ಸಂಪತ್ ಅವರ ತಲೆ ಕೂದಲನ್ನೇ ಕಾಯುತ್ತಿದ್ದೆ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ. ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

|ಕಳೆದ ಸಂಚಿಕೆಯಿಂದ|

ನಾತಿಚರಾಮಿ ಆರಂಭದಿಂದಲೂ ಈ ಸಿನೆಮಾದ ಪ್ರತಿ ಹಂತದಲ್ಲೂ ಜೊತೆಗಿದ್ದು, ಚರ್ಚೆ ಮಾಡುತ್ತಾ ಜೊತೆಗಿದ್ದವರು (ಕವಲುದಾರಿ, ಕಿರುಗೂರಿನ ಗಯ್ಯಾಳಿಗಳು ಖ್ಯಾತಿಯ) ಸಂಪತ್ ಕುಮಾರ್. ಈ ಕಥೆಯ ಮೂಲ ಎಳೆ ಸಿಕ್ಕಿದ್ದೇ ಇವರೊಂದಿಗೆ ನಡೆಸುತ್ತಿದ್ದ ಚರ್ಚೆಯ ಸಮಯದಲ್ಲಿ.

ಸಂಪತ್ ಅವರು ನನಗೆ ಪರಿಚಯವಾಗಿದ್ದು ಕಿರುಗೂರಿನ ಗಯ್ಯಾಳಿಗಳು ಸಿನೆಮಾದ ಬಿಡುಗಡೆಯ ದಿನದ ಮೊದಲ ಪ್ರದರ್ಶನದ ಸಮಯದಲ್ಲಿ. ಇವರನ್ನು ನಾನೇ ಖುದ್ದಾಗಿ ಹೋಗಿ ಪರಿಚಯ ಮಾಡಿಕೊಂಡಿದ್ದೆ. ಹಾಗೇ ಪರಿಚಯ ಮಾಡಿಕೊಳ್ಳಲು ಕಾರಣ ಇವರ ಬಗ್ಗೆ, ಇವರ ಪ್ರತಿಭೆಯ ಬಗ್ಗೆ ಸ್ನೇಹಿತರು ಸಾಕಷ್ಟು ಬಾರಿ ಹೇಳಿದ್ದರು. ಅದಕ್ಕೂ ಮೊದಲೇ ಸ್ನೇಹಿತ ಅನಂತ್ ಶೈನ್ ನಿರ್ದೇಶಿಸಿದ್ದ ‘ವಿದಾಯ’ ಎಂಬ ಕಿರುಚಿತ್ರಕ್ಕೆ ಒಂದಷ್ಟು ರೇಖಾಚಿತ್ರಗಳನ್ನು ಮಾಡಿಕೊಟ್ಟಿದ್ದೆ.

ಆ ಕಿರುಚಿತ್ರದ ಮುಖ್ಯ ಪಾತ್ರದಲ್ಲಿ ಹಾಗೂ ಅನಂತ್ ಅವರ ‘ಮುದ್ದು ಮನಸೇ’ ಸಿನೆಮಾ, ಟಿ ಕೆ ದಯಾನಂದ್ ಅವರ ಬೆಂಕಿಪಟ್ಣ ಸಿನೆಮಾ ಇನ್ನು ಹಲವು ಸಿನೆಮಾಗಳಲ್ಲಿ ಇವರ ಪ್ರತಿಭೆ ಅನಾವರಣಗೊಂಡಿತ್ತು. ಜೊತೆಗೆ ನಾನು ದಯಣ್ಣ (ಟಿ ಕೆ ದಯಾನಂದ್) ಮಾತಾಡುವಾಗ ಸಿನೆಮಾ ಕಥೆಗಳ ಚರ್ಚೆ ನಡೆಯುವಾಗೆಲ್ಲಾ ಸಂಪತ್ ಹೆಸರು ಪ್ರಸ್ತಾಪ ಆಗುತ್ತಿತ್ತು.

ಇದೆಲ್ಲವುದಕ್ಕಿಂತ ಹೆಚ್ಚಾಗಿ ಸಂಪತ್ ಅವರ ಪ್ರತಿಭೆಯ ಸಾಕ್ಷಾತ್ ದರ್ಶನ ನನಗೆ ನನ್ನ ಕಾಲೇಜಿನ ದಿನಗಳಲ್ಲೇ ಆಗಿತ್ತು. ಕಲಾಮಂದಿರ ಕಲಾಶಾಲೆಯ ವಾರ್ಷಿಕ ಚಿತ್ರಪ್ರದರ್ಶನ ಹಾಗೂ ಸಮಾರಂಭದಲ್ಲಿ ರಂಗಗೀತೆಗಳನ್ನು ಅಭಿನಯಿಸುತ್ತಾ ಹಾಡಿದ್ದರು ಸಂಪತ್. ಸಂಪತ್ ಅವರು ಅಭಿನಯ ತರಂಗದ ವಿದ್ಯಾರ್ಥಿ ಕೂಡ. ಜೊತೆಗೆ ಸಾಕಷ್ಟು ಓದಿಕೊಂಡಿರುವ ಜೀವಪರ ವ್ಯಕ್ತಿ.

ಇಷ್ಟೆಲ್ಲ ಪ್ರತಿಭೆ ಇರುವ ಸಂಪತ್ ಅವರನ್ನು ನಾನೇ ಮಾತಾಡಿಸಿ ಪರಿಚಯ ಮಾಡಿಕೊಂಡೆ. ಅವರೊಂದಿಗೆ ಕೆಲಸ ಮಾಡಬೇಕೆನ್ನುವುದು ನನ್ನ ಆಶಯವೂ ಆಗಿತ್ತು. ಮೊದಲಿಗೆ ನಾನು ದಯಾನಂದ್, ಕೆಜಿಎಫ್ ಗಣಿಯಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರ ಬಗ್ಗೆ ಸಿನೆಮಾ ಮಾಡಲು ಕಥೆಯೊಂದನ್ನು ಮಾಡಿಕೊಂಡಿದ್ದೆವು, ಅದರಲ್ಲಿ ಸಂಪತ್ ನಟಿಸಬೇಕಿತ್ತು. ಕಾರಣಾಂತರಗಳಿಂದ ಅದು ಸಿನೆಮಾ ಆಗಲೇ ಇಲ್ಲ. ಆ ನಂತರ ಉತ್ತರ ಕರ್ನಾಟಕದ ಭಾಗಗಳಲ್ಲಿ ಇಂದಿಗೂ ಜೀವಂತವಿರುವ ಗುಜ್ಜರ್ ಮದುವೆಗಳ ಮೇಲೆ ಮಾಡಿಕೊಂಡಿದ್ದ ಚಿತ್ರಕಥೆಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಬೇಕಿತ್ತು. ಅದಕ್ಕೆ ಸಂಪತ್ ಸಾಕಷ್ಟು ತಯಾರಿ ರಿಹರ್ಸಲ್ ಎಲ್ಲಾ ಮಾಡಿದ್ದರು.

ಆ ಸಿನೆಮಾ ಮುಹೂರ್ತ ಕೂಡ ನೆರವೇರಿದ ನಂತರ ಹಣಕಾಸಿನ ಸಮಸ್ಯೆಯಿಂದಾಗಿ ನಿಂತು ಹೋಯಿತು. ಆನಂತರ ಇನ್ನೆರೆಡು ಸ್ಕ್ರಿಪ್ಟ್ ಗಳು ಮುಹೂರ್ತದ ಹಂತಕ್ಕೆ ಬಂದು ಅಲ್ಲಿಗೆ ನಿಂತು ಹೋಗಿತ್ತು. ಪ್ರತಿಯೊಂದು ಸಿನೆಮಾದಲ್ಲೂ ಸಂಪತ್ ಅವರಿಗಂತಲೇ ಒಂದು ಪಾತ್ರವನ್ನು ಬರೆದುಕೊಳ್ಳುತ್ತಿದ್ದೆ. ಹೇಗಾದರು ಮಾಡಿ ಇವರ ಪ್ರತಿಭೆಯನ್ನು ಸಾಧ್ಯವಾದಷ್ಟು ಬಳಸಿಕೊಳ್ಳಬೇಕೆಂಬ ಬಯಕೆ ನನ್ನದಾಗಿತ್ತು. ಆ ಹಿಂದಿನ ಪ್ರಯತ್ನಗಳು ದಡ ಸೇರದಿದ್ದರೂ ನನ್ನ ಆಸೆ ಜೀವಂತವಾಗಿಯೇ ಇತ್ತು.

ನಾತಿಚರಾಮಿಯಲ್ಲಿ ಸುರೇಶನ ಪಾತ್ರಕ್ಕೆ ಸಂಪತ್ ಸರಿಯಾದ ವ್ಯಕ್ತಿ ಎಂದು ಮೊದಲೇ ನಿರ್ಧರಿಸಿದ್ದೆ. ಹಾಗಾಗಿ ಪ್ರತೀ ಹಂತದಲ್ಲೂ ಸಂಪತ್ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಆ ಪಾತ್ರದ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡು ಒಟ್ಟಾರೆ ಆ ಕ್ಯಾರೆಕ್ಟರ್ ಡಿಸೈನ್ ಮಾಡಿಕೊಂಡಿದ್ದೆ. ಸುರೇಶನ ಪಾತ್ರದ ಬಗ್ಗೆ ಯೋಚಿಸಿದಾಗೆಲ್ಲ ಸಂಪತ್ ಕಣ್ಣೆದುರಿಗೆ ಬರುವಷ್ಟು ಆಳವಾಗಿ ನನ್ನ ಕಲ್ಪನೆಯಲ್ಲಿ ಸಂಪತ್ ತುಂಬಿಕೊಂಡಿದ್ದರು.

ನಮ್ಮ ನಾತಿಚರಾಮಿ ಕಥೆ-ಚಿತ್ರಕಥೆಯ ಹಂತದಲ್ಲೇ ಅವರಿಗೆ ಕವಲು ದಾರಿ ಸಿನೆಮಾದಲ್ಲಿ ಪ್ರಮುಖ ಪಾತ್ರ ದೊರಕಿತ್ತು. ಅದರಲ್ಲೂ ಪಿ ಆರ್ ಕೆ ಬ್ಯಾನರಿನಲ್ಲಿ ಬರುತ್ತಿದ್ದ ಮೊದಲ ಸಿನೆಮಾ, ಹೇಮಂತ್ ರಾವ್ ಅವರ ನಿರ್ದೇಶನ. ಈ ಸಿನೆಮಾದ ಮೂಲಕ ಸಂಪತ್ ಅವರಿಗೆ ದೊಡ್ಡ ಬ್ರೇಕ್ ಸಿಗಬಹುದು ಎಂಬ ನಿರೀಕ್ಷೆ ನನಗೆ ತುಂಬಾ ಖುಷಿ ಕೊಟ್ಟಿತ್ತು.

ಆ ಸಿನೆಮಾದ ಚಿತ್ರೀಕರಣಕ್ಕೆ ಹೋದಾಗ ಅಲ್ಲಿ ಮೇಕಪ್ ವಿಷಯದಲ್ಲಿ ಒಂದು ಸಮಸ್ಯೆ ಎದುರಾಗಿತ್ತು. ಸಂಪತ್ ನಿರ್ವಹಿಸಬೇಕಾಗಿದ್ದ ಪಾತ್ರ ಅವರ ವಯಸ್ಸಿಗೂ ಮೀರಿದ್ದು. ಆ ಪಾತ್ರವನ್ನು ಹೇಮಂತ್ ರಾವ್ ಅವರು ವಿಶೇಷವಾಗಿ ವಿನ್ಯಾಸ ಮಾಡಿ, ಆ ಪಾತ್ರಕ್ಕೆಂದೇ ವಿಶೇಷವಾದ ವಿಗ್ ಒಂದನ್ನು ತರಿಸಿದ್ದರು. ಸಂಪತ್ ಅವರ ಚಿತ್ರೀಕರಣದ ಮೊದಲ ದಿನ ಮೇಕಪ್ ಉಮೇಶ ಬೆಳಗಿಂದ ಸಾಕಷ್ಟು ಪ್ರಯತ್ನಿಸಿದರೂ ವಿಗ್ ಸರಿಯಾಗಿ ಕೂರುತ್ತಿರಲಿಲ್ಲ. ಕಾರಣ ಉಮೇಶ ಆ ವಿಗ್ಗನ್ನು ಸಂಪತ್ ಅವರ ತಲೆಯ ಮೇಲೆ ಇರುವ ಕೂದಲಿನ ಮೇಲೇ ಕೂರಿಸಲು ಪ್ರಯತ್ನ ಪಡುತ್ತಿದ್ದರು. ಆದರೆ ಅದು ಸರಿಯಾಗಿ ಕೂರುತ್ತಿರಲಿಲ್ಲ.

ಈ ಪ್ರಯತ್ನ ಮಧ್ಯಾಹ್ನದವರೆಗೂ ನಡೆದಿದೆ. ಹೇಮಂತ್ ರಾವ್ ಅವರಿಗೆ ಅದು ಸರಿ ಕಂಡು ಬರದೆ ಮತ್ತೆ ಮತ್ತೆ ಕರೆಕ್ಷನ್ಸ್ ಹೇಳುತ್ತಲೇ ಇದ್ದರು. ಕೊನೆಗೆ ಇದಕ್ಕೆ ಇರುವ ಪರಿಹಾರ ತಲೆ ಪೂರ್ತಿ ಶೇವ್ ಮಾಡುವುದು. ಪಾತ್ರಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧವಿರುವ ಸಂಪತ್ ಪೂರ್ತಿ ಗುಂಡು ಹೊಡೆಸಿಕೊಂಡಿದ್ದಾರೆ. ಆನಂತರ ವಿಗ್ ಸರಿಯಾಗಿ ಕೂತು, ಚಿತ್ರೀಕರಣ ಪ್ರಾರಂಭವಾಗಿದೆ.

ಹೇಮಂತ್ ರಾವ್ ಯೋಜನೆಯ ಪ್ರಕಾರ ಸಂಪತ್ ಅವರ ಭಾಗದ ಚಿತ್ರೀಕಣ ಒಂದೇ ಹಂತದಲ್ಲಿ ಮುಗಿಯಬೇಕಿತ್ತು. ಅದರಂತೆ ಬಹುತೇಕ ಮುಗಿದು ಇನ್ನೆರೆಡು ದಿನಗಳ ಚಿತ್ರೀಕರಣ ಬಾಕಿ ಉಳಿದಿರುವ ಹೊತ್ತಲ್ಲಿ, ಆಕಸ್ಮಿಕ ಅವಘಡವಾಗಿ ಹೇಮಂತ್ ರಾವ್ ಅವರು ಎರಡು-ಮೂರು ತಿಂಗಳ ಕಾಲ ಬೆಡ್ ರೆಸ್ಟ್ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಇದು ನಡೆದದ್ದು ಬಹುಶಃ ನವೆಂಬರ್ ತಿಂಗಳಲ್ಲಿ. ನಮ್ಮ ನಾತಿಚರಾಮಿ ಸಿನೆಮಾ ಆರಂಭ ಮಾಡುವ ಉದ್ದೇಶ ಇದ್ದದ್ದು ಫೆಬ್ರವರಿಯ ತಿಂಗಳಲ್ಲಿ. ಅಷ್ಟರಲ್ಲಿ ಅವರ ತಲೆಕೂದಲು ವಾಪಸ್ಸು ಬರುತ್ತದೆ ಎಂಬ ಭರವಸೆ ನನಗಿತ್ತು. ಹಾಗಾಗಿ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ.

ಶೃತಿ ಹರಿಹರನ್ ಅವತ್ತಿಗೆ ತುಂಬಾ ಬ್ಯುಸಿ ನಟಿಯಾಗಿದ್ದರು. ಅವರ ಡೇಟ್ಸ್ ಕಾರಣಾಂತರಗಳಿಂದ ಮುಂದೆ ಹೋಗುತ್ತಾ ಅದು ಫೆಬ್ರವರಿಯ ಅಂತ್ಯಕ್ಕೆ ಬಂದು ನಿಂತಿತ್ತು. ಕವಲುದಾರಿಯಲ್ಲಿ ಸಂಪತ್ ಅವರ ಬಾಕಿ ಉಳಿದಿದ್ದ ಚಿತ್ರೀಕರಣ ಜನವರಿ ಮೊದಲ ವಾರದಲ್ಲಿ ನಡೆಯುವ ನಿರೀಕ್ಷೆ ಇತ್ತು. ಆದರೆ ಅಲ್ಲಿ ಅನಂತ್ ಸರ್ ಹಾಗೂ ಅಚ್ಯುತ್ ಅವರ ಡೇಟ್ಸ್ ಹೊಂದಾಣಿಕೆ ಆಗದೆ ಅವರ ಚಿತ್ರೀಕರಣದ ದಿನಾಂಕ ಮುಂದೆ ಹೋಗುತ್ತಲೇ ಇತ್ತು. ನನಗೆ ಆತಂಕ ಹೆಚ್ಚಾಗುತ್ತಲೇ ಇತ್ತು.

ಕೊನೆಗೂ ನಮ್ಮ ಸಿನೆಮಾದ ಚಿತ್ರೀಕರಣ ಮಾರ್ಚ್ 2ನೇ ತಾರೀಖಿಗೆ, ಮುಹೂರ್ತ ಫೆಬ್ರವರಿ 26ಕ್ಕೆ ನಿಗದಿಯಾಯ್ತು. ಜನವರಿ ಕೊನೇ ವಾರದಲ್ಲೂ ಕವಲುದಾರಿ ಸಿನೆಮಾ ಚಿತ್ರೀಕರಣ ಆಗಲೇ ಇಲ್ಲಾ. ಇತ್ತ ಸಂಪತ್ ಅವರಿಗೂ ಆತಂಕ ಹೆಚ್ಚಾಗುತ್ತಲೇ ಇತ್ತು. ಅವರು ತಮ್ಮ ಆತಂಕವನ್ನು ನನ್ನ ಬಳಿ ಹೇಳಿಕೊಂಡು ನನ್ನ ಆತಂಕ ಇನ್ನೂ ಹೆಚ್ಚು ಮಾಡುತ್ತಲೇ ಇದ್ದರು.

ಕೊನೆಗೆ ಫೆಬ್ರವರಿ ಮೊದಲ ವಾರದಲ್ಲಿ ಸಂಪತ್ ಅವರಿಗೇ ಹೇಳಿಬಿಟ್ಟೆ. ಇನ್ನು ದಯವಿಟ್ಟು ಕವಲು ದಾರಿ ಅವರಿಗೆ ಡೇಟ್ಸ್ ಕೊಡಬೇಡಿ, ನಮ್ಮ ಸಿನೆಮಾ ಮಗಿದ ನಂತರ ಅವರ ಚಿತ್ರೀಕರಣ ಮುಗಿಸಿಕೊಡಿ, ಇಲ್ಲವಾದರೆ ನಾನು ಸಮಸ್ಯೆಯಲ್ಲಿ ಬೀಳುತ್ತೇನೆ. ಶೃತಿ ಅವರ ಡೇಟ್ಸ್ ಹೊಂದಿಸುವುದು ತುಂಬಾ ಕಷ್ಟ ಆಗುತ್ತದೆ ಎಂದು. ಅದಕ್ಕೆ ಕಾರಣ ನಮ್ಮ ಸಿನೆಮಾ ಶುರುವಾಗುವ ಸಮಯಕ್ಕೆ ಶೃತಿ ಅವರಿಗೆ ಸುದೀಪ್ ಜೋಡಿಯಾಗಿ ಅಂಬಿ ನಿನಗೆ ವಯಸ್ಸಾಯ್ತು ಸಿನೆಮಾದಲ್ಲಿ ಅವಕಾಶ ಸಿಕ್ಕಿತ್ತು. ಅದನ್ನು ತಪ್ಪಿಸುವುದು ಸಾಧ್ಯವಿರಲಿಲ್ಲ. ಆ ಸಿನೆಮಾದ ಮಧ್ಯೆ ನಮ್ಮ ಸಿನೆಮಾದ ಚಿತ್ರೀಕಣದ ಶೂಟಿಂಗ್ ದಿನಗಳನ್ನು ನಾನು ಪ್ಲಾನ್ ಮಾಡಿಕೊಂಡಿದ್ದೆ.

ಸಂಪತ್ ಅವರಿಗೆ ನಾನೇನೋ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದೆ. ಆದರೆ ಅತ್ತ ಹೇಮಂತ್ ಅವರಿಗೆ ಚಿತ್ರೀಕರಣ ಮುಗಿಸಲೇ ಬೇಕಾದ ಅನಿವಾರ್ಯ ಎದುರಾಗಿತ್ತು. ಅವರು ಹೇಗೋ ಪ್ರಯತ್ನ ಪಟ್ಟು ಅನಂತ್ ಸರ್ ಹಾಗೂ ಅಚ್ಯುತ್ ಸರ್ ಅವರ ಡೇಟ್ಸ್ ಹೊಂದಿಸಿ ಚಿತ್ರೀಕರಣ ಮಾಡಲು ಎಲ್ಲ ಸಿದ್ಧ ಮಾಡಿಕೊಂಡು, ಸಂಪತ್ ಅವರ ಮೇಲೆ ಒತ್ತಡ ಹೇರುತ್ತಿದ್ದರು.

ಇಬ್ಬರ ನಡುವೆ ನಲುಗಿ ಹೋಗಿದ್ದ ಸಂಪತ್ ಏನು ಮಾಡುವುದೋ ತೋಚದೆ ಕೊನೆಗೆ ಈಗಾಗಲೇ ಪ್ರಾರಂಭಿಸಿದ್ದ ಸಿನೆಮಾ ಮುಗಿಸಿ ಕೊಡೋಣ ಎಂದು ನಿರ್ಧರಿಸಿ ಕವಲುದಾರಿ ಚಿತ್ರೀಕರಣಕ್ಕೆ ಹೋದರು. ಇಷ್ಟೆಲ್ಲ ಅತಂಕಕ್ಕೆ ಕಾರಣ ಅವರ ತಲೆ ಕೂದಲು. ಆ ವಿಗ್ ಧರಿಸಲು ಅವರು ಪೂರ್ತಿ ತಲೆ ಕೂದಲು ತೆಗೆಯಲೇ ಬೇಕಿತ್ತು. ನನ್ನ ಸಿನೆಮಾದ ಪಾತ್ರಕ್ಕೆ ತಲೆ ಕೂದಲು ಇರಬೇಕಿತ್ತು. ಕೃತಕವಾಗಿ ವಿಗ್ ಹಾಕುವುದು ನನಗೆ ಯಾವುದೇ ಕಾರಣಕ್ಕೂ ಇಷ್ಟವಿರಲಿಲ್ಲ.

ಇನ್ನು ಒಂದು ವಾರ ಇದ್ದ ಮುಹೂರ್ತಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದ ನನಗೆ, ನನ್ನ ವಾಟ್ಸಪ್ಪಿಗೆ ಒಂದು ಫೋಟೋ ಬಂತು. ಆ ಫೋಟೋ ನೋಡಿದ ಕೂಡಲೇ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಯ್ತು. ನಾನು ಆ ಮೊದಲೇ ಸಾಕಷ್ಟು ವಿನಂತಿ ಮಾಡಿಕೊಂಡಿದ್ದೆ, ಉಮೇಶ್ ಗೆ ಹೇಳಿ ಇರೋ ಕೂದಲ ಮೇಲೆ ವಿಗ್ ಹಾಕಲು ಪ್ರಯತ್ನಿಸಲು. ಆದರೆ ಅದು ಸಾಧ್ಯವಾಗದೇ ಮತ್ತೆ ಸಂಪತ್ ತಮ್ಮ ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆದಿದ್ದರು. ನನಗೆ ಮುಂದೆ ಏನು ಮಾಡುವುದೋ ತೋಚದೆ ಎಲ್ಲಾ ಕೆಲಸಗಳನ್ನು ಬದಿಗಿರಿಸಿ ಸಂಪೂರ್ಣವಾಗಿ ಮಂಕಾಗಿ ಕೂತು ಬಿಟ್ಟೆ.

ಸಂಪತ್ ಜೊತೆ ಮಾಡುವುದು ಶೃತಿ ಅವರಿಗೂ ಸಂಪೂರ್ಣವಾಗಿ ಇಷ್ಟವಿರಲಿಲ್ಲ. ಸಂಪತ್ ಅವರ ಪ್ರತಿಭೆಯ ಬಗ್ಗೆ ಸಾಕಷ್ಟು ವಿವರಿಸಿ ಅವರನ್ನು ನಾನು ಒಪ್ಪಿಸಿದ್ದೆ. ಅವರಿಗೆ ಸಂಪತ್ ಅವರಿಗಿಂತ ಹೆಚ್ಚಾಗಿ ನನ್ನ ಮೇಲೆ ನಂಬಿಕೆಯಿಂದ ಅವರೊಂದಿಗೆ ನಟಿಸಲು ಒಪ್ಪಿದ್ದರು. ‘ಪಿಕು’ ದಲ್ಲಿ ಇರ್ಫಾನ್ ಹಾಗೂ ದೀಪಿಕಾ ಜೋಡಿಯಂತೆ ಇಲ್ಲಿ ಇವರಿಬ್ಬರ ಜೋಡಿ ವರ್ಕ್ ಆಗುತ್ತೆ ಅನ್ನೋ ಭರವಸೆ ನನ್ನದಾಗಿತ್ತು.

ಸಂಪತ್ ಅವರು ಮುಖ್ಯಪಾತ್ರದಲ್ಲಿ ನಟಿಸುವುದು ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿಯಾಗಿತ್ತು. ಅದೆಲ್ಲದಕ್ಕಿಂತ ಹೆಚ್ಚಾಗಿ ಸುರೇಶನ ರೂಪದಲ್ಲಿ ಸಂಪತ್ ನನ್ನ ಕಲ್ಪನೆಯಲ್ಲಿ ಅಚ್ಚೊತ್ತಿದ್ದರು. ಅವರ ಬಾಡಿ ಲಾಂಗ್ವೇಜ್, ಮ್ಯಾನರಿಸಂ ಇವೆಲ್ಲಾ ಗಮನಿಸಿಯೇ ಸಂಭಾಷಣೆ ಪಾತ್ರ ವಿನ್ಯಾಸ ಮಾಡಿಕೊಂಡಿದ್ದೆ.

ಚಿತ್ರೀಕರಣಕ್ಕೆ ಇನ್ನು ಹದಿನೈದು ದಿನಗಳಷ್ಟೇ ಬಾಕಿ ಇತ್ತು. ಯಾವುದೇ ಕಾರಣಕ್ಕೂ ಚಿತ್ರೀಕರಣ ಮುಂದೂಡುವ ಹಾಗಿಲ್ಲ. ಮುಂದೂಡಿದರೆ ಉದ್ಭವವಾಗುವ ಸಮಸ್ಯೆಗಳು, ನಿರ್ಮಾಪಕರಿಗೆ ಏನೆಂದು ಉತ್ತರಿಸುವುದು? ಇವೆಲ್ಲ ಒಂದೇ ಬಾರಿ ತಲೆ ಹೊಕ್ಕಿ, ತಲೆ ಸಿಡಿಯುವಂತ ಅನುಭವವಾಗಿ ಕುಸಿದು ಕೂತೆ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಸುರೇಶನ ಪಾತ್ರದ ಗತಿ ಏನು ಎಂಬ ಪ್ರಶ್ನೆ ಬೃಹದಾಕಾರವಾಗಿ ಎದುರು ಬಂದು ನಿಂತಿತ್ತು.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಮಂಸೋರೆ

January 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: