ನೂರು ಕಥೆಗಳು ಒಡಲೊಳಗಿಹವು ಹೇಳತೇವ ಕೇಳ…

ನಾನಿದನ್ನು ವಿರೋಧಿಸುತ್ತೇನೆ ಎಂದ ಆ ಎಲ್ಲರಿಗೆ…

 

ಹುಪ್!

ಮೊನ್ನೆ ಮಂಗಳವಾರ ಸಂಜೆ ಕನ್ನಡ ಭವನದ ನಾಟಕ ಅಕಾಡೆಮಿಯಲ್ಲಿ ಅಭಿನವದ ಜೊತೆಗೂಡಿ ನಮ್ಮ ‘ಅವಧಿ’ಯ ಒಂದು ಕೃತಿ ಬಿಡುಗಡೆಯ ಕಾರ್ಯಕ್ರಮವಿತ್ತು. ಇದು ಯಾವುದೇ ಕಾರಣಕ್ಕೂ ಖುಷಿಯಿಂದ ಬಿಡುಗಡೆಗೊಳ್ಳುವ ಕೃತಿಯಲ್ಲ ಎಂಬುದು ನನಗಾಗಲೇ ಅರಿವಾಗಿತ್ತು. ಈ ಕೃತಿಯ ಕರೆಕ್ಷನ್ ಗೆಂದು ನಾನು ಕಂಪ್ಯೂಟರ್ ಮುಂದೆ ಕುಳಿತಾಗ, ಪುಸ್ತಕ ವಿನ್ಯಾಸಕ ಎಂ ಆರ್ ಗುರುಪ್ರಸಾದ್, ‘ತಮ್ಮಾ ಈ ಆರ್ಟಿಕಲ್ ಗಳನ್ನ ಓದಿಯೇನು? ಛೆ ಛೆ ಛೆ ಛೆ ಯಮಹಿಂಸೆ ಅನ್ನಿಸುತ್ತಪ್ಪಾ ನೋಡಿದ್ರೆ. ಛೆ ಅಂತ ದೊಡ್ಡ ಛೇಗಳ ಸರವನ್ನೇ ಪೊಣಿಸಿದಾಗಲೇ ನಾನಿದರ ವಿಕಾರ ರೂಪವನ್ನು ಕಂಡು ದಂಗಾಗಿದ್ದೆ. ಆ ಕೃತಿಯಲ್ಲಿನ ಎಲ್ಲಾ ಘಟನೆಗಳು, ಎಲ್ಲಾ ಪದ್ಯಗಳು, ಎಲ್ಲಾ ಕಥೆಗಳು ನೊಂದ ಹೃದಯಗಳ ಸ್ಮಶಾನದಿಂದೆದ್ದು ಬಂದ ನೋವಿನ ಕೂಗುಗಳು ‘ಅವಧಿ’ ಅಂಗಳದಲ್ಲಿ ನಿಂತು ಮೈಲಿಗೆ ಬಿಡುವ ಸ್ನಾನಕ್ಕಾಗಿ ಕಾಯುತ್ತಿದ್ದಂತೆನ್ನಿಸಿತ್ತು. ಅದರ ನೆನಪಲ್ಲೇ ಅ ಸಂಜೆ ನಾನು ಕಾರ್ಯಕ್ರಮದ ಬ್ಯಾನರ್ ಹಿಡಿದು ಕೊಂಚ ಬೇಗನೇ ಅಲ್ಲಿ ಅಡಿಯಿಟ್ಟಾಗಿತ್ತು. ಹೋಗಿ ವೇದಿಕೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡವು ಎಂದುಕೊಳ್ಳುವಷ್ಟರಲ್ಲಿ ಕಾರ್ಯಕ್ರಮಕ್ಕೆಂದು ಮೊದಲು ಬಂದದ್ದು ಜೋಗಿ ಸರ್.ನಂತರ ಕಾರ್ಯಕ್ರಮದ ಕೇಂದ್ರಬಿಂದು, ಸಾಹಿತಿ, ಚಲನಚಿತ್ರ ಗೀತೆಗಳ ರಚನೆಕಾರ ಜಯಂತ್ ಕಾಯ್ಕಿಣಿ ಸರ್ ಬಂದರು. ಅಷ್ಟೊತ್ತಿಗೆಲ್ಲಾ ಜಿ ಎನ್ ಸಾರ್ ಹಾಜರ್. ಆಮೇಲೆ ಜಯಲಕ್ಷಿ ಪಾಟೀಲ್ ಮೇಡಂ, ಸಂಧ್ಯಾ ರಾಣಿ ಮೇಡಂ, ಅಭಿನವದ ನ ರವಿಕುಮಾರ್ ಸರ್, ಪಿ ಚಂದ್ರಿಕಾ ಮೇಡಂ ಇನ್ನೂ ಎಷ್ಟೊಂದು ಆಪ್ತರು! ಎಲ್ಲರ ಕುಷಲೋಪಚಾರಿ ಮುಗಿಯುವಷ್ಟರಲ್ಲಿ ಕಾರ್ಯಕ್ರಮಕ್ಕೆ ನೆರೆದವರೆಲ್ಲರೂ ನಮ್ಮವರೇ. ಎಲ್ಲರೂ ಸೇರಿದ್ದೂ ಆಯಿತು ನಡೆರಿನ್ನು ವೇದಿಕೆಗೆ ಎಂದು ಸಭಾಂಗಣಕ್ಕೆ ಎಲ್ಲರೂ ಜಮೆಗೊಂಡಾಗ ವೇದಿಕೆಗೆ ಬಂದ ಜಿ ಎನ್ ಸಾರ್ ‘ಬಹುಶಃ ಇಂಥಹದ್ದೊಂದು ಕೃತಿಯ ಬಿಡುಗಡೆ ಇದೇ ಕೊನೆಯಾಗಲಿ ಇಂಥಹ ಕಾರ್ಯಕ್ರಮ ನಡೆಸುವ ಪರಿಸ್ಥಿತಿ ನಮಗೆ ಬಾರದಿರಲಿ ಎಂದು ಆಶಿಸುತ್ತೇನೆ’ ಎನ್ನುತ್ತಾ, ಕೃತಿ ಬಿಡುಗಡೆಯ ವೇದಿಕೆಗೆ ಜಯಂತ್ ಕಾಯ್ಕಿಣಿ ಸರ್ ರನ್ನು, ಜಯಲಕ್ಷ್ಮಿ ಪಾಟೀಲ್ ಮೇಡಂರನ್ನು, ಪಿ ಚಂದ್ರಿಕಾ ಮೇಡಂರನ್ನು ವೇದಿಕೆಗೆ ಕರೆಯಲಾಯಿತು.

ಅಲ್ಲಿ. ಆ ವೇದಿಕೆಯಲ್ಲಿ ಬಿಡುಗಡೆಗೆ ಕುಳಿತದ್ದು ಅಮರ ಕಾದಂಬರಿಯಲ್ಲ. ಮೊಳ ಮಲ್ಲೆ ಕಲ್ಪನೆಗಳ ಕವಿತೆಗಳ ಹೂಗುಚ್ಛವಲ್ಲ. ಕಟ್ಟು ಕಥೆಗಳ ನಿಟ್ಟಲ್ಲ. ಹಾಗಾಗಿ ಕಾರ್ಯಕ್ರಮದ ಮುಂಚೂಣಿ ಪ್ರಾರ್ಥನೆ ಎಂಬ ಸವಿಗಾನವಿಲ್ಲ. ಬದಲಾಗಿ, ಆಗ ನಮಗೆ ಕೇಳಿ ಬಂದದ್ದು, ಬಿಡುಗಡೆಗೊಳ್ಳಲು ಕುಳಿತಿದ್ದ ಕೃತಿಯ ಒಡಲೊಳಗಿನ ನೋವು ತುಂಬಿದ ಒಂದು ಆರ್ತನಾದ, ಕಳೆದು ಹೋದರೂ ಮರೆಯದುಳಿದ ಕೆಟ್ಟ ಘಳಿಗೆಯ ಸಾಲುಗಳನ್ನು. ಎದೆಯೊಳಗಿನ ಆಕ್ರೋಶವನ್ನು ಧ್ವನಿಯೊಳಗೆ ಬೆರೆಬೆರೆಸಿ ಕವನ ಓದಿದ್ದು, ಎಫ್ ಎಂ ರೇಂಬೋದ ನಿರೂಪಕಿ ಛಾಯಾ ಭಗವತಿ ಮೇಡಂ. ‘ಮಾಸ್ತಾರರು ಪರಲೋಕವಾಸಿಯಾಗಿದ್ದಾರೆ. ಪ್ರಯಾಣಿಕ ಇವತ್ತಿಗೂ ಅವರಿವರ ಎದೆ ಸವರುತ್ತಲೇ ಇದ್ದಾನೆ!” ಎಂಬ ಅವರ ಕವನದ ಕೊನೆಯ ಸಾಲುಗಳನ್ನು ಕೇಳಿ, ಅಯ್ಯ? ಕಡುಪಾಪಿಗೇಕೆ ಕಚ್ಚಾಯದ ಮರ್ಯಾದೆ ? ‘ನೆಗೆದುಬಿದ್ದು ನೆಲ್ಲಿಕಾಯಿ ಆಗೋದ, ಅವನ ಸಿದಿಗಿ ಸಿಂಗಾರವಾಗಿತ್ತು’ ಅಂತ ಸೀದಾ ನಮ್ಮ ಶೈಲಿಯಲ್ಲಿಯೇ ಉಗಿಯಬೇಕಿತ್ತು ಎನ್ನಿಸಿದ್ದು ನಿಜ.

ಈ ರೋಷಪೂರಿತ ದಿಕ್ಕಾರದ ಸಾಲುಗಳನ್ನು ಅರಗಿಸಿಕೊಳ್ಳಲು ದೀರ್ಘ ಉಸಿರಾಡುವ ಮೊದಲೇ ವೇದಿಕೆಗೆ ಬಂದದ್ದು ಕೃತಿ ಸಂಯೋಜಕಿ ಸಂಧ್ಯಾರಾಣಿ ಮೇಡಂ. ‘ದೆಹಲಿಯಲ್ಲಿ ನಡೆದ ಮಾನವ ಹತ್ಯಾಕಾಂಡದ ವಿರುದ್ಧ ದನಿಯೆತ್ತಲು ಸಲಹೆಯಿತ್ತ ಜಯಲಕ್ಷ್ಮಿ ಪಾಟೀಲ್ ಮೇಡಂಗೆ ಸಿಹಿ ಉತ್ತರ ನೀಡಿದ್ದ ಸಂಧ್ಯಾ ಮೇಡಂರ ನಿರೀಕ್ಷೆ, ಆ ಪೈಶಾಚಿಕ ಕೃತ್ಯದ ವಿರುದ್ಧ ಆರೇಳು ಲೇಖನಗಳು ಬಂದಾವು. ಎಂಬುದನ್ನು ತುಳಿದು ನೂರಾರು ಲೇಖನಗಳು ಅವಧಿಗೆ ಬಂದಾಗ ಅವರ ಕಲಕಿದ ಮನಕ್ಕೆಲ್ಲಿಯ ನೆಮ್ಮದಿ ? ಇದೇ ನೋವನ್ನು ವೇದಿಕೆಯಲ್ಲಿ ಹಂಚಿಕೊಂಡಾಗಲೂ ಅವರ ದುಗುಡ, ನೋವು, ಹಿಂಸೆ, ಸಮಾಜದ ಕೆಟ್ಟ ಮುಖವಾಡ ನೋಡಿದ ಅಸಹ್ಯ ಎಲ್ಲ ಎಲ್ಲವೂ ಸ್ಪಷ್ಟವಾಗಿ ಅವರ ಮುಖಭಾವನೆಯಲ್ಲಿತ್ತು. ಸಂಖ್ಯೆ ದೊಡ್ಡದಾದಷ್ಟೂ ಖುಷಿಪಡಲು ಬಂದ ಲೇಖನಗಳು ಟಿ ಆರ್ ಪಿ ನಂಬರ್ ಗಳಲ್ಲ ಎಂಬ ಯಾತನೆ ನೆರೆದವರಲ್ಲೂ ಇತ್ತು. ಕೃತಿ ಮುದ್ರಣಕ್ಕೆ ಲೇಖನಗಳ ಆಯ್ಕೆ ಮಾಡಲು ತಲ್ಲಣಿಸಿದ ತಾಯಿ ಹೃದಯ, ಸರಿರಾತ್ರಿಯಲ್ಲಿ ಗೆಳತಿಗೊಂದು ಸಂದೇಶ ಕಳಿಸಿ ‘ಇಲ್ಲ ನನ್ನ ಕೈಲಾಗಲ್ಲ ಜಯಲಕ್ಷೀ, ತುಂಬಾ ಹಿಂಸೆ ಎನ್ನಿಸುತ್ತೆ ಎಂದರೆ ಆ ಸಂದೇಶವನ್ನು ಸ್ವೀಕರಿಸಿದ್ದೂ ಒಂದು ಅಮ್ಮನ ಒಡಲೇ. ಅವರ ಕಂಗಳಲ್ಲೂ ಗಾಢ ಅಮವಾಸೆ. ಈ ಘಟನೆಯನ್ನು ವೇದಿಕೆಯಲ್ಲಿ ಸಂಧ್ಯಾರಾಣಿ ಮೇಡಂ ತೆಳುನೀರ ಪೊರೆ ಕಂಗಳಲಿ ಹಂಚಿಕೊಳ್ಳುತ್ತಿದ್ದರೆ ‘ನೀನ್ಯಾಕೆ ಹುಟ್ಟಿದೆಯೋ ಕಡುಪಾಪಿ ಪಿಂಡವೇ’ ಎಂದು ಆ ಕೃತಿಗೆ ನನ್ನ ಮನ ಕೂಗುತ್ತಿತ್ತು.

ಬಿಡುಗಡೆಗೆಂದು ಕುಳಿತಿದ್ದ ಯಾತನೆಗಳ ಮೂಟೆ ಇನ್ನೂ ತನ್ನ ಕುರೂಪ ತೋರಿರಲಿಲ್ಲ. ಮಾತಿಗೆಂದು ಎದ್ದುಬಂದದ್ದು ಈ ಕಪ್ಪುಬೊಟ್ಟಿನ ಕೃತಿಯ ವಿಶೇಷ ಸಂಚಿಕೆ ಸಂಪಾದಕಿ ಜಯಲಕ್ಷ್ಮಿ ಪಾಟೀಲ್ ಮೇಡಂ. ‘ನಾನು ಮಾತಾಡ್ತಾ ಮಾತಾಡ್ತಾ ತಡವರಿಸಿದರೆ ಕ್ಷಮಿಸಿ’ ಎನ್ನುತ್ತಲೇ ಮಾತು ಪ್ರಾರಂಭಿಸಿದ ಇವರ ಧಾಟಿ ನೋಡಿಯೇ ‘ಕಳಚಲಿವೆ ಕಳ್ಳ ಕೀಚಕರ ಮಳ್ಳ ಮುಖವಾಡಗಳು’ ಎಂದು ನನಗಾಗಲೇ ನಿಕ್ಕಿಯಾಗಿತ್ತು. ಅತ್ಯಾಚಾರ ಅನ್ನೋದು ದಿಢೀರ್ ಚಾಲ್ತಿಗೆ ಬಂದ ಪ್ಯಾಷನ್ ಅಲ್ಲ. ಇದು ಅನಾದಿಯಿಂದಲೂ ಹರಿದು ಬಂದ ಭಂಡ ಚರಂಡಿ. ಅತ್ಯಾಚಾರವೂ ಒಂದು ಜೋರು ಸುದ್ದಿಯಾಗುತ್ತೆ, ರಾಕೆಟ್ ಪಟಾಕಿಯ ಟಿ ಆರ್ ಪಿ ಆಗುತ್ತೆ ಅಂತ ಗೊತ್ತಾಗಿದ್ದು ತೀರಾ ಈಚೆಗೆ.ಅದರಿಂದ ಸಮಾಜದಲ್ಲಿ ಜಾಗೃತಿಯ ಗಾಳಿ ಬೀಸಿದ್ದೂ ಸಾರ್ಥಕ ಘಳಿಗೆ. ಆದರೆ ಎಲ್ಲಾ ಬಿಟ್ಟು ಈ ಲೈಂಗಿಕ ದಬ್ಬಾಳಿಕೆಯ ನೋವು ಇವರನ್ನೇ ಯಾಕೆ ಇಷ್ಟು ಹಿಂಸಿಸಿತೋ ಎಂದು ನಾನು ನೆನೆಯುವ ಘಳಿಗೆಗೇ ಅವರು ಆ ವಿಕೃತ ನೈಜ ಘಟನೆಗಳನ್ನು ಮೆಲುಕಿಬಿಟ್ಟರು. ಹಾಗೆ ಬಿಗಿದ ಗಂಟಲಿಂದ, ಹೆದರಿದ ಮಗುವಂತೆ ಘಟನೆಯನ್ನು ಜ್ಞಾಪಿಸಿಕೊಂಡ ಅವರು ‘ ನಂಗ್ಯಾಕೆ ಈ ದೆಹಲಿ ಕೃತ್ಯ ಇರುಳಗಲೆಲ್ಲಾ ಚುಚ್ಚಿತೆಂದರೆ, ನಾವಿನ್ನೂ ಆಗ ನಮ್ಮ ಹಳ್ಳೀಲಿದ್ವಿ, ನಮ್ಮ ಪರಿಚಯದವಳೊಬ್ಬಳು ಹೆಂಗಸು. ತುಂಬಾ ಒಳ್ಳೇವಳು. ಪ್ರೀತಿಯಿಂದ ಅತ್ತೆ ಅಂತಿದ್ದೆ. ನಮ್ಮ ಹಳ್ಳಿಗಳ ಕಡೆ ಸಂಬಂಧಿಕರಿಗಷ್ಟೇ ಅತ್ತೆ ಮಾವ ಅಂತ ಸಂಭೋದಿಸೊಲ್ಲ. ಅಲ್ಲಿ ಎಲ್ರೂ ಒಂದೇ ಮನೆಯೋರ ಥರಾ ಇರ್ತೀವಿ. ಆಕೆಗೊಬ್ಬ ಮಗನಿದ್ದ.

ನಾನು ಅವರ ಅವ್ವಗೆ ಅತ್ತೆ ಅನ್ನತಿದ್ದ ಸಲುಗೆಗೆ ಅವನು ನಂಗೆ ‘ನನ್ನ ಮದ್ವೆಯಾಗ್ತಿಯಾ? ಅಂತಿದ್ದ. ಅದಕ್ಕ ನಾನು ‘ನಿನ್ನ ಯಾವಾಳು ಲಗ್ನ ಅಕ್ಕಾಳ ಹೊಗಲೋ’ ಅಂತಿದ್ದೆ. ಅದಕ್ಕವನು ‘ಅಯ್ಯ ಹೋಗು ನಾನೆಂಥಾ ಹುಡ್ಗಿನ ಲಗ್ನ ಅಕ್ಕೀನಂದ್ರ, ನೀರು ಕುಡಿಯಾಕರ ನೀರು ಹಂಗಾ ಗಂಟ್ಲಾಗ ಕಾಣತಿರಬೇಕು. ಅಂಥಾಕ್ಕಿನ ಲಗ್ನಕ್ಕಿನಿ ನೋಡ್ಕಂಡಿರು’ ಅಂತಿದ್ದ. ಹಂಗೆಲ್ಲಾ ಹೇಳುತ್ತಿದ್ದ ಅವನೂ ಹಸುನಂಥೋನು. ಆಮೇಲೆ ಅವನ ಮದ್ವೆನೂ ಆಯಿತು. ಆದ್ರೆ ನಾನು ಪ್ರೀತಿಯಿಂದ ಅತ್ತೆ, ಹಸುವಿನಂಥಾ ಮಗ ಅಂತ ತಿಳ್ಕೊಂಡೋರು, ಆ ಮನೆಗೆ ಬಂದ ಸೊಸೆಗೆ ಎಂಥಾ ಹಿಂಸೆ ಕೊಡ್ತಾಯಿದ್ರಂದ್ರೆ, ಅವಳ ಮರ್ಮಾಂಗಕ್ಕೆ ದಿನಾಲೂ ಖಾರದ ಪುಡಿ ತುಂಬುತಿದ್ದರಂತೆ! ಅದನ್ನವಳು ಯಾರೆದಿರೂ ಬಾಯಿಬಿಟ್ಟಿಲ್ಲ. ತೀರಾ ಕರುಳೆಲ್ಲಾ ಸುಟ್ಟು ಹೋಗಿ ಇನ್ನು ಬದ್ಕೋದು ಡೌಟು ಅನ್ನೋವಾಗ ದವಾಖಾನಿಗೆ ಕರ್ಕೊಂಡು ಹೋದ್ರೆ ಅಲ್ಲಿರೋ ಡಾಕ್ಟ್ರು ಕೈ ಚೆಲ್ಲಿದ್ದ್ರು’ ಈ ನೀಚ ಘಟನೆಯನ್ನು ತಡೆ ತಡೆದು ಹೇಳುತ್ತಿದ್ದರೆ ನನ್ನ ಹೊಕ್ಕಳಿಗೆ ಯಾರೋ ಸಣ್ಣದೊಂದು ಸೂಜಿಗುಂಡಿಯನ್ನು ಸುಚ್ಚಿದಂತಾಯ್ತು. ಒಲಿದು ಬಂದ ಜೀವದ ಮರ್ಮಾಂಗಕ್ಕೆ ಖಾರದ ಪುಡಿ ತುಂಬುವನೆಂದರೆ ಅವನು ಒಂದು ಹಣ್ಣಿನ ಹೊಟ್ಟೆಯಲ್ಲಿ ಹುಟ್ಟಿರಲಿಲ್ಲವೇ? ತಾನೊಂದು ಹೆಣ್ಣೆಂಬುದನ್ನೂ ಮರೆತು ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟ ಆ ಕೆಟ್ಟ ಹೆಂಗಸಿಗೊಂದು ಯೋನಿ ಇಲ್ಲವೇ ? ಥೂ, ಇನ್ನು ತಡೆಯೊಕ್ಕಾಗಲ್ಲ ಅಂತಿತ್ತು ಕಣ್ಣೀರು. ನನ್ನ ದೇಹದ ನರನಾಡಿಗಳಲ್ಲಿ ರಕ್ತ ಹರಿಯದಂತೆ ಎಲ್ಲವನ್ನೂ ಒಂದೆಡೆ ಸೇರಿಸಿ ಗಂಟು ಹಾಕಿದಂತಾಯ್ತು. ‘ಸಾರ್ ನಾನು ಎದ್ದು ಆಚೆ ಹೋಗ್ತೀನಿ ಕೇಳಕ್ಕಾಗ್ತಿಲ್ಲ ಅಂತ ನಮ್ಮ ಕಾರ್ಯಕ್ರಮದಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಮುರಳಿ ಮೋಹನ ಕಾಟಿ ಸರ್ ಗೆ ಸನ್ನೆ ಮಾಡಿದ್ರೆ ಹುರಿಗಣ್ಣು ಬಿಟ್ಟು ಸುಮ್ನೆ ಕೂತ್ಕೋ ಅಂದ್ರು.

ದೇವರೇ ಅಂತ ಕಣ್ಮುಚ್ಚಿಕೊಂಡು ಕಟ್ಟೆಯೊಡೆಯಲು ರೆಡಿಯಿದ್ದ ಕಣ್ಣೀರಿಗೆ ಒತ್ತಡದ ಒಡ್ಡು ಹಾಕಿ, ಕಣ್ಬಿಡುವಷ್ಟರಲ್ಲಿ ಮತ್ತೊಂದು ಭೀಕರ ಮನ ಕಲಕುವ ಘಟನೆಯನ್ನು ಹಂಚಿಕೊಂಡುಬಿಟ್ಟರು.’ ನಾವವಾಗ ಪುಣೆನಲ್ಲಿದ್ವಿ ನಮ್ಮ ಪಾಟೀಲರು (ಪತಿ) ನಮ್ಮ ಮನೆಯ ಅನತಿ ದೂರದಲ್ಲಿ ಅಪಾರ್ಟ್ ಮೆಂಟೊಂದನ್ನು ಕಟ್ಟಿಸ್ತಾ ಇದ್ರು, ಆ ಕಟ್ಟೋ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ಜೋಪಡಿ ನಿರ್ಮಿಸಿದ್ದರು. ಅಂದು ಇದ್ದಕ್ಕಿದ್ದಂತೆ ಆ ಜೋಪಡಿಗಳಲ್ಲಿದ್ದ ಕಾರ್ಮಿಕರ ಗುಂಪೊಂದು ಬಂದು ಬನ್ನಿ ಇಲ್ಲೊಂದು ಅವಗಢವಾಗಿದೆ ಅಂತ ಪಟೇಲ್ರನ್ನ ಜೋಪಡಿಯತ್ತ ಕರೆಯ್ದೊದರು. ಹೊತ್ತಲ್ಲದ ಹೊತ್ತಲ್ಲಿ ಇದೇನಪ್ಪಾ ಫಜೀತಿ ಎಂಬ ದಿಗಿಲಿತ್ತು ನನ್ನಲ್ಲಿ. ಹೋಗಿ ನೋಡಿದ್ರೆ ಆ ಜೋಪಡಿಯಲ್ಲಿದ್ದ ಒಬ್ಬ ವ್ಯಕ್ತಿ ಗಡತ್ತಾಗಿ ಕುಡಿದು ಬಂದು ಅಂಗಳದಲ್ಲಿ ತನ್ನ ಮಗಳ ಜೊತೆಗೆ ಆಟವಾಡುತ್ತಿದ್ದ ಐದು ವರ್ಷದ ಕಂದಳನ್ನು ಜೋಪಡಿಗೆ ಎಳೆದೋಯ್ದು ಅತ್ಯಾಚಾರವೆಸಗಿದ್ದಾನೆ, ಜೋಪಡಿಯಿಂದ ಅಳುತ್ತಾ ಆಚೆ ಬಂದ ಮಗುವಿನ ತೊಡೆಗುಂಟ ಹಸಿ ರಕ್ತ ಜಾರುತ್ತಿತ್ತು.’ ಅದರ ನ್ಯಾಯ ಪಂಚಾಯ್ತಿಗೆ ಪಟೇಲ್ರ ಬಳಿ ಆ ಗುಂಪು ಬಂದಿತ್ತು. ಜಯಲಕ್ಷ್ಮಿ ಮೇಡಂ ಹೀಗೆ ಗದ್ಗದಿತರಾಗಿ ಅಸಹ್ಯ ಘಟನೆಯನ್ನು ಜ್ಞಾಪಿಸಿಕೊಳ್ಳುತ್ತಿದ್ದರೆ ಅಲ್ಲಿ ನೆರೆದವರೆಲ್ಲರ ಹೃದಯಗಳಲ್ಲಿ ಮುಳ್ಳು ಚುಚ್ಚಿದ ಅನುಭವ. ಇನ್ನೂ ಇಂಥಹ ಅದೆಷ್ಟು ಕಹಿಗಳಿದ್ದವೋ ಮೇಡಂನ ಮೆದುಳಲ್ಲಿ! ‘ ನಾನು ಈ ಮೇಲಿನ ಘಟನೆಗಳನ್ನು ಮನದಿಂದ ಪಕ್ಕಕ್ಕೆ ಸರಿಸುತ್ತಿದ್ದ ದಿನಗಳಲ್ಲೇ ಮತ್ತೆ ದೆಹಲಿಯಲ್ಲಿ ದೌರ್ಜನ್ಯದ ದರ್ಬಾರ್! ಊಹ್ಞುಂ ಇನ್ನು ಸುಮ್ಮನೆ ಕುಳಿತಿರಲು ನನ್ನಿಂದ ಸಾಧ್ಯವಿಲ್ಲ. ವಿಪರೀತ ಘರ್ಜಿಸುತ್ತಿರುವ ಆ ಸೈತಾನನ ಒಂದು ರೋಮಕ್ಕಾದರೂ ನಾನು ತಿರುಗಿಸಿ ಉತ್ತರಿಸಬೇಕು. ಹೀಗಂತ ಅವರ ನಿರ್ಧಾರದ ಫಲವೇ ‘ಅವಧಿ’ಯ ಈ ವಿಶೇಷ ಸಂಚಿಕೆಗೆ ನಾಂದಿ. ಹೀಗಂತ ಹೇಳಿ ಮಾತು ಮುಗಿಸಿದ ಮೇಡಂನ ಮೂಡು ವೇದಿಕೆಯಲ್ಲಿ ಕುಳಿತಾಗಲೂ ಉಮ್ಮಳಿಸಿದ ನೋವಿಗೆ ಸಾಂತ್ವಾನ ಸಿಕ್ಕಿರಲಿಲ್ಲ.

ಇಡೀ ಸಭೆಯಲ್ಲಿ ದಿವ್ಯ ಮೌನ. ಆಶ್ಚರ್ಯದ ನೋಟ. ಮುಂದೆ ಬರೋರು ಅದ್ಯಾವ ಅನ್ಯಾಯದ ಘಟನೆಯೊತ್ತು ಬರ್ತಾರೋ ಎಂಬ ದುಗುಡದಲ್ಲಿದ್ದಾಗಲೇ ಜಿ ಎನ್ ಸಾರ್, ಈ ಕೃತಿಯ ಮುದ್ರಿಸಿಕೊಟ್ಟ ಅಭಿನವದ ನ ರವಿಕುಮಾರ್ ರನ್ನು ಅನಿಸಿಕೆ ಹಂಚಿಕೊಳ್ಳಲು ಕರೆದಾಗ ವೇದಿಕೆಗೆ ಬಂದ ಅವರು, ಒಂದು ವಿಭಿನ್ನ ಪ್ರಯತ್ನದ ಫಲವಾಗಿ ಇಂದು ಒಂದು ವಿಭಿನ್ನ ಕೃತಿ ಬಿಡುಗಡೆಯಾಗಲಿದೆ. ನಿಜಕ್ಕೂ ಇದು ಗೆಲುವಿನ ನಗುವಲ್ಲ. ಯಾವಾಗಲೂ ಅನ್ಯಾಯಕ್ಕೊಳಗಾದ ಕ್ಷೇತ್ರದ ಕುರಿತು ಚಿಂತಿಸುವ ನಾವು ಇಂಥಹ ಕೂಗುಗಳಿಗೆ ದನಿಯಾಗದಿದ್ದರೆ ಸರಿಯಲ್ಲ ಎಂದುಕೊಂಡು ಕೃತಿ ಪ್ರಕಟಿಸಿದ್ದೇವೆ. ಎಂದು ಮತ್ತೊಮ್ಮೆ ‘ಅವಧಿ’ಯನ್ನು ನೆನೆದರು. ಕಾರ್ಯಕ್ರಮ ಪ್ರಾರಂಭದ ಮೊದಲೇ ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದ ಜಯಂತ್ ಕಾಯ್ಕಿಣಿ ಸರ್, ಕೃತಿಯನ್ನು ಸಭಿಕರೊಬ್ಬರೊಟ್ಟಿಗೆ ಬಿಡುಗಡೆಗೊಳಿಸುವ ಇರಾದೆಯಂತೆ ಬಿ ವಿ ಭಾರತಿ ಮೇಡಂರ ಜೊತೆ ಕೃತಿಯನ್ನು ಬಿಡುಗಡೆಗೊಳಿಸಿದರು. ಹಾಗೆ ಬಿಡುಗಡೆಗೊಂಡ ಕೃತಿ “ಹೇಳತೇವ ಕೇಳ…”

ಇದು “ದೆಹಲಿಯಲ್ಲಿ ನಡೆದ ಘಟನೆ ಕೇವಲ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ; ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ” ನಾನಿದನ್ನು ವಿರೋಧಿಸುತ್ತೇನೆ ಆ ಎಲ್ಲರಿಗೆ… ಎಂದು ಮುಗಿಲೆಡೆಗೆ ಮುಖ ಮಾಡಿದ ರಕ್ತಸಿಕ್ತ ಅಂಗೈ ಹೊತ್ತುಬಂದ ಕೃತಿಯ ಒಳಗೆ ಹೀಗಾಯ್ತು ಕೇಳ… ಎಂದವರೆಷ್ಟೋ. ಬೇಡವೆಂದರೂ ಕೇಳ… ಎಂದವರೆಷ್ಟೋ. ಬಿಕ್ಕುವೆವು ಕೇಳ… ಎಂದು ಬಿಕ್ಕಿದ ಬಿಕ್ಕಳಿಕೆಗಳೆಷ್ಟೋ. ಬೆಳಕಿಗಾಗಿ ನಾವು ಹೇಳತೇವ ಕೇಳ… ಹೀಗೆ ಎಷ್ಟೊಂದು ದೂರುಗಳು. ಅವಮಾನದ ಅಸಹ್ಯಗಳು. ಮನುಕುಲ ತಲೆತಗ್ಗಿಸುವ ಮನ ಕಲಕುವ ನೋವಿನ ಕರುಳ ಕಥೆಗಳು. ಅರ್ಪಿತಗೊಂಡವು ಲೋಕಕ್ಕಾಗ.

ಅಟ್ ದಿ ಸೇಮ್ ಟೈಮ್. ಮಿತಿ ಮೀರುತ್ತಿರುವ ಲೈಂಗಿಗ ಕಿರುಕುಳದ ಕಹಿ ನೆನಪುಗಳ ಕಂಡು ದಿಭ್ರಾಂತಿಗೊಂಡಿದ್ದ ಕಲಾಕಾರ ಅಪಾರ ಅವರು ತಡಮಾಡದೆ ತಡವರಿಸಿ ಇಡೀ ಘಟನೆಯ ಕುರಿತು ಜಾಗೃತಿ ಮೂಡಿಸುವಂತಹ ಒಂದು ಕಲಾಕೃತಿಯನ್ನು ರೆಡಿ ಮಾಡಿ ಅಲ್ಲಿ ನೆರೆದ ಸಭಿಕರೆಲ್ಲರಿಗೆ ಅರ್ಪಿಸಿದರೆ ಅವರವರ ಮನೆಗಳಲ್ಲಿ ಆ ಪೋಟೋ ನೇತಾಡುತಿದ್ದರೆ ಭವಿಷ್ಯದ ಪೀಳಿಗೆಗೊಂದು ಎಚ್ಚರಿಕೆಯ ಸಂದೇಶ ರವಾನೆಯಾಗುತ್ತೆ ಎಂಬ ಆಶಯದೊಂದಿಗೆ ತಯಾರಾಗಿದ್ದ ಕಲಾಕೃತಿಯನ್ನೂ ಜಯಂತ್ ಕಾಯ್ಕಿಣಿ ಸರ್ ಜೊತೆ ಅಪಾರರವರೂ ಸೇರಿ ಬಿಡುಗಡೆಗೊಳಿಸಿದರು. ಆ ಎಚ್ಚರಿಕೆಯ ಸಂದೇಶ ಹೊತ್ತ ಕಲಾಕೃತಿಯ ಪ್ರತಿಗಳನ್ನು ಸಭಿಕರ ಕೈಗಿಟ್ಟದ್ದು ನಾನು. ಹಾಗೆ ಆ ಕಲಾಕೃತಿಯನ್ನು ನಾನು ಪ್ರತಿ ಸಭಿಕರ ಕೈಗಿಡುವಾಗಲೂ ಅವರ ಮುಖಭಾವವನ್ನು ಗಮನಿಸಿದೆ. ಅಲ್ಲಿ ನಾ ಕಂಡ ಎಲ್ಲ ಕಂಗಳಲ್ಲೂ ಆಕ್ರೋಶ ಪೂರಿತ ಬಿಸಿಯುಸಿರು. ‘ಓ ಆಗಂತುಕ ವ್ಯಾರ್ಘನೇ ಇನ್ನೈತೆ ನಿಂಗೆ’ ಅನ್ನೋ ನಿಲುವಿನ ನೋಟಗಳೇ ತುಂಬಿದ್ದು. ಹಾಗೆ ಸಭಿಕರಿಗೆಲ್ಲಾ ಕಲಾಕೃತಿಗಳನ್ನು ಕೊಟ್ಟ ಮೇಲೆ ಕೃತಿ ಲೇಖರುಗಳಿಗೆ ಗೌರವದ ಕೃತಿ ನೀಡಲು ಪ್ರತಿಗಳನ್ನು ತರಲು ನಾನು ಸಭೆಯಿಂದ ಹೊರನಡೆದೆ. ಮರಳಿ ಬರುವಷ್ಟರಲ್ಲಿ ಸಭಿಕರಲ್ಲೊಮ್ಮ ಮೇಡಂ ತಮ್ಮ ಕವನ ವಾಚನ ಮಾಡುತ್ತಿದ್ದರು. ಆ ಕವನ ಅಬ್ಬಾ! ವಿಕೃತ ಮನಸ್ಸುಗಳಿಗೆ ರೋಬೋಟೇ ಸರಿ, ಎರಡು ತೊಡೆ ಎರಡು ಮೊಲೆ ಎಂಬ ಸಾಲನ್ನು ಬರೆಯಲು ಅದೆಷ್ಟು ತಾಳ್ಮೆಯ ಕಟ್ಟೆಯೊಡೆದಿರಬಹುದು. ಅತ್ಯಾಚಾರಿಗಳಿಗೆ ಗಲ್ಲು ಬೇಡ ಬದುಕಿಕೊಳ್ಳಲಿ ಜೀವ ಇರುವವರೆಗೂ ಪಾಪ, ಆದರೆ ಅವರಿಗೊಂದು ಸೂಜಿ ಮಾಡಿ ಆ ಸೂಜಿಯ ಚಮತ್ಕಾರದಿಂದ ಆ ವಿಕೃತ ಕಾಮಿಯ ಗುಪ್ತಾಂಗ ಕೇವಲ ಸುಸು ಮಾಡಲು ಬಿಟ್ಟು ಮಿಕ್ಕಿದ್ದಕ್ಕೆಲ್ಲಾ ಜೋತಾಡುವ ನಿರ್ಜೀವವಾಗಿರಲಿ’ ಎಂಬ ಅವರ ಕವನದ ಕೊನೆಯ ಸಾಲುಗಳು ಅದೆಷ್ಟು ಆಕ್ರೋಶದ ಭೋರ್ಗರೆತವೋ.

ಕವನ ವಾಚನ ಮುಗಿಯುತ್ತಿದ್ದಂತೆಯೇ ಈ ಕಪ್ಪು ಟಿಕ್ಕಲಿಯ ‘ಹೇಳತೇವ ಕೇಳ…’ ಕೃತಿಯ ಗೌರವ ಪ್ರತಿಗಳನ್ನು ಜಯಂತ್ ಕಾಯ್ಕಿಣಿಸರ್ ಪ್ರವರ ಕೊಟ್ಟೂರು, ಭಾರತಿ ಬಿ ವಿ, ಸೌಮ್ಯ ಕಲ್ಯಾಣ್ಕರ್, ವಿದ್ಯಾಶಂಕರ್ ಹರಪನಹಳ್ಳಿ, ಮೋಹನ್ ವಿ ಕೊಳ್ಳೆಗಾಲ, ಛಾಯಾ ಭಗವತಿ, ಉಷಾ ಕಟ್ಟೆಮನೆ, ಸಂಯುಕ್ತ ಪುಲಿಗಳ್, ವಿಜಯ ತೆಂಡೂಲ್ಕರ್, ಇನ್ನೂ ನಾಲ್ಕಾರು ಲೇಖಕ/ಲೇಖಕಿಯರಿಗೆ ನೀಡಿದ ಮೇಲೆ ಮಾತಿಗೆ ನಿಂತರು ಜಯಂತ್ ಕಾಯ್ಕಿಣಿ ಸರ್.

ಅಷ್ಟೊತ್ತು ವೇದಿಕೆಯಲ್ಲಿ ಹರವಿದ ನೈಜ ದೌರ್ಜನ್ಯಗಳ, ಕಂಡ ಘಟನೆಗಳ, ಅನುಭವಿಸಿದ ನೋವುಗಳನ್ನೆಲ್ಲಾ ಗಮನಿಸಿದ್ದ ಜಯಂತ್ ಕಾಯ್ಕಿಣಿ ಸರ್, ಸಮಾಜದಲ್ಲಿ ಸಮಾನತೆ ಸಾಧಿಸುವುದರಿಂದಲೂ ಲೈಂಗಿಕ ದೌರ್ಜನ್ಯದ ವಿರುದ್ಧ ತಿರುಗಿಬೀಳಲು ಸಹಕಾರಿ ಎಂದ ಅವರು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚತೊಡಗಿದರು. ‘ನಾನು ಮುಂಬೈನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದಾಗ ನಮ್ಮ ಹುಡುಗನೊಬ್ಬ ಮಲ್ಟಿ ಮಾಲ್ ನಲ್ಲಿ ಕೆಲಸ ಮಾಡೋದು ತುಂಬಾ ಖುಷಿ ಕೊಡುತ್ತೆ ನಾವು ಆಚೆ ಕೆಲಸ ಮಾಡಿದರೂ ಒಳಗಡೆ ಇರೋ ಹುಡ್ಗೀರು ಕಾಣ್ತಾರೆ. ಫುಲ್ ಗ್ಲಾಸ್ ಸಿಸ್ಟಮ್. ಇದ್ರೂ ಕೆಲ್ಸ ಮಾಡೋಕ್ಕೇನೂ ಬೋರಾಗೊಲ್ಲ. ಅವರು ಹೀಗಂತಾರೆ ಅಂದ್ರೆ ಅದು ಹೆಣ್ಣನ್ನು ಪುರುಷ ಸಿಂಹ ಅನ್ನಿಸಿಕೊಂಡೋನು ನೋಡೋ ಮೊದಲ ನೋಟ. ಅತ್ಯಾಚಾರಗಳು ಅನ್ನೋದು ಕೇವಲ ನಗರಕ್ಕೆ ಮಾತ್ರ ಸೀಮಿತವಲ್ಲ. ಹಳ್ಳಿಯ ಹೊಲ ಗದ್ದೆಗಳಲ್ಲೂ ನಡೀತವೆ. ಜೋರು ಜಾತ್ರೆಯ ನಡುವೆ ಹೆಣ್ಣಿನ ಚರ್ಮದ ಸ್ಪರ್ಶಕ್ಕಾಗಿ ಕಾಯುವ ಕೈಗಳಿವೆ ಅದು ಶಿವರಾತ್ರಿಯ ಜಾಗರಣೆ ದಿನವೂ ನಡೆಯುತ್ತೆ, ಗೊಮ್ಮಟೇಶನ ದರ್ಶನ ಸಂದರ್ಭದಲ್ಲೂ ಜರುಗುತ್ತೆ. ಎಷ್ಟೊಂದು ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಹೋದಾಗ ಎಷ್ಟೊಂದು ಶಿಕ್ಷಕರು ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸೊಲ್ಲ. ಎಂದು ಹೇಳುತ್ತಿದ್ದಾಗ ಇದು ಪಕ್ಕಾ ಪರ್ಪೆಕ್ಟ್ ಮೈಂಡ್ ಅನ್ನಿಸಿತು.

ಯುವ ಜನಾಂಗ, ಪ್ರಜ್ಞಾವಂತರು, ವಿಧ್ಯಾರ್ಥಿನಿಯರು ಈ ರೀತಿಯ ಅವಘಡಗಳನ್ನು ಕಂಡ ತಕ್ಷಣ, ದೂರು ಕೊಡಲು ಮುಂದಾಗಬೇಕು ಎಂದಾಗ. ಒಂದು ಗಂಡು ಅಸಭ್ಯವಾಗಿ ವರ್ತಿಸಿದ ಎಂದು ಹೆಣ್ಣೊಂದು ಮತ್ತೊಂದು ಗಂಡಿನ ಬಳಿಯೇ ನಿಲ್ಲಬೇಕಲ್ಲಾ ನ್ಯಾಯ ಸಿಗಬಹುದಾ? ಅನ್ನೋ ಅನುಮಾನ ಸುಳಿಯಿತೆನಗೆ. ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯವನ್ನು ಎದುರಿಸುವ ಕುರಿತು ಚರ್ಚೆಗಳಾಗಬೇಕು ಎಂದರು. ಸಂಕೋಚದ ಕಪ್ಪೆಚಿಪ್ಪಿನಿಂದಾಚೆ ಹೆಣ್ಣು ಬರಬೇಕು ಎಂದು ಆಶಿಸಿದರು. ಮಾಧ್ಯಮಗಳು ಹೇಗೆ ಅಪಬ್ರಃಶ ಪದಪ್ರಯೋಗ ಮಾಡುತ್ತವೆಂಬುದನ್ನೂ ನೆನೆದರು. ಬಾಳು ಕೊಡೋದು, ಯಜಮಾನ, ಮಾನಭಂಗ, ಇವುಗಳ ಅರ್ಥವನ್ನು ಪುನರಾವಲೋಕಿಸಬೇಕೇನೋ ಎಂದೂ ತಿಳಿಸಿದರು. ಗಂಡು ಜೀವಕ್ಕೆ ನಿಜವಾದ ಗಂಡಸ್ತನದ ಪರಿಕಲ್ಪನೆ ಮರೆಯಾಗಿದೆ. ಆ ಜಾಗಕ್ಕೆ ಸಿಕ್ಸ್ ಪ್ಯಾಕ್, ಹುರಿಮೀಸೆ, ಗಂಡಾಳು, ಈ ರೀತಿಯ ಪೂರ್ವಾಗ್ರಹ ಭಾವನೆಗಳೇ ಮೈದಳೆದಿವೆ ಅವುಗಳಿಗೆ ಬದಲಾಗಿ ನಿಜ ಗಂಡಸ್ತನ ಎಂದರೇನೆಂದು ತಿಳಿ ಹೇಳುವ ಜವಾಬ್ದಾರಿ ನಮ್ಮಗಳ ಮೇಲಿದೆ ಎಂದೂ ಹೇಳಿದರು. ನಾನು ಮತ್ತೆ ಮತ್ತೆ ಒತ್ತಿ ಹೇಳುವುದೊಂದೇ ಸಮೂಹ ಜಾಗೃತಗೊಳ್ಳಬೇಕಿದೆ ಎಂಬುದನ್ನೇ ಒತ್ತಿ ಹೇಳಿದ ಜಯಂತ್ ಕಾಯ್ಕಿಣಿ ಸಾರ್, ಮಾತು ಮುಗಿಸಿ ವೇದಿಕೆಯಲ್ಲಿ ಕುಳಿತಾಗಲೂ ಹ್ಞೂಂ, ಇನ್ನೂ ಏನಾದ್ರೂ ಹೇಳೊಕ್ಕಿದೆಯಾ ? ಎಂಬ ನೆನಪುಗಳಲ್ಲೆ ಮುಳುಗಿದ್ದರು.

ಇಡೀ ಕಾರ್ಯಕ್ರಮದಲ್ಲಿ ಆಗಾಗ ತಮ್ಮ ಗಮನಕ್ಕೆ ಬಂದ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದ ಜಿ ಎನ್ ಸಾರ್, ಖರೀಂ ಖಾನ್ ರ ತ್ರಿಪದಿ ಎಮ್ಮಿಯ ಮೇಸ್ಕಂಡು ಹಾಯಾಗಿ ನಾನಿದ್ದೆ, ಹಾಳಾದವೆರೆಡು ಮೊಲೆಬಂದು, ನನ್ನ ಕಂಡೋರಿ ನನ್ನ ಕೊಟ್ಟಾನೋ , ಎನ್ನೋ ಸಾಲುಗಳ ಹಿಂದಿನ ಮರ್ಮವನ್ನೂ, ‘ಅವಧಿ’ಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ದನಿಯಾಗಿ ಹೊರಹೊಮ್ಮಿದ ಲೇಖನಗಳು ನೀಡುತ್ತಿರುವ ಸತ್ಯ ದರ್ಶನವನ್ನು ಕುರಿತು ನಾಡಿನ ಗಣ್ಯರು ತಮ್ಮ ಬಳಿ ಚರ್ಚಿಸಿದ್ದನ್ನೂ, ಹೇಳುತ್ತಾ ಇಂದು ಕಾನ್ವೆಂಟುಗಳ ಪುಟ್ಟ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಗಳ ಕುರಿತು ಮಾಹಿತಿ ನೀಡುತ್ತಿರುವುದನ್ನೂ, ‘ಸತ್ಯಮೇವ ಜಯತೇ’ ನಿರೂಪಕ ಅಮೀರ್ ಖಾನ್ ಅತ್ಯಾಚಾರಿ ಹಾದಿ ಬೀದಿಯಲ್ಲೆಲ್ಲೋ ಇರುವುದಕ್ಕಿಂತ ಮೊದಲು ನಿಮ್ಮ ಮನೆಗಳಲ್ಲಿ, ನಿಮ್ಮಾಪ್ತವಲಯಗಳಲ್ಲಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದನ್ನೂ, ಹೀಗೆ ಸಾಲು ಸಾಲು ವಿಷಯಗಳನ್ನು ಹಂಚಿಕೊಳ್ಳುತ್ತಾ ಇನ್ನೇನು ಕಾರ್ಯಕ್ರಮಕ್ಕೆ ವಂದಿಸಬೇಕು, ಆಕೆ ಎದ್ದು ನಿಂತಳು. ಆಕೆ ಹೆಸರು ಕಾಂತಿ. ಅರೆ ಈ ಹುಡುಗಿ ಕಾನ್ಪಡೆಂಟ್ ಹೆಜ್ಜೆಗಳೊಂದಿಗೆ ವೇದಿಕೆಯಲ್ಲಿದ್ದ ಜಿ ಎನ್ ಸರ್ ಬಳಿ ಹೋಗಿ ತನ್ನದೇನೋ ಹಂಚಿಕೊಳ್ಳುವ ನೋವೊಂದಿದೆ ಎಂದು ಹೇಳಿದಾಗ ಜಿ ಎನ್ ಸಾರ್ ಅವಕಾಶ ಕೊಟ್ಟರು.

ಕಾಂತಿ ಮಾತು ಪ್ರಾರಂಭಿಸಿದರು. ಹದಿನೇಳತ್ತಂಬತ್ತರ ಮುಗ್ಧೆ ಅದಾವ ದುಗುಡ ಹಂಚಿಕೊಳ್ಳುವಳೋ ಎಂದು ಗಮನಿಸಿದರೆ ಆಕೆ ಹೇಳಿದ ಘಟನೆ ಇಡೀ ವ್ಯವಸ್ಥೆಯ ವಾಸ್ತವಿಕತೆಗಿಡಿದ ಕನ್ನಡಿಯಂತಿತ್ತು.. ಮೊದಲು ಎಲ್ಲಿಯೋ ಪಿ ಜಿ ಮಾಡಿಕೊಂಡಿದ್ದಳಂತೆ. ಅಲ್ಲೇನೋ ಸಮಸ್ಯೆ, ಓಡುವ ಬೆಂಗಳೂರಿನ ಜೊತೆ ಓಡಲೇಬೇಕಲ್ಲಾ. ಪಿ ಜಿ ಬದಲಾಯಿಸಿದ್ದಾಳೆ. ಅಲ್ಲಿಂದ ಪ್ರತಿ ದಿನ ಬೆಳಗ್ಗೆ ಏಳಕ್ಕೆ ಬಸ್ ಗಾಗಿ ಕಾಯುತ್ತಾ ನಿಲ್ಲುವುದು ಈಕೆಯ ದಿನಚರಿಯಂತೆ. ಪ್ರಾರಂಭದ ಕೆಲ ದಿನಗಳು ಸಮಸ್ಯೆ ಇಲ್ಲ. ಆಮೇಲೆ ಕಾಣಿಸಿಕೊಂಡಿದ್ದಾನೆ ಅಲ್ಲೊಬ್ಬ ಬ್ರಾಝೆನ್ ಪರ್ಸನ್. ಈಕೆ ಪ್ರತಿ ದಿನ ಬಸ್ ಗಾಗಿ ಕಾಯುವ ಸಮಯಕ್ಕೆ ಸರಿಯಾಗಿ ಅವನು ಆಕೆಯ ಪಕ್ಕದಲ್ಲಿ ನಿಂತು ತನ್ನ ಮರ್ಮಾಂಗ ಉಜ್ಜಿಕೊಳ್ಳುತ್ತಿದ್ದನಂತೆ. ಇದು ಪದೇ ಪದೇ ಮರುಕಳಿಸಿದಾಗ ಆಕೆ ತನ್ನ ಗೆಳೆಯನೆದಿರು ವಿಷಯ ಪ್ರಸ್ತಾಪಿಸಿದ್ದಾಳೆ ಈ ಕಾಂತಿಯ ಸ್ಟಾಪಿನ ಒಂದುವರೆ ಕಿ.ಮೀ ದೂರದ ಹಿಂದಿನ ಸ್ಟಾಪಿನ ಗೆಳೆಯ ಈಕೆಗೋಸ್ಕರ ಒಂದು ಘಂಟೆ ಬೇಗ ರೆಡಿಯಾಗಿ ಈಕೆಯೊಟ್ಟಿಗೆ ಸ್ಟಾಪಲ್ಲಿ ಸಹಾಯಕ್ಕಾಗಿ ಜೊತೆಯಾಗಿದ್ದಾನೆ. ಆಕೆಯ ಗೆಳೆಯ ಸಹಾಯಕ್ಕೆ ಬಂದ ದಿನಗಳಲ್ಲಿ ಆ ಆಗಂತುಕನ ಆಗಮನವಿಲ್ಲ. ಕೆಲ ದಿನಗಳಾದ ಮೇಲೆ ಕಾಂತಿ, ಸರಿ ಎಲ್ಲ ಸರಿ ಹೋಯ್ತು ಅನ್ಸುತ್ತೆ. ನನ್ನ ಸಲುವಾಗಿ ನೀನು ಇನ್ನೂ ರಿಸ್ಕ್ ತೆಗೆದುಕೊಳ್ಳೋದು ಬೇಡ ಎಂದು ಹೇಳಿದ ಅವನನ್ನು ತಡೆದ ಮರುದಿನವೇ ಮತ್ತದೇ ಆಗಂತುಕನ ಆಗಮನ. ರೋಸೆತ್ತ ಹುಡುಗಿ ನೇರ ಪೋಲಿಸ್ ಸ್ಟೇಷನ್ ಗೆ ಹೋದರೆ ನೀನಿರುವ ಏರಿಯಾ ನಮಗೆ ಅನ್ವಯಿಸೊಲ್ಲ ಎಂಬ ಅರಕ್ಷಕರ ಉತ್ತರ. ಸರಿ ತನ್ನ ಸುಪರ್ದಿಯ ಠಾಣೆಗೋದರೂ ಮತ್ತದೇ ಉತ್ತರ.

ಅಲ್ಲಿ ಇಲ್ಲಿ ಎಂದು ಅಲೆದಾಡಿ ಸುಸ್ತಾಗಿ ಹಾಳಾಗಿ ಹೋಗಲಿಬಿಡೆಂದು ಸುಮ್ಮನಾಗಿ ಕೆಲವೇ ದಿನಗಳಲ್ಲಿ ಆಕೆ ಇರುವ ಏರಿಯಾದ ಸಿಗ್ನಲ್ ನಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಆಟೋದಲ್ಲಿನ ಕಿಡಗೇಡಿಯೊಬ್ಬ ಬ್ಯಾಡ್ ಟಚ್ ಕೊಟ್ಟು ಮುಂದೆ ಹೋಗಿ ಈಕೆಯ ರಿಯಾಕ್ಷನ್ ಅಬ್ಜರ್ವ್ ಮಾಡುತ್ತಿದ್ದನಂತೆ. ಪಿತ್ತ ನತ್ತಿಗೇರಿದ ಈಕೆ, ಆಟೋದ ಬಳಿ ಹೋಗಿ ಆ ಬ್ಯಾಡ್ ಟಚ್ ಕೊಟ್ಟ ಕೈಯನ್ನು ಆಟೋದಿಂದಿಡಿದೆಳೆದಿದ್ದಾಳೆ. ಈಕೆಯ ಧೈರ್ಯಕ್ಕೆ ದಂಗಾದ ಆಟೋದವನು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಆ ಬ್ಯಾಡ್ ಟಚ್ ಕೊಟ್ಟವನೂ ತಪ್ಪಿಸಿಕೊಂಡು ಓಡಿದ್ದಾನೆ. ಅಂಥಹ ಟ್ರಾಫಿಕ್ ನಲ್ಲಿದ್ದ ಎಷ್ಟೊಂದು ನಾಗರೀಕರು ನಗುತ್ತಾ ಮೋಜು ತೆಗೆದುಕೊಂಡಿದ್ದಾರೆ. ಬಿಟ್ರೆ ಬುದ್ಧಿ ಕಲಿಸೋರ್ಯಾರು ಅಂದ್ಕೊಂಡು, ತನ್ನ ತಮ್ಮನ ಜೊತೆ ಹೋಗಿ ಕೇಸ್ ಬುಕ್ ಮಾಡಿ ಎಫ್ ಐ ಆರ್ ಬುಕ್ ಮಾಡಲೇಬೇಕೆಂದು ಸ್ಟೇಷನ್ ನಲ್ಲಿ ಕುಳಿತರೆ, ಕಾನೂನು ಆಟೋ ನಂಬರ್ ಕೇಳಿತ್ತಂತೆ. ಘಟನೆ ನಡೆದ ಸ್ಥಳಕ್ಕೆ ಹೋಗಿ ವಿಚಾರಿಸಿ ಸಾರ್ ಎಂದರೆ, ವಿಚಾರಣೆಗಾಗಿ ತುಂಬಾ ಅಲೆದಾಡಬೇಕಾಗುತ್ತೆ ಯೋಚನೆ ಮಾಡಮ್ಮಾ ಅಂದಿದೆ ಕಾನೂನು. ಪರ್ವಾಗಿಲ್ಲ ಸಾರ್ ವಿಚಾರಣೆಗೆ ಬರಲು ನಾನು ರೆಡಿಯಿದಿನಿ ಎಪ್ ಐ ಆರ್ ಬುಕ್ ಮಾಡಿ ಎಂದಾಗಲೂ ಸಾಂತ್ವಾನದ ಮಾತಾಡಿ ಮನೆಗೆ ಕಳಿಸಿದೆ ಕಾನೂನು. ‘ ಯುವಕರು ಸಿಡಿದೇಳಬೇಕು ಅಂತೀರ ಜಯಂತ್ ಕಾಯ್ಕಿಣಿಯವರೇ ನನ್ನ ಪರಿಸ್ಥಿತಿ ಹಿಂಗಾಯ್ತು’ ಅಂತ ಕಾಂತಿ ಹರಳು ಹುರಿದಂಗೆ ತನ್ನೊಳಗಿನ ಆಕ್ರೋಶವನ್ನು ಹೊರಚೆಲ್ಲಿ ಎಲ್ಲರಿಗೂ ವಂದಿಸಿ, ಹೋಗಿ ತನ್ನ ಜಾಗಕ್ಕೆ ಕುಳಿತಾಗಲೂ ಆಕೆಯ ಮುಖದಲ್ಲಿ ನಿಚ್ಚಳದ್ದೊಂದು ನಿರಾಳತೆ ಇತ್ತು.

ಎಲ್ಲಾ ನೋವುಗಳನ್ನೂ ಎದೆಗೆ ತುಂಬಿಸಿಕೊಳ್ಳುತ್ತಿರುವಾಗಲೇ ಮಾತಾಡಲು ನಿಂತದ್ದು ಅಭಿನವದ ಚಂದ್ರಿಕಾ ಮೇಡಂ.  ಮೆಲುದನಿಯಲ್ಲಿ ಮಾತನಾಡುತ್ತಲೇ, ’ಇಷ್ಟು ದಿನದ ನಮ್ಮ ಸಂಕಟ, ನಮ್ಮ ನೋವು ನಾವು ಹೇಳುತ್ತಾ ಇದ್ದೇವೆ, ನೀವು ಕೇಳಿ, ಕೇಳಲೇ ಬೇಕು, ಇದು ನಮ್ಮ ಹಕ್ಕೊತ್ತಾಯ” ಅಂದಾಗ ಕದಲುವ ಮನಸ್ಸು ಯಾರಿಗಿತ್ತು.  ಇದುವರೆಗೂ ಮಾತನಾಡಿದವರನ್ನು ’ನಾನು ನೀವು ಚನ್ನಾಗಿ ಮಾತನಾಡಿದಿರಿ’ ಎಂದು ಹೇಳಿದಾಗ ಅನ್ನಿಸ್ತು, ಇಲ್ಲಿ ಚೆನ್ನಾಗಿ ಮಾತನಾಡಿದ್ದಲ್ಲ ಮುಖ್ಯ, ಇಲ್ಲಿ ನಿಜವನ್ನು ತೆರೆದು ತೋರಿದ್ದು ಮುಖ್ಯ ಅಂತ.  ಹೌದು, ಅಲ್ಲಿದ್ದ ಮಾತುಗಳು ಸತ್ಯ, ಅಷ್ಟೇ ಸತ್ಯ ಅಂದರೆ ಆ ಮಾತುಗಳಿಗೆ ಅಭಿನವ ಪ್ರಕಾಶನದಿಂದ ಸಿಕ್ಕ ಒತ್ತಾಸೆ.  ಇಂತಹ ಒಂದು ಪುಸ್ತಕವನ್ನು, ಈ ನೋವಿನ ಮೂಟೆಯನ್ನು ಒಂದು ಪರಿಣಾಮಕಾರಿ ಪುಸ್ತಕವಾಗಿ, ಈ ದನಿಗಳು ಶಾಶ್ವತವಾಗಿ ಉಳಿಯುವಂತೆ ಮಾಡಿದ ಚಂದ್ರಿಕಾ ಮೇಡಂ ಗೆ, ರವಿಕುಮಾರ್ ಸರ್ ಗೆ ನಮ್ಮ ವಂದನೆ.

ಇಂಥಹ ಮನಸ್ಥಿತಿಗಳು ಪ್ರತಿ ಎಳೆಕುಡಿಗಳಲ್ಲೂ ಮೊಳಕೆ ಹೂಟೆಯೊಡೆಯಲಿ ಎಂದುಕೊಂಡು ಸಭಿಕರನ್ನೊಮ್ಮೆ ಗಮನಿಸಿದರೆ ಎಲ್ಲರ ಕಂಗಳೂ ಒದ್ದೊದ್ದೆ. ಅಲ್ಲಿದ್ದ ಎಲ್ಲರ ಗಂಟಲುಗಳೂ ಕಾದಂಚು. ಆದರೆ ಒಬ್ಬ ಮೇಡಂ ಮಾತ್ರ, ಸಾಧ್ಯವೇ ಇಲ್ಲ ನನ್ನಿಂದ ಸಹಿಸಲು ಎಂದು ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟಿದ್ದರು. ಅಂಥಹ ತುಂಬಿದ ಸಭೆಯಲ್ಲೂ ತಡೆ ಬೇಧಿಸಿ ನುಗ್ಗಿದ ಕಣ್ಣೀರಿನ ಹಿಂದೆ ಅದಾವ ಕರುಳು ಹಿಂಡುವ ಕೀಚಕನಿದ್ದನೋ…ಅವರ ದುಃಖಕ್ಕೆ ‘ಹೇಳತೇವ ಕೇಳ…’ ಇದು ಕೇವಲ ನಿನ್ನೊಬ್ಬಳ ಗೋಳಲ್ಲ. ಜೋಡಿಸು ನನ್ನ ಜೊತೆ ನಿನ್ನ ಕೈ ಆ ಪೈಶಾಚಿಕ ವ್ಯವಸ್ಥೆಯನ್ನು ಮೆಟ್ಟಿ ನಿಲ್ಲಲು ಎಂದು ಧೈರ್ಯ ತುಂಬಬಲ್ಲದೇನೋ ಎಂದುಕೊಂಡು ತಕ್ಷಣ ಜಿ ಎನ್ ಸಾರ್ ಅವರನ್ನು ವೇದಿಕೆಗೆ ಕರೆದು, ಜಯಂತ್ ಕಾಯ್ಕಿಣಿ ಸರ್ ಕೈಯಿಂದ ಒಂದು ಗೌರವ ಪ್ರತಿ ಕೊಡಿಸಿದರು. ಅದನ್ನು ಪಡೆದ ಆ ಮೇಡಂ, ಕೃತಿ ಪಡೆಯಲು ವೇದಿಕೆಗೆ ಬರುವಾಗಲೂ, ಕೃತಿ ಪಡೆದು ಮರಳುವಾಗಲೂ ಬಿಕ್ಕಿ ಬಿಕ್ಕಿ ಅಳುತ್ತಿದ್ದುದರ ಹಿಂದೆ ಅದೆಂಥಾ ನರಕವಿದ್ದೀತು. ಎಷ್ಟು ವರ್ಷಗಳ ಕಾಲ ನಿಗಿಗುಡುತ್ತಲೇ ಆಕ್ರೋಶದ ಬೂದಿಹೊದಿಕೆಯ ಕೆಂಡವಿತ್ತೋ… ಛೀ ನನ್ನ ಸಮಾಜದ ಮತ್ತೊಂದು ಮುಖ ಇಷ್ಟೊಂದು ನೀಚಮಟ್ಟದ್ದಾ? ಎಂದುಕೊಳ್ಳುತ್ತಾ ವೇದಿಕೆಯತ್ತ ನೋಡಿದಾಗ ಜಯಲಕ್ಷ್ಮಿ ಮೇಡಂರವರು. ಈ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ನಾನಂತೂ ನಗರದ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ವಿಧ್ಯಾರ್ಥಿಗಳೊಂದಿಗೆ ಚರ್ಚೆ, ಸಂವಾದಗಳ ಮೂಲಕ ಜಾಗೃತಿ ಮೂಡಿಸಲು ಪಣತೊಟ್ಟಿದ್ದೇನೆ.

ಈ ಸಮಾಜದೊಳಗಿನ ಕೊಳಕು ಎಷ್ಟೇ ನಿಧಾನಕ್ಕೆ ತೊಲಗಿದರೂ ಸರಿಯೇ ಅದರ ಪ್ರಾರಂಭವನ್ನು ನಾನಿಂದು ಮಾಡುತ್ತೇನೆ ನಿಮಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಹಸಿವಿದ್ದರೆ ನನ್ನ ಜೊತೆ ಕೈ ಜೋಡಿಸಿ ನಿಮ್ಮ ಕೈ ಕಲ್ಪವೃಕ್ಷವಾಗಲಿ, ಅಥವಾ ನೀವೇ ಸ್ವತಹ ಈ ಕಾರ್ಯ ಕೈಗೆತ್ತಿಕೊಂಡರೂ ನನಗದು ಹೆಮ್ಮೆಯ ವಿಷಯ . ದಯವಿಟ್ಟು ಯಾವುದಕ್ಕೂ ಆನ್ ಲೈನ್ ಗಳ ಮೂಲಕ, ಸಂದೇಶಗಳ ಮೂಲಕ, ಕರೆಗಳ ಮೂಲಕ, ನಿಮ್ಮ ನಿರ್ಧಾರ ತಿಳಿಸಿ ಎಂದು ನಮ್ರತೆಯಿಂದ ಕೇಳಿಕೊಂಡರು. ಅವರ ಕನಸುಗಳಿಗೆ ಸಹಾಯದ ಕೈಗಳು ಸಾವಿರವಾಗಲಿ ಎಂದುಕೊಂಡು ನಿರ್ಗಮಿಸಿದ ಕಾರ್ಯಕ್ರಮದಿಂದ ಹೆಜ್ಜೆ ಹಾಕಿದೆ ಮನೆಯ ಕಡೆಗೆ…

‍ಲೇಖಕರು avadhi

May 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. vidyashankar

    Shivu very well written. Hope this event provide insights to issues and strength to protest to all.

    ಪ್ರತಿಕ್ರಿಯೆ
  2. pravara

    ಮನೆಗೆ ಬಂದಾದ ಮೇಲೆ ಪುಸ್ತಕ ಓದಲು ಶುರುವಿಟ್ಟರೆ… ನಮ್ಮಗಳ ಒಳಗೇ ಇರುವ್ ವಿಕೃತ ಮನಸ್ಸುಗಳ ಬಗ್ಗೆ ಅಸಹ್ಯ ಎನಿಸಿದ್ದಂತು ಸುಳ್ಳಲ್ಲ…

    ಪ್ರತಿಕ್ರಿಯೆ
  3. anupama prasad

    ಶಿವು ಅವರೆ,
    ಕಾರ್ಯಕ್ರಮದ ಒಳ ಹೂರಣಗಳನ್ನು ಅವಧಿ ಓದುಗರಿಗೆ, ಕಾರ್ಯಕ್ರಮಕ್ಕೆ ಬರಲಾಗದವರಿಗೆ ತಲುಪಿಸಿದ್ದೀರಿ. ವಂದನೆಗಳು.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ
  4. ಹನುಮಂತ ಹಾಲಿಗೇರಿ

    ಕಾರ್ಯಕ್ರಮವನ್ನು ಖುದ್ದು ಹಾಜರಿದ್ದು ಅನಿಭವಿಸುದಂತಾಯಿತು ಶಿವು. ಓದಿ ಮುಗಿಸಿದಾಗ ಕಣ್ಣಂಚಲ್ಲಿ ಹಸಿ ಹಸಿ ತೇವ. ಥ್ಯಾಂಕ್ಸ್.

    ಪ್ರತಿಕ್ರಿಯೆ
  5. lakshmikanth itnal

    ಹೆಣ್ಣಿನ ಶೋಷಣೆಯ ಪರಾಕಾಷ್ಠೆ, ಗಂಡಿನ ನೀಚತನದ ಅನಾವರಣದ ಎಳೆ ಎಳೆಯನ್ನು ಕಾರ್ಯಕ್ರಮದಲ್ಲಿ ಕುಳಿತೇ ನೇರಾ ನೇರ ಅನುಭವಿಸಿದಂತಾಯ್ತು, ಹೃದಯಗಳೂ ನೋವಿನಿಂದ ಕೂಗುವುದನ್ನು ಕೇಳುತ್ತ, ಮನ ಮುದುಡಿತು. ಕಾರ್ಯಕ್ರಮದ ನಿರೂಪಣೆ ಚನ್ನಾಗಿದೆ.

    ಪ್ರತಿಕ್ರಿಯೆ
  6. Deepa girish

    ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆ ಕೊರತೆಯನ್ನು ನಿನ್ನ ವರದಿ ತುಂಬಿದೆ.. ಥ್ಯಾಂಕ್ಯೂ ಶಿವು..

    ಪ್ರತಿಕ್ರಿಯೆ
  7. Jayalaxmi Patil

    ಶಿವು, ಅಂದು ನಾನಾ ಕಾರಣಗಳಿಂದ ಬರಲಾಗದವರಿಗೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನುಭವ ನೀಡಿರಲು ಸಾಕು ನಿಮ್ಮ ಈ ಬರಹ.

    ಪ್ರತಿಕ್ರಿಯೆ
  8. ಜಿ.ಎನ್ ನಾಗರಾಜ್

    ನಾನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಿದ್ದ ಈ ನೋವಿನ ಬಿಡುಗಡೆಯ ಕಾರ್ಯಕ್ರಮಕ್ಕೆ ನಾನು ಬರಲಾಗದಂತೆ ಮಾಡಿದ ಕಾರ್ಯಕ್ರಮ ಸಂಯೋಜಕರ ಕೃತ್ಯಕ್ಕೆ ನಿಮ್ಮ ಈ ಪರಿಣಾಮಕಾರಿ ಬರಹ ಒಂದು ಪರಿಮಾರ್ಜನೆಯನ್ನು ಒದಗಿಸಿದೆ.ಒಂದು ಒಣ ವರದಿ ಅಥವಾ ‘ಉತ್ತಮ ‘ ವರದಿಯಾಗಬಹುದಾಗಿದ್ದನ್ನು ವೇದನೆಯ ಅಭಿವ್ಯಕ್ತಿಯಾಗಿಸಿ ಒಂದು ಮಾದರಿಯನ್ನು ಸೃಷ್ಠಿಸಿದ್ದೀರಿ.

    ಪ್ರತಿಕ್ರಿಯೆ
  9. Sumangala

    ಇಡೀ ಕಾರ್ಯಕ್ರಮವನ್ನು ಇನ್ನೊಮ್ಮೆ ಕೇಳಿಸಿಕೊಂಡಂತೆ ತುಂಬ ಆಪ್ತವಾಗಿ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದೀರಿ ಶಿವು ಅವರೇ. ಧನ್ಯವಾದಗಳು. ಅಂದಹಾಗೆ ನನ್ನ ಹೆಸರು ಸುಮಂಗಲಾ ಮತ್ತು ಅಂದು ನಾನು ಓದಿದ್ದು ಕವನ ಅಲ್ಲ, ಅದು ಒಂದು ಬಾಟಲಿ ಮತ್ತು ಮೊಂಬತ್ತಿಯ ಸ್ವಗತದ ಹಾಗಿನ ಬರಹ.

    ಪ್ರತಿಕ್ರಿಯೆ
  10. ರೂಪ ಹಾಸನ

    ಶಿವು ಅವರೆ,
    ‘ಛೆ! ನನ್ನ ಸಮಾಜದ ಇನ್ನೊಂದು ಮುಖ ಇಷ್ಟೊಂದು ನೀಚಮಟ್ಟದ್ದ?’ ಎಂಬ ಪ್ರಶ್ನೆಯನ್ನು, ಹೆಣ್ಣುಮಕ್ಕಳ ಗುಟ್ಟಿನ ನೋವುಗಳ ಸಾಂತ್ವಾನಕ್ಕಾಗಿ ಕೆಲಸ ಮಾಡುತ್ತಿರುವ ಪ್ರತಿಕ್ಷಣ ಕೇಳಿಕೊಳ್ಳುತ್ತಿರುತ್ತೇನೆ.ಆಪ್ತ ಬರಹವನ್ನು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  11. ವಿದ್ಯಾ.ಕುಂದರಗಿ.ಧಾರವಾಡ

    ಭವಿಷತ್ತಿನಲ್ಲಿ ಈ ಲೋಕ ಅಯೋನಿಜವಾಗಲಿ
    ಈ ಜಗತ್ತಿಗೆಯಂತ್ರ ಮಾನವರೇ ಸಾಕು,
    ಮರ್ಮಗಳ ಮಿತಿ ಮೀರಿರುವ ಇದಕ್ಕೆ
    ಮನಸು,ಹ್ರದಯ ಮತ್ತು ಮರ್ಯಾದೆ ಮೂಲಗಳು ಇಲ್ಲವಾಗಲಿ……..
    ಶಿವು…450 ಕೀ.ಮೀ.ದೂರದಿಂದ ಬರಲಾಗದೆ ಕಾರ್ಯಕ್ರಮಗಳ ಫೋಟೋ ಅಲ್ಬಂಬ್ ನೋಡಿ.ಅಷ್ಟರಲ್ಲೆ ಸಮಾಧಾನಪಟ್ಟಿದ್ದೆ…….. ಈಗ ನಿಮ್ಮ ಈ ‘ಸಭೆಯ ಸಹಜ,ಸ್ವಾಭಾವಿಕ ಚಿತ್ರಣ ಮತ್ತು ವೇದನೆಗಳ ಮಂಥನ..ವರದಿ….ಸುಂದರವಾಗಿದೆ.ಎಂದು ಹೇಗೆ ಹೇಳಲಿ?

    ಪ್ರತಿಕ್ರಿಯೆ
  12. kum.veerabhadrappa

    ಶಿವೂ, ನಿಮ್ಮ ಲೇಖನ ಓದುತ್ತಿದ್ದಂತೆ ಆಕ್ರೋಶ ಮತ್ತು ದುಃಖ ಒಟ್ಟಿಗೆ, ಆ ಅಪರೂಪದ ಕ್ರುತಿ ಬಿಡುಗಡೆ ಸಮಾರಂಭಕ್ಕೆ ನಾನೂ ಬರಲಾಗಲಿಲ್ಲವಲ್ಲ ಎಂಬ ನೋವು,
    ಆದರೆ ನೀವು ಸಶಕ್ತವಾಗಿ ಕಣ್ಣಿಗೆ ಕಟ್ಟುವಂತೆ ಬರೆದಿರುವಿರಿ, ಅದು ಕೇವಲ ಬರಹವಲ್ಲ, ಆಕ್ರೋಶಭರಿತ ಆಪ್ತ ಲೇಖನ. ಪುರುಷನ ಅಹಂಕಾರಕ್ಕೆ ಕೊಡಲಿಪೆಟ್ಟು ನೀಡಲು ಎಲ್ಲರೂ ಒಂದಾಗಬೇಕಿದೆ.
    ನಿಮ್ಮೊಳಗೆ ಇರುವ ಲೇಖಕನಿಂದ ನಾನು ಹಲವು ಉತ್ತಮ ಬರಹಗಳನ್ನು ನಿರೀಕ್ಷಿಸುವೆ
    ಕುಂವೀ

    ಪ್ರತಿಕ್ರಿಯೆ
  13. Sripathi manjanabailu

    Naanu Andu Bengalurinalli Irada Karana, E Karyakramakke Baralagalilla. Shivu Mimma E Lekhana Aaptha Hagu Thaptha. vandanegalu.

    ಪ್ರತಿಕ್ರಿಯೆ
  14. Gopaal Wajapeyi

    ಊರಾಗ ಇರಲಿಲ್ಲ ನೋಡ್ರಿ, ಹೀಂಗಾಗಿ ಆ ದಿನ ನನಗ ಬರಾಕಾಗಲಿಲ್ಲಾ… ಆದ್ರ, ನೀವು ಬರದದ್ದು ಓದಿ ಎಲ್ಲಾನೂ ಕಣ್ಣ ಮುಂದ ಕಟ್ಟಿದಂಗಾತು… ಶಬಾಶ್ ಶಿವೂ…

    ಪ್ರತಿಕ್ರಿಯೆ
  15. ಮಂಜುನಾಥ ದಾಸನಪುರ

    ಮನಕ್ಕೆ, ದೇಹಕ್ಕೆ ತಟ್ಟುವಂತಹ ಕಾರ್ಯಕ್ರಮ. ಮನಸಿಗೆ ನಾಟುವಂತೆ ಕಾರ್ಯಕ್ರಮದ ವಿವರ ಕೊಟ್ಟಿದಕ್ಕೆ ಧನ್ಯವಾದಗಳು ಶಿವು.

    ಪ್ರತಿಕ್ರಿಯೆ
  16. mahantesh

    ಕಾಯ೵ಕ್ರಮಕ್ಕೆ ಬರಲಾಗದಿದ್ದರೂ ಇಡೀ ಸಮಾರಂಭವನ್ನೇ ಕಣ್ಣಿಗೆ ಕಟ್ಟುವಂತೆ ಸೆರೆಹಿಡಿದ ಅಪ್ತ ಬರಹ. ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: