ಮತ್ತೆ ಬರೆದಿದ್ದಾರೆ ಹಸಿನಾ ಭಾನು ಮುಷ್ತಾಕ್

ನಾಗರಾಜ್ ಹೆತ್ತೂರು

’ನನ್ನದೂ ಹೆಜ್ಜೆ ಉಳಿಸಲು ಬರವಣಿಗೆ ಮತ್ತೆ ಆರಂಭಿಸಿದ್ದೇನೆ…’

ಭಾನು ಮುಷ್ತಾಕ್ ಮನದಾಳದ ಮಾತು

 

`ಅದು 2000 ನೇ ಇಸವಿ. ಹಾಸನದ ಸಂದರ್ಶಕರೊಬ್ಬರು ಜನವಾಹಿನಿ ಪತ್ರಿಕೆಗೆ ಒಂದು ಸಂದರ್ಶನ ಮಾಡಲು ಬಂದಿದ್ದರು. ಸಂದರ್ಶನದ ಮಧ್ಯೆ ಪ್ರಶ್ನೆಯೊಂದು ಬಂತು. `ಹಿಂದೂ ಧರ್ಮದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ಇಲ್ಲ ಹಾಗೇ ಮುಸ್ಲಿಂ ಧರ್ಮದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರಿಗೆ ಅವಕಾಶ ಇಲ್ಲ ಇದಕ್ಕೆ ಹೋರಾಟ ನಡೆಸುತ್ತೀರಾ…..? ಎಂದು ಕೇಳಿದ್ದರು. ಆದಕ್ಕೆ ನಾನು, ಧರ್ಮದ ವತಿಯಿಂದ ಅವಕಾಶ ಇದೆ ಆದರೆ ಕೆಲವು ಮುಸ್ಲಿಂ ಪುರುಷರ ನಿಲುವಿನಿಂದ ಪ್ರವೇಶ ಸಿಗುತ್ತಿಲ್ಲ ಎಂದಿದ್ದೆ. ಆದರೆ ಸಂದರ್ಶಕ ಅದು ಯಾವ ರೀತಿ ಅರ್ಥ ಮಾಡಿಕೊಂಡರೋ ನಂತರ ಹೇಳಿಕೆ ಪತ್ರಿಕೆಯಲ್ಲಿ ಬೇರೆಯದೇ ಬಂದಿತ್ತು. ನಾನು ಎದುರಿಸಿದ ಅತ್ಯಂತ ಕಠಿಣ ಸಂದರ್ಭಗಳು ಎದುರಾದವು. ನನ್ನನ್ನು ಧರ್ಮದಿಂದಲೇ ಉಚ್ಛಾಟಿಸುವ ಪ್ರಯತ್ನಗಳು ನಡೆದವು. ಇಡೀ ಸಂದರ್ಭವನ್ನು ಬೇರೆಯವರಲ್ಲ ನನ್ನ ಸಂಬಂಧಿಕರು ಅವರ ಸ್ವಾರ್ಥಕ್ಕಾಗಿ ಬಳಸಿಕೊಂಡರು. ನನ್ನ ಮೇಲೆ ಧಾರ್ಮಿಕ ಮುಖಂಡರನ್ನು ಎತ್ತಿಕಟ್ಟಿದರು. ಇದೇ ಸಂದರ್ಭ ನನ್ನ ಬೆಂಕಿ ಮತ್ತು ಮಳೆ ಕಥಾ ಸಂಕಲನ ಬಿಡುಗಡೆ ಆವತ್ತು ಕಥೆಗಳನ್ನು ಝರಾಜ್ಸ್ ಮಾಡಿ ಹಂಚಿದರು. ಈ ಘಟನೆ ತಿಳಿಯಾಗಲು 2 ತಿಂಗಳು ಬೇಕಾಯಿತು. ಇದನ್ನು ಮರೆಯಲು ಸಾಧ್ಯವೇ ಇಲ್ಲ. ಆ ಘಟನೆ ನಂತರ ನನ್ನ ಸೃಜನಶೀಲತೆಗೆ ಹಿನ್ನಡೆಯಾಯಿತು, ಅದರಿಂದ ಹೊರಬರಲು ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಆ ಘಟನೆ ದೂರಗಾಮಿ ಪರಿಣಾಮ ಬೀರಿತು ಇವನ್ನೆಲ್ಲ ನನ್ನ ಆತ್ಮಕತೆಗಳಲ್ಲಿ ಹೇಳುತ್ತಿದ್ದೇನೆ”

ಹೀಗೆಂದು ದೀರ್ಘ ನಿಟ್ಟುಸಿರು ಬಿಟ್ಟರು ಭಾನು ಮುಷ್ತಾಕ್.

ಗಿರೀಶ್ ಕಾಸರವಳ್ಳಿ ನಿರ್ದೇಶನದ ಹಸೀನಾ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ಭಾನು ಮೇಡಂ ಕಳೆದ ಐದಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಿಂದ ಸಾಕಷ್ಟು ದೂರವೇ ಉಳಿದಿದ್ದರು. ಎಲ್ಲೋ ಒಂದೊಂದು ಬಾರಿ ಲಂಕೇಶ್ ಗೆ , ವಿಶೇಷಾಂಕಗಳಿಗೆ ಬರೆಯುವುದು ಮತ್ತು ಕಾರ್ಯಕ್ರಮಗಳಿಗೆ ಹೋಗುವುದು ಬಿಟ್ಟರೆ ಸಾಹಿತ್ಯ ಕ್ಷೇತ್ರದಿಂದ ದೂರವೇ ಉಳಿದಿದ್ದರು. ಆದರೆ ಇದೀಗ ಅವರ ಅಭಿಮಾನಿಗಳಿಗೆ ಬಂಪರ್ ಎನ್ನುವಂತೆ ಒಟ್ಟೊಟ್ಟಿಗೆ ಅವರ ಮೂರು ಕೃತಿಗಳು ಹಾಸನದಲ್ಲಿ ಇದೇ ಭಾನುವಾರ ಬಿಡುಗಡೆ ಆಗುತ್ತಿವೆ. ಇಷ್ಟು ದಿನ ಸಾಹಿತ್ಯ ಕ್ಷೇತ್ರದಿಂದ ದೂರ ಇರಲು ಕಾರಣ ಏನು… ಮುಂದಿರುವ ಯೋಜನೆಗಳೇನು… ಕೋಮುವಾದ ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಮೇಡಂ ಉತ್ತರಿಸಿದ್ದಾರೆ.

ಪ್ರಶ್ನೆ : ಬಹಳ ವರ್ಷಗಳ ನಂತರ ನಿಮ್ಮ ಪುಸ್ತಕಗಳು ಬಿಡುಗಡೆಯಾಗುತ್ತಿವೆ…ಅದು ಒಂದೆ ಬಾರಿ ಮೂರು ಪುಸ್ತಕ, ಸಾಹಿತ್ಯ ಕ್ಷೇತ್ರದಿಂದ ಇಷ್ಟು ದಿನ ದೂರ ಉಳಿಯಲು ಕಾರಣ ಏನು…?

ಭಾನು ಮುಷ್ತಾಕ್ : ಹೌದು ನೀವು ಹೇಳಿದ್ದು ಸತ್ಯ. ಸಾಹಿತ್ಯ ಕ್ಷೇತ್ರದಿಂದ ದೂರವೇ ಉಳಿದಿದ್ದೆ. ಈಗ ಬಿಡುಗಡೆಯಾಗುತ್ತಿರುವುದು ಬಡವರ ಮಗಳು ಹೆಣ್ಣಲ್ಲ (ಅಭಿರುಚಿ ಪ್ರಕಾಶನ), ಇಬ್ಬನಿಯ ಕಾವು ಲೇಖನ ಸಂಗ್ರಹ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಕನ್ನಡಕ್ಕೆ ಅನುವಾದಿತ ಕೃತಿ ಬಿಡುಗಡೆಯಾಗುತ್ತಿವೆ. ನನ್ನ ಕೊನೆ ಕಾದಂಬರಿ ಸಪೀರಾ ಬಿಡುಗಡೆಯಾದ 7 ವರ್ಷದ ನಂತರ ಈ ಕೃತಿಗಳು ಹೊರಬರುತ್ತಿವೆ. ಇದರ ಬಗ್ಗೆ ನನಗೇ ಕುತೂಹಲ ಇದೆ. ಹೊಸ ಪುಸ್ತಕ ಬಿಡುಗಡೆ ಮಾಡಿದಂತೆ ಅನಿಸುತ್ತಿದೆ. ತುಂಬಾ ಗ್ಯಾಪ್ ಆಯಿತಲ್ಲ ಅದೇ ಕಾರಣ. 2007 ರ ನಂತರ ನಾನು ಸಾಹಿತ್ಯ ಕ್ಷೇತ್ರದತ್ತ, ಪ್ರಕಟಣೆ ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ವೃತ್ತಿ, ಕೌಟುಂಬಿಕ ಹೊರೆಗಳು, ಇಬ್ಬರು ಹೆಣ್ಣು ಮಕ್ಕಳ ಮದುವೆ, ಆರ್ಥಿಕ ಮುಗ್ಗಟ್ಟು, ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಅನಿವಾರ್ಯತೆಯಿಂದ ಇವುಗಳಿಗೆ ಮೊದಲ ಆಧ್ಯತೆ ಕೊಟ್ಟು ಸಾಹಿತ್ಯ ಕ್ಷೇತ್ರದಿಂದ ದೂರ ಉಳಿಯಬೇಕಾಯಿತು. ಈಗ ಈ ಎಲ್ಲಾ ಹೊರೆಗಳಿಂದ ಬಂಧಮುಕ್ತಗೊಂಡು ನಿಮ್ಮ ಮುಂದೆ ಕುಳಿತಿದ್ದೇನೆ. ಇದರ ಪರಿಣಾಮವೇ ಈ ಮೂರು ಕೃತಿಗಳ ಬಿಡುಗಡೆ. ಇದರಲ್ಲಿ ಬಡವರ ಮಗಳ ಹೆಣ್ಣಲ್ಲ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿ ಯಾಗಿತ್ತು ಇಬ್ಬನಿ ಕಾವು ಲಂಕೇಶ್ ಪತ್ರಿಕೆ ಸೇರಿದಂತೆ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಬಂದ ಲೇಖನಗಳ ಸಂಗ್ರಹ ಮತ್ತೊಂದು ಅನುವಾದಿತ ಕೃತಿ.

ಪ್ರಶ್ನೆ : ನಿಮ್ಮ ಬರಹಗಳು ಕೇವಲ ಮುಸ್ಲಿಂ ಕೇಂದ್ರೀಕೃತವಾಗಿರುವುದೇಕೆ…?

ಭಾನು ಮುಷ್ತಾಕ್ : ಅದು ಬಂಡಾಯದ ಉಛ್ರಾಯ ಕಾಲ. ನಾವೆಲ್ಲ ಬಂಡಾಯದ ಸಭೆಗಳಲ್ಲಿ ಭಾಗವಹಿಸುತ್ತಿದ್ದೆವು. ನಾನಂತೂ ಒಂದು ಶಿಬಿರವನ್ನೂ ಬಿಡದೆ ಭಾಗವಹಿಸುತ್ತಿದ್ದೆ. ಅಲ್ಲಿ ಪ್ರಸ್ತಾಪಕ್ಕೆ ಬರುತ್ತಿದ್ದ ವಿಷಯಗಳು ದಮನಿತರ, ದನಿ ಇಲ್ಲದವರ, ಕಷ್ಟಗಳ, ನೋವುಗಳ ಬಗ್ಗೆ ಇರುತ್ತಿದ್ದವು. ಹಾಗೆ ಇವೆಲ್ಲವೂ ದನಿ ಇಲ್ಲದವರ ಬಗ್ಗೆ ಬರೆಯುವಂತೆ ಪ್ರೇರೇಪಿಸಲ್ಪಟ್ಟವು. ಜತೆಗೆ ಇವು ವಾಸ್ತವತೆಗೆ ಹತ್ತಿರವಾಗಿ ಇದ್ದವಾದ್ದರಿಂದ ನನ್ನ ಸಮುದಾಯದ ಬದುಕಿಗೆ ಹತ್ತಿರವಾಗಿದ್ದವು. ಮುಖ್ಯವಾಗಿ ಮುಸ್ಲಿಂ ರ ಮಹಿಳೆ ಸೇರಿದಂತೆ ಅವರ ಒಳನೋಟ ಜಗತ್ತಿಗೆ ನಿಗೂಢವಾಗಿ ಕಾಣುತ್ತಿದ್ದರಿಂದ ಇದರ ಬಗ್ಗೆ ಬರೆಯಲು ಪ್ರಾರಂಭಿಸಿದೆ. ಯಾಕೆಂದರೆ ಅವರ ಬದುಕನ್ನು ಒಬ್ಬ ಮುಸ್ಲಿಂ ಮಹಿಳೆಯಾಗಿ ನಾನು ಹೇಳಲು ಸಾಧ್ಯ. ದಲಿತ ಹೆಣ್ಣುಮಗಳ ಸ್ಥಿತಿಯನ್ನು ದಲಿತಳೊಬ್ಬಳು ಹೇಳಲು ಸಾಧ್ಯ. ಈ ದೇಶದಲ್ಲಿ ಮುಸ್ಲಿಂ ಸಮುದಾಯದಲ್ಲೂ ಮನುಷ್ಯರಿದ್ದಾರೆ ಅವರದ್ದೇ ಆದ ಒಂದು ಬದುಕಿದೆ ಇವರ ಬದುಕನ್ನು ರೂಪಿಸುವುದರ ಅಗತ್ಯತೆ ಇದೆ ಎಂದು ಹೇಳಬೇಕಿತ್ತು. ಈ ನಿಟ್ಟಿನಲ್ಲಿ ಬರೆದೆ. ಈಗಾಗಲೇ ಗೊತ್ತಿರುವಂತೆ ಇತಿಹಾಸವನ್ನು ನೋಡಿದರೆ ಎಲ್ಲಾ ಧರ್ಮಗಳಂತೆ ಮುಸ್ಲಿಂ ಸಮುದಾಯದಲ್ಲೂ ಸಾಂಸ್ಕೃತಿಕ ಬಿಕ್ಕಟ್ಟುಗಳಿವೆ. ಧಾರ್ಮಿಕ ವ್ಯಾಖ್ಯೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಬಾಲ್ಯದ ಆಚರಣೆಗಳೆಗೂ ಈಗಿನ ಆಚರಣೆಗಳಿಗೂ ಕೆಲ ವ್ಯತ್ಯಾಸ ಇದೆ. ಬಾಲ್ಯದ ಸ್ಥಳೀಯ ಸಂಪ್ರದಾಯಗಳು ಹಿಂದೂ-ಮುಸ್ಲಿಂ ಒಂದೇ ಆಗಿದ್ದವು. ಆದರೆ ನಂತರದಲ್ಲಿ ಅಂತರ ಕಾಪಾಡುತ್ತಾ ಬಂದು ಈಗ ಸಂಪೂರ್ಣ ಬದಲಾಗಿದೆ. ಉದಾಹರಣೆಗೆ ಹಿಂದೆ ಹಿಂದೂ ಮುಸ್ಲಿಂ ಮದುವೆಗಳು ಒಂದೇ ರೀತಿ ಎಂಬಂತೆ ನಡೆಯುತ್ತಿದ್ದವು ಆದರೆ ಈಗ ಎಲ್ಲವೂ ಬದಲಾಗಿದೆ ಒಂದು ಹಂತದಲ್ಲಿ ಅಂತರ ಹೆಚ್ಚಾಗುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ ಅದನ್ನು ಹೇಳಿದರೆ ಮತ್ತೊಂದು ವಿವಾದ ಆಗುತ್ತದೆ ಹಾಗಾಗಿ ಅದು ಬೇಡ (ನಗು) ನಾನು ಕೇವಲ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಲ್ಲ.

ಪ್ರಶ್ನೆ : ಕೋಮುವಾದದ ವಿರುದ್ಧ ನೀವು ಸಾಕಷ್ಟು ಬಾರಿ ಧ್ವನಿ ಎತ್ತಿದ್ದೀರಿ ನಿಮ್ಮ ಪ್ರಕಾರ ಕೋಮುವಾದ ಎಂದರೆ ಏನು..?

ಭಾನು ಮುಷ್ತಾಕ್ : ಹಿಂದೆ ನಾನು ರೈತ ಸಂಘ, ದಲಿತ ಸಂಘರ್ಷ ಸಮಿತಿ ಕನ್ನಡ ಪರ ಚಳವಳಿಗಳೊಂದಿಗೆ ಗುರುತಿಸಿಕೊಂಡು ಬಾಗವಹಿಸಿದ್ದೇನೆ. ನಂತರ ಈ ಚಳವಳಿಗಳು ಕಾವು ಕಳೆದುಕೊಂಡ ನಂತರ ತಲೆ ಎತ್ತಿದ್ದೇ ಈ ಕೋಮುವಾದ. ಒಂದು ಕಾಲಘಟ್ಟದಲ್ಲಿ ಹಿಂದೂ ಕೋಮುವಾದ ಮತ್ತು ಮುಸ್ಲಿಂ ಕೋಮುವಾದ ಪೂರಕ ಮತ್ತು ಪ್ರೇರಕವಾಗಿ ಮೂಡಿ ಬಂದಾಗ ಇದರ ಮಧ್ಯೆ ನಮ್ಮಂತವರಿಗೆ ಸ್ಪೇಸ್ ಇರಲಿಲ್ಲ. ಎರಡೂ ಧರ್ಮಳಿಗೆ ಈ ಕೋಮುವಾದದ ಹಣೆಪಟ್ಟಿಗಳಿವೆ. ಮುಸ್ಲಿಂ ಕೋಮುವಾದದಿಂದ ಅಮಾಯಕ ಮುಸ್ಲಿಂ ಯುವಕರು ದಿಕ್ಕೆಟ್ಟಿ ಹೋಗಿದ್ದಾರೆ.  ದಿಕ್ಕು ದೆಸೆಯೇ ಇಲ್ಲದಂತಾಗಿದ್ದಾರೆ. ಇದಕ್ಕೆ ಉದಾಹರಣೆ ನಮ್ಮ ಸಕಲೇಶಪುರದ ಪತ್ರಕರ್ತ ಮಲ್ನಾಡ್ ಮೆಹಬೂಬ್ ಸಮಾಜಮುಖಿ ಹೋರಾಟ ಮಾಡಿ ಮುಖ್ಯವಾಹಿನಿಯಲ್ಲಿರುವ, ಪತ್ರಕರ್ತ, ಹೋರಾಟಗಾರ ಅಂತಹ ಯುವಕರನ್ನು ಯಾವುದೋ ಕೇಸ್ ನೆಪದಲ್ಲಿ ಗಡಿಪಾರು ಮಾಡುವಂಥದ್ದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಬದುಕುವುದಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಇದೆ. ಇಂತಹ ಘಟನೆಗಳು ಇಂದಿನ ಮುಸ್ಲಿಂ ಯುವಕರ ಉಳಿಗಾಲವನ್ನೇ ಪ್ರಶ್ನಿಸುವಂತೆ ಮಾಡಿವೆ. ನನ್ನ ಪ್ರಕಾರ ಮುಸ್ಲಿಂ ಕೋಮುವಾದ ಎಂದರೆ ಇಡೀ ಮುಸ್ಲಿಂ ಸಮುದಾಯದ ಅಭಿವೃದ್ಧಿಯನ್ನು ಧಾರ್ಮಿಕ ನೆಲೆಯಲ್ಲಿ ಹತ್ತಿಕ್ಕುವಂತಹ, ಧರ್ಮ ವಿರೋಧಿ ಕೃತ್ಯವನ್ನು ಧರ್ಮದ ಹೆಸರಲ್ಲಿ ಕೆಲವರು ಮಾಡುತ್ತಿದ್ದಾರೆ. ಅದು ಮುಸ್ಲಿಂ ಕೋಮುವಾದ. ಹಿಂದೂ ಕೋಮುವಾದದಲ್ಲಿ ರಾಜಕೀಯ ದುರ್ಲಾಭಕ್ಕಾಗಿ ಜನರನ್ನು ದುರ್ಭಳಕೆ ಮಾಡಿಕೊಳ್ಳುವುದು ಹಿಂದೂ ಕೋಮುವಾದ. ಇವೆರಡೂ ನಿಲ್ಲಬೇಕು. ಎರಡೂ ಕೂಡ ಸಮಾಜಕ್ಕೆ ಮಾರಕ.

ಪ್ರಶ್ನೆ : ಇತ್ತೀಚೆಗೆ ಮುಸ್ಲಿಂ ಸಮುದಾಯದಲ್ಲಿ ಬರೆಯುವರು ಕಡಿಮೆ ಆಗುತ್ತಿದ್ದಾರೆ ಎಂಬ ಕೂಗಿದೆ ನಿಜವೇ..?

ಭಾನು ಮುಷ್ತಾಕ್ : ನಿಜ ಹೇಳಬೇಕೆಂದರೆ ಇತ್ತೀಚೆಗೆ ನನಗೆ ಓದಲೂ ಸಮಯ ಸಿಕ್ಕಿಲ್ಲ. ಓದಿಯೂ ಇಲ್ಲ. ಓದಲು ಎಲ್ಲವನ್ನೂ ಈಗ ಇಟ್ಟುಕೊಂಡಿದ್ದೇನೆ. ಹೊಸ ತಲೆಮಾರಿನ ಪೈಕಿ ಆರಿಫ್ ರಾಜಾ ನಂತಹವು ಅತ್ಯುತ್ತಮವಾಗಿ ಬರೆಯುತ್ತಿದ್ದಾರೆ. ಕೆ. ಷರಿಫಾ, ರಜಿಯಾ ಮುಂತಾದವರಿದ್ದಾರೆ. ವಾಸ್ತವದಲ್ಲಿ ಮುಸ್ಲಿಂ ಯುವತಿಯರು ಬರವಣಿಗೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಆದರೆ ವಿದ್ಯಾವಂತರಾಗುತ್ತಿದ್ದಾರೆ. ಇದಕ್ಕೂ ಒಂದು ಕಾರಣ ಇದೆ. ನಮ್ಮ ಮುಸ್ಲಿಂ ಹೆಣ್ಣುಮಕ್ಕಳಗೆ ಉರ್ದು   ಮೀಡಿಯಂಗೆ ಸೇರಿಸಿದರೆ ಅದೇ ಗಂಡುಮಕ್ಕಳನ್ನು ಇಂಗ್ಲೀಷ್ , ಕನ್ನಡ ಮೀಡಿಯಂ ಗೆ ಸೇರಿಸುತ್ತಿದ್ದಾರೆ. ಸಾಂಸ್ಕೃತಿಕ ಹಿನ್ನೆಲೆ ಸಿಗಲಿ ಎಂದು ಉರ್ದು ಮೀಡಿಯಂಗೆ ಸೇರಿದ್ದರೂ ಬರವಣಿಗೆ ಕಡಿಮೆಯಾಗಿದೆ ಇದರ ಬಗ್ಗೆ ನನ್ನ ವಿಷಾಧವಿದೆ. ಇಲ್ಲಿ ಭಾಷೆ ಯಾವ ವೈಚಾರಿಕತೆಯನ್ನೂ ನೀಡಬೇಕೋ ಅದನ್ನು ನೀಡುತ್ತಿಲ್ಲ. ಬದಲಿಗೆ ಜ್ಞಾಪಕ ಶಕ್ತಿ ಹೆಚ್ಚಿಸುವ ಇಂಗ್ಲೀಷ್ ಬಗ್ಗೆ ವ್ಯಾಮೋಹ ದ ಬಗ್ಗೆ ಬೇಸರವಿದೆ.

ಪ್ರಶ್ನೆ : ಇಂದಿನ ಸಾಹಿತ್ಯ ಕ್ಷೇತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು..?

ಭಾನು ಮುಷ್ತಾಕ್ : ನನ್ನ ಪ್ರಕಾರ ಸಾಹಿತ್ಯ ಕ್ಷೇತ್ರದಿಂದ ಬದುಕು ನಡೆಯುವುದಿಲ್ಲ. ಸಂಪೂರ್ಣ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಯಲ್ಟಿ ಮೇಲೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಾನು ವ್ಯವಸ್ಥೆಯ ದ್ವಂದ್ವಗಳ ಕಾರಣಕ್ಕೆ ಬರವಣಿಗೆ ಆರಂಭಿಸಿದ್ದು. ಮೊದಲು ಮಾತಿನಲ್ಲಿ ಜಗಳ ಆಡುತ್ತಿದ್ದೆ. ನಂತರ ಅದು ವ್ಯರ್ಥ ಎನಿಸತೊಡಗಿತು. ನಂತರ ನನ್ನ ಒಳಗಿನ ನೋವನ್ನು, ಆಕ್ರೋಶವನ್ನು ವ್ಯಕ್ತಪಡಿಸಲು ಬರವಣಿಗೆ ಹಾದಿ ಹಿಡಿದೆ. ಆ ಆಕ್ರೋಶ ಫಲ ಕೊಟ್ಟಿದೆಯೇ ಎಂಬುದ ನನ್ನಲ್ಲಿ ಉತ್ತರವಿಲ್ಲ. ನನ್ನ ಆರಂಭದ ಬರವಣಿಗೆ ದ್ರವ್ಯವಾಗಿತ್ತು. ಆಕ್ರೋಷಕ್ಕೆ ತಕ್ಕಂತಹ ಭಾಷೆ ಕೊಡುವುದು ನನ್ನ ಉದ್ದೇಶವಾಗಿತ್ತು.

ಪ್ರಶ್ನೆ : ಹಸೀನಾ ಕಥೆಗೆ ರಾಷ್ಟ್ರಪ್ರಶಸ್ತಿ ಬಂತು, ಹೇಗೆ ಚಿತ್ರವಾಯಿತು ವಿವರಿಸಿ..?

ಭಾನು ಮುಷ್ತಾಕ್ : ನೀವು ಇದನ್ನು ನಂಬದಿರಬಹುದು ಆದರೆ ಸತ್ಯ. ನಾನು ಅಂದುಕೊಂಡಿದ್ದು ಆಗೇ ಆಗುತ್ತದೆ ಆದು ಯಾವುದೇ ರೀತಿಯಲ್ಲಾದರೂ ಹಸೀನಾ ಕೂಡ ಹಾಗೇ ಆಗಿದ್ದು. ನನಗೊಂದು ಆಸೆ ಇತ್ತು ನನ್ನ ಕತೆಯನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಬೇಕೆಂದು. ನನಗೆ ಕಾಸರವಳ್ಳಿ ಪರಿಚಯದವರೇ ಅಲ್ಲ. ಆದರೆ ಅವರ ಚಿತ್ರಗಳನ್ನು ನೋಡಿದ್ದೆ. ಹೀಗೆ ಒಂದು ದಿನ ನನಗೆ ಬೆಳಗ್ಗೆ ಕರೆ ಬಂತು. ನಾನು ಗಿರೀಶ್ ಕಾಸರವಳ್ಳಿ ಮಾತನಾಡುತ್ತಿದ್ದೇನೆ ಎಂದಾಕ್ಷಣಾ ನನಗೆ ಏನನ್ನಿಸಿತೋ ಏನೋ..? ನನ್ನ ಯಾವ ಕತೆಯನ್ನು ಸಿನಿಮಾ ಮಾಡುತ್ತಿದ್ದೀರಿ ಎಂದು ಕೇಳಿದೆ. ಅವರಿಗೆ ಅಚ್ಚರಿ ಆಗಿರಬಹುದು. ಬೆಂಕಿ ಮಳೆಯ ಕರಿನಾಗರಗಳು ಎಂದಿದ್ದೇ.. ಹಾದಾ ಎಂದೆ. ನಂತರ ಜಯನಗರಕ್ಕೆ ಕರೆಸಿಕೊಂಡು ಸಿಟ್ಟಿಂಗ್ ಆಗಿತು. ಅವರು ತಾರಾ ಅವರನ್ನು ಹಾಕಿಕೊಂಡು ಆಗಲೇ ಚಿತ್ರ ಮಾಡಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ 2 ವರ್ಷ ಕತೆ ಹುಡುಕುತ್ತಿದ್ದರು. ಈ ಕತೆಯನ್ನು ಪಬ್ಲಿಕ್ ಲೈಬ್ರರಿಯಿಂದ ತರಿಸಿಕೊಂಡು ಓದಿದ್ದರಂತೆ. ನಂತರ ತಾರಾ ಅವರಿಗೆ ಕೊಟ್ಟು ಒಮ್ಮೆ ಓದಿಸಿದರು. ತಾರಾ ಓಕೆ ಎಂದಿದ್ದೇ ನನಗೆ ಕರೆ ಮಾಡಿ ವಿಚಾರ ತಿಳಿಸಿದರು. ಚಿತ್ರಕ್ಕಾಗಿ ಇಡೀ ತಂಡ ಒಂದೊಳ್ಳೆ ಕೆಲಸ ಮಾಡಿದೆವು. ನಂತರ ಅದಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಈಗ ಇತಿಹಾಸ.

ಪ್ರಶ್ನೆ : ನಿಮ್ಮ ಸಾಹಿತ್ಯ ಕೃಷಿಗೆ ಮುಂದೆ ಗ್ಯಾಪ್ ಕೊಡುತ್ತೀರಾ ಅಥವಾ ಬರವಣಿಗೆ ನಿರಂತರವಾಗಿರಲಿದೆಯೇ..?

ಭಾನು ಮುಷ್ತಾಕ್ : ಇಲ್ಲ ನನ್ನ ವೃತ್ತಿ ಕಡೆ ಈಗ ಹೆಚ್ಚು ತೊಡಗಿಸಿಕೊಂಡಿಲ್ಲ. ಇನ್ನೇನಿದ್ದರೂ ಸಾಹಿತ್ಯ. ನನೆದುರು ಸಾಕಷ್ಟು ಪ್ರಾಜೆಕ್ಟ್ ಗಳಿವೆ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೊಸ ಪ್ರಯೋಗ ಎಂದರೆ ನಾನು ಮತ್ತು ಜನತಾ ಮಾಧ್ಯಮ ಪತ್ರಕರ್ತೆ  ಸುವರ್ಣ ಇಬ್ಬರೂ ಸೇರಿ ಒಂದು ಕಾದಂಬರಿ ಬರೆಯುತ್ತಿದ್ದೇವೆ. ಇದು ನನ್ನ ಮಟ್ಟಿಗೆ ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯೋಗ. ದಲಿತ ಹುಡುಗ ಮತ್ತು ಮುಸ್ಲಿಂ ಸಮುದಾಯದ ಹುಡುಗನ ಪ್ರೇಮದ ಹಿನ್ನೆಲೆಯಲ್ಲಿ ಎರಡೂ ಸಮುದಾಯದ ಸವಾಲುಗಳ ಕಥಾ ಹಂದರವುಳ್ಳ ಕಾದಂಬರಿ ಒಂದು ಚಾಲೆಂಜ್ ಆಗಿ ತೆಗೆದುಕೊಂಡಿದ್ದೇವೆ. ಜನ ಹೇಗೆ ಸ್ವೀಕರಿಸುತ್ತಾರೆ ನೋಡೋಣ. ಇನ್ನು ಅಂತರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರ ಆತ್ಮಕತೆ, ಡಾಕ್ಯುಮೆಂಟರಿ ಎರಡೂ ಕೆಲಸವನ್ನು ನಾನು ಮತ್ತು ಸುವರ್ಣ ಇಬ್ಬರೂ ಬರೆಯುತ್ತಿದ್ದೇವೆ. ಈ ಮಧ್ಯೆ ನನ್ನ ಆತ್ಮಕತೆಯನ್ನೂ ಬರೆಯುತ್ತಿದ್ದೇನೆ. ಆದಿಲ್ಷಾಹಿ ಸಾಹಿತ್ಯ ಚರಿತ್ರೆಯ 250 ಪುಟಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದ ಮಾಡುತ್ತಿದ್ದೇನೆ. ಇನ್ನು ನನ್ನ ಸಮಗ್ರ ಕಥಾ ಸಂಕಲನ ಕೂಡ ಸಿದ್ಧತೆ ಹಂತದಲ್ಲಿದೆ. ಕನ್ನಡ ಸಾಹಿತ್ಯದಲ್ಲಿ ನಾವೂ ಕೂಡ ಒಂದಿಷ್ಟು ಹೆಜ್ಜೆ ಹುರುತುಗಳನ್ನು ಬಿಟ್ಟು ಹೋಗಬೇಕಲ್ಲಾ ನಾಗರಾಜ್ (ನಗು) ಇಷ್ಟು ಪ್ರಾಜೆಕ್ಟ್ ಗಳು ನನ್ನ ಮುಂದಿವೆ. ( ಈ ಮಧ್ಯೆ ನಿಮ್ಮ ಆತ್ಮಕತೆ ಯಾವಾಗ ಎಂಬ ನನ್ನ ಪ್ರಶ್ನೆಗೆ) ನನ್ನ ಓದುಗರಿಗೆ (ಮೊದಲ ಓದುಗರು) ಈ ಕುತೂಹಲ ಸಹಜ. ಶೀಘ್ರದಲ್ಲೇ ಅದನ್ನು ನಿಮ್ಮೆದುರು ನೀಡುತ್ತೇನೆ.

ಪ್ರಶ್ನೆ : ಕೊನೆಯದಾಗಿ ನಿಮಗೂ ವಿವಾದಕ್ಕೂ ಬಹಳ ನಂಟಿದೆಯಲ್ಲಾ ಏನು ಕಾರಣ..?

ಭಾನು ಮುಷ್ತಾಕ್ : ನಿಜ ಹೇಳಬೇಕೆಂದರೆ ನನ್ನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಯಾವತ್ತೂ ವಿವಾದ ಆಗಿಯೇ ಇಲ್ಲ. ಆದರೆ ಇತರೆ ಮಾತುಗಳೇ ವಿವಾದಕ್ಕೆ ಕಾರಣವಾಗಿರುವುದು. ಅದು ನನ್ನ ತಪ್ಪಲ್ಲ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಪರಿಣಾಮ ಹೀಗಾಗುತ್ತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವಾಗ ಇಂತಹವುಗಳು ಸಹಜ ಆದರಿಂದ ಎದಗುಂದಬಾರದು ಅಷ್ಟೆ..

ಹೌದು..!

ಭಾನು ಮುಷ್ತಾಕ್ ಮೇಡಂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಲು ತಮ್ಮೆಲ್ಲ ಕೆಲಸಗಳಿಗೆ ತಿಲಾಂಜಲಿ ಇಟ್ಟು ಪುಸ್ತಕಗಳನ್ನು ಹರವಿಕೊಂಡು ಕುಳಿತಿದ್ದಾರೆ. ವಕೀಲಿ ವೃತ್ತಿ, ಓದು, ಸಾಹಿತ್ಯ ರಚನೆ ಸೇರಿದಂತೆ ಮಹಿಳಾಪರ ಹೋರಾಟಗಳಲ್ಲಿ ಇಂದಿಗೂ ನಿರಂತರವಾಗಿ ಪಾಳ್ಗೊಳ್ಳುವ ಮೂಲಕ ಮಹಿಳೆಯರ ದನಿಯಾಗಿಯೂ ಕಣಿಸಿಕೊಳ್ಳುತ್ತಿದ್ದಾರೆ. ಇವರ ಈ ಸಾಹಿತ್ಯ ಕೃಷಿ ಹೀಗೆಯೇ ಮುಂದುವರೆಯಲಿ ಎಂದು ಆಶಿಸೋಣ. ಅಂದ ಹಾಗೆ ಭಾನುವಾರ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅವರ ಮೂರು ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಇದೆ, ಸಾಹಿತಿಗಳಾದ ಅರುಣ್ ಜೋಳದ ಕೂಡ್ಲಿಗಿ, ನಿರ್ದೇ ಶಕ ಪಿ. ಶೇಷಾದ್ರಿ, ಬಸವರಾಜ ಸೂಳಿಭಾವಿ ಸೇರಿದಂತೆ ಹಿರಿಯ , ಕಿರಿಯ ಸಾಹಿತಿಗಳು ಬರುತ್ತಿದ್ದಾರೆ ತಪ್ಪದೇ ಬನ್ನಿ….

‍ಲೇಖಕರು avadhi

June 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. chalam

    ವಸ್ತು ಸ್ಥಿತಿಯ ಬಗ್ಗೆ ಮಾತನಾಡಿದರೆ ವಿವಾದವಾಗಿಯೇ ಆಗುತ್ತದೆ.ವಾಸ್ತವತೆಯನ್ನು ಹತ್ತಿಕ್ಕುವ ಕೆಲಸವನ್ನು ವಿವಾದಗಳು ಮಾಡುತ್ತಲೇ ಬಂದಿದೆ.ಮೀರುವಿಕೆಯ ಶಕ್ತಿಯಿರುವ ಬಾನು ಮೇಡಮ್‌ರವರಿಂದ ನಿರೀಕ್ಷೆಗಳಿವೆ.

    ಪ್ರತಿಕ್ರಿಯೆ
  2. chinnenahalli swamy

    ನೇರವಾಗಿ, ದಿಟ್ಟವಾಗಿ ಇದ್ದದ್ದಕ್ಕೆ ವಿಜಯಾ ದಬ್ಬೆ ಎಂಬ ಅಪ್ರತಿಮ ಪ್ರತಿಭೆ ಇಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಗಟ್ಟಿಯಾಗಿ ಉಳಿದಿರುವುದು. “ಧೈರ್ಯಂ ಸರ್ವತ್ರ ಸಾಧನಂ” ಎಂಬುದು ಬಾನು ಮೇಡಂ ಗೆ ಚೆನ್ನಾಗಿ ಅನ್ವಯಿಸಿದೆ.

    ಪ್ರತಿಕ್ರಿಯೆ
  3. Gururaja kathriguppe

    Last week in my comment I asked ‘where is Bhanu masthakh? 1980’s rebel star. madam replied with her come back. what a comeback? with three books. madam your return made us really happy. youngsters should learn lot from you and your experience.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: