ಸಂಧ್ಯಾರಾಣಿ ಕಾಲಂ : ಮಕ್ಕಳ ಕಣ್ಣುಗಳಲ್ಲಿ ಅವರ ಕನಸುಗಳಿಗೆ ಜಾಗವಿರಲಿ..

’ಅಮ್ಮ ಗೆಲ್ತಾರೆ ಅನ್ನಿಸುತ್ತಾ ನಿಮಗೆ?’,
’ಇಲ್ಲ.’.
’ಹಾ?! ಯಾಕೆ?’.
”ಜಗಳ ಆಡಬೇಡ’ ಅಂತ ಎಷ್ಟು ಹೇಳಿದ್ದೆ, ಆದರೆ ಜಗಳ ಆಡ್ತಾನೆ ಇದಾರೆ …. ಎಲ್ಲಕ್ಕೂ”ನನ್ ಮಗು ಮೇಲಾಣೆ, ನನ್ ಮಗೂ ಮೇಲಾಣೆ….’’
ಅಲ್ಲಿ ತೆರೆಯ ಮೇಲೆ ಆ ಕಂದನ ಅಮ್ಮ ರಣಚಂಡಿಯಾಗಿ ಜಗಳ ಆಡಿದ ದೃಶ್ಯಗಳು ಒಂದಾದ ಮೇಲೊಂದರಂತೆ ಬರ್ತಾ ಇದ್ದವು. ಅಮ್ಮನಿಂದ ತಿಂಗಳುಗಟ್ಟಲೆ ದೂರವಿದ್ದ ಆ ೧೦-೧೨ ವರ್ಷದ ಮಗುವನ್ನು ಕೂರಿಸಿಕೊಂಡು ಆ ದೃಶ್ಯಗಳನ್ನು ತೋರಿಸುವುದು ಕ್ರೌರ್ಯದ ಪರಮಾವಧಿ ಅನ್ನಿಸಿತು. ಅಷ್ಟರಲ್ಲಿ ಕಾರ್ಯಕ್ರಮದ ನಿರ್ವಾಹಕ ಅದನ್ನು ನಿಲ್ಲಿಸಲು ಸೂಚನೆ ಕೊಟ್ಟು, ’ಇದನ್ನು ನಿಮಗೆ ತೋರಿಸೋಕೆ ನನಗೆ ಇಷ್ಟ ಇಲ್ಲ’ ಎನ್ನುತ್ತಾ ಆ ಕ್ರೌರ್ಯದಿಂದ ತನ್ನನ್ನು ದೂರವಿಟ್ಟುಕೊಳ್ಳವನಂತೆ ಹೇಳಿದ. ಆ ಕಾರ್ಯಕ್ರಮದ ಎಲ್ಲರ ಕೆನ್ನೆಗೂ ಭಾರಿಸುವಂತೆ ಆ ಕೂಸು ಮುಗ್ಧವಾಗಿ ’ಇದು ನೋಡೋಕೆ ನನಗೂ ಇಷ್ಟ ಇಲ್ಲ’ ಅಂದಿತು. ಘಟಾನುಘಟಿಗಳೇ ಸಂಯಮ, ನಿಯಂತ್ರಣ ಕಳೆದುಕೊಂಡು ಅತ್ತು, ಚೀರಾಡಿ, ವಾದ ಮಾಡಿ, ಕುಸಿದುಹೋಗಿದ್ದ ಕಾರ್ಯಕ್ರಮದಲ್ಲಿ ಈ ಪುಟಾಣಿ ತಣ್ಣನೆಯ ದನಿಯಲ್ಲಿ ಕಾಪಿಟ್ಟುಕೊಂಡ ಘನತೆಗೆ ನನ್ನ ಕಣ್ಣಲ್ಲಿ ನೀರು ಬಂದಿತ್ತು.
ಅವನು ಆರ್ಯ, ನಿರ್ವಾಹಕ ಶೋಮ್ಯಾನ್ ಶಿಪ್ ಅಂದರೆ ಏನು ಅಂತ ತೋರಿಸಿಕೊಟ್ಟ ನಟ ಸುದೀಪ್. ಕಾರ್ಯಕ್ರಮ ಬಿಗ್ ಬಾಸ್. ಹಿಂದಿಯಲ್ಲಿ ಇದೇ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅಮಿತಾಬ್, ಸಂಜಯ್ ದತ್ ಮತ್ತು ಸಲ್ಮಾನ್ ಗಿಂತ ಒಂದು ಕೈ ಮೇಲು ಎನ್ನುವಂತೆ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸುದೀಪನಂತಹ ಸುದೀಪನ ಕಣ್ಣುಗಳನ್ನೂ ಈ ಪುಟ್ಟನ ಮಾತು ಒದ್ದೆಯಾಗಿಸಿತು, ಮೊದಲ ಬಾರಿ ಸುದೀಪ್ ವೇದಿಕೆಯ ಮೇಲೆ ಮಾತು ಕಳೆದುಕೊಂಡಿದ್ದ. ಬಿಗಿದ ಕಂಠದಿಂದ ಈ ಹುಡುಗನನ್ನು ಹತ್ತಿರ ಕರೆದು ’ಅಮ್ಮ ಇಸ್ ಎ ಗುಡ್ ಲೇಡಿ ಆರ್ಯ, ಶಿ ಇಸ್ ಪ್ಲೇಯಿಂಗ್ ಎ ಗೇಮ್ ಅಷ್ಟೆ. ಅಲ್ಲಿ ಅವರಿಗೆ ನಿನ್ನ ಬಿಟ್ಟು ಇನಾರು ನೆನಪಿಗೆ ಬರ್ತಾರೆ ಹೇಳು… ಅದಕ್ಕೆ ನಿನ್ನ ಮೇಲೆ ಆಣೆ ಇಡ್ತಾರೆ’ ಎಂದು ಬಾಚಿ ಅಪ್ಪಿ ಹಿಡಿದಾಗ ಅಲ್ಲಿ ಶೋ ಮ್ಯಾನ್ ಸುದೀಪ್ ಹಿಂದೆ ಸರಿದು, ತಂದೆಯಾಗಿ ಸುದೀಪ್ ಗೆದ್ದಿದ್ದ.
ನನ್ನನ್ನು ಕಲಕಿದ್ದು, ಒಂದೇ ಸಮಯದಲ್ಲಿ ಖಿನ್ನಳಾಗಿಸಿ, ಮೆಚ್ಚಿಗೆಯನ್ನೂ ಗಳಿಸಿದ್ದು ಆ ಪುಟಾಣಿಯ ಪ್ರಬುದ್ಧತೆ. ಮರು ದಿನ ಅಮ್ಮನನ್ನು ನೋಡಲು ಕೆಲವೇ ಕ್ಷಣ ಅವಕಾಶ ಸಿಕ್ಕಿದಾಗ ಅಮ್ಮನ ತಲೆ ಸವರುತ್ತಾ ಸಮಾಧಾನ ಮಾಡುತ್ತಾ ಇದ್ದ ಮಗು, ಯಾರೂ ಇಲ್ಲದ ಕೋಣೆಗೆ ಹೋದಾಗ ನೀರವವಾಗಿ ಕಣ್ಣೀರಿಟ್ಟು ’ಅಮ್ಮನನ್ನ ಇನ್ನೊಂದು ಸಲ ನೋಡಬಹುದಾ’ ಅಂದಿತ್ತು. ಆ ಕ್ಷಣ ಅನ್ನಿಸಿದ್ದು ಅಲ್ಲಿದ್ದ ಎಲ್ಲರಿಗಿಂತಾ ಈ ಹುಡುಗ ಪ್ರೌಢ ಅಂತ.
 
ಹಾಗೆ ನನಗನ್ನಿಸಿದ್ದು ಇದೇ ಮೊದಲಲ್ಲ. ನನ್ನ ಸುತ್ತ ಮುತ್ತಲಿನ ಅನೇಕ ಹದಿಹರೆಯದ ಹುಡುಗ ಹುಡುಗಿಯರನ್ನು ನೋಡಿದಾಗಲೂ ನನಗೆ ಹೀಗೇ ಅನ್ನಿಸಿದೆ. ಅವರ ಯೋಚನಾಶಕ್ತಿ, ಆಲೋಚನೆಗಳಲ್ಲಿನ ಸ್ಪಷ್ಟತೆ, ತಮ್ಮ ಜೀವನ ಹೀಗೆ ಇರಬೇಕು, ತಮ್ಮ ವೃತ್ತಿ ಬದುಕು ಹೀಗೆ ಮುಂದುವರೆಯಬೇಕು ಎಂದು ನಿರ್ಧರಿಸಿ ಅದಕ್ಕಾಗಿ ಢೃಢವಾಗಿ ಒಂದೊಂದೇ ಹೆಜ್ಜೆ ಇಟ್ಟು ಹೋಗುವ ಪರಿ …. ಅರೆ ಈ ವಯಸ್ಸಿನಲ್ಲಿ ನನಗೆ ಅವರಷ್ಟು ಪ್ರಬುದ್ಧತೆ ಇರಲಿಲ್ಲವಲ್ಲ ಅನಿಸಿಬಿಡುತ್ತದೆ. ಅವರ ಹುಡುಕಾಟ, ತಿರುಗಾಟ, ಮೊಬೈಲ್ ಹುಚ್ಚು, ಮ್ಯಾಕ್ ಡೊನಾಲ್ಡ್ಸ್ ಕ್ರೇಜು ಇವುಗಳೆಲ್ಲದರ ಇರುವಿಕೆಯಷ್ಟೇ ಸತ್ಯ ಅವರಲ್ಲಿನ ಪ್ರಬುದ್ಧತೆ ಸಹ.
ನನ್ನ ಕಸಿನ್ ಒಬ್ಬಳ ಮಗ ಓದುತ್ತಿರುವಾಗಲೇ ತನ್ನ ಸಹಪಾಠಿಯನ್ನು ಪ್ರೀತಿಸಿದ್ದ. ಈ ವಯಸ್ಸಿಗೆ ಅವನು ದುಡುಕಿ ಒಂದು ಕಮಿಟ್ ಮೆಂಟಿಗೆ ಒಳಪಡುವುದು ಅವಳಿಗೆ ಇಷ್ಟ ಇರಲಿಲ್ಲ. ಅಲ್ಲದೆ ಒಂದು ಶರ್ಟು, ಟೀ ಶರ್ಟು ತೆಗೆದುಕೊಳ್ಳಬೇಕಾದರೂ ತನ್ನ ಮೋರೆ ನೋಡುವ ಹುಡುಗ ಜೀವನದ ಇಷ್ಟು ದೊಡ್ಡ ನಿರ್ಣಯವನ್ನು ತನಗೊಂದು ಮಾತೂ ಕೇಳದೆ ತೆಗೆದುಕೊಂಡ ಅನ್ನುವುದೇ ಅವಳಿಗೊಂದು ಶಾಕ್. ಹಾಗಾದರೆ ಇನ್ನು ಮುಂದೆ ಅವನ ಜೀವನದಲ್ಲಿ ತನಗೆ ಸ್ಥಾನವೇ ಇರುವುದಿಲ್ಲವೇನೋ ಎನ್ನುವ ಅಭದ್ರತೆಯಲ್ಲಿ ಅವಳು ಕುಸಿದು ಹೋಗುತ್ತಿದ್ದಳು. ಅವರ ಮನೆಯ ನೆಮ್ಮದಿಯೇ ಹಾರಿ ಹೋದಂತಾಗಿತ್ತು.

ನನಗೆ ವಿಸ್ಮಯ, ಮೆಚ್ಚುಗೆ ಹುಟ್ಟಿಸಿದ್ದು ಆ ಸಂದರ್ಭದಲ್ಲಿ ಆ ಹುಡುಗ ನಡೆದುಕೊಂಡ ರೀತಿ. ಅವ ಹಟ ಹಿಡಿಯಲಿಲ್ಲ, ತನ್ನ ಕೋಣೆ ಸೇರಿ ಬಾಗಿಲು ಹಾಕಿಕೊಳ್ಳಲಿಲ್ಲ, ಓದಿನಲ್ಲಿ ಹಿಂದೆ ಬೀಳಲಿಲ್ಲ, ತಮ್ಮನಿಗೆ ಮೊದಲಿನಂತೆ ಪಾಠ ಹೇಳಿಕೊಟ್ಟ, ಮನೆಯ ಕೆಲಸಗಳಲ್ಲಿ ಹಿಂದಿನಂತೇ ಭಾಗವಹಿಸಿದ, ಅಮ್ಮನನ್ನು ಇನ್ನೂ ಹೆಚ್ಚು ಪ್ರೀತಿಸಿದ, ಆದರೆ ಎಂದಿಗೂ ’ಆ ಹುಡುಗಿಯನ್ನು ಮರೆಯುತ್ತೇನೆ’ ಎಂದು ಅಪ್ಪಿ ತಪ್ಪಿ ಸಹ ಹೇಳಲಿಲ್ಲ. ಎಲ್ಲರ ನಡುವಿರುವಾಗ ಫೋನ್ ಬಂದರೆ ಗಂಭೀರವಾಗಿ ಎದ್ದು ಹೋಗುತ್ತಿದ್ದ.
ಆದರೆ ಬರಬರುತ್ತಾ ಫೋನ್ ಬರುವುದು ಕಡಿಮೆ ಆಯ್ತು. ಮೊದಲಿನಿಂದಲೂ ನನ್ನ ಮಡಿಲಲ್ಲೇ ಬೆಳೆದ ಹುಡುಗ … ಹಿಂಜರಿಯುತ್ತಲೇ ಈ ಬಗ್ಗೆ ಕೇಳಿದೆ. ’ಹೌದು ಚಿಕ್ಕಮ್ಮ, ಮದುವೆ ಆಗಬೇಕು ಅಂತಲೇ ಪ್ರೀತಿಸಿದ್ದು. ಕೆಲವು ಸಮಸ್ಯೆಗಳಿದ್ದವು, ಪರಿಹರಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಾಗಿ ಇಬ್ಬರೂ ಬೇರೆಯಾಗುವ ನಿರ್ಧಾರ ತೆಗೆದುಕೊಂಡೆವು..’, ಹುಡುಗ ನೇರವಾಗೇ ಹೇಳಿದ್ದ. ಅವನ ದನಿ ಕುಗ್ಗಿತ್ತು, ಕಣ್ಣಲ್ಲಿ ನೋವಿತ್ತು, ಆದರೆ ಒಂದು ವಿಷಯವನ್ನು ನೇರಾನೇರ ಎದುರಿಸಿ ಪರಿಹರಿಸಿಕೊಂಡ ಪ್ರೌಢತೆಯೂ ಇತ್ತು. ನನ್ನ ಕಣ್ಣಿಗೆ ಅದುವರೆಗೂ ಪುಟ್ಟ ಹುಡುಗನಂತೆ ಕಂಡಿದ್ದವನು, ಪ್ರೌಢನಾಗಿ ಕಂಡ.
ಏನು ಹೇಳಲಿ ಈ ಹುಡುಗನಿಗೆ? ಪ್ರೀತಿ ಮಾಡಿರುವೆ, ಏನೇ ಆಗಲಿ ಅನುಭವಿಸಬೇಕು ಅವಳೊಡನೆ ಎಂದು ಹೇಳಲಾ? ಪ್ರೀತಿಗೆ ಮೀರಿಯೂ ಇನ್ನೂ ಜೀವನ ಇದೆ ಎಂದು ನಿಂತವನ ಎದುರು ನಾನು ಏನು ಮಾತಾಡಲಿ? ಅಥವಾ ನಾನು ’ಬುದ್ಧಿ’ ಹೇಳಬೇಕು ಯಾಕೆ? ನಾನು ಹೇಳುವುದು ನಿಜಕ್ಕೂ ಬುದ್ಧಿವಾದವಾ? ಇಷ್ಟಕ್ಕೂ ನಾನು ಹೇಳುವುದೇ ಸರಿ ಅನ್ನಲು ನನಗಿರುವ ಮಾನದಂಡಗಳಾದರೂ ಯಾವುವು?
ಪ್ರತಿ ಕಾಲಘಟ್ಟವೂ ಜನರೆದುರಿಗೆ ಭಿನ್ನ ಭಿನ್ನವಾದ ಸವಾಲುಗಳನ್ನು ಇಡುತ್ತದೆ. ನಾನು ಕಂಡುಕೊಂಡ ಉತ್ತರಗಳು ನನ್ನ ಕಾಲಮಾನಕ್ಕೆ ಸರಿ ಇರಬಹುದು. ಆದರೆ ಈಗ ಬದುಕು, ಸಮಾಜ ಮಕ್ಕಳೆದುರಿಗೇ ಬೇರೆಯದೇ ಆದ ಸವಾಲುಗಳನ್ನೆಸೆದಿದೆಯಲ್ಲಾ… ನನ್ನ ಬಳಿ ನಾನು ಕಂಡುಕೊಂಡ ಉತ್ತರಗಳೇನೋ ಇದೆ, ಆದರೆ ಬದುಕು ಪ್ರಶ್ನೆ ಪತ್ರಿಕೆಯನ್ನೆ ಬದಲಿಸಿ ಹಾಕಿದೆ. ಇಲ್ಲಿ ನನ್ನ ಉತ್ತರಗಳೇ ನಿನ್ನವು ಎನ್ನುವುದು ಎಷ್ಟು ಪ್ರಸ್ತುತ?
ನನ್ನ ಅಮ್ಮ ಯೋಚಿಸಿದ ರೀತಿಯಲ್ಲೇ ನಾನು ಯೋಚಿಸುತ್ತಿರುವೆನಾ? ನನ್ನ ವಯಸ್ಸಿನಲ್ಲಿ ಅಮ್ಮನಿಗೆ ಪ್ರಪಂಚ ಅಂದರೆ ಮನೆ ಮಾತ್ರ, ಇಂದು ನನಗೇ ಪ್ರಪಂಚವೇ ಮನೆ ಅನ್ನಿಸುತ್ತಲ್ಲ? ಆಗ ಅಮ್ಮಂದಿರಿಗೆ ನಲವತ್ತಾಯಿತೆಂದರೆ ಮಕ್ಕಳ ಮದುವೆ, ಮೊಮ್ಮಕ್ಕಳ ದೇಖರೇಖೆ ಇದೇ ಕೆಲಸ, ಆದರೆ ಈಗ ನಲವತ್ತರ ಹೊಸ್ತಿಲು ದಾಟಿರುವ ನಾವು ಮನೆಯ ಜವಾಬ್ದಾರಿ, ಮಕ್ಕಳ ಜವಾಬ್ದಾರಿ ಒಂದು ಹಂತದವರೆಗೂ ತೀರಿತು ಎಂದಾದಾಗ ನಮ್ಮತನದ, ನಮ್ಮ ಬದುಕಿನ ಸಾರ್ಥಕ್ಯದ, ನಮ್ಮ ಸ್ಪೇಸ್ ನ ಹುಡುಕಾಟ ನಡೆಸುತ್ತಿದ್ದೇವಲ್ಲ? ನಮ್ಮ ಅಪ್ಪ – ಅಮ್ಮಂದಿರು ಯೋಚಿಸಿದ ಹಾಗೆ ನಾವು ಯೋಚಿಸುತ್ತಿಲ್ಲ, ಅವರ ಉತ್ತರಗಳು ನಮ್ಮ ಪ್ರಶ್ನೆಗಳಿಗೆ ಹೊಂದುವುದಿಲ್ಲ ಎಂದಾಗ, ನಮ್ಮ ಉತ್ತರಗಳು ಎಲ್ಲಾ ಪ್ರಶ್ನೆಗಳಿಗೂ, ಎಲ್ಲಾ ಕಾಲಕ್ಕೂ ಸಲ್ಲುತ್ತವೆ ಎಂದು ಹೇಗೆ ಹೇಳುವುದು? ನಮ್ಮ ಮಕ್ಕಳು ನಮ್ಮ ಹೆಜ್ಜೆ ಹಾಡಿನಲ್ಲೇ ನಡೆಯ ಬೇಕು ಎಂದು ಹಟ ಹಿಡಿಯುವುದು ಎಷ್ಟು ಸಮಂಜಸ?
ಆದರೆ ಹಾಗೆಂದು ಮಕ್ಕಳನ್ನು ಅವರ ಪಾಡಿಗೆ ಅವರು ಎಂದು ಬಿಟ್ಟುಬಿಡುವುದಾ? ಹಾಗೆ ಬಿಟ್ಟ ಕಡೆ ಯಾಕೆ ಮಾನವೀಯ ಸಂಬಂಧಗಳು ತೆಳುವಾಗುತ್ತಿವೆ? ಕುಟುಂಬ ವ್ಯವಸ್ಥೆ ಕುಸಿಯುತ್ತಾ ಹೋಗುತ್ತಿದೆ?

ನಿನ್ನೆ ಪತ್ರಿಕೆಯಲ್ಲಿ ಬಂದಿದ್ದ ಎರಡು ಭಿನ್ನ ಭಿನ್ನ ಘಟನೆಗಳು ಮನಸನ್ನು ಮುದುಡಿ ಹಾಕಿದ್ದವು. ಮೊದಲನೆಯ ಸುದ್ದಿ ಬಂದದ್ದು ಬೆಂಗಳೂರಿನ ನಡುಮನೆ ಮಲ್ಲೇಶ್ವರದಿಂದ. ಮಗಳು ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹ ಆಗುತ್ತಾಳೆ ಎಂದು ಸಿಟ್ಟಾಗಿ, ಅದನ್ನು ತಪ್ಪಿಸಿ, ಅವಳನ್ನು ಮಾನಸಿಕವಾಗಿ ಜರ್ಜರಿತಳನ್ನಾಗಿಸಿ, ನಾಲ್ಕು ವರ್ಷ ಒಂದು ಪ್ರಾಣಿಯಂತೆ ಅವಳನ್ನು ಅವಳ ಪೋಷಕರೇ ಕೂಡಿಹಾಕಿದ್ದ ಸುದ್ದಿ.
ಇನ್ನೊಂದು, ಒಂದು ಮಹಾನಗರ ಕೊಡಬಹುದಾದ ಎಲ್ಲಾ ಸ್ವಾತಂತ್ರ್ಯ, ಸ್ವೇಚ್ಛೆ,ಯನ್ನು ಮನಸಾರೆ ಹೀರಿಕೊಂಡ ಒಬ್ಬ ಹೆಣ್ಣುಮಗಳು ತನ್ನ ಮನೆಯಲ್ಲಿ ನೇಣು ಹಾಕಿಕೊಂಡ ಸುದ್ದಿ. ಅವಳೊಬ್ಬಳು ನಟಿ. ಅವಳಿಗೆ ವಯಸ್ಸಿತ್ತು, ಸೌಂದರ್ಯ ಇತ್ತು, ಪ್ರತಿಭೆ ಇತ್ತು, ಸ್ವಾತಂತ್ರ್ಯವೂ ಇತ್ತು, ಅವಳನ್ನು ಇನ್ನ್ಯಾವ ನೋವು ಕಾಡಿರಬಹುದು? ಬದುಕು, ಕುಟುಂಬ ಅವಳಿಗೆ ಒಂದು ಸಪೋರ್ಟ್ ಸಿಸ್ಟಂ ಕೊಡುವಲ್ಲಿ ಎಲ್ಲಿ ಸೋತಿತ್ತು?
ಈ ಎರಡೂ ಅತಿಗಳೇ. ಇವುಗಳ ಮಧ್ಯೆ ಎಲ್ಲಾದರೂ ಒಂದು ಸೂತ್ರ ಸಿಗಬಹುದಾ? ಗೊತ್ತಾಗುತ್ತಿಲ್ಲ ನನಗೆ.
ಈ ಕ್ಷಣಕ್ಕೆ ನನಗೆ ನೆನಪಾಗುತ್ತಿರುವುದು ಕುವೆಂಪು ಅವರ ಕವನದ ಸಾಲುಗಳು. ’ನೀನು ಒಂದು ವರ್ಷದ ಕಂದ ತೇಜಸ್ವಿ, ನಾನು ಒಂದು ವರ್ಷದ ತಂದೆ….’. ಹೌದು ಅಲ್ಲವಾ, ಮಗು ಮತ್ತು ಅಪ್ಪ-ಅಮ್ಮ ಒಟ್ಟಿಗೇ ಹುಟ್ಟುತ್ತಾರೆ, ಒಟ್ಟಿಗೇ ಬೆಳೆಯುತ್ತಾ ಹೋಗುತ್ತಾರೆ, ಒಬ್ಬರ ಕೈ ಒಬ್ಬರು ಹಿಡಿದು… ಒಮ್ಮೆ ಮಗು ಇವರಿಗೆ ದಾರಿ ತೋರಿಸುತ್ತದೆ, ಮತ್ತೊಮ್ಮೆ ಇವರು ಮಗುವಿಗೆ.
ಮಕ್ಕಳೊಡನೆ ಮಾತಾಡಿ, ಅವರ ಜೀವನದಲ್ಲಿ ನೀವು ಹೋಗಿ ಕೂರುವುದು ಬೇಡ, ಆದರೆ ಅದಕ್ಕೊಂದು ಕಿಟಕಿಯನ್ನಾದರೂ ಇಟ್ಟುಕೊಳ್ಳಿ, ಅವರಿಗೆ ಸಮಯ ಕೊಡಿ, ಸ್ನೇಹ ಕೊಡಿ, ಮೊದಲು ಒಂದು ನಂಬಿಕೆ, ಒಂದು acceptance ಕೊಡಿ. ಸಣ್ಣ ಸಣ್ಣ ಜವಾಬ್ದಾರಿ ಕೊಡಿ, ಸಣ್ಣ ಸಣ್ಣ ತಪ್ಪುಗಳಾದೀತು. ಆದರೆ ಆ ತಪ್ಪುಗಳು ಅವರದೇ ಆಗಿರುವಾಗ, ತಿದ್ದಿಕೊಳ್ಳುವ ಜವಾಬ್ದಾರಿಯೂ ಅವರದೇ ಆಗಿರುತ್ತದೆ. ಒಂದು ಮಾತು, ಮಕ್ಕಳ ಆ ಎಲ್ಲಾ ಸಣ್ಣ ತಪ್ಪುಗಳು, ನಾವು ಅವರ ಬೆನ್ನಿನ ಹಿಂದೆ ಇರುವಾಗಲೇ ಆಗಲಿ ಅಲ್ಲವಾ? ಅವರು ಜಾರಿದರೂ ಆಸರೆ ಕೊಡಲು ನಾವಿರುತ್ತೇವೆ. ಅವರ ಬದುಕಿನ ಎಲ್ಲಾ ನಿರ್ಧಾರಗಳನ್ನೂ ನಾವೇ ತೆಗೆದುಕೊಳ್ಳುತ್ತಾ ಹೋದರೆ, ಮುಂದೆಂದಾದರೂ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ಬಂದು ಆಗ ನಾವಿಲ್ಲ ಅಂತಾದರೇ ಸ್ವಾಭಾವಿಕವಾಗಿಯೇ ಯಾರೋ ಇನ್ನೊಬ್ಬರು ತೆಗೆದುಕೊಂಡ ನಿರ್ಧಾರಕ್ಕೆ ಮೂಕವಾಗಿ ತಲೆ ಒಪ್ಪಿಸಿ ಬಿಡಬಾರದಲ್ಲ ಮಕ್ಕಳು?
ನನ್ನ ಗೆಳತಿಯ ಮನೆಗೆ ಮಗನ ಸಹಪಾಠಿ ಬಂದಿದ್ದಳಂತೆ. ಅವರೇನೋ ಪ್ರಾಜೆಕ್ಟ್ ಕೆಲಸ ಮಾಡುತ್ತಿದ್ದಾರೆ, ಇವಳು ಮನೆಕೆಲಸದಲ್ಲಿದ್ದಾಳೆ. ಕೆಲಸ ಮುಗಿಸಿ ಹೋದ ಇವಳಿಗೆ ಅವರಿಬ್ಬರೂ ಕಂಪ್ಯೂಟರ್ ಹತ್ತಿರ ಇಲ್ಲ ಅಂತ ಗೊತ್ತಾಗಿ, ’ನಿನ್ನ ಫ್ರೆಂಡ್ ಹೋದಳೇನೋ’ ಅಂತ ಕೇಳಿದ್ದಾಳೆ. ’ಇಲ್ಲೇ ಇದ್ದಾಳಮ್ಮ’ ಎಂಬ ದನಿ ಕೇಳಿ ಹಜಾರಕ್ಕೆ ಹೋದ ಅವಳಿಗೆ ಕಂಡಿದ್ದು, ದಿವಾನದ ಮೇಲೆ ಮಲಗಿದ್ದ ಅವಳ ಮಗ, ನೆಲದ ಮೇಲೊಂದು ದಿಂಬು ಹಾಕಿಕೊಂಡು ಮಲಗಿದ್ದ ಆ ಹುಡುಗಿ. ಇಬ್ಬರೂ ಪ್ರಪಂಚದಲ್ಲಿ ಇದು ಅತಿ ಸಾಧಾರಣವಾದ ವಿಷಯವೇನೋ ಎನ್ನುವಂತೆ ತಮ್ಮ ಡಿಗ್ರೀ ಯಾವ ಯಾವ ಕ್ಷೇತ್ರದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಚರ್ಚಿಸುತ್ತಾ ಇದ್ದಾರೆ.
’ಅಷ್ಟು ಚಂದದ ಹುಡುಗಿ, ನಿನ್ನ ಕ್ಲೋಸ್ ಫ್ರೆಂಡ್ ಬೇರೆ, ಪ್ರೀತಿಸ್ತಾ ಇದ್ದೀರೇನೋ’ ಅಂತ ಕೇಳಿದ ಇವಳನ್ನು ಯಾವುದೋ ಶತಮಾನದಲ್ಲೇ ಉಳಿದುಹೋದವಳೇನೋ ಅನ್ನುವಂತೆ ನೋಡಿದ ಆ ಹುಡುಗ ಹೇಳಿದ್ದು, ’ಅಮ್ಮ ಅವಳು ನನ್ನ ಫ್ರೆಂಡ್!’. ಒಂದು ಗಂಡು – ಹೆಣ್ಣು ಏಕಾಂತದಲ್ಲಿ ಕೂತು ಮಾತನಾಡ ಬೇಕಾದರೇ ಒಂದೋ ಅವರು ಸಂಬಂಧಿಗಳಾಗಿರಬೇಕು ಇಲ್ಲಾ ಪ್ರೇಮಿಗಳಾಗಿರಬೇಕು ಎನ್ನುವ ಕಣ್ಣುಪಟ್ಟಿ ಹಾಕಿ ಯೋಚಿಸುತ್ತಿದ್ದ ನಾವೆಲ್ಲಿ, ’ಅಮ್ಮ ಅವಳು ನನ್ನ ಫ್ರೆಂಡ್’ ಎಂದ ಈ ಹುಡುಗರೆಲ್ಲಿ. ಅವರ ಪಾಲಿಗೆ ಮುಕ್ತವಾಗಿರುವುದು ಕೇವಲ ಮಾತಲ್ಲ, ಮನೋಭಾವ ಸಹ.
ಅವರ ಪ್ರಪಂಚದಲ್ಲಿ ಭಾಗಿಯಾಗದೇ ಅವರ ಸವಾಲುಗಳು ನಮಗೆ ಅರ್ಥವಾಗುವುದಿಲ್ಲ. ನನ್ನ ಮನೆಯ ಹತ್ತಿರವೇ ಶಾಲಾ ಬಸ್ ಬರುತ್ತದೆ. ಅಲ್ಲಿ ಬೆಳಗ್ಗೆ ಆಯ್ತು ಎಂದರೆ ಪುಟಾಣಿಗಳ ಚಿಲಿಪಿಲಿ. ಈ ಬಿಗ್ ಬಾಸ್ ಕಾರ್ಯಕ್ರಮ ನಡೆದ ಮರುದಿನ ಒಂದು ಪುಟಾಣಿ ಅಮ್ಮನನ್ನು ಮೆಲು ಮಾತಿನಲ್ಲಿ ಕೇಳುತ್ತಿತ್ತು, ’ಮಾ, ಎಲ್ಲರ ವೈಫ್ ಗಳೂ ಬಂದರು, ಚಂದ್ರಿಕಾ ಗಂಡ ಯಾಕೆ ಬರಲಿಲ್ಲ, ಅವರು ಜೊತೇಲಿ ಇಲ್ಲವಾ?’. ಪ್ರಶ್ನೆ ಕೇಳಿದ ಪುಟಾಣಿಯ ವಯಸ್ಸು ೬-೭ ವರ್ಷ ಇರಬೇಕು. ಮಗು ಆ ಪ್ರಶ್ನೆ ಕೇಳಿದಾಗ ಅಮ್ಮನ ಕಣ್ಣಲ್ಲಿ ಯಾವುದೋ ಮೋಡ…. ಇವತ್ತು ೮೦ % ಗಿಂತ ಹೆಚ್ಚಿನ ಅಂಕ ತೆಗೆದ ಮಗು ಸಹ ಅವಮಾನದಲ್ಲಿ ಅಪರಾಧಿಯಾಗಿ ನಿಲ್ಲಬೇಕಾಗಿದೆ, ಮಗುವಿನ ಬಾಲ್ಯ ರೇಸ್ ಕೋರ್ಸಿನ ಕುದುರೆಯ ರೀತಿ, ಓಡು, ಓಡು, ಎಲ್ಲರನ್ನೂ ಬಿಟ್ಟು ಮುಂದೆ ಓಡು ಎನ್ನುವುದರಲ್ಲಿ ಕಳೆದು ಹೋಗಿದೆ, ಉದ್ಯೋಗ ಅಷ್ಟೇ ಮುಖ್ಯ ಅಲ್ಲ, ಸ್ಯಾಲರಿ ಪ್ಯಾಕೇಜ್ ಎಷ್ಟು ಎನ್ನುವ ಉತ್ತರದಲ್ಲಿ ನೀನು ಸಮಾಜದ ಪರೀಕ್ಷೆಯಲ್ಲಿ, ಪಾಸೋ, ಫೇಲೋ ಅನ್ನುವುದು ನಿರ್ಧಾರವಾಗುತ್ತದೆ. ಈ ಎಲ್ಲಾ ಆತಂಕ ಸವಾಲುಗಳ ನಡುವೆ, ವಿಘಟಿತವಾಗುತ್ತಿರುವ ಕುಟುಂಬ ವ್ಯವಸ್ಥೆಯ ನಡುವೆ ಈ ಮಕ್ಕಳು ನಮಗಿಂತಾ ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರ ಭಾಷೆಯನ್ನು ನೀವು ಕಲಿಯದೇ ಹೋದರೆ, ಅವರೊಡನೆ ಸಂಭಾಷಣೆ ಸಾಧ್ಯವಿಲ್ಲ, ಅವರ ತಲ್ಲಣಗಳನ್ನು ಅನುಭವಿಸದೆ ಹೋದರೆ ಅವರಿಗೆ ಸಲಹೆ ಕೊಡುವುದು ಸಾಧ್ಯವಿಲ್ಲ. ಅವರನ್ನು ಪ್ರೀತಿಸಿ ಮತ್ತು ಗೌರವಿಸಿ. ಅವರ ಪೋಷಕರಾಗುವಷ್ಟೇ ಮುಖ್ಯ ಅವರ ಸ್ನೇಹಿತರಾಗುವುದು.
ನಿಮ್ಮ ಕನಸುಗಳು ನಿಮ್ಮ ಮಡಿಲಿನಲ್ಲಿರಲಿ, ಮಕ್ಕಳ ಕಣ್ಣುಗಳಲ್ಲಿ ಅವರ ಕನಸುಗಳಿಗೆ ಜಾಗವಿರಲಿ.
 

‍ಲೇಖಕರು avadhi

June 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

23 ಪ್ರತಿಕ್ರಿಯೆಗಳು

  1. Rj

    ಬರಹ ಒಟ್ಟಾರೆಯಾಗಿ ಚೆಂದ ಮೂಡಿಬಂದಿದೆ.ಇಷ್ಟವಾಯಿತು.

    ಪ್ರತಿಕ್ರಿಯೆ
  2. bharathi

    Eegina makkalannu artha maadikollabekadre namma kosha haridu avara koshakke kaalidabeku.entha prabuddha lekhana sandhya …

    ಪ್ರತಿಕ್ರಿಯೆ
  3. prakash hegde

    ಹೌದು….
    ಚಂದ್ರಿಕಾರವರ ಮಗ ಪ್ರಬುದ್ಧವಾಗಿ ನಡೆದುಕೊಂಡಿದ್ದ…
    ಅವನ ನೇರ ಮಾತುಗಳು ಸುದೀಪನನ್ನು ಗಲಿಬಿಲಿಗೊಳಿಸಿತ್ತು…
    ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ.. ಥ್ಯಾಂಕ್ಯೂ…

    ಪ್ರತಿಕ್ರಿಯೆ
  4. Kiran

    “ಇಷ್ಟಕ್ಕೂ ನಾನು ಹೇಳುವುದೇ ಸರಿ ಅನ್ನಲು ನನಗಿರುವ ಮಾನದಂಡಗಳಾದರೂ ಯಾವುವು?” is probably the most haunting sentence in this mature article. Our generation is in a transition phase of civilization now. The yardsticks are metamorphasizing rapidly. Can our generation ever be a successful bridge between the traditional previous generation and neo-intellectual future generation? Answers are elusive at present.

    ಪ್ರತಿಕ್ರಿಯೆ
  5. Sunil Rao

    ಒಟ್ಟಾರೆಯಾಗಿ ಪ್ರಕಾಶ್ ರೈ; ನಾನು ನನ್ನ ಕನಸ್ಸು
    ನಾಗರಾಜ ವಸ್ತಾರೆ ಅವರ; ಮಡಿಲು ನೀಳ್ಗತೆ— ಎರಡರ ಚಿತ್ರ ನನ್ನ ಮು೦ದೆ ಹಾದು ಹೋಯ್ತು.
    ಬರಹ ಬಹಳ ಚೆನ್ನಾಗಿದೆ.

    ಪ್ರತಿಕ್ರಿಯೆ
  6. Sandhya Bhat

    ನಿಮ್ಮ ಕನಸುಗಳು ನಿಮ್ಮ ಮಡಿಲಿನಲ್ಲಿರಲಿ, ಮಕ್ಕಳ ಕಣ್ಣುಗಳಲ್ಲಿ ಅವರ ಕನಸುಗಳಿಗೆ ಜಾಗವಿರಲಿ. wow…!!!!
    yavattinante super..!!!

    ಪ್ರತಿಕ್ರಿಯೆ
  7. mahantesh

    ಇಷ್ಟಕ್ಕೂ ನಾನು ಹೇಳುವುದೇ ಸರಿ ಅನ್ನಲು ನನಗಿರುವ ಮಾನದಂಡಗಳಾದರೂ ಯಾವುವು?
    ನಮ್ಮ ಮಕ್ಕಳು ನಮ್ಮ ಹೆಜ್ಜೆ ಹಾಡಿನಲ್ಲೇ ನಡೆಯ ಬೇಕು ಎಂದು ಹಟ ಹಿಡಿಯುವುದು ಎಷ್ಟು ಸಮಂಜಸ?
    ಅವರ ತಲ್ಲಣಗಳನ್ನು ಅನುಭವಿಸದೆ ಹೋದರೆ ಅವರಿಗೆ ಸಲಹೆ ಕೊಡುವುದು ಸಾಧ್ಯವಿಲ್ಲ. ಅವರನ್ನು ಪ್ರೀತಿಸಿ ಮತ್ತು ಗೌರವಿಸಿ. ಅವರ ಪೋಷಕರಾಗುವಷ್ಟೇ ಮುಖ್ಯ ಅವರ ಸ್ನೇಹಿತರಾಗುವುದು.
    ನಿಮ್ಮ ಕನಸುಗಳು ನಿಮ್ಮ ಮಡಿಲಿನಲ್ಲಿರಲಿ, ಮಕ್ಕಳ ಕಣ್ಣುಗಳಲ್ಲಿ ಅವರ ಕನಸುಗಳಿಗೆ ಜಾಗವಿರಲಿ.
    tumba mechchikkeyada aMshugaLu….
    MakkaLa bagge e tarahada baravagiNe tuMba viShiSta!!!!!!
    Naavu makkaLinda Kaliyuva kAla baMdide!!!

    ಪ್ರತಿಕ್ರಿಯೆ
  8. Nagabhushan P

    Baraha mathu vishaya chennagide. chandrika magana prabudha mathu nana kannalluu niru jinugisithu. ನಿಮ್ಮ ಕನಸುಗಳು ನಿಮ್ಮ ಮಡಿಲಿನಲ್ಲಿರಲಿ, ಮಕ್ಕಳ ಕಣ್ಣುಗಳಲ್ಲಿ ಅವರ ಕನಸುಗಳಿಗೆ ಜಾಗವಿರಲಿ. bahala artha poornavagidhe. Abinandanegalu.

    ಪ್ರತಿಕ್ರಿಯೆ
  9. ಸತ್ಯನಾರಾಯಣ

    ನಾನು ಬಿಗ್ ಬಾಸ್ ಕಾರ್ಯಕ್ರಮದ ವೀಕ್ಷಕನಲ್ಲ. ಕಾರ್ಯಕ್ರಮದ ಪ್ರೋಮೋಗಳಲ್ಲಿ, ಆ ಮುಗ್ಧಬಾಲಕನ ಮಾತುಗಳನ್ನಷ್ಟೇ ಕೇಳಿಸಿಕೊಂಡ ನಾನು, ಆ ದಿನ ಕಾರ್ಯಕ್ರಮ ನೋಡಲೇಬೇಕೆಂದು ನಿರ್ಧಾರ ಮಾಡಿ ನೋಡಿದೆ. ಮಗು ತುಂಬಾ ಮೆಚ್ಯೂರ್ ಆಗಿಯೇ ನಡೆದುಕೊಂಡಿತು. ಆದರೆ, ಅಮ್ಮನ ಜಗಳದ ದೃಶ್ಯಗಳನ್ನು ಮಗುವಿಗೆ ತೋರಿಸಿದ್ದು ಕ್ರೌರ್ಯದ ಪರಮಾವಧಿ ಅನ್ನಿಸಿತ್ತು. ಇಂತಹ ಪ್ರಯತ್ನ ಮಾಡುವಾಗ – ಮಗುವಿಗೆ, ತಾಯಿಯ ಜಗಳದ ದೃಶ್ಯಗಳನ್ನು ತೋರಿಸುವ – ಕಾರ್ಯಕ್ರಮದ ಯೋಜಕರು ಸ್ವಲ್ಪ ಮಾನವೀಯವಾಗಿ ಯೋಚಿಸಬೇಕಿತ್ತು. ಆದರೆ ಅವರಿಗೆ ಟಿ.ಆರ್.ಪಿ. ಅಷ್ಟೇ ಮುಖ್ಯವಾಗಿತ್ತೇನೊ!?

    ಪ್ರತಿಕ್ರಿಯೆ
  10. Renuka Nidagundi

    ನಮ್ಮ ಸಮಾಜದಲ್ಲಿ ಎಲ್ಲ ತರಹದ ಜನರಿದ್ದಾರೆ. ಈಗ ಮನೆಗೊಂದು ಮಗು ! ತಮ್ಮ ಮಗು ಎಲ್ಲದರಲ್ಲೂ ಮುಂದಿರಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರ ಕನಸು. ಅದಕ್ಕೆ ಶಾಲೆಯ ಹೊರೆ ಪುಸ್ತಕದ ಜತೆ ಒಟ್ಟಿಗೆ ಮ್ಯೂಸಿಕ್ ಕ್ಲಾಸು, ಒಂದಿನ ಸ್ವಿಮ್ಮಿಂಗು, ಒಂದಿನ ಚಿತ್ರಕಲೆ, ಒಂದಿನ ಡಾನ್ಸು, ಒಂದಿನ ಥಾಯ್ಕ್ವಂಡೋ ಸೇರಿಸಿ ಸಾಯಿಸುವ,ಎಲ್ಲವನ್ನು ಬಾಯಿಗೆ ತುರುಕುವ ಪ್ರಯತ್ನದವರನ್ನು ಕಂಡು ಮರುಗಿದ್ದೇನೆ ಮಗುವಿಗಾಗಿ. ಇದು ಒಂತರಾ ಇಪ್ರೀತಾ..!!
    ಚೆಂದದ ಬರಹ ಸಂಧ್ಯಾ.

    ಪ್ರತಿಕ್ರಿಯೆ
  11. Geetha b u

    Nice article. Namma thandhe thaayiyanthe naavilla. Namma haage namma makkalu erolla…I think we are also aware of it…..
    Amma na jagaladha dhrushya thorisidhe, krourya dha paramaavadhi yendhenilla…avala maga avanu. He would have seen that programme and he knows his mother.

    ಪ್ರತಿಕ್ರಿಯೆ
  12. sujathalokesh

    ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ.
    ಅಮ್ಮನೊಂದಿಗೆ ಬೆಳೆದ ‘ ಆರ್ಯ ‘ನ ನಡೆವಳಿಕೆ ತುಂಬಾ ಮೆಚ್ಚುಗೆ ಆಯ್ತು. ಅದನ್ನು ಬೇಸ್ ಮಾಡಿ ನೀವು ಬರೆದದ್ದು ಸಹ ಚೆನ್ನಾಗಿದೆ.

    ಪ್ರತಿಕ್ರಿಯೆ
  13. lakshmikanth itnal

    ಸಂಧ್ಯಾಜಿ ಎಂದಿನಂತೆ ಆಪ್ತವಾಗಿದೆ..ಮಳೆಯಿಂದ ತೊಯ್ದ ಮುಂಗಾರಿನ ಮೊದಲ ಮಳೆಹನಿಯ ಮಣ್ಣವಾಸನೆಯಂತೆ, ಹೊರಗೆ ಕಿಟಕಿಯಲ್ಲಿ ಮಳೆಧಾರೆಯರೆಯನ್ನು ನೋಡುತ್ತ, ಮನದಲ್ಲಿ ಬರಹದ ಮಕ್ಕಳ ಭಾವನೆಗಳ ಕುರಿತ ಚಿಂತನೆಗಳ ವೇವ್ ಗಳೊಂದಿಗೆ ಬರಹದ ಗಾಢ ಪರಿಮಳ ಕಣ್ಣು ಒದ್ದೆಯಾಗಿಸಿತು.

    ಪ್ರತಿಕ್ರಿಯೆ
  14. Anil Talikoti

    “ಅವರ ಭಾಷೆಯನ್ನು ನೀವು ಕಲಿಯದೇ ಹೋದರೆ, ಅವರೊಡನೆ ಸಂಭಾಷಣೆ ಸಾಧ್ಯವಿಲ್ಲ,” ಸೂಕ್ತ ಮಾತು. ಲೇಖನ ಎಲ್ಲೂ ಉಪದೇಶಮಯವೆನಿಸದೆ ಅತ್ಯಂತ ಸಕಾಲಿಕವಾಗಿದೆ.
    – ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  15. ಶಮ, ನಂದಿಬೆಟ್ಟ

    “ಪ್ರತಿ ಕಾಲಘಟ್ಟವೂ ಜನರೆದುರಿಗೆ ಭಿನ್ನ ಭಿನ್ನವಾದ ಸವಾಲುಗಳನ್ನು ಇಡುತ್ತದೆ. ನಾನು ಕಂಡುಕೊಂಡ ಉತ್ತರಗಳು ನನ್ನ ಕಾಲಮಾನಕ್ಕೆ ಸರಿ ಇರಬಹುದು. ಆದರೆ ಈಗ ಬದುಕು, ಸಮಾಜ ಮಕ್ಕಳೆದುರಿಗೇ ಬೇರೆಯದೇ ಆದ ಸವಾಲುಗಳನ್ನೆಸೆದಿದೆಯಲ್ಲಾ… ನನ್ನ ಬಳಿ ನಾನು ಕಂಡುಕೊಂಡ ಉತ್ತರಗಳೇನೋ ಇದೆ, ಆದರೆ ಬದುಕು ಪ್ರಶ್ನೆ ಪತ್ರಿಕೆಯನ್ನೆ ಬದಲಿಸಿ ಹಾಕಿದೆ. ಇಲ್ಲಿ ನನ್ನ ಉತ್ತರಗಳೇ ನಿನ್ನವು ಎನ್ನುವುದು ಎಷ್ಟು ಪ್ರಸ್ತುತ?”
    ಕಣ್ಣು ತೇವಗೊಳಿಸಿದ ಓದು ಕಣೋ…
    ಅವತ್ತು ಸುದೀಪ್ ನಿಜಕ್ಕೂ ನಂಗೂ ಹಾಗೇ ಅನ್ನಿಸಿದ್ದ…
    ಆ ಮಗುವಿನ ಪ್ರೌಢತೆಯೂ ಅವನ ಕುಟುಂಬದ ವಾತಾವರಣದ ಬಳುವಳಿಯೇ.. ಅವನ ಬಾಲ್ಯ ಸಹಜ ಮುಗ್ಧತೆಯನ್ನ ಅದೆಷ್ಟು ಬೇಗ ಕಸಿದುಕೊಂಡಿವೆ ಅನ್ನಿಸ್ತು.. ಅವನ ಮಾತು ಕೇಳಿ ನಾನೂ ಅತ್ತಿದ್ದೆ ಅವತ್ತು.

    ಪ್ರತಿಕ್ರಿಯೆ
  16. ಜಿ.ಎನ್ ನಾಗರಾಜ್

    ಬಹಳ ಒಳ್ಳೆಯ ಆಪ್ತ ಬರಹ. ವಯಸ್ಸಿಗೆ ಬಂದ ಮಗನನ್ನು ಸ್ನೇಹಿತನಂತೆ ಕಾಣು ಎಂದು ಒಂದು ಸಂಸ್ಕೃತದ ಗಾದೆ ಹೇಳುತ್ತದೆ. ಅದು ಮಗನಿಗೆ ಮಾತ್ರವಲ್ಲ ಮಗಳಿಗೂ,ಸೊಸೆಗೂ ಅನ್ವಯಿಸಬೇಕಾದದ್ದು ಅಗತ್ಯ.ಸಾಂಸಾರಿಕ ಪ್ರಜಾಪ್ರಭುತ್ವದ ಅಗತ್ಯ. ಪಾಳೆಯಗಾರೀ ದರ್ಪವನ್ನು ತೊಡೆದು ವೇಗವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವ ಮನಸ್ಸನ್ನು ಬೆಳೆಸಿಕೊಳ್ಳಬೇಕಾದ ಅಗತ್ಯ. ಒಮ್ಮೆ ನಾನು ಹೀಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ತಂದೆಯೊಬ್ಬರಿಂದ ಒಂದು ಆತಂಕದ ಫೋನ್ ಕರೆ. ನನ್ನ ಮಗ ಹಡಗುಗಳ ಮೇಲೆ ಕೆಲಸ ಮಾಡಬೇಕಾದ ಒಂದು ಕೋರ್ಸ್ ಗೆ ಸೇರ ಬಯಸುತ್ತಿದ್ದಾನೆ ನನಗೆ ಏನೂ ತೋಚುತ್ತಿಲ್ಲ ಅಂತ. ನಾನು ಅವರಿಗೂ ಅವರಂತೆ ಮಕ್ಕಳ ಶಿಕ್ಷಣ,ಮದುವೆ ಇತ್ಯಾದಿ ವಿಷಯಗಳಲ್ಲಿ ನನ್ನ ಸಲಹೆ ಕೇಳುವ ಹಲವು ಅಪ್ಪ ಅಮ್ಮಂದಿರಿಗೂ ಹೇಳುವ ಮಾತು ನಿಮ್ಮ ಮಕ್ಕಳಿಗೆ ನಿಮಗೆ ಕಾಣದ ಪ್ರಪಂಚವೆಲ್ಲಾ ಕಾಣುತ್ತಿದೆ. ಅವರು ಅವರ ಕನಸುಗಳ ರೆಕ್ಕೆ ಕಟ್ಟಿಕೊಂಡು ಹಾರಲು ಬಿಡಿ.ಅವರ ಕೆರಿಯರ್ ಮಾತ್ರವಲ್ಲ ಅವರ ಜೀವನದ ವಿಷಯದಲ್ಲಿಯೂ. ನಿಮ್ಮ ಅಭಿಪ್ರಾಯ, ಸಲಹೆ ಕೊಡಿ ಆದರೆ ಅವರನ್ನು ಕಟ್ಟಿ ಹಾಕಬೇಡಿ ಎಂದು ಹೇಳುತ್ತಿರುತ್ತೇನೆ.ಹಾಗೆಯೇ ಮಕ್ಕಳಿಗೂ ಕೂಡ ನಿಮ್ಮ ತಂದೆ ತಾಯಿಯರಿಗಿಂತ ನಿಮಗೇ ಹೆಚ್ಚು ಗೊತ್ತಿದೆ. ಅನುಭವದ ಮಾತು ಬೇಕು. ಅದನ್ನು ಧಿಕ್ಕರಿಸಬೇಡಿ. ಆದರೆ ಯಾವ ವಿಷಯದಲ್ಲಿ ಅನುಭವ ಇದೆಯೋ ಆ ವಿಷಯಕ್ಕೆ ಮಾತ್ರ ಅದಕ್ಕೆ ಬೆಲೆ.ನಿಮ್ಮ ಹಿರಿಯರ ನೇರ ಅನುಭವದಂತೆ ಅನೇಕರಿಂದ, ಪುಸ್ತಕಗಳಿಂದ, ನೆಟ್ ನಿಂದ ಪಡೆಯುವ ಅಪ್ರತ್ಯಕ್ಷ ಅನುಭವವೂ ಅನುಭವವೇ. ಎಲ್ಲದರಿಂದ ಪಡೆದು ನಿಮ್ಮ ದಾರಿ ನೀವು ತುಳಿಯಿರಿ ಎಂದು. ಇನ್ನು ಬಿಗ್ ಬಾಸ್ ಟಿ ಆರ್ ಪಿ ನಾಟಕಗಳು, ಭಾವನೆಗಳ ಮಾರಾಟ ನನಗೆ ಗೊತ್ತಿಲ್ಲ.

    ಪ್ರತಿಕ್ರಿಯೆ
  17. Anuradha.B.Rao

    ಮಕ್ಕಳ ಮನಸ್ಸು ಅರಿಯದ ಹಿರಿಯರು ನಾವಾಗುವುದು ಬೇಡ . ಮಕ್ಕಳು ಅಪ್ಪ ಅಮ್ಮನಿಗಿಂತ ಅಜ್ಜ ಅಜ್ಜಿಯರ ಜೊತೆ ಹೆಚ್ಚು ಆತ್ಮೀಯರಾಗುತ್ತಾರೆ . ಅಲ್ಲಿ ನೀರಿಕ್ಷೆ ಇಲ್ಲ, ವಯಸ್ಸಾದವರೂ ಮಕ್ಕಳೇ ಆಗಿರುತ್ತಾರೆ . ತುಂಬಾ ಚೆನ್ನಾಗಿ ಬರೆದಿದ್ದೀರಿ ಸಂಧ್ಯಾ. ಮನಮುಟ್ಟುತ್ತದೆ. ಹೃತ್ಪೂರ್ವಕ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: