ಸಂಧ್ಯಾರಾಣಿ ಕಾಲಂ: ಇನ್ನೂ ಮುಗಿದಿಲ್ಲ ನಮ್ಮೆದೆಯ ’ಹೇಳತೇವ ಕೇಳ…’

ಮುಗಿದಾವ ನಿಮ ಜೋಳ, ಉಳಿದಾವ ನಮ ಹಾಡ…

ಎಂದಿನಂತೇ ಅಂದೂ ಬೆಳಗ್ಗೆ ಮೇಲ್ ಬಾಕ್ಸ್ ಓಪನ್ ಮಾಡಿದೆ, ಲಲಿತಾ ಸಿದ್ದಬಸವಯ್ಯ ಅವರು ಫಾರ್ವರ್ಡ್ ಮಾಡಿದ ಒಂದು ಸಂದೇಶ ಇತ್ತು .. ಅದುವರೆಗೂ ಬೆಳಗಿನಂತಿದ್ದ ನನ್ನ ಬೆಳಗು ಒಮ್ಮೆಲೇ ಸ್ಥಬ್ಧವಾಗಿತ್ತು …
ನಿರ್ಭಯಾಳ ಅಮಾನುಷ ಅತ್ಯಾಚಾರವನ್ನು ಈಗಾಗಲೆ ತನ್ನ ಕಾಲಲ್ಲಿ ತಳ್ಳಿ ಹಾಕಿದ್ದ ದೆಹಲಿ, ಇನ್ನೊಂದು ಅತ್ಯಾಚಾರಕ್ಕೆ ಸಿದ್ಧವಾಗಿತ್ತು, ಈ ಸಲ ಅದು ಆರಿಸಿಕೊಂಡಿದ್ದು ೫ ವರ್ಷದ ಹಸುಳೆಯನ್ನು. ಅಲ್ಲಿ ನಿರ್ಭಯಾಳಿಗೆ ಪಾಠ ಕಲಿಸಲು ಅವಳ ಯೋನಿಯೊಳಗೆ ಕಬ್ಬಿಣದ ಸರಳು ತುರುಕಿದ್ದರೆ, ಇಲ್ಲಿ ಈ ಕಂದಮ್ಮನ ರಕ್ತ ಸ್ರಾವ ನಿಲ್ಲಿಸಲು, ಮೋಂಬತ್ತಿ ಮತ್ತು ಬಾಟಲ್ ತುರುಕಿದ್ದರು, ಅಷ್ಟೆ, ಇನ್ನೇನೂ ವ್ಯತ್ಯಾಸವಿರಲಿಲ್ಲ. ಇಲ್ಲ ಇಲ್ಲಿ ಇನ್ನೊಂದು ವ್ಯತ್ಯಾಸವಿತ್ತು,
ಬಾಲಕಿ ಕಾಣೆಯಾಗಿದ್ದಾಳೆಂದು ಕಂಪ್ಲೇಂಟು ಕೊಡಲು ಹೋದರೆ ಪೋಲೀಸರು ಅದನ್ನು ಸ್ವೀಕರಿಸಿರಲಿಲ್ಲ, ಆಮೇಲೆ ಸಹ ಕಂಪ್ಲೇಂಟು ರಿಜಿಸ್ಟರ್ ಆಗದ ಹಾಗೆ ಒತ್ತಡ ಹೇರಲಾಗಿತ್ತು. ಇದನ್ನು ಪ್ರತಿಭಟಿಸಲು ಹೋದ ಒಬ್ಬ ಯುವತಿಯ ಕೆನ್ನೆಗೆ ಬಿ ಎಸ್ ಅಹ್ಲಾವತ್ ಎಂಬ ಆ ಪೋಲೀಸ್ ಅಸಿಸ್ಟೆಂಟ್ ಕಮಿಶನರ್ ಮತ್ತೆ ಮತ್ತೆ, ಮತ್ತೆ ಮತ್ತೆ ಭಾರಿಸುತ್ತಿದ್ದ …. ಮತ್ತು ಇವೆಲ್ಲವನ್ನೂ ಆತ ಮಾಧ್ಯಮಗಳ ಮುಂದೆಯೇ ಮಾಡುತ್ತಿದ್ದ …. ಎಲ್ಲಿಗೆ ಬಂದಿದ್ದೇವೆ ನಾವು … ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಇಲ್ಲಿ, ದೇಶದ ರಾಜಧಾನಿಯಲ್ಲಿ ಅಪರಾಧಕ್ಕಲ್ಲ, ಅಪರಾಧವನ್ನು ಪ್ರತಿಭಟಿಸುವುದಕ್ಕೆ ಶಿಕ್ಷೆಯಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಹೆಣ್ಣಿನ ನೋವು, ಸಿಟ್ಟು, ಆಕ್ರೋಶ ಮತ್ತು ದೌರ್ಜನ್ಯವನ್ನು ಪ್ರತಿಭಟಿಸಿದ ದನಿಗಳು ’ಹೇಳತೇವ ಕೇಳ’ ಎಂದು ಪುಸ್ತಕವಾಗಿ ದಾಖಲಾಗಿದ್ದು ನನ್ನ ಮಟ್ಟಿಗೆ ಒಂದು ದೊಡ್ಡ ಹೆಜ್ಜೆಯೇ. ಯಾಕೆಂದರೆ ಪ್ರತಿಭಟನೆ ದಾಖಲಾಗದಿದ್ದರೆ, ಪ್ರತಿಭಟನೆ ಬಾರದಿದ್ದರೆ ಅದೊಂದು ಕೇವಲ ಒಳಮನೆಯ ಪಿಸುಮಾತಾಗಿ ಉಳಿದುಬಿಟ್ಟರೆ, ಛಾಯಾ ಭಗವತಿಯವರ ಕವನದ ಹಾಗೆ ’ಪ್ರಯಾಣಿಕ ಇವತ್ತಿಗೂ, ಅವರಿವರ ಎದೆ ಸವರುತ್ತಲೇ..’ ಇರುತ್ತಾನೆ. ಮುಚ್ಚಿದ ಬಾಗಿಲುಗಳ ಹಿಂದೆ, ಬೆರಳುಗಳು ರಾಕ್ಷಸ ನೃತ್ಯ ಮಾಡುತ್ತಲೇ ಇರುತ್ತವೆ.
ಮಂಗಳವಾರ ಸಂಜೆ ಮಹಿಳಾ ದೌರ್ಜನ್ಯದ ವಿರುದ್ಧ ಅವಧಿಯಲ್ಲಿ ಪ್ರಕಟವಾದ ಬರಹಗಳು ಪುಸ್ತಕವಾಗಿ ಪ್ರಕಟವಾಗುತ್ತಿತ್ತು. ಮಾತನಾಡಬೇಕೆಂದು ಮೈಕ್ ಮುಂದೆ ನಿಂತ ನನ್ನ ಕಣ್ಣಲ್ಲಿ ಆ ಕಂದಮ್ಮನದೇ ಚಿತ್ರ … ಮಾತನಾಡಲು ಹೋದರೆ ಗಂಟಲು ಕಟ್ಟುತ್ತಿತ್ತು. ಅಲ್ಲಿದ್ದ ಯಾರ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿರಲಿಲ್ಲ, ಅಲ್ಲಿದ್ದವರೆಲ್ಲರನ್ನು ಸ್ಥೂಲವಾಗಿ ಎರಡು ರೀತಿ ವಿಭಾಗಿಸಬಹುದಿತ್ತು, ನೊಂದವರು ಮತ್ತು ಆ ನೋವಿಗೆ ಮಿಡಿದವರು.
ಹೌದು ಅವರೆಲ್ಲರೂ ಆ ನೋವಿಗೆ ಮಿಡಿದವರೇ. ನೋವಿನ ಮೂಟೆ ಹೊತ್ತವರನ್ನಷ್ಟೇ ಅಲ್ಲ, ಆ ನೋವಿನ ಧಗೆ ಅಲ್ಲಿದ್ದ ಎಲ್ಲರನ್ನೂ ಸುಡುತ್ತಿತ್ತು.
ಅವಧಿಗಾಗಿ ಮಹಿಳೆಯ ನೋವಿಗೊಂದು ದನಿ ಕೊಡುವ ಈ ಸಂಚಿಕೆಯನ್ನು ಸಂಯೋಜಿಸಲು ಕೂತಾಗ ನನಗೆ ರಾಚಿದಂತೆ ಕಂಡ ಒಂದು ಸತ್ಯ ಏನೆಂದರೆ. ತಮ್ಮ ಮೇಲೆ ದೌರ್ಜನ್ಯ ಆದಾಗ ಕೆಲವರು ತಮಗೆ ತೋಚಿದ ಹಾಗೆ, ತೋಚಿದ ರೀತಿ ಪ್ರತಿಭಟಿಸಿದ್ದರು, ಮತ್ತೆ ಕೆಲವರು ಮೌನವಾಗಿ ನೋವನ್ನು, ಅಸಹ್ಯವನ್ನು ನುಂಗಿಕೊಂಡು ನೊಂದಿದ್ದರು. ಅವರು ತೊಳಲಾಡುತ್ತಾ,
’ಬಸ್ಸು ನಿಂತಾಗ, ಭದ್ರವಾಗಿ ಅಪ್ಪನನ್ನೇ ಅನುಸರಿಸಿ
ಉಚ್ಚೆಯನ್ನೂ, ಭಯವನ್ನೂ ಏಕಕಾಲಕ್ಕೆ ವಿಸರ್ಜಿಸಿ
ಕೊಡಿಸಿದ ಇಡ್ಲಿ ಚಟ್ನಿಯಲ್ಲಿ ಹಸಿವು ನೀಗಿಸಿಕೊಂಡು
ನಿರಾಳವಾಗುತ್ತಿದ್ದೆವು’ – ಹೌದೆ, ನಿರಾಳಾವಾಗುತ್ತಿದ್ದೆವಾ? ಇಲ್ಲ ಮೈಮೇಲೆ ಜಿರಳೆ ಸರಿದಂತೆ, ಹಲ್ಲಿ ಹರಿದಂತೆ, ಭಯವನ್ನು, ಅಸಹ್ಯವನ್ನೂ ನುಂಗಿಕೊಳ್ಳುತ್ತಾ, ನಾಲಿಗೆಯಡಿಯ ಉಗುಳನ್ನು ಜೋರಾಗಿ ಉಗಿಯುತ್ತಾ, ಮನೆಗೆ ಬಂದು ತಿಕ್ಕಿ ತಿಕ್ಕಿ ಮೈ ತೊಳೆಯುತ್ತಿದ್ದೆವು. ಈ ಕವನ ಓದುವಾಗ ಕವಿತೆ ಬರೆದಾಕೆಯ ಹಿಡಿಯುತ್ತಿದ್ದ ಗಂಟಲೂ ಯಾಕೆ ನನ್ನದೇ ಕಥೆ ಹೇಳುತ್ತಿತ್ತು?
ಹಾಗೆ ಪ್ರತಿಭಟಿಸದೇ ಉಳಿದ ತಪ್ಪಿಗೆ, ಅವನ್ಯಾರೋ ಮಾಡಿದ ಅಪರಾಧದ ಅಪರಾಧಿ ಪ್ರಜ್ಞೆಯನ್ನು ಮೌನವಾಗಿದ್ದ ಒಂದೇ ಕಾರಣಕ್ಕೆ ಯಾಕೆ ನಾವು ಹೊರಬೇಕು? ಆಗ ಪ್ರತಿಭಟಿಸಿದವರ ದನಿಯಲ್ಲಿದ್ದ ಒಂದು ನಿರಾಳತೆ, ಪ್ರತಿಭಟಿಸದೆ ಉಳಿದವರ ದನಿಯಲ್ಲಿ ನೋವಾಗಿ ಬದಲಾಗಿದ್ದು ಕಂಡಾಗ ಅನ್ನಿಸಿತು, ’ಇಲ್ಲ ಮಾತಾಡಬೇಕು’. ನಮ್ಮ ಮೌನ ಆ ಕೈಗಳಿಗೆ ಒಪ್ಪಿಗೆಯಾಗಿಯೋ, ಹೇಡಿತನವಾಗಿಯೋ, ತನ್ನ ಹೇಸಿಗೆಯ ನಡವಳಿಕೆಗೆ ಪರವಾನಗಿಯಾಗಿಯೋ ಕಾಣದಂತಿರಬೇಕಾದರೆ ಮಾತನಾಡಬೇಕು. ’ಹೇಳತೇವ ಕೇಳ’, ಮಾತಾಡಿ ಹಗುರಾದವರ ಕಥೆಯಲ್ಲ, ಮಾತಾಡಿ ಗಟ್ಟಿಯಾದವರ ಕಥೆ, ಮತ್ತು ಹಾಗೆ ಗಟ್ಟಿಯಾಗಲು ಪ್ರೇರೇಪಿಸಿದವರ ಕಥೆ.

ಅತ್ಯಾಚಾರದ ಬಗ್ಗೆ ಮನಶ್ಯಾಸ್ತ್ರಜ್ಞರು ಏನು ಹೇಳುತ್ತಾರೆ ಅಂತ ಹುಡುಕಿಕೊಂಡು ಹೋದೆ. ಇಲ್ಲ ’ಭಾರತ’ದ ಮಹಾಮೇಧಾವಿಗಳು ಹೇಳುವಂತೆ ಅತ್ಯಾಚಾರವನ್ನು ಪ್ರೇರೇಪಿಸುವುದು ಹೆಣ್ಣು ಧರಿಸುವ ಬಟ್ಟೆಗಳಲ್ಲ, ಅತ್ಯಾಚಾರಿ ಹುಡುಕುವುದು ಒಂದು ’ವಿಕ್ಟಿಂ’ ಅನ್ನು. ಅಂದರೆ ತನ್ನ ಪ್ರಯತ್ನವನ್ನು ಪ್ರತಿಭಟಿಸದ, ಅಥವಾ ಪ್ರತಿಭಟಿಸಿದರೂ ತಾನು ಆ ಪ್ರತಿಭಟನೆಯನ್ನು ಸುಲಭವಾಗಿ ಮಣಿಸಬಲ್ಲ ವ್ಯಕ್ತಿಯನ್ನು. ಮೊದಲನೆಯ ಬಗೆ ಅಂದರೆ ಪುಟ್ಟ ಮಕ್ಕಳು, ಮತ್ತು ಎರಡನೆಯದಾಗಿ ಅಸಹಾಯಕ ಸ್ಥಿತಿಯಲ್ಲಿನ ಹೆಣ್ಣುಮಕ್ಕಳು. ಯಾವ ಅತ್ಯಾಚಾರಿಯೇ ಆಗಿರಲಿ, ಎಷ್ಟೇ ಕುಡಿದಿರಲಿ ಯಾಕೆ ಜನಜಂಗುಳಿ ಇರುವ ಪ್ರದೇಶದಲ್ಲಿ ಯಾವುದೇ ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ಹೋಗುವುದಿಲ್ಲ?
ಯಾಕೋ ಓದುತ್ತಿದ್ದವಳನ್ನು ಯಾರೋ ಥಟ್ಟನೆ ಎಳೆದು ನಿಲ್ಲಿಸಿದಂತಾಯ್ತು, ಹೌದು, ಈ victim syndrome, ಅಂದರೆ ಈ ಬಲಿ ಪಶುವಿನ ಗುಣ ವಿಶೇಷಗಳು ಕೆಲವು ಹೆಣ್ಣುಗಳಲ್ಲಿ ಎದ್ದು ಕಾಣುತ್ತದಾ? ಯಾಕೆ ಕೆಲವರು ಪದೇ ಪದೆ ಮೋಸಕ್ಕೆ, ಶೋಷಣೆಗೆ ಒಳಗಾಗುತ್ತಿರುತ್ತಾರೆ? ಇಲ್ಲ ನಾನು ಇಲ್ಲಿ ದೈಹಿಕ ಅತ್ಯಾಚಾರದ ಬಗ್ಗೆ ಮಾತ್ರ ಮಾತಾಡ್ತಿಲ್ಲ, ಮಾನಸಿಕ ಅತ್ಯಾಚಾರ, ಆರ್ಥಿಕ ದೌರ್ಜನ್ಯ, ವಿವಾಹದ ಚೌಕಟ್ಟಿನ ಒಳಗಡೆಯೇ ನಡೆಯುವ ಸದ್ದಿಲ್ಲದ, ಸದ್ದೇ ಬಾರದ ಅತ್ಯಾಚಾರ. ಇಲ್ಲಿ ಸಮಾಜದ ಅನುಕಂಪ ಸಹ ಸಿಗುವುದಿಲ್ಲ. ಮತ್ತು ಹಾಗೆ ಬಲಿಪಶು ಆಗುತ್ತಲೇ ಹೋಗುತ್ತಾರಲ್ಲ ಕೆಲವು ಹೆಣ್ಣುಗಳು, ಅವರಲ್ಲೂ ಈ ಬಲಿಪಶುವಿನ ಗುಣ ಎದ್ದುಕಾಣುತ್ತದಾ? ಯಾಕೋ ಯೋಚಿಸುತ್ತಾ ಹೋದಂತೆ ಹೆದರಿಕೆ ಆಯಿತು..
ಈ ಪುಸ್ತಕ ರೂಪಿಸುವಾಗ ’ಮತ್ತೆಂದೂ ಈ ಪುಸ್ತಕ ರೂಪಿಸುವ ಸಂದರ್ಭ ಬರದಿರಲಿ’ ಎನ್ನುವುದು ನಮ್ಮ ಆಸೆ, ಆಶಯ, ಹಾರೈಕೆ, ಬೇಡಿಕೆ ಎಲ್ಲಾ ಆಗಿತ್ತು. ಆದರೆ …
ಮೊನ್ನೆ ಕಾರ್ಯಕ್ರಮ ಪ್ರಾರಂಭವಾದಾಗ ಶುರುವಾದ ಹಿಂದಿನ ಸಾಲಿನಲ್ಲಿಯ ಆ ಬಿಕ್ಕಳಿಕೆ, ಕಣ್ಣಿನ ಹನಿ, ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಎಲ್ಲ ಅಡೆತಡೆಗಳನ್ನೂ ಮೀರಿ ಬಿಕ್ಕಿ ಬಿಕ್ಕಿ ಅಳುವ ಅಳುವಾಯಿತಲ್ಲಾ … ಎಲ್ಲರ ಮುಖದ ಮೇಲೂ ಆ ನೋವಿನ ಚಡಪಡಿಕೆ, ಎಲ್ಲರ ಗಂಟಲಲ್ಲೂ ಆ ತಡೆಹಿಡಿದ ಬಿಕ್ಕು, ಎಲ್ಲರ ಕಣ್ಣಲ್ಲೂ ಒಂದು ಕಣ್ಣೀರು … ಆ ಎಲ್ಲಾ ಕಥೆಗಳನ್ನೂ ಪುಸ್ತಕವಾಗಿಸಿಕೊಟ್ಟ ಅಭಿನವದ ಪಿ ಚಂದ್ರಿಕಾ ಕಾರ್ಯಕ್ರಮ ಮುಗಿದ ಮೇಲೆ, ಕೈಯನ್ನು ಗಟ್ಟಿಯಾಗಿ ಹಿಡಿದು, ’ಕಾರ್ಯಕ್ರಮ ಚೆನ್ನಾಗಾಯಿತು ಅಂತ ಹೇಗೆ ಹೇಳಲಿ ’ ಅಂದಾಗ ಅವರ ಕಣ್ಣಲ್ಲಿದ್ದದ್ದೂ ಅದೇ ಹನಿ…
ಕಾರ್ಯಕ್ರಮದ ಫೋಟೋ ತೆಗೆದ ಮುರಳಿ ಮೋಹನ್ ಕಾಟಿ,
ಈ ಕಾರ್ಯಕ್ರಮದ ಪೋಟೋ ತೆಗೆಯುತ್ತಿದ್ದಾಗ ನನ್ನ ಕಾಲುಗಳು ಅಕ್ಷ:ರಶ: ನಡುಗಿದವು. ಇಂಥ ಸಂದರ್ಭ ಮತ್ತೆ ಬರದಿರಲಿ.
ಆ ಪುಸ್ತಕದಲ್ಲಿ ಬರೆದವರಿಗೆ ಈ ಪದ್ಯದ ಸಲಾಮು.
ನಾನು ಅಕ್ಕನಾಗುತ್ತೇನೆ
ಬೆತ್ತಲಾಗುತ್ತೇನೆ
ಚೌಕಟ್ಟುಗಳಾಚೆ ಮೈ ಚಾಚಿ
ಅಪ್ಪುತ್ತೇನೆ
ಬಯಲ ಭಾವಗಳೆಡೆಗೆ
ಪ್ರವಹಿಸುತ್ತೇನೆ
ಪ್ರಸವಿಸುತ್ತೇನೆ ನನ್ನ ಭಿತ್ತಿಯನು
ನಿಮ್ಮ ಕೂದಲಿನ ಬಾರಕ್ಕೆ
ಕುಗ್ಗದೆ ಬಗ್ಗದೆ ಬೆತ್ತಲಾಗುತ್ತೇನೆ.
ಈ ಸಾಲುಗಳನ್ನು ಬರೆದಾಗ ಮತ್ತೆ ಮತ್ತೆ ಎದೆಯಲ್ಲಿ ಅದೇ ಹಾಡು,
’ಮುಗಿದಾವ ನಿಮ ಜೋಳ
ಉಳಿದಾವ ನಮ ಹಾಡ
ಇನ್ನೂ ಮುಗಿದಿಲ್ಲ ನಮ್ಮೆದೆಯ
’ಹೇಳತೇವ ಕೇಳ…’
ಇಂದು ದನಿಯಾದ ಈ ಮಾತುಗಳು ನಿಲ್ಲದಿರಲಿ, ನಮ್ಮ ಮಟ್ಟಿಗಾದರೂ ನಾವು ನಮ್ಮ ಸುತ್ತ ಮುತ್ತಲು ಇಂತಹ ಘಟನೆಗಳು ನಡೆದಾಗ ಪ್ರತಿಭಟಿಸೋಣ, ಪ್ರತಿಭಟಿಸುವವರಿಗೆ ಒತ್ತಾಸೆಯಾಗಿ ನಿಲ್ಲೋಣ, ಎಲ್ಲ ಬದಲಾವಣೆ ಪ್ರಾರಂಭವಾಗುವುದೂ ಒಂದು ನಿರಾಕರಣೆಯ ದನಿಯಿಂದಲೇ ಅಲ್ಲವೇ?
 

‍ಲೇಖಕರು avadhi

May 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. chalam

    ಅಗುಳಿ ಹಾಕಿರಲೇಬೇಕು
    ಬದುಕಿರುವ ನೋವಿನ ಮನೆಯಲ್ಲಿ
    ಭಯದ ಅನ್ನವನು ಹಿಡಿಯಿಡಿಯಾಗಿ
    ತಿನ್ನುತ್ತಾ ಮತ್ತೆಂದೋ ಅಥವಾ
    ಈಗಲೇ ನಡೆಯಲಿರುವ
    ಭಯಾನಕ ಘಟನಾವಳಿಗೆ
    ಸಾಕ್ಷಿಯೇನು..ನಾನೇ ಒಳಗಾಗಬೇಕು.
    ಇಲ್ಲಿ ನ್ಯಾಯದ,ಸಮಾನತೆಯ
    ಭದ್ರತೆಯ…ಮಿಗಿಲಾಗಿ
    ದೇವತೆಗಳ ಬಗ್ಗೆ ಮಾತನಾಡುತ್ತಾರೆ
    ಕೇಳಿಸಿಕೊಂಡು ಹೊರಗೆ
    ಬರುತ್ತೇನೆ….
    ದೇವತೆಗಳ ಮೇಲೆ
    ಅತ್ಯಾಚಾರವಾಗುತ್ತಿದೆ.
    ನಮ್ಮ ನೋವುಗಳನ್ನು
    ಹೇಳಲೇಬೇಕು…
    ಇಂದಲ್ಲ ನಾಳೆ ಕೇಳುವವರು
    ಇದ್ದೇ ಇರುತ್ತಾರೆ ಎಂಬ
    ನಂಬಿಕೆಯೊಂದಿಗೆ.
    ತುಂಬಾ ನೋವಿನಿಂದ
    ಒಂದು ಹೊತ್ತಿಗೆಯನ್ನು
    ಕೊಡುತ್ತಿದ್ದೇನೆ..
    ಕೆಂಡದಂತ ಸಾಲುಗಳಿಂದ
    ಹೇಳುತೇವೆ ಕೇಳ..
    ನೇರವಾಗಿ ಕೆಂಡವನ್ನು
    ನಿಮ್ಮೆದೆಗೆ ಸುರಿಯುತ್ತೇನೆ…
    ಸುಡದಿದ್ದರೂ ಮಸಿಯಾದ
    ಇದ್ದಲಿನಿಂದ ನೀವೇ ಬರೆದುಬಿಡಿ
    ಕರಾಳ ಮುಖವನ್ನ..

    ಪ್ರತಿಕ್ರಿಯೆ
  2. Jayalaxmi Patil

    ’ದೈಹಿಕ ಅತ್ಯಾಚಾರಕ್ಕೆ ಹೆಣ್ಣು ತೊಡುವ ಬಟ್ಟೆಯಾದರೆ, ಮಾನಸಿಕ ಅತ್ಯಾಚಾರಕ್ಕೆ ಆಕೆ ತೆಪ್ಪಗಿರುವುದು ಬಿಟ್ಟು ಜೀವಿಸಬಯಸುತ್ತಾಳೆ ಅನ್ನುವುದು’ ಎಂದು ಯಾರಾದರೂ ಮಹಾತ್ಮರು, ಪುಣ್ಯಾತ್ಮರು ಹೇಳಬಹುದು ನಿಮ್ಮ ಈ ಲೇಖನ ಓದಿ….

    ಪ್ರತಿಕ್ರಿಯೆ
  3. ರೂಪ ಹಾಸನ

    ಸಂಧ್ಯಾ, ಒಡಲ ಸಂಕಟಗಳು ಈಗಿನ್ನೂ ಅಕ್ಷರವಾಗಲು ಪ್ರಾರಂಭವಾಗಿವೆ…. ಇಷ್ಟು ಬೇಗ ಮುಗಿದೀತಾ? ಒಂದು ನಿರಾಕರಣೆಯ ದನಿ ಏನೆಲ್ಲ ಮಾಡಬಹುದು…..!

    ಪ್ರತಿಕ್ರಿಯೆ
  4. Geetha b u

    Ee Bali pashu syndrome bagge mathashtu yochisabeku, bareyabeku, adhannu molakeyalle chivutalu sidharaagabeku. Protest maadi yedhu nilalu helikodabeku. It starts from the house, from the mother. putting down a daughter in preference to son by asking her to adjust and bear, the mother perpetuates inequality in many households.. She is taught to give up an adjust.. She is made to understand that giving up(thyaaga) is a big virtue. I have seen many women happily recounting their tales of sacrifice when they could have protested. I hve read many articles where children are all in praise of their mothers who sacrificed so much instead of protesting , of wives who have stood by selfish husbands and are thyaagamayis!!. They are made to feel proud about it. Women who protest and demand for what is rightfully theirs or mothers and wives who persued their interests too are branded selfish by even women…

    ಪ್ರತಿಕ್ರಿಯೆ
  5. Tejaswini Hegde

    ಸಂಧ್ಯಾ,
    ಅಂದು ಚುಮು ಚುಮು ಬೆಳಕಿನಲ್ಲಿ ತಂಪು ಹವೆಯ ತಿನ್ನುತ್ತಾ ನನ್ನೂರಿಗೆ ಹೊರಟಿದ್ದೆ… ಮಧ್ಯ ತುಮಕೂರಿನಲ್ಲಿ ಪೇಪರ್ ಕೊಂಡು ಓದುವಾಗಲೇ ಕಣ್ಣಿಗೆ ಬಿದ್ದಿದ್ದು ನೀವು ಹೇಳಿದ ಮೇಲಿನ ಪುಟ್ಟ ಹುಡುಗಿಅ ಆಘಾತಕಾರ, ಕರುಣಾಜನಕ, ಹೃದಯವಿದ್ರಾವಕ ಘಟನೆಯ ವರದಿ. ಓದಿದ ತಕ್ಷಣ ಅದೆಷ್ಟು ಹಿಂಸೆಯಾಯಿತೆಂದರೆ ಅಕ್ಷರಶಃ ಪೇಪರ್ ಮೇಲೆ ಎಲ್ಲಾ ಆಕ್ರೋಶ ತೀರಿಸಿಕೊಂಡಿದ್ದೆ. ಸ್ವಾತಂತ್ರ್ಯಕ್ಕಾಗಿ ಎಂತಹ ತ್ಯಾಗಕ್ಕಾದರೂ ಸಿದ್ಧವಿದ್ದು ಬ್ರಿಟೀಷರೊಂದಿದೆ ಕಾದಾಡೀ ಜೈಲು, ಗಲ್ಲು ಸೇರಿ ಹುತಾತ್ಮರಾದವರಂತೇ ಈ ರಾಕ್ಷಸರ ವಿರುದ್ಧ ಹೋರಾಡಿ, ಕೊಂದು ಮಡಿದರಷ್ಟೇ ಸಾರ್ಥಕವೇನೋ ಎಂದೆನಿಸುತ್ತಿದೆ.! :(:(

    ಪ್ರತಿಕ್ರಿಯೆ
  6. umasekhar

    enu barili sandhya . vodutha hodanthe manassu voddeyadadde gottu. Nondavarige nanna kanneraste.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: