ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾ ಹೊನಗುಂಟಿಕರ್ ಹೊಸ ಕವಿತೆ- ಉತ್ತರ ಯಾವ ಪ್ರಶ್ನೆಯೊಳಗಿಡಲಿ..

ಸಂಧ್ಯಾ ಹೊನಗುಂಟಿಕರ್

ಕೊರಳ ಮರೆಯಲಿ ನೀನೊತ್ತಿರುವ
ಪಲ್ಲವಿ ಎಲ್ಲಿ ಹಾಡಲಿ

ಎದೆಮುಗುಳು ಬಿರಿವಂತೆ ಕುರುಳ ನೇವರಿಸಿದ
ಆ ಮರುಳು ಇರುಳ ಎಲ್ಲಿ ಬಚ್ಚಿಡಲಿ.

ಲಯತಪ್ಪಿದ ಎದೆಬಡಿತ ನಶೆ ತುಂಬಿದ ಹಿಡಿತ
ಯಾರ ಕನಸಿಗೆ ಬಿಟ್ಟು ಬರಲಿ

ಲಜ್ಜೆಗೆಟ್ಟ ಪ್ರೀತಿ ನಗು ಚೆಲ್ಲಿದ ಪಿಚಕಾರಿ
ಎಲ್ಲಿ ಅಡಗಿಸಲಿ

ಒಂದೊಂದೆ ನಕ್ಷತ್ರ ನಿನ್ನೆದೆಗಿಳಿಯುತಿರೆ
ನನ್ನ ಅಧರದಿ ಬಿರಿದ ತುರಾಯಿ ಯಾರ ಕೈಗಿಡಲಿ

ಕಟ್ಟಿರಲು ತೋರಣವು ನಿನ್ನ ಕಬಂಧದಬಾಹು
ಬಿಸಿಗೆ ಬಸಿದ ಬೆವರ ಯಾವ ಕಡಲ ಸೇರಿಸಲಿ

ಬೆಚ್ಚಿ ಎಚ್ಚೆತ್ತು ಕರಗಿ ಒರಗಿದೆ ನಾನು
ಎಣಿಕೆತಪ್ಪಿದ ಉಸಿರ ಬೆನ್ನಟ್ಟಿದ ನೀನು
ಅರಸಿಕೊಂಡಿತು ತಾವು (ಠಾವು)
ಸಾರ್ಥಕದ ಹನಿತಾನು
ಫಲಿತ ಮಿಡಿ ಪ್ರೀತಿ ಕಿಡಿ,
ವ್ಯರ್ಥವಲ್ಲ ಪ್ರಣಯ, ಹಿಡಿ ಜೇನು

ನಮ್ಮೊಲವ ಮಾಲೆಗೆ ಅಲ್ಲಲ್ಲಿ ಬಿಡಿಮುತ್ತು
ಹರಿದು ಜಾರದಿರಲು ನಡುಪದಕ ನಿನ್ನ ಬಿತ್ತು.
ಸ್ವಾತಿಹನಿ ಚಿಪ್ಪಿನಲಿ ಬೆಳ್ಮುಗಿಲು ಅವಿತಂತೆ
ಚಿಗುರಿಕೊಂಡಿತು
ಮನ್ಮಥನ ಆಟ ಶಚಿಯಕೂಟ

ಯಾವುದು ವಿಸ್ಮಯ? ಯಾವುದು ಸಹಜ?
ಪ್ರೀತಿಯೆ?ಕರಕೀಯ ಕುಡಿಯೆ?
ಬೇಟವೆ? ಮಾಟಾದ ಸೃಷ್ಟಿಯೆ?
ಕೂಟವೆ? ಗುಟ್ಟುಗೆಟ್ಟ ಹುಟ್ಟೆ? 
ಒಲವೆ? ಜೀವಫಲವೆ?
ಉತ್ತರವ ಯಾವ ಪ್ರಶ್ನೆಯೊಳಗಿಡಲಿ?

‍ಲೇಖಕರು Admin

17 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading