ಸಂಧ್ಯಾರಾಣಿ ಕಾಲಂ : ಸೃಜನ್ ಕನ್ನಡಕ್ಕೆ ಕರೆತಂದ ರಾಮ್ ಗೋಪಾಲ್ ವರ್ಮ

’ನನ್ನಿಷ್ಟ’ ಎಂದ ವಿಕ್ಷಿಪ್ತ ಪ್ರತಿಭಾವಂತ

೨೦೦೯ – ೧೦ ರಲ್ಲಿರಬೇಕು,  ಅಂತರ್ಜಾಲಕ್ಕೆ ಪ್ರವೇಶಿಸಿದ ತಕ್ಷಣ ನಾನು ಮರೆಯದೇ ಓಡುತ್ತಿದ್ದ, ಓದುತ್ತಿದ್ದ ತಾಣ ಎಂದರೆ RGV Blog. ಅದರಲ್ಲಿನ ಬರಹಗಳಷ್ಟೇ ಆಕರ್ಷಕವಾಗಿದ್ದು ಅಲ್ಲಿ ಬರುತ್ತಿದ್ದ ಪ್ರತಿಕ್ರಿಯೆಗಳು ಮತ್ತು ಕೆಲವು ಪ್ರಶ್ನೆಗಳಿಗೆ ಆತ ಉತ್ತರಿಸುತ್ತಿದ್ದ ರೀತಿ. ಒಬ್ಬ ತಿಕ್ಕಲ, ತತ್ವಜ್ಞಾನಿ, ಕಲೆಗಾರ, ಕಸುಬುದಾರ, ಉಡಾಫೆ ಮನುಷ್ಯ ಎಲ್ಲಾ ಲೇಬಲ್ ಗಳನ್ನು ಕೊಡಬಲ್ಲಂತಿರುತ್ತಿತ್ತು ಆ ಉತ್ತರಗಳು. ಒಂದೆರಡು ಉದಾಹರಣೆ ನೋಡಿ :
If somebody feels happy in wanting to do something why not let them?
That’s precisely the point I was making. Life should be lived for wanting to and not for having to.
How would you describe yourself?
I am like a hardcore porn dvd. You might hate it, love it, look down upon it or get disgusted by it but if it is in the room you can’t resist watching it.
Only fools are attracted to power and strength – A.Einstein.
Actually only fools hate power and strength and that is primarily because they fear them and know deep in their hearts that they are incapable of achieving them. – RGV
ಹೇಳಿ ಏನಂತೀರಿ ಈತನನ್ನು?! ಈತ ಬೇರೆಯವರನ್ನಿರಲಿ ತನ್ನನ್ನೇ ತಾನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಅನ್ನುವುದೇ ಒಂದು ವಿಸ್ಮಯ. ಚಿತ್ರರಂಗ ಕಂಡ ಕೆಲವೇ ಅದ್ಭುತ ತಂತ್ರಜ್ಞರಲ್ಲಿ ಈತನೂ ಸಹ ಒಬ್ಬ. ಇಲ್ಲಿ ನಾನು ’ಒಳ್ಳೆಯ ನಿರ್ದೇಶಕ’ ಎನ್ನುವುದಕ್ಕಿಂತ ಹೆಚ್ಚಾಗಿ ’ಕೆಲಸ ಗೊತ್ತಿರುವ ತಂತ್ರಜ್ಞ’ ಎಂಬುದಕ್ಕೇ ಹೆಚ್ಚು ಒತ್ತು ಕೊಡುತ್ತಿದ್ದೇನೆ. ನಿರ್ದೇಶಕನಾಗಿ ಈತ ಸೋತಿರುವ ಚಿತ್ರಗಳಲ್ಲೂ ತಂತ್ರಜ್ಞನಾಗಿ ಇವನ ಕೆಲಸ ಅದ್ವಿತೀಯ. ಈತನ ಚಿತ್ರಗಳಲ್ಲಿನ ಕ್ಯಾಮೆರಾ ಆಂಗಲ್ಸ್, ಬೆಳಕು, ಹಿನ್ನಲೆ ಸಂಗೀತ ಮತ್ತು ಕ್ಯಾಮೆರಾ ಚಿತ್ರದ ಹಿರೋಯಿನ್ ಅನ್ನು ಪ್ರೀತಿಸುವ ರೀತಿ ಎಲ್ಲವೂ ಅಪ್ರತಿಮ.
ಇಂತಹ ಈ RGV ಎನ್ನುವ ರಾಮ್ ಗೋಪಾಲ್ ವರ್ಮಾ ನ ಸಿನೆಮಾ ಯಾನ ಎಷ್ಟು ರೋಚಕವಾಗಿರಬಹುದು ಅಲ್ಲವಾ? ಖಂಡಿತಾ ಹೌದು. ಆ ಯಾನದ ಹೆಜ್ಜೆಗಳು ಈತನ ಬ್ಲಾಗಿನಲ್ಲಿ, ಸಾಕ್ಷಿ ವಾರಪತ್ರಿಕೆಯಲ್ಲಿ ನಂತರ ’ನಾ ಇಷ್ಟಂ’ ಎಂದು ತೆಲುಗಿನಲ್ಲಿ ಪುಸ್ತಕವಾಗಿ ಪ್ರಕಟವಾಯಿತು. ಅದರ ಬನಿ ಒಂದಿಷ್ಟೂ ತೆಳ್ಳಗಾಗದಂತೆ ಕನ್ನಡಕ್ಕೆ ತಂದವರು ನಮ್ಮವರೇ ಆದ ಮತ್ತೊಬ್ಬ ಅದ್ಭುತ ಕಲಾವಿದ ಸೃಜನ್. ಪಲ್ಲವ ಪ್ರಕಾಶನ ಇದನ್ನು ಪುಸ್ತಕವಾಗಿ ಹೊರತಂದಿದೆ.
ಪುಸ್ತಕದ ಟ್ಯಾಗ್ ಲೈನ್ ’ಸಿನೆಮಾ ಯಾನ’ ಅಂತಿದ್ದರೂ, ಇದು ಕೇವಲ ಆತನ ಸಿನೆಮಾ ಯಾನವಲ್ಲ. ಅವನ ಆತ್ಮಚರಿತ್ರೆಯಲ್ಲಿ ಆತ ನಮಗೆ ಓದಲು ಅನುಮತಿ ಕೊಟ್ಟ ಕೆಲವು ಹಾಳೆಗಳು, ಆತನ ವಿಕ್ಷಿಪ್ತತೆ, ಆತನಿಗೇ ವಿಶಿಷ್ಟವಾಗಿರುವ ಪ್ರತಿಭೆಯನ್ನು ಹೆಕ್ಕಿತೆಗೆಯಬಲ್ಲ ಆತನ ಇನ್‌ಸ್ಟಿಂಕ್ಟ್ಸ್, ಆತನ ಮೋಹ-ಪ್ರೇಮ-ಅಹಂಕಾರ-ಆತ್ಮ ಪ್ರಶಂಸೆ …. ಎಲ್ಲಾ ಇದೆ ಇಲ್ಲಿ. ಇಲ್ಲಿ ರಾಮು ಎಂಬ ಮನುಷ್ಯ, ಆರ್ ಜಿ ವಿ ಎಂಬ ನಿರ್ದೇಶಕ ಇಬ್ಬರೂ ಇದ್ದಾರೆ. ಇದನ್ನು ಪುಸ್ತಕ ಎಂದು ಕರೆಯುವ ಬದಲು, ಪುಸ್ತಕ ರೂಪದ ಬ್ಲಾಗ್ ಅನ್ನಬಹುದೇನೋ.

ಪುಸ್ತಕದ ಮುನ್ನುಡಿಯಲ್ಲಿ ಜಯಂತ ಕಾಯ್ಕಿಣಿ ಅವರು ಬರೆಯುವ ಹಾಗೆ ಈತ ಒಬ್ಬ ’ದಾರ್ಶನಿಕ, ಸ್ವೋಪಜ್ಞ, ಆಲೋಚಕ, ಜೀವನಾನುರಾಗಿ, ಉಡಾಫೆಯ ಯಾತ್ರಿಕ, ಎಚ್ಚರದ ಕಸುಬುಗಾರ, ನಿರಂತರ ಚಡಪಡಿಕೆಯ ಕಲೆಗಾರ’.
ಅವನ ಇಡೀ ವ್ಯಕ್ತಿತ್ವದಲ್ಲಿ ಆತನಿಗೆ ವಿಶೇಷವಾದ ಹೆಮ್ಮೆ ಇರುವುದು ಅವನ ಆಲೋಚನಾ ಶಕ್ತಿ, ಬುದ್ಧಿಮತ್ತೆಯ ಮೇಲೆ. ಇಲ್ಲಿ ಒಂದು ತಮಾಶೆ ಹೇಳಬೇಕು. ಒಮ್ಮೆ ಒಬ್ಬ ಹುಡುಗಿ ಈತನಿಗೆ ’I want to make love to your mind’ ಎಂದಳಂತೆ! ತನ್ನ ಜೀವನದಲ್ಲೇ ಒಬ್ಬ ಹುಡುಗಿ ತನಗೆ ಕೊಟ್ಟ ಬೆಸ್ಟೆಸ್ಟ್ ಕಾಂಪ್ಲಿಮೆಂಟ್ ಇದು ಎಂದು ಆತ ತನ್ನ ಬ್ಲಾಗಿನಲ್ಲಿ ಬರೆದುಕೊಳ್ಳುತ್ತಾನೆ. ಅವನ ಆ ಮೈಂಡ್ ಕೆಲಸ ಮಾಡುವ ರೀತಿ ತಿಳಿಯಬೇಕಾದರೆ ಅವನ ಈ ಪುಸ್ತಕ ಓದಬೇಕು.
Path Breaking Film ಎಂದೇ ಕರೆಯಬಹುದಾದ ಈತನ ಮೊದಲ ಚಿತ್ರ ’ಶಿವಾ’, ಅದರ ಸೈಕಲ್ ಚೈನ್ ಫೈಟಿಂಗ್ ಅಂತೂ ಈಗಲೂ ಫೇಮಸ್. ಗಾಡ್ ಫಾದರ್ ಚಿತ್ರದ ನೆರಳು, ’ಅರ್ಧಸತ್ಯ’, ’ಅರ್ಜುನ್’, ’ಕಾಲಚಕ್ರ’, ’ರಿಟರ್ನ್ ಆಫ್ ದ ಡ್ರಾಗನ್’ ಹೀಗೆ ಹಲವಾರು ಚಿತ್ರಗಳ ಎಳೆಗಳು ಇದರಲ್ಲಿದ್ದವು. ಇದನ್ನು ಆತ ಮುಲಾಜಿಲ್ಲದೆ ಅರ್ಧ ಉಡಾಫೆಯಲ್ಲಿ, ಅರ್ಧ ಪ್ರಾಮಾಣಿಕತೆಯಲ್ಲಿ ಒಪ್ಪಿಕೊಳ್ಳುತ್ತಾನೆ. ಅಷ್ಟೇ ಆಸಕ್ತಿ ಕೆರಳಿಸುವುದು ಇವನು ಈ ಚಿತ್ರಕ್ಕೆ ’ಸ್ಟಡಿ ಕ್ಯಾಮ್’ ಬಳಸಿದ ರೀತಿ.
ಇಂಜನಿಯರಿಂಗ್ ಓದುತ್ತಿದ್ದಾಗ ಸಿನೆಮಾಗಳ ಬಗ್ಗೆ ಇನ್ನಿಲ್ಲದ ಪ್ರೀತಿ ಇದ್ದ ಈತ ಕ್ಲಾಸಿಗೆ ದಿನಗಟ್ಟಲೆ ಚಕ್ಕರ್ ಹಾಕಿ, ಅಲ್ಲಲ್ಲಿ ಸಾಲ ಮಾಡಿ ಸದಾ ವಿಜಯಲಕ್ಷ್ಮಿ ಎಂಬ ಟಾಕೀಸಿನಲ್ಲಿ ಫಿಲಂ ನೋಡ್ತಾ ಇದ್ದನಂತೆ, ತಮಾಷೆ ಅಂದ್ರೆ ಎಷ್ಟೊ ಸಲ ಅಲ್ಲಿನ ಮ್ಯಾನೇಜರ್ ಹತ್ತಿರವೇ ಸಾಲ ಮಾಡಿ ಅಲ್ಲೇ ಫಿಲಂ ನೋಡೋಕೆ ಹೋಗ್ತಾ ಇದ್ದನಂತೆ. ಒಂದು ದಿನ ಮ್ಯಾನೇಜರ್ ಇವನನ್ನು ಕೂರಿಸಿಕೊಂಡು ಗಂಟೆಗಟ್ಟಲೆ ಬುದ್ಧಿ ಹೇಳಿ, ಹೇಳಿ ಕಡೆಗೆ ಇದು ರಿಪೇರಿ ಆಗುವ ಇಸಂ ಅಲ್ಲಾ ಅಂತ ಜಿಗುಪ್ಸೆಯಿಂದ ಸುಮ್ಮನಾದನಂತೆ. ಮುಂದೆ ಇದೇ ಟಾಕೀಸಿನಲ್ಲಿ ಇವನ ಮೊದಲ ಚಿತ್ರ ಶಿವ ಸೂಪರ್ ಡೂಪರ್ ಹಿಟ್ ಆಗಿದೆ! ಇವನು ಅಲ್ಲಿಗೆ ಹೋಗಿದ್ದಾನೆ, ಅವನ ಹೆಸರು ಗೊತ್ತಿಲ್ಲದ ಮ್ಯಾನೇಜರ್ ಗೆ ಇವನೇ ಆ ಚಿತ್ರದ ಡೈರೆಕ್ಟರ್ ಅಂತ ಗೊತ್ತಾದಾಗ ಕಕ್ಕಾಬಿಕ್ಕಿ! ಕೈಕುಲುಕಲು ಬಂದ ತನ್ನನ್ನು ಆತ ಕೈ ಹಿಡಿದೆಳೆದು, ಬಿಗಿಯಾಗಿ ಅಪ್ಪಿಕೊಂಡ, ಅದು ನನ್ನ ಜೀವನದ ಅತ್ಯಂತ ದೊಡ್ಡ ಥ್ರಿಲ್ ಅನ್ನುತ್ತಾನೆ ರಾಮು.
 
ಇನ್ನು ನಟಿ ಶ್ರೀದೇವಿ ಬಗೆಗಿನ ಆತನ, ಮೋಹ, ಪ್ರೀತಿ, ಪ್ರೇಮ, ಆರಾಧನೆಯ ಬಗ್ಗೆಯೇ ಒಂದು ಅಧ್ಯಾಯ ಇದೆ. ಓದುವ ದಿನಗಳಿಂದಲೂ ಶ್ರೀದೇವಿ ಬಗ್ಗೆ ತಾಳಲಾರದ ಮೋಹ ಬೆಳಸಿಕೊಂಡ ಈತನಿಗೆ ಎರಡನೆಯ ಚಿತ್ರದಲ್ಲೇ ಶ್ರೀದೇವಿಯನ್ನು ನಿರ್ದೇಶಿಸುವ ಅವಕಾಶ ಸಿಗುತ್ತದೆ. ಅವಳನ್ನು ಎದುರಿನಲ್ಲಿ ನೋಡಿದರೇ ತಾನು ಸತ್ತೇ ಹೋಗುತ್ತೀನಿ ಎನ್ನುವ ಆತಂಕದಿಂದ ಆತ ಅವಳನ್ನು ಮೊದಲನೆಯ ಸಲ ಭೇಟಿ ಮಾಡುತ್ತಾನೆ, ಅದೂ ಕರೆಂಟ್ ಹೋಗಿ ಕ್ಯಾಂಡಲ್ ಬೆಳಕಿನಲ್ಲಿ! ಆನಂತರ ಅವನು ನಿರ್ದೇಶಿಸಿದ ಚಿತ್ರವೇ ’ಕ್ಷಣ ಕ್ಷಣಂ’. ಈ ಚಿತ್ರ ನೀವು ನೋಡಿದ್ದರೆ ಇದರಲ್ಲಿ ಕಂಡಷ್ಟು ಇನ್ಯಾವ ಚಿತ್ರದಲ್ಲೂ ಶ್ರೀದೇವಿ ಮೋಹಕವಾಗಿ, ಮಾದಕವಾಗಿ ಕಂಡಿಲ್ಲ ಅಂತ ಗೊತ್ತಾಗಿಬಿಡುತ್ತದೆ. ಇಡೀ ಚಿತ್ರದಲ್ಲಿ ಕ್ಯಾಮೆರಾ ಶ್ರೀದೇವಿಯೊಡನೆ ರೊಮಾನ್ಸ್ ಮಾಡಿದೆ.
ಆಕೆಯೊಡನೆ ಈತ ನಿರ್ದೇಶಿಸಿದ ಇನ್ನೊಂದು ಚಿತ್ರ ’ಗೋವಿಂದ ಗೋವಿಂದ’. ಅದರಲ್ಲಿ ಒಂದು ಹಾಡಿದೆ, ’ ಅಯ್ಯೋ ಬ್ರಹ್ಮದೇವ, ನನ್ನ ಮನೆ ಮುಳುಗಿಸಿದೆ ನೀನು, ಇಂತಹ ಸೊಗಸನ್ನು ಹೇಗಯ್ಯ ಸೃಷ್ಟಿಸಿದೆ, ಹೂವಿನ ಪಕಳೆಗಳ ಮೇಲೆ ಜೇನಿನ ಹನಿ ಚೆಲ್ಲಿದಂತಹ ಸೌಂದರ್ಯ, ಭೂಲೋಕ ಇಂತಹ ಸಿರಿ ಕಂಡಿದ್ದುಂಟಾ, ಹಾಗಾಗಿ ಇದು ಸ್ವರ್ಗದ್ದೇ ಚೆಲುವು…’ ಅಂತ ತೀರ್ಪು ಕೊಟ್ಟುಬಿಡುತ್ತದೆ!!
ಆಮೇಲೆ ಶ್ರೀದೇವಿ ಬೋನಿ ಕಪೂರ್ ನನ್ನು ಮದುವೆ ಆಗುತ್ತಾಳೆ. ಅವಳನ್ನು ಭೇಟಿ ಮಾಡಲು ಈತ ಹೋಗುತ್ತಾನೆ. ಆಕೆ ಟೀ ತೆಗೆದುಕೊಂಡು ಬರುತ್ತಾಳೆ. ತನ್ನ ದೇವತೆಯನ್ನು ಮನೆಕೆಲಸದವಳನ್ನಾಗಿ ಮಾಡಿದ ಬೋನಿಕಪೂರ್ ನನ್ನು ಈತ ಇಂದಿಗೂ ಕ್ಷಮಿಸಿಲ್ಲ! ಅವನನ್ನು ಜಾಡಿಸಿ ಒದೆಯಬೇಕು ಅನ್ನಿಸಿತಂತೆ ಇವನಿಗೆ!!
ಅಷ್ಟೇ ಇಂಟರೆಸ್ಟಿಂಗ್ ಆದದ್ದು ಇವನು ಗಾರೆ ಕೆಲಸದ ಹುಡುಗಿಯೊಬ್ಬಳ ಬಗ್ಗೆ ಬರೆಯುವ ’ಕೋವಿಯಂತಹ ಹುಡುಗಿ’ ಎನ್ನುವ ಅಧ್ಯಾಯ. ಇವನ ಗೆಳೆಯರ ಗುಂಪು ಅವಳನ್ನು ’ರೈಫಲ್’ ಅಂತ ಕರೀತಾ ಇದ್ದರಂತೆ!
ತೆಲುಗಿನಲ್ಲಿ ಹಲವು ಚಿತ್ರಗಳನ್ನು ಮಾಡಿದ ನಂತರ ಇವನು ’ರಂಗೀಲಾ’ ಮಾಡಿದ, ಹಿಂದಿ ಚಿತ್ರರಂಗ ಬೆಚ್ಚಿ ಕೂತಿತು. ದಕ್ಷಿಣದ ಈ ಹುಡುಗ ಅಲ್ಲಿನ ಮಾರುಕಟ್ಟೆಯನ್ನು ಅಲ್ಲಾಡಿಸಿ ಹಾಕಿದ್ದ. ಆಮೇಲೆ ’ದೌಡ್’ ಮಾಡಿದ. ಭೂಗತ ಲೋಕದವರ ಮಾನವೀಯ ಮುಖವನ್ನೂ ಪರಿಚಯಿಸುವ ’ಸತ್ಯ’ ಅಲ್ಲಿನ ಇನ್ನೊಂದು ಜಗತ್ತನ್ನೇ ತೋರಿಸಿತು. ಮನೋಜ್ ವಾಜಪೇಯಿ ಇಂದಿಗೂ ಭಿಕೂ ಮಾತ್ರೆಯಾಗಿಯೇ ಜಾಸ್ತಿ ಪರಿಚಿತ.  ಆಮೇಲೆ ಕೆಲವು ಚಿತ್ರಗಳು ಸೋತವು. ದಕ್ಷಿಣದವರೆಂದರೆ ಮೂಗು ಮುರಿಯುವ ಅಲ್ಲಿನವರು ಇನ್ನು ಈತನ ಕಥೆ ಮುಗೀತು ಅನ್ನುವಾಗ ’ಸರ್ಕಾರ್’ ಮಾಡಿದ. ಭಾಳಠಾಕ್ರೆಯ ಛಾಯೆಯಿದ್ದ ಪಾತ್ರವನ್ನು ಅಮಿತಾಭ್ ಎಷ್ಟು ಪರಿಣಾಮಕಾರಿಯಾಗಿ ಅಭಿನಯಿಸಿದ್ದರು ಅಂದರೆ, ಈತನಿಗೇ ವಿಶಿಷ್ಟವಾದ ನೆರಳು ಬೆಳಕಿನ ಫ್ರೇಮ್ ಗಳಲ್ಲಿ ಅಮಿತಾಭ್ ಮುಖದ ಪ್ರತಿಯೊಂದು ಕವಳಿಕೆ, ಪ್ರತಿಯೊಂದು ನೆರಿಗೆ ಸಹ ಪಾತ್ರ ನಿರ್ವಹಿಸಿದ್ದವು…
ಚಿತ್ರನಿರ್ಮಾಣಕ್ಕೆ ಒಂದು ಕಾರ್ಪೋರೇಟ್ ರೂಪ ಕೊಟ್ಟು ’ಕಂಪನಿ’ ಕಟ್ಟಿದ ಈತ ಗುರುತಿಸಿ, ಪರಿಚಯಿಸಿದ ಪ್ರತಿಭೆಗಳು ಒಂದೆರಡಲ್ಲ. ನಿರ್ದೇಶಕರಾದ ಶಿವ ನಾಗೇಶ್ವರ ರಾವ್, ಕೃಷ್ಣ ವಂಶಿ, ತೇಜ, ಅನುರಾಗ್ ಕಶ್ಯಪ್, ಶಿಮಿತ್ ಅಮೀನ್, ಸಂಗೀತಗಾರರಾದ ಇಸ್ಮಾಯಿಲ್ ದರ್ಬಾರ್, ಮಣಿಶರ್ಮ, ಗೀತಕಾರ ಮೆಹಬೂಬ್, ನಟಿ ಊರ್ಮಿಳಾ… ಹೀಗೆ.
ಆದರೆ ದುರಂತ ಎಂದರೆ ಇಂತಹ ಮಾಂತ್ರಿಕನ ಜೋಳಿಗೆಯೂ ಖಾಲಿಯಾಗುತ್ತದೆ …
ಈ ಪುಸ್ತಕದಲ್ಲಿ ಅವನ ಕಾಲೇಜು ದಿನಗಳ ಗ್ಯಾಂಗ್ ವಾರ್ ನ ಒಂದು ವಿವರ ಬರುತ್ತದೆ. ಒಂದು ಮಹಾಯುದ್ಧಕ್ಕಾಗುವಷ್ಟು ಯೋಜನೆ ಹಾಕಿ, ಜನ ಸೇರಿಸಿ, ವ್ಯೂಹ ರಚಿಸಿ ಕ್ಯಾಂಪೆಸ್ ಮಾರಾಮಾರಿ ಆಗಿ ರಾತ್ರಿ ಇವರನ್ನೆಲ್ಲಾ ಪೋಲೀಸ್ ಸ್ಟೇಶನ್ ನಲ್ಲಿ ಕೂಡಿ ಹಾಕುತ್ತಾರೆ. ಆಗ ಅಲ್ಲಿದ್ದ ಪಿ ಎಸ್ ಐ, ಯಾರೊಡನೆಯೋ ಫೋನಿನಲ್ಲಿ ಮಾತನಾಡುತ್ತಾ, ’ಏನಿಲ್ಲಾ, ಒಂದಿಷ್ಟು ಹುಡುಗರು ಸಣ್ಣ ಗಲಾಟೆ ಮಾಡಿದ್ರು’ ಎಂದು ಆ ಹುಡುಗರ ಪಾಲಿನ ಈ ಮಹಾನ್ ಯುದ್ಧವನ್ನು ಒಂದು ಕೋಳಿಜಗಳವೇನೋ ಎನ್ನುವಂತೆ ತಳ್ಳಿಹಾಕಿಬಿಡುತ್ತಾನೆ! ಬದುಕಿನ ದುರಂತ ಎಂದರೆ ಕಡೆಕಡೆಗೆ ಇವನ ಮಹಾನ್ ಯೋಜನೆಗಳಾದ ಚಿತ್ರಗಳ ಕಡೆಗೆ ಪ್ರೇಕ್ಷಕ ಇದೇ ಭಾವನೆ ತಳೆಯತೊಡಗುತ್ತಾನೆ.
ಕೇವಲ ೩೦ ನಿಮಿಷಗಳಲ್ಲಿ ಶಿವ ಎನ್ನುವ ಮಾಸ್ಟರ್ ಪೀಸ್ ನ ಕಥೆಯ ಹೊಳಹು ಕಂಡುಕೊಂಡ ಈ ಕಥೆಗಾರ ಆಮೇಲೆ ಕಳೆದುಹೋಗುತ್ತಾನೆ. ’ಕಲೆ ತನ್ನ ಮಾಂತ್ರಿಕತೆಯನ್ನು ಕಳೆದುಕೊಳ್ಳುವುದು’ ಅಂದ್ರೆ ಇದೇನಾ?
ಅಷ್ಟು ಬದ್ಧತೆಯಿಂದ, ಪ್ರೀತಿಯಿಂದ, ಸಿದ್ಧತೆಯಿಂದ ಮಾಡಿದ ಚಿತ್ರಗಳು ಯಾಕೆ ಸೋಲುತ್ತವೆ? ಅವನೇ ಪುಸ್ತಕದಲ್ಲಿ ಹೇಳುವ ಹಾಗೆ ’ಫಿಲಂ ಮೇಕರ್ ನ ಆಲೋಚನೆ, ಐಡಿಯಾ ಯಾವತ್ತಿನದೋ ಆಗಿರುತ್ತದೆ. ಆದರೆ ಭಿನ್ನ ವಯಸ್ಸಿನ, ಮನೋಧರ್ಮದ, ಅಭಿರುಚಿಯ ಪ್ರೇಕ್ಷಕ ಮಾತ್ರ ಫ್ರೆಶ್ ಮೂಡಿನಿಂದ ಥಿಯೇಟರ್ ಪ್ರವೇಶಿಸಿ, ಎರಡು ತಾಸಿನೊಳಗೆ ಚಿತ್ರದ ಮೌಲ್ಯ ಡಿಸೈಡ್ ಮಾಡಿಬಿಡುತ್ತಾನೆ’. ಎಷ್ಟೋ ಆಸೆ ಪಟ್ಟು ಮಣಿರತ್ನಂ ನಿರ್ದೇಶಿಸಿದ ’ಕಡಲ್’ ಚಿತ್ರ ನೋಡಲು ಹೋಗಿ, ಇಂಟರ್ ವಲ್ ನಲ್ಲಿ ಎದ್ದು ಬಂದಿದ್ದು ನೆನಪಾಯಿತು… ಅಮಿತಾಭ್ ನನ್ನಿಟ್ಟುಕೊಂಡು ಸರ್ಕಾರ್ ಮಾಡಿದ್ದ ರಾಮು ’ಲೋಲಿಟಾ’ ದಿಂದ ಸ್ಪೂರ್ತಿ ಪಡೆದು ಅದೇ ಅಮಿತಾಬ್ ನನ್ನಿಟ್ಟುಕೊಂಡು ನಿಶ್ಯಬ್ಧ್ ಮಾಡಿ ಸೋತಿದ್ದು ನೆನಪಾಯಿತು.. ಆಂಧ್ರದ ರಾಯಲಸೀಮಾದ ಕಥೆಯಾದ ರಕ್ತ ಚರಿತ್ರ ದಕ್ಷಿಣದವರನ್ನು ತಾಕುತ್ತಿತ್ತು, ಆದರೆ ಈತ ಅದನ್ನು ಹಿಂದಿಯಲ್ಲಿ ತೆಗೆದು ಅದನ್ನೊಂದು ಸಾಧಾರಣ ಮಾರಾಮಾರಿ ಚಿತ್ರವಾಗಿಸಿದ.  ಇನ್ನು ಆಗ್ ಅಂತೂ ಇವನ ಹೆಸರಿಗೆ ಬೆಂಕಿಯನ್ನೇ ಹಚ್ಚಿತು.
ಹಿಂದಿ ಚಿತ್ರರಂಗದ ದೊಡ್ಡತಲೆಗಳಿಗೆ ಎಂದೂ ಮಣೆ ಹಾಕದ ಇವನ ವ್ಯಕ್ತಿತ್ವ ಈಗಾಗಲೇ ಹಲವಾರು ವೈರಿಗಳನ್ನು ಆರ್ಡರ್ ಕೊಟ್ಟು ತಯಾರಿಸಿಟ್ಟುಕೊಂಡಿತ್ತು. ಇವನ ಸೋಲನ್ನೇ ಕಾಯುತ್ತಿದ್ದ ಎಲ್ಲರೂ ಇವನ ಮೇಲೆ ಮುಗಿಬಿದ್ದರು.
ಅಲ್ಲದೆ ಇವನ ವೈಯಕ್ತಿಕ ಸ್ವಭಾವ ಸಹ ಯಾವ ಸ್ನೇಹಿತರನ್ನೂ ಜೊತೆಗಿಟ್ಟುಕೊಳ್ಳುವಂತದ್ದಾಗಿರಲ್ಲ. ಯಾವುದೇ ಸಂಬಂಧವನ್ನು ಈತ ಧೀರ್ಘಕಾಲದವರೆಗೂ ನಿಭಾಯಿಸಿಯೇ ಇಲ್ಲ. ಹಾಗೆ ದೂರವಾದವರೆಲ್ಲರೂ ಇವನ ಬಗ್ಗೆ ಒಂದು ಕಹಿ ಇಟ್ಟುಕೊಂಡೇ ದೂರಾದವರು.
’ಇಂದು ನನ್ನ ಬರ್ತ್ ಡೇ, ನಿನ್ನ ಪ್ರಯಾಣವನ್ನು ನನಗಾಗಿ ಮುಂದೂಡಲಾರೆಯಾ’ ಎಂದು ಒಮ್ಮೆ ಇವನ ಆ ದಿನಗಳ ಗೆಳತಿ ಕೇಳಿದಳಂತೆ. ’ನಿನ್ನ ಬರ್ತ್ ಡೇ ಅಂದರೆ ಏನು ಸ್ಪೆಶಲ್, ನಿನ್ನ ಸಾಧನೆ ಏನು? ಸೊನ್ನೆ. ನಿನ್ನ ಅಪ್ಪ – ಅಮ್ಮ ನ ಮಿಲನದ ಆಕ್ಸಿಡೆಂಟಲ್ ಜೀವ ನೀನು ಅಷ್ಟೇ’ ಅಂದುಬಿಡುತ್ತಾನೆ. ಮುಂದೇ ಎಂದೋ ತಾನೇ ಅವಳ ಬರ್ತ್ ಡೇ ದಿನ ಅವಳಿಗೆ ಹಾರೈಸಲು ಫೋನ್ ಮಾಡುತ್ತಾನೆ…. ಆದರೆ ಅವಳು ಫೋನ್ ತೆಗೆಯುವುದಿಲ್ಲ. ನಾವು ಅರ್ಧದಾರಿಯಲ್ಲಿ ಬಿಟ್ಟುಬಂದವರ್ಯಾರೂ ಅಲ್ಲೇ ಕೂತಿರುವುದಿಲ್ಲ. ಸ್ವಲ್ಪ ಕಾದು, ಆಮೇಲೆ ಅವರು ತಮ್ಮ ಹಾದಿಯನ್ನು, ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಮತ್ತೆ ನಾವು ಮನಸ್ಸು ಬದಲಾಯಿಸಿ ವಾಪಸ್ ಹೋದರೆ ಅವರು ಸಿಗುವುದಿಲ್ಲ ಎಂಬ ಸತ್ಯ ಇಂತಹ ಬುದ್ಧಿವಂತನಿಗೆ ಅರಿವೇ ಆಗುವುದಿಲ್ಲ…
ತಾನೇ ಕಟ್ಟಿದ ಕಂಪನಿಯಲ್ಲಿ ಈಗ ಕೇವಲ ಕೆಲಸದವರು ಮಾತ್ರ ಇರುವ, ಸ್ನೇಹಿತರು, ಮನೆಯವರು ಯಾರೂ ಇಲ್ಲದ ಯಜಮಾನ ಈತ ಇಂದು.
ಪುಸ್ತಕ ಓದುವಾಗ ಮನಸ್ಸು ಅವನ ಚಿತ್ರಗಳಂತೆಯೇ ಅನೇಕ ತಿರುವುಗಳಲ್ಲಿ ಏರಿಳಿಯುತ್ತದೆ. ನಾನು ಬ್ಲಾಗಿನಲ್ಲಿ ಈ ಬರಹಗಳನ್ನು ಓದುತ್ತಿದ್ದಾಗ, ನನ್ನ ಮನಸ್ಸಿನಲ್ಲೇ ಒಂದು ಭಾಷಾಂತರ ಆಗುತ್ತಿತ್ತು. ಆಶ್ಚರ್ಯ ಅಂದರೆ ಹೂಬೇಹೂಬು ಅದೇ ಪದಗಳಲ್ಲಿ ಈ ಅನುವಾದ ಬಂದಿದೆ. ಕನ್ನಡದ್ದೇ ಪುಸ್ತಕ ಎನ್ನುವಂತೆ ಅನುವಾದ ಮಾಡಿದ ಸೃಜನ್ ಅವರಿಗೆ ನನ್ನ ಅಭಿನಂದನೆಗಳು.
ಲಾಸ್ಟ್ ಟೇಕ್ :
ರಾಮ್ ಗೋಪಾಲ್ ಆಲೋಚನಾ ಲಹರಿಯನ್ನು ಮುಖ್ಯವಾಗಿ ಪ್ರೇರೇಪಿಸಿದವರು ಅಂದರೆ ಫ್ರೆಡರಿಕ್ ನೀಶೆ, ಅಯಾನ್ ರಾಂಡ್ ಮತ್ತು ಆತನ ಎಂಜಿನಿಯರಿಂಗ್ ಸಹಪಾಠಿ ಸತ್ಯೇಂದ್ರ. ಪುಸ್ತಕ ಓದಿ, ಕಡೆಯಲ್ಲಿ ಸತ್ಯೇಂದ್ರ ಈತನ ಬಗ್ಗೆ ಬರೆದದ್ದು ಓದಿದೆ ….. ರಾಮುವನ್ನು ನಾನು ನೋಡುವ ದೃಷ್ಟಿಕೋನವನ್ನೇ ಅದು ಬದಲಿಸಿ ಹಾಕಿತು. ಇಂಗ್ಲಿಷ್ ನಲ್ಲಿರುವ ಅದನ್ನು ರಾಮು ಆಗಲಿ, ಸೃಜನ್ ಆಗಲಿ ಅನುವಾದ ಮಾಡಿಲ್ಲ. ಬಹುಷಃ ಯಾವ ಅನುವಾದವೂ ಅದನ್ನು ಹಾಗೆ ಕಟ್ಟಿಕೊಡಲಾಗದು. ಅದನ್ನು ಹಾಗೇ ಓದಬೇಕು ನೀವು.
 

‍ಲೇಖಕರು avadhi

May 24, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. sunil Rao

    ರಾಮ್ ಗೋಪಾಲ್ ವರ್ಮ ಥರ ನನಗೆ ನಮ್ಮ ಉಪೇ೦ದ್ರ ಕಾಣಿಸ್ತಾನೆ.
    ರಕ್ತ ಚರಿತ, ಫೂ೦ಕ್,ಸರ್ಕಾರ್, ಜ೦ಗಲ್ ಇತ್ಯಾದಿ ಚಿತ್ರಗಳನ್ನ ನೋಡಿದ್ದೇನೆ. ಆತನ ವೃತ್ತಿಪರತೆ ಇಷ್ಟ ಆಗತ್ತೆ.
    ಎ೦ದಿನ೦ತೆ ಬರಹ ಚೆನ್ನಾಗಿದೆ.

    ಪ್ರತಿಕ್ರಿಯೆ
    • Shashikala

      Thank you for introducing the many interesting facets of RGv’s personality. I have not read his blog but your article (specially his answers to the 2-3 questions u mentioned in your article) has impressed me to buy the kannada translation

      ಪ್ರತಿಕ್ರಿಯೆ
  2. chalam

    ’ಇಂದು ನನ್ನ ಬರ್ತ್ ಡೇ, ನಿನ್ನ ಪ್ರಯಾಣವನ್ನು ನನಗಾಗಿ ಮುಂದೂಡಲಾರೆಯಾ’ ಎಂದು ಒಮ್ಮೆ ಇವನ ಆ ದಿನಗಳ ಗೆಳತಿ ಕೇಳಿದಳಂತೆ. ’ನಿನ್ನ ಬರ್ತ್ ಡೇ ಅಂದರೆ ಏನು ಸ್ಪೆಶಲ್, ನಿನ್ನ ಸಾಧನೆ ಏನು? ಸೊನ್ನೆ. ನಿನ್ನ ಅಪ್ಪ – ಅಮ್ಮ ನ ಮಿಲನದ ಆಕ್ಸಿಡೆಂಟಲ್ ಜೀವ ನೀನು ಅಷ್ಟೇ’ ಅಂದುಬಿಡುತ್ತಾನೆ. ಮುಂದೇ ಎಂದೋ ತಾನೇ ಅವಳ ಬರ್ತ್ ಡೇ ದಿನ ಅವಳಿಗೆ ಹಾರೈಸಲು ಫೋನ್ ಮಾಡುತ್ತಾನೆ…. ಆದರೆ ಅವಳು ಫೋನ್ ತೆಗೆಯುವುದಿಲ್ಲ. ನಾವು ಅರ್ಧದಾರಿಯಲ್ಲಿ ಬಿಟ್ಟುಬಂದವರ್ಯಾರೂ ಅಲ್ಲೇ ಕೂತಿರುವುದಿಲ್ಲ. ಸ್ವಲ್ಪ ಕಾದು, ಆಮೇಲೆ ಅವರು ತಮ್ಮ ಹಾದಿಯನ್ನು, ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಮತ್ತೆ ನಾವು ಮನಸ್ಸು ಬದಲಾಯಿಸಿ ವಾಪಸ್ ಹೋದರೆ ಅವರು ಸಿಗುವುದಿಲ್ಲ ಎಂಬ ಸತ್ಯ ಇಂತಹ ಬುದ್ಧಿವಂತನಿಗೆ ಅರಿವೇ ಆಗುವುದಿಲ್ಲ….
    ಏನೆಲ್ಲಾ ಹೇಳಿಬಿಟ್ಟಿತು….rgv ಯನ್ನು ಅದ್ಬುತವಾಗಿ ಪರಿಚಯಿಸಿದ್ದೀರಿ.ಇನ್ನು ಪುಸ್ತಕ ಓದದೇ ವಿದಿಯಿಲ್ಲ.

    ಪ್ರತಿಕ್ರಿಯೆ
  3. ಅನಿತಾ ನರೇಶ್

    pustaka hudukuva kelasa kottiddakke dhanyavaadagalu 🙂 chennaagide

    ಪ್ರತಿಕ್ರಿಯೆ
  4. Mohan V Kollegal

    ಒಟ್ಟು ಪುಸ್ತಕವನ್ನೇ ಓದಿದಂತಾಯಿತು ನಿಮ್ಮ ಲೇಖನ ಓದಿದ ಮೇಲೆ. ಪುಟ್ಟಣ್ಣನವರ ಬಗ್ಗೆ ಒಮ್ಮೆ ಓದಿದ್ದಾಗಲೂ ಅವರೂ ಸಹ ಯಶಸ್ಸಿನ ಉತ್ತುಂಗಕ್ಕೇರಿ ಬಿದ್ದು ಮತ್ತೆ ಗೆದ್ದವರೆಂಬುದು ತಿಳಿದಿತ್ತು. ಹಾಗೇ RVG ಕೂಡ ಮತ್ತೆ ಎದ್ದು ಬರಲಿ. ಅವರ ‘ಕಡಲ್’ ಚಿತ್ರದಿಂದ ನನಗೂ ಕೂಡ ಭ್ರಮ ನಿರಸನವಾಗಿತ್ತು. ಸಿನಿಮಾ ಜರ್ನಿ ಜೊತೆಗೆ ಅವರ ಬಗ್ಗೆ ತಿಳಿದುಕೊಂಡಂತಾಯಿತು. ಓದಿಸಿದ್ದಕ್ಕೆ ವಂದನೆಗಳು… 🙂

    ಪ್ರತಿಕ್ರಿಯೆ
  5. Sandhya Bhat

    chanda ..vyaktiyobbana jeevana charitreya majalugalannu chure chooru tegedittu… sompoorna odalebekemba aase huttisiddeeri..:)

    ಪ್ರತಿಕ್ರಿಯೆ
  6. Tejaswini Hegde

    ನಾನೂ ಈತನ ಹಲವಾರು ಚಿತ್ರಗಳನ್ನು ನೋಡಿ ಮೆಚ್ಚಿದ್ದೇನೆ. ನಾಗಾರ್ಜುನ ಇಷ್ಟ ಆಗಿದೇ ಶಿವ ಚಿತ್ರದಿಂದ. ಪುಸ್ತಕ ಓದ್ಬೇಕಾಯ್ತು.. ಉತ್ತಮ ಪರಿಚಯ ಲೇಖನ.

    ಪ್ರತಿಕ್ರಿಯೆ
  7. bharathi bv

    ನಾವು ಅರ್ಧದಾರಿಯಲ್ಲಿ ಬಿಟ್ಟುಬಂದವರ್ಯಾರೂ ಅಲ್ಲೇ ಕೂತಿರುವುದಿಲ್ಲ. ಸ್ವಲ್ಪ ಕಾದು, ಆಮೇಲೆ ಅವರು ತಮ್ಮ ಹಾದಿಯನ್ನು, ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಮತ್ತೆ ನಾವು ಮನಸ್ಸು ಬದಲಾಯಿಸಿ ವಾಪಸ್ ಹೋದರೆ ಅವರು ಸಿಗುವುದಿಲ್ಲ ಎಂಬ ಸತ್ಯ ಇಂತಹ ಬುದ್ಧಿವಂತನಿಗೆ ಅರಿವೇ ಆಗುವುದಿಲ್ಲ…entha saalugalu! Adbhutha baraha sandhya … naanu odade ulidare satte hodenu …

    ಪ್ರತಿಕ್ರಿಯೆ
  8. prathibha nandakumar

    you should have given that passage when he says they could make out Sreedevi was coming to the location from a mile away by the dust that was being formed by the people running behind her car!! That description is absolutely marvelous…

    ಪ್ರತಿಕ್ರಿಯೆ
  9. lakshmikanth itnal

    ರಾಮ್ ಗೋಪಾಲ್ ವರ್ವಾ ಕುರಿತು ಬಹಳಷ್ಟು ತಿಳಿದುಕೊಂಡೆ, ಒಂದೇ ಬರಹದಲ್ಲಿ ಅವರ ಚಿತ್ರಣ ಹಿಡಿದ ವೈಖರಿಯ ಪರಿ ಅದ್ಭುತ, ಪುಸ್ತಕವನ್ನೇ ಓದಿದಂತಾಯಿತು,
    ಇನ್ನು ಪುಸ್ತಕ ಓದಲೇ ಬೇಕೆನಿಸಿದೆ…….ಸೃಜನ್ ಗೆ , ಪರಿಚಯಿಸಿದ ಸಂಧ್ಯಾಜಿಗೆ ಅಭಿನಂದನೆಗಳು

    ಪ್ರತಿಕ್ರಿಯೆ
  10. ಶಮ, ನಂದಿಬೆಟ್ಟ

    “ನಾವು ಅರ್ಧದಾರಿಯಲ್ಲಿ ಬಿಟ್ಟುಬಂದವರ್ಯಾರೂ ಅಲ್ಲೇ ಕೂತಿರುವುದಿಲ್ಲ. ಸ್ವಲ್ಪ ಕಾದು, ಆಮೇಲೆ ಅವರು ತಮ್ಮ ಹಾದಿಯನ್ನು, ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಮತ್ತೆ ನಾವು ಮನಸ್ಸು ಬದಲಾಯಿಸಿ ವಾಪಸ್ ಹೋದರೆ ಅವರು ಸಿಗುವುದಿಲ್ಲ ಎಂಬ ಸತ್ಯ ಇಂತಹ ಬುದ್ಧಿವಂತನಿಗೆ ಅರಿವೇ ಆಗುವುದಿಲ್ಲ…”
    hats offfffffff Sandhya for the beautiful lines….

    ಪ್ರತಿಕ್ರಿಯೆ
  11. ಹರ್ಷ

    ಉಹು೦! ಯಥಾ ಪ್ರಕಾರ ವರ್ಮಾನ ಚಿತ್ರಗಳ೦ತೆ ಈ ಪುಸ್ತಕವೂ ಕೂಡ. ಅ೦ಥಾ ವಿಶೇಷತೆಯಿಲ್ಲದ “ಹತ್ತರಲ್ಲನ್ನೊ೦ದು” ಅನ್ನಬಹುದಾದ ಪುಸ್ತಕ. “ಅವನನ್ನು ಜಾಡಿಸಿ ಒದೆಯಬೇಕು ಅನ್ನಿಸಿತಂತೆ ಇವನಿಗೆ” ಇದರ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾವನೆ ಇಲ್ಲ. ಹಾಗೆಯೇ, ಇಸ್ಮಾಯಿಲ್ ದರ್ಬಾರ್ ನನ್ನು ಪರಿಚಯಿಸಿದ್ದೂ ಕೂಡ ವರ್ಮಾ ಅಲ್ಲ.
    ನಿಮ್ಮ ಪರಿಚಯ ಲೇಖನ ಚೆನ್ನಾಗಿದೆ 🙂

    ಪ್ರತಿಕ್ರಿಯೆ
    • ಎನ್ ಸಂಧ್ಯಾ ರಾಣಿ

      ವರ್ಮಾನ ಚಿತ್ರಗಳ ಬಗ್ಗೆ ಹಾಗೂ ಅವನ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಯಿತು. ಪುಸ್ತಕದ ೫೫ ಪುಟದಲ್ಲಿ ’ಸ್ವರ್ಗದಲ್ಲಿರಬೇಕಾದ ದೇವತೆಯನ್ನು ನೆಲಕ್ಕಿಳಿಸಿದ್ದಕ್ಕೆ ಬೋನಿಕಪೂರ್‌ನನ್ನು ಜಾಡಿಸಿ ಒದೆಯಬೇಕೆನಿಸಿತು’ ಈ ಸಾಲು ಇದೆ ನೋಡಿ. ಇಸ್ಮಾಯಿಲ್ ದರ್ಬಾರ್ ನ ಪ್ರತಿಭೆಯನ್ನು ಇವನು ಗುರುತಿಸುತ್ತಾನೆ, ಆದರೆ ಅವನನ್ನು ಪರಿಚಯಿಸಿದ್ದು ಸಂಜಯ್ ಲೀಲಾ ಬನ್ಸಾಲಿ. ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು. 🙂
      ಸಂಧ್ಯಾರಾಣಿ

      ಪ್ರತಿಕ್ರಿಯೆ
  12. ಹರ್ಷ

    ಕ್ಷಮಿಸಿ. ಅದು “ವರ್ಮಾನ ಈಗಿನ ಚಿತ್ರಗಳ೦ತೆ…” ವರ್ಮಾ ಬಗ್ಗೆ ಓದುತ್ತಿದ್ದರೆ, ನನಗೆ ಯ೦ಡಮೂರಿ ನೆನಪಾಗುತ್ತಾರೆ. ಅವರೂ ಸಹ ವರ್ಮಾನ೦ತೆ ಚೆನ್ನಾಗಿ ಬರೆಯುತ್ತಿದ್ದರು. ಒ೦ದು peak levelಗೆ ಬ೦ದ ನ೦ತರ ಅವರ ಯಥಾಕಥಿತ ಬರವಣಿಗೆ ಸತ್ವ ಕಳೆದುಕೊ೦ಡಿತು. ಆಗ ಅವರು ಕ೦ಡುಕೊ೦ಡ ಹಾದಿ – personality development ಬಗ್ಗೆ ಬರೆಯುವುದು… RGVಯ ಕ್ಷಣ ಕ್ಷಣ೦, ರ೦ಗೀಲ, ಸತ್ಯ ಎಲ್ಲವೂ ಅದ್ಭುತ ಚಿತ್ರಗಳು. ಆವೆಲ್ಲ ಅವರು “ರಾಮು Camp” ಹುಟ್ಟು ಹಾಕುವ ಮುನ್ನ ಬ೦ದ ಚಿತ್ರಗಳು. ಅಲ್ಲಿ ಕಥೆಯೆಡೆಗೆ ವಿಶೇಷ ಆಸ್ಥೆ ಇತ್ತು. ಆದರೆ ಯಾವಾಗ ಅವರ Creativityಯನ್ನು Corporatise ಮಾಡಿದರೊ, ಆಗಲಿ೦ದ ಹೇಳಿಕೊಳ್ಳುವ೦ಥಹ ಚಿತ್ರಗಳು ಇಲ್ಲವೆ೦ದೇ ಹೇಳಬೇಕು.

    ಪ್ರತಿಕ್ರಿಯೆ
    • ಎನ್ ಸಂಧ್ಯಾ ರಾಣಿ

      ಹರ್ಷ ನಿಮ್ಮ ಈ ಮಾತು ನಿಜ, ನಾನು ಯಂಡಮೂರಿ ಓದುತ್ತಲೆ ಬೆಳೆದವಳು, ಪುಸ್ತಕವನ್ನು ಪ್ರೀತಿಸಿದವಳು, ಯಾವಾಗ ಆತ ಕೇವಲ ಮಿದುಳನ್ನು ಉಪಯೋಗಿಸಿ, ಆತ್ಮವಿಲ್ಲದ ಬರವಣಿಗೆ ಬರೆಯತೊಡಗಿದರೂ ಆಗಿನಿಂದ ಅವರ ಬರವಣಿಗೆಗಳು ನನಗೆ ದೂರ … ವರ್ಮ ಸಹ ಹಾಗಾದದ್ದು, ಮಣಿರತ್ನಂ ಸಹ ಖಾಲಿಯಾದದ್ದು ಎಂತಹ ದುರಂತ ಅಲ್ಲವಾ?

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: