ಸಂಪು ಕಾಲಂ : ಆ ಮೂರನೇ ಜಗತ್ತು!

ಸುಮಾರು ವರ್ಷಗಳ ಹಿಂದಿನ ಮಾತು. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಾಗ ಬಸ್ಸಿನಲ್ಲಿ ಗಡುಸಾದ ದೇಹವೊಂದು ಚಿಣಿ ಮಿಣಿ ಸೀರೆಯೊಳಗೆ ಅವಿತುಕೊಂಡು, ಮುಖಕ್ಕೆ ಸಾಧ್ಯವಾದ/ಆಗದ ಎಲ್ಲ ಲೇಪನಗಳನ್ನೂ ಬಳೆದುಕೊಂಡು ಒಂದು ಕೃತಕ ನಗೆ ಬೀರಿದ ‘ಆಂಟಿ’ಯೊಬ್ಬರು ನನ್ನ ಪಕ್ಕ ಕೂತಿದ್ದರು. ಬಸ್ಸಿನ ಎಲ್ಲರ ದೃಷ್ಟಿ ಆಕೆಯ ಮೇಲೆ. ಅದಕ್ಕಿಂತಲೂ ಹೆಚ್ಚಾದ “ಆಕೆಯ ಪಕ್ಕದಲ್ಲಿ ಕೂತುಬಿಟ್ಟಿದ್ದಾಳಲ್ಲಾ” ಅನ್ನೋ ಪರಿಹಾಸ್ಯದ, ಕಾರುಣ್ಯದ ದೃಷ್ಟಿ ನನ್ನ ಮೇಲೆ ಬಿದ್ದದ್ದು ನನಗೆ ಮತ್ತಷ್ಟು ಆಶ್ಚರ್ಯವಾಯಿತು. ತನ್ನ ಸ್ಟಾಪ್ ಬಂದು ಹೊರಡುವಾಗ ನನ್ನ ಕೆನ್ನೆ ಒಮ್ಮೆ ಜಿಗುಟಿ, ಕಂಡಕ್ಟರ್ ನ ಎದೆ ಸವರಿ ಬಸ್ ಇಳಿದಿದ್ದಳು. ನಂತರ ನನ್ನ ಸ್ಟಾಪ್ ಬರುವವರೆಗೆ ನನಗೆ ಕೇಳ ಸಿಕ್ಕಿದ್ದು ಬರೀ ಆಕೆಯ ಮೇಲಿನ ಚೀಮಾರಿಗಳು, ಅನುಕಂಪಗಳು ಅಷ್ಟೇ! ಆಕೆ ಯಾಕೆ ಅಷ್ಟು ‘ವಿಲಕ್ಷಣ’ವಾಗಿ ತಯಾರಾಗಿದ್ದಳೋ, ಎಲ್ಲರೂ ಯಾಕೆ ಅವಳನ್ನು ಕ್ಷುಲ್ಲಕ ನೋಟದಿಂದ ನೋಡುತ್ತಿದ್ದರೋ, ನನಗೆ ಆಗ ಎಲ್ಲವೂ ವಿಚಿತ್ರವಾಗಿ ಕಂಡಿತ್ತು. ಆ ಮೂರನೆಯ ಜಗತ್ತಿನ ಪರಿಚಯ ನನಗಾಗ ಮೊದಲ ಬಾರಿ ಆಗಿತ್ತು!
ಆಕೆಯ ಬಗೆಗಿನ ನನ್ನ ಕುತೂಹಲ ಆರಿರಲಿಲ್ಲ. ಆಗಲೇ ಆದದ್ದು ನನ್ನ ಎರಡನೇ ‘ಎನ್ಕೌಂಟರ್’! ಅಂಗಡಿಯಲ್ಲಿ ಬಿಸ್ಕತ್ತು ಕೊಳ್ಳುತ್ತಿದ್ದಾಗ ಇದ್ದಕ್ಕಿದ್ದಂತೆ, ಅದೇ ಆ ಬಸ್ ನಲ್ಲಿ ಕಂಡ ವ್ಯಕ್ತಿಯಂತೆಯೇ ವೇಷಭೂಷಣ ಧರಿಸಿದ ಮೂರು ನಾಲ್ಕು ಮಂದಿ ಚಪ್ಪಾಳೆ ತಟ್ಟುತ್ತಾ ಅಂಗಡಿಯವನ ಜೇಬಿಗೆ ವೈಯ್ಯಾರವಾಗಿ ಕೈ ಹಾಕ ಹೊರಟಿದ್ದರು. ನನಗೆ ತುಂಬಾ ಭಯವಾಗಿ ಅಲ್ಲಿಂದ ಓಟ ಕಿತ್ತಿದ್ದೆ! ಇದಾದ ನಂತರ ಅವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಪಟ್ಟೆ. ಆಗಲೇ ತಿಳಿದು ಬಂದದ್ದು ಅವರು ಗಂಡು, ಹೆಣ್ಣು ಇವರಂತೆ ಅತೀ ಸಹಜವಾದ ಪ್ರಕೃತಿಯ ಮತ್ತೊಂದು ಸೃಷ್ಟಿ ಎಂದು. ವೈಜ್ಞಾನಿಕವಾಗಿ ಒಂದು ಹೆಣ್ಣಿನ ದೇಹದಲ್ಲಿ ಗಂಡು ಶಿಶುವಿನ ಗರ್ಭಾಂಕುರವಾದಾಗ ಹೆಣ್ಣು ಜೀವಾಂಶವಾದ x ಕ್ರೋಮೋಸೋಮ್ ಅಗತ್ಯಕ್ಕಿಂತಲೂ ಹೆಚ್ಚಾಗಿದ್ದರೆ ಆಗ ಗಂಡು-ಹೆಣ್ಣುಗಳ ಸಮ್ಮಿಶ್ರ ಭ್ರೂಣ ರೂಪಿತವಾಗುತ್ತದೆ. ದೈಹಿಕವಾಗಿ ಗಂಡಿನಂತೆ ಕಂಡರೂ ಹೆಣ್ಣಿನ ಹಾವ ಭಾವ ಹೆಚ್ಚಾಗಿ ಕಾಣುವ ಇವರಲ್ಲಿ, ತಾವು ಹೆಣ್ಣಾಗಿಯೇ ಇರಬೇಕೆಂಬ ಅತೀವ ಹಂಬಲ ಕಾಡುತ್ತದೆ. ಹೀಗಾಗಿ ಅವರು ಗಂಡಾಗಿದ್ದರೂ, ತಮ್ಮನ್ನು ಹೆಣ್ಣಾಗಿಯೇ ಸಮಾಜ ಸ್ವೀಕರಿಸಬೇಕು ಎಂದು ಬಯಸುತ್ತಾರೆ.
ಇವರ ಬಗ್ಗೆ ತಿಳಿದು ಬಂದ ನನಗೆ ಮೊದಲಿಗೆ ಇವರ ಬಗ್ಗೆ ಮರುಕವುಂಟಾಯಿತು. ಆದರೆ, ಮರುಕ ಪಡಲು ಇವರಿಗೇನೂ ನ್ಯೂನತೆಯಾಗಿಲ್ಲ. ಇವರಿರುವುದೇ ಹೀಗೆ. ಅದನ್ನು ನಾವು ಸಾಮಾಜಿಕವಾಗಿ, ಮುಕ್ತವಾಗಿ ಸ್ವೀಕರಿಸುವುದು ಅಗತ್ಯ ಎಂಬ ಸತ್ಯದ ಅರಿವಾಯಿತು. ಅಂದಿನಿಂದ ನನ್ನ ಕೆಲವು ವಿಶೇಷ ಗಮನಗಳು ಈ ಇಂತಹ ವ್ಯಕ್ತಿಗಳನ್ನು ಸೆಳೆದವು. ಅವರ ಬದುಕು, ಜೀವನ ಶೈಲಿ, ಸಮಾಜ ಅವರನ್ನು ಗುರ್ತಿಸುವ ನಡತೆ, ಇವುಗಳನ್ನು ಗಮನಿಸುತ್ತಾ ಬಂದ ನನಗೆ, ಇವರಲ್ಲಿ ಒಬ್ಬರಾದ ‘ಚಾಂದನಿ’ಯನ್ನು ಭೇಟಿಯಾಗುವವರೆಗೂ ಇವರ್ಯಾಕೆ ಹೀಗೆ ‘ವಿಚಿತ್ರ’ ಎನಿಸುವಂತೆ ವರ್ತಿಸುತ್ತಾರೆ ಎಂಬುದು ಬಗೆಹರಿಯದ ಗುಟ್ಟಾಗಿತ್ತು.
ಪ್ರತಿದಿನ ಆಫೀಸಿಗೆ ಹೋಗುವ ದಾರಿಯ ದೊಡ್ಡ ದೊಡ್ಡ ಸಿಗ್ನಲ್ ಎಲ್ಲದರಲ್ಲೂ ಈ ಜನರು ಇದ್ದೆ ಇರುತ್ತಾರೆ. ಕೆಲವರು ಗಾಡಿಗಳಿಂದ ರಸ್ತೆ ಭರ್ತಿಯಾಗಿದ್ದರೂ ಇರುವ ಸಣ್ಣ ಜಾಗದಲ್ಲೇ, ಕೈ ಮೈ ಸವರುತ್ತಾ ಭಿಕ್ಷೆ (ಅವರ ಭಾಷೆಯಲ್ಲಿ ಆಶೀರ್ವಾದ) ಬೇಡುತ್ತಿರುತ್ತಾರೆ, ಇನ್ನು ಕೆಲವರು ತೀರ ಅಸಹ್ಯ ಎನಿಸುವಂತೆ ಬಟ್ಟೆ ತೊಟ್ಟು ಎಲ್ಲರ ಮಧ್ಯೆ ನುಸುಳುತ್ತಿರುತ್ತಾರೆ. ಮತ್ತಷ್ಟು ಜನ ಚಪ್ಪಾಳೆ ತಟ್ಟುತ್ತಾ ಎಲ್ಲರ ಮುಂದೂ ಕೈ ಚಾಚುತ್ತಿರುತ್ತಾರೆ. ಆ ಸಿಗ್ನಲ್ ಕಳೆಯುವ ಎರಡು ಮೂರು ನಿಮಿಷಗಳ ಹೊತ್ತು ನನ್ನ ಮತ್ತು ಅವರ ಮುಲಾಕಾತ್ ಪ್ರತಿನಿತ್ಯ. ಸುಮ್ಮನೆ ಗಮನಿಸುತ್ತಾ ಇರುವಂತೆ ಒಂದು ದಿನ ಇವರಲ್ಲಿ ಒಬ್ಬ ವ್ಯಕ್ತಿಯನ್ನು ಕರೆದು ನಿಮ್ಮನ್ನು ಮಾತಾಡಬೇಕು ಎಂದೆ. ಅಷ್ಟು ಜನ ಇದ್ದರೂ ಸ್ವಲ್ಪ ಸೌಮ್ಯವಾಗಿ, ನಾಜೂಕಾಗಿ ಕಂಡ ಈಕೆಯನ್ನೇ ಏಕೆ ಕರೆದೆ ಎಂಬುದು, ನಮ್ಮ ಸಮಾಜದಲ್ಲಿ ಅವರ ಬಗೆಗಿನ ಒಂದು ಭಯಸ್ಮಿತ ಛಾಯೆಯೇ ಕಾರಣ ಎಂಬುದರ ನಿದರ್ಶನ! ಇರಲಿ, ಅವಳು ತಕ್ಷಣ ಒಪ್ಪಿದಳು. ನನ್ನ ದ್ವಿಚಕ್ರ ದೇವತೆಯನ್ನು ಪಕ್ಕಕ್ಕೆ ಪಾರ್ಕ್ ಮಾಡಿ, ಅವಳೊಂದಿಗೆ ಕೂತೆ. ಆಕೆ ಮಾತು ಮುಗಿಸಿ ಹೊರಟ ಮೇಲೂ ಕೂತಲ್ಲೇ ಹಾಗೇ ಕೂತುಬಿಟ್ಟೆ!
ಆ ವ್ಯಕ್ತಿ ಬಂದಿರುವುದು ತಮಿಳುನಾಡಿನಿಂದ. ಆಕೆಯ ಹರಕು ಮುರುಕು ಕನ್ನಡ ಮತ್ತು ನನ್ನ ಅಷ್ಟೇ ವಕ್ರ ತಮಿಳಿನಲ್ಲಿ ನಮ್ಮ ಮಾತು ಸಾಗಿತ್ತು. ಸಾಗರ್ ಆಗಿ ಜನಿಸಿದ ಈ ವ್ಯಕ್ತಿ ಬೆಳೆಯುತ್ತಾ ಬೆಳೆಯುತ್ತಾ ತಾನು ಗಂಡಲ್ಲ ಎಂಬ ಭಾವನೆ ಮೂಡಿಬಂತು. ಹೆಣ್ಣಿನ ರೀತಿ ಬಟ್ಟೆ ತೊಡಬೇಕು ಎಂಬುದು ಆ ಮಗುವಿನ ಮೊದಲ ಇಚ್ಛೆಯಾಗಿತ್ತು. ತಾನು ಏಳನೇ ತರಗತಿಯಲ್ಲಿರುವಾಗ ತನ್ನ ಜನ್ಮ ರಹಸ್ಯದ ಅರಿವಾಯಿತು. ಆಗ ತನ್ನ ಪರಿಸ್ಥಿತಿಯನ್ನು ಕುಟುಂಬದೊಂದಿಗೆ ಕಷ್ಟ ಪಟ್ಟೆ ಹಂಚಿಕೊಂಡರೆ, ಅವರ ಕಡೆಯಿಂದ ಸಿಗುವುದು ಬರೀ ತಿರಸ್ಕಾರ, ಬೈಗುಳ ಮತ್ತು ಹೊಡೆತ! ರಾತ್ರೋ ರಾತ್ರಿ ಯಾವುದೋ ಬಸ್ ಹತ್ತಿ ಬೆಂಗಳೂರಿಗೆ ಬಂದ ಸಾಗರ್ ಗೆ ಮೊದಲ ದಿನವೇ ಮೆಜಸ್ಟಿಕ್ ನಲ್ಲಿ ತನ್ನಂತ ವ್ಯಕ್ತಿಯ ಪರಿಚಯವಾಯಿತು. ಆ ವ್ಯಕ್ತಿಯ ಜೊತೆ ‘ಕಣ್ಣು ಮುಚ್ಚಿ’ ಹೊರಟು ಬಂದಾಗ ಮೊದಲ ಬಾರಿಗೆ ಸಾಗರ್ ನೆಮ್ಮದಿಯ ಉಸಿರಾಟವನ್ನು ಕಂಡಿರುತ್ತಾನೆ. ಅಲ್ಲಿ ಕಂಡ ಎಲ್ಲರೂ ತನ್ನಂತೆ, ತನ್ನಂತೆಯೇ ಎಲ್ಲರಿಗೂ ನೋವು, ಮುಜುಗರ, ಭಯ ಮತ್ತು ತಿರಸ್ಕೃತ ಭಾವ! ಅವರೆಲ್ಲರ ಪ್ರೀತಿಯ ನಡುವೆ ಸಾಗರ್ ಚಾಂದನಿ ಆಗಿ ಮಾರ್ಪಟ್ಟಿರುತ್ತಾಳೆ. ತನ್ನ ‘ಹೆಣ್ತನ’ ಪೂರ್ತಿಯಾಗಲು ಲಿಂಗ ಬದಲಾವಣೆ (ಕ್ಯಾಸ್ಟ್ರೆಶನ್) ಶಸ್ತ್ರ ಚಿಕಿತ್ಸೆಯ ಹಣಕ್ಕಾಗಿ ಈಗ ಈ ರೀತಿ ಅಂಗಡಿ, ಸಿಗ್ನಲ್ ಗಳಲ್ಲಿ ಎಲ್ಲರಲ್ಲಿಯೂ ಬೇಡುತ್ತಿದ್ದಾಳೆ.

ತಾವು ಯಾಕೆ ಏನಾದರೂ ಒಳ್ಳೆಯ ಕೆಲಸ ಮಾಡಬಾರದು ಎಂದು ಕೇಳಿದಾಗ, ಆಕೆಯಿಂದ ಬಂದ ಉತ್ತರ ಹೀಗಿತ್ತು. “ಯಾರೂ ಕೆಲಸ ಕೊಡುವುದಿಲ್ಲ ಅಕ್ಕ, ನಮ್ಮನ್ನು ಕಂಡರೆ ಜನಕ್ಕೆ ಭಯ, ಅವಮಾನ. ಅಸಯ್ಯ ಪಟ್ಕೊತಾರೆ ನಮ್ಮನ್ನ ನೋಡಕ್ಕೂ. ನಮ್ಮ ಮನೆಯವರೇ ನಮ್ಮನ್ನ ಆಚೆ ಕಳಿಸಿ ಬಿಟ್ಟರು. ಇನ್ನು ಬೇರೆಯವರಿಂದ ನಾವೇನು ಕೇಳೋದು. ನಾವು ಹೀಗೆ ವೋವೆರ್ ಆಗಿ ಡ್ರೆಸ್ ಮಾಡಿಕೊಳ್ಳೋದು ಕೂಡ ಅದಕ್ಕೆ. ನಾವು ಹಿಂಗಿದ್ರೇನೆ ಜನ ನಮಗೆ ಒಂದು ಕಾಸಾದರೂ ಕೊಡ್ತಾರೆ. ನಾವು ಎಲ್ಲರ ತರ ಮಾಮೂಲಾಗಿ ಡ್ರೆಸ್ ಮಾಡ್ಕೊಂಡ್ರೆ ನಮ್ಮನ್ನ ಯಾರೂ ನಂಬಲ್ಲ. ಕೆಲ್ಸಾನೂ ಇಲ್ಲ ದುಡ್ಡೂ ಇಲ್ಲ ಹಾಗಾಗಿ ಬಿಡತ್ತೆ. ನಾವು ಹೀಗೆ ತುಂಬಾ ಮೇಕ್ ಅಪ್ ಮಾಡಿಕೊಂಡು ಇದ್ದರೆ. ಜನ ದುಡ್ಡು ಕೊಡ್ತಾರೆ”! ಹೀಗೆ ಸಾಗಿತ್ತು ಅವಳ ಮಾತುಕತೆ.
ತಮಗಾಗುವ ಲೈಂಗಿಕ ಶೋಷಣೆಯ ಬಗ್ಗೆ ಸೂಕ್ಷ್ಮವಾಗಿ ಕೇಳಲು ಪ್ರಯತ್ನಿಸಿದೆ. ಆಗ ಆಕೆ, “ನಾವು ಸೆಕ್ಸ್ ವರ್ಕ್ ಕೂಡ ಮಾಡ್ತೀವಿ. ಕೆಲವರು ನಮ್ಮನ್ನು ಉಪಯೋಗಿಸಿಕೊಳ್ಳೋಕೆ ಇಷ್ಟ ಪಡ್ತಾರೆ. ಆದ್ರೆ ಕೆಲವರು ನಮಗೆ ತುಂಬಾ ಪ್ರಾಬ್ಲಮ್ ಮಾಡ್ತಾರೆ. ಆದ್ರೆ ಇದರ ಬಗ್ಗೆ ಯಾರಲ್ಲಿಯೂ ಮಾತನಾಡಬಾರದು ಎಂದು ನಮ್ಮ ‘ಮಮ್ಮಿ’ ಹೇಳಿದ್ದಾರೆ” ಎಂದು ಮುಗ್ಧ ಕಂಗಳನ್ನು ಮಿಟುಕಿಸಿದಾಗ, ನಾನು ಕಂಡ ಹಲವಾರು ಸಿನೆಮಾಗಳ ಚಿತ್ರಣ ಕಣ್ಣ ಮುಂದೆ ಬಂದವು. ಹೆಚ್ಚು ಮಾತನಾಡಲು ಗಂಟಲು ಬರಲಿಲ್ಲ!
ಸಮಾಜದಲ್ಲಿ ಜರುಗುವ ಎಲ್ಲ ಅವಮಾನಗಳನ್ನೂ ಸಹಿಸಿಕೊಂಡು ತಮ್ಮದೇ ತಪ್ಪು ಎನ್ನುವಂತೆ ಮೌನವಾಗಿ ಇರುವ ಇವರನ್ನು ಕಂಡರೆ ನಮಗೆ ಎಲ್ಲಿಲ್ಲದ ಮುಜುಗರ, ಅವಮಾನ! ಚಾಂದನಿ ಹೇಳುವ ಪ್ರಕಾರ, ಇವರು ತಮ್ಮ ಜಗತ್ತಿನಲ್ಲೇ ಒಂದು ಕೌಟುಂಬಿಕ ರಚನೆಯನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ. ತಮ್ಮಲ್ಲೇ ಒಂದು ಸಣ್ಣ ಸಮಾರಂಭ ಜರುಗಿಸಿ, “ಇನ್ನು ಮೇಲೆ ನಾವಿಬ್ಬರೂ ಗಂಡ ಹೆಂಡಿರು ಮತ್ತು ಇವರಿಬ್ಬರು ನಮ್ಮ ಮಕ್ಕಳು” ಎಂದು ಒಂದಷ್ಟು ಮಂದಿ ನಿರ್ಧರಿಸಿ ಸಿಹಿ ಹಂಚಿಕೊಂಡರೆ ಮುಗಿಯಿತು. ಅವರು ಆಜೀವ ತಮ್ಮ ಹೊಸ ನಂಟನ್ನು ಭದ್ರವಾಗಿ ಕಾಪಾಡಿಕೊಳ್ಳುತ್ತಾರೆ. ಇದು ಸಮಾಜದ, ಸಂಬಂಧಗಳ ಬೆಸುಗೆಯಿಂದ ಹೊರತಾದ ಇವರು ತಮ್ಮಷ್ಟಕ್ಕೆ ತಾವೇ ಕಂಡುಕೊಂಡ ಪ್ರೇಮ, ಸಾಂತ್ವನ!
ಒಂದು ದಿನದ ಮದುವೆ!
ಹಿಜ್ರಾಗಳೆಂದು ಕರೆಸಿಕೊಳ್ಳುವ ಈ ಜನರು, ತಮ್ಮ ಜೀವನದಲ್ಲಿ ಒಂದು ದಿನದ ಮಟ್ಟಿಗೆ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಈ ಮದುವೆ ಹಬ್ಬಕ್ಕೆ ಒಂದು ಸ್ವಾರಸ್ಯಕರವಾದ ಕಥೆ ಇದೆ. ಮಹಾಭಾರತದ ಅರ್ಜುನ ಮತ್ತು ಉಲೂಪಿಗೆ ಹುಟ್ಟಿದ ಮಗ ಐರಾವಣ. ಈತ ಹದಿನೆಂಟು ದಿನಗಳ ಮಹಾಯುದ್ಧದಲ್ಲಿ ಕೊನೆಯ ದಿನ ಪಾಂಡವರ ಜಯಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾನೆ. ಹೀಗೆ ಪಾಂಡವರು ಯುದ್ಧ ಗೆಲ್ಲಲು ಈತ ಮುಖ್ಯ ಕಾರಣಕಾರನಾಗಿ ನಿಲ್ಲುತ್ತಾನೆ. ಸ್ವಯಂ-ತ್ಯಾಗಕ್ಕೆ ಪ್ರತಿಯಾಗಿ ಕೃಷ್ಣ ಈತನಿಗೆ ಮೂರು ವರ ನೀಡುತ್ತಾನೆ. ಮೂರರಲ್ಲಿ ಒಂದು ತಾನು ಒಂದು ದಿನದ ಮಟ್ಟಿಗೆ ಮದುವೆಯಾಗಬೇಕು ಎಂಬ ಇಚ್ಛೆಯಾಗಿರುತ್ತದೆ. ಆದ್ದರಿಂದ ಕೃಷ್ಣನು ‘ಮೋಹಿನಿ’ಯಾಗಿ ಈತನನ್ನು ಮದುವೆಯಾಗುತ್ತಾನೆ. ಐರಾವಣ ಈ ಹಿಜ್ರಾಗಳ ದೇವರಾದ್ದರಿಂದ, ತಮಿಳುನಾಡಿನ ಕೂವಗಂ ಎಂಬ ಹಳ್ಳಿಯಲ್ಲಿರುವ ಐರಾವಣನ ದೇವಸ್ಥಾನದಲ್ಲಿ ಈ ಒಂದು ದಿನದ ಮದುವೆಯ ಹಬ್ಬ ಜರುಗುತ್ತದೆ. ಈ ಸಮಾರಂಭಕ್ಕೆ ದೇಶದಾದ್ಯಂತ ಇರುವ ಟ್ರಾನ್ಸ್ ಜೆಂಡರ್ ಜನರೆಲ್ಲರೂ ಹೋಗುತ್ತಾರೆ. ದೇವಸ್ಥಾನದ ಪೂಜಾರಿ ಇವರ ಕೊರಳಿಗೆ ತಾಳಿ ಕಟ್ಟುತ್ತಾನೆ. ಹಾಡು, ನರ್ತನ, ಸಂಭ್ರಮದಿಂದ ದಿನ ಕಳೆಯುತ್ತದೆ. ಆದರೆ ಮರುದಿನ ಇವರು ಪುರಾಣದ ಪ್ರಕಾರ (ಐರಾವಣನ ಸಾವಿನ ನಂತರ) ವಿಧವೆಯರಾಗಬೇಕು. ಆದ್ದರಿಂದ, ತಾಳಿ ತೆಗೆದು, ಬಳೆ ಒಡೆದು ಅಳುತ್ತಾ ವೈಧವ್ಯವನ್ನೂ ಆಚರಿಸುತ್ತಾರೆ!
ಇಲ್ಲಿ ನಡೆಯುವ ಮೌಢ್ಯದ ಪರಮಾವಧಿಯು ಲವಲೇಶವೂ ತಪ್ಪೆಂದು ಭಾವಿಸದೆ, ಬಹಳ ಭಕ್ತಿ ಗೌರವಗಳಿಂದ ಈ ಆಚರಣೆಯನ್ನು ಸಂಭ್ರಮಿಸುತ್ತಾರೆ ಈ ಹಿಜ್ರಾ ಜನರು. ಬಹುಶಃ ಇದನ್ನು ನಾವು ವೈಚಾರಿಕವಾಗಿ ನೋಡದೆ, ಮಾನವೀಯವಾಗಿ ಗಮನಿಸಿದರೆ ಕಾಣುವುದು ಈ ಜನರ ಪ್ರೀತಿ, ಪ್ರೇಮದ ಹಾತೊರೆಯುವಿಕೆ, ತಾವೂ ಸಮಾಜದಲ್ಲಿ ಒಂದು ಭಾಗ ಎಂದು ತೋರ್ಪಡಿಸಿಕೊಳ್ಳುವ ಒಂದು ತೀವ್ರ ಪ್ರಯತ್ನ ಮತ್ತು ತಮಗೂ ಕುಟುಂಬ, ಮನೆ, ಮದುವೆ ಇವುಗಳ ಕುರಿತು ಆಸೆ, ಹಂಬಲಗಳು ಇವೆ ಎಂದು ಸಮಾಜಕ್ಕೆ ಖಚಿತ ಪಡಿಸುವ ಒಂದು ಮೊಹರು!

‍ಲೇಖಕರು avadhi

May 24, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. Gopaal Wajapeyi

    ಸಂಯುಕ್ತಾ… ಇದು ನನ್ನ ಮನಸ್ಸು ತಟ್ಟಿದ ಬರಹ. ‘ಆ’ ತರಹದ ವ್ಯಕ್ತಿಗಳ ನೋವಿನ ಗಾಥೆಯನ್ನು ಸ್ವಲ್ಪದರಲ್ಲೇ ಬಿಡಿಸಿತ್ತು ಕಣ್ಣು ತೆರೆಸಿದ್ದೀರಿ.
    ಅಂದ ಹಾಗೆ ಅದು ‘ಐರಾವಣ’ನೋ? ‘ಅಹಿರಾವಣ’ನೋ?

    ಪ್ರತಿಕ್ರಿಯೆ
  2. sunil Rao

    ನನ್ನ ಕಾಲೇಜು ಮುಗಿಸಿ ರಾತ್ರಿ ಒ೦ಭತ್ತಕ್ಕೆ ನಾನು ಹೊರಟರೆ, ಈ ಥರದ ಜನ ಗು೦ಪಾಗಿ ನಿ೦ತಿರುತ್ತಾರೆ. they are shemales. ಯಾರೋ ಅಪರಿಚಿತರನ್ನು ಅರಸುತ್ತಾ, ಬ೦ದಷ್ಟು ದುಡ್ಡು ತಗೊ೦ಡು ಅವರಿಗೆ ಬೇಕಾದ್ದು ಕೊಟ್ಟು ಬಿಡೋಕೆ. ಅದರ ಹೊರತು ಬೇರೆ ವೃತ್ತಿ ಅವರಿಗೆ ಸಿಗದು ಪಾಪ. ಒಮ್ಮೆ ತಡ ರಾತ್ರಿಯಲ್ಲಿ, ಪೋಲಿಸರು ಇವರನ್ನು ಅಟ್ಟಿಸಿಕೊ೦ಡು ಬ೦ದು ಹೊಡೆಯುತ್ತಿದ್ದರು. ಆಗ ಸಿಕ್ಕ ಸಿಕ್ಕ ಆಟೋಗಳಲ್ಲಿ ಈ ಜನ ಪರಾರಿಯಾಗುತ್ತಿದ್ದದು ನೋಡಿ ಒಮ್ಮೆ ಕರುಳು ಚುರ್ ಎ೦ದಿತು.
    ಆದರೂ ಅದು ಸಮಾಜದ ಅಕ್ರಮ ಅಲ್ಲವೆ…

    ಪ್ರತಿಕ್ರಿಯೆ
  3. Mohan V Kollegal

    ತುಂಬಾ ಆಪ್ತ ಶೈಲಿಯ ಬರಹ. ಈ ಜನ’ರ ಲಿಂಗ ಯಾವುದಾದರೂ ಆಗಿರಲಿ, ಆದರೆ ಅವರೊಳಗೂ ಒಳ್ಳೆಯದು ಕೆಟ್ಟದ್ದನ್ನು ಯೋಚಿಸುವ, ಹಸಿವಿಗೆ ಅಳುವ, ಚಳಿಗೆ ನಡುಗುವ, ಬೆಂಕಿಗೆ ಬೆದರುವ, ಭಾವನೆಗೆ ಸ್ಪಂದಿಸುವ ಮನಸ್ಸಿದೆ. ಆ ಮನಸ್ಸಿನ ನಡೆಯಲ್ಲಿ ನಾವು ಅವರನ್ನು ಗೌರವಿಸಲೇ ಬೇಕು. ಯಾವುದೇ ಕೆಲಸ ದೊರೆಯದಿದ್ದಾಗ ಕೈ ಚಾಚುವುದೊಂದೇ ಅವರಲ್ಲುಳಿದಿರುವುದು. ಆದರೆ, ಒಮ್ಮೊಮ್ಮೆ ತೀರ ಹಿಂಸೆ ಕೊಡುವ ಪ್ರಸಂಗಗಳು ಸುಮಾರಿವೆ. ಒಂದು ದಿನದ ಮದುವೆಯ ಪ್ರಸಂಗದ ಬಗ್ಗೆ ಈ ಮೊದಲು ಓದಿದ್ದೆ. ಓದಿಸಿದ್ದಕ್ಕೆ ವಂದನೆಗಳು ಅಕ್ಕ… 🙂

    ಪ್ರತಿಕ್ರಿಯೆ
  4. ಪ್ರಮೋದ್

    ಐರಾವಣ ಬಗ್ಗೆ ದೊಡ್ಡ ಲೇಖನ ವಿಕಿಪೀಡಿಯದಲ್ಲಿದೆ!
    http://kn.wikipedia.org/wiki/%E0%B2%90%E0%B2%B0%E0%B2%BE%E0%B2%B5%E0%B2%A3
    ಮಹಾ ಭಾರತದಲ್ಲಿದ್ದ ಇ೦ತಹ ಕಥೆಯನ್ನು ಇವತ್ತೇ ಓದುತ್ತಿದ್ದೇನೆ. ಸಖೇದಾಶ್ಚರ್ಯ! ಅಷ್ಟು ಹಳೆಯದಾದ ಸ೦ಗತಿ ಇನ್ನೂ ಮುಖ್ಯವಾಹಿನಿಗೆ ಸೇರಿಸಲಾಗಿಲ್ಲ ಎ೦ದು.
    ಪೋಲಿಸರಿಗೂ ಮಾಮೂಲಿ ಸಲ್ಲಿಸಬೇಕಿವರು, ಅದಕ್ಕಾಗಿ ಸಿಗ್ನಲ್ ನಲ್ಲಿ ಹಣ ಕೀಳುತ್ತಾರೆ(!)
    ನನಗೊ೦ದು ಡೌಟು. ಹೆಚ್ಚಿನವರೆಲ್ಲರೂ ತಮಿಳು ನಾಡಿನಿ೦ದಲೇ ಯಾಕೆ?

    ಪ್ರತಿಕ್ರಿಯೆ
  5. Sandhya, Secunderabad

    Revathi avaru barediruva pustaka – ‘Baduku Bayalu’nalli avaru ee moorane jagattina bagge ellavannoo manabicchhi tilisiddare

    ಪ್ರತಿಕ್ರಿಯೆ
  6. vasanth

    Very good article. I had a friend called Radha.I happened to meet her in a bus while traveling. She spoke with me well and gave her phone number to contact. I had the opportunity to meet her second time an sat next me in a bus again, that day I had newspaper with me she took the newspaper and started to read it. She was curious about advertisement asked many questions. I answered some of them. She got alighted from the bus, but other passengers were started to stare at me in different way. I some still meet her while traveling she smiles at me and inquire about me well being. They are very good at the bottom of the heart. They don’t want to hurt others but we do opposite for them.

    ಪ್ರತಿಕ್ರಿಯೆ
  7. Ahalya Ballal

    ಬರಹ ಇಷ್ಟವಾಯ್ತು, ಸಂಯುಕ್ತಾ. ನಮ್ಮ ಸುತಮುತ್ತ ಇರುವವರ ಪಾಡೇನು ಅಂತ ನೋಡುವಷ್ಟೂ ವ್ಯವಧಾನ ಇಲ್ಲ ನಮಗೆ. ಅಂಥದ್ದರಲ್ಲಿ ಇಂತಹ ಕಣ್ಣು ತೆರೆಸುವ ಲೇಖನಗಳಿಗೆ ಸ್ವಾಗತ.
    ಉದರನಿಮಿತ್ತಂ ಬಹು ಕೃತ ವೇಷಂ. ಮುಂಬಯಿ ರೈಲುಗಳಲ್ಲಿ ಇಂತಹ ಮಂಗಳಮುಖಿಯರು ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರ್ತಾರೆ. ಇವರ ವಿಚಿತ್ರ ವರ್ತನೆ ತೋರಿಕೆಗಾಗಿ ಮಾತ್ರ ಅನ್ನೋದನ್ನು ಇತೀಚೆಗೆ ಕಂಡ್ಕೊಂಡೆ. ಅವರಷ್ಟಕ್ಕೇ ಅವರಿರುವಾಗ ಅತಿ ಒಯ್ಯಾರದ ಸೋಗು, ವಿಪರೀತ ಹಾವಭಾವ ಯಾವುದೂ ಇರೋದಿಲ್ಲ… ಸಹಜವಾಗೇ ಇರ್ತಾರೆ.
    ಇವರ ಬದುಕಿನ ಒಂದು ನೋಟವನ್ನು ಲೇಖಕ, ಸಹೃದಯಿ ಸಾ. ದಯಾರವರ “ಚೌಕಟ್ಟಿನಾಚೆಯ ಚಿತ್ರಗಳು” ನಾಟಕದಲ್ಲಿಯೂ ಕಾಣಬಹುದು(ರಚನೆ, ನಿರ್ದೇಶನ, ರಂಗವಿನ್ಯಾಸ, ಬೆಳಕು: ಸಾ.ದಯಾ). ಮುಂಬಯಿಯಲ್ಲಿ ಈ ನಾಟಕದ ಪ್ರಯೋಗ ಕಂಡ ಹಿರಿಯ ರಂಗಕರ್ಮಿಯೊಬ್ಬರ ಪ್ರತಿಕ್ರಿಯೆ: “ನಾನು ಪ್ರತಿ ದಿನ ಇವರನ್ನು ಸಿಗ್ನಲ್ ಗಳಲ್ಲಿ ನೋಡ್ತಾನೇ ಇರ್ತೀನಿ. ಆದ್ರೆ ಇವರ ಜೀವನ ಹೇಗಿರಬಹುದು ಅಂತ ಯೋಚನೆ ಕೂಡ ಮಾಡಿರಲಿಲ್ಲ. ಇದನ್ನ ಅರ್ಥಮಾಡ್ಕೋಬೇಕಾದ್ರೆ ಈ ನಾಟ್ಕ ನೋಡ್ಬೇಕಾಯ್ತು!”
    ಈ ನಾಟಕದ ಚಿತ್ರಗಳು ಇಲ್ಲಿವೆ: https://www.facebook.com/media/set/?set=a.596614440355029.146112.524860084197132&type=1

    ಪ್ರತಿಕ್ರಿಯೆ
  8. Hema Ajeya

    Samyukta avarige, dhanyavaadagalu. Vishaya tumba kutuhalakaariyadaddu. Ee vishayada bagge nanu nanna gandana jote tumba charche madiddene. namage ivaranna hegiruvaro haage sweekarisuva manobhavavu ide. illi tondare ondenandare nanage tilida mattige eegeega sampurna gandasaru kuda hijira gala vesha dharisi bhikshe beduttiddare. kaarana iste, maiyyi baggisi kelasa madalu istavilla. intaha paristitiyalli samanya jana hege nirdharisabeku yaaru nija yaaru sullu endu.
    jana hedartare ide kaaranakke.
    idu bari nanna anisikeyu haagirabahudu. ene aagali nimma ankana matra upayuktavadaddu. mattomme dhanyavadagalu janarige idara arivu mudisuva prayatnakke.
    Hema

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: