ಜೋಗಿ ಕತೆಗಳ ಸುತ್ತ ಸುಬ್ರಾಯ ಚೊಕ್ಕಾಡಿ

ಸುಬ್ರಾಯ ಚೊಕ್ಕಾಡಿ

ಅವರು ನನಗೆ ಮೊದಲಿಗೆ ಸಿಕ್ಕಿದ್ದು ‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಬರ್ತಿದ್ದ ‘ಜಾನಕಿ ಕಾಲಂ’ ಮೂಲಕ. ಯಾರೀ ಜಾನಕಿ? ಇವರು ವೈದೇಹಿಯಂತೂ ಅಲ್ಲ, ಯಾಕೆಂದರೆ ಇದು ಮಹಿಳೆಯ ಬರೆಹದಂತಿಲ್ಲ. ಇದು ಯಾರೋ ಪುರುಷರೇ ಇರಬೇಕು ಅಂತ ಪತ್ತೆ ಮಾಡ ಹೊರಟಾಗ ಗೊತ್ತಾದದ್ದು: ಇವರು ಜೋತಿ ಪತಿ ‘ಜೋಗಿ’ ಯಾನೆ ‘ಗಿರೀಶರಾವ್ ಹತ್ವಾರ್’ ಅಂತ.

ಗೆಳೆಯ ಕುಂಟಿನಿಯ ಮುಖೇನ ಹೆಚ್ಚಿನ ಪರಿಚಯವಾಗಿ ಆಮೇಲೆ ಗೆಳೆತನದ ಬಂಧವೂ ಬಿಗಿಯಲ್ಪಟ್ಟಿತು. ಈ ಬಂಧವು ನನ್ನಿಂದ ಸೋಮಾರಿ ಎಂದು ಕರೆಸಿಕೊಳ್ಳುವವರೆಗೂ ಮುಂದುವರಿಯಿತು. ಅದರ ಸೇಡು ತೀರಿಸಿಕೊಳ್ಳುವ ಹಾಗೆ ಪುಂಖಾನುಪುಂಖವಾಗಿ ಕೃತಿಗಳನ್ನು ಬರೆದು ಹಾಕುತ್ತಾ ನಾನು ನನ್ನ ಮಾತಿಗೆ ಪರಿತಪಿಸುವಂತೆಯೂ ಆಯ್ತು!

ಜೋಗಿ ಮೂರಂಕಿಯನ್ನು ಸಮೀಪಿಸುವಷ್ಟು ಕತೆ, ಕಾದಂಬರಿ ಅಂತ ವೈವಿಧ್ಯಪೂರ್ಣ ಕೃತಿಗಳನ್ನು ರಚಿಸಿದ್ದರೂ ನಾನು ಓದಿದ ಅವರ ಬೆರಳೆಣಿಕೆಯ ಕೃತಿಗಳ ಪೈಕಿ ಇವತ್ತಿಗೂ ನನಗೆ ಇಷ್ಟವಾಗಿರುವುದು ಅವರ ‘ಜಾನಕಿ ಕಾಲಂ’ ಹಾಗೂ ‘ರವಿ ಕಾಣದ್ದು’ ಕಾಲಂಗಳ ಬರೆಹಗಳೇ. ಅವುಗಳ ಮೂಲಕವೇ ನನಗೆ ಅವರ ಉಳಿದೆಲ್ಲ ಕೃತಿಗಳು ಕಾಣಿಸ್ತವೆ. ಈ ಜಾನಕಿ ಕಾಲಂನ ಬರೆಹಗಳು ನಮ್ಮ ಸಾಂಪ್ರದಾಯಿಕ ಕಾಲಂ ಬರೆಹಗಳಂತೆ ನಿಬಿಡ ಮಾಹಿತಿಗಳ, ತಾತ್ಕಾಲಿಕ ಸಮಾಚಾರಗಳ ಒಣ ಬರೆಹಗಳಲ್ಲ.

ಒಂದು ಕವಿತೆಯನ್ನೋ, ಕಥೆಯನ್ನೋ, ಒಂದು ಕೃತಿಯನ್ನೋ ಅಥವಾ ಕುತೂಹಲಕಾರಿಯಾದ ಒಂದು ಸಂಗತಿಯನ್ನೋ ಒಳಹೊಕ್ಕು ಹಗುರಾಗಿ ಓಡಾಡಿ ಅವುಗಳ ರಸಸ್ಥಾನಗಳನ್ನು ಸ್ಪರ್ಶಿಸಿ ಪುಳಕಗೊಳ್ಳುತ್ತಾ ಓದುಗರನ್ನೂ ತನ್ನ ಜತೆಗೇ ಕರೆದೊಯ್ಯುತ್ತಾ ಪುಳಕಗೊಳಿಸುವ-ರಸಾವಿಷ್ಟ ಕವಿತೆಯಂತಹ-ಬರೆಹಗಳು. ಜೋಗಿಯವರಿಗಷ್ಟೇ ಒಲಿದ ಈ ಗುಣವನ್ನು ಹಾಗೂ ನಿರೂಪಣಾ ವಿಧಾನವನ್ನು ಅವರ ಎಲ್ಲ ಬರೆಹಗಳಲ್ಲೂ ನಾವು ಕಾಣಬಹುದು. ಹಾಗಾಗಿ ಅವರ ಅನೇಕ ಬರೆಹಗಳ ಗಂಗೋತ್ರಿ ಈ ಜಾನಕಿ ಕಾಲಮ್ಮೇ ಅಂತ ನನ್ನ ಭಾವನೆ.

ಪತ್ರಕರ್ತರು ಸಾಹಿತಿಗಳೂ ಆದಾಗ ಪತ್ರಿಕಾ ಬರೆಹದ ಶೈಲಿಯು ಅವರ ಸಾಹಿತ್ಯ ಕೃತಿಗಳ ಮೇಲೂ ಪ್ರಭಾವ ಬೀರಿರುವುದನ್ನು ನಾವು ಕಾಣಬಹುದು. ಆದರೆ ಇದಕ್ಕೆ ಹೊರತಾಗಿ ಎನ್ನುವಂತೆ ಜೋಗಿಯ ಬರೆಹಗಳಿವೆ. ಅವರ ಸಾಹಿತ್ಯಿಕ ಬರೆಹಗಳ ಪ್ರಭಾವವು ಅವರ ಪತ್ರಿಕಾ ಬರೆಹಗಳ ಮೇಲೆ ಆಗಿರುವ ಕಾರಣ ಅವರ ಯಾವುದೇ ಬರೆಹಗಳು ಒಂದು ಸಾಹಿತ್ಯಿಕ ಬರೆಹವನ್ನು ಓದಿದ ಅನುಭವವನ್ನು ನೀಡುತ್ತವೆ. ಯಾಕೆಂದರೆ ಅವರ ಕಥನ ಕೌಶಲವು ಅಪೂರ್ವವಾದುದು. ಅವರು ಯಾವದೇ ವಿಷಯಗಳ ಬಗ್ಗೆ ಬರೆದಾಗಲೂ ಆ ಬರೆಹವು ಒಂದು ಕಥೆಯನ್ನು ಓದಿದಂತೆಯೇ ನಮಗನಿಸುತ್ತದೆ. ಹಾಗೆ ಕುತೂಹಲಕಾರಿಯೆನಿಸುವಂತೆ ಓದಿಸಿಕೊಂಡು ಹೋಗುವ ವಿಶಿಷ್ಟ ಗುಣ ಅವರ ಬರೆಹಗಳಿಗಿದೆ.

ಈ ಗುಣದಿಂದಾಗಿಯೇ ನನಗೆ ಅವರ ಕಥೆಗಳು, ಕಾದಂಬರಿಗಳು ಹಾಗೂ ಇತರ ಬರೆಹಗಳ ನಡುವೆ ಅಂಥಾ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಕಥನ ಕ್ರಮ ಹಾಗೂ ಕಥೆಯ ಚೌಕಟ್ಟೇ ವಿಸ್ತರಿಸಿ ಅವರ ಕಾದಂಬರಿಗಳೂ ರೂಪ ಪಡೆಯುವುದರಿಂದ ಅವರ ಕಾದಂಬರಿಗಳನ್ನು ದೊಡ್ಡ ಕಥೆಗಳು ಅಥವಾ ನೀಳ್ಗತೆಗಳು ಎಂದೇ ಹೇಳಬೇಕು ಅಂತ ನನಗನ್ನಿಸುತ್ತದೆ. ಅವರ ಬಹುತೇಕ ಕಾದಂಬರಿಗಳೂ ಅನಾವರಣಗೊಳ್ಳುವುದೂ ಸಣ್ಣ ಕಥೆಯ ಫಾರ್ಮ್ಯಾಟಿನಲ್ಲೇ. (ಅವರ ಕಾದಂಬರಿಗಳು 120 ಪುಟಗಳ ಆಸುಪಾಸಿನ ಒಳಗೇ ಇರುವುದು ಕೂಡಾ ಇದೇ ಕಾರಣದಿಂದಿರಬಹುದು ಎಂದು ನನ್ನ ಊಹೆ.) ಇದಕ್ಕೆ ಸೂಕ್ತ ಉದಾಹರಣೆ ಹಾಗೂ ಕಾರಣಗಳ ಸಮೇತ ವಿವರಿಸಬೇಕಾಗಿದ್ದರೂ ಸದ್ಯ ಅಸಾಧ್ಯ ಎಂದು ಅನಿವಾರ್ಯವಾಗಿ ಹೇಳಬೇಕಾಗಿದೆ.

ಅವರ ಕತೆಗಳ ವಸ್ತು ವಿನ್ಯಾಸಗಳೇನು ಹಾಗೂ ಅವು ಪ್ರಕಟಗೊಳ್ಳುವ ಬಗೆ ಹೇಗೆ? ಅವರ ‘ನಾನು, ಅವನು ಮತ್ತು ಹೇಳದೆ ಉಳಿದ ಕತೆ’ಯ ನಾಯಕ ಹೇಳುವ ಮಾತುಗಳಿವು,: ‘ನನ್ನ ಮುಂದೆ ಅವನಿದ್ದಾನೆ ಎಂಬುದನ್ನೇ ಮರೆತು ಕತೆ ಹೇಳಲು ಆರಂಭಿಸಿದೆ. ಅದು ನನ್ನ ಕತೆ ಎನ್ನುವ ಅರಿವು ನನಗಾಗಲಿಲ್ಲ. ನನ್ನ ಅವಮಾನದ ಕ್ಷಣಗಳು, ಸಂಭ್ರಮದ ಗಳಿಗೆಗಳು ಪ್ರೇಮದ ಪಿಸುಮಾತುಗಳು, ವಿರಹದ ತಲ್ಲಣಗಳು, ನೋಯಿಸಿದ ಘಟನೆಗಳು, ವಂಚನೆಯ ಪ್ರಕರಣಗಳು, ಸುಳ್ಳಿನ ಕಂತೆಗಳು… ಒಂದೊಂದಾಗಿ ಅನಾವರಣಗೊಳ್ಳುತ್ತಾ ಬಂದವು… ‘ಇದು ಅಪ್ಪಟ ಧ್ಯಾನಸ್ಥ ಸ್ಥಿತಿಯಲ್ಲಿ ಹೊಮ್ಮುವ ಮಾತು. ಒಂದು ಸಣ್ಣಕತೆಯ ನಿರ್ಮಾಣಕ್ಕೆ ಅವಶ್ಯವಾದ ಏಕಾಗ್ರತೆಯ ಮಾತು.

ಇದು ಆ ಕಥಾನಾಯಕನ ಮಾತು ಮಾತ್ರವಲ್ಲ, ಕತೆಗಾರ ಜೋಗಿಯ ಮಾತೂ ಹೌದು. ಅವರ ಎಲ್ಲ ಕತೆ, ಕಾದಂಬರಿ, ಹಾಗೂ ಇತರ ಬರೆಹಗಳೂ ಈ ಸ್ಥಿತಿಯಲ್ಲೇ ರೂಪ ತಳೆದವು ಎಂದು ನನಗನ್ನಿಸುತ್ತದೆ. ಜೋಗಿ ಹೊರಗೆ ಶಾಂತವಾಗಿ, ಜಾಲಿಯಾಗಿ, ನಗುತ್ತಾ, ನಗಿಸುತ್ತಾ ಇರುವ ಮನುಷ್ಯನಾಗಿ ಕಾಣಿಸಿದರೂ ಅವರ ಒಳಗೊಂದು ಪ್ರಕ್ಷುಬ್ಧ ಕಡಲು ಇರುವಂತಿದೆ. ಅದರ ಸೂಚನೆಯೇ ಮೇಲಿನ ಮಾತುಗಳು. ಈ ಕಾರಣದಿಂದಲೇ ಅವರ ಕತೆ ಕಾದಂಬರಿಗಳು ಈ ಪ್ರಕ್ಷುಬ್ಧತೆಯ ಸ್ವರೂಪವೇನು ಎಂಬುದರ ಹುಡುಕಾಟ. ಚಡಪಡಿಕೆಗಳಿಂದ ಕೂಡಿ ‘ಇದಲ್ಲ, ಇದಲ್ಲ’ ಎಂದು ನಿರಾಕರಿಸುತ್ತಾ ಹೊಸ ಕ್ಷೇತ್ರಗಳತ್ತ ಚಲಿಸುತ್ತಾ ನಡೆದ ನಿರಂತರ  ಹುಡುಕಾಟ. ಹುಡುಕಿದ್ದು ಪೂರ್ತಿಯಾಗಿ ದಕ್ಕದ ಅತೃಪ್ತಿಯಿಂದಾಗಿ ಇನ್ನೊಂದಕ್ಕೆ ನೆಗೆತ.

ಬಹುಶಃ ಈ ಕಾರಣದಿಂದಲೇ ಜೋಗಿ ಇನ್ನೂ ಯಾವುದೊಂದು ಪ್ರಕಾರಕ್ಕೆ ಖಚಿತವಾಗಿ ಅಂಟಿಕೊಳ್ಳದೆ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ ಮಾಡುತ್ತಾ ಬಂದಿರಬೇಕು. ಆದರೆ ಸೂಕ್ಷ್ಮವಾಗಿ ನೋಡಿದರೆ ಅವೆಲ್ಲವೂ ಕತೆಗಳೇ, ಕತೆಗಳ ವಿವಿಧ ರೂಪಗಳೇ ಆಗಿವೆ ಎಂದು ನನಗನ್ನಿಸುತ್ತದೆ. ಅವರ ಅತ್ಯುತ್ತಮ ಕಥೆಗಳಲ್ಲಿ ಒಂದಾದ, ‘ಜರಾಸಂಧ’ ಕಥೆಯಲ್ಲಿನ ನಾಯಕ ರಂಗನಾಥನ ಒಳಗೆ ಜರಾಸಂಧ ಇದ್ದಂತೆ ಇವರ ಒಳಗೂ ಇನ್ನೊಬ್ಬನಿದ್ದು ಇವನ್ನೆಲ್ಲ ನಿರ್ದೇಶಿಸುತ್ತಿರಬೇಕು ಅಂತ ನನಗನ್ನಿಸಿದೆ. ಅವರ ಕಥೆಗಳಲ್ಲಿನ ವಸ್ತುಗಳೇನು? ಅವರ ನೂರಾರು ಕಥೆಗಳನ್ನು ಈ ನಿಟ್ಟಿನಿಂದ ಪರಿಶೀಲಿಸುವುದು ಕಷ್ಟವೇ ಆದರೂ ಅವರ ಬಹುತೇಕ ಕತೆಗಳ ಸ್ವರೂಪವೇನು ಅನ್ನುವುದನ್ನು ಅವರ ಜಾನಕಿ ಕಾಲಂನ ಲೇಖನವೊಂದರ ಆಯ್ದ ಭಾಗಗಳಾದ ಈ ಮಾತುಗಳು ಸೂಚ್ಯವಾಗಿ ತಿಳಿಸುತ್ತವೆ:..

‘ಎಲ್ಲವೂ ಸರಳ. ಇನ್ನೆಲ್ಲೋ ಇನ್ನೇನೋ ಇದೆ ಎನ್ನುವ ತಡಕಾಟ. ಮನಸ್ಸಿಗೆ ಅದೆಂಥದೋ ಬೇನೆ. ಮನಸ್ಸು ಹೇಳುತ್ತದೆ. ಈ ಕತ್ತಲಲ್ಲಿ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ. ದಾಂಪತ್ಯದ ಗೂಡು ಬೆಚ್ಚಗಿಲ್ಲ… ದಾಂಪತ್ಯದ ಸೂರು ಸೋರತೊಡಗುತ್ತದೆ. ಮತ್ತೊಂದು ಸಂಬಂಧಕ್ಕೆ  ಜೀವ ಮಿಡಿಯುತ್ತದೆ… ದಾಂಪತ್ಯದ ನಡುವೆ ಮಾತು ಸತ್ತು ಹೋದಾಗ, ಮಾತು ವ್ಯವಹಾರ ಆದಾಗ, ಮನಸ್ಸು ಚಿಂತಾಮಣಿಯಲ್ಲಿ ಕಂಡ ಮುಖಕ್ಕೆ ಹಾತೊರೆಯುತ್ತದೆ… ಪ್ರೀತಿ ಶಾಶ್ವತವಲ್ಲ, ಅದರ ಮಧುರ ಅನುಭವವಷ್ಟೇ ಶಾಶ್ವತ… ಅವನು ಕಣ್ಮರೆಯಾಗುತ್ತಾನೆ… ಅವನು ಉಳಿಸಿ ಹೋಗುವುದು ಆ ಕ್ಷಣ ಹೊಮ್ಮಿಸಿದ ಬೆಳಕು ಮಾತ್ರ…’

ಈ ಮಾತುಗಳ ಒಂದು ಭಾವಾವರಣವು ಅವರ ಬಹುತೇಕ ಕತೆಗಳ ಹಿನ್ನೆಲೆಯಲ್ಲಿ ಇರುವಂತಿದೆ. ಅಂದರೆ ದಾಂಪತ್ಯದಲ್ಲಿ ಮೂಡಿದ ಬಿರುಕು, ದಾಂಪತ್ಯದ ಚೌಕಟ್ಟಿನಾಚೆಗೆ ಕಾಲಿಟ್ಟು ಅಲ್ಲಿನ ಅನುಭವವನ್ನು ಪರೀಕ್ಷಿಸುವ ಹಂಬಲ, ಫಲಿತ ಪ್ರೇಮಕ್ಕಿಂತ ಅದರ ನಿರಾಕರಣೆಯಿಂದ ಹುಟ್ಟಿಕೊಳ್ಳುವ ನಿರಂತರ ವಿರಹದಿಂದ ಸಿಗುವ ಮಧುರ ಅನುಭೂತಿ, ಇವನ್ನು ಕಾಣುವ, ಪರಿಣಾಮವನ್ನು ಅರಿಯುವ ಮತ್ತು ಅದು ಪಡಕೊಳ್ಳುವ ವಿಭಿನ್ನ ರೂಪಗಳ ಹುಡುಕಾಟವೇ ಅವರ ಬಹುತೇಕ ಎಲ್ಲ ಕತೆಗಳಿಗೆ ಹಿನ್ನೆಲೆಯನ್ನು ಒದಗಿಸಿವೆ.

ಅವರ ಆರಂಭದ ‘ಕೆಸರು’, ‘ಸಂಬಂಧ’, ‘ಇರುವುದೆಲ್ಲವ ಬಿಟ್ಟು’ ಮೊದಲಾದ ಕತೆಗಳಲ್ಲಿ ಇದರ ಸಾಂಪ್ರದಾಯಿಕ ರೂಪವು ಕಾಣಿಸಿಕೊಂಡಿದ್ದರೆ, ನಂತರದ ‘ಬಸವಾರೆಡ್ಡಿಯ ಮೂರನೇ ಮಗ’, ‘ಮೂರು ಸಂಜೆಯ ದೀಪ’, ‘ಮಾಯಾ ಕಿನ್ನರಿ’, ‘ಏ ಗಾಳಿ’, ‘ಆ ಕಥೆಯನೊರೆದು ಮುಂದಕೆ ತೆರಳು’, ‘ಚೈತ್ರ, ವೈಶಾಖ, ವಸಂತ’, ‘ಎಲ್’, ‘ಅಶ್ವತ್ಥಾಮನ್’ ಮೊದಲಾದ ಕತೆ ಕಾದಂಬರಿಗಳಲ್ಲಿ ಈ ವಸ್ತು ಕಾಣಿಸಿಕೊಂಡ ರೂಪಗಳೇ ಬೇರೆ; ವಯಸ್ಸಾದವರವರು ಮುಖ್ಯ ಪಾತ್ರದಲ್ಲಿರುವ ‘ರಾಂಗ್ ನಂಬರ್’ ನಂತಹ ಕಥೆಗಳಲ್ಲಿ ಅದೇ ವಸ್ತು ಕಾಣಿಸಿಕೊಂಡ ರೀತಿಯೇ ಬೇರೆ!

ಅಂದರೆ ಜೋಗಿ ಅದೇ, -ಪ್ರೀತಿ, ವಿರಹ, ನಿರಾಕರಣೆ, ಉಲ್ಲಂಘನೆಯಂತಹ ವಸ್ತುಗಳನ್ನೇ ತಮ್ಮಕತೆಗಳಿಗೆ ಆಯ್ದುಕೊಂಡರೂ ಅದನ್ನು ಪರಿಭಾವಿಸಿದ, ಅಕ್ಷರ ರೂಪಕ್ಕೆ ಇಳಿಸಿದ ರೀತಿ, ಬಳಸಿದ ಭಾಷೆ ಹಾಗೂ ತಂತ್ರ ಮೊದಲಾದವುಗಳನ್ನು ಗಮನಿಸಿದಾಗ ಅವು  ಕನ್ನಡ ಕಥಾ ಪರಂಪರೆಗಿಂತ ಭಿನ್ನವಾಗಿ ಪಾಶ್ಚಾತ್ಯ ಕಥಾ ಪರಂಪರೆಗೆ ಹೆಚ್ಚು ಹತ್ತಿರವಾಗಿದೆಯೇನೋ ಅಂತ ನನಗನ್ನಿಸುತ್ತದೆ.

ಇನ್ನೊಂದು ಅಂಶವನ್ನು ಗಮನಿಸಬೇಕು. ಜೋಗಿ ಕತೆಗಳು  ಸದಾ ಗುರುವಾಯನ ಕೆರೆ ಹಾಗೂ ಬೆಂಗಳೂರಿನ ನಡುವೆ ತುಯ್ದಾಡುತ್ತಿರುತ್ತದೆ. ಒಂದು ರೀತಿಯಲ್ಲಿ ಅವರದು ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎನ್ನುವ ಸ್ಥಿತಿ. ಬೆಂಗಳೂರಲ್ಲಿ ಇರಲಾರೆ, ಆದರೆ ಇದನ್ನು ಬಿಟ್ಟಿರಲಾರೆ, ಗುರುವಾಯನ ಕೆರೆ ಕರೆಯುತ್ತಿದೆ, ಆದರೆ ಅಲ್ಲಿಗೆ ಹೋಗಲಾರೆ ಎನ್ನುವ ಸ್ಥಿತಿ. ಬಿಲ್ಲ ಹಬ್ಬದ ಕುರಿತಾದ ಅವರ ಬರೆಹವೊಂದು ಈ ಸಂದಿಗ್ಧಕ್ಕೆ ಕನ್ನಡಿ ಹಿಡಿಯುವಂತಿದೆ. ಅವರ ಕತೆಗಳ ಅನೇಕ ಪಾತ್ರಗಳು ಗುರುವಾಯನ ಕೆರೆಯಂಥ ಹಳ್ಳಿಯಿಂದ ಬದುಕನ್ನರಸಿ ಬೆಂಗಳೂರಿಗೆ ಬಂದು ಅಲ್ಲೇ ತಮ್ಮ ಬದುಕನ್ನು ಅನಿವಾರ್ಯವಾಗಿ ಕಟ್ಟಿಕೊಳ್ಳುವುದನ್ನು ಇವರ ಕೆಲವು ಕತೆಗಳು ಸಹಾನುಭೂತಿಯಿಂದ ದಾಖಲಿಸುತ್ತವೆ.

ಎಲ್ಲದರಲ್ಲೂ ಕುತೂಹಲ ಹಾಗೂ ಒಳಗೊಳ್ಳುವ ಹಂಬಲವಿರುವ ಈ ಕತೆಗಳು ಕೆಳಮಧ್ಯಮ ವರ್ಗದ ಹಾಗೂ ಕೆಳವರ್ಗದ ಜನರ ಮನಸ್ಸಿನ ಒಳವಿನ್ಯಾಸದ ಸ್ವರೂಪದ ಶೋಧವನ್ನು ನಡೆಸಿದ ರೀತಿ ಗಮನಾರ್ಹ. ಹೀಗೆ ಮನುಷ್ಯನ ಒಳಬಾಳನ್ನು ಚಿತ್ರಿಸಿದ ನಮ್ಮ ಕಾಲದ ಇನ್ನೊಬ್ಬ ಕತೆಗಾರ ಎಂ.ವ್ಯಾಸರಂತೆ ಜೋಗಿಯೂ ಮನುಷ್ಯನ ಒಳಮನಸ್ಸಿನ ವ್ಯಾಪಾರವನ್ನು ಚಿತ್ರಿಸಿದ್ದರೂ, ವ್ಯಾಸರಂತೆ ಇವರು ಮನುಷ್ಯನೊಳಗಿನ ನರಕಕ್ಕೇ ಹೆಚ್ಚು ಒತ್ತುಕೊಡದೆ, ಹಿಂದೆ ಹೇಳಿದಂತೆ ಮನುಷ್ಯನ ಸುಖ ದುಃಖಗಳಿಗೆ ಒಳಮನಸ್ಸು ಸ್ಪಂದಿಸಿದ ರೀತಿಯನ್ನು ಚಿತ್ರಿಸಿದ್ದಾರೆ.

ನನ್ನ ಈ ಅಭಿಪ್ರಾಯಗಳು ಅವರ ಕೆಲವೇ ಕೆಲವು ಕತೆಗಳ ಓದಿನಿಂದ ಮೂಡಿದವುಗಳು. ಆದ್ದರಿಂದ ಈ ಅಭಿಪ್ರಾಯಗಳು ಅಂತಿಮವೂ ಅಲ್ಲ. ಅಲ್ಲದೆ ನನ್ನ ಈ ಮಾತುಗಳಿಗೆ ಸೂಕ್ತ ಉದಾಹರಣೆಗಳ ಮೂಲಕ ವಿವರಿಸಬೇಕಾಗಿತ್ತಾದರೂ ಸದ್ಯದ ನನ್ನ ಸ್ಥಿತಿಯಿಂದ ಅದು ಸಾಧ್ಯವಾಗಿಲ್ಲ ಅನ್ನುವುದಕ್ಕೆ ನನಗೇ ಬೇಸರವಾಗಿದೆ. ಮುಂದೊಮ್ಮೆ ಅದು ಸಾಧ್ಯವಾಗಬಹುದೇನೋ ಗೊತ್ತಿಲ್ಲ ಆದರೂ ಈ ವಿಚಾರಗಳು ಇನ್ನಷ್ಟು ಚರ್ಚೆಗೆ ಅರ್ಹವಾದವುಗಳು ಎನ್ನುವುದಂತೂ ಖಚಿತ.

ಅದೇನೇ ಇದ್ದರೂ ಕಡೆಂಗೋಡ್ಲು, ಸೇಡಿಯಾಪು, ಬಾಗಲೋಡಿ ಮೊದಲಾದ ಹಿರಿಯರಿಂದ ಹಿಡಿದು ನಮ್ಮ ಸಮಕಾಲೀನರಾದ ಎಂ.ವ್ಯಾಸರಂತೆ ಜೋಗಿ ಕೂಡಾ ದಕ್ಷಿಣ ಕನ್ನಡದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಸಂದ, ನಾವು ಹೆಮ್ಮೆ ಪಡಬಹುದಾದ, ಮಹಾನ್ ಪ್ರತಿಭೆ ಎಂಬುದಂತೂ ಖಂಡಿತ. ಕ್ವಾಲಿಟಿ ಹಾಗೂ ಕ್ವಾಂಟಿಟಿ ಎರಡರಲ್ಲೂ ಅವರು ಸದ್ಯ ಅಗ್ರಗಣ್ಯರಾಗಿಯೇ ಕಾಣಿಸುತ್ತಾರೆ.

ಜೋಗಿಯವರೇ, ನಿಮ್ಮ ಕತೆ, ಕಾದಂಬರಿ ಹಾಗೂ ಒಟ್ಟೂ ಬರೆಹಗಳನ್ನು ನನ್ನ ಓದಿಗೆ ಒದಗಿಸಿಕೊಡುವ ಮೂಲಕ ನನ್ನ ಭಾವಕೋಶವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದೀರಿ. ನೀವು ಹೀಗೆಯೇ ಬರೆಯುತ್ತಾ ನನ್ನ ಮೇಲೆ ಸೇಡು ತೀರಿಸ್ತಾ ಇರಿ…

‍ಲೇಖಕರು Avadhi

April 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Jayasrinivasa Rao

    After reading this article I am now tempted to read Jogi’s stories…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: