ಸಂಪು ಕಾಲಂ : ಚೋಳರ ವೈಭೋಗದ ಅನುಭವ ಮೊದಲ ದಿನವೇ…


ದಕ್ಷಿಣ ಭಾರತ ಪ್ರವಾಸ – ಹತ್ತು ದಿನಗಳ ಕಾಲ! ಮನೆ ಬಿಟ್ಟು ಹತ್ತು ದಿನಗಳ ಕಾಲ ಹೊರಹೋದದ್ದು ಎಂದರೆ ನಮ್ಮ ಹಳ್ಳಿ ಪುಲಿಗಲ್ ಗೆ. ದಿನ, ವಾರ, ಸಮಯ, ಘಂಟೆ ಎಲ್ಲದರ ಭಾಷೆ, ಅರ್ಥಗಳನ್ನೂ ಬೆಂಗಳೂರಿನಲ್ಲೇ ಬಿಟ್ಟು, ಸಹಜ ಸುಖ, ನೆಮ್ಮದಿಗಳ ರುಚಿ ಸವಿಯಲು ಹೋಗುತ್ತಿದ್ದ ಆ ದಿನಗಳು ನೆನಪಾದವು. ಕಂಪ್ಯೂಟರ್, ಇಂಟರ್ನೆಟ್, ಟಿವಿ ಇರಲಿ, ಸರಿಯಾಗಿ ಕರೆಂಟ್ ಕೂಡ ಇರದ ತಾತನ ಮನೆಯಲ್ಲಿ ಇದ್ದದ್ದು ಒಂದು ಹಳೇ ರೇಡಿಯೋ ಮಾತ್ರ. ಆದರೂ ಎಂತಹ ಸಂತೋಷ, ಶಾಂತಿ ಸಿಗುತ್ತಿತ್ತು.
ಇಂದು ಈ ಪ್ರವಾಸದ ಸಲುವಾಗಿ ಹತ್ತು ದಿನಗಳ ಕಾಲ ನಾವು ನಮ್ಮ ಲ್ಯಾಪ್ಟಾಪ್ ಇಲ್ಲದೆ ಇರಬೇಕೆ ಎಂಬ ಕಳವಳ ನಮಗೆ. ನಮ್ಮ ಬದುಕುಗಳ ಕಥೆ ಹಾಗಿರಲಿ ನಾವೇ ಎಷ್ಟು ಯಾಂತ್ರಿಕವಾಗಿಬಿಟ್ಟಿದ್ದೇವೆ ಎನಿಸಿತ್ತು. ಆ ನೆನಪುಗಳೊಂದಿಗೇ ಬಟ್ಟೆಬರೆ ಇತ್ಯಾದಿ ಪ್ಯಾಕಿಂಗ್ ಸಿದ್ಧತೆಯಾಯಿತು. ಪ್ರವಾಸ ಹೊರಡುವ ದಿನ ಬಂತು.
ಮನೆಯಲ್ಲಿ ಒಂದು ದೀಪವನ್ನೂ ಹಚ್ಚಿಡದ ನಾನು ಇನ್ನು ಮುಂದಿನ ಹತ್ತು ದಿನಗಳ ಕಾಲ ಆವಾಹಿಸಬೇಕಾದ ದೇವಾಲಯಗಳ ದೊಡ್ಡ ಪಟ್ಟಿಯನ್ನೇ ಕೈಯಲ್ಲಿ ಹಿಡಿದು ಬೆಳ್ಳಂಬೆಳಗಿನ ಚುರುಕು ಗಾಳಿ-ಮಂದ ಬೆಳಕಲ್ಲಿ ಬಸ್ ಏರಿದ್ದೆ. ಬಾಗಿಲ ಮುಂಭಾಗವೂ ಅಲ್ಲದ, ರಸ್ತೆಯ ಅಂಕುಡೊಂಕುಗಳ ಪ್ರಕಾರ ನಮ್ಮನ್ನು ಸಂವಹಿಸುವ ಚಕ್ರದ ಹಿಂಭಾಗದ ಸೀಟೂ ಅಲ್ಲದ ಸುರಕ್ಷಿತವಾದ ಮಧ್ಯದ ಸ್ಥಳ ನಮ್ಮದಾಗಿತ್ತು. ಬಸ್ ಹತ್ತಿದ ಎಲ್ಲರಿಗೂ ತಮ್ಮ ತಮ್ಮ ಲಗ್ಗೇಜ್ ಜೋಪಾನಿಸುವ ತರಾತುರಿ. ನಮ್ಮ ಎಲ್ಲಾ ಚೀಲಗಳನ್ನೂ ಬಂದೋಬಸ್ತ್ ಮಾಡಿದಮೇಲೆ ಒಮ್ಮೆ ಸುತ್ತು ಕಣ್ಣು ಹರಿಸಿದೆ. ಅರ್ಧ ಬಸ್ ನಮ್ಮ ಸಂಬಂಧಿಕರಿಂದಲೇ ತುಂಬಿತ್ತು. ಇನ್ನುಳಿದವರು ಹೊಸಬರು. ಎಲ್ಲರೂ ಅರವತ್ತರ ಅಂಚು ದಾಟಿ ಬದಲಾಗುತ್ತಿರುವ ಕಾಲಘಟ್ಟಕ್ಕೆ ಪ್ರೇಕ್ಷಕರಾಗಿ ನಿಂತವರು. ಅವರಲ್ಲಿದ್ದ ಉತ್ಸಾಹ, ಕಳೆ ನಮ್ಮಲ್ಲಿ ಹುಡುಕುವಂತಾಗಿ ಒಂದು ನಗೆಯೊಂದಿಗೇ ನಾನು ಬೆಚ್ಚಿದ್ದೆ.
ಮೊದಲಿಗೆ ಕಣ್ಣಿಗೆ ಬಿದ್ದದ್ದು ಕುತ್ತಿಗೆ ಪಟ್ಟಿ ಹಾಕಿ ಕೂತ ಹಿರಿಯರೊಬ್ಬರು ಕೆಮ್ಮುತ್ತಾ “ರಾಮ್ ರಾಮ್” ಎನ್ನುವುದೂ, ಪಕ್ಕದಲ್ಲಿ ತುಂಬಾ ಸಂಪ್ರದಾಯಸ್ಥರಂತಿದ್ದ ಅವರ ಧರ್ಮ ಪತ್ನಿ ಮತ್ತು ಸುಮಾರು ಕಾಲೇಜು ಓದುವ, ಹಣೆಯ ಆಚೀಚೆ ಗಂಧ ಸವರಿದ್ದ ಅವರ ಮಗ. ಬಸ್ ನ ಹಿಂಬದಿಯಿಂದ ತೇಲಿ ಬರುತ್ತಿದ್ದ ವಿಷ್ಣು ಸಹಸ್ತ್ರನಾಮದ ಉಲಿ ನನ್ನ ಮೊಬೈಲ್ ನಲ್ಲಿದ್ದ ರಾಕ್, ಪಾಪ್ ಗಳನ್ನೂ ನಿಶ್ಶಬ್ದವಾಗಿಸಿತ್ತು. ಇಂತಹ ವಾತಾವರಣದಲ್ಲಿ ಅಕ್ಕ ಪಕ್ಕದವರ ಮುಖ ಪರಿಚಯ ಮಾಡಿಕೊಳ್ಳುತ್ತಿದ್ದಾಗಲೇ, ನಮ್ಮ ಟೂರ್ ಮ್ಯಾನೇಜರ್ “ಜೈ ಗಣೇಶ್” ಎನ್ನುತ್ತಾ ಬಸ್ ಹೊರಡಿಸಿದ್ದ.
ಮಲ್ಟಿ ಸ್ಟೋರೀಡ್ ಬಿಲ್ಡಿಂಗಳೂ, ವೆಸ್ಟ್ ಸೈಡ್, ಕೆ.ಎಫ್.ಸಿ ಗಳಂತಹ ಶೋ ರೂಂಗಳೂ, ಟ್ರಾಫಿಕ್ ಜಾಮುಗಳೂ ಎಲ್ಲವನ್ನೂ ದಾಟಿ ತಾಜಾ ಗಾಳಿಯನ್ನು ಹೀರಿ, ಹಸಿರನ್ನು ಕಣ್ಣಾವರಿಸಿದಾಗ ಸೂರ್ಯ ಸುಮಾರು ಸುಡ ಹತ್ತಿದ್ದ. ಕನ್ನಡ ಬೋರ್ಡುಗಳ ದಾಟಿ ತಮಿಳು ಬೋರ್ಡ್ ಗಳು ರಸ್ತೆ ತುಂಬುವ ಹೊತ್ತಿಗೆ “ಟಿಫ಼ನ್” ಎಂದು ಬಸ್ ನಿಲ್ಲಿಸಿದರು. ನಮ್ಮ ತೊಂದರೆ ಪ್ರಾರಂಭವಾದದ್ದೇ ಇಲ್ಲಿ. ಬೆಳಬೆಳಗ್ಗೆ ಬಸ್ ಹತ್ತಿದವರು ಸಾಕಷ್ಟು ಹೊತ್ತು ಕೂತೇ ಇದ್ದು, ಒತ್ತರಿಸುತ್ತಿದ್ದ ಪ್ರಕೃತಿ ಕರೆಗಳಿಗೆ ಯಾರೂ ಓಗೊಟ್ಟಿರಲಿಲ್ಲ.
ಈಗ ಕಾಣದೂರ ಯಾವುದೋ ಹಳ್ಳಿಯ ನಡುವೆ ನಿಲ್ಲಿಸಿ, “ನಿಮ್ಮ ಅವಸರಗಳನ್ನು ಪೂರೈಸಿಕೊಳ್ಳಿ” ಎಂದು ಕರೆಯಿಕ್ಕಿದ್ದರು. ದಿಕ್ಕುಗಾಣದ ನಾವು ಕೊನೆಗೆ ಅಲ್ಲೊಂದು ಗುಡಿಸಲು ಮನೆಯ ಬಳಿ ಬಾಗಿ ಕಸಗುಡಿಸುತ್ತಿದ್ದ ಮುದುಕಿಯಲ್ಲಿ ಬಾರದ ಭಾಷೆಯಲ್ಲೇ ನಮ್ಮ ಅಳಲು ತೋಡಿಕೊಂಡೆವು. ಆಕೆ ತುಂಬು ಹೃದಯದಿಂದ ಒಂದು ನಗು ನಕ್ಕು ತಮಿಳಿನಲ್ಲೇ “ಹೆಂಗಸರಿಗೆ ಹೆಂಗಸರು ಸಹಾಯ ಮಾಡಬೇಕಾದ್ದೇ ಇಂತಹ ಸಮಯದಲ್ಲಿ ಅಲ್ಲವೇ. ಬನ್ನಿ ಧಾರಾಳವಾಗಿ ನಮ್ಮ ಬಚ್ಚಲು ಉಪಯೋಗಿಸಿ” ಎಂದು ಆಮಂತ್ರಿಸಿದರು. ಆಕೆಯ ಆ ಎರಡೇ ನಿಮಿಷದ ಅವಧಿಯ ಆಪ್ಯಾಯತೆ, ನಗು, ಅರ್ಥವಾಗದಿದ್ದರೂ ಅನುಭವಕ್ಕೆ ಬಂದ ಹಿತನುಡಿಗಳು ನಮ್ಮನ್ನು ಕಟ್ಟಿಬಿಟ್ಟಿತು. ಬಸ್ಸಿನ ಒಳಗೆ ಕಂಡು ಬಂದ ಮಡಿ-ಮೈಲಿಗೆಗಲಾಚೆಗೆ ನಮ್ಮನ್ನು ಕರೆತಂದಿತ್ತು ಆಕೆಯ ಆತ್ಮೀಯತೆ. “ರೊಂಬ ನಂಡ್ರಿ” ಎಂದು ಮರಳಿದೆವು. ನಂತರ ಯಾವುದೋ ಮದುವೆ ಮನೆಯ ಬಳಿ ಇದ್ದ ಮಂಟಪದಲ್ಲಿ ತಮಿಳು ಹಾಡಿನ ಆರ್ಕೆಸ್ಟ್ರಾದೊಂದಿಗೆ, ತಮಿಳು ಭಾಷೆಯ ಮಡುವಿನಲ್ಲಿ ನಮ್ಮ ಕ.ರಾ.ರ.ಸಂ ನಿಲ್ಲಿಸಿ ತಿಂಡಿ ತಿಂದಿದ್ದು ಒಂದು ಥ್ರಿಲ್ ಎನಿಸಿತ್ತು. ಬಸ್ ನಲ್ಲಿ ಮೇಲಿಂದ ಮೇಲೆ ಕೇಳಿ ಬರುತ್ತಿದ್ದ ಭಕ್ತಿ ಗೀತೆಗಳು, ಸ್ತ್ರೋತ್ರಗಳೊಂದಿಗೆ, ಆ ಕೊಳೆ ಬಟ್ಟೆ ಧರಿಸಿ ಬೆನ್ನು ಬಾಗಿಸಿ ಗುಡಿಸುತ್ತಿದ್ದ ಮುದುಕಿಯ ನೆನಪಿನೊಂದಿಗೆ ನಮ್ಮ ಪ್ರಯಾಣ ತಿರುವಣ್ಣಾಮಲೈ ಎಡೆಗೆ ಸಾಗಿತ್ತು.
ತಮಿಳು ನಾಡಿನಲ್ಲಿ ನನಗೆ ಮೊದಲ ಬಾರಿಗೆ ತಿಳಿದ ಒಂದು ವಿಶೇಷ ಎಂದರೆ “ತಿರು” ಎಂಬ ಪದದ ಬಗ್ಗೆ. ನಾವು ಶ್ರೀ ಪದಪ್ರಯೋಗ ಮಾಡುವಂತೆ, ಒಂದು ಗೌರವಾರ್ಥವಾಗಿ ಉಪಯೋಗಿಸುವ ಪದ ಈ “ತಿರು”. ತಿರುಪತಿ, ತಿರುವಳ್ಳುವರ್, ತಿರುಕ್ಕುರಳ್, ತಿರುವನಂತಪುರಮ್, ತಿರುವಣ್ಣಾಮಲೈ ಇವೆಲ್ಲದರ ಅರ್ಥ ತಿಳಿದದ್ದು ಆ ನಂತರವೇ. “ಅನ್ನಾಲ್ ಮಲೈ” ಎಂದರೆ ತಲುಪಲು ಸಾಧ್ಯವಿಲ್ಲದ ಬೆಟ್ಟ ಎಂದು. ರೂಢಿಗತವಾಗಿ ತಿರು+ಅನ್ನಾಲ್+ಮಲೈ = ತಿರುವಣ್ಣಾಮಲೈ ಆಗಿದೆ.
ಭಾರೀ ಬೆಟ್ಟದ ಅಡಿಯಲ್ಲಿ ತಲೆದೋರಿರುವ ಈ ದೇವಸ್ಥಾನ ಅರುಣಾಚಲೇಶ್ವರನದ್ದು. ಇದರ ವಾಸ್ತುಶಿಲ್ಪ ಮನಮೋಹಕವಾಗಿದೆ. ದೇವಸ್ಥಾನದ ಹೊರವಲಯದಲ್ಲಿ ನಾಲ್ಕು ದೊಡ್ಡ ಗೋಪುರಗಳು ಮತ್ತು ಒಳವಲಯದಲ್ಲಿ ಐದು ಸಣ್ಣ ಗೋಪುರಗಳು ಇದ್ದು, ಎಲ್ಲೆಲ್ಲೂ ಚೋಳರ ಕಲಾ ಕೈ ಚಳಕ ಇಂದಿಗೂ ಜೀವಂತವಾಗಿದೆ. ತಮಿಳು ನಾಡಿನ ಬಹುಭಾಗದ ದೇವಸ್ಥಾನಗಳು ಚೋಳರ ಪ್ರಸಾದಿಕೆಯೇ ಆಗಿದ್ದು, ಅವರ ಕಲೊಪಾಸನೆಯನ್ನು, ಕೌಶಲವನ್ನೂ ಮೆಚ್ಚದೆ, ತಲೆದೂಗದೆ ನಾವು ಬರಲಾರೆವು. ಸುಮಾರು ಒಂಭತ್ತನೇ ಶತಮಾನದಲ್ಲಿ ಪ್ರಾರಂಭಿಸಲಾದ ಈ ದೇವಸ್ಥಾನ ಕಟ್ಟಡ ನಿರ್ಮಾಣ ಮುಗಿದದ್ದು ಸುಮಾರು ಹದಿಮೂರನೇ ಶತಮಾನದ ಹೊತ್ತಿಗೆ. ಇವೆಲ್ಲಾ ನಮಗೆ ತಿಳಿದು ಬರುವುದು ಐತಿಹಾಸಿಕ ಶಾಸನಗಳ ಆಧಾರದ ಮೇರೆಗೆ. ಹೀಗೊಂದು ಶಾಸನದ ಮೂಲಕ ನಮಗೆ ತಿಳಿದು ಬಂದ ಮತ್ತೊಂದು ಗಮನಾರ್ಹ ವಿಷಯ ಎಂದರೆ, ವಿಜಯನಗರದ ಕೃಷ್ಣ ದೇವರಾಯನು ದೇವಸ್ಥಾನದ ರಥ, ವಸಂತೋತ್ಸವಕ್ಕೆ ಉಪಯೋಗಿಸುವ ಬೃಹತ್ ಅಗ್ನಿ ಕುಂಡ, ಸಾವಿರ ಕಂಬದ ಮಂಟಪ ಇತ್ಯಾದಿ ಕಲಾಗಾರಗಳನ್ನು ಈ ದೇವಸ್ಥಾನಕ್ಕೆ ಕಾಣ್ಕೆಯಾಗಿ ಕೊಟ್ಟಿದ್ದನು ಎಂದು.

ಈ ಅರುಣಾಚಲಗಿರಿಯ ಅರುಣಾಚಲೇಶ್ವರ ದೇವಸ್ಥಾನಕ್ಕೊಂದು ಇಂಟೆರೆಸ್ಟಿಂಗ್ ಪುರಾಣ ಕಥೆಯಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ಮದವೇರಿ, ಶಿವನನ್ನು ಕಡೆಗಣಿಸಿದ್ದರಂತೆ. ಶಿವನ ಆದಿ ಮತ್ತು ಅಂತ್ಯವನ್ನು ಭೇದಿಸಲು ಪಣತೊಟ್ಟರಂತೆ. ಹಂದಿಯ ಅವತಾರದಲ್ಲಿ ವಿಷ್ಣು ಮತ್ತು ಹಂಸದ ಅವತಾರದಲ್ಲಿ ಬ್ರಹ್ಮ ಇಡೀ ಬ್ರಹ್ಮಾಂಡವನ್ನೇ ಸುತ್ತಿದರೂ ಶಿವನ ಆದಿ-ಅಂತ್ಯಗಳೆರಡೂ ಕಾಣಲೊಲ್ಲದು! ಕೊನೆಗೆ ತಮ್ಮ ಉಧ್ಧಟತನವನ್ನು ಅರಿತ ಬ್ರಹ್ಮ, ವಿಷ್ಣು ಶಿವನ ಮೊರೆ ಹೋದರಂತೆ. ಶಿವ ಆಗ ಅಗ್ನಿಯ ರೂಪದಲ್ಲಿ ಒಂದು ಬೆಟ್ಟದ ಮೇಲೆ ಕಾಣಿಸಿಕೊಂಡನಂತೆ. ಅರುಣ ಅಂದರೆ ಅಗ್ನಿ, ಹಾಗಾಗಿ ಅರುಣಾಚಲಗಿರಿ ಎಂದು ಆ ಬೆಟ್ಟಕ್ಕೆ ಹೆಸರಾಯಿತಂತೆ. ಶಿವ ಪಂಚಭೂತಗಳೆಲ್ಲದರ ರೂಪ ತಾಳಿ ದಕ್ಷಿಣ ಭಾರತದಾದ್ಯಂತ ನೆಲೆಸಿದ್ದಾನಂತೆ! ಪೃಥ್ವಿಯಾಗಿ ಕಂಚೀಪುರದಲ್ಲಿ, ನೀರಾಗಿ ತಿರುವನಕ್ಕಿಕದಲ್ಲಿ, ವಾಯುವಾಗಿ ತಿರುಕ್ಕಳತಿಯಲ್ಲಿ, ಆಕಾಶವಾಗಿ ಚಿದಂಬರದಲ್ಲಿ ಮತ್ತು ಅಗ್ನಿಯಾಗಿ ತಿರುವಣ್ಣಾಮಲೈನಲ್ಲಿ.
ಹಾಗೆ ಬೆಟ್ಟವೇರಿ ಕೂತ ಶಿವನನ್ನು ಕೆಳಗೆ ಬರುವಂತೆ ಬ್ರಹ್ಮ, ವಿಷ್ಣು ಬೇಡಿದ್ದಕ್ಕೆ ಬೆಟ್ಟದಡಿಯಲ್ಲಿ ಒಂದು ಲಿಂಗವಾಗಿ ಪ್ರತಿಷ್ಠಾನಗೊಂಡನಂತೆ ಶಿವನು. ನಂತರ ಆ ಲಿಂಗಕ್ಕೆ ಸಂತೋಷದಿಂದ ಬ್ರಹ್ಮ ಮತ್ತು ವಿಷ್ಣು ಒಂದು ಗುಡಿಯನ್ನು ಕಟ್ಟಿದರಂತೆ. ಈ ಗುಡಿಯೇ ಅರುಣಾಚಲೇಶ್ವರ ದೇವಸ್ಥಾನವಾಗಿ ನಂತರ ಚೋಳರ ಕಾಲದಲ್ಲಿ ಅದರ ವೈಭವವನ್ನು ಮೆರೆದು ಇಂದು ಸೌಂದರ್ಯದ ಆಗರವಾಗಿ ನಮ್ಮ ಮುಂದೆ ಕಂಗೊಳಿಸುತ್ತಿದೆ.
ಈ ಕಥೆಯ ಬರಿಯ ಕಥೆಯಷ್ಟೇ, ಘಟಿಸಿದ್ದಲ್ಲ, ಇದು ಒಂದು ನಂಬಿಕೆ ಎಂಬುದು ನನ್ನ ನಂಬಿಕೆ. ಆದರೆ, ಆ ಕಥೆಯ ಹೆಣಿಕೆ, ಅದರ ಉದಾತ್ತ ಉದ್ದೇಶಗಳು ನಮ್ಮ ಮನಸೂರೆಗೊಳ್ಳುತ್ತದೆ. ಆದಿ-ಅಂತ್ಯಗಳಿಲ್ಲದ ಶಿವನನ್ನು ನಾವು ಸಿಂಬಾಲಿಕ್ ಆಗಿ ಕಾಣುವುದಾದರೆ, ಈ ಜಗತ್ತು, ನಮ್ಮ ಬದುಕು, ಮನುಷ್ಯನ ಮನಸ್ಸು, ಎಲ್ಲವನ್ನೂ ಪ್ರತಿಮೆಯಾಗಿಸುತ್ತಾ ಒಂದು ಆಧ್ಯಾತ್ಮಿಕ ಹೊಳಹಿನ ಅರ್ಥವನ್ನು ಬಿಂಬಿಸುತ್ತದೆ ಅಲ್ಲವೇ. ಹೀಗೆ ಅಧ್ಯಯನ ಮಾಡುತ್ತಾ ಹೋದರೆ ನಮ್ಮ ಎಲ್ಲ ಪುರಾಣಗಳಲ್ಲೂ ಒಂದಲ್ಲಾ ಒಂದು ಆಧ್ಯಾತ್ಮಿಕ ಅಥವಾ ಜ್ಞಾನ ಸಂಬಂಧೀ ಪ್ರತಿಮಾವಿಧಾನಗಳಿದ್ದೇ ಇರುತ್ತವೆ. ಇವು ಏಕೆ, ಹೇಗೆ ಹುಟ್ಟಿಕೊಂಡಿತು ಎಂಬುದು ಮತ್ತಷ್ಟು ಗಂಭೀರ ಮತ್ತು ಆಸಕ್ತಿಪೂರ್ಣ ಅಧ್ಯಯನವಾಗಬಲ್ಲದೇನೋ!
ವಿಪರ್ಯಾಸವೆಂದರೆ ಇವೆಲ್ಲವೂ ಮೂಲೆಗುಂಪಾಗಿ, ನಮಗೆ ಇಂದು ಕಾಣಿಸುವುದು, ಬೇಕಾಗುವುದು ಗರ್ಭಗುಡಿಯ ಹತ್ತು ಸೆಕಂಡುಗಳ ದೇವರ ದರ್ಶನ ಮತ್ತು ಅತಿ ವಿನಯದಿಂದ ಪ್ರಸಾದದ ವಿಭೂತಿಯನ್ನು ಹಣೆಗೆ ಬಳೆದುಕೊಂಡು ಮುಂದಿನ ದೇವಸ್ಥಾನಕ್ಕೆ ಧಾವಿಸುವ ಆತುರ. ನಮ್ಮ ಮುಂದಿನ ದಾರಿ, ಶಿವನ (ತಮಿಳುನಾಡಿನಲ್ಲಿ ಭಾಗಶಃ ದೇವಸ್ಥಾನಗಳು ಶೈವ ದೇವಸ್ಥಾನಗಳೇ ಆಗಿದ್ದು, ಅಲ್ಲಿ ಪ್ರಸಾದವಾಗಿ ಕೊಡುವುದು ತೀರ್ಥದ ಬದಲು ವಿಭೂತಿಯನ್ನೇ) ಮತ್ತೊಂದು ರೂಪವಾದ ಚಿದಂಬರಂನತ್ತ ಸಾಗಿತ್ತು.
ಅದಕ್ಕೂ ಮುನ್ನ ಅರುಣಾಚಲೇಶ್ವರ ದೇವಸ್ಥಾನಕ್ಕೆ ಹತ್ತಿರದಲ್ಲೇ ಇದ್ದ ಶ್ರೀ ರಮಣ ಮಹರ್ಷಿ ಆಶ್ರಮದಲ್ಲಿ ನಾವು ಕೆಲಕಾಲ ತಂಗಿ ಭೋಜನ ಕಾರ್ಯ ಮುಗಿಸುವುದಿತ್ತು. ಈ ಆಶ್ರಮದ ಬಗ್ಗೆ ಮತ್ತು ಆಶ್ರಮದಲ್ಲಾದ ಕೆಲ ಅನುಭವಗಳ ಬಗ್ಗೆ ನನ್ನ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.
 

‍ಲೇಖಕರು G

October 4, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. vinaya

    ಚೆನ್ನಾಗಿದೆ , ನಮಗೂ ಕೂತಲ್ಲೇ ತೀರ್ಥಯಾತ್ರೆ ನಡೆಯೋ ಎಲ್ಲ ಸಾಧ್ಯತೆ ಕಂಡು ಬರುತ್ತಿದೆ ಅಕ್ಕ 🙂

    ಪ್ರತಿಕ್ರಿಯೆ
  2. ಅರುಣ್ ಜೋಳದಕೂಡ್ಲಿಗಿ

    ಬರಹ ಆಪ್ತವಾಗಿದೆ. ಕನ್ನಡದಲ್ಲಿ ಗಂಡಸರು ಬರೆದ ಪ್ರವಾಸ ಕಥನಗಳ ರಾಶಿ ದೊಡ್ಡದಿದೆ. ಹೆಣ್ಣುಮಕ್ಕಳ ಪ್ರವಾಸ ಕಥನಗಳು ಕಡಿಮೆಯೆ.ಮಹಿಳೆ ಏಕಕಾಲದಲ್ಲಿ ಯಾವುದೇ ಒಂದು ಪ್ರವಾಸಿ ಸ್ಥಳವನ್ನು ತನ್ನ ಅನುಭವಲೋಕದ ಕಣ್ಣಲ್ಲಿ ನೋಡುತ್ತಾಳೆ, ಆಗ ಆ ಕಥನಕ್ಕೆ ಗಂಡು ನೋಡಲಾರದ ಒಂದು ವಿಶಿಷ್ಟ ದೃಷ್ಟಿಕೋನವೊಂದು ಸಾಧ್ಯವಾಗುತ್ತದೆ. ಈ ಬರಹದಲ್ಲೂ ಅಂತಹ ಕೆಲವು ಎಳೆಗಳಿವೆ.ಈ ಅನುಭವಗಳ ಒಟ್ಟಾಗಿಸಿ, ಪುಸ್ತಕ ರೂಪಕ್ಕೆ ತನ್ನಿ.

    ಪ್ರತಿಕ್ರಿಯೆ
  3. Anil Talikoti

    “ಗರ್ಭಗುಡಿಯ ಹತ್ತು ಸೆಕಂಡುಗಳ ದೇವರ ದರ್ಶನ ಮತ್ತು ಅತಿ ವಿನಯದಿಂದ ಪ್ರಸಾದದ ವಿಭೂತಿಯನ್ನು ಹಣೆಗೆ ಬಳೆದುಕೊಂಡು ಮುಂದಿನ ದೇವಸ್ಥಾನಕ್ಕೆ ಧಾವಿಸುವ ಆತುರ” ಸರಿಯಾಗಿ ಹೇಳಿದಿರಿ. ಅಂತೂ, ಇಂತೂ ಆ ನೆಪದಲ್ಲಾದರೂ ಈ ಜಂಜಾಟಗಳಿಂದ ದೂರ ಸರಿದು ಆಗಾಗ ಇಂತಹ ಕಲಾ ವೈಭವಗಳನ್ನು ಸವಿಯಬೇಕು.

    ಪ್ರತಿಕ್ರಿಯೆ
  4. ಸತೀಶ್ ನಾಯ್ಕ್

    ತಮಿಳುನಾಡಿನ ಬಹುತೇಕ ಎಲ್ಲಾ ದೇವಾಲಯಗಳನ್ನ ಸುತ್ತಿರೋ ನನಗೆ.. ಅದರ ಪೂರ್ವಾ ಪರ.. ಇತಿಹಾಸ ಚರಿತ್ರೆಗಳ ಕುರಿತಾಗಿ ಅಲ್ಪ ಸ್ವಲ್ಪ ಮಾಹಿತಿ ಇರುವುದಾದರೂ ತಿರುವಣ್ಣಾಮಲೈ ಬಗ್ಗೆ ನೀವು ಹೇಳಿದಷ್ಟು ಮಾಹಿತಿಗಳು ತಿಳಿದಿರಲಿಲ್ಲ.. ಚೆಂದದ ಪ್ರವಾಸ ಕಥನ.. ಇಷ್ಟವಾಯ್ತು. ಮುಂದಿನ ಕ್ಷೇತ್ರಗಳ ಕುರಿತಾಗಿ ನೀವು ಮಾಡಿಕೊಡಬಲ್ಲ ಪರಿಚಯವನ್ನ ಕಾಣಲಿಕ್ಕಾಗಿ ಕಾತುರತೆ ಇದೆ. 🙂

    ಪ್ರತಿಕ್ರಿಯೆ

Trackbacks/Pingbacks

  1. ಸಂಪು ಕಾಲಂ : ಜೀವಂತ ಕಲ್ಲುಗಳೂ, ಗ್ರಹಗಳೂ ಮತ್ತು ನಾವು « ಅವಧಿ / avadhi - [...] ಸಂಪು ಕಾಲಂ : ಜೀವಂತ ಕಲ್ಲುಗಳೂ, ಗ್ರಹಗಳೂ ಮತ್ತು ನಾವು October 11, 2013 by G (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: