ಪುರುಷಸೂಕ್ತ : ಆ ನಾಲ್ಕು ಮಂದಿಗೂ ಅಭಿನಂದನೆಗಳು

ಡಾ.ಹೆಚ್.ವಿ.ವೇಣುಗೋಪಾಲ್

ಅಭಿಜ್ಞಾನ ಟ್ರಸ್ಟ್ ಅಭಿನಯಿಸಿದ ಪುರುಷಸೂಕ್ತ, (ಶೃತಿಗೆ ದೃಶ್ಯ ರೂಪ)

ಪರಿಕಲ್ಪನೆ : ಜೆ.ಶ್ರೀನಿವಾಸಮೂರ್ತಿ

ಚಾರಿ : ಚರಣ್ ಮತ್ತು ವಾಸುದೇವ್

ವಿನ್ಯಾಸ ಮತ್ತು ನಿರ್ದೇಶನ : ಜೊಸೆಫ್ ಜಾನ್


ಪುರುಷಸೂಕ್ತ, ಎಲ್ಲ ಬಗೆಯ ಧಾರ್ಮಿಕ ಆಚರಣೆಯ ಸಂಬಂಧದಲ್ಲಿ ಶೃತಪಡಿಸುವ ಒಂದು ವೇದಪಾಠ. ನಾರಾಯಣ ಋಷಿಯಿಂದ ಆಧಾನಗೊಂಡ ಈ ಮಂತ್ರ ಎಲ್ಲ ವೇದಗಳಲ್ಲಿಯೂ ಬಳಕೆಯಾಗಿರುವುದು ಇದರ ಪ್ರಸಿದ್ಧಿಯನ್ನು ತಿಳಿಸುತ್ತದೆ. ಇದುವರೆಗೂ ಶಾಬ್ಧಿಕ ಪ್ರಯೋಗಕ್ಕೆ ಮಾತ್ರ ದಕ್ಕಿದ್ದ ಈ ಮಂತ್ರ ಈಗ ದೃಶ್ಯ ಮಾಧ್ಯಮಕ್ಕೆ ದಕ್ಕಿಸುವ ಪ್ರಯತ್ನವನ್ನು ಶ್ರೀನಿವಾಸಮೂರ್ತಿಯವರು ಮಾಡಿದ್ದಾರೆ. ಇದೇ ಮೇ ತಿಂಗಳ ೨೩ ಮತ್ತು ೨೪ ರಂದು ಬೆಂಗಳೂರಿನ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ  ಪ್ರದರ್ಶಿತವಾಯಿತು. ನಾನು ಎರಡೂ ದಿನ ಈ ಪ್ರದರ್ಶನಗಳನ್ನು ನೋಡಿದ್ದೇನೆ.
ಪ್ರದರ್ಶನದ ಈ ಸುದ್ದಿಯನ್ನು ಕೇಳಿದಾಗಲೇ ನನಗೆ ಆಶ್ಚರ್ಯ ಮತ್ತು ಕುತೂಹಲವುಂಟಾಗಿತ್ತು. ಪ್ರದರ್ಶನವನ್ನು ನೋಡಿದಾಗ ಮತ್ತಷ್ಟು ಆಶ್ಚರ್ಯವಾಗುವುದಲ್ಲದೇ ಕೆಲವು ಪ್ರಶ್ನೆಗಳೂ ನನ್ನನ್ನು ಆವರಿಸಿಕೊಂಡವು. ರಿಕ್ತ ಎಂದರೆ ಖಾಲಿ, ಅತಿರಿಕ್ತ ಎಂದರೆ ತುಂಬಿ ಸುರಿಯುವ ಭಾವ, ಪ್ರದರ್ಶನದ ಮಂಚೆ ಹಾಗು ನಂತರ ನನಗೆ ರಿಕ್ತ ಹಾಗು ಅತಿರಿಕ್ತ ಭಾವಗಳುಂಟಾದವು.

ಹೀಗೆ ನಾನು ನೋಡಿದ್ದು ನಾಟಕವಲ್ಲ, ಅದೊಂದು ದೃಶ್ಯ ರೂಪದ ನಿರೂಪಣೆಯ ನೃತ್ಯ ಛಂದ.  ಇದರ ಪರಿಕಲ್ಪನೆಯನ್ನು ಮಾಡಿದ ಶ್ರೀನಿವಾಸಮೂರ್ತಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಂಸ್ಕೃತ ಭಾಷೆಯ ಅಧ್ಯಯನ ಅಧ್ಯಾಪನದಲ್ಲಿ ತೊಡಗಿದ್ದವರು, ಪ್ರಯೋಗ ಮಾಡಿದ ವಾಸುದೇವ ನೃತ್ಯಗಾರರು, ಚರಣ್ ಯೋಗಪಟು, ಜೋಸೆಫ್ ದೇಹ ಭಾಷೆಯ ವಿನ್ಯಾಸಗಾರರು. ಇವರುಗಳು ತಮ್ಮ ತಮ್ಮ ತಮ್ಮ ದಾರಿಯೊಡನೆ ಕಲಿಕೆಯಲ್ಲಿ ಬೆರೆಸಿಕೊಂಡ ವಿವಿಧ ನೃತ್ಯ ವಿಷಯಕ ಅನುಭವಗಳನ್ನೆಲ್ಲ ಒಟ್ಟುಗೂಡಿಸಿ ಪುರುಷಸೂಕ್ತವನ್ನು ದೃಶ್ಯ ರೂಪದಲ್ಲಿ ಇಟ್ಟುನೋಡಲು (ಅನುವಾದಿಸಲು) ಪ್ರಯತ್ನಿಸಿದ್ದಾರೆ.
ಇಂಥಹ ಪ್ರಯತ್ನಗಳಲ್ಲಿ ಯಶಸ್ಸು ಎಂಬ ಅಂತಿಮ ತುದಿಯನ್ನು ನಿರ್ದೇಶಿಸುವ ಶಬ್ದಕ್ಕೆ ಅರ್ಥವಿರುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳುವುದು ಎಂಬುದೂ ಸಹ ಸಂಕುಚಿತತೆಯನ್ನೇ ನಿಯಮಿಸುತ್ತದೆಯಾದ್ದರಿಂದ ನಾನು ಆ ಶಬ್ದವನ್ನು ಬಳಸಿ ನನ್ನ ಆನಂದವನ್ನು ಮೊಟಕುಗೊಳಿಸಿಕೊಳ್ಳಲಾರೆ. ಕಣ್ಮನ ಸೆಳೆಯುವ ಬೆಳಕಿನ ಸಂಯೋಜನೆ, ಹಿತಮಿತ ನಿಯಮಿತ ಸಂಗೀತ, ವಾಸು, ಚರಣ್ ಅವರುಗಳ ದೇಹ ಭಾಷೆ ನಮ್ಮನ್ನು ಬೆರಗುಗಣ್ಣುಗಳವರನ್ನಾಗಿ ಮಾಡಿದ್ದುದು ದಿಟ. ಇದನ್ನು ಹೀಗೆ ಮಾಡಬಹುದೆಂದುಕೊಂಡ ಮೂರ್ತಿ ಹಾಗು ಜೊಸೆಫ್ ಅವರುಗಳು ತಮ್ಮ ಪ್ರದರ್ಶನದ ರೂಪಣದಲ್ಲಿ ’ಪುರುಷ’ನ ’ಅತ್ಯತಿಷ್ಟತ್ದ ಶಾಂಗುಲಂ’ ಎಂಬ ಮಾತನ್ನು ಸ್ಫೂರ್ತಿಯಾಗಿ ಪಡೆಯದೆ ಕಣ್ಣಿನ ಹರವನ್ನು ಸೀಮಿತಗೊಳಿಸಿಕೊಂಡುಬಿಟ್ಟಿದ್ದಾರೆಂದು ನನಗೆ ಅನ್ನಿಸುತ್ತಿದೆ. ವಿಶ್ವಾತ್ಮನಾದ ಪುರುಷನ ಬಗೆಗಿನ ಬೆರಗನ್ನು ಚಿತ್ರಿಸುವತ್ತ ಈ ದೃಶ್ಯ ರೂಪದ ಚಿತ್ತ ಹರಿದಿದೆ. ’ಏತಾವಾನಸ್ಯ ಮಹಿಮಾ’ ಎಂಬ ಮಾತು ಕ್ರಿಯೆಯಲ್ಲಿ ಹೆಚ್ಚು ಕಾಣಿಸಲಾಗಿದೆ. ಪುರುಷಸೂಕ್ತ ಮಂತ್ರದ ಪ್ರಮುಖವಾದ ಭಾಗವಾದ ಸೃಷ್ಟಿ ಕ್ರಿಯೆಯ ಕಲ್ಪನೆ ಮತ್ತು  ಅದರ ಹುಟ್ಟು ಹಾಗು ಹರವು ಕೆಲವು ಸುಂದರ ಪ್ರತಿಮೆಗಳ ಮೂಲಕ ತಿಳಿಯಪಡಿಸಲಾಯಿತು.
’ಅತ್ಯತಿಷ್ಟತ್ದ ಶಾಂಗುಳಂ’ ಎಂಬ ಮಾತು ಚರಣ್ ಅವರ ಹಗ್ಗದಾಟದಲ್ಲಿ ಪರಿವರ್ತಿಸಿದರೆ, ಭೂತ ಭವಿಷ್ಯತ್ತುಗಳನ್ನಾವರಿಸಿದ ಪುರುಷನನ್ನು ಕಾಣಿಸುವಲ್ಲಿ ವಾಸು ಅವರ ನೃತ್ಯ ಹಾವ ಭಾವಗಳು, ವಿಶಿಷ್ಟ ಬೆಳಕಿನ ಚಕ್ರದಡಿ ಬಟ್ಟೆಯನ್ನು ಕಾಲಿನಡಿಯಲ್ಲಿ ಸುತ್ತಿಸುತ್ತಾ ಬೆಂಕಿಯುಂಡೆಯಂತೆ ರೂಪಿಸಿ, ಎತ್ತಿ ಹಿಡಿದು, ನೆಟ್ಟ ದೃಷ್ಟಿಯನ್ನು ಬೀರಿ ಅನಂತ ವಿಶ್ವದ ಪರಿಕಲ್ಪನೆಯನ್ನು ಮೂಡಿಸಿದವು. ದೇವತೆಗಳು ಯಜ್ಞ ಮಾಡಿದರು ಎಂಬಲ್ಲಿ ಜೋಸೆಫ್ ಅವರ ಅಲಂಕಾರಭೂಷಿತ ಅನಂದಾಟ್ಟಹಾಸದ ನಡೆಗಳು, ’ತಸ್ಮಾದ್ಯಜ್ಞಾತ್ಸರ್ವಹುತಃ’ಎಂಬಲ್ಲಿ ಸೃಷ್ಟಿಗೊಟ್ಟ ಇಲ್ಲಿನೆಲ್ಲವೂ, ಕಾಲದ ನಿರಂತರತೆಯಲ್ಲಿ ರೂಪಣಗೊಂಡ ನಾಗರಿಕ ರೂಪಗಳು, ರೀತಿಗಳು, ವಸ್ತುಗಳಾದ ನೀತಿಗಳು ಹಳ್ಳಿ ಪಟ್ಟಣಗಳಿಂದ ಹಿಡಿದು ಬಂಡಿ ವಿಮಾನಗಳಿಂದ ಹಿಡಿದು, ಗಣಕ ರಾಕೆಟ್  ಗಳವರೆಗೆ ಎಲ್ಲ ಕಾಲದ-ಸೆಳೆವುಗಳೂ, ಬೆಳೆವುಗಳೂ ದೃಶ್ಯ ನುಡಿಗಳಾಯಿತು. ಋಕ್ಕುಗಳು, ಸಾಮ, ಛಂದಗಳು ಹುಟ್ಟಿದ ರೂಪಕವು ಮನಸೆಳೆವ ನೃತ್ಯ ಸಂಗೀತದ ಭಂಗಿಗಳಲ್ಲಿ ಆಪ್ಯಾಯಮಾನವಾಗಿದ್ದಿತು.

ಇಡೀ ಪುರುಷಸೂಕ್ತದಲ್ಲಿ ಅತ್ಯಂತ ಪ್ರಮುಖವಾಗಿ ಚರ್ಚಿತವಾದ ಸಂಗತಿ ಎಂದರೆ, ದೇವತೆಗಳು ಯಜ್ಞ ಮಾಡಿದರು, ಅದರಲ್ಲಿ ಪುರುಷನು ಯಜ್ಞಪಶುವಾಗಿದ್ದನು. ಕೊನೆಯಲ್ಲಿ ಅವನನ್ನು ತುಂಡರಿಸಲಾಯ್ತು. ಆ ತುಂಡುಗಳಿಂದ ಲೋಕ ಸಮಸ್ತ ಹುಟ್ಟಿಗೆ ಕಾರಣವಾಯ್ತು ಎಂಬುದು. ಈ ಭಾಗವು ಮಂತ್ರದಲ್ಲಿ ಅತ್ಯಂತ ನಾಟಕೀಯ ಭಾಗವಾಗಿದೆ ಎಂಬುದು ನನ್ನ ಗ್ರಹಿಕೆ. ಪ್ರದರ್ಶನದಲ್ಲಿ ಈ ನಾಟಕೀಯ ಭಾಗದ ರೂಪಣ, ನಿರ್ವಚನಗಳೇನಾದರೂ ಘಟಿಸಿದ್ದರೆ, ಪಠಿಸಿದ್ದರೆ, ಸೃಷ್ಟಿಯ ವಸ್ತು ವಿವರಣೆಯಲ್ಲಿನ ಕಾವ್ಯ ಕಲ್ಪನೆಯ ಆಯಾಮ ದ ಬಗೆಗೆ ಚರ್ಚೆಯನ್ನು ಕಾಣಿಸಬಹುದಾಗಿತ್ತು.
ನನ್ನ ಈ ಸೂಕ್ಷ್ಮ ನೋಟಕ್ಕೆ ಕಾರಣವೆಂದರೆ, ’ಬ್ರಾಹ್ಮಣೋಸ್ಯಮುಖಮಾಸೀತ್…”ಎಂದು ಮುಂತಾದ ವಾಕ್ಯಗಳಲ್ಲಿ ಕಾಣಲಾಗುವ ’ಅರ್ಥ’(ತಿಳಿವು) ಎಂಬುದು ಈ ಕಾವ್ಯದ (ಮಂತ್ರ) ಒಟ್ಟು ಹೆಣಿಗೆಯಲ್ಲಿ ಮಾನವನಲ್ಲಿರುವ ಸರ್ವಶಕ್ತಿ ಸ್ವರೂಪಗಳಾದ ’ಮಾತು-ಬಲ-ನೆಲೆ-ನಡೆ’ಗಳ ಅನವರತತೆಯನ್ನು, ಅವುಗಳು ಮೂಡಿದ ಕಾರಣವಾದ ಯಜ್ಞವೆಂಬ ತಿದಿಯನ್ನು ತಿಳಿಸಿಕೊಡುತ್ತಿರಬಹುದು ಎಂದೆನಿಸುತ್ತಿದೆ. ಇವುಗಳೇ ಬಿಡಿಬಿಡಿಯಾಗಿ ವ್ಯವಹಾರಗಳಾದ ಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಕಲ್ಪನೆಗಳು ಬಂದಿರಬಹುದು. ಇವುಗಳನ್ನು ವರ್ಣಾಶ್ರಮ ಧರ್ಮಗಳೆಂದು ನಂತರ ಕರೆದರು ಎಂಬ ಅನುಮಾನಗಳನ್ನು ಹುಟ್ಟುಹಾಕಲು ಈ ಮಂತ್ರದ ಈ ಭಾಗವು ಪ್ರಮುಖ ನಿರ್ವಚನಯೋಗ್ಯ ಭಾಗವಾಗಿ ಕಾಣುತ್ತದೆ. ಈ ಸಂಬಂಧವಾಗಿ ನನಗೆ ಈ ಪ್ರಯೋಗ  ನಿರಾಸೆಯನ್ನುಂಟುಮಾಡಿತು.
ಉಳಿದಂತೆ ದೃಶ್ಯ ವೈಭವದಿಂದೊಡಗೂಡಿದ ಪ್ರಯೋಗ ಮೆಚ್ಚುಗೆಯ ಕಣ್ಣನ್ನುಹಿಡಿದಿಟ್ಟುಕೊಳ್ಳುವಲ್ಲಿ ಸಫಲತೆಯನ್ನು ಗಳಿಸಿಕೊಂಡಿತು. ದೃಶ್ಯವಾಗಿ ಕಾಣಿಸಲು ಬಹುದೊಡ್ಡಸವಾಲಾಗಿರುವ ಇಂತಹ ಪಾರಂಪರಿಕ ಮೂಲ ಕಲ್ಪನೆಯ ಚಿಂತನೆಯನ್ನು ತೋರಿಸಲು ಪ್ರಯತ್ನಿಸಿದ ಈ ಎಲ್ಲ ನಾಲ್ಕು ಮಂದಿಗೂ ಅಭಿನಂದನೆಗಳು.

ಸಂಸ್ಕೃತ ಬಾರದವರಿಗಾಗಿ….

ಪುರುಷಸೂಕ್ತ- ಸರಳ ಕನ್ನಡ ಭಾವಾನುವಾದ- ಡಾ.ಹೆಚ್.ವಿ.ವೇಣುಗೋಪಾಲ್

|| ಸಾವಿರ ತಲೆಯ, ಸಾವಿರ ಕಣ್ಣುಗಳ, ಪುರುಷನು ವಿಶ್ವವನ್ನಾವರಿಸಿಕೊಂಡು ಹತ್ತಂಗುಲ ಹೆಚ್ಚು (ಮೀರಿ) ನಿಂತವನು. ಕಳೆದವೂ, ಬರುವವೂ, ಎಲ್ಲವೂ ಅವನು. ಅಮೃತತ್ವಕ್ಕೆ ಈಶನೂ ಆದ ಇವನು ಅನ್ನದಿಂದ ಬೆಳೆಯುವವನು. ಇವನ ಈ ಮಹಿಮೆಗಿಂತಲೂ ಮಹಿಮಾಶಾಲಿಯಿವನು. ಇವನ ಹೆಜ್ಜೆ ಇಲ್ಲೊಂದಾದರೆ ಉಳಿದ ಮೂರು ಅಮೃತದಿವಿಯಲ್ಲಿ. ಇಲ್ಲಿ, ಅಲ್ಲಿ, ಎಲ್ಲೆಲ್ಲಿಯೂ ಜೀವ ಅಜೀವಗಳಲ್ಲಿಯೂ ಆವರಿಸಿಕೊಂಡಿರುವನು. ಹಾಗಾಗಿ ವಿರಾಟ್ಹುಟ್ಟಿತು, ಅದರಿಂದ ಪುರುಷನು ಹುಟ್ಟಿದನು. ಹುಟ್ಟಿದೊಡನೆಯೇ ಭೂಮಿಯ ಹಿಂದೆ ಮುಂದೆ ಎಲ್ಲೆಡೆ ತುಂಬಿದಂತೆ ಆವರಿಸಿಕೊಂಡನು. ದೇವತೆಗಳು ಪುರುಷನನ್ನು ಹವಿಸ್ಸನ್ನು ಮಾಡಿಕೊಂಡು ಯಜ್ಞವನ್ನಾಚರಿಸಲು ತೊಡಗಿದರು. ವಸಂತ ಅದರ ತುಪ್ಪವಾಯಿತು, ಗ್ರೀಷ್ಮವು ಉರುವಲಾಯಿತು, ಶರತ್ತು ಹವಿಸ್ಸಾಯಿತು. ಏಳು ಕಂಭಗಳು ಸುತ್ತಲಿದ್ದು ಏಳುಮೂರರಷ್ಟು ಸಮಿತ್ತುಗಳಿದ್ದು ಅಲ್ಲಿ ದೇವತೆಗಳು ಯಜ್ಞ ಮಾಡಿದರು.
ಪುರುಷನನ್ನು ಯಜ್ಞಪಶುವನ್ನಾಗಿಸಿ ಕಟ್ಟಿಹಾಕಿದರು. ಅಲ್ಲಿ ಪಾವನದ ಹುಲ್ಲಿನ ಮೇಲೆ ಪುರುಷನನ್ನು ಇಟ್ಟು ಪಾವನದ ನೀರನ್ನು ಚುಮುಕಿಸಿ ದೇವತೆಗಳು, ಸಾಧಕರು, ಋಷಿಗಳು ಅವನನ್ನು ಆಹುತಿಯನ್ನಾಗಿಸಿ ಯಜ್ಞ ಮಾಡಿದರು. ಆ ಯಜ್ಞದಲ್ಲಿ ಎಲ್ಲವನ್ನೂ ಆಹುತಿಯನ್ನಾಗಿಸಲಾಯಿತು. ಎಲ್ಲವನ್ನೂ ಸ್ವೀಕರಿಸಿದ ಯಜ್ಞದಿಂದ ಮೊಸರು, ಬೆಣ್ಣೆ, ಹಕ್ಕಿಗಳು, ಅರಣ್ಯ ಪಶುಗಳು, ಗ್ರಾಮಗಳು ಹುಟ್ಟಿಕೊಂಡವು. ಎಲ್ಲವನ್ನೂ ಆಹುತಿಗೈದ ಆ ಯಜ್ಞದಲ್ಲಿ ಋಕ್ಕುಗಳು (ಋಗ್ವೇದ) (ಮಾತು), ಸಾಮವು (ಸಾಮವೇದ) (ಗಾನ) ಹುಟ್ಟಿಕೊಂಡವು. ಅದರಿಂದಲೇ ಛಂದಸ್ಸು (ನಾದ) ಹುಟ್ಟಿತು. ಅದರಿಂದಲೇ ಯಜುಃ(ಯಜುರ್ವೇದ)(ಕ್ರಿಯೆ) ಕೂಡ ಹುಟ್ಟಿಕೊಂಡಿತು.  ಕುದುರೆಗಳು, ಎರಡು ದವಡೆಗಳುಳ್ಳ ಪ್ರಾಣಿಗಳು, ಹಸುಗಳು, ಆಡು, ಟಗರು ಮುಂತಾದವುಗಳು ಹುಟ್ಟಿಕೊಂಡವು, ಯಜ್ಞದಲ್ಲಿ ದೇವತೆಗಳು ಪುರುಷನನ್ನು ತುಂಡರಿಸಿದಾಗ ಎಷ್ಟು ಭಾಗವಾಗಿ ತುಂಡು ಮಾಡಿದರು? ಆ ಮುಖವನ್ನು ಏನೆಂದು ಕರೆದರು? ಆ ಬಾಹುಗಳನ್ನು ಏನೆಂದು ಕರೆದರು?ಆ ತೊಡೆಯ ಭಾಗವನ್ನು ಮತ್ತು ಪಾದಗಳನ್ನು ಏನೆಂದು ಕರೆದರು? ಅವನ ಮುಖ  ಬ್ರಾಹ್ಮಣವಾಗಿದ್ದಿತು, ಬಾಹುಗಳು ಕ್ಷತ್ರಿಯವೆಂದಾಯ್ತು, ತೊಡೆಗಳಿಂದ ವೈಶ್ಯ ಹಾಗು ಪಾದಗಳಿಂದ ಶೂದ್ರವು ಹುಟ್ಟಿಕೊಂಡಿತು. ಮನಸ್ಸಿನಿಂದ ಚಂದ್ರನು, ಕಣ್ಣುಗಳಿಂದ ಸೂರ್ಯನು, ಮುಖದಿಂದ ಇಂದ್ರ-ಅಗ್ನಿಗಳು, ಪ್ರಾಣದಿಂದ ವಾಯುಗಳು ಹುಟ್ಟಿಕೊಂಡವು. ನಾಭಿಯಿಂದ ಅಂತರಿಕ್ಷವು, ತಲೆಯಿಂದ ಸ್ವರ್ಗವು ಹುಟ್ಟಿಕೊಂಡವು, ಕಾಲುಗಳಿಂದ ಭೂಮಿಯು, ಕಿವಿಗಳಿಂದ ದಿಕ್ಕುಗಳು, ಹೀಗೆ ಲೋಕವು ಹುಟ್ಟಿಕೊಂಡಿತು.
ಈ ಪುರುಷನು ಮಹತ್ತುಳ್ಳವನೆಂದು, ಕತ್ತಲೆಯನ್ನು ತೊಡೆಯುವ ಸೂರ್ಯನಂತೆ ಬೆಳಗುವವನೆಂದೂ, ಎಲ್ಲ ರೂಪಗಳಲ್ಲಿಯೂ ತನ್ನನ್ನು ವಿನ್ಯಾಸಗೊಳಿಸಿಕೊಳ್ಳುವವನೆಂದೂ, ಹೆಸರಿಸುವವನೆಂದೂ, ಎಲ್ಲವನ್ನೂ ತಿಳಿವಧೀರನೆಂದೂ ಕರೆದರೆ ಅವನನ್ನು ತಿಳಿದಂತೆ. ||
(ಹೀಗೆ ಹೇಳಿರುವುದೆಲ್ಲವೂ ತತ್ವ. ಇದನ್ನು ಈ ಕಾಲದ ನಮ್ಮ ಭಾಷೆಯಲ್ಲಿ ತಿಳಿದುಕೊಳ್ಳಲು ವಿವರಣೆಯ ಅಗತ್ಯ ಇದೆ. ತತ್ವಗಳೇ ಎಂದಿಗೂ ವಿವರಣೆಗಳಲ್ಲ.)
 

‍ಲೇಖಕರು G

May 24, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Dr.S.R.Keshava

    it is an excellent review on the play ಪುರುಷಸೂಕ್ತ, (ಶೃತಿಗೆ ದೃಶ್ಯ ರೂಪ), it also created curiosity not only to watch the play but also to read the text ಪುರುಷಸೂಕ್ತ and try to redefine the meaning as suggested by Dr.H.V. Venugopal

    ಪ್ರತಿಕ್ರಿಯೆ
  2. Meera

    It was an excellent play and creation. Want to see it 2nd time, since I felt having missed out intricacies of depiction amidst getting involved in the Drushya part. Thanks to Professor and his team for a wonderful involvement. Kindly organize this in Seva Sadana, Malleswaram since there are more people with great expectation.

    ಪ್ರತಿಕ್ರಿಯೆ
  3. Meera

    Sorry, one more comment, an observation : Regarding the modernity that was brought after Purusha being offered needs blending . The modernity part is an excellent attempt but needs little more emphasis (effort and duration) in the play.
    Awaiting to see one more time
    regards,
    Meera

    ಪ್ರತಿಕ್ರಿಯೆ
  4. pramod

    I like to congratulate the whole team for trying Purusha Suktha .a very different attempt which is very interesting and very imaginative .congrats all of you .charan an additional pat for you from me and my friends for your body movements .

    ಪ್ರತಿಕ್ರಿಯೆ
  5. t.surendra rao

    ಇತ್ತೀಚೆಗೆ ಪ್ರಯೋಗಕ್ಕಾಗಿ ಪ್ರಯೋಗಗಳು ನಡೆಯುತ್ತಿವೆ. ಪುರುಷ ಸೂಕ್ತವಾಗಲಿ ಅಥವಾ ಇತ್ತೀಚಿನ ರಾತ್ರಿಯಿಡೀ ನಡೆದ ರಂಗಪ್ರಯೋಗವಾಗಲೀ ಏನನ್ನು ಸಾಧಿಸುತ್ತವೆ ಎಂದು ನನಗಂತೂ ಅರ್ಥವಾಗಿಲ್ಲ. ಯಾವುದೂ ಅರ್ಥವಾಗದ ದಡ್ಡ ನಾನಾಗಿರಬಹುದು. ಪ್ರಯೋಗಗಳ ಸೂಕ್ಷ್ಮತೆ ಅರಿಯದ ಗಮಾರನಿರಬಹುದು. ಹೀಗೆಲ್ಲ ಹೇಳುವಾಗ, ನಾನು ಎರಡೂ ಪ್ರಯೋಗಗಳನ್ನು ನೋಡಿಲ್ಲ.ಈ ಮೇಲಿನ ವಿವರಣೆಗಳೇ ಸಾಕು. ನಾಟಕ ನೋಡಿ ಸಮಯ ಹಾಳು ಮಾಡಿಕೊಳ್ಳುವ ಅಗತ್ಯವಿಲ್ಲವೆಂದು ನನಗೆ ಅನಿಸುತ್ತದೆ. ಇವನೆಂಥ ಮೂರ್ಖನಿರಬಹುದು ಎಂದು ಬಹಳ ಜನರಿಗೆ ಅನಿಸಬಹುದು. ಇವು ನನ್ನ ಪ್ರಾಮಾಣಿಕ ಅಭಿಪ್ರಾಯ. ಬೇರೆಯವರ ಸಮಾಧಾನಕ್ಕೆ ಅಂತ ಏನೇನೋ ಎಲ್ಲಾ ಹೇಳಬೇಕು ಅಂತ ನನಗನಿಸುವುದಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: