ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾ ಹೊನಗುಂಟಿಕರ್ ಹೊಸ ಕವಿತೆ- ಬಿಳಿಜೋಳದ ರೊಟ್ಟಿಯಲ್ಲ

ಸಂಧ್ಯಾ ಹೊನಗುಂಟಿಕರ್

ಆಯುಷ್ಯವಿಡಿ ಅವ್ವ ಬಡಿದದ್ದೆ ಬಡಿದದ್ದು
ಬಿಳಿಜೋಳದ ರೊಟ್ಟಿಯಲ್ಲ ಬದುಕನ್ನು

ಜಲಡಿ ಹಿಡಿದದ್ದು ಜೊತೆಗಿರುವ ಮನಸ್ಸುಗಳನ್ನು
ಜೋಳದ ಹಿಟ್ಟನ್ನಲ್ಲ
ಸೂರೆಗೊಂಡವರ ಭಾವನೆಗಳಿಗೆ
ಒಡ್ಡು ಮುರಿದು ಎಸರು ಒಸರದಂತೆ
ಗೋಪುರಕಟ್ಟಿದ್ದು ಬದುಕಿಗೆ ಹಿಟ್ಟಿಗಲ್ಲ

ಅಂದಾಡಿದವರ ಕೊಂಕುಮಾತುಗಳ
ತನ್ನ ನಗುವಿನ ಕಡಚಿಯಿಂದ ಕಲಸಿ
ಪ್ರೀತಿ ಹದವಾಗಿಸಿದ್ದು ಬದುಕಿಗೆ
ಅಸಿಕಲ್ಲಮೇಲೆ ಬಾವಿಯಂತೆ
ನಡುವೆ ತೆಗ್ಗು ತೋಡಿದ್ದು
ಹೊರಹಾಕಿದ್ದು ಕಹಿನೆನಪುಗಳನು
ಎಸರು ಬೆರಸಿ ಹದವಾಗಿ ನಾದಿದ್ದು
ಹಿಟ್ಟನಲ್ಲ ಬದುಕನ್ನು

ಜೀವನ ಹಾಸ್ಯದ ಹೊನಲೇನಲ್ಲ
ಕೆಂಡಕಾರುವ ಜ್ವಾಲಾಮುಖಿ
ತಾಳ್ಮೆಯ ಮಂಜುಗಡ್ಡೆ ಸುರಿದು
ತಾನೇ ಕರಗಿ ಇಲ್ಲವಾಗಿ
ಆ ತಣ್ಣನೆಯ ನೀರಲ್ಲಿ
ಗಟ್ಟಿಯೂ ಅಲ್ಲ ಅಳ್ಳಕೂ ಅಲ್ಲದ
ಸರಿಕರೆದಿರು ಚಂದಗಾಣುವ ಛಲದಿ
ಉಂಡೆಯಂತಹ ಆಕಾರ ನೀಡಿದ್ದು
ಸಂಸಾರಕ್ಕೆ ರೊಟ್ಟಿಗಲ್ಲ.

ಎಂತಹ ತೆಳುವಾದ ಗುಂಡಗಿನ ಚೆಲುವಿನ ರೊಟ್ಟಿ.
ಬದುಕಿನ ಹಿಡಿತವುಂಟು ಅಂಗೈಯ ಬಡಿತಕೆ.
ಸಂಸಾರದ ಅಂಚು ಸೀಳದಂತೆ
ಒಲವಿನ ಹಿಟ್ಟು ಚೆದುರದಂತೆ
ಎಡಗೈಯಿಂದ ಬಾಚಿ ಬಲಗೈಯಿಂದ ಟಪಟಪನೇ ಬಡಿಸಿಕೊಂಡದ್ದು ರೊಟ್ಟಿಯಲ್ಲ
ನಮ್ಮಪ್ಪನ ತಪ್ಪುಗಳು
ಹಾಗೇ ಪೆಟ್ಟು ಕೊಟ್ಟಾಗೆಲ್ಲ ಅವ್ವನ ಅಂಗೈಯಲ್ಲೂ ನೋವು
ಅನಿವಾರ್ಯ…
ಬೆಳೆದು ದೊಡ್ಡದಾಗಿ ಹಂಚು ತುಂಬಬೇಕು ಬದುಕು

ಬಡಿಯಲೇಬೇಕು ಓರೆಕೋರೆಗಳನು ಹಸಿಹಿಟ್ಟಿನಿಂದ ಮೆತ್ತಿ
ಹುಡಿ ಹಾಕಲೇಬೇಕು ಕೆಳಗೆ ರೊಟ್ಟಿ ತಿರುಗಲು
ಕಸುವು ಒಗ್ಗೂಡಿಸಲೆಬೇಕು ಬದುಕು ಚಲಿಸಲು

ಬೇಯುತ್ತಿವೆ ಅವಳ ಸ್ವಂತ ಕನಸುಗಳು
ರೊಟ್ಟಿಯಾದರೂ ಅರಳುತ್ತಿದೆಯಲ್ಲ
ನಿಗಿನಿಗಿಯ ಒಲೆಯ ಮೇಲೆ

ಅರಳು ಹುರಿದಂತಹ ಹಸನಾದ ಸಂಸಾರ
ಕಂಬನಿಯ ಆವಿಯಾಗಿಸಿ
ಆ ಘಮಲಿಗೆ
ಬಂಧುಬಳಗದವರ ಮೂಗು ನಿಗುರಿದ್ದು
ಹಣೆಯಲ್ಲಿ ಮೂಡಿದ ನಮ್ಮವ್ವನ ಬೆವರಿಗೆ
ಆಗ ಬಿಳಿಮುತ್ತಿನ ಧಿಮಾಕು
ಬುಟ್ಟಿತುಂಬ ಬಡಿದ ರೊಟ್ಟಿ
ಎಂದೂ ನೇವರಸಿಕೊಳ್ಳಲಿಲ್ಲ ತನ್ನ ರಟ್ಟಿ
ಬೆಣ್ಣೆಯಿಲ್ಲದೆಯೂ ಉಣ್ಣಿಸುತ್ತಾಳೆ ಬಿಳಿರೊಟ್ಟಿ
ನಲ್ಮಾತುಗಳ ತಿಳಿಗಾಣದೆಳ್ಳೆಣ್ಣೆಯಲದ್ದಿ

‍ಲೇಖಕರು Avadhi

17 April, 2021

6 Comments

  1. ರೇಣುಕಾ ರಮಾನಂದ

    ಸಂಧ್ಯಕ್ಕ… ತುಂಬಾ ಚನ್ನಾಗಿದೆ ಕವಿತೆ

  2. ಚಂದ್ರಕಲಾ

    ಈಅವ್ವ ನ ಕೈ ಬಿಗಿತ ಎಲ್ಲ್ರರಿಗೂ ನಸೀಬಿಲ್ಲ. ಸುಂದರವಾದ ಕವಿತೆ.

    • ಡಿ. ಎಂ. ನದಾಫ; ಅಫಜಲಪುರ

      ಕನ್ನಡ ಕಾವ್ಯ ಲೋಕಕ್ಕೆ ಹೊಚ್ಚ ಹೊಸ ಪ್ರತಿಮೆಯನ್ನು ಕೊಟ್ಟಿದ್ದೀರಿ ಮೇಡಂ.
      ಬಂಡಾಯ ಕಾವ್ಯದ ಸಂದರ್ಭದಲ್ಲಿ ಚಂದ್ರ -ರೊಟ್ಟಿಯ ಪ್ರತಿಮೆಗಳು ಬಳಕೆಯಾಗಿದ್ದವು.
      ಆದರೆ ಕಲ್ಯಾಣ ಕರ್ನಾಟಕದ ಮಹಿಳೆಯರ ದಿನದ ಬದುಕು ಆರಂಭವಾಗುವುದೇ ರೊಟ್ಟಿ ಬಡಿಯುವ ಮೂಲಕ.
      ಇಂಥ ಕ್ರಿಯಾಶೀಲ ಚಟುವಟಿಕೆಯನ್ನು ಇಟ್ಟುಕೊಂಡು ಸೃಜನಶೀಲ ಕವಿತೆಯನ್ನು ಕೊಟ್ಟಿದ್ದಕ್ಕೆ ಕೃತಜ್ಞತೆಗಳು
      ಡಿ.ಎಂ.ನದಾಫ ಅಫಜಲಪುರ

  3. T S SHRAVANA KUMARI

    ತುಂಬಾ ಚಂದದ ಕವಿತೆ

  4. Prasanna Yergolkar

    Good one,
    ಜೋಳದ ಹಿಟ್ಟು ಕಲಿಸಿ ರೊಟ್ಟಿ ತಟ್ಟುವುದು, ಬೇಯಿಸುವುದನ್ನು ತಾಯಿಯ ಬದುಕಿಗೆ, ಜೀವನಕ್ಕೆ ಕಲ್ಪಿಸುವ ನಿಟ್ಟಿನಲ್ಲಿ ಕವಿಯತ್ರಿ ಹೊಸ ಆಯಾಮ ತೋರಿ ನೈಜತೆ ಮನಸ್ಸು ಮುಟ್ಟುವಂತೆ ಮಾಡಿದ್ದಾರೆ.
    ಎಲ್ಲರ ಜೀವನದ ಅನುಭವ ಹೊಸ ಕವಿತೆಯಲ್ಲಿ.
    ಜೈ ಗುರುದೇವ್!

    • Anupama

      ಅದೆಂಥ ಕಲ್ಪನೆ ಮೇಡಂ ತಮ್ಮದು ಹಿಟ್ಟಿನ ರೊಟ್ಟಿಗೂ ಜಟ್ಟಿ ಬದುಕಿಗೂ, ಗಟ್ಟಿ ಹೆಣ್ಣಿಗೂ… ನಮ್ಮದೊಂದು ಸಲಾಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading