ಸಂಪು ಕಾಲಂ : ಆತ್ಮಹತ್ಯೆ ಎಂಬ ಪ್ರಬಲ ದೌರ್ಬಲ್ಯ


ಬಲತಿರುವಿಗೆ ಅವಕಾಶವಿಲ್ಲದಿದ್ದರೂ ಹಠಾತ್ ಆಗಿ ತಿರುಗಿದ ಸ್ಯಾಂಟ್ರೋ ಕಾರ್ ಒಂದಕ್ಕೆ ಆಲ್ಮೋಸ್ಟ್ ನನ್ನ ಜೀವ ಸಿಕ್ಕಿಹಾಕಿಕೊಳ್ಳುತ್ತಿದ್ದ ಸಂದರ್ಭ. ನನ್ನ ಬಡಪಾಯಿ ದ್ವಿಚಕ್ರದ ಬ್ರೇಕ್ ನ ನರವೇ ಕಿತ್ತು ಹೋಗುವ ಹಾಗೆ ಒತ್ತಿ ಹಿಡಿದಿದ್ದಕ್ಕೆ ಹಾರಬೇಕಿದ್ದ ಪ್ರಾಣಪಕ್ಷಿ ಗಂಟಲಿಂದಿಣುಕಿ ಮತ್ತೆ ಒಳ ಸೇರಿತ್ತು! ನನ್ನ ಗಾಡಿ ಬ್ರೇಕ್ ನರಕ್ಕೆ ಏನಾಗದಿದ್ದರೂ ಆ ಸ್ಯಾಂಟ್ರೋ ಚಾಲಕನ ನರಗಳು ಬಿಳುಪಾದವು. ಅವನಿಂದ ಸಾಕಷ್ಟು ಕ್ಷಮೆ, ನನ್ನಿಂದ ಮತ್ತಷ್ಟು ಬೈಗುಳದ ಸೀನ್ ಜರುಗಿದ ನಂತರ ಎಲ್ಲರೂ ಅವರವರ ದಾರಿಯೆಡೆಗೆ.
ದಾರಿಯುದ್ದಕ್ಕೂ ಗಾಡಿ ಮುಂದೆ ಎಳೆಯುತ್ತಿದೆಯಾದರೂ ಆ ಕ್ಷಣಾರ್ಧದಲ್ಲಿ ಉಂಟಾದ ಶಾಕ್ ನಿಂದ ಹೊರಬಂದಿರಲಿಲ್ಲ. ಮೈ ಪೂರ ಸಣ್ಣ ನಡುಕ. ಹಣೆ, ಕಿವಿ ಬೆಚ್ಚಗಾಗಿತ್ತು. ಎದೆ ಢವಗುಟ್ಟುತ್ತಿತ್ತು. ನಗು ಬಂತು! “ಆ ಕ್ಷಣ ನಾನು ಸತ್ತೇ ಹೋಗಿದ್ದರೆ” ಎನ್ನಿಸಿದ್ದಕ್ಕೆ ಮನಸ್ಸು ಅಷ್ಟು ಗಾಬರಿಯಾಗಿತ್ತೋ ಅಥವಾ ಮತ್ತೇನೋ ಎಂದು ತಿಳಿಯಲಿಲ್ಲ. ಸಾವಿಗೆ ನಾವು ಎಷ್ಟು ಹೆದರುತ್ತೇವೆ! ಸತ್ತರೆ ಏನಾಗಬಹುದು? ಹೆಚ್ಚು ಎಂದರೆ ಪ್ರಾಣ ಹೋಗುತ್ತದೆ, ಜೀವನ ಪೂರ್ತಿ ಒಂದು ಅಸ್ತಿತ್ವವನ್ನು ತನ್ನದಾಗಿಸಲು ಹೋರಾಡುವ ಒಂದು ಜೀವ ಕ್ಷಣಾರ್ಧದಲ್ಲಿ ಇಲ್ಲವಾಗುತ್ತದೆ. ನಂತರ ಯಾವ ಆಸೆ, ಅಸ್ತಿತ್ವ, ಕನಸುಗಳಿಗೂ ಅರ್ಥವಿಲ್ಲ, ಬೆಲೆಯಿಲ್ಲ! ಆದರೂ ಇವೆಲ್ಲ ಗೊತ್ತಿದ್ದರೂ, ಜೀವನ ಪೂರ್ತಿ “ನಿಲುಕದ ನಕ್ಷತ್ರಕ್ಕಾಗಿ” ಹೋರಾಡುತ್ತಲೇ ಇರುತ್ತೇವೆ, ಕಾಯುತ್ತಲೇ ಇರುತ್ತೇವೆ. ಉಷಾ ಕಟ್ಟಿಮನಿ ಅವರು ಒಂದು ಬರಹದಲ್ಲಿ ತಿಳಿಸಿದಂತೆ ಬಹುಶಃ ಆ ಅತೃಪ್ತಿಯೇ ನಮ್ಮನ್ನು ಜೀವಿಸುವಂತೆ ಮಾಡುತ್ತದೆಯೇನೋ!…
ಛೆ! ಹಿಡಿತವಿಲ್ಲದೆ ಏನೇನೋ ಯೋಚಿಸುತ್ತದೆ ಮನಸ್ಸು ಎಂದು ಎದುರಿಗೆ ಸಿಗ್ನಲ್ ಸಿಕ್ಕಾಗ ಲಹರಿಯಲ್ಲಿ ತೇಲುತ್ತಿದ್ದ ಮನಸ್ಸು ಪ್ರಜ್ಞಾವಸ್ಥೆಗೆ ಮರಳಿತ್ತು. ಬದುಕು ಎಷ್ಟು ಅನಿಶ್ಚಿತ, ಎಂದು ಗೊತ್ತಿದ್ದರೂ ಅದನ್ನು ನಮ್ಮ ಮಾತುಕೇಳುವಂತೆ, ಸಾವು ಬಾರದಂತೆ ನಾವು ಎಷ್ಟು ಪ್ರಯತ್ನಿಸುತ್ತೇವೆ! ಸಾಯುವ ಪರಿಸ್ಥಿತಿ ಬರುತ್ತಿದೆ ಎಂದ ತಕ್ಷಣ ನಮಗೇ ಅರಿವಾಗದಷ್ಟು ವೇಗವಾಗಿ ನಮ್ಮ ಮೆದುಳು ಕೆಲಸ ಮಾಡಿರುತ್ತದೆ ಎಂದು ನೋಯುವಷ್ಟು ಜೋರಾಗಿ ಬ್ರೇಕ್ ಒತ್ತಿದ್ದ ನನ್ನ ಕೈ ಹೇಳುತ್ತಿತ್ತು. ಮೆದುಳು, ಮನಸ್ಸುಗಳ ಶಕ್ತಿಗೆ, ಅದರ ಮೆಕ್ಯಾನಿಸಮ್ ಗೆ ಆಶ್ಚರ್ಯ ಪಡುತ್ತಿರುವಷ್ಟರಲ್ಲೇ ಆಫೀಸ್ ನ ಗೇಟ್ ಮುಂದೆ ಬಂದು ನಿಂತಿತ್ತು ನನ್ನ ವಾಹನ. ಎಷ್ಟೆಲ್ಲಾ ಯೋಚನೆಗಳು ಕಲಕಿ ರಾಡಿಯಾಗಲು ಕಾರಣವಾದ ಆ ಸ್ಯಾಂಟ್ರೋ ಚಾಲಕನನ್ನು ಮತ್ತೊಮ್ಮೆ ನೆನೆದು, ಗಾಡಿ ಸ್ಟಾಂಡ್ ಹಾಕಿದೆ. ಇನ್ನು ಸಂಜೆಯವರೆಗೂ ಅದಕ್ಕೆ ನೆಮ್ಮದಿಯ ನಿಟ್ಟುಸಿರು!
ಸಾವು ಬದುಕುಗಳ ಗುಂಗಿನಲ್ಲೇ, ಕಡಿಮೆಯಾಗಿದ್ದರೂ ಇನ್ನೂ ಸಣ್ಣ ನಡುಕವಿದ್ದ ಕೈಗಳಲ್ಲೇ ಒಂದು ಕಪ್ ಚಹಾ ಹಿಡಿದು, ರಿಲ್ಯಾಕ್ಸ್ ಆಗೋಣ ಎಂದು ಕಂಪ್ಯೂಟರ್ ಮುಂದೆ ಕೂತೆ. ತಕ್ಷಣ ಕಂಡಿದ್ದೇ ಖ್ಯಾತ ನಟಿ ಜಿಯಾ ಖಾನ್ ಳ ಆತ್ಮಹತ್ಯೆಯ ಸುದ್ದಿ! ಮಾದಕ ಕಂಗಳ, ಮೋಹಕ ಬೆಡಗಿ, ಮೊದಲ ಚಿತ್ರವಾಗಿದ್ದರೂ (ನಿಶ್ಶಬ್ದ್) ನಿರರ್ಗಳವಾಗಿ ನಟಿಸಿ, ಮಾತು ಮಾತಿಗೂ “ಟೇಕ್ ಲೈಟ್” ಎನ್ನುತ್ತಾ, ದೇಹಪೂರ ಆತ್ಮವಿಶ್ವಾಸ ಜಿನುಗಿಸಿ ಸಿನೆಮಾರಂಗವನ್ನೂ, ಪ್ರೇಕ್ಷಕರನ್ನೂ ಬೆರಗಾಗಿಸಿದ್ದು ನೆನಪಾಯಿತು. ಆಗತಾನೆ ಜರುಗಿದ್ದ ನನ್ನ ಸ್ಯಾಂಟ್ರೋ ಗುದ್ದಾಟದಿಂದಲೋ ಎಂಬಂತೆ ಈ ವಿಷಯ ನನ್ನನ್ನು ಬಹಳವಾಗಿ ಕಾಡಿತ್ತು!
ನನಗೆ ತಿಳಿದಿದ್ದ, ಹತ್ತಿರದ ಕೆಲವರ ಆತ್ಮಹತ್ಯೆಗಳು, ಪ್ರಯತ್ನಗಳು ಕಣ್ಣ ಮುಂದೆ ತೇಲಿದವು. ಆತ್ಮಹತ್ಯೆ ಎಂದು ಮೊದಲು ಕೇಳಿದ್ದು ಕಬ್ಬನ್ ಪೇಟೆಯ ಒಂದು ಕತ್ತಲೆಯ ಮೂಲೆ ಮನೆಯ ಭಯಾನಕ ಕಿಟಕಿಯ ಕಂಡಾಗ! ಅಂದು ಆ ಪದ ಭೌತಿಕವಾಗಿಯೂ ನನ್ನಲ್ಲಿ ಭಯ ಹುಟ್ಟಿಸಿತ್ತು. ನಂತರ ಬೆಳೆದಂತೆ ಆತ್ಮಹತ್ಯೆಯ ಕಾಂಪ್ಲೆಕ್ಸಿಟಿಗಳು, ಅದರ ವಿಸ್ತಾರ ನಿಗೂಢ ಕಾರಣಗಳ ಪರಿಚಯ ಚೂರು ಪಾರೆಂಬಂತೆ ನನ್ನ ಅರಿವಿಗೆ ಬರತೊಡಗಿದ್ದವು. ಕನಸಿನಲ್ಲಿ ಹೊಂಡದೊಳಕ್ಕೆ ಕಾಲೆಡವಿ ಬಿದ್ದರೂ ಬೆಚ್ಚಿ ಎಚ್ಚರವಾಗಿಬಿಡುವ ಮನಸ್ಸು, ತಾನೇ ತಾನಾಗಿ ಇನ್ನು ಈ ಜೀವನ ಬೇಡ ಎಂಬ ಫುಲ್ ಸ್ಟಾಪ್ ಹಾಕುವುದಾದರೂ ಹೇಗೆ, ಅಷ್ಟು ಭಂಡ ಧೈರ್ಯ ಪಡೆಯುವುದಾದರೂ ಎಲ್ಲಿಂದ ಎಂಬ ಆತಂಕ, ಆಶ್ಚರ್ಯ! ಈ ಮನಸೆಂಬ ಮನಸು, ಪೂರ್ತಿ ಒಗಟು!

“ಸಾಯುವ ಭಯ ನಿಜಕ್ಕೂ ಬದುಕುವ ಆಸೆಗೆ ಸ್ಫೂರ್ತಿ” ಎಂಬ ನೀಲು ಕಾವ್ಯದ ಸಾಲುಗಳು ನೆನಪಿಗೆ ಬಂದವು. ಹೌದಲ್ಲವೇ, ಬದುಕಬೇಕು ಎಂಬ ಆಸೆ ಕಳೆದುಕೊಂಡವರು ಸಾವಿಗೆ ಹೆದರಲಾರರು. ಆದರೆ ಬದುಕಲು ಆಸೆ ಎಂದರೇನು? ಹಾಗೆ ನೋಡಿದರೆ ಪ್ರತಿ ಜೀವಿಗೂ ತನ್ನದೇ ಆದ ನೋವು, ದುಃಖಗಳಿರುತ್ತವೆ. ಜೀವನದಲ್ಲಿ ಪ್ರತಿ ವ್ಯಕ್ತಿ ಅಟ್ಲೀಸ್ಟ್ ಒಂದು ಬಾರಿಯಾದರೂ ನಾನು ಸಾಯಬೇಕು ಎಂದು ಯೋಚಿಸಿರುತ್ತಾನೆ. ಆದರೆ ಅಷ್ಟಕ್ಕೇ ಸಾಯಲು ಆಕ್ಚುಯಲಿ ಸಿದ್ಧರಾಗುತ್ತರೆಯೇ? ಸುರಗಿಯಲ್ಲಿ ಅನಂತಮೂರ್ತಿಯವರು ಹೇಳುತ್ತಾರೆ. ಅವರ ತಾಯಿ ಸದಾ ನಾನು ಸಾಯುತ್ತೇನೆ, ಸಾಯುತ್ತೇನೆ ಎಂದು ಹೇಳಿ ಅವರಿಗೆ ಅವರ ತಾಯಿಯ ಸಾವಿನ ಭಯ ಹುಟ್ಟಿ ಬಿಟ್ಟಿತ್ತಂತೆ! ಅವರು ಒಂದು ಕ್ಷಣ ಕಾಣದೆ ಹೋದರೆ, “ಅಮ್ಮಾ ಎಲ್ಲಿ ಸತ್ಯೇ?” ಎಂದು ಕೇಳುತ್ತಿದ್ದರಂತೆ. ಆದರೆ ಆಕೆ ಎಂದೂ ಹಾಗೆ ಮಾಡಲಿಲ್ಲ ಎಂದು ಬೆರಗಾಗಿದ್ದೆ ಎಂದು ತಿಳಿಹಾಸ್ಯವಾಗಿಸುತ್ತಾರೆ.
ನನ್ನ ಬಂಧು ಒಬ್ಬಾತ, ತಾನು ಚಿಕ್ಕವನಾಗಿದ್ದಾಗ, ಯಾರೋ ಅತ್ತೆ-ಸೊಸೆ ಜಗಳವಾಡುತ್ತಾ, ಸದಾ “ನಾನು ಭಾವಿಗೆ ಬೀಳುತ್ತೇನೆ” ಎನ್ನುತ್ತಿದ್ದರಂತೆ. ಹುಡುಗನಾಗಿದ್ದ ಈತನಿಗೆ, ಆಕೆ ಭಾವಿಗೆ ಬೀಳುವುದನ್ನು ನೋಡಬೇಕು ಎಂಬ ಹಂಬಲ! ಶಾಲೆಗೆ ಹೋದರೆ ಅಷ್ಟರಲ್ಲಿ ಎಲ್ಲಿ ಭಾವಿಗೆ ಬಿದ್ದುಬಿಡುತ್ತಾಳೋ, ನಾನು ನೋಡುವುದು ಎಲ್ಲಿ ತಪ್ಪಿಹೊಗುತ್ತದೋ ಎಂದು ರಜೆ ಹಾಕಿ ಮನೆಯಲ್ಲಿ ಕೂರುತ್ತಿದ್ದ ಭೂಪ, ಆ ಆಸೆ ಕೊನೆಗೂ ಈಡೇರಲಿಲ್ಲ ಎಂದು ಇಂದು ನಗುತ್ತಾ ನೆನಪ ಮೆಲುಕು ಹಾಕುತ್ತಾರೆ. ಹೀಗೆ ಯೋಚಿಸುತ್ತಾ ಹೋದಾಗ ತಿಳಿಯುವುದು, ಜೀವನ ಪ್ರೀತಿ ಎಂಬುದು ಒಂದು ಸಾಯಲಾರದ ಎಕ್ಸ್ಟಸಿ! ಅದು ಕಳೆದುಹೋಗುವುದು ಅಷ್ಟು ಸುಲಭವಲ್ಲ! ಮತ್ತೆ ಹೇಗೆ ಜನ ಪ್ರಾಣ ಕಳೆದುಕೊಳ್ಳುತ್ತಾರೆ!
ಮನಸ್ಸು ಎಷ್ಟು ಪ್ರಬಲವಾಗಿ ಗಟ್ಟಿಗೊಳ್ಳಬಹುದೋ ಅಷ್ಟೇ ದುರ್ಬಲವಾಗಲೂ ಬಹುದು. ದೌರ್ಬಲ್ಯ ನಮ್ಮನ್ನು ಹೆಚ್ಚು ಪ್ರೀತಿಸುತ್ತದೆ. ಅದಕ್ಕೆ ಬೇಗ ನಮ್ಮನ್ನಾವರಿಸುತ್ತದೆ. ಆ ದುರ್ಬಲ ಮನಸ್ಸು ತನ್ನ ಮಿತಿಮೀರಿದ ಹಂತ ತಲುಪುತ್ತಾ ಅತ್ಯಂತ ಕಠಿಣವಾಗಿಬಿಡುತ್ತದೆ. ಇಲ್ಲಿ ನಡೆಯುವ ಜಕ್ಸ್ಟಪೊಸಿಶನ್ ಗಮನಿಸಿ, ದೌರ್ಬಲ್ಯ ಹೆಚ್ಚಾಗುತ್ತಿದ್ದಂತೆ, ದುರ್ಬಲ ಮನಸ್ಸಿನ ಆಶಯಗಳು ಪ್ರಬಲವಾಗುತ್ತಾ ಹೋಗುತ್ತದೆ. ಆ ದೌರ್ಬಲ್ಯ ಯಾವುದೋ ಒಂದು ಕ್ಷಣದಲ್ಲಿ ತನ್ನ ತುತ್ತ ತುದಿಯನ್ನು ತಲುಪುತ್ತದೆ. ಆ ಕೊನೆ ಹಂತ ತಲುಪಿದ ಕ್ಷಣ ಮನುಷ್ಯ ಜೀವ ತೊರೆಯುತ್ತಾನೆ. ಆ ಕ್ಷಣ ಬುದ್ಧಿ ಮತ್ತು ಮನಸ್ಸಿನ ಸ್ಥಿಮಿತ ತಪ್ಪಿರುತ್ತದೆ. ಆದರೆ, ಆ ದುರ್ಬರ ಕ್ಷಣವನ್ನು ಹೇಗಾದರೂ ಮಾಡಿ ತಡೆದು ಬಿಟ್ಟರೆ, ಬಹುಶಃ ಆ ವ್ಯಕ್ತಿ ಮತ್ತೆ ಆತ್ಮಹತ್ಯೆಗೆ ಪ್ರಯತ್ನ ಪಡಲಾರ! ಇಂತಹ ಉದಾಹರಣೆಗಳು ಸಾಕಷ್ಟಿವೆ. ಇಂತಹ ಉದಾಹರಣೆಗಳನ್ನು ಕಂಡಾಗ ಕ್ಷಣದಲ್ಲಿ, ಸಾವು ತಪ್ಪಿಸಿ ಜೀವನದ ಹಾದಿ ಬದಲಾಯಿಸುವ ಈ ಪರಿ ನಮಗೆ ಒಲಿದಿದ್ದರೆ ಎಷ್ಟು ಚೆನ್ನ ಅನಿಸುವುದು ಹೌದು.

ಈ ರೀತಿ ನೂರಾರು ಸಾವಿನ ದವಡೆಯಂಚಿನ ಸಾವುಗಳನ್ನು ತಪ್ಪಿಸಿ “ನಮ್ಮ ನಡುವೆ ಸುಳಿದಾಡುವ ದೇವದೂತ” ಎನಿಸಿಕೊಂಡಿರುವ ವ್ಯಕ್ತಿಯೊಬ್ಬನಿದ್ದಾನೆ. ಆತನ ಹೆಸರು ಡಾನ್ ರಿಚಿ. ಆಸ್ಟ್ರೇಲಿಯಾ ಮೂಲದ ಈತ, “ದ ಗ್ಯಾಪ್” ಎನ್ನುವ ರಮಣೀಯ (ಆತ್ಮಹತ್ಯೆಗಳಿಗೆ ಅಷ್ಟೇ ಪಾತಕ) ತಾಣದ ಬಳಿ ವಾಸ. ಜೀವನಾಸೆ ತೊರೆದು ಸಾಯಲು ಈ ಗ್ಯಾಪ್ ಎಂಬ ಕ್ಲಿಫ್ ಹತ್ತಿರ ಜನ ಬಂದಾಗ, ಅತ್ಯಂತ ಪ್ರೀತಿಯ ಕಂಠದಲ್ಲಿ “Hello, why dont you come and have a cup of tea?” ಎಂದು ತನ್ನ ಮನೆಗೆ ಕರೆದೊಯ್ಯುತ್ತಾನೆ. ಒಂದಷ್ಟು ಪ್ರೀತಿಯ ಮಾತುಗಳು, ಬಿಸಿ ಚಹಾದೊಂದಿಗೆ ಒಂದಷ್ಟು ಸಾಂತ್ವನ, ಸಾಯಲು ಸಿದ್ಧರಾದವರ ಹಣೆಬರಹವನ್ನೇ ಬದಲಾಯಿಸಿಬಿಟ್ಟಿವೆಯಂತೆ! ಅಧಿಕೃತವಾಗಿ 160 ಸಾವುಗಳನ್ನು ಈತ ತಪ್ಪಿಸಿದ ದಾಖಲೆ ಇದ್ದರೂ, ಈತನ ಕುಟುಂಬದವರ ಪ್ರಕಾರ ಈತ 500 ಕ್ಕೂ ಹೆಚ್ಚು ಸಾವುಗಳನ್ನು ಯಮನ ವಿಳಾಸದಿಂದ ತಪ್ಪಿಸಿದ್ದಾನೆ. ಎಂದರೋ ಮಹಾನುಭಾವುಲು!
ಇಷ್ಟೆಲ್ಲಾ ಮಾಡಿದ ಈತ ಸಾಕಷ್ಟು ವರ್ಷಗಳು ಇದರ ಬಗ್ಗೆ ಯಾರಲ್ಲೂ ಹೇಳಿಕೊಂಡಿಲ್ಲವಂತೆ. ಆತನ ಪ್ರಕಾರ ಅತ್ಯಂತ ಅವಮಾನಿತ ವಿಷಯವೆನಿಸುವ ಈ ಆತ್ಮಹತ್ಯೆಯ ವಿಚಾರ ಪ್ರಚಾರಮಾಡತಕ್ಕದ್ದಲ್ಲ. ದಿನಗಳು ಉರುಳಿದಂತೆ, ತನ್ನ ಈ ಮಹತ್ಕಾರ್ಯವನ್ನು ಗಮನಿಸಿ ಸರ್ಕಾರ ಪ್ರಶಸ್ತಿ ಪುರಸ್ಕಾರವನ್ನೂ ಮಾಡಿದೆ. ತದನಂತರ ಈತ ತನ್ನ ಅನುಭವಗಳನ್ನು ಹೇಳಿಕೊಳ್ಳಲು ಮುಕ್ತನಾದ. ಆತನ ಕೆಲ ಮಾತುಗಳು ಹೀಗಿವೆ: “But all I do is smile, be kind and ask them if I can help them in some way. I listen and offer them an alternative, typically to come with me to have a cup of tea. My wife Moya greets them and gives them something to eat. She provides and strengthens an atmosphere of support.”
ಈ ವ್ಯಕ್ತಿ ಇಂದು ನಮ್ಮ ನಡುವೆ ಇಲ್ಲ. ಆದರೆ ಈತನ ಈ ಕಾರ್ಯ, ಆತ್ಮಹತ್ಯೆ ಮಾಡಿಕೊಳ್ಳುವವರಿಗೆ, ಮಾಡಿಕೊಳ್ಳುತ್ತಾರಲ್ಲಾ ಎಂದು ಮರುಕ ಪಡುವವರಿಗೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂಬುದಂತೂ ಸತ್ಯ. ಜಿಯಾ ಖಾನ್ ಳಿಗೆ ಒಬ್ಬ ಡಾನ್ ರಿಚಿ ಸಿಗಬಾರದಿತ್ತೆ ಎನಿಸಿತ್ತು!
 

‍ಲೇಖಕರು G

June 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Rj

    ಸಕಾಲಿಕ ಲೇಖನ.ಆತ್ಮಹತ್ಯೆಯಂಥ ಘಟನೆಗಳಿಗೆ ಇಂಥದೇ ನಿರ್ದಿಷ್ಟ ಕಾರಣ ಇರಬೇಕು ಅಂತ ನಿಯಮ ಇರಲಿಕ್ಕಿಲ್ಲ.ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಆತ/ಆಕೆ ತುಂಬ ಗಟ್ಟಿ ಧೈರ್ಯ ಮತ್ತು ಗಟ್ಟಿ ನಿರ್ಧಾರದವರಿರಬೇಕು ಅಂತ ಕಾಣಿಸುತ್ತದೆ.ಬೇರೆಯವರನ್ನು ಕೊಲೆ ಮಾಡಲು ಧೈರ್ಯ ಬೇಕಾಗಿಲ್ಲ.ಆದರೆ ನಮ್ಮನ್ನು ನಾವೇ ಕೊನೆಗಾಣಿಸಲು ಅಪಾರ ಧೈರ್ಯ ಬೇಕಾಗುತ್ತದೆ.ಆ ಧೈರ್ಯ ಜನ್ಮದತ್ತವಾಗಿ ಬಂದಿರಬಹುದು ಅಥವಾ ಮತ್ತಿನ ಅಮಲಿನಲ್ಲಿ ಆ ಕ್ಷಣಕ್ಕೆ ಹೊರಗಿನಿಂದ ಒದಗಿಬಂದಿರಬಹುದು..
    -Rj

    ಪ್ರತಿಕ್ರಿಯೆ
  2. prakash hegde

    ಆತ್ಮ ಹತ್ಯೆ ಒಂದು ಕ್ಷಣದ ನಿರ್ಧಾರ..
    ಆ ಕ್ಷಣ ತಪ್ಪಿದರೆ ಬದುಕಿಬಿಡುತ್ತಾರೆ..
    ಸಕಾಲಿಕ ಲೇಖನ.. ತುಂಬಾ ಇಷ್ಟವಾಯಿತು…
    ಧನ್ಯವಾದಗಳು..

    ಪ್ರತಿಕ್ರಿಯೆ
  3. Sreelakshmi

    Thumba olleya lekhana, nimma baravanigeyannu artha madikondare Don Richiya anupasthithiyallu bahalashtu athmagala hathye nilluvudaralli samshayavilla. Keep going…..All the very best Samyukthaji

    ಪ್ರತಿಕ್ರಿಯೆ
  4. Pushparaj Chowta

    ಸಕಾಲಿಕವಾಗಿ ಅದ್ಭುತ ಲೇಖನವೊಂದನಿತ್ತದ್ದಕ್ಕಾಗಿ ವಂದನೆ. ಎಲ್ಲರೂ ಅರಿಯಬೇಕಾದ ಸತ್ಯವಿದೆ ಇಲ್ಲಿ!

    ಪ್ರತಿಕ್ರಿಯೆ
  5. ಶಮ, ನಂದಿಬೆಟ್ಟ

    ಎಷ್ಟೊಂದು ನಿಜ ಸಂಯುಕ್ತಾ… ಅವಳಿಗೊಬ್ಬ ರಿಚಿ ಸಿಕ್ಕಿದ್ದಿದ್ದರೆ …

    ಪ್ರತಿಕ್ರಿಯೆ
  6. Shashikala M

    “ಸಾಯುವ ಭಯ ನಿಜಕ್ಕೂ ಬದುಕುವ ಆಸೆಗೆ ಸ್ಫೂರ್ತಿ”
    badukuva bhaya saavina selethakke spoorthi ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: