ಸಂಪು ಕಾಲಂ : ಚಹಾ ಸವಿಯ ದಾರುಣ ಕಥೆ

ಅಪ್ಪ, ಅಮ್ಮ, ತಂಗಿಯೊಟ್ಟಿಗೆ “ಚಹಾದ ಜೋಡಿ ಚೂಡಾ ಹಾಂಗ…” ಎಂದು ಹಾಡಿಕೊಂಡೆ ಮಳೆಗಾಲದ, ಕರೆಂಟಿಲ್ಲದ ತಂಪಾದ ಇಳಿ ಸಂಜೆಯ ಕತ್ತಲೆ ಬೆಳಕ ಚೆಲ್ಲಾಟದ ನಡುವೆ ಚಹಾ ಕುಡಿಯುತ್ತಿದ್ದ ನೆನಪು ಹಸುರಾಗೇ ಉಳಿದು, ಈಗ್ಗೂ ಚಹಾ ಕುಡಿಯುವಾಗಲೆಲ್ಲ ಮರುಕಳಿಸುತ್ತದೆ. ಕಾಫೀಯಷ್ಟು ಒಗ್ಗಿಹೋಗದಿದ್ದರೂ ನಮ್ಮ ದಕ್ಷಿಣ ಭಾರತದಲ್ಲಿ ಚಹಾ ಅದರದ್ದೇ ಒಂದು ವಿಶೇಷ ಸ್ಥಾನ ಪಡೆದುಕೊಂಡಿದೆ. ಚಹಾ ಪ್ರೇಮಿಗಳಾದ ನಾವೆಲ್ಲರೂ, ನಮ್ಮ ದೇಶದಲ್ಲಿ ಅದರ ಇತಿಹಾಸ, ಉಗಮಗಳ ಬಗ್ಗೆ ಎಂದಾದರೂ ಆಲೋಚಿಸಿದ್ದೇವೆಯೇ? ಈ ಸಿನೆಮಾ ನೋಡುವವರೆಗೂ ನಾನಂತೂ ಆ ಕೆಲಸ ಮಾಡಿರಲಿಲ್ಲ!
ಇನ್ನು ಮುಂದೆ ಚಹಾ ಕುಡಿವಾಗಲೆಲ್ಲ ಗಂಟಲು ಬಿಗಿಯುವಂತೆ ಮಾಡಿದ ಈ ಸಿನೆಮಾದಲ್ಲಿ ಬ್ರಿಟಿಷರ ದಬ್ಬಾಳಿಕೆ, ಜಮೀನ್ದಾರೀ ರಾಕ್ಷಸತ್ವಕ್ಕೆ ಬಲಿಯಾಗಿ ನಿಶ್ಶಬ್ದವಾಗಿ ಜೀವ ತೇಯ್ದು, ಭಾರತಕ್ಕೆ ಚಹಾದ ಸವಿ ಪರಿಚಯಿಸಿದ ಲಕ್ಷಾಂತರ ಜೀತದಾಳುಗಳ ಹೆಪ್ಪುಗಟ್ಟಿದ ರಕ್ತದ ಗಾಥೆಯ ನೈಜ ಚಿತ್ರಣವಿದೆ. ಸಿನೆಮಾ ಪ್ರಾರಂಭದಿಂದ ಕೊನೆಯ ಕ್ಷಣದವರೆಗೂ ನಮ್ಮ ಉಸಿರು ಹಿಡಿದಿಡುವ ಈ ಚಿತ್ರದ ಹೆಸರು “ಪರದೇಶಿ”. ತಮಿಳು ಭಾಷೆಯ ಈ ಚಿತ್ರ, ಪೌಲ್ ಹ್ಯಾರಿಸ್ ಡೇನಿಯಲ್ ಅವರ “ರೆಡ್ ಟೀ” ಎಂಬ ಕಾದಂಬರಿಯ ತಮಿಳು ಅನುವಾದವಾದ “ಎರಿಯುಮ್ ಪನಿಕಾಡು” ಎಂಬ ಕೃತಿಯಾಧಾರಿತವಾಗಿದೆ.
ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಎಲ್ಲೆಲ್ಲೂ ಒಡೆತನ ಗಳಿಸಿದ್ದ ಬ್ರಿಟಿಷರ ಅರಾಜಕತೆಯಿಂದ ತಪ್ಪಿಸಿಕೊಂಡಿದ್ದದ್ದು ಚಹಾಬೆಳೆಯ ಕಾರುಬಾರು. ಚೀನೀಯರು ಇದರಲ್ಲಿ ಮುಂದಿದ್ದನ್ನು ಬಹುಬೇಗ ಅರಿತ ಬ್ರಿಟಿಷರು, ಇದರಲ್ಲೂ ತಮ್ಮ ಸ್ವಾಮ್ಯ ವಿರಾಜಿಸಬೇಕೆಂಬ ರಾಜಕೀಯ ಮುತುವರ್ಜಿಯಿಂದ ಭಾರತದಲ್ಲಿ ಹಲವಾರು ಕಡೆ ಇದ್ದ ಹರಿದ್ವರ್ಣವನ್ನು ಕೆಡವಿ ಚಹಾ ತೋಟಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಇದೇನೂ ಸುಲಭದ ಮಾತಾಗಿರಲಿಲ್ಲ. ನೂರಾರು ಊರುಗಳಿಂದ ಸಾವಿರಾರು, ಲಕ್ಷಾಂತರ ಜೀತದಾಳುಗಳು ವಲಸೆ ಬಂದು ಅಹರ್ನಿಶಿ ದುಡಿದು, ಸಾಧ್ಯವಾಗಬಲ್ಲ ಎಲ್ಲಾ ರೀತಿಗಳಲ್ಲೂ ತುಳಿತ, ವಂಚನೆಗೆ ಒಳಗಾಗಿ ಮೌನವಾಗಿಯೇ ಸಮಾಧಿಯಾಗಿಬಿಟ್ಟ ಪೀಳಿಗೆಗಳೆಷ್ಟೋ! ಈ ವಿಕೃತಿಯನ್ನು ಹೃದಯವಿದ್ರಾವಕವಾಗಿ ಚಿತ್ರಿಸಿರುವ ಎದೆಗಾರಿಕೆ ನಿರ್ದೇಶಕ ಬಾಲ ಅವರದ್ದು.
ಸರಿ ರಾತ್ರಿ ನಿದ್ದೆ ಬಾರದೆ ಕಾಳಹರಟೆ ಮಾಡುತ್ತಾ ಹೀಗೆ ಕೂತು ಸಿನೆಮಾ ನೋಡ ಹತ್ತಿದ್ದ ನಮ್ಮ ನಿರುಮ್ಮಳ ಮನಸ್ಥಿತಿ, ಸಿನೆಮಾ ಓಡುತ್ತೋಡುತ್ತಾ ಹಂತ ಹಂತವಾಗಿ ನಮ್ಮನ್ನು ಗಂಭೀರವಾಗಿಸಿ ಬಿಗುವಾಗಿಸಿದ್ದು ಸಿನೆಮಾದ ಕಥಾವಸ್ತುವಿನೊಂದಿಗೆ, ಪಾತ್ರಧಾರಿಗಳ ಮನೋಘ್ನ ಅಭಿನಯ. ನವರಸಗಳನ್ನೂ ಸುಭದ್ರವಾಗಿ ಹೊಲಿಗೆ ಹಾಕಿ ನೈಜ ಕಥಾನಕವನ್ನು ಅಷ್ಟೇ ಸಹಜವಾಗಿ, ಕರಾಳವಾಗಿ ಪರದೆಯ ಮೇಲೆ ತಂದದ್ದಕ್ಕೆ ನಿರ್ದೇಶಕನಿಗೊಂದು ಬೆನ್ನು ತಟ್ಟು. ಸಿನೆಮಾದ ಮತ್ತೊಂದು ವಿಶೇಷ ಎಂದರೆ, ಜೀತದಾಳುಗಳ ಕ್ರೂರ ಜಗತ್ತನ್ನು ಚಿತ್ರಿಸಲು ಅಷ್ಟೇ ಕತ್ತಲೆಯ ವರ್ಣರಹಿತ ಅಥವಾ ಅತ್ಯಂತ ಕಡಿಮೆ ಬಣ್ಣಗಳು ತೆರೆಯ ಮೇಲೆ ಕಾಣಿಸಿಕೊಳ್ಳುವುದು. ಸಿನೆಮಾ ಪೂರ ಕಪ್ಪು ಬಿಳುಪೇ ಹೌದು ಎಂಬಷ್ಟು ತೆಳು ವರ್ಣಗಳ ಉಪಯೋಗ. ಭಾವ ಬಣ್ಣಗಳಿಗೊಪ್ಪುವ ವಸ್ತ್ರ ವಿನ್ಯಾಸ, ಪರಿಸರ ಆಯ್ಕೆ ಮತ್ತು ಶಬ್ದ ನಿಯಂತ್ರಣ, ಇವೆಲ್ಲವೂ ಸೇರಿ ಕಥೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಒಂದಷ್ಟು ನಿಮಿಷಗಳ ಕಾಲ ನಮ್ಮನ್ನು ಬೇರೆಯ ಲೋಕಕ್ಕೇ ಕೊಂಡೊಯ್ಯುವ ಕಥೆ ಹೀಗಿದೆ: ಅದೊಂದು ಪುಟ್ಟ ಹಳ್ಳಿ. ಹರಡಿದ್ದ ಬರಡು ನೆಲದ, ಬಡ ಕುಟುಂಬಗಳ ಕಷ್ಟ ಕೋಟಲೆಗಳ ನಡುವೆಯೇ, ತುಂಬಿ ಹರಿಯುತ್ತಿದ್ದ ಪರಸ್ಪರ ಪ್ರೀತಿ, ಮುಗ್ಧತೆಗಳು ಅವರನ್ನೆಲ್ಲಾ ಸಂತೋಷವಾಗಿ, ಅಪ್ಯಾಯತೆಯಿಂದ ಒಗ್ಗೂಡಿಸಿರುತ್ತದೆ. ಯಾವುದೇ ಒಂದು ಸಣ್ಣ ಸಂತೋಷದ ವಿಚಾರವನ್ನೂ ಇಡೀ ಊರು ಹಂಚಿಕೊಂಡು ಸುಖಿಸುತ್ತಿರುತ್ತದೆ. ಕಥಾನಾಯಕ ರಾಸ ಒಬ್ಬ ಎಳಸು ಮನಸ್ಸಿನ, ಬೇಜವಾಬ್ದಾರಿ ಹುಡುಗ, ಊರಿಗೆಲ್ಲ ಉಪಕಾರ ಮಾಡಿ ಅವರು ಕೊಟ್ಟದ್ದನ್ನು ತಿಂದು, ತನ್ನ ಅಜ್ಜಿಯ ಪ್ರೀತಿಗೆ, ಪ್ರೀತಿಯ ಮೂದಲಿಕೆಗೆ ಒಳಗಾಗಿ ಕಷ್ಟಗಳ ನಡುವೆಯೇ ಸುಖ ಜೀವನ ನಡೆಸುತ್ತಿರುತ್ತಾನೆ. ಈತ ಊರಿನ ಪ್ರತಿಯೊಬ್ಬರಿಂದಲೂ ಮೂದಲಿಕೆಗೆ ಒಳಪಟ್ಟರೂ ಪ್ರತಿಯೊಬ್ಬರ ಪ್ರೀತಿಪಾತ್ರನೂ ಆಗಿರುತ್ತಾನೆ. ಒಂದು ಸಂತೋಷದ ಮದುವೆಯೊಂದಿಗೆ ಕಥೆ ಪ್ರಾರಂಭವಾಗುತ್ತದೆ. ಮದುವೆಯ ಗಲಾಟೆ, ಸಂಭ್ರಮ, ವಿನೋದ, ಜೀವನ ಪ್ರೀತಿ ಎಲ್ಲವೂ ಅತ್ಯಂತ ಜೀವಂತವಾಗಿ ಕಂಡುಬರುತ್ತದೆ. ಇದರ ನಡುವೆ ಕಥಾನಾಯಕ ಒಂದು ಹುಡುಗಿಯ ಸ್ನೇಹ ಮಾಡಿ ಅದು ಪರಸ್ಪರ ಪ್ರೇಮವಾಗಿ ಗಟ್ಟಿಗೂಡುತ್ತದೆ. ಈ ವಿಷಯವನ್ನರಿತ ಹುಡುಗಿಯ ತಾಯ್ತಂದೆಯರು ಇದಕ್ಕೆ ಒಪ್ಪಲು ಸಾಧ್ಯವೇ ಇಲ್ಲ, ಏಕೆಂದರೆ ಈ ಹುಡುಗನಿಗೆ ಒಂದು ಕೆಲಸವಾಗಲೀ, ನೆಲೆಯಾಗಲೀ ಇಲ್ಲ ಎಂದು ಕರಾರು ಮಾಡುತ್ತಾರೆ. ಇದನ್ನೇ ರಾಸ ಒಂದು ಸವಾಲಾಗಿ ಸ್ವೀಕರಿಸಿ ಕೆಲಸ ಅರಸುತ್ತಾ ಹೋಗುತ್ತಾನೆ. ಸಾಕಷ್ಟು ತೋಳ್ಬಲ, ಛಲ ಇರುವ ಈತ ಕೆಲಸ ಸಂಪಾದಿಸಿ ಅಂಗಮ್ಮ (ನಾಯಕಿ)ನನ್ನು ಮದುವೆಯಾಗಿಯೇ ಬಿಡುತ್ತೇನೆ ಎಂಬ ಸಂಭ್ರಮದಲ್ಲಿ ಪೇಟೆಗೆ ಹೋಗುತ್ತಾನೆ. ಇಲ್ಲಿಯವರೆಗೂ ನಕ್ಕು ನಗಿಸಿ ಹಗುರವಾಗಿದ್ದ ಭಾವ ತನ್ನ ತೂಕವಳೆಯುವುದು ಇಲ್ಲಿಂದ!

ಕೆಲಸವರಸುತ್ತಾ ಹೊರಟ ರಾಸನಿಗೆ ಒಂದು ದಿನಗೂಲಿ ಕೆಲಸ ಸಿಕ್ಕಿ ದಿನವಿಡೀ ಕಷ್ಟ ಪಟ್ಟು ಬೆವರುಸುರಿಸಿ ದುಡಿಯುತ್ತಾನೆ. ಸಂಜೆ ಕೂಲಿ ಕೇಳಲು ಹೋದಾಗ, ಕೊಡದೆ ಸತಾಯಿಸಿದ ಅಂಗಡಿಯ ಮುಂದೆಯೇ ರಾಸ ಕೂತು ತನ್ನ ಪಾಲಿನ ಹಣಕ್ಕಾಗಿ ಬೊಬ್ಬೆ ಹಾಕುವುದನ್ನು ಒಬ್ಬ ಶ್ರೀಮಂತ ಜಮೀನ್ದಾರ ಕೇಳಿಸಿಕೊಳ್ಳುತ್ತಾನೆ. ಸತ್ತ ಹೆಣವನ್ನು ಸುತ್ತುವ ಹದ್ದಿನಂತೆ, ಆತ ರಾಸನನ್ನು ಕರೆದು, ತನ್ನ ಮೂಲ ವಿಚಾರಿಸಿ ರಾಸನ ಊರು ತಲುಪುತ್ತಾನೆ. ರಾಸನಂತೆಯೇ ಮುಗ್ಧ ಜೀವಗಳು ತುಂಬಿದ್ದ ಇಡೀ ಊರನ್ನು ಗುಡ್ಡೆ ಹಾಕಿಕೊಂಡು ಇನ್ನಿಲ್ಲದ ಸುಖ ಜೀವನದ ಕನಸುಗಳನ್ನು ತೋರಿಸಿ, ಊರ ಎಲ್ಲ ಗಂಡಸರೂ, ಮತ್ತು ಬೇಕಾದರೆ ಅವರ ಜೊತೆ ಹೆಂಗಸರೂ ತನ್ನೊಟ್ಟಿಗೆ ಬರುವುದಾಗಿಯೂ, ಅವರೆಲ್ಲರನ್ನೂ ಕೈತುಂಬಾ ಹಣಕೊಟ್ಟು, ಬಟ್ಟೆ ಊಟ ವ್ಯವಸ್ಥೆ ಮಾಡಿ ನೋಡಿಕೊಳ್ಳುವುದಾಗಿಯೂ ಆಸೆ ತೋರಿಸಿ ಎಲ್ಲರ ಬಳಿಯೂ ಖಾಲೀ ಕಾಗದದ ಮೇಲೆ ಹೆಬ್ಬೆರಳ ಮುದ್ರೆ ಒತ್ತಿಸಿಕೊಳ್ಳುತ್ತಾನೆ ಆ ಯುಗಪುರುಷ ಜಮೀನ್ದಾರ!
ಎಟುಕದ ದ್ರಾಕ್ಷಿ ಎಂದರಿಯದ ಮುಗ್ಧ ಮನಸ್ಸುಗಳು, ಆತನ ಮಾತುಗಳನ್ನು ಅಕ್ಷರಶಃ ನಂಬಿ ಕಾಗದದ ಮೇಲೆ ಬೆರಳ ಮುದ್ರೆಯೊಂದಿಗೆ ತಮ್ಮ ಹಣೆಬರಹವನ್ನೂ, ಉಸಿರನ್ನೂ ಒತ್ತೆ ಇಟ್ಟುಬಿಟ್ಟಿದ್ದಾರೆ ಎಂಬ ಸತ್ಯ ಅರಿವಿಗೆ ಬರುವಷ್ಟರಲ್ಲಿ ಸಮಯ ಮೀರಿರುತ್ತದೆ. ಊರಿನ ಎಲ್ಲ ಗಂಡಸರೂ ಮತ್ತು ಕೆಲ ಹೆಂಗಸರೂ ಗಂಟು ಮೂಟೆ ಹೊತ್ತು ಹೊರಡಲು ಸಿದ್ಧ! ಅವರಲ್ಲಿ ಮೊದಲ ಉತ್ಸಾಹ ರಾಸನಿಗೆ. ತನ್ನ ಜೀವವಾದ ತನ್ನಜ್ಜಿ ಮತ್ತು ಪ್ರೇಯಸಿಗೆ ಸಾಕಷ್ಟು ಭರವಸೆ ಕೊಟ್ಟು, ಧೈರ್ಯ ತುಂಬಿ ಜಗವ ಗೆಲ್ಲಲು ಹೋಗುತ್ತಾನೆ. ಬಾಣಲೆಯಿಂದ ಬೆಂಕಿಗೆ ಎಂಬಂತಹ ಪರಿಸ್ಥಿತಿಯ ಪ್ರಾರಂಭದ ನಡಿಗೆ ಸಾಗುತ್ತಾ ಸಾಗುತ್ತಾ ಸರಿ ಸುಮಾರು ಐವತ್ತು ದಿನಗಳ ಹಗಲು ರಾತ್ರಿಗಳು ಕಳೆದುಹೋಗುತ್ತದೆ. ನಡೆದೇ ಸಾಗುತ್ತಾ ಸವೆಯುತ್ತಿರುವ ಈ ಜನರಿಗೆ ಜರುಗುವ ಮೊದಲ ಶಾಕ್ ಎಂದರೆ ದಾರಿಯಲ್ಲಿ ಇನ್ನು ಮುಂದೆ ಹೆಜ್ಜೆ ಇಡಲಾಗದೆ ಕುಸಿದು ಬೀಳುತ್ತಿದ್ದ ಮಂದಿಯನ್ನು ಬೆನ್ನಿಗಂಟಿದ ಧೂಳಿನಂತೆ ಅಲ್ಲೇ ಕೊಡವಿಕೊಂಡು ಮುನ್ನಡೆದು ಬಿಡುತ್ತಿದ್ದ ಜಮೀನ್ದಾರನ ವೈಖರಿ! ಐವತ್ತು ದಿನಗಳ ನಂತರ ಸೇರಿದ ಪಾಪಕೂಪದಲ್ಲಿ ಮೊದಲಿಗೆ ಕಾಣಸಿಗುವುದು ಇವರ ಬರುವಿಕೆಯನ್ನು ಭಯಾನಕ, ಕರುಣಾಜನಕ ಕಂಗಳಿಂದ ನೋಡುತ್ತಿದ್ದ, ಅವರಂತೆ ಈಗಾಗಲೇ ಮೋಸಹೋಗಿದ್ದ ಸಾಕಷ್ಟು ಮಂದಿ!
ಕುರಿಮಂದೆಗೂ ಕಡೆಯಾಗಿ ನಡೆಸಿಕೊಳ್ಳುವ ಪದ್ಧತಿಗಳೂ, ಈ ಮುಗ್ಧ ಜನರ ಭಯ, ಆತಂಕಗಳೂ ಅತ್ಯಂತ ರೂಪಕವಾಗಿ ಚಿತ್ರಿತಗೊಂಡಿದೆ. ಜೀತದಾಳು ಎಂದರೆ ಕಾಲ ಕಸಕ್ಕಿಂತಲೂ ಕಡಿಮೆಯಾಗಿ ಕಂಡು, ಬೆರಳ ಸಂದಿಯಲ್ಲೇ ಹೊಸಕಿ ಹಾಕಿಬಿಡುವ ಅನೇಕ ಸಂದರ್ಭಗಳು! ಪ್ಯಾರಡಾಕ್ಸ್ ಎಂದರೆ, ಈ ಜೀತದಾಳುಗಳ ಮುಂದೆ ದೊರೆಯಾಗಿ, ಭಗವಂತನಾಗಿ ಮೆರೆಯುವ ಜಮೀನ್ದಾರನು, ಬ್ರಿಟಿಷರ ಮುಂದೆ ತಾನೇ ಒಬ್ಬ ಜೀತದಾಳು! ರಾಸ ಮತ್ತಿತರರಿಗೆ ಚಾಟಿ ಏಟು ಕೊಟ್ಟು ತನ್ನ ಅಟ್ಟಹಾಸ ಮೆರದು ಮರುಕ್ಷಣವೇ ಆ ಬಿಳಿತೊಗಲಿನವರ ಮುಂದೆ ಜೋತು ಬಿದ್ದು “ಬ್ಲೆಸ್ಸ್ ಮೀ, ಮೈ ಲಾರ್ಡ್” ಎಂದು ಅಂಗಲಾಚುವ ಸ್ಥಿತಿಯನ್ನು ಮನೋಘ್ನವಾಗಿ ತೋರ್ಪಡಿಸಲಾಗಿದೆ.
ಆ ಟೀ ತೋಟದಲ್ಲಿ ದುಡಿಯುವ ಎಲ್ಲಾ ಹೆಣ್ಣು ಮಕ್ಕಳೂ ಆ ಜಮೀನ್ದಾರ ಮತ್ತು ಬ್ರಿಟಿಷ್ ‘ದೊರೆ’ಗಳಿಗೆ ಸೇರುವ ಸ್ವತ್ತು! ಅವರು ಮುಟ್ಟಿದಂತೆ ಮುಟ್ಟಿಸಿಕೊಂಡು, ಕರೆದಂತೆ ಹೋಗುವ ಗೊಂಬೆಗಳಾಗದಿದ್ದರೆ, ಅವರ ಮತ್ತು ಕುಟುಂಬದ ನಿರ್ನಾಮ ಅಂದೇ! ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಪಟ್ಟವರಿಗೆ ಕಾಲಿನ ಮಾಂಸಖಂಡ ಕತ್ತರಿಸಿ ಆಜೀವ ಕಾಲಿಲ್ಲದ ಕುಂಟರಾಗಿಸುವ ಭಯಾನಕ ಪರಿಸರ. ಊಟ, ನಿದ್ದೆ, ಔಷಧಿ ಏನೂ ಸರಿಯಾಗಿ ಸಿಗದೇ ಕೊನೆಗೊಮ್ಮೆ ಎಲ್ಲರೂ ಮಾರಣಾಂತಿಕ ಖಾಹಿಲೆಗೆ ಒಳಗಾಗುವಾಗ, ಈ ವ್ಯವಸ್ಥೆ ಮಾಡುವುದು ಸತ್ತ ಆ ಜೀವಗಳೆಲ್ಲವನ್ನೂ ಒಟ್ಟಿಗೆ ಸುಟ್ಟು ಭಸ್ಮ ಮಾಡಿ ಕೊನೆಗೆ ಮತ್ತೊಂದು ಇದೇ ರೀತಿಯ ಮುಗ್ಧ ಕನಸುಗಳ ರಾಶಿಯನ್ನು ತಂದಿಕ್ಕಿ ಕಡ್ಡಿ ಗೀರುವುದು!
ಕೆಲವೊಂದಷ್ಟು ವರ್ಷ ದುಡಿದ ನಂತರ ಕೊನೆಗೊಮ್ಮೆ “ಸೆಟಲ್ಮೆಂಟ್” (ಅಂದರೆ ಅವರ ಲೆಕ್ಕ ಚುಕ್ತಾ ಮಾಡಿ, ಅವರಿಗೆ ಬರಬೇಕಾದ ಹಣ ಕೊಟ್ಟು ಅಲ್ಲಿಂದ ಬಿಡುಗಡೆ ಮಾಡುವುದು) ಸಮಯ ಬಂದಾಗ, ತಮಗಾದ ನೋವು, ಹಿಂಸೆಗಳನ್ನೆಲ್ಲಾ ಮರೆತು ಮತ್ತೊಮ್ಮೆ ಕನಸ ಗೋಪುರವನ್ನೇ ಕಣ್ಣುಗಳಲ್ಲಿ ತುಂಬಿ, ಕೊನೆಗೂ ತಾವು ಮುಕ್ತ ಎಂದು ಎದುರು ನೋಡುವ ಮನಸುಗಳಿಗೆ ಆಗುವುದು ಬರೀ ನಿರಾಶೆ, ವಂಚನೆ ಮತ್ತು ಇನ್ನಷ್ಟು ವರ್ಷಗಳ ದುಡಿಯುವಿಕೆ. ರಾಸನಿಗೆ ಬಂದ ಕಾಗದ ಒಂದರಲ್ಲಿ ಆತನ ಪ್ರೇಯಸಿ ಗರ್ಭಿಣಿಯಾಗಿರುವುದಾಗಿ ತಿಳಿದು ಬರುತ್ತದೆ. ಅತ್ಯಂತ ಉತ್ಸಾಹದಿಂದ ರಾಸ ತನ್ನ ಕೈಲಾದಷ್ಟೂ ದುಡಿದು, ಆದಷ್ಟು ಬೇಗ ಇಲ್ಲಿಂದ ಹೊರಡಬೇಕು, ತನ್ನ ಅಂಗಮ್ಮನನ್ನು ಕಾಣಬೇಕು ಎಂಬ ಚಿಂತೆಯಲ್ಲಿ ಎರಡನೇ ಬಾರಿ ‘ಸೆಟಲ್ಮೆಂಟ್’ ಸಮಯದಲ್ಲಿ ಆಸೆಯೂರುತ್ತಾನೆ, ಆದರೆ ಆತನಿಗೆ ಆಗುವುದು ಆಗಲೂ ಬರೀ ನಿರಾಶೆ ಮತ್ತು ಒಂಭತ್ತು ವರ್ಷಗಳ ದುಡಿಮೆಯ ಹೆಚ್ಚುವರಿ! ಈ ಕೃತ್ರಿಮ ವ್ಯವಸ್ಥೆ ರಾಸನ ಅರಿವಿಗೆ ಬರುವಷ್ಟರಲ್ಲಿ, ಆತನ ಪ್ರೇಯಸಿ ಮತ್ತು ತಮ್ಮ ಪ್ರೀತಿಯ ಸಾಕ್ಷಿಯಾದ ಮಗ ಇಬ್ಬರೂ, ಆ ನರಕಕ್ಕೆ ಬಂದ ಮತ್ತೊಂದು ಹಿಂಡಿನ ಗುಂಪಿನಲ್ಲಿ ಕಾಣಸಿಗುತ್ತಾರೆ. ರಾಸನ ಕೊನೆಯ ಮಾತಾದ “ಈ ನರಕಕ್ಕೆ ಯಾಕೆ ಬಂದೆ ಅಂಗಮ್ಮ” ಎಂಬ ಚೀತ್ಕಾರ ನಮ್ಮನೊಮ್ಮೆ ಕಲಕಿಬಿಡುತ್ತದೆ.
ಸಾಂಕೇತಿಕವಾದ ಈ ರಾಸನ ರೀತಿ ಲಕ್ಶೋಪಲಕ್ಷ ‘ರಾಸ’ರ ಹಿಂಡು ಹೀಗೆ ಅವರ ಕೈಗೊಂಬೆಯಾಗಿದ್ದು, ಅವರ ಭದ್ರ ಬಲೆಯಲ್ಲೇ ಸಿಲುಕಿ ಸತ್ತಿದ್ದು ಎಲ್ಲಾ ಇಂದು ಸದ್ದಿಲ್ಲದ ಇತಿಹಾಸ. ಚರಿತ್ರೆಯ ಈ ತಿಳಿಯದ ಒಂದು ಸಂಪುಟವನ್ನು ನಮ್ಮ ಕಣ್ಮುಂದೆ ಹಾಸಿದ ಚಿತ್ರತಂಡದ ಬಗ್ಗೆ ಧನ್ಯತೆ ಮೂಡಿದುದರ ಜೊತೆಗೆ ತೇಲಿಹೋದ ಮತ್ತೊಂದು ವಿಚಾರ ಎಂದರೆ, ನಮ್ಮಲ್ಲೇಕೆ ಇಂತಹ ಸಧಬಿರುಚಿಯ ಚಿತ್ರಗಳ ಕೊರತೆ ಕಾಣುತ್ತಿದೆ ಎಂದು!

‍ಲೇಖಕರು avadhi

May 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Badarinath Palavalli

    ಅದೇಕೋ ನನಗೆ ಚಕಾ ಕುಡಿದರೆ ಯಮ ಪಿತ್ತ! ಅದಕ್ಕೆ ತುಸು ಏಲಕ್ಕಿ ತುಳಸಿ ಬೆರಸಿ ಮಾಡುವ ಮಸಾಲ ಟೀ ಸ್ವಲ್ಪ ಪರವಾಗಿಲ್ಲ.
    ರಾಸ ನಾನು ನೋಡಿಲ್ಲ. ಆದರೆ ಖಂಡಿತ ನೋಡಿಯೇ ತೀರುತ್ತೇನೆ. ಕನ್ನಡದಲ್ಲೂ ಸದಭಿರುಚಿ ಚಿತ್ರಗಳಿಗೆ ಕೊರತೆ ಇಲ್ಲ. ಪುಟ್ಟಕ್ಕನ ಹೈವೇ ಆಧಿನಿಕೀಕರಣ ಗ್ರಾಮಗಳನ್ನು ಬಟ್ಟಾ ಬಯಲು ಮಾಡುವ ಕತನವನ್ನು ಹೊಂದಿದೆ. ಹಾಗೆಯೇ ಇತ್ತೀಚಿನ ಕಮರ್ಷಿಯಲ್ ಚಿತ್ರಗಳಲ್ಲೂ ಸದಭಿರುಚಿ ಮನೆ ಮಾಡುತ್ತಿದೆ. ಸಿನಿಮಾದಿಂದ ಮನುಷ್ಯನಲ್ಲಿ ತಿದ್ದುವಿಕೆ ರೂಢಿಯಾದರೆ ನಿರ್ದೇಶಕನಿಗೂ ಗೆಲುವು.

    ಪ್ರತಿಕ್ರಿಯೆ
  2. ಶಮ, ನಂದಿಬೆಟ್ಟ

    ಎಂಥ ಬರಹವಿದು.. ಖಂಡಿತ ನೋಡುತ್ತೇನೆ

    ಪ್ರತಿಕ್ರಿಯೆ
  3. ಜಿ.ಎನ್ ನಾಗರಾಜ್

    ಹೆಚ್. ಎಲ್. ನಾಗೇಗೌಡರ “ಬೆಟ್ಟದಿಂದ ಬಟ್ಟಲಿಗೆ “, ಶಿವರಾಮ ಕಾರಂತರ ” ಚೋಮನ ದುಡಿ ” ಕೃತಿಗಳು ಈ ಚಿತ್ರಣವನ್ನು ನೀಡುತ್ತವೆ. ಪ್ರಮಾಣದಲ್ಲಿ ಕೆಲ ವ್ಯತ್ಯಾಸವಿದ್ದರೂ ಈಗಲೂ ಬಹುತೇಕ ಅದೇ ರೀತಿಯ ಸಂಕಟವನ್ನೇ ತುಂಬಿಕೊಂಡ ಬದುಕು ಈ ಚಹಾದ ನಿಜವಾದ ಬೆಳೆಗಾರರದು.ಅವರ ಬಗ್ಗೆ ನಮ್ಮ ಅರಿವು,ಕಾಳಜಿ ವ್ಯಕ್ತಗೊಳ್ಳಬೇಕಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: