ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

“ಬಸವ ಎನಗೊಲಿಯೋ| ಸಂಗನ ಬಸವ| ಲಿಂಗಜಂಗಮ ಗುರುಸೇವೆಯ ಗೈಯುವ| ಸಂಗಮನಾಥಸ್ವರೂಪಿಯೇ ಬಸವ| ಎನಗೊಲಿಯೋ..”

– ರಂಗಗೀತೆ ಹಾಡುತ್ತ ಹೆಗಲ ಹಾರ್ಮೋನಿಯಂ ಪೆಟ್ಟಿಗೆಯ ಶೃತಿ ಬಿಡದೆ ನಡುಮದ್ಯದಲ್ಲೇ  “ಮಗಳೇ ಇದೀಯೇನವ್ವ” ಅನ್ನುತ್ತ ದಣಪೆ ದಾಟಿ ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ಬಂದು ಕಷ್ಟ ಸುಖ ಮಾತಾಡಿ ಹತ್ತಾರು ಹಾಡು ಹಾಡಿ ಒಂದೂಟ ಉಂಡು ಸಂಜೆ ಬದಿಗೆ ಹೊರಟು ಬಿಡುವ ಹುಲಿಹೊಂಡದ ಹುಲಿಯಪ್ಪ ಈ ಸಲ ಯಾಕೋ ಬಂದಿಲ್ಲ.

ಅವನು ಹಾಡುವ “ಕೇಳಮ್ಮ ತಾಯೆ ರಾಮನೆಂಥ ಚೆಲುವ ನಮ್ಮಯ್ಯ| ಎಂತು ಪೇಳ್ವೆ ಶ್ರೀಮಂತ ರಾಮನ| ಭ್ರಾಂತಿಗೈಯುವುದು ಸ್ವಾಂತಕತಿಶಯ| ಚಿಂತೆಯನು ಬಿಡು ಮಾತೆ ನಮ್ಮಯ್ಯ.|| ಎಂಬ ಹಾಡನ್ನು ನಾನೇ ಹಾಡಿಕೊಳ್ಳುತ್ತ

ಕೊರೊನಾ ಕಾರಣದಿಂದ ಬಂದಿಲ್ಲಿರಬೇಕು; ಎಲ್ಲಿದಾನೋ ಏನೋ.. ಹೊಟ್ಟೆಪಾಡು ಹೇಗೆ ನಡೆದಿದೆಯೋ ಅವನದು ಅಂತ ನೆನಪಾದಾಗಲೆಲ್ಲ ಅಂದುಕೊಳ್ಳುತ್ತೇನೆ.

ಕರಡಿ ಕುಣಿಸುವವರು, ಹಾವಾಡಿಗರು, ಹಕ್ಕಿ ನರಸಣ್ಣರು, ಕುರ್ ಕುರ್ ಮಾಂವರು, ಗಿಳಿ ಶಾಸ್ತ್ರ ಹೇಳುವವರು, ಶಿರಸಿ ಮಾರಿಕಾಂಬೆಯ ಜಾತ್ರೆಯ ಹಿಂದಿನ ದಿನಮಾನದಲ್ಲಿ ವಾರಕ್ಕಿಬ್ಬರಂತೆ ಮರಕಿ ದೇವರ ತಂದು ಕೇರಿಯ ನಡುಮಧ್ಯ ಕುಳಿತು ಸುತ್ತಮುತ್ತಲಿನ ಹತ್ತು ಮನೆಯವರಿಗೆ ತಮ್ಮ ರಂವ್ವ್ ರಂವ್ವ್ ಡೋಲು ಸದ್ದಿನಲ್ಲಿ ಅವಸರದ ಆಹ್ವಾನವಿರಿಸುತ್ತ, ಮೊರದಲ್ಲಿ ಅಕ್ಕಿ ಮೆಣಸು ಅರಶಿನಕೊಂಬು ಮೇಲೊಂದು ರೂಪಾಯಿ ಹಾಕಿ ತರಲು ಕೊಂಚ ತಡಮಾಡಿದ ಮನೆಯವರನ್ನು “ದೇವಿ ಸಿಟ್ಟಾಗ್ಯಾಳ.. ಯಾಕ ತಡವಾಯಿತಲ್ಲ.. ಇನ್ನೂ ಬಂದಿಲ್ಲ ನಿಮ್ಮನೆಯ ಗೆರಸಿ”ಎಂದು ನಾಲ್ಕೂ ದಿಕ್ಕಿಗೂ ಓಡಿಯಾಡುತ್ತ ಮೈಗೆ ಛಟಾರ್ ಸದ್ದಿನೊಂದಿಗೆ ಚಾವಟಿ ಇಟ್ಟುಕೊಳ್ಳುವ ಮರಕಿ ತಂದವರು ಕೂಡ ಕಾಣೆಯಾದ ಜಮಾನಾ ಇದು.. ಹುಲಿಯಪ್ಪನೂ ಈ ಪಟ್ಟಿಗೆ ಸೇರಿಹೋದನಾ..? ಅಳುಕು ಮೂಲೆಯಲ್ಲೆಲ್ಲೋ..

ಮರದ ಪುಟ್ಟ ಕಪಾಟಿನ ಬಾಗಿಲ ತೆರದದ್ದೇ ಕೆಂಪು ಮಾರಿ ಮುಖ.. ಭಕ್ತಿಗಿಂತ ಭಯವೇ ಹೆಚ್ಚು. ಎಡಕ್ಕೂ ಬಲಕ್ಕೂ ತೂಗುವ ಸಣ್ಣವೆರಡು ಹತ್ತು ನಾಣ್ಯ ಹಿಡಿವಷ್ಟರ ತೊಟ್ಟಿಲುಗಳು.

ನಾಲ್ಕಾಣೆ ಮುಷ್ಟಿಯಲ್ಲಿ ಹಿಡಿದು ತೊಟ್ಟಿಲಿಗೆ  ಹಾಕಿ ತೂಗುವ ತವಕದ ಸುತ್ತಲ ಮನೆಯ ಹತ್ತಾರು ಮಕ್ಕಳು. ಬೀಸುವ ಕಲ್ಲನ್ನು ಅರ್ಧದಲ್ಲೇ ನಿಲ್ಲಿಸಿ ಬಂದ ಅಕ್ಕಿಯ ಹಿಟ್ಟು ಮೆತ್ತಿದ ಕಪಡದ ಬೀರಮ್ಮಜ್ಜಿ, ಅರೆವ ಕಲ್ಲನ್ನು ಅರ್ಧದಲ್ಲೇ ಬಿಟ್ಟು ಕೆಂಪು ಮಸಾಲೆ ಕೈಗೆ ಹಿಡಿಸಿಕೊಂಡೇ ಬಂದ ಸಾವಿತ್ರಕ್ಕ, ಸೇದುವ ಹಗ್ಗವನ್ನು ಕೊಡವನ್ನು ಬಾವಿಕಟ್ಟೆಯಲ್ಲೇ ಬಿಟ್ಟು ‘ಮರಕಿ ಗೆರಸಿ’ ಪ್ರಕ್ರಿಯೆ ಮುಗಿದದ್ದೇ ಮತ್ತೆ ಬಾವಿಗೇ ಮರಳಲಿರುವ ನೆಂದು ನೀರಿಳಿಯುತ್ತಿರುವ ಮಂಕಾಳಕ್ಕ ಎಲ್ಲರೂ ಕುಕ್ಕರುಗಾಲಲ್ಲಿ ದೇವಿ ಮುಂದೆ ಕುಳಿತು ಕೆನ್ನೆ ಕೆನ್ನೆ ಬಡಿದುಕೊಂಡು ಕೈ ಮುಗಿಯುತ್ತ ತಮ್ಮನ್ನು ಕಾಪಾಡುವ ಹೊಣೆಯನ್ನು ಅವಳಿಗೆ ವಹಿಸುತ್ತಾರೆ.

ಮನೆಯ ಹೊನ್ನಾರಾಕನ ಪಟದ ಹಿಂದೆ ಶಿರಸಿಯಮ್ಮನಿಗೆಂದು ಆಗೀಗ ತೆಗೆದಿಟ್ಟ ಪುಡಿಗಾಸು ತಂದು ಈ ಮರಕಿಯವನಿಗೆ ಕೊಟ್ಟು ಶಿರಸಿ ಜಾತ್ರೆಯ ದಿನ ಅಮ್ಮನ ಹುಂಡಿಗೆ ಅವನು ತಮ್ಮ ಪರವಾಗಿ ಈ ಹಣ ಹಾಕುತ್ತಾನೆಂದು ಹದಿನಾರಾಣೆ ನಂಬುತ್ತಾರೆ. 

ಮೂವತ್ತು ವರ್ಷಗಳ ಹಿಂದೆ

ಗುಡಿ ಸಿದ್ದೇಶ್ವರ ನಾಟಕ ಕಂಪೆನಿಯೊಳಗೆ ಲಾವಣಿ, ಜಾನಪದ, ವಚನ, ದಾಸರ ಪದ, ಶಾಸ್ತ್ರೀಯ ಸಂಗೀತ ಹೀಗೆ ಎಲ್ಲವೂ ಆಧಾರವಾದ ರಂಗಗೀತೆಗಳನ್ನು ಪಾತ್ರಗಳಿಗೆ ಹೇಳಿಕೊಡುತ್ತ, ಸ್ವತಃ ತಾನೂ ಹಾಡುತ್ತ, ದಶರಸಗಳಾದ ಶೃಂಗಾರ ಹಾಸ್ಯ ಕರುಣ ರೌದ್ರ ಧೀರ ಭಯಾನಕ ಭೀಬತ್ಸ ಅದ್ಭುತ ಶಾಂತ ಭಕ್ತಿ ಹೀಗೆ ಎಲ್ಲವನ್ನೂ ಒಳಗೊಂಡ ಇವುಗಳನ್ನು ಪಾತ್ರಕ್ಕನುಗುಣವಾಗಿ ಸಂದರ್ಭಕ್ಕನುಸಾರವಾಗಿ ನಾಟಕದ ಪ್ರಾರ್ಥನೆ, ಉದ್ಯಾನವನದ ಬಣ್ಣನೆ, ಪ್ರೇಮಿಗಳ ಪ್ರಥಮ ಭೇಟಿ, ವಿರಹ, ಸಖಿಯರ ಯುಗಳಗೀತೆ ಸಮೂಹಗೀತೆಯೊಳಗೆ ತಕ್ಕಂತಹ ಬದಲಾವಣೆಯೊಂದಿಗೆ ಹೊಂದಿಸುವ ಹುಲಿಯಪ್ಪನ ಹಾಡಿನ ಮೋಡಿಗೆ ಜನ ಹುಚ್ಚೆದ್ದು ಕುಣಿಯುತ್ತಿದ್ದರಂತೆ.

ಶಿಗ್ಗಾವಿ, ಲಕ್ಷ್ಮೇಶ್ವರ, ಬಂಕಾಪುರ, ನವಲಗುಂದ, ನರಗುಂದ, ಗದಗ, ಶಿರಗುಪ್ಪಿ ಮುಂತಾದ ಊರುಗಳಲ್ಲಿ “ಒಮ್ಮಿ ಟೆಂಟ್ ಹಾಕಿದ್ರ ಐದಾರ ತಿಂಗಳ ಹಂದಾಡೂ ಹಂಗೇ ಇಲ್ಲ.. ಆ ನಮೂನಿ ಜನಾ.. ನೋಡಿದವ್ರೇ ಮತ್ತ್ ಮತ್ತ್ ನೋಡಾಕ ಬರತಿದ್ರು.. ಪಾತ್ರದ ಜೋಡಿ ತಾವೂ ದನಿ ಸೇರ್ಸಿ ಹಾಡತಿದ್ರು ನೋಡವ್ವ” ಎಂಬ ಹುಲಿಯಪ್ಪನ ಮಾತು ಕೇಳಿದಾಗಲೆಲ್ಲ ‘ವೃತ್ತಿ/ಹವ್ಯಾಸಿ ರಂಗಭೂಮಿ ಹುಟ್ಟಿದ ದಿನದಿಂದ ಇಂದಿನವರೆಗೂ ರಂಗಗೀತೆಗಳೇ ನಾಟಕದ ಆತ್ಮ.

ಗುಬ್ಬಿ ಕಂಪೆನಿಯ ನಾಗೇಶರಾಯರು, ಏಣಗಿ ಬಾಳಪ್ಪ, ಬಿ ಜಯಶ್ರೀ, ಬಿ ವಿ ಕಾರಂತ ಮುಂತಾದವರೆಲ್ಲ ಈ ರಂಗಗೀತೆಗಳಿಗೆ ಇತ್ತೀಚಿನ ದಿನಮಾನಗಳಲ್ಲಿ ಇನ್ನಷ್ಟು ಜೀವ ತುಂಬಿ ಉಳಿಸಿದರು.. ಅಂದಿನವರೆಲ್ಲ ಪಾತ್ರದ ಪ್ರತಿಯೊಂದು ಮಾತನ್ನೂ ಎದೆಗಿಳಿಸಿಕೊಂಡು ಜೊತೆಗೆ ತಕ್ಕಂತಹ ಗದ್ಯ ಪದ್ಯ ಮಿಶ್ರಿತ ಈ ಹಾಡನ್ನೂ ನೋಡುವ, ಕೇಳುಗದ ನೆನಪಲ್ಲಿ ಬಹುಕಾಲ ಉಳಿವಂತೆ ಮಾಡುತ್ತಿದ್ದರು.. ಪಾತ್ರಕ್ಕೆ ಶರಣೆಂದು ನೇಮ ಹಿಡಿದು ಭಯಭಕ್ತಿಯಿಂದ  ಮಾಡುತ್ತಿದ್ದರು. ಪ್ರತಿಭೆ ತೋರುವ, ಸೂಚ್ಯಾರ್ಥ ಧ್ವನಿಸುವ, ವಿಶೇಷಾರ್ಥ ಸ್ಫುರಿಸುವ ಈ ಪದ್ಯಗಳೆಂದರೆ ಸಾಮಾನ್ಯದವಲ್ಲ’ ಎನ್ನುವ ಹಿರಿಯರೊಬ್ಬರ ಮಾತು ನೆನಪಾಗುತ್ತದೆ.

ಹಳ್ಳಿಹಳ್ಳಿಯಲ್ಲೂ ಸಿನಿಮಾ, ಟೆಲಿವಿಷನ್ ಹಾವಳಿ ಜೋರಾಗಿ ಜನ ಕ್ರಮೇಣ ನಾಟಕದಿಂದ ವಿಮುಖರಾಗತೊಡಗಿದಾಗ ಕಂಪೆನಿಯ ನಲ್ವತ್ತು ಚಿಲ್ಲರೆ ಜನರ ಹೊಟ್ಟೆ ತುಂಬಿಸಲಾಗದೇ ಗುಡಿಸಿದ್ದೇಶ್ವರದ ಯಜಮಾನ ಕಂಪೆನಿ ಮುಚ್ಚಿಬಿಟ್ಟ. ಕೂಡು ಕುಟುಂಬದಂತಿದ್ದ ಕಲಾವಿದರು, ಸಹಾಯಕರೆಲ್ಲ ಒಳಗೆ ಅಳುವಿಟ್ಟುಕೊಂಡೇ ಎದೆ ಕಲ್ಲು ಮಾಡಿಕೊಂಡು ಹಲವು ದಶಕಗಳ ಬಂಧದಿಂದ ಅನಿವಾರ್ಯವಾಗಿ ದೂರವಾಗಬೇಕಾಯ್ತು.

ದಿಕ್ಕಿಗೊಬ್ಬೊಬ್ಬರು ಚದುರಿ ಹೋದರು. ಬಂಕಾಪುರದ ಬಾಡಿಗೆ ಮನೆಯಲ್ಲಿರಿಸಿದ್ದ ಹೆಂಡತಿ, ಮೂರು ಮಕ್ಕಳನ್ನು ಮತ್ತು ಮೂರು ತಲೆಮಾರಿನಷ್ಟು ಹಳೆಯ ಸ್ವಂತದ್ದೇ ಆದ ಹಾರ್ಮೋನಿಯಂ ಪೆಟ್ಟಿಗೆ ಹಿಡಿದು ಹೆಜ್ಜೆ ನಡೆದ ದಿಕ್ಕಿಗೆ ಮುಖ ಮಾಡಿದ ಹುಲಿಯಪ್ಪ ಮುಂಡಗೋಡಿನ ಜನತಾ ಕಾಲನಿಯಲ್ಲಿ ಹೇಗೋ ಒಂದು ಮನೆ ಸಂಪಾದಿಸಿ ಉಳಿದು, ತದನಂತರದಲ್ಲಿ ಕೈಗೆ ಬಂದ ಕೆಲಸ ಮಾಡಿ ಮೂವರು ಮಕ್ಕಳನ್ನೂ ತಕ್ಕಷ್ಟು ಇದ್ಯಾ ಬುದ್ಧಿ ಕಲಿಸಿ ಮದುವೆ ಮಾಡಿದ್ದು ಈಗ ಇತಿಹಾಸ.

ಸಗಟು ತರಕಾರಿ ತಗೊಂಡು ದೂರದ ಊರಿಗೆಲ್ಲ ಹೋಗಿ ಮಾರುವ ಮಗ “ಯಪ್ಪಾ.. ಬೇಕಷ್ಟಿಲ್ಲದಿದ್ರೂ ಸಾಕಾಗುವಷ್ಟು ದುಡೀತಿದ್ದೀನಿ. ನೀ ಯಾಕ ಊರೂರು ತಿರಗಾಕ ಹೊಕ್ಕೀ..?” ಅಂದರೂ ಹಾರ್ಮೋನಿಯಂ ಪೆಟ್ಟಿಗೆಯ ಬಂಧ ಬಿಡಲಾಗುತ್ತಿಲ್ಲ ಹುಲಿಯಪ್ಪನಿಗೆ. “ಒಂದಾಣೆಗೆ ನಮ್ಮಜ್ಜ ಇದನ್ನ ಖರೀದಿ ಮಾಡಿದ್ದಂತೆ ಇನ್ನೂ ಹೆಂಗೈತ್ ನೋಡ್ ಮಗಾ.. ಮನ್ಯಾಗ ಕುಂತು ದಿನಾ ದಿನಾ ಒಬ್ಬಾಂವನ ಏನ್ ಹಾಡೂದು..? ವರ್ಷಕ್ಕೊಮ್ಮಿ ಸವುಡು ಸಿಕ್ಕಾಗ ಹಿಂಗ ಊರೂರ ತಿರಗಾಕ ಹೊಂಟ್ ಬಿಡ್ತೀನಿ.. ಭಿಕ್ಷದವನಂಗ ಮನಿ ಮನಿ ತಿರಗಲ್ಲ.

ನಿನ್ನಂಗ ಈ ಗೀತಾ ತಿಳಿದವರ ನಾಕ ಮಂದಿ ಅದಾರ. ಯಾಡ್ಯಾಡ್ ದಿನ ಉಳಿಸಿಗೊಂಡು ಹಾಡ ಹೇಳಿಸಿ, ಊರ ಕಟ್ಟಿ ಮ್ಯಾಗೂ ಹಾಡಿಶಿ.. ಬರೂಮುಂದ ಧೋತರಾ ಶಲ್ಯದ ಜೋಡಿ ರೊಕ್ಕಾನೂ ಕೊಟ್ಟು ಅಕ್ಕಿ ಕಾಯಿ ತುಂಬಿಸಿ ಕಳಸ್ತಾರ.. ನನಗೂ ಹಾಡಿನ ಮೋಡಿ ಎಲ್ಲೂ ಹೋಗದೇ ನನ್ನ ಜತಿಗೇ ಇದ್ದ ಖುಷಿ. ಸಮಾಧಾನ.. ಈ ನಾಕ್ ದಿನದ ನೆಮ್ಮದಿ ನನ್ನ ವರ್ಷಪೂರ್ತಿ ಲವಲವಿಕಿ ಇರೂಹಂಗ ನೋಡ್ಕೊಂತದ “

ಹೀಗಂದ ಹುಲಿಯಪ್ಪ ಈಗೆರಡು ವರ್ಷದಿಂದ ಕಾಣುತ್ತಿಲ್ಲ. ಕೈಕಾಲು ಸೋತು ಬರಲಾರದಂಗ ಆಗೇತೋ ಏನೋ.. ‘ಏನೇ ಇದ್ರೂ ಬೆರಳಿರೂಗಂಟ ಹಾರ್ಮೋನಿಯಂ ಬಾರಿಸ್ತೀನಿ.. ಗಂಟಲಿರೂಗಂಟ ರಂಗದ ಹಾಡು ಹಾಡೇ ತೀರ್ತೀನಿ’ ಅಂದ ಹುಲಿಯಪ್ಪನ ಬೆರಳು ಗಂಟಲು ಸದಾ ಜೀವಂತ ಅಂತ ನನಗೆ ಗೊತ್ತು..

ಅವನು ಹಾಡುವ ಮಲ್ಲಸರ್ಜ ಯುದ್ಧಕ್ಕೆ ಹೊರಟಾಗಿನ ಹಾಡು ನೆನಪಾಗುತ್ತಿದೆ…..

ಬಿಡು ಚಿಂತೆಯ, ಬಿಡು ಸುದತಿ| ಕಡು ಪಾಪಿ ವೈರಿ ಶಿರ ತರಿಪೆ ನಾ ನಿಜದಿ| ಜನ್ಮಭೂಮಿ ಮಾನವ ಪಾಲಿಸಿ ಸ್ವಕುಲವ| ಯಶದಿ ಮುಳುಗಿಸುವೆ ನಾ|| 

January 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Kiran Bhat

    ಹುಲಿಯಪ್ಪ ಬಂದ್ರೆ ನಂಗೊಂದ ಫೋನ್ ಹಚ್ಚಿ. ನಾನೂ ಒಂದಿಷ್ಟು ನಾಟ್ಕದ ಹಾಡಲ್ಲಿ ಮಿಂದ್ಕೊಳ್ತೇನೆ.

    ಪ್ರತಿಕ್ರಿಯೆ
  2. ವಾಸುದೇವ ಶರ್ಮಾ

    ಬೇಗ ಬರಲಿ ಹುಲಿಹೊಂಡದ ಹುಲಿಯಪ್ಪ ನಾಲ್ಕು ಹಾಡು ಹಾಡಲಿ… ಸಂಕಷ್ಟದಲ್ಲೂ ಬದುಕುವ ಉತ್ಸಾಹ ಬಡಿದೆಬ್ಬಿಸಲಿ. ಸೊಗಸಾಗಿದೆ ನೆನಪು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: