್ಷದಿಂದ ಹೊರಗಟ್ಟಲಿಲ್ಲ; ಇವರನ್ನು ಸಮರ್ಥಿಸಿಕೊಳ್ಳುತ್ತಲೇ ಇತ್ತು.
ಮತಧರ್ಮನಿರಪೇಕ್ಷಿತ ಸಂವಿಧಾನಕ್ಕೆ ಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿಯೂ, ಮತಧರ್ಮಗಳನ್ನು ನಿರ್ಲಜ್ಜವಾಗಿ ಬಳಸಿಕೊಂಡ ಬಿಜೆಪಿ ಸರ್ಕಾರ ಕರ್ನಾಟಕದ ಕೋಮು ಸಾಮರಸ್ಯವನ್ನು ಕದಡಿ ತನ್ನ ರಾಜಕೀಯ ದಾಳವನ್ನು ಉರುಳಿಸಿತ್ತು. ಶಾಲೆಗಳಲ್ಲಿ ನಮ್ಮ ಮಕ್ಕಳು ಓದುವ ಪಠ್ಯಗಳು ಕೇಸರೀಕರಣಗೊಂಡವು; ಸ್ವಾಯತ್ತ ಸಂಸ್ಥೆಗಳೆಂದು ಭಾವಿಸಿದ್ದ ಅಕಾಡೆಮಿಗಳು ಮತ್ತು ಇತರ ಸಂಸ್ಥೆಗಳಿಗೆ ಆರ್ಎಸ್ಎಸ್ ಅನುಮೋದಿಸಿದ ವ್ಯಕ್ತಿಗಳನ್ನು ಮಾತ್ರ ನೇಮಕಮಾಡುವ, ಪ್ರಜಾಪ್ರಭುತ್ವಕ್ಕೆ ಮಾರಕವಾಗಬಲ್ಲ ಕ್ರಮವನ್ನು ಬಿಜೆಪಿ ಸರ್ಕಾರ ಅನುಸರಿಸಿತು. ಸಾರ್ವಜನಿಕರ ಹಣವನ್ನು ಮನಬಂದಂತೆ (ಕೋಟಿಕೋಟಿ ರೂಪಾಯಿಗಳಲ್ಲಿ) ಚೆಲ್ಲಾಡಿ, ಮಠಗಳನ್ನು ಓಲೈಸುವ ಮತ್ತು ಆ ಮೂಲಕ ಜಾತಿಶಕ್ತಿಗಳನ್ನು ಕ್ರಿಯಾಶೀಲವಾಗಿಡುವ ಅಪಾಯಕಾರಿ ನಿಲುವನ್ನು ಬಿಜೆಪಿ ಸರ್ಕಾರ ತಳೆದಿತ್ತು. ಸರ್ಕಾರದ ಹಣದಲ್ಲಿ ತೀರ್ಥ ಪ್ರಸಾದಗಳನ್ನು ಹಂಚುತ್ತ, ಕೋಮುಭಾವಗಳನ್ನು ಬಿತ್ತುವ ಕಾರ್ಯಕ್ರಮವನ್ನೂ ಬಿಜೆಪಿ ಸರ್ಕಾರ ನಡೆಸಿತು.
‘ನೈತಿಕ ಪೊಲೀಸರ’ ಅನೈತಿಕ ಅಟ್ಟಹಾಸವಂತೂ ಕರಾವಳಿ ಕರ್ನಾಟಕದಲ್ಲಿ ಅಲೆಅಲೆಯಾಗಿ ತೇಲಿ, ಅಲ್ಪಸಂಖ್ಯಾತರನ್ನು ನಡುಗಿಸಿತು. ಈ ‘ನೈತಿಕ ಪೊಲೀಸರ’ ಗೂಂಡಾಗಿರಿಗೆ ಸರ್ಕಾರ ನೀಡಿದ ಕುಮ್ಮಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಛಿದ್ರಛಿದ್ರ ಮಾಡಿತು. ಧರ್ಮ ಕಾರಣಕ್ಕೆ ಕರಾವಳಿ ಭಾಗದಲ್ಲಿ ಅಮಾಯಕರು ಬಲಿಯಾಗತೊಡಗಿದರು; ಜಾತಿಧರ್ಮಗಳ ಕುರುಡು ಅಭಿಮಾನಿಗಳ ಕುಣಿತಕ್ಕೆ ಹೆದರಿದ ಅಲ್ಪಸಂಖ್ಯಾತರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ನಂಬಿಕೆಯನ್ನು ಕಳೆದುಕೊಳ್ಳತೊಡಗಿದರು. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಬಿಜೆಪಿ ಸರ್ಕಾರ ಅವರ ಬೆಂಬಲಕ್ಕೆ ನಿಂತುಬಿಟ್ಟಿತು. ರಾಜ್ಯದಲ್ಲಿ ಹಿಂದೆಂದೂ ಇಲ್ಲದ ಪರಿಸ್ಥಿತಿಯೊಂದು ನಿರ್ಮಾಣವಾಯಿತು.

ಚಿತ್ರ ಕೃಪೆ : ’ಹರಿಣಿ’
‘ಆಪರೇಷನ್ ಕಮಲ’ ಎನ್ನುವ ಅತ್ಯಂತ ಕೀಳು ಮಟ್ಟದ ರಾಜಕಾರಣವನ್ನು ರಾಜ್ಯದಲ್ಲಿ ಬಿಜೆಪಿ ಉತ್ತುಂಗ ಸ್ಥಿತಿಗೆ ಕೊಂಡೊಯ್ದಿತು. ಮೌಲ್ಯ, ಪಕ್ಷ, ತತ್ವ, ಪ್ರಣಾಳಿಕೆ ಎಲ್ಲವನ್ನೂ ಗಾಳಿಗೆ ತೂರಿ ಹಣವೊಂದನ್ನೇ ಆರಾಧಿಸುತ್ತ ಪಕ್ಷದಿಂದ ಪಕ್ಷಕ್ಕೆ ಹಾರುವ ಕೌಶಲ್ಯವನ್ನು ಬಿಜೆಪಿ ತನ್ನವರಿಗೆ ಹೇಳಿಕೊಟ್ಟಿತು; ಅಂಥ ವ್ಯಕ್ತಿಗಳಿಗೆ ತನ್ನ ಬಾಗಿಲುಗಳನ್ನು ತೆರೆದು ಮುಕ್ತ ಸ್ವಾಗತವನ್ನು ಕೋರಿತು. ಮೌಲ್ಯಗಳು ಎಲ್ಲಿಯೋ ಹಾರಿಹೋಗಿ ಅಧಿಕಾರವೊಂದೇ ವಾಸ್ತವ ಎನ್ನುವುದನ್ನು ಬಿಜೆಪಿ ಒಪ್ಪಿಕೊಂಡಿತು. ಶಾಸಕರನ್ನು ಕೊಳ್ಳುವುದು ಕರ್ನಾಟಕದಲ್ಲಿ ಇರಲೇ ಇಲ್ಲವೆಂದಲ್ಲ. ಆದರೆ ‘ಆಪರೇಷನ್ ಕಮಲ’ದಲ್ಲಿ ಚೆಲ್ಲಾಡಿದ ಹಣ ಮತ್ತು ಅನುಸರಿಸಿದ ಕ್ರಮ ನಾಚಿಕೆತರಿಸುವಂತಿತ್ತು. ಭಾರತೀಯ ಪರಂಪರೆ, ಸಂಸ್ಕೃತಿ, ಮೌಲ್ಯಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಪಕ್ಷ ಅಧಿಕಾರಕ್ಕಾಗಿ ಏನೆಲ್ಲ ನಡೆಸಿತು ಎಂಬುದನ್ನು ಕಣ್ಣಾರೆ ಕಂಡ ಜನ ಹೇಸಿಗೆಪಟ್ಟುಕೊಂಡರು.
ಭೂಕಬಳಿಕೆಯಲ್ಲಿ ಬಿಜೆಪಿ ಸಚಿವರು, ಶಾಸಕರು ಉಳಿದವರೊಡನೆ ಪೈಪೋಟಿಗಿಳಿದವರಂತೆ ವರ್ತಿಸಿ ಕರ್ನಾಟಕವನ್ನು ಅತ್ಯಂತ ಹೀನಸ್ಥಿತಿಗೆ ತೆಗೆದುಕೊಂಡು ಹೋದರು. ಭಾರತೀಯ ಜನತಾ ಪಕ್ಷ ಮತ್ತು ಸರ್ಕಾರ ಇದಕ್ಕೆಲ್ಲ ಬೆಂಬಲವಾಗಿ ನಿಂತವು.
ಇಂಥ ಸನ್ನಿವೇಶದಲ್ಲಿ ಚುನಾವಣೆ ಬಂದದ್ದು ಬಹುದೊಡ್ಡ ಅವಕಾಶವಾಗಿ ಕಾಣಿಸಿತು. ಬಿಜೆಪಿಯ ಆಡಳಿತದಿಂದ ಬೇಸತ್ತಿದ್ದ ಜನ ಆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ನಿರ್ಧರಿಸಿದರು. ಪರೇಷನ್ ಕಮಲಕ್ಕೆ ಅವಕಾಶ ಕಲ್ಪಿಸುವ ಸಂದರ್ಭ ಮತ್ತೆ ಎದುರಾಗದಂಥ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸಬೇಕು; ಅಂದರೆ ಯಾವುದಾದರೂ ಒಂದು ಪಕ್ಷವನ್ನು ಮತದಾರರು ಮಾನ್ಯಮಾಡಿದರೆ, ಆ ಪಕ್ಷಕ್ಕೆ ಸ್ಪಷ್ಟ ಬಹುಮತವಿರಬೇಕು; ಪಕ್ಷಾಂತರಿಗಳ ಬೇಲಿಹಾರುವ ಆಟಕ್ಕೆ ಅವಕಾಶವೇ ಇರಬಾರದು- ಇಂಥ ಚಿಂತನೆ ರೂಪಗೊಳ್ಳುತ್ತಿತ್ತು.
ಇದನ್ನೆಲ್ಲ ಗ್ರಹಿಸಿದ ಬರಹಗಾರರು ಮತ್ತು ಚಿಂತಕರು ಒಂದು ಸ್ಪಷ್ಟ ನಿಲುವನ್ನು ತಳೆದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ರಾಷ್ಟ್ರದ ಬರಹಗಾರರು, ಚಿಂತಕರು, ಪತ್ರಕರ್ತರು ಇಂಥದೇ ನಿಲುವನ್ನು ತಳೆದು ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿದ್ದರು. ಅದರ ಫಲವಾಗಿ ಪ್ರಜಾಪ್ರಭುತ್ವದ ಮರುಸ್ಥಾಪನೆ ರಾಷ್ಟ್ರದಲ್ಲಿ ಸಾಧ್ಯವಾಯಿತು. ತಮ್ಮ ಹೊಣೆಗಾರಿಕೆಯನ್ನು ಬರಹಗಾರರು ನಿಭಾಯಿಸಿದ್ದರು. ಇಂಥದೇ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿ ಕೆಲವರಾದರೂ ಇಂಥ ನಿಲುವನ್ನು ತಳೆಯಲು ಮುಂದಾದರು. ಕರ್ನಾಟಕದಲ್ಲಿ ಸ್ಥಿರ ಸರ್ಕಾರ ಸ್ಥಾಪನೆಗಾಗಿ ಇರುವ ಆಯ್ಕೆಯೆಂದರೆ ಕಾಂಗ್ರೆಸ್ ಮಾತ್ರ ಎಂದು ಹೇಳಿದರು. ರಾಜಕಾರಣದಲ್ಲಿ ಕ್ರಿಯಾಶೀಲವಾಗಿದ್ದ ಎಲ್ಲ ಪಕ್ಷಗಳ ಮಧ್ಯೆ ಕಾಂಗ್ರೆಸ್ಸನ್ನು ಆಯ್ಕೆ ಮಾಡಿಕೊಳ್ಳುವುದು ಮತದಾರನಿಗೆ ಅನಿವಾರ್ಯವಾಗಿತ್ತು. ಇದನ್ನೇ ಬರಹಗಾರರು ಸ್ಪಷ್ಟ ದನಿಯಲ್ಲಿ ಹೇಳಿದರು. ಅವರ ಈ ನಿಲುವಿಗೆ ಬೆಂಬಲಕೊಡುವಂತೆ ಕರ್ನಾಟಕದ ಮತದಾರರು ಸ್ಪಂದಿಸಿದ್ದು ರಾಜ್ಯದ ರಾಜಕೀಯವನ್ನೇ ತಿರುಗುಮುರುಗು ಮಾಡಿತು; ಪ್ರಜಾಪ್ರಭುತ್ವ ಉಳಿಯಿತು. ಕರ್ನಾಟಕದ ಮತದಾರರ ಪ್ರಬುದ್ಧತೆ ಮತ್ತೊಮ್ಮೆ ಸಾಬೀತಾಯಿತು. ಇದು ನಾವೆಲ್ಲ ಹೆಮ್ಮೆಪಡಬೇಕಾದ ಸಂದರ್ಭವಾಯಿತು.

ರಾಜಕೀಯ ಎನ್ನುವುದು ಬರಹಗಾರರಿಗೆ ಅಸ್ಪೃಶ್ಯವೇನಲ್ಲ. ತಮಗೆ ಇಷ್ಟವಾದ, ತಮ್ಮ ಅಭಿಪ್ರಾಯ, ಸಿದ್ಧಾಂತಗಳಿಗೆ ಹತ್ತಿರವಾಗುವ ಯಾವುದೇ ರಾಜಕೀಯ ಪಕ್ಷವನ್ನು ಅವರು ಆಯ್ಕೆಮಾಡಿಕೊಂಡು ಆ ಪಕ್ಷಕ್ಕೆ ಸೇರಿಬಿಡಬಹುದು. ಆ ಮೂಲಕ ಪಕ್ಷದ ಸದಸ್ಯರಾಗಿ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಬಹುದು. ಅದು ಅವರ ಆಯ್ಕೆಗೆ, ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಹಾಗಲ್ಲದಿದ್ದರೂ, ಸಂದರ್ಭ ಸನ್ನಿವೇಶಗಳಿಗಳು ಸೃಷ್ಟಿಸುವ ಅನಿವಾರ್ಯದಲ್ಲಿ ಬರಹಗಾರ ರಾಜಕೀಯ ಪಕ್ಷವೊಂದರ ಬೆಂಬಲಕ್ಕೆ ನಿಲ್ಲುವುದು ತಪ್ಪೆನಿಸುವುದಿಲ್ಲ. ಹಾಗೆ ನಿಂತು ತಾನು ಬೆಂಬಲಿಸಿದ ಪಕ್ಷ ಅಧಿಕಾರಕ್ಕೆ ಬಂದಕೂಡಲೇ ಅವನು ಆ ಪಕ್ಷದೊಂದಿಗೆ, ಆ ಸರ್ಕಾರದೊಂದಿಗೆ ವಸ್ತುನಿಷ್ಠ ದೂರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅದು ಬರಹಗಾರನ ನೈತಿಕ ನಿಷ್ಠೆ. ಈ ನಿಷ್ಠೆ ಎಂಬುದು ಇಲ್ಲದಿದ್ದರೆ ಬರಹಗಾರ ಅಧಿಕಾರ ಲಾಲಸೆಯಲ್ಲಿ ಕರಗಿಹೋಗುತ್ತಾನೆ. ಯಾವ ಸರ್ಕಾರವಾದರೂ ಬರಹಗಾರರಿಗೆ, ಕಲಾವಿದರಿಗೆ ಇಂಥ ಲಾಲಸೆಗಳನ್ನು ಒಡ್ಡುತ್ತಲೇ ಇರುತ್ತದೆ; ಅವರನ್ನು ಪರೀಕ್ಷೆಗೆ ಗುರಿಮಾಡುತ್ತಲೇ ಇರುತ್ತದೆ. ಈ ಎಚ್ಚರ ಬರಹಗಾರರಿಗೆ, ಕಲಾವಿದರಿಗೆ ನಿರಂತರವಾಗಿ ಇರಬೇಕಾಗುತ್ತದೆ.
ಸಿದ್ಧರಾಮಯ್ಯನವರ ನೇತೃತ್ವದಲ್ಲಿರುವ ಕಾಂಗ್ರೆಸ್ ಸರ್ಕಾರ, ನ್ಯಾಯವಂಚಿತರಾದ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ದಿಕ್ಕಿನಲ್ಲಿ ಕ್ರಿಯಾಶೀಲವಾಗುವ ಉತ್ಸಾಹವನ್ನು ತೋರಿಸುತ್ತಿದೆ. ಸಮಾಜವಾದದ ಹಿನ್ನೆಲೆಯಿಂದ ಬಂದಿರುವ, ಹಿಂದುಳಿದ ವರ್ಗಕ್ಕೆ ಸೇರಿದ, ನ್ಯಾಯವಂಚಿತರಾಗಿಯೇ ಬದುಕನ್ನು ಕಟ್ಟಿಕೊಂಡು ಬಂದಿರುವ ಸಿದ್ಧರಾಮಯ್ಯ ಅವರಿಂದ ಈ ನ್ಯಾಯನೀಡಿಕೆ ಸಾಧ್ಯವೂ ಆಗಬಹುದು. ಇಂಥ ಪ್ರಯತ್ನವನ್ನು ಮೆಚ್ಚುವ ಉದಾರಬುದ್ಧಿಯನ್ನೂ ಬರಹಗಾರರು ತೋರಿಸಬೇಕಾಗುತ್ತದೆ. ಅಲ್ಲಿ ಜಿಪುಣತನ ಅನಗತ್ಯ.
(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿರುವ ಲೇಖನ)
 

‍ಲೇಖಕರು avadhi

May 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

5 ಪ್ರತಿಕ್ರಿಯೆಗಳು

  1. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಮಾನ್ಯ ಬಸವರಾಜು ರವರೆ ,
    ನಿಮ್ಮ ಲೇಖನ ಸಾಂದರ್ಭಿಕವಾಗಿದೆ . ನಮ್ಮಲ್ಲಿ ಕೆಲವರಿದ್ದಾರೆ . ಅನಂತಮೂರ್ತಿಯವರು ಬಾಯಿಬಿಟ್ರೆ ಸಾಕು ಏನೋ ವಾದ ತೆಗೆದು ಟೀಕಿಸಿ ಬರೆಯುತ್ತಾರೆ . ಇದು ತುಂಬಾ ಬೇಸರ ತರುವ ಸಂಗತಿಯಾಗಿದೆ . ಜೊತೆಗೆ ಸಂತೋಷದ ಸಂಗತಿ ಎಂದರೆ ಇಂತಹವುಗಳಿಗೆ ಅನಂತಮೂರ್ತಿಯವರು ಯಾವ ಪ್ರತಿಕ್ರಿಯೆಯನ್ನು ನೀಡದೆ ಬೆಟ್ಟದಂತೆ ಮೌನವಾಗಿ ಇರ್ತಾರೆ .
    ಕಳೆದ ವರ್ಷ ಹೊಸದಾಗಿ ಬಿಡುಗಡೆಗೊಂಡಿರುವ ಎಂಟನೇ ತರಗತಿಯ ಸಮಾಜವಿಜ್ಞಾನ ಪುಸ್ತಕವನ್ನು ನೋಡಿದರೆ ಸಾಕು ಕೇಸರೀಕರಣದ ಹಲವು ಉದಾಹರಣೆಗಳು ಸಿಗುತ್ತವೆ . ಭೋಜರಾಜನ ಆಸ್ಥಾನದಲ್ಲಿ ಕಾಳಿದಸನೆಂಬ ಕವಿ ಇದ್ದ ಅಂತ ಉಲ್ಲೇಖಿಸುವಲ್ಲಿ ದುಷ್ಯಂತ ಶಕುಂತಲೆಯರ ಕಥೆಯನ್ನು
    ಇಡೀ ಒಂದು ಪುಟದಷ್ಟು ವಿವರಿಸುವುದರ ಅಗತ್ಯವೇನಿತ್ತು ?
    ಹಿಮಾಲಯದ ವಿವರಣೆ ನೀಡುವಲ್ಲಿ ಪುರಾಣ ಪ್ರಸಿದ್ಧ ಪುಣ್ಯಕ್ಷೆತ್ರಗಳ ಒಕ್ಕನೆ ಬೇಕಿತ್ಯಾರಿಗೆ ?
    ಸಮುದ್ರಗುಪ್ತನ ಪರಿಚಯ ನೀಡುವಾಗ ಹಿಂದುತ್ವದ ವಿಷಯಗಳ ಪ್ರಸ್ತಾಪವೇಕೆ ?
    ಹೀಗೆ ಅದೊಂದು ಇತಿಹಾಸ ಪುಸ್ತಕ ಅನ್ನುವ ಬದಲು ಭಾಷಾ ಪುಸ್ತಕ ಎಂದು ಕರೆಯಬಹುದು ಎಂದು ಸಹ ಹೇಳುವವರಿದ್ದಾರೆ .
    ಮತ್ತೊಂದು ಅಪಹಾಸ್ಯದ ಸಂಗತಿ ಎಂದರೆ ,ಯಾವುದೊ ಹಬ್ಬಕ್ಕೆ ಮಾಲೂರಿನ ಮಹಾಶಯರೊಬ್ಬರು ಉತ್ತರದಲ್ಲಿ ಹರಿಯುವ ಗಂಗೆಯ ನೀರನ್ನೇ ಟ್ಯಾಂಕರ್ ಗಳಲ್ಲಿ ಬೆಂಗಳೂರಿಗೆ ತರಿಸಿಬಿಟ್ಟಿದ್ದರು . ಇನ್ನೊಮ್ಮೆ ತಿರುಪತಿ ಲಾಡು !
    ಜೊತೆಗೆ ಎಂಥವರಿಗೂ ಇಂದಿನ ಸಂದರ್ಭದಲ್ಲಿ ಮತ ಚಲಾವಣೆ ಒಂದು ಸಮಸ್ಯೆಯೇ ಸರಿ !ಯಾರಿಗೆ ಹಾಕಬೇಕು ? ಎಲ್ಲರು ಅಂಥವರೇ! ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ . ಆದ್ದರಿಂದ ಯಾರಾದರು ತಿಳಿದವರು ತಿಳಿ ಹೇಳುವುದು ಒಳ್ಳೆಯದಲ್ಲವೇ ?

    ಪ್ರತಿಕ್ರಿಯೆ
  2. Ananda Prasad

    ದೇವರು, ಧರ್ಮಗಳ ಬಗ್ಗೆ ಜನಸಾಮಾನ್ಯರಿಗೆ ಇರುವ ನಂಬಿಕೆ, ಶ್ರದ್ಧೆಯನ್ನೇ ಬಂಡವಾಳ ಮಾಡಿಕೊಂಡು ತಾವು ಶಾಶ್ವತವಾಗಿ ಅಧಿಕಾರದ ಗದ್ದುಗೆಗೆ ಅಂಟಿ ಕೂರಬಹುದೆಂದು ಒಂದು ಪಕ್ಷದವರು ನಂಬಿಕೊಂಡಿದ್ದರು. ಉತ್ತಮ ಆಡಳಿತ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು, ಜಾತ್ಯತೀತ ಮೌಲ್ಯಗಳಿಗೆ ಬದ್ಧತೆ ಇವುಗಳನ್ನು ಗಾಳಿಗೆ ತೂರಿ ದೇವರ ಬಗೆಗಿನ ಜನತೆಯ ನಂಬಿಕೆಯ ದುರುಪಯೋಗಪಡಿಸಿಕೊಂಡು ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ ಎಂದು ರಾಜ್ಯದ ಜನತೆ ತೋರಿಸಿಕೊಟ್ಟಿದ್ದಾರೆ. ಇಂಥ ನಿರ್ಣಯ ತೆಗೆದುಕೊಳ್ಳುವಲ್ಲಿ ರಾಜ್ಯದ ಸಾಹಿತಿಗಳು, ಚಿಂತಕರು ಗೊಂದಲದಲ್ಲಿದ್ದ ಜನತೆಗೆ ಮಾರ್ಗದರ್ಶನ ಮಾಡಿದ್ದು ಸೂಕ್ತವೇ ಆಗಿದೆ. ಈ ಗುಂಪಿನಲ್ಲಿ ಮೂವರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಸೇರಿದ್ದು ಇದರ ತೂಕವನ್ನು ಹೆಚ್ಚಿಸಿತು ಏಕೆಂದರೆ ಜ್ಞಾನಪೀಠ ಪ್ರಶಸ್ತಿ ರಾಜಕೀಯ ಪಕ್ಷಗಳ, ಮಂತ್ರಿಗಳ ಅಥವಾ ರಾಜಕೀಯ ನಾಯಕರ ಶಿಫಾರಸಿಗೆ ದಕ್ಕುವ ಪ್ರಶಸ್ತಿ ಅಲ್ಲ. ಈವರೆಗಿನ ಅಷ್ಟೂ ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ ತೆಗೆದು ನೋಡಿದರೆ ಇದು ಪ್ರತಿಭೆ ಹಾಗೂ ಸಾಹಿತ್ಯ ಸಾಧನೆ ಮಾಡಿರದ ವ್ಯಕ್ತಿಗೆ ಸಿಕ್ಕಿದ ನಿದರ್ಶನ ಇಲ್ಲ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ರಾಜಕೀಯ ಪಕ್ಷದ ಹಾಗೂ ಅದರ ಬೆಂಬಲಿಗ ಸಂಘಟನೆಗಳ ಸರ್ವಾಧಿಕಾರಕ್ಕೆ ಸಿಕ್ಕುವ ಅಪಾಯ ಎದುರಾದ ಸಂದರ್ಭದಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು ಕಡಿಮೆ ಅಪಾಯಕಾರಿಯಾದ ಪರ್ಯಾಯವನ್ನು ಕುರಿತು ಜನತೆಗೆ ತಿಳಿಸುವುದು ಅವರ ನೈತಿಕ ಕರ್ತವ್ಯವೂ ಹೌದು. ಅದನ್ನವರು ನಿಭಾಯಿಸಿದ್ದಾರೆ. ಇದಕ್ಕಾಗಿ ಅವರನ್ನು ಹೀಗಳೆಯುವುದು ಸಲ್ಲದು. ರಾಜ್ಯದಲ್ಲಿ ಬೇರೆ ಯಾವ ಪಕ್ಷಗಳ ಆಡಳಿತದಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಲುಕಿದ ಪ್ರಮಾಣದಲ್ಲಿ ಅಪಾಯಕ್ಕೆ ಸಿಲುಕಿರಲಿಲ್ಲ. ಆ ಸರ್ಕಾರದ ಅವಧಿಯಲ್ಲಿ ಇಬ್ಬರು ಪತ್ರಕರ್ತರನ್ನು ವಿನಾಕಾರಣ ಜೈಲಿಗೆ ತಳ್ಳಲಾಗಿತ್ತು ಹಾಗೂ ನಾಗರೀಕ ಹೋರಾಟದ ಹೊರತಾಗಿಯೂ ಅವರನ್ನು ಬಿಡುಗಡೆಗೊಳಿಸಿರಲಿಲ್ಲ. ಇದು ರಾಜ್ಯದ ಜನತೆಯ ಮೇಲೆ ತೀವ್ರ ದುಷ್ಪರಿಣಾಮ ಬೀರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಉಂಟಾಗುವ ಸೂಚನೆ ನೀಡಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

    ಪ್ರತಿಕ್ರಿಯೆ
  3. ಉದಯಕುಮಾರ್ ಹಬ್ಬು

    ಸಾಹಿತಿಗಳು ಪ್ರಜ್ಣಾವಂತ ನಾಗರಿಕರಾಗಿ, ಪ್ರಜಾಪ್ರಭುತ್ವದ ಜವಾಬ್ದಾರಿಯುತ ನಾಗರಿಕರಾಗಿ ಹೊಣೆಗಾರಿಕೆ ಇದ್ದೇ ಇರುತ್ತದೆ. ಹಾಗಾಗಿ ಸಾಹಿತಿಗಳು ರಾಜಕೀಯದಲ್ಲಿ ಅಸಕ್ತಿವಹಿಸಬಾರದೆಂಬುದೇ ಹಾಸ್ಯಾಸ್ಪದ ವಿಷಯವಾಗಿದೆ. ಇಂಗ್ಲೀಷ ಭಾಷೆಯ ಪ್ರಖ್ಯಾತ ಕವಿ ವರ್ಡ್ಸ್ವರ್ತ ಹೇಳುತ್ತಾನೆ:” poets are unacknowledged legislators of mankind.” ಕೆಟ್ಟ ಸರಕಾರವನ್ನು ಟೀಕಿಸಿ ಅವರನ್ನು ಕೆಳಗಿಳಿಸಿ ಹೊಸ ಸರಕಾರಕ್ಕೆ ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಪಕ್ಷ ಸದ್ಯಕ್ಕೆ ಉತ್ತಮ ಉದ್ದೇಶಗಳನ್ನು ಉತ್ತಮ ಕಾರ್ಯಕ್ರಮಗಳನ್ನು ಜನಪರ ನಿಲುವನ್ನು ಹೊಂದಿದ ಪಕ್ಷ ಎನ್ನಬಹುದಾಗಿದೆ. ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಸಮಾಜವಾದಿ ವಿಚಾರಗಳಿಂದ ಪ್ರೇರಿತರಾದವರು. ನಮಗೆ ಅವರ ಮೇಲೆ ತುಂಬಾ ಭರವಸೆಯೂ, ನಿರೀಕ್ಷಣೆಯೂ ಇವೆ. ದೀನ ದಲಿತರ ಕುರಿತಾಗಿ ಕಾಳಜಿ ಇದೆ. ಜಾತ್ಯಾತೀತ ನಿಲುವು ಇದೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ

    ಪ್ರತಿಕ್ರಿಯೆ
  4. ವಿ.ಎನ್.ಲಕ್ಷ್ಮೀನಾರಾಯಣ

    ಮಾನ್ಯರೆ,
    ಜಿಪಿ ಬಸವರಾಜುರವರು ಕರ್ನಾಟಕದ ಎಲ್ಲ ಬರಹಗಾರರು ಮತ್ತು ಚಿಂತಕರ ಪ್ರತಿನಿಧಿಯೆಂಬಂತೆ ಕಾಂಗ್ರೆಸ್ ಪರವಾದ ವೋಟಿನ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರು ನನ್ನಂಥವರ ಪ್ರತಿನಿಧಿ ಅಲ್ಲ.ಅಥವಾ ನನ್ನಂಥವರು ಅವರು ಪ್ರತಿನಿಧಿಸುವಂಥ ಕರ್ನಾಟಕದ ಬರಹಗಾರರು-ಚಿಂತಕರು ಅಲ್ಲ. ನಾನು ಈ ಕೆಳಗೆ ಲಗತ್ತಿಸಿರುವ ಕಾಗದವನ್ನು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಕಳಿಸಿದ್ದೆ. ಮೈಸೂರಿನ ‘ಆಂದೋಲನ’ ಪತ್ರಿಕೆಯನ್ನುಳಿದು ಇನ್ನಾವ ಪತ್ರಿಕೆಯೂ ನನ್ನ ಈ ಪತ್ರವನ್ನು ಪ್ರಕಟಿಸಲಿಲ್ಲ. ಆದರೆ ‘ಕರ್ನಾಟಕದ ಬರಹಗಾರರು ಮತ್ತು ಚಿಂತಕರ’ ಕಾಂಗ್ರೆಸ್ ಸಮರ್ಥನೆಯನ್ನು ಸಾರುವ ತ್ರಿವರ್ಣ ಜಾಹಿರಾತು ಎಲ್ಲ ಪತ್ರಿಕೆಗಳಲ್ಲಿಯೂ ಪ್ರಕಟವಾಯಿತು. ಇನ್ನು ಈ ಕಾಂಗ್ರೆಸ್ ಪರವಾದ ವೋಟಿನ ಕರೆಕೊಟ್ಟ ಬರಹಗಾರರು ಮತ್ತು ಚಿಂತಕರ ಪೈಕಿ ಯಾರ್ಯಾರಿಗೆ ಯಾವ ಯಾವ ಬಗೆಯ ವೈಯಕ್ತಿಕ ಗುಪ್ತ ಆಸೆಗಳಿದ್ದವು ಅಥವಾ ಇವೆ ಎಂಬುದು ಬಹಿರಂಗವಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ.
    ಚುನಾವಣೆಗೆ ಮುಂಚೆ ನಾನು ಪತ್ರಿಕೆಗಳಿಗೆ ಕಳಿಸಿದ ಕಾಗದ ಹೀಗಿದೆ:
    ಈ ಚುನಾವಣೆಯಲ್ಲಿ ನಿಜವಾದ ಆಯ್ಕೆ ಸಾಧ್ಯವೆ?
    ಮೈಸೂರು-ಬೆಂಗಳೂರಿನಿಂದ ಕೆಲವು ಪ್ರಗತಿಪರ ಬುದ್ಧಿಜೀವಿಗಳು ‘ಭಾಜಪವನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ’ ಕಾಂಗ್ರೆಸ್ಸನ್ನು ಬೆಂಬಲಿಸಬೇಕೆಂದು ಕರೆಕೊಟ್ಟಿದ್ದಾರೆ.ಈಗಿರುವ ಚುನಾವಣಾ ಚೌಕಟ್ಟಿನಲ್ಲಿನ ಆಯ್ಕೆಯ ಸ್ವಾತಂತ್ರ್ಯದಲ್ಲಿ ಇದು ಅನಿವಾರ್ಯವೆಂಬಂತೆ ಕಾಣಿಸುತ್ತದೆ. ಇದೇ ಕಾರಣಕ್ಕಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಕಚ್ಚಿಕೊಂಡಿರಲು ಸಾಧ್ಯವಾಗಿದೆ. ಆದರೆ ಎರಡೂ ಪಕ್ಷಗಳ ಮಧ್ಯೆ ಇರುವ ವ್ಯತ್ಯಾಸಗಳೇನು? ಅವು ಸೈದ್ಧಾಂತಿಕವಾಗಿ ಹಾಗೂ ಆರ್ಥಿಕ-ರಾಜಕೀಯ ನೀತಿಗಳ ಅನುಷ್ಠಾನದಲ್ಲಿ ಭಿನ್ನವೇ ಎಂಬುದು ಪ್ರಶ್ನೆ.
    ಭಾಜಪ ತೀವ್ರ ಕೋಮುವಾದಿ ಪಕ್ಷ . ಕಾಂಗ್ರೆಸ್ ಮೃದುಕೋಮುವಾದಿ. ಭ್ರಷ್ಟತೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ಪೈಪೋಟಿಯಲ್ಲಿವೆ. ನೆಲ ಮಾಫಿಯಾ, ಜಲ ಮಾಫಿಯಾ, ಗಣಿ ಮಾಫಿಯಾ, ಶಿಕ್ಷಣ ಮಾಫಿಯಾ, ಮೀಡಿಯಾ ಮಾಫಿಯಾ ಮುಂತಾದ ಅಸಂವಿಧಾನಿಕ ಶಕ್ತಿಕೇಂದ್ರಗಳ ನಿಯಂತ್ರಕರು ಎರಡೂ ಪಕ್ಷಗಳ ನಿಯಂತ್ರಕರಾಗಿದ್ದಾರೆ. ಅಪರಾಧ ಹಿನ್ನೆಲೆಯ ಜನರು ಎರಡೂ ಪಕ್ಷಗಳ ಬೆನ್ನೆಲಬು. ಕಾಂಗ್ರೆಸ್, ಜಾಗತೀಕರಣ, ಉದಾರೀಕರಣ, ಬಂಡವಾಳವಾದ ನಿಯಂತ್ರಿತ ಪ್ರಜಾತಂತ್ರವನ್ನು ಎತ್ತಿ ಹಿಡಿಯುವ, ಮೇಲುವರ್ಗದ ಹಿತಾಸಕ್ತಿಗಾಗಿ ಬಹುಜನರ ಹಿತಾಸಕ್ತಿಯನ್ನು ಬಲಿಕೊಡುವ ಆರ್ಥಿಕ ಮತ್ತು ರಾಜಕೀಯ ನೀತಿಯಲ್ಲಿ ನಂಬಿಕೆಯಿರಿಸಿರುವ ಪಕ್ಷ. ಭಾಜಪ ಕಾಂಗ್ರೆಸ್ ನ ನೀತಿಗಳನ್ನೇ ಹೊಂದಿರುವ, ಆದರೆ, ಸ್ವದೇಶೀ ಮುಸುಕನ್ನು ಹೊದ್ದ ಬಂಡವಾಳವಾದೀ ಫ್ಯಾಸಿಸ್ಟ್ ಪಕ್ಷ. ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಸಾಕಾರಗೊಳಿಸಲು ತುದಿಗಾಲಮೇಲೆ ನಿಂತ ಜಾಗತಿಕ ಉದ್ದಿಮೆದಾರರು ಮೋದಿಯನ್ನು ಓಲೈಸುತ್ತಿರುವ ಪರಿ ಮತ್ತು ಅದೇ ಭಾಜಪಕ್ಕೆ ಮಾದರಿಯಾಗಿರುವ ದೃಷ್ಟಾಂತ ನಮ್ಮ ಮುಂದಿದೆ. ಭಾಜಪ ಹೇಗೇ, ಎಲ್ಲೇ ಅಧಿಕಾರಕ್ಕೆ ಬಂದರೂ ಯುಪಿಎ ಸರಕಾರ ಜಾಗತಿಕ ವ್ಯಾಪಾರಿ/ಉದ್ದಿಮೆದಾರ/ಸರಕಾರಗಳೊಂದಿಗೆ ಸಹಿ ಹಾಕಿರುವ ಒಡಂಬಡಿಕೆಗಳಲ್ಲಿ ಜಾಗತಿಕ ಸಾಲಾಧಾರಿತ ಗಣಿಗಾರಿಕೆ, ಕೈಗಾರಿಕೆ, ಅಣುವಿದ್ಯುತ್ ಯೋಜನೆ, ಮುಂತಾದ ಜಾಗತಿಕ ಕಾಮಗಾರಿಗಳಿಂದ ಹಿಡಿದು ಈಗಾಗಲೇ ಪ್ರಾರಂಭವಾಗಿರುವ ಮುಂಬೈ-ದೆಹಲಿ, ಮುಂಬೈ-ಬೆಂಗಳೂರು, ಚನ್ನೈ-ಬೆಂಗಳೂರು ಇಂಡಸ್ತ್ರಿಯಲ್ ಕಾರಿಡಾರ್ ಮಹಾ ಕಾಮಗಾರಿಗಳು ಅವುಗಳ ಹಿಂದಿರುವ ಇಂಗ್ಲೆಂಡ್, ಜಪಾನ್ ಮತ್ತು ಜರ್ಮನಿಗಳ ರಾಕ್ಷಸ ಉದ್ದಿಮೆದಾರರ ಲೂಟಿಯನ್ನು, ಅವರಿಂದಾಗುವ ಘಾತಕ ಪರಿಣಾಮಗಳನನ್ನು ಭಾಜಪ ತಡೆಯಲಾಗುವುದಿಲ್ಲ, ರದ್ದುಮಾಡುವುದಂತೂ ಕನಸಿನಲ್ಲೂ ಸಾಧ್ಯವಿಲ್ಲ. ಏನಿದ್ದರೂ ಈಗಾಗಲೇ ವರ್ತುಲ ರಸ್ತೆ, ಹೊರವರ್ತುಲ ರಸ್ತೆ, ಮಹಾನಗರ ವಿಸ್ತರಣೆ, ಚತುಷ್ಪಥ, ಷಟ್ಪಥ, ಅಷ್ಟಪಥ, ಉಪಗ್ರಹ ನಗರ, ಮೇಲ್ಸೇತುವೆ, ಮೆಟ್ರೊ ಮುಂತಾದ ನಗರ ಕೇಂದ್ರಿತ, ಬೃಹತ್ ಕಾಮಗಾರಿಗಳಲ್ಲಿ ತನಗೆ, ತನ್ನ ಗುತ್ತಿಗೆದಾರರಿಗೆ ಲಾಭಮಾಡಿಕೊಡುತ್ತಿರುವಂತೆ ಮುಂಬರುವ ಭಾರತದ ಗ್ರಾಮೀಣ ಜನರ ಮಹಾನಗರೀಕರಣ ಯೋಜನೆಗಳಲ್ಲೂ ಸಿಕ್ಕಷ್ಟು ಲೂಟಿಮಾಡುವ ಕೆಲಸವನ್ನು ಭಾಜಪ ರಾಜ್ಯದಲ್ಲಿರಲಿ, ಕೇಂದ್ರದಲ್ಲಿರಲಿ ಮಾಡುವುದು ಮಾತ್ರ ಸಾಧ್ಯ. ಹಾಗೆ ನೋಡಿದರೆ ಕಾಂಗ್ರೆಸ್ಸಿನ ಎಲ್ಲಾ ಜನವಿರೋಧೀ ಯೋಜನೆಗಳ ಅತಿದೊಡ್ಡ ಫಲಾನುಭವಿ ಭಾಜಪವೇ ಆಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ಸೆನ್ನಿ, ಭಾಜಪವೆನ್ನಿ ಎರಡೂ ಒಂದೇ ಎನ್ನುವ ಸ್ಥಿತಿ ಇದೆ. ಇನ್ನು ಜಾತ್ಯತೀತ ಜನತಾ ದಳ, ಕರ್ನಾಟಕ ಜನತಾ ಪಕ್ಷ, ಮುಂತಾದ ಪುಡಿಪಕ್ಷಗಳ ಜೀವಸೆಲೆಗಳು, ಬೇರುಗಳು ಕಾಂಗ್ರೆಸ್ ಮತ್ತು ಭಾಜಪಗಳಲ್ಲೇ ಇರುವುದರಿಂದ ಇದಕ್ಕಿಂತ ಭಿನ್ನ ಸ್ಥಿತಿ ಏರ್ಪಡುವುದಿಲ್ಲ. ಪಕ್ಷೇತರರು ಗೆದ್ದೆತ್ತಿನ ಬಾಲಂಗೋಚಿಗಳು. ಆಯ್ಕೆ ನಿಜವಾಗಿಯೂ ಇಲ್ಲ. ಆದರೆ ತಮ್ಮ ಗುಪ್ತ ಕನಸು-ಹಿತಾಸಕ್ತಿಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಬೆಂಗಳೂರು-ಮೈಸೂರು ಮೂಲದ, ಸಿದ್ಧರಾಮಯ್ಯಪರ ಪ್ರಗತಿಪರರಿಗೆ ಮಾತ್ರ ಕಾಂಗ್ರೆಸ್ ಅನಿವಾರ್ಯ ಆಯ್ಕೆಯಾಗಿದೆ. ಉಳಿದವರಿಗೆ ಇರುವ ದಾರಿ ಎಡಪಂಥೀಯ ಪರ್ಯಾಯದ ಪರ ಮತ ಚಲಾಯಿಸುವುದು ಅಥವಾ ತಮ್ಮ ಮತಕ್ಕೆ ಯೋಗ್ಯರಾದ ಪಕ್ಷಗಳಿಲ್ಲ ಎಂದು ತಿರಸ್ಕರಿಸುವ ದಾರಿಗಳನ್ನು ಹುಡುಕುವುದು.
    -ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

    ಪ್ರತಿಕ್ರಿಯೆ
    • G.P.BASAVARAJU

      ರಾಜ್ಯದಲ್ಲಿ ಮೊನ್ನೆ ನಡೆದ ಚುನಾವಣೆ ಅತ್ಯಂತ ಸಂಕೀರ್ಣವಾದ ಮತ್ತು ಜಟಿಲವಾದ ಆಯ್ಕೆಯನ್ನು ಮತದಾರರ ಮುಂದಿಟ್ಟಿತ್ತು. ವಿ.ಎನ್‍.ಲಕ್ಷ್ಮೀನಾರಾಯಣ ಅವರು ತಳೆದ ನಿಲುವನ್ನೇ ನಮ್ಮ ಮತದಾರರು ತಳೆದಿದ್ದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿತ್ತು; ಇಲ್ಲವೇ ಬಿಜೆಪಿಗೆ ಅಧಿಕಾರದಲ್ಲಿ ಪಾಲುದಾರಿಕೆಯನ್ನು ನೀಡುವ ಪಕ್ಷಗಳು ಅಧಿಕಾರದ ಅವಕಾಶವನ್ನು ಪಡೆದುಕೊಳ್ಳುತ್ತಿದ್ದವು. ಕರ್ನಾಟಕದ ಜನತೆ ಮತ್ತೊಮ್ಮೆ ‘ಆಪರೇಷನ್‍ ಕಮಲ’ದ ದುಷ್ಟ ರಾಜಕಾರಣವನ್ನು ನೋಡುತ್ತಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದಲೇ ಕಾಂಗ್ರೆಸ್ಸನ್ನು ಆಯ್ಕೆಮಾಡುವ ಅನಿವಾರ್ಯಸ್ಥಿತಿ ಕರ್ನಾಟಕ ಮತದಾರನ ಮುಂದಿತ್ತು. ಲಕ್ಷ್ಮೀನಾರಾಯಣ ಅವರು ತಮ್ಮ ಕಾಗದದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳೆಲ್ಲ ರಾಜಕೀಯ ವಿದ್ಯಮಾನಗಳನ್ನು ಬಲ್ಲವರು ತಿಳಿದೇ ಇದ್ದಾರೆ. ಎಡ ಪಕ್ಷಗಳನ್ನು ಬಿಟ್ಟರೆ, ಕಾಂಗ್ರೆಸ್‍ ಅಥವಾ ಬಿಜೆಪಿ ಅಥವಾ ದಳ ಅಥವಾ ಇನ್ನೊಂದು ಪಕ್ಷದ ಮಧ್ಯೆ ಅಂತರವೇ ಇಲ್ಲ, ಎಲ್ಲ ಪಕ್ಷಗಳಲ್ಲೂ ಭ್ರಷ್ಟರಿದ್ದಾರೆ, ಅಪರಾಧ ಹಿನ್ನೆಲೆಯವರಿದ್ದಾರೆ, ಕೋಮುವಾದಿಗಳಿದ್ದಾರೆ ಎಂಬುದು ಹೆಚ್ಚಿನ ವಿವಾದಕ್ಕೆ ಎಡೆ ಇಲ್ಲದಂತೆ ಒಪ್ಪಿಕೊಳ್ಳಬಹುದಾದ ಅಭಿಪ್ರಾಯವೇ. ಆದರೆ ಮೊನ್ನೆಯ ಚುನಾವಣೆಯಲ್ಲಿ ಇದ್ದ ಪ್ರಮುಖವಾದ ಪ್ರಶ್ನೆ ಒಂದೇ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವುದು. ಯಾಕೆ ಎನ್ನುವುದನ್ನು ಮತ್ತೆ ವಿವರಿಸಬೇಕಾಗಿಲ್ಲ. ಅದನ್ನು ನನ್ನ ಲೇಖನದಲ್ಲಿ ಹೇಳಿದ್ದೆ. ಬಿಜೆಪಿ ಮತ್ತು ಅದರ ಪರಿವಾರ ಕರ್ನಾಟಕದಲ್ಲಿ ಮಾಡಿದ ಕೃತ್ಯಗಳು ನಮಗೆಲ್ಲ ಮತ್ತೆ ಸರ್ವಾಧಿಕಾರ ಎಂದರೇನು, ಕೋಮುವಾದದ ಕೋರೆಹಲ್ಲುಗಳು ಎಷ್ಟು ಅಮಾನುಷವಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟವು.
      ಕಾಂಗ್ರಸ್‍ ಪಕ್ಷಕ್ಕೆ ಮತನೀಡಿದವರೆಲ್ಲ ಆ ಪಕ್ಷದ ತತ್ವ ಸಿದ್ಧಾಂತ ಕಾರ್ಯವೈಖರಿಗಳನ್ನೆಲ್ಲ ಮೆಚ್ಚಿ ಮತನೀಡಿದ್ದಾರೆಂದಲ್ಲ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‍ ನೇತೃತ್ವದ ಯುಪಿಎ ಸರ್ಕಾರ ಏನು ಮಾಡಿದೆ ಎನ್ನುವುದನ್ನೂ ಜನ ಬಲ್ಲರು.ಆದರೆ ಕರ್ನಾಟಕದ ಚುನಾವಣೆ ಇಂಥ ಎಲ್ಲ ಪ್ರಶ್ನೆಗಳನ್ನು ಪರಿಶೀಲಿಸುವ ಅವಕಾಶವನ್ನೇ ಮತದಾರರಿಗೆ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿಯೇ ಕೆಲವು ಬರಹಗಾರರು ಕಾಂಗ್ರೆಸ್ಸನ್ನು ಬೆಂಬಲಿಸುವ ನಿಲುವನ್ನು ತಳೆಯಬೇಕಾಯಿತು. ಈ ನಿಲುವನ್ನು ತಳೆಯುವ ಮುನ್ನ ಮೈಸೂರಿನಲ್ಲಿಯೂ ಒಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಲಕ್ಷ್ಮೀನಾರಾಯಣರು ಪ್ರಸ್ತಾಪಿಸಿರುವ ಸಂಗತಿಗಳೆಲ್ಲ ಚರ್ಚಿತವಾಗಿದ್ದವು.
      ನಂತರವೇ ಬರಹಗಾರರು ಕಾಂಗ್ರೆಸ್ಸನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿಮಾಡಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿದರು. ಈ ನಿರ್ಣಯಕ್ಕೆ ಸಹಿಹಾಕಿದವರಲ್ಲಿ ನಾನೂ ಒಬ್ಬ.
      ಯಾರು ಯಾರನ್ನೂ ಸಮರ್ಥಿಸಬೇಕಾದ, ಪ್ರತಿನಿಧಿಸಬೇಕಾದ ಅಗತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಅವಕಾಶ ತೆರೆದೇ ಇರುತ್ತದೆ. ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸುವ, ಮತದಾರರಿಗೆ ಮನವಿ ಮಾಡಿಕೊಳ್ಳುವ ಅವಕಾಶ ಅಷ್ಟೇ ಮುಕ್ತವಾಗಿರುತ್ತದೆ.ಇಂಥ ಅವಕಾಶವನ್ನು ಬಳಸಿಕೊಂಡು ಕೆಲವು ಬರಹಗಾರರು ಮತದಾರರಿಗೆ ಮಾಡಿಕೊಂಡ ಮನವಿ ಲಕ್ಷ್ಮೀನಾರಾಯಣರಿಗೆ ‘ಓಟಿನ ರಾಜಕೀಯ’ವಾಗಿ ಕಂಡರೆ, ಅದು ಅಗತ್ಯವಾಗಿ ನಡೆಯಬೇಕಾದ ಕೆಲಸವೇ. ಲಕ್ಷ್ಮೀನಾರಾಯಣರ ಕಾಗದ ಕೂಡಾ ‘ಓಟಿನ ರಾಜಕೀಯ’ವೇ. ‘ಇನ್ನು ಈ ಕಾಂಗ್ರೆಸ್ ಪರವಾದ ವೋಟಿನ ಕರೆಕೊಟ್ಟ ಬರಹಗಾರರು ಮತ್ತು ಚಿಂತಕರ ಪೈಕಿ ಯಾರ್ಯಾರಿಗೆ ಯಾವ ಯಾವ ಬಗೆಯ ವೈಯಕ್ತಿಕ ಗುಪ್ತ ಆಸೆಗಳಿದ್ದವು ಅಥವಾ ಇವೆ ಎಂಬುದು ಬಹಿರಂಗವಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ’ ಎಂದು ಲಕ್ಷ್ಮೀನಾರಾಯಣ ಶಂಕಿಸಿದ್ದಾರೆ.ಅರ್ಹರಾದವರಿಗೆ ಅರ್ಹಸ್ಥಾನಗಳು ಸಹಜವಾಗಿಯೇ ಸಿಕ್ಕರೆ ನಾವೆಲ್ಲ ಸಂತೋಷ ಪಡಬೇಕು.ಅನರ್ಹರು ಅಂಥ ಸ್ಥಾನಗಳಿಗೆ ಬಂದರೆ ಸರ್ಕಾರದ ಕ್ರಮವನ್ನು ಟೀಕಿಸುವ, ಅದರ ವಿರುದ್ಧ ಹೋರಾಡುವ ಅವಕಾಶವಂತೂ ಇದ್ದೇ ಇರುತ್ತದೆ.’ಬರಹಗಾರನ ನೈತಿಕನಿಷ್ಠೆ’ಎನ್ನುವುದು ಕೂಡಾ ಪರೀಕ್ಷೆಗೆ ಒಳಗಾಗಬೇಕಾದದ್ದೇ.
      -ಜಿ.ಪಿ.ಬಸವರಾಜು

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: